Tag: ಸುರೇಂದ್ರ ಸಿಂಗ್ ಶೇರಾ

  • ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಫೇಲ್- ಮರಳಿದ ಶಾಸಕ

    ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಫೇಲ್- ಮರಳಿದ ಶಾಸಕ

    – ಮಗಳ ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗ್ಳೂರಿನಲ್ಲಿದ್ದೆ: ಶೇರಾ
    – ರಾಜಕೀಯ ಹೈಡ್ರಾಮಾಗೆ ಟ್ವಿಸ್ಟ್

    ಭೋಪಾಲ್: ಮಧ್ಯಪ್ರದೇಶದ ರಾಜಕೀಯಕ್ಕೆ ಭಾರೀ ಟ್ವಿಸ್ಟ್ ಸಿಕ್ಕಿದ್ದು, ಕೆಲ ದಿನಗಳಿಂದ ಸಿಎಂ ಕಮಲ್‍ನಾಥ್ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಪಕ್ಷೇತರ ಶಾಸಕ ಇಂದು ಭೋಪಾಲ್‍ಗೆ ಮರಳಿದ್ದಾರೆ.

    ಪಕ್ಷೇತರ ಶಾಸಕ ಸುರೇಂದ್ರ ಸಿಂಗ್ ಶೇರಾ ಬೆಂಗಳೂರಿನಿಂದ ಭೋಪಾಲ್ ಇಂದು ಹಿಂದಿರುಗಿದ್ದಾರೆ. ಈ ವೇಳೆ ಮಾತನಾಡಿ ಅವರು, ನನ್ನ ಮಗಳ ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿದ್ದೆ. ನಾನು ಯಾವುದೇ ರೀತಿಯ ಬಂಧನದಲ್ಲಿ ಇರಲಿಲ್ಲ. ಶೀಘ್ರದಲ್ಲೇ ಸಿಎಂ ಕಮಲ್‍ನಾಥ್ ಅವರನ್ನು ಭೇಟಿಯಾಗುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಆಪರೇಷನ್ ಕಮಲಕ್ಕೆ ಒಳಗಾದ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರಾದ ಹರ್ದೀಪ್ ಸಿಂಗ್, ಏಂದಲ್ ಸಿಂಗ್ ಕಂಸಾನ, ಪಕ್ಷೇತರ ಶಾಸಕ ಸುರೇಂದ್ರ ಸಿಂಗ್ ಶೇರಾ ಸೇರಿದಂತೆ 10 ಜನ ಶಾಸಕರು ಬೆಂಗಳೂರಿನಲ್ಲಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಹೀಗಾಗಿ ಬೆಂಗಳೂರಿಗೆ ವಾಪಸ್ ಆಗಿರುವ ಸುರೇಂದ್ರ ಸಿಂಗ್ ಅವರ ಹೇಳಿಕೆಯಿಂದ ಉಳಿದ 9 ಜನ ಶಾಸಕರು ಇನ್ನೂ ಬೆಂಗಳೂರಿನಲ್ಲೇ ಇದ್ದಾರೆ ಎಂಬುದು ಸ್ಪಷ್ಟವಾಗುವಂತಿದೆ.

    ಈ ಮಧ್ಯೆ ಕಾಂಗ್ರೆಸ್‍ನ ಶಾಸಕ ಹರ್ದೀಪ್ ಸಿಂಗ್ ಅವರು ಮಧ್ಯಪ್ರದೇಶ ಸ್ಪೀಕರ್ ಪ್ರಜಾಪತಿ ಅವರಿಗೆ ಪತ್ರದ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ. ಇತ್ತ ಸಿಎಂ ಕಮಲ್‍ನಾಥ್ ಅವರು ನಾಪತ್ತೆಯಾಗಿರುವ ಶಾಸಕರ ಸಂಪರ್ಕ ಸಾಧಿಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಶಾಸಕ ಸುರೇಂದ್ರ ಸಿಂಗ್ ಶೇರಾ ಭೋಪಾಲ್‍ಗೆ ಮರಳಿದ್ದರಿಂದ ಆಪರೇಷನ್ ಕಮಲ ವಿಫಲವಾಯಿತಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ.

    ಸಂಖ್ಯಾಬಲ:
    ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿದೆ. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಚಿಂದ್ವಾರಾ ಕ್ಷೇತ್ರದಿಂದ ಸಿಎಂ ಕಮಲ್‍ನಾಥ್ ಪುತ್ರ ನಕುಲ್ ನಾಥ್ ಜಯಗಳಿಸಿದ್ದರು.