Tag: ಸುಲಿಗೆ

  • ಮಧ್ಯಮ ವರ್ಗದ ಜನರೇ ಎಚ್ಚರ- ನಿಮ್ಮನ್ನು ಪರಿಚಯ ಮಾಡಿಕೊಂಡು ಸುಲಿಗೆ ಮಾಡುತ್ತೆ ತಂಡ!

    ಮಧ್ಯಮ ವರ್ಗದ ಜನರೇ ಎಚ್ಚರ- ನಿಮ್ಮನ್ನು ಪರಿಚಯ ಮಾಡಿಕೊಂಡು ಸುಲಿಗೆ ಮಾಡುತ್ತೆ ತಂಡ!

    ಬೆಂಗಳೂರು: ಮಧ್ಯಮ ವರ್ಗದ ಜನರೇ ಎಚ್ಚರ. ಏಕೆಂದರೆ ತಂಡವೊಂದು ನಿಮ್ಮನ್ನು ಚೆನ್ನಾಗಿ ಪರಿಚಯ ಮಾಡಿಕೊಂಡು ಸುಲಿಗೆಗೆ ಇಳಿದು ನಿಮ್ಮನ್ನು ಹಿಂಸಿಸುತ್ತದೆ.

    ಹೌದು. ಪೊಲೀಸರ ಸೋಗಿನಲ್ಲಿ ಮಹಿಳೆಯೊಬ್ಬರ ಮಗಳಿಗೆ ಕರೆ ಮಾಡಿ ಐದು ಲಕ್ಷಕ್ಕೆ ಬೇಡಿಕೆ ಇಟ್ಟಾಗ ಈ ಖತರ್ನಾಕ್ ತಂಡದ ಅಸಲಿಯತ್ತು ನೆಲಮಂಗಲ ಪೊಲೀಸರಿಗೆ ಗೊತ್ತಾಗಿದೆ. ನೆಲಮಂಗಲ ಪಟ್ಟಣ ಠಾಣೆಯ ಪಿಎಸ್‍ಐ ಮಂಜುನಾಥ್ ತೆರಳಿ ಕಾರ್ಯಾಚರಣೆ ನಡೆಸಿ ಇದೀಗ ತಂಡವನ್ನು ಬಂಧಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಭಕ್ತನಪಾಳ್ಯದಲ್ಲಿ ಮಹಿಳೆಯನ್ನು ಅಪಹರಿಸಿ 18 ದಿನ ಗೃಹ ಬಂಧನದಲ್ಲಿಟ್ಟಿದ್ದರು. ಬಳಿಕ ಪೊಲೀಸರ ಸೋಗಿನಲ್ಲಿ ಮಹಿಳೆಯ ಮಗಳಿಗೆ ಕರೆ ಮಾಡಿ ಐದು ಲಕ್ಷ ಬೇಡಿಕೆ ಇಟ್ಟಾಗ ಈ ತಂಡ ಪೊಲೀಸರ ಬಲೆಗೆ ಬಿದ್ದಿದೆ.

    ನಿಮ್ಮ ತಾಯಿ ಮೋಸದ ಕೇಸ್‍ನಲ್ಲಿ ಸಿಲುಕಿದ್ದಾರೆ ಅವರನ್ನು ಬಿಡಬೇಕಾದ್ರೆ ಹಣ ಕೊಡಬೇಕು ಎಂದು ತಂಡ ಬೆದರಿಕೆ ಹಾಕಿದೆ. ಅಲ್ಲದೆ 18 ದಿನ ಆ ಮಹಿಳೆಯನ್ನು ಕೋಣೆಯಲ್ಲಿ ಕೈ-ಕಾಲು ಕಟ್ಟಿ ಬಾಯಿಯನ್ನು ಮುಚ್ಚಿದ್ದಾರೆ. ಈ ಐನಾತಿ ತಂಡ ಸಣ್ಣ ಪುಟ್ಟ ಮಧ್ಯಮ ವರ್ಗದವರನ್ನೇ ಪರಿಚಯ ಮಾಡಿಕೊಂಡು ಕಷ್ಟವನ್ನು ಹೇಳಿಕೊಳ್ಳುತ್ತಲೇ ಕೃತ್ಯ ನಡೆಸುತ್ತದೆ.

    ಈ ತಂಡದ ಕಿಂಗ್ ಪಿನ್‍ಗಳಾದ ಉಮೇಶ್, ರತ್ನಮ್ಮ, ಕವಿತಾ, ಭರತ್ ಎಂಬವರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಬಂಧತರಿಂದ ಕೃತ್ಯಕ್ಕೆ ಬಳಸಿದ ಕಾರನ್ನು ನೆಲಮಂಗಲ ಪಟ್ಟಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಧಮ್ ಇದ್ರೆ ನನ್ನ ಸಾಧನೆ ತೋರಿಸಿ – ನನ್ನನ್ನು ಟಿವಿಗೆ ಚರ್ಚೆಗೆ ಕರೆಯಿರಿ ಎಂದ ಕೊಪ್ಪಳ ಶಾಸಕ ಅನ್ಸಾರಿ

    ಧಮ್ ಇದ್ರೆ ನನ್ನ ಸಾಧನೆ ತೋರಿಸಿ – ನನ್ನನ್ನು ಟಿವಿಗೆ ಚರ್ಚೆಗೆ ಕರೆಯಿರಿ ಎಂದ ಕೊಪ್ಪಳ ಶಾಸಕ ಅನ್ಸಾರಿ

    ಕೊಪ್ಪಳ: ಶ್ರೀರಾಮನ ಹೆಸರಲ್ಲಿ ಕೊಲೆ, ಸುಲಿಗೆ ಮಾಡ್ತಾರೆ ಅನ್ನೋ ವಿವಾದಿತ ಹೇಳಿಕೆಯನ್ನ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಸಮರ್ಥಿಸಿಕೊಂಡಿದ್ದಾರೆ.

    ಗಂಗಾವತಿಯಲ್ಲಿ ಸೋಮವಾರ ಸಂಜೆ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯೊಳಗೆ ಶ್ರೀರಾಮನ ಪೂಜೆ ಮಾಡ್ತಾರೆ. ಹೊರಗಡೆ ಬಂದು ಬೆಂಕಿ ಹಚ್ಚುತ್ತಾರೆ. ಅತ್ಯಾಚಾರ ಮಾಡ್ತಾರೆ. ಈ ರೀತಿ ಮಾಡಲು ದೇವರು ಹೇಳಿದ್ದಾರಾ? ಯಾವ ಧರ್ಮ ಗ್ರಂಥದಲ್ಲಿ ಇಂಥ ಕೆಲಸ ಮಾಡಿ ಅಂತ ಹೇಳಿಲ್ಲ ಅಂತ ಹೇಳುವುದರ ಮೂಲಕ ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

    ನಾನು ಏನು ಹೇಳಿದ್ದೀನಿ ಅನ್ನೋದು ಟಿವಿಯವರು ಪೂರ್ಣ ತೋರಿಸುವುದಿಲ್ಲ. ಹಿಂದೆ- ಮುಂದೆ ಏನು ಹೇಳಿದ್ದೀನಿ ಅನ್ನೋದು ಬಿಟ್ಟು ಶ್ರೀರಾಮ ಹೆಸ್ರಲ್ಲಿ ಕೊಲೆ ಅನ್ಸಾರಿ ಹೇಳಿಕೆ ಅಂತ ತೋರಿಸ್ತಾರೆ. ಇದಕ್ಕೆ ಗೋಮಧುಸೂದನ್ ಕರೆದು ಡಿಬೆಟ್ ಮಾಡ್ತಾರೆ. ಗಡ್ಡ ಬಿಟ್ಟ ಅಮಾಯಕ ಮುಸ್ಲಿಮ್ ವ್ಯಕ್ತಿಗಳನ್ನು ಕರೆದು ಏನ್ರಿ ಶಾಸಕ ಅನ್ಸಾರಿ ಹೀಗೆ ಹೇಳಿದ್ದಾರೆ ಅಂತ ಕೇಳ್ತಾರೆ. ಅದಕ್ಕೆ ಅವರು ಈ ರೀತಿ ಹೇಳೊದು ತಪ್ಪು ಅಂತಾರೆ ಎಂದು ಟಿವಿ ಮಾಧ್ಯಮದ ವಿರುದ್ಧ ಅನ್ಸಾರಿ ಹರಿಹಾಯ್ದಿದರು. ಇದನ್ನೂ ಓದಿ: ಮನೆಯೊಳಗೆ ಜೈ ಶ್ರೀರಾಮ್, ಹೊರಗೆ ಕೊಲೆ ಸುಲಿಗೆ: ಶಾಸಕ ಇಕ್ಬಾಲ್ ಅನ್ಸಾರಿ ವಿವಾದಿತ ಹೇಳಿಕೆ

    ಪದೇ ಪದೇ ಗೋಮಧುಸೂದನ್ ನನ್ನ ಡಿಬೇಟ್ ಗೆ ಯಾಕೆ ಕರೀತಿರಾ. ನೀವು ಏನಾದ್ರೂ ಅವರಿಗೆ ಜಾಹೀರಾತಿಗೆ ಇಟ್ಟುಕೊಂಡಿದ್ದೀರಾ? ಬಿಜೆಪಿಯಲ್ಲಿ ಮತ್ತ್ಯಾರು ಇಲ್ವಾ. ಗೋಮಧುಸೂದನ್ ಒಬ್ಬರೇ ಇರೋದಾ? ನಿಮಗೆ ಧೈರ್ಯ ಇದ್ರೆ ಚರ್ಚೆಗೆ ನಮ್ಮಂತವರನ್ನು ಕರೆಯಿರಿ. ದೇಶದಲ್ಲಿ ಪ್ರಚೋದನಾಕಾರಿ ನಡೆಯುತ್ತಿದೆ ಅಂದ್ರೆ ಇವರಿಂದಲೇ ಮಾತ್ರ ನಡೆಯುತ್ತಿದೆ ಎಂದು ಮಾಧ್ಯಮದ ವಿರುದ್ಧ ಕಿಡಿ ಕಾರಿದ್ರು.

    ಇಂದು ಟಿವಿ ನಡೆಯಬೇಕಲ್ಲ, ರಾಜ್ಯದಲ್ಲಿ ಸುದ್ದಿ ಇರೋಲ್ಲ. ಹೀಗಾಗಿ ಇಷ್ಟ ಇರೋ ಸುದ್ದಿಯನ್ನ ತಗೊಂಡು ಸೆವಂಟಿ ಎಂಎಂ ಮಾಡಿ ಇಷ್ಟುದ್ದ ತೋರಿಸ್ತಾರೆ. ನಿಮಗೆ ಧಮ್ ಇದ್ರೆ ಇಕ್ಬಾಲ್ ಅನ್ಸಾರಿ ಮಂತ್ರಿ ಏನು ಮಾಡಿದ್ದಾನೆ ಅನ್ನೋದು ತೋರಿಸಿ. ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಟ್ಟಿದ್ದಾರೆ ಅನ್ನೋದು ಏನೆಲ್ಲಾ ಮಾಡಿದೀನಿ ತೋರಿಸಿ ನೋಡೋಣ ಅಂತ ಟಿವಿ ಮಾಧ್ಯಮಕ್ಕೆ ಪಂಥಾಹ್ವಾನ ನೀಡಿದರು.

  • ಐಎಎಸ್ ಅಧಿಕಾರಿಯಿಂದ 7 ಕೋಟಿ ರೂ. ಸುಲಿಗೆ ಮಾಡಲೆತ್ನಿಸಿದ ದಂಪತಿ ಬಂಧನ

    ಐಎಎಸ್ ಅಧಿಕಾರಿಯಿಂದ 7 ಕೋಟಿ ರೂ. ಸುಲಿಗೆ ಮಾಡಲೆತ್ನಿಸಿದ ದಂಪತಿ ಬಂಧನ

    ಥಾಣೆ: ಮಹಾರಾಷ್ಟ್ರದ ಹಿರಿಯ ಐಎಎಸ್ ಅಧಿಕಾರಿಯೊಬ್ಬರಿಂದ 7 ಕೋಟಿ ರೂ. ಸುಲಿಗೆ ಮಾಡಲು ಯತ್ನಿಸಿದ ಖಾಸಗಿ ಡಿಟೆಕ್ಟಿವ್ ಹಾಗೂ ಆತನ ಪತ್ನಿಯನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ.

    ಅಮಾನತುಗೊಂಡಿರೋ ಅಧಿಕಾರಿ ರಾಧೆಶ್ಯಾಮ್ ಮೊಪಾಲ್ವರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಹಿಂತೆಗೆದುಕೊಳ್ಳಲು ಆರೋಪಿ ಸತೀಶ್ ಮಂಗ್ಲೆ ಬರೋಬ್ಬರಿ 7 ಕೋಟಿ ರೂ. ಗೆ ಡಿಮ್ಯಾಂಡ್ ಮಾಡಿದ್ದ. ಹಣ ಕೊಡದಿದ್ದರೆ ಫೋನ್ ಸಂಭಾಷಣೆಯ ಆಡಿಯೋ ಲೀಕ್ ಮಾಡುವುದಾಗಿ ಬೆದರಿಸಿದ್ದ ಎಂದು ವರದಿಯಾಗಿದೆ.

    ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಧೇಶ್ಯಾಮ್ ಅವರನ್ನು ಆಗಸ್ಟ್ ನಲ್ಲಿ ಸಿಎಂ ದೇವೇಂದ್ರ ಫಡ್ನಾವಿಸ್ ಹುದ್ದೆಯಿಂದ ತೆಗೆದುಹಾಕಿದ್ದರು. ಸತೀಶ್ ಲೀಕ್ ಮಾಡಿದ್ದ ಆಡಿಯೋದ ಫಲವಾಗಿ ರಾಧೇಶ್ಯಾಮ್ ಅಮಾನತುಗೊಂಡಿದ್ದರು. ಆಡಿಯೋದಲ್ಲಿ ಅಧಿಕಾರಿ ಡೀಲ್‍ವೊಂದರ ಬಗ್ಗೆ ಮಾತನಾಡುತ್ತಿದ್ದರು ಎಂದು ವರದಿಯಾಗಿದೆ.

    ಶುಕ್ರವಾರದಂದು ಖಾಸಗಿ ಡಿಟೆಕ್ಟೀವ್ ಸತೀಶ್ ಹಾಗೂ ಆತನ ಪತ್ನಿ ಶ್ರದ್ಧಾಳನ್ನು ದೊಂಬಿಲ್ವಿ ಮನೆಯಿಂದ ಎಇಸಿ(ಆ್ಯಂಟಿ ಎಕ್ಸ್ಟಾರ್ಷನ್ ಸೆಲ್) ಅಧಿಕಾರಿಗಳು ಬಂಧಿಸಿದ್ದಾರೆ. ಸತೀಶ್ ಮನೆಯಿಂದ ಪೊಲೀಸರು 2 ಲ್ಯಾಪ್‍ಟಾಪ್, 5 ಮೊಬೈಲ್‍ಗಳು, 4 ಪೆನ್‍ಡ್ರೈವ್, 15 ಸಿಡಿ ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಥಾಣೆ ಪೊಲೀಸ್ ವರಿಷ್ಠಾಧಿಕಾರಿ ಪರಂ ಬೀರ್ ಹೇಳಿದ್ದಾರೆ.

    ರಾಧೇಶ್ಯಾಮ್ ಅವರು ಸತೀಶ್ ನಿಂದ ಬೆದರಿಕೆ ಕರೆ ಬರುತ್ತಿದೆ ಎಂದು ಪೊಲೀಸರ ಮೊರೆ ಹೋಗಿದ್ದರು. ಸತೀಶ್ ತನ್ನ ಪತ್ನಿ ಹಾಗೂ ಗೆಳೆಯ ಅನಿಲ್ ವೇದ್ ಮೆಹ್ತಾ ಜೊತೆ ಅಧಿಕಾರಿಯನ್ನ ಸಂಪರ್ಕಿಸಿ ಅಕ್ಟೋಬರ್ 23ರಂದು ಹಣದ ಸಮೇತ ನಾಸಿಕ್ ಹೆದ್ದಾರಿಯ ಕರೇಗಾಂವ್ ಟೋಲ್ ಪ್ಲಾಜಾ ಬಳಿ ಬರುವಂತೆ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ನಿಮ್ಮ ಕುಟುಂಬಸ್ಥರು ಸುರಕ್ಷಿತವಾಗಿರಬೇಕಾದ್ರೆ 7 ಕೋಟಿ ರೂ. ಹಣ ಕೊಡ್ಬೇಕು ಅಂತ ದಂಪತಿ ಅಧಿಕಾರಿಯನ್ನ ಬೆದರಿಸಿದ್ದರು. ಆದ್ರೆ ಐಎಎಸ್ ಅಧಿಕಾರಿ ಆ ಫೋನ್ ಸಂಭಾಷಣೆಯನ್ನ ಥಾಣೆ ಪೊಲೀಸರಿಗೆ ಒದಗಿಸಿದ್ದರು. ನಂತರ ಪೊಲೀಸರು ಸತೀಶ್ ಮತ್ತು ಆತನ ಪತ್ನಿಯನ್ನ ಬಂಧಿಸಲು ಪ್ಲ್ಯಾನ್ ರೂಪಿಸಿದ್ದರು. ಪೊಲೀಸ್ ಪೇದೆಯೊಬ್ಬರು ಬೇರೆ ವೇಷದಲ್ಲಿ 1 ಕೋಟಿ ರೂ. ತೆಗೆದುಕೊಂಡು ಸತೀಶ್ ಮನೆಗೆ ಹೋಗಿ ರೆಡ್ ಹ್ಯಾಂಡ್ ಆಗಿ ಆರೋಪಿಯನ್ನ ಹಿಡಿದಿದ್ದಾರೆ.

    ಸತೀಶ್ ಈ ಹಿಂದೆ ರಾಧೇಶ್ಯಾಮ್ ಅವರ ಫೋನ್ ಸಂಭಾಷಣೆಯನ್ನ ಮಾಧ್ಯಮಗಳಿಗೆ ಲೀಕ್ ಮಾಡಿ, ರಾಜ್ಯದ ಆಡಳಿತದಲ್ಲಿ ಲಂಚ ಕೊಡದಿದ್ದರೆ ಕೆಲಸ ಆಗಲ್ಲ ಎಂದು ಆರೋಪ ಮಾಡಿದ್ದ. ಮೊದಲಿಗೆ ಫೋನ್ ಸಂಭಾಷಣೆಯ ಆಡಿಯೋವನ್ನ ಹಿಂದಿರುಗಿಸಲು 10 ಕೋಟಿಗೆ ಡಿಮ್ಯಾಂಡ್ ಮಾಡಿ, ರಾಧಶ್ಯಾಮ್ ಹಣ ಕೊಡಲು ನಿರಾಕರಿಸಿದ ನಂತರ 7 ಕೋಟಿಗೆ ಬೇಡಿಕೆ ಇಟ್ಟಿದ್ದ ಎಂದು ವರದಿಯಾಗಿದೆ.

     

  • ನಟ ದುನಿಯಾ ವಿಜಯ್ ಹೆಸರಲ್ಲಿ ಸುಲಿಗೆ- ವಿಜಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಬಂಧನ

    ನಟ ದುನಿಯಾ ವಿಜಯ್ ಹೆಸರಲ್ಲಿ ಸುಲಿಗೆ- ವಿಜಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಬಂಧನ

    ದಾವಣಗೆರೆ: ಗ್ರಾಹಕರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ದುನಿಯಾ ವಿಜಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷನನ್ನು ಪೊಲೀಸರು ದಾವಣಗೆರೆಯಲ್ಲಿ ಬಂಧಿಸಿದ್ದಾರೆ.

    ವಜ್ರದ ವ್ಯಾಪಾರಿ ಸೋಗಿನಲ್ಲಿ ಗ್ರಾಹಕರನ್ನ ಬಂಧಿಸಿ, ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ದುನಿಯಾ ವಿಜಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಎಚ್.ಎಸ್. ದೊಡ್ಡೇಶ್, ಬೆಳ್ಳಿಬೆಟ್ಟ ಚಿತ್ರದ ನಿರ್ಮಾಪಕ ಹಾಗೂ ಹೊನ್ನಾಳಿ ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಉತ್ತೇಶ್‍ನನ್ನು ಬಂಧಿಸಲಾಗಿದೆ.

    ಆರೋಪಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಬರೇಜ್ ಎ ಶೇಕ್ ಎನ್ನುವ ವ್ಯಕ್ತಿಗೆ ವಜ್ರ ಕೊಡುವುದಾಗಿ ನಂಬಿಸಿ ಅಕ್ರಮ ಬಂಧನದಲ್ಲಿ ಇಟ್ಟುಕೊಂಡಿದ್ರು. ಮನಬಂದಂತೆ ಹಿಂಸೆ ಕೊಟ್ಟು ಆಸ್ತಿ ವಿವರ, ಬ್ಯಾಂಕ್ ಬ್ಯಾಲೆನ್ಸ್ ಪಡೆದು ಪೊಲೀಸರಿಗೆ ದೂರು ನೀಡಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ರು. ದೊಡ್ಡೇಶ್, ಉತ್ತೇಶ್ ಮತ್ತು ನಿವೃತ್ತ ತಹಸೀಲ್ದಾರ್ ಪುತ್ರ ಗುರುರಾಜ್ ಶ್ರೀಮಂತರನ್ನ ಗುರಿಯಾಗಿಸಿಕೊಂಡು ಇದೇ ರೀತಿ ದಂಧೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ಸದ್ಯ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 36 ಸಾವಿರ ರೂ. ನಗದು, 1 ಫೋರ್ಡ್, 1 ಬೆನ್ಜ್ ಕಾರು, 3 ಮೊಬೈಲ್ ವಶಕ್ಕೆ ಪಡೆದಿದ್ದಾರೆ.