Tag: ಸುರೇಂದ್ರ ಸಿಂಗ್

  • ಕೊರೊನಾ ವಿರುದ್ಧ ಗೆಲ್ಲಬೇಕಾದರೆ ಗೋಮೂತ್ರ ಸೇವಿಸಿ: ಬಿಜೆಪಿ ಶಾಸಕ

    ಕೊರೊನಾ ವಿರುದ್ಧ ಗೆಲ್ಲಬೇಕಾದರೆ ಗೋಮೂತ್ರ ಸೇವಿಸಿ: ಬಿಜೆಪಿ ಶಾಸಕ

    ಲಕ್ನೋ: ಕೊರೊನಾ ವಿರುದ್ಧ ನೀವು ಗೆಲ್ಲಬೇಕಾದರೆ ಗೋಮೂತ್ರ ಸೇವಿಸಿ ಎಂದು ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ತಿಳಿಸಿದ್ದಾರೆ. ಅಲ್ಲದೆ ತಾವು ಗೋಮೂತ್ರ ಸೇವಿಸುವ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

    ಬಿಜೆಪಿ ಶಾಸಕ ಗೋಮೂತ್ರ ಸೇವಿಸುವ ವೀಡಿಯೋ ಸದ್ಯ ವೈರಲ್ ಆಗಿದೆ, ಎಲ್ಲರೂ ಗೋಮೂತ್ರ ಸೇವಿಸಿ ಎಂದು ಸುರೇಂದ್ರ ಸಿಂಗ್ ಮನವಿ ಮಾಡಿದ್ದಾರೆ. ಗೋಮೂತ್ರ ಬಳಸಿ ಕೊರೊನಾ ಹರಡುವುದನ್ನು ತಡೆಗಟ್ಟಬಹುದಾಗಿದೆ. ಅಲ್ಲದೆ ಜನರಿಗಾಗಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಿರುವುದರ ಮಧ್ಯೆಯೂ ನನ್ನ ಉತ್ತಮ ಆರೋಗ್ಯದ ಗುಟ್ಟು ಗೋಮೂತ್ರ ಎಂದು ಸಿಂಗ್ ಹೇಳಿದ್ದಾರೆ.

    ಅಲ್ಲದೆ ಗೋಮೂತ್ರವನ್ನು ಯಾವ ಪ್ರಮಾಣದಲ್ಲಿ, ಹೇಗೆ ಸೇವಿಸಬೇಕು ಎಮಬುದರ ಕುರಿತು ಸಹ ಮಾಹಿತಿ ನೀಡಿರುವ ಅವರು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಗೋಮೂತ್ರ ಸೇವಿಸಬೇಕು. ಒಂದು ಗ್ಲಾಸ್ ನೀರಿನಲ್ಲಿ ಎರಡ್ಮೂರು ಕ್ಯಾಪ್‍ನಷ್ಟು ಗೋಮೂತ್ರ ಬೆರೆಸಿ ಸೇವಿಸಬೇಕು. ಇನ್ನೊಂದು ಮುನ್ನೆಚ್ಚರಿಕೆ ನೀಡಿರುವ ಅವರು, ಗೋಮೂತ್ರ ಸೇವಿಸಿದ ಬಳಿಕ ಅರ್ಧ ಗಂಟೆ ಏನೂ ಸೇವಿಸಬಾರದು ಎಂದಿದ್ದಾರೆ.

    ನಾನು ವಿಜ್ಞಾನವನ್ನು ನಂಬುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಗೋಮೂತ್ರವನ್ನು ಸಂಪೂರ್ಣವಾಗಿ ನಂಬುತ್ತೇನೆ. ಕೊರೊನಾ ಮಹಾಮಾರಿಗೆ ಮಾತ್ರವಲ್ಲ, ಹೃದಯ ಸಂಬಂಧಿ ರೋಗ ಸೇರಿದಂತೆ ಹಲವು ಖಾಯಿಲೆಗಳಿಗೆ ಗೋಮೂತ್ರವೇ ಮದ್ದು. ಇದೇ ವೇಳೆ ಪತಂಜಲಿ ಗೋಮೂತ್ರ ಉತ್ತಮ, ಅಲ್ಲದೆ ನಿಯಮಿತವಾಗಿ ಬೇಯಿಸಿದ ಅರಿಶಿಣ ಪುಡಿ ಬಳಸುವುದರಿಂದ ಸಹ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.

  • ಹೆಣ್ಣು ಮಕ್ಕಳಿಗೆ ಸಂಸ್ಕಾರ ಕಲಿಸಿದ್ರೆ ರೇಪ್ ನಿಲ್ಲುತ್ತೆ: ಬಿಜೆಪಿ ಶಾಸಕ

    ಹೆಣ್ಣು ಮಕ್ಕಳಿಗೆ ಸಂಸ್ಕಾರ ಕಲಿಸಿದ್ರೆ ರೇಪ್ ನಿಲ್ಲುತ್ತೆ: ಬಿಜೆಪಿ ಶಾಸಕ

    -ಶಾಸಕ ಸುರೇಂದ್ರ ಹೇಳಿಕೆಗೆ ರಾಗಾ ಕಿಡಿ

    ಲಕ್ನೋ: ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಸಂಸ್ಕಾರ ಕಲಿಸಿದ್ರೆ ಅತ್ಯಾಚಾರ ಪ್ರಕರಣಗಳು ಕಡಿಮೆ ಆಗುತ್ತವೆ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಹತ್ರಾಸ್ ಗ್ಯಾಂಗ್‍ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ್ದ ಶಾಸಕರು, ದೇಶದಲ್ಲಿ ಸಂಸ್ಕಾರ ಮತ್ತು ಉತ್ತಮ ಮೌಲ್ಯಗಳಿಂದಲೇ ಅತ್ಯಾಚಾರ ಪ್ರಕರಣಗಳು ನಿಲ್ಲುತ್ತೇವೆಯೇ ಹೊರತು ಯಾವುದೇ ಕಾನೂನು, ಖತ್ತಿಯಿಂದ ಅಲ್ಲ. ಹಾಗಾಗಿ ಎಲ್ಲ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಸಂಸ್ಕಾರ ಮತ್ತು ಸರ್ಕಾರ ಜೊತೆಯಾಗಿದ್ರೆ ಮಾತ್ರ ದೇಶವನ್ನು ಸುಂದರವನ್ನಾಗಿ ಮಾಡಬಹುದು ಎಂದು ಹೇಳಿದ್ದರು.

    ನಾನು ಶಾಸಕನ ಜೊತೆ ಶಿಕ್ಷಕನಾಗಿದ್ದೇನೆ. ಹಾಗಾಗಿ ತಮ್ಮ ವಯಸ್ಸಿಗೆ ಬಂದ ಮಗಳಿಗೆ ಪೋಷಕರು ಒಳ್ಳೆಯದನ್ನು ಕಲಿಸಬೇಕು. ಮಕ್ಕಳಿಗೆ ಸಂಸ್ಕಾರ ಕಲಿಸೋದು ಅವರ ಕುಟುಂಬದ ಕರ್ತವ್ಯವಾಗಿರುತ್ತದೆ ಎಂದು ಸುರೇಂದ್ರ ಸಿಂಗ್ ಹೇಳಿಕೆ ನೀಡಿದ್ದರು.

    ಸುರೇಂದ್ರ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ, ಇದು ಆರ್‍ಎಸ್‍ಎಸ್ ನಲ್ಲಿರುವ ಪುರುಷ ಕೋಮುವಾದಿಗಳ ಕೆಟ್ಟ ಮನಸ್ಥಿತಿ. ಇವರ ಪ್ರಕಾರ ಪುರುಷರು ಅತ್ಯಾಚಾರ ಎಸಗುತ್ತಾರೆ. ಮಹಿಳೆಯರಿಗೆ ಒಳ್ಳೆಯ ಮತ್ತು ಉತ್ತಮ ಮೌಲ್ಯಗಳನ್ನು ಕಲಿಸಬೇಕಿದೆ ಎಂದು ಕಿಡಿ ಕಾರಿದ್ದಾರೆ.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಳಿ ಉತ್ತರ ಪ್ರದೇಶ ಪೊಲೀಸರು ಕ್ಷಮೆ ಕೇಳಿದ್ದಾರೆ. ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ ಯುಪಿ ಪೊಲೀಸರು ಮತ್ತು ಕಾಂಗ್ರೆಸ್ ನಾಯಕರು ನಡುವೆ ಸಂಘರ್ಷವೇ ಉಂಟಾಗಿತ್ತು.

    ಈ ಹಿನ್ನೆಲೆ ಯುಪಿ ಪೊಲೀಸರು ಇಬ್ಬರು ನಾಯಕರ ಬಳಿ ಕ್ಷಮೆ ಕೋರಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 30ರಂದು ಪೊಲೀಸರು ನಡುವೆ ನಡೆದ ಗಲಾಟೆಯಲ್ಲಿ ರಾಹುಲ್ ಗಾಂಧಿ ಕೆಳಗೆ ಬಿದ್ದಿದ್ದರು. ಅಕ್ಟೋಬರ್ 3ರಂದು ನಡೆದ ಸಂಘರ್ಷದಲ್ಲಿ ಪುರುಷ ಪೊಲೀಸ್ ಅಧಿಕಾರಿಯೋರ್ವ ಪ್ರಿಯಾಂಕಾ ಗಾಂಧಿಯವರ ಕುರ್ತಾ ಹಿಡಿದಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ನಡೆಯನ್ನ ಖಂಡಿಸಿದ್ದರು.

    ಶಿವಸೇನೆಯ ಸಂಸದ ಸಂಜಯ್ ರಾವತ್ ವೈರಲ್ ಆಗಿದ್ದ ಫೋಟೋ ಟ್ವೀಟ್ ಮಾಡಿಕೊಂಡು, ಯೋಗಿ ಜೀ ನಿಮ್ಮ ರಾಜ್ಯದಲ್ಲಿ ಮಹಿಳಾ ಪೊಲೀಸರು ಇಲ್ಲವಾ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದರು.

  • ಸ್ಮೃತಿ ಇರಾನಿ ಆಪ್ತನ ಕೊಲೆ ಪ್ರಕರಣ- ಮೂವರ ಬಂಧನ, ಇಬ್ಬರು ನಾಪತ್ತೆ

    ಸ್ಮೃತಿ ಇರಾನಿ ಆಪ್ತನ ಕೊಲೆ ಪ್ರಕರಣ- ಮೂವರ ಬಂಧನ, ಇಬ್ಬರು ನಾಪತ್ತೆ

    ಲಕ್ನೋ: ಅಮೇಠಿಯ ನೂತನ ಸಂಸದೆ ಸ್ಮೃತಿ ಇರಾನಿ ಅವರ ಆಪ್ತ ಸುರೇಂದ್ರ ಸಿಂಗ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಇಂದು ಪೊಲೀಸರು ಬಂಧಿಸಿದ್ದು, ಇನ್ನುಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

    ರಾಜಕೀಯ ದ್ವೇಷದ ಹಿನ್ನೆಲೆ ಐವರು ದುಷ್ಕರ್ಮಿಗಳು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿದ್ದ ಸುರೇಂದ್ರ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಈಗಾಗಲೇ ಘಟನೆಯಲ್ಲಿ ಶಾಮಿಲಾಗಿದ್ದ 3 ಮಂದಿಯನ್ನು ಬಂಧಿಸಲಾಗಿದೆ. ಉಳಿದ 2 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನೂ ಕೂಡ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶನಿವಾರ ರಾತ್ರಿ ಸುರೇಂದ್ರ ಸಿಂಗ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು. ಆದರೆ ಭಾನುವಾರದಂದು ಈ ಘಟನೆ ಸಂಬಂಧ ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಹತ್ಯೆ ಮಾಡಲು ಕಾರಣ ಏನು ಎನ್ನುವುದು ತಿಳಿದು ಬಂದಿರಲಿಲ್ಲ. ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿಯೇ ಕೊಲೆ ಮಾಡಿರುವ ಶಂಕೆಯಿದೆ ಎಂದು ಪೊಲೀಸರು ಹೇಳಿದರು.

    ಅಮೇಠಿಯಲ್ಲಿ ಪ್ರಚಾರ ಹಾಗೂ ಚುನಾವಣೆ ವೇಳೆ ತಮ್ಮೊಂದಿಗೆ ಇದ್ದು ಉತ್ತಮವಾಗಿ ಸಹಕರಿಸಿದ್ದ ಸುರೇಂದ್ರ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಸ್ಮೃತಿ ಇರಾನಿ ಹೆಗಲು ಕೊಟ್ಟಿದ್ದರು. ಅಂತ್ಯಸಂಸ್ಕಾರದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಬೇಕಾದರೆ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಸುಪ್ರೀಂ ಕೋರ್ಟ್‍ಗೆ ಹೋಗಲು ನಾನು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಶ್ರೀರಾಮನಿಂದ್ಲೂ ರೇಪ್ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ- ಬಿಜೆಪಿ ಶಾಸಕ ಸುರೇಂದ್ರ ಸಿಂಗ್

    ಶ್ರೀರಾಮನಿಂದ್ಲೂ ರೇಪ್ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ- ಬಿಜೆಪಿ ಶಾಸಕ ಸುರೇಂದ್ರ ಸಿಂಗ್

    ಲಕ್ನೋ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಮರ್ಯಾದಾ ಪುರುಷ ಶ್ರೀರಾಮನಿಂದಲೂ ಇದಕ್ಕೆ ಅಂತ್ಯ ಹಾಡಲು ಸಾಧ್ಯವಿಲ್ಲ ಅಂತ ಉತ್ತರಪ್ರದೇಶದ ಬೈರಿಯಾ ಜಿಲ್ಲೆಯ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂಬ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಸ್ವತಃ ಶ್ರೀರಾಮನೇ ಭೂಮಿಗೆ ಬಂದ್ರೂ ಅತ್ಯಾಚಾರದಂತಹ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ. ಈ ಮಾತನ್ನು ನಾನು ಸಂಪೂರ್ಣ ವಿಶ್ವಾಸದಿಂದ ಹೇಳುತ್ತಿದ್ದೇನೆ ಅಂದ್ರು.

    ಅತ್ಯಾಚಾರ ಎಂಬುದು ನೈಸರ್ಗಿಕ ಮಾಲಿನ್ಯವಾಗಿದೆ. ತಮ್ಮ ಕುಟುಂಬದವರಂತೆ ತಮ್ಮ ಸಹೋದರಿಯರಂತೆ ಇತರ ಕುಟುಂಬದ ಹೆಣ್ಣುಮಕ್ಕಳನ್ನು ಪರಿಗಣಿಸುವುದು ಜನರ ಜವಾಬ್ದಾರಿ. ಸಮಾಜದಲ್ಲಿ ಕೆಲವೊಂದು ಉತ್ತಮ ಮೌಲ್ಯಗಳನ್ನು ಹುಟ್ಟುಹಾಕುವ ಮೂಲಕ ಮಾತ್ರ ಇಂತಹ ಘಟನೆಗಳನ್ನು ನಿಯಂತ್ರಿಸಬಹುದೇ ಹೊರತು ಸಂವಿಧಾನದಿಂದ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

    ಸಿಂಗ್ ಅವರು ವಿವಾದಾತ್ಮಕ ಹೇಳಿಕೆ ನೀಡುವುದು ಇದೇ ಮೊದಲೇನಲ್ಲ. ಈ ಹಿಂದೆ `ಸರ್ಕಾರಿ ಅಧಿಕಾರಿಗಳಿಗಿಂತ ವೇಶ್ಯೆಯರೇ ಉತ್ತಮ’ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದರು.

    ಅತ್ಯಾಚಾರ ಪ್ರಕರಣಗಳಿಗೆ ಪೋಷಕರು ಮತ್ತು ಹದಿಹರೆಯದವರು ಸ್ಮಾಟ್ ಫೋನ್ ಗಳನ್ನು ಬಳಸುವುದೇ ಪ್ರಮುಖ ಕಾರಣ ಎಂದು ಆರೋಪಿಸಿದ್ದರು. ಇತ್ತೀಚೆಗೆ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಸಿಟಾಪುರ ಜೈಲಿನಲ್ಲಿರುವ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗಾರ್, ಮೂರು ಮಕ್ಕಳ ತಾಯಿಯನ್ನು ಯಾರೂ ಅತ್ಯಾಚಾರ ಮಾಡಬಾರದು. ಅದು ಸಾಧ್ಯವಿಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.