-ಅಂಬಿ ನಮನ ಕಾರ್ಯಕ್ರಮದ ಫೋಟೋ ಹಾಕಿ Feeling Loved ಅಂದ ಕಿಡಿಗೇಡಿಗಳು
ಬೆಂಗಳೂರು: ಸುಮಲತಾ ಅಂಬರೀಶ್ ಅವರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದು, ಈ ಕುರಿತು ಸ್ವತಃ ಸುಮಲತಾ ಅವರೇ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರಿ ಎಂದು ತಿಳಿಸಿದ್ದಾರೆ.
ನನ್ನ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಖಾತೆ ಆರಂಭಿಸಲಾಗಿದೆ. ಇದರಲ್ಲಿ ನನ್ನ ಹೆಸರನ್ನು ಬಳಕೆ ಮಾಡಿಕೊಂಡು ಪೋಸ್ಟ್ ಮಾಡಲಾಗುತ್ತಿದ್ದು, ಯಾರು ಇಂತಹ ಖಾತೆಯಿಂದ ಬರುವ ಸಂದೇಶ ಹಾಗೂ ಮನವಿಗಳನ್ನು ಸ್ವೀಕರಿಸಬೇಡಿ. ನನ್ನ ಹೆಸರಿನಲ್ಲಿ ಒಂದು ಖಾತೆ ಮಾತ್ರವೇ ಇದೇ ಎಂದು ಸ್ಪಷ್ಟಪಡಿಸಿ ಟ್ವೀಟ್ ಮಾಡಿದ್ದಾರೆ.
I just discovered , There seems to be an unauthorised FB account in my name , posting as myself…so I just wanted to caution people , please do not accept any message requests or fall for this account in my name , this is the only ONE fb account pic.twitter.com/Bfed61UEMi
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) January 17, 2019
ನಕಲಿ ಖಾತೆಯನ್ನು ಆರಂಭಿಸಿರುವ ಕಿಡಿಗೇಡಿಗಳು ಮಂಡ್ಯದಲ್ಲಿ ನಡೆದ ಅಂಬಿ ನಮನ ಕಾರ್ಯಕ್ರಮದಲ್ಲಿ ಸೆರೆ ಹಿಡಿದಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಫೋಟೋ ಬಗ್ಗೆ Feeling Loved ಎಂದು ಬರೆದಿದ್ದಾರೆ. ನಕಲಿ ಖಾತೆಯ ಸ್ಕ್ರೀನ್ ಶಾರ್ಟ್ ಫೋಟೋವನ್ನು ಸುಮಲತಾ ಅವರು ಟ್ವೀಟ್ ಮಾಡಿದ್ದಾರೆ.
ಸುಮಲತಾ ಅವರ ಮನವಿಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ಇಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಅಂಬರೀಶ್ ಅವರ ಸಾವಿನ ಕುರಿತು ಕೆಲ ನಕಲಿ ಫೇಸ್‍ಬುಕ್ ಖಾತೆಗಳಿಂದ ಪ್ರಚೋದನಾಕಾರಿಯಾಗಿ ಪೋಸ್ಟ್ ಮಾಡಲಾಗಿತ್ತು. ಅಲ್ಲದೇ ಅಂಬಿ ಅವರ ಬಗ್ಗೆ ಕೀಳು ಮಟ್ಟದ ಭಾಷೆಯನ್ನು ಬಳಸಿ ನಿಂದಿಸಿದ್ದರು. ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು.
ಬೆಂಗಳೂರು: ಇಂದು ದಿವಂಗತ ಹಿರಿಯ ನಟ ಅಂಬರೀಶ್ ಮತ್ತು ಸುಮಲತಾ ಅವರ 27ನೇ ಮದುವೆ ವಾರ್ಷಿಕೋತ್ಸವವಾಗಿದ್ದು, ಸುಮಲತಾ ಅವರು ತಮ್ಮ ಫೇಸ್ ಬುಕ್ ನಲ್ಲಿ ಅಂಬಿ ಪ್ರೀತಿಯ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.
”ಇಂದು ಮೊದಲ ಬಾರಿಗೆ ನೀವು ನನ್ನೊಂದಿಗಿಲ್ಲ. 27 ವರ್ಷಗಳ ಕಾಲ ನಿಮ್ಮಂತ ಸಿಂಹ ಹೃದಯದ ಜೊತೆ ನನ್ನ ಜೀವನವನ್ನು ಹಂಚಿಕೊಂಡಿದ್ದಕ್ಕೆ ನಾನು ನಿಜಕ್ಕೂ ಹೆಮ್ಮೆ ಪಡುತ್ತೇನೆ. ನೀವೇ ನನಗೆ ಸ್ಪೂರ್ತಿ, ಕೋಟಿಗಳಲ್ಲಿ ನೀವು ಒಬ್ಬರು” ಎಂದು ಬರೆದುಕೊಂಡಿದ್ದು ನಿಜಕ್ಕೂ ಕಣ್ಣೀರು ತರಿಸುವಂತಿದೆ.
ಪೋಸ್ಟ್ ನಲ್ಲೇನಿದೆ?:
ನನ್ನ ಪ್ರೀತಿಯ ಎ..
ಡಿಸೆಂಬರ್ 8. 27 ವರ್ಷಗಳ ನಮ್ಮ ವೈವಾಹಿಕ ಜೀವನ ಪಯಣದಲ್ಲಿ ಮೊದಲ ಬಾರಿಗೆ ನೀವು ನನ್ನೊಂದಿಗಿಲ್ಲ. ನಮ್ಮ ದಿನದಲ್ಲಿ. ನನ್ನ ಜಗತ್ತಿಗೆ ಮಾತ್ರ ನೀನು ಪ್ರಮುಖನಾಗಿರಲಿಲ್ಲ. ನೀವೇ ನನ್ನ ಜಗತ್ತಾಗಿದ್ರಿ. ನನ್ನ ಕೈ ಹಿಡಿದು ನಡೆಸಿದ್ದೀರಾ. ನಿಮ್ಮ ಹೃದಯದಲ್ಲಿ ಅದ್ಭುತ ಪ್ರೀತಿ ಇತ್ತು. ಅದು ನನ್ನೊಬ್ಬಳಿಗೆ ಮಾತ್ರವಲ್ಲ. ಲಕ್ಷಗಟ್ಟಲೆ ಜನರಿಗೆ ಆ ಪ್ರೀತಿ ಸಿಕ್ಕಿತ್ತು. ಅದೇ ಪ್ರೀತಿ ನನ್ನಲ್ಲೇ ತುಂಬಿಕೊಂಡಿತ್ತು. ಆ ಪ್ರೀತಿಯೇ ನನ್ನ ಬದುಕನ್ನು ಕೈ ಹಿಡಿದು ನಡೆಸಿದೆ. 27 ವರ್ಷಾನಾ? ನನ್ನ ಬದುಕು ಅಂತಾ ಆರಂಭವಾಗಿದ್ದೇ, ನೀನು ನನ್ನನ್ನು ಪ್ರೀತಿಸಿದ ಮೇಲೆ. ನಿಮ್ಮ ನಗು ನನ್ನನ್ನು ಅದೇ ಸಂತೋಷದಲ್ಲಿ ಮುಂದುವರಿಸಿದೆ. ಜಗತ್ತಿನ ಯಾವುದೇ ವಸ್ತು, ಯಾರೇ ಆಗಲಿ, ನಿನಗೆ ನನ್ನ ಮೇಲೆ ಇದ್ದ ಪ್ರೀತಿಯನ್ನು ಮುಚ್ಚಿಡಲು ಸಾಧ್ಯವಿಲ್ಲ. ಆ ನಿನ್ನ ಪ್ರೀತಿ ನನ್ನನ್ನು, ನನ್ನ ಬದುಕನ್ನು ಸುರಕ್ಷಿತವಾಗಿರುವಂತೆ ಮಾಡಿದೆ.
ಎಲ್ಲದರಿಂದ ನನ್ನನ್ನು ಕಾಪಾಡಿದೆ. ಯಾವ ರೀತಿ ಅಂದ್ರೆ. ತುಂಬಾ ಚಳಿ ಇದ್ದಾಗ. ಬೆಚ್ಚಗಿನ ಬ್ಲಾಂಕೆಟ್ ಹೊಂದುಕೊಂಡ ರೀತಿ. ಮಳೆಯಲ್ಲಿ ಬಿಸಿಲಲ್ಲಿ ಕಾಪಾಡುವ ದೊಡ್ಡ ಕೊಡೆಯಂತೆ ನನ್ನನ್ನು ಕಾಪಾಡಿದ್ದೀಯಾ. ಈ ಕ್ಷಣ ನೀನು ಎಲ್ಲಾದ್ರೂ ಇರು.. ಆದ್ರೆ ನನಗೆ ಗೊತ್ತು.. ನೀನು ನನ್ನನ್ನೇ ಹುಡುಕ್ತಿರ್ತೀಯಾ.. ಈಗಲೂ ನಿನಗೆ ನಮ್ಮ ಮಗನ ಬಗ್ಗೆ ಆತಂಕ ಇದೆ.. ಈಗಲೂ, ಇನ್ನು ಮುಂದೆಯೂ ನೀನು ನಮ್ಮನ್ನು ರಕ್ಷಿಸುತ್ತೀಯಾ.. ನನ್ನ ಸುತ್ತಲಿರುವ ಹಲವಾರು ಕಣ್ಣುಗಳಲ್ಲಿ ಈಗಲೂ ಕೂಡ ಆ ನಿನ್ನ ಪ್ರೀತಿಯ ಪ್ರತಿಬಿಂಬವನ್ನು ಕಾಣುತ್ತೇನೆ.. ಅದು ನನ್ನ ಮತ್ತು ಅಭಿಯನ್ನು ಆ ಕಣ್ಣುಗಳು ಹರಸುತ್ತಿರುತ್ತವೆ..
ಇನ್ಮುಂದೆ ಒಡೆದ ನನ್ನ ಹೃದಯ ಕಟ್ಟಿಕೊಳ್ಳಲು, ಸಂತೈಸಲು ಜೊತೆಗೆ ಮುಂದಿನ ದಾರಿಯಲ್ಲಿ ನಡೆಯಲು ನಿನ್ನ ಶಕ್ತಿ ಬೇಕು.. ನಿನ್ನಿಂದ ಆ ಶಕ್ತಿ ಬೇಕು.. ನೀನು ಕಟ್ಟಿದ ಆ ಸುಂದರ ಬದುಕು.. ನಿನ್ನ ಆದರ್ಶಗಳನ್ನು ಹಾಗೆ ಕೊನೆವರೆಗೂ ಉಳಿಸಿಕೊಳ್ಳಲು ನಿನ್ನ ಆಶೀರ್ವಾದ ಬೇಕು.. ನಾನು ಬದುಕಿರಲು ನಿನ್ನ ಪ್ರೀತಿ ನನಗೆ ಬೇಕೇ ಬೇಕು.. ನಾನು ಇನ್ಮುಂದೆ ಮುಂದೆ ಸಾಗಲು ಹೆಮ್ಮೆಯಿಂದ ಬದುಕಲು ನಿನ್ನ ಸ್ಪೂರ್ತಿಯಿಂದ ಮುನ್ನಡೆಯುತ್ತೇನೆ.. ನಿನ್ನ ಜೊತೆ ಹಂಚಿಕೊಂಡಿರುವ ಆ 27 ವರ್ಷಗಳಲ್ಲಿ ಸಿಂಹದ ಹೃದಯ.. ಅತ್ಯಧ್ಬುತ ಮಾನವೀಯ ಗುಣಗಳನ್ನು ಹೊಂದಿದ್ದ ಕೋಟಿಗೊಬ್ಬ ನೀನು..
ಎಂದೆಂದಿಗೂ ನನ್ನಜೊತೆಗಿರು..
ನಮ್ಮ ಬದುಕಲ್ಲಿ ನೀನು ಎಂದೆಂದಿಗೂ ಹೊಳೆಯುತ್ತಿರು..
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು..
ಈ ಪತ್ರ ಓದಿದ್ರೆ ಎಂತವರಿಗೂ ಕಣ್ಣೀರು ಬರುತ್ತೆ. ರೆಬೆಲ್-ಸುಮಕ್ಕನ ಸುಮಧುರ ಪ್ರೀತಿಗೆ ಸೆಲ್ಯೂಟ್ ಹೊಡಿಬೇಕು ಅನ್ಸುತ್ತೆ.
ಪ್ರೊಫೈಲ್ ಚೇಂಚ್:
ಅಂಬರೀಶ್ ನಿಧನದ ನಂತರ ಅವರ ಅಂತಿಮ ವಿಧಿವಿಧಾನ ನಡೆಯುವ ವೇಳೆ ಇರಿಸಿದ್ದ ಫೋಟೋವನ್ನು ಸುಮಲತಾ ತಮ್ಮ ಫೇಸ್ ಬುಕ್ ಪ್ರೊಫೈಲ್ ಫೋಟೋವಾಗಿ ಬದಲಾಯಿಸಿದ್ದರು. ಅಲ್ಲದೇ ಕವರ್ ಫೋಟೋ ಆಗಿ ಮಲೇಷಿಯಾದಲ್ಲಿ ನಡೆದ 25ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂದರ್ಭದಲ್ಲಿ ತೆಗೆಸಿದ್ದ ಫೋಟೋವನ್ನು ಹಾಕಿದ್ದರು. ಇದೀಗ ಮತ್ತೆ ಅವರು ತಮ್ಮ ಪ್ರೊಫೈಲ್ ಫೋಟೋ ಚೇಂಜ್ ಮಾಡಿದ್ದು, ಮಲೇಷಿಯಾದಲ್ಲಿ ತೆಗೆದ ಫೋಟೋವನ್ನೇ ಎಡಿಟ್ ಮಾಡಿ ಅಪ್ ಡೇಟ್ ಮಾಡಿದ್ದಾರೆ.
ಫೋಟೋ ಜೊತೆ ತಾವು ಅಂಬರೀಶ್ ಜೊತೆ ಅಭಿನಯಿಸಿದ್ದ ಸಿನಿಮಾ ಹಾಡುಗಳನ್ನು ಪೋಸ್ಟ್ ಮಾಡಿ ಶೇರ್ ಮಾಡಿದ್ದಾರೆ. ‘ಹಾಂಗ್‍ಕಾಂಗ್‍ನಲ್ಲಿ ಏಜೆಂಟ್ ಅಮರ್’ ಸಿನಿಮಾ ‘ಹೆಲೋ ನನ್ನ ಪ್ರೇಯಸಿ’ ಎಂಬ ಹಾಡನ್ನು ಪೋಸ್ಟ್ ಮಾಡಿ ನನ್ನ ಫೇವರೆಟ್ ಎಂದು ಬರೆದುಕೊಂಡಿದ್ದಾರೆ. ಅದೇ ರೀತಿ ಅಂಬರೀಶ್ ಜೊತೆ ಅಭಿನಯಿಸಿದ್ದ ‘ತಾಯಿಗೊಬ್ಬ ಕರ್ಣ’ ಸಿನಿಮಾದ ‘ಅಂದ ಚಂದ ತಂದ ಕಲ್ಪನಾ’ ಹಾಡನ್ನು ಪೋಸ್ಟ್ ಮಾಡಿ’ ಇದು ನಮ್ಮ ಫೇವ್‍ರೆಟ್ ಸಾಂಗ್ ಎಂದು ಬರೆದುಕೊಂಡಿದ್ದಾರೆ. ಅದೇ ರೀತಿ ಬೇರೆ ಬೇರೆ ಸಿನಿಮಾದ ಹಾಡುಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.
1984 ರಲ್ಲಿ ಬಂದ ಕನ್ನಡ `ಆಹುತಿ’ ಸಿನಿಮಾದಲ್ಲಿ ಅಂಬರೀಶ್ ಹಾಗೂ ಸುಮಲತಾ ಅವರು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಸುಮಾರು ಆರೇಳು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿಯ ಸ್ನೇಹ ಪ್ರೀತಿಗೆ ತಿರುಗಿ 1991 ರ ಡಿಸೆಂಬರ್ 8 ರಂದು ಮದುವೆಯಾಗಿದ್ದರು. 27 ವರ್ಷ ಸಂತಸದ ಸಂಸಾರ ನಡೆಸಿದ್ದ ಈ ಜೋಡಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಮಲೇಷಿಯಾದಲ್ಲಿ ಆಚರಣೆ ಮಾಡಿ ಸಂಭ್ರಮಿಸಿದ್ದರು.
ಬೆಂಗಳೂರು: ಜೀವನದ ಅತ್ಯಂತ ಕಷ್ಟದ ಮತ್ತು ದುಃಖದ ಹೊತ್ತಿನಲ್ಲಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಬೆಂಬಲಿಸಿ ನಿಂತ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಹಾಗೆಯೇ ಸಕಲ ಸರ್ಕಾರಿ ಗೌರವ ನೀಡಿದ ಸರ್ಕಾರ, ಪೊಲೀಸ್ ಇಲಾಖೆ, ಮಂಡ್ಯ ಜನತೆ ಹಾಗೂ ಅಭಿಮಾನಿಗಳಿಗೆ ಸುಮಲತಾ ಅಂಬರೀಶ್ ಧನ್ಯವಾದ ತಿಳಿಸಿದ್ದಾರೆ.
ಈ ಕುರಿತು ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಸುಮಲತಾ ಅವರು, ನಿಮ್ಮ ಸಾಂತ್ವನದ ಮಾತುಗಳು ಮತ್ತು ನಿಮ್ಮ ಪ್ರೀತಿಯ ನಡೆಗಳು ಈ ಸಂಕಷ್ಟದ ಹೊತ್ತಿನಲ್ಲಿ ನಮಗೆ ಶಕ್ತಿ ತುಂಬಿದವು. ನಾನು, ಅಭಿಷೇಕ್ ಮತ್ತು ಅಂಬರೀಶ್ ಇಡೀ ಕುಟುಂಬವು ಕರ್ನಾಟಕದ ಜನತೆಗೆ ಸದಾ ಕಾಲ ಅಭಾರಿಯಾಗಿರುತ್ತೇವೆ. ವಿಶೇಷವಾಗಿ ಅಂಬರೀಶ್ ಅವರನ್ನು ತಮ್ಮ ರಾಜನಂತೆ ಗೌರವರಿಸಿ ಅತ್ಯಂತ ಪ್ರೀತಿಯಿಂದ ಕಳಿಸಿಕೊಟ್ಟ ಮಂಡ್ಯದ ಅಭಿಮಾನಿಗಳು ಮತ್ತು ಎಲ್ಲ ಅಭಿಮಾನಿಗಳಿಗೆ ನಾವುಗಳು ಯಾವಾಗಲು ಚಿರಋಣಿ ಎಂದು ತಿಳಿಸಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ಅಂತ್ಯಕ್ರಿಯೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಡುವುದರ ಜೊತೆಗೆ ಅಂಬರೀಶ್ ಅವರಿಗೆ ಸಕಲ ಸರಕಾರಿ ಗೌರವದೊಂದಿಗೆ ಕಳುಹಿಸಿಕೊಟ್ಟ ಸನ್ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ, ಮಂಡ್ಯದ ಸಂಸದ ಸಿ.ಎಸ್.ಪುಟ್ಟರಾಜು ಅವರಿಗೂ, ಇನ್ನಿತರ ಶಾಸಕರು ಮತ್ತು ಸಂಸದರಿಗೂ, ಕರ್ನಾಟಕ ಸರ್ಕಾರಕ್ಕೂ ನಾನು ಈ ಮೂಲಕ ಅಭಿನಂದನೆ ತಿಳಿಸುತ್ತೇನೆ. ಮೂರು ದಿನಗಳ ಕಾಲ ಸತತವಾಗಿ ಶ್ರಮವಹಿಸಿ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಂಡ ಪೋಲಿಸ್ ಇಲಾಖೆಯವರಿಗೂ, ಅರ್ ಎ ಎಫ್ ಸಿಬ್ಬಂದಿಯವರಿಗೂ, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಯ ಅಧಿಕಾರಿ ವರ್ಗದವರಿಗೂ ನಾನು ಈ ಮೂಲಕ ಅಭಿನಂದನೆ ತಿಳಿಸಲು ಇಚ್ಚಿಸುತ್ತೇನೆ.
ಅಂಬರೀಶ್ ಅವರು ಮೇಲೆ ಸದಾ ಕಾಲ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಿದ ಮಂಡ್ಯ ಜನತೆಯ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ. ಅವರು ಬದುಕಿದ್ದಾಗ ಹೇಗೆ ಪ್ರೀತಿ ಅಭಿಮಾನ ತೋರಿಸಿದರೋ ಹಾಗೆಯೇ ಅವರು ಸತ್ತ ನಂತರವು ಪ್ರೀತಿ ಅಭಿಮಾನಕ್ಕೆ ಯಾವುದೇ ಕೊರತೆಯಾಗದಂತೆ ನಡೆದುಕೊಂಡ ಮಂಡ್ಯದ ಜನತೆಗೆ ನಾನು ಸದಾ ಅಭಾರಿ. ಅವರೊಬ್ಬ ನಟ, ಕೇಂದ್ರದ ಮಂತ್ರಿ, ರಾಜ್ಯದ ಮಂತ್ರಿ, ಒಬ್ಬ ಸೂಪರ್ ಸ್ಟಾರ್, ಎಲ್ಲರಿಗೂ ಒಬ್ಬ ಒಳ್ಳೆಯ ಗೆಳೆಯರಾಗಿದ್ದರು. ಆದರೆ ಇವೆಲ್ಲಕ್ಕೂ ಮಿಗಿಲಾಗಿ ನಿಮ್ಮೆಲ್ಲರ ಪ್ರೀತಿ ಅಭಿಮಾನವೇ ಅವರಿಗೆ ದೊಡ್ಡ ಕಳಶದಂತೆ. ಅಂಬರೀಶ್ ಅವರು ನಮ್ಮ ಕರ್ನಾಟಕದ ಪುಣ್ಯ ಭೂಮಿಯಲ್ಲಿ ಹುಟ್ಟಿದ್ದೇ ಅವರಿಗೊಂದು ಅದೃಷ್ಟ. ಹಾಗೆಯೇ ಮಂಡ್ಯದ ಮಣ್ಣಿನ ಮಗ ಎನಿಸಿಕೊಳ್ಳಲು ಅಷ್ಟೇ ಅದೃಷ್ಟ ಮಾಡಿದ್ದರು.
ಬೆಂಗಳೂರು: ನಾನು ನೋಡಿರುವಂತಹ ನನ್ನ ಅಂಬರೀಶ್, ಅವರು ಒಳ್ಳೆಯ ಮಗ, ಸಹೋದರ, ಗಂಡ, ಸ್ನೇಹಿತ, ತಂದೆ, ನಟ, ರಾಜಕೀಯ ನಾಯಕ, ಸಮಾಜ ಸೇವಕ ಆಗಿದ್ದರು. ಅವರು ಇದಕ್ಕೆಲ್ಲ ಹೆಚ್ಚಾಗಿ ಒಳ್ಳೆಯ ಮನುಷ್ಯರಾಗಿದ್ದರು ಎಂದು ಪತಿಯನ್ನು ನೆನೆದು ಸುಮಲತಾ ಭಾವುಕರಾಗಿದ್ದಾರೆ.
ಸ್ಯಾಂಡಲ್‍ವುಡ್ ದಿಗ್ಗಜ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ನುಡಿ ನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸುಮಲತಾ ಪತಿಯನ್ನು ನೆನೆದು, ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.
ಅಂಬಿ ಬಗ್ಗೆ ಸುಮಲತಾ ಮಾತುಗಳು:
ಭಗವದ್ಗೀತೆಯಲ್ಲಿ ನೀನು ಬರುವಾಗ ಏನು ತಗೆದುಕೊಂಡು ಬರುತ್ತೀಯಾ. ಹೋಗುವಾಗ ಏನು ತೆಗೆದುಕೊಂಡು ಹೋಗುತ್ತಿಯಾ. ಇಲ್ಲಿ ಯಾವುದು ಶಾಶ್ವತವಲ್ಲ ಎಂದು ಭಗವಂತ ಮನುಷ್ಯನಿಗೆ ಹೇಳುತ್ತಾನೆ. ಅದಕ್ಕೆ ಮನುಷ್ಯ ನೀನು ನನಗೆ ಇಲ್ಲಿ ಕಳುಹಿಸುವಾಗ ಒಂದೇ ಒಂದು ಹೃದಯ ಮಾತ್ರ ಕಳುಹಿಸಿದ್ದೀಯಾ. ಆದರೆ ನಾನು ಇಲ್ಲಿಂದ ಹೋಗುವಾಗ ಲಕ್ಷಾಂತರ ಜನರ ಹೃದಯದಲ್ಲಿ ಮನೆ ಮಾಡಿಕೊಂಡು ಶಾಶ್ವತವಾಗಿ ಇಲ್ಲಿಯೇ ಇರುತ್ತೇನೆ. ನೀನು ನನ್ನ ಕರೆದುಕೊಂಡು ಹೋಗ್ತಿಯಾ. ಆದರೆ ನನ್ನ ಹೃದಯ ಹಾಗೂ ನನ್ನ ಮನೆ ಇಲ್ಲಿಯೇ ಇರುತ್ತದೆ ಎಂದು ನಗುತ್ತಾ ಆ ಮನುಷ್ಯ ಹೇಳುತ್ತಾನೆ. ಅಂತಹ ಮನುಷ್ಯ ನಮ್ಮ, ನಿಮ್ಮ ಪ್ರೀತಿಯ ಅಂಬರೀಶ್.
ಅಂಬರೀಶ್ ಅವರ ಪ್ರಯಾಣದ ಬಗ್ಗೆ ಹೇಳಬೇಕೆಂದರೆ, ಅದು ನನಗಿಂತ ಚೆನ್ನಾಗಿ ಇಲ್ಲಿರುವ ಬಹಳಷ್ಟು ಜನ ಅವರನ್ನು ತುಂಬಾ ಹತ್ತಿರದಿಂದ ನೋಡಿ ತಿಳಿದುಕೊಂಡಿರುತ್ತೀರಿ. ನಾನು ಅವರನ್ನು 27 ವರ್ಷದಿಂದ ನೋಡಿದ್ದೇನೆ. ಅದನ್ನು ಹೇಳಲು ಮಾತ್ರ ಸಾಧ್ಯ. ಅವರ ಸಿನಿಮಾ ಪ್ರಯಾಣ ಶುರುವಾಗಿದ್ದು ಸುಮಾರು ವರ್ಷಗಳಾಗಿದೆ. ಅದರಲ್ಲಿ ಅವರಿಗೆ ಅನ್ನದಾತರಾಗಿದ್ದ ನಿರ್ಮಾಪಕರು, ಅವರಿಗೆ ಒಳ್ಳೆಯ ಪಾತ್ರ ನೀಡಿ ಕರ್ನಾಟಕ ಜನತೆ ಇಷ್ಟಪಡುವಂತಹ ಮೇರು ನಟ ಮಾಡಲು ಬೆಂಬಲಿಸಿದ ನಿರ್ದೇಶಕರು, ಸಹಕಲಾವಿದರು ಹಾಗೂ ಅವರನ್ನು ಪ್ರೀತಿಯಿಂದ ಸಾಕಿ ಸಲುಗಿದ ಅಭಿಮಾನಿಗಳಿಗೆ ವಂದನೆಗಳು.
ಅಂಬಿ ಒಬ್ಬ ರಾಜನಾಗಿ ಬಾಳಿ, ರಾಜನಾಗಿ ನಮ್ಮನ್ನು ಅಗಲಿ ಹೋದರು. ಅವರ ಪ್ರಯಾಣದಲ್ಲಿ ರಾಜಕಾರಣದಲ್ಲಿ, ಜೀವನದಲ್ಲಿ ಸ್ನೇಹಿತರು, ಬೆಂಬಲ ನೀಡಿದ ಎಲ್ಲರಿಗೂ ನನ್ನ ಧನ್ಯವಾದಗಳು. ಅವರ ಅಂತಿಮ ಪಯಣವನ್ನು ಅರಸನಾಗಿ ಕಳುಹಿಸಿಕೊಟ್ಟಿದ್ದೀರಿ. ಅದಕ್ಕಾಗಿ ನಾನು ಸಿಎಂ ಕುಮಾರಣ್ಣ ಅವರಿಗೆ ಕೈಜೋಡಿಸಿ ನಮಸ್ಕಾರ ತಿಳಿಸುತ್ತೇನೆ.
ಕುಮಾರಸ್ವಾಮಿ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡು ಇದನ್ನು ನಡೆಸಿಕೊಟ್ಟ ರೀತಿ ಸಮಸ್ತ ನಾಡಿನ ಜನತೆ, ಅಂಬರೀಶ್ ಅವರ ಅಭಿಮಾನಿಗಳು, ಮಂಡ್ಯದ ಅಭಿಮಾನಿಗಳ ಪರವಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಬಿಗಿ ಭದ್ರತೆಗೆ ಕೊಟ್ಟು ನಮಗೆ ಸಹಕಾರ ನೀಡಿದ ಎಲ್ಲ ಅಧಿಕಾರಿ, ಪೊಲೀಸ್ ಇಲಾಖೆಗೆ ಹಾಗೂ ಅವರಿಗೆ ಸಾಥ್ ನೀಡಿದ ಚಿತ್ರರಂಗದ ಕುಟುಂಬದವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಮಾಧ್ಯಮದವರು ನೀವು ಅವರನ್ನು ರಾಜಕೀಯ ನಾಯಕನಾಗಿ ಹಾಗೂ ನಟನಾಗಿ ನೋಡಿದ್ದೀರಿ. ಅವರು ಸುಂದರವಾದ ಭಾಷೆಯಲ್ಲಿ ಮಾತನಾಡಿದರು, ನೀವು ಅವರನ್ನು ತಪ್ಪು ತಿಳಿಯದೇ ಅವರನ್ನು ಪ್ರೀತಿಸಿದ್ದೀರಾ ನಿಮಗೂ ನನ್ನ ಧನ್ಯವಾದಗಳು.
ಅವರು ಎಲ್ಲರಿಗೂ ಸ್ನೇಹಿತರಾಗಿದ್ದರು. ನಾನು ಅವರನ್ನು ಸ್ನೇಹಿತ ಎಂದು ಹೇಳಲೇ ಅಥವಾ ಗಂಡ ಎಂದು ಹೇಳಲೇ? ಎಲ್ಲದಕ್ಕಿಂತ ಹೆಚ್ಚಾಗಿ ಅವರು ನನಗೆ ತಂದೆಯಾಗಿ, ಅಣ್ಣನಾಗಿದ್ದರು. ನನ್ನ ಪ್ರಾಣಕ್ಕಿಂತ ಹೆಚ್ಚಾಗಿದ್ದರು. ಅವರು ಎಲ್ಲಿದ್ದರೂ ಅವರ ನಗುನಗುತ್ತಾ ನನಗೆ ಆಶೀರ್ವಾದ ಮಾಡುತ್ತಾರೆ. ನಾನು ಅವರನ್ನು ನನ್ನ ಅಂಬರೀಶ್ ಎಂದು ಕರೆಯುವ ಸಂದರ್ಭ ಇರಲಿಲ್ಲ. ಅವರು ಎಲ್ಲರ ಅಂಬರೀಶ್. ಅವರು ಎಲ್ಲರಿಗೂ ಬೇಕಾಗಿರುವುದು. ಅವರ ಅತ್ಯಂತ ಪ್ರಿಯರಾದ ಮಂಡ್ಯದ ಜನತೆಗೆ ದರ್ಶನ ಕೊಡಿಸಿದ್ದಕ್ಕೆ ಮಂಡ್ಯ ಜನತೆ ನಿಮ್ಮನ್ನು ಮರೆಯುವುದಿಲ್ಲ ಎಂದು ಹೇಳುತ್ತಾ ಮತ್ತೊಮ್ಮೆ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು ತಿಳಿಸಿದರು.
ಅಂಬರೀಶ್ ಅವರಿಗೆ ಮಾಜಿ ಪ್ರಧಾನಿ ದೇವೇಗೌಡ ಅಂದರೆ ಬಹಳ ಗೌರವ. ಅವರು ಪಕ್ಷಾತೀತವಾಗಿದ್ದರು. ಅದೇ ರೀತಿ ನೀವು ಕೂಡ 3 ದಿನ ಕಾಲ ಕೊಟ್ಟು ಎಲ್ಲವನ್ನು ನೋಡಿಕೊಂಡಿದ್ದಕ್ಕೆ ಅವರ ಅಭಿಮಾನಿ ಹಾಗೂ ಚಿತ್ರರಂಗದ ಪರವಾಗಿ ನಾನು ಧನ್ಯವಾದ ತಿಳಿಸುತ್ತೇನೆ. ಮಗ ಅಭಿಷೇಕ್ ಮೊದಲ ಸಿನಿಮಾ ನೋಡುವ ಆಸೆಯಿತ್ತು. ಅಭಿಷೇಕ್ ಮೇಲೂ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಮಂಡ್ಯ: ಶನಿವಾರದಂದು ನಿಧನ ಹೊಂದಿದ ಮಂಡ್ಯದ ಗಂಡು ಅಂಬರೀಶ್ ಅವರ ಪಾರ್ಥೀವ ಶರೀರವನ್ನ ಭಾನುವರ ಮಂಡ್ಯದ ವಿಶ್ವೇಶರಯ್ಯ ಕ್ರೀಡಾಂಗಣಕ್ಕೆ ತರಲಾಗಿತ್ತು. ಇಡೀ ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪಾರ್ಥಿವ ಶರೀರದ ದರ್ಶನ ಪಡೆದುಕೊಂಡರು. ಬರೋಬ್ಬರಿ 18 ಗಂಟೆಗಳ ಸಾರ್ವಜನಕ ದರ್ಶನದ ನಂತರ ಅಂಬಿಯ ಪಾರ್ಥಿವ ಶರೀರದ ಹಣೆಗೆ ಮಂಡ್ಯದ ಮಣ್ಣಿನ ತಿಲಕವಿಟ್ಟು ಬೆಂಗಳೂರಿಗೆ ಕೊಂಡೊಯ್ಯಲಾಯ್ತು. ಈ ವೇಳೆ ನೆರೆದಿದ್ದ ಬಹುತೇಕ ಅಭಿಮಾನಿಗಳ ಕಣ್ಣುಗಳು ಒದ್ದೆಯಾಗಿದ್ದವು.
ಮಂಡ್ಯ ಜನರ ಒತ್ತಾಸೆಯಂತೆ ಅಂಬರೀಶ್ ಅವರ ತವರಿಗೆ ಪಾರ್ಥಿವ ಶರೀರವನ್ನು ತರಲಾಗಿತ್ತು. ಭಾನುವಾರ ಸಂಜೆಯಿಂದ ಇಲ್ಲಿನ ಸರ್ ಎಂ.ವಿ. ಮೈದಾನದಲ್ಲಿ ಅಂಬರೀಶ್ ಪಾರ್ಥಿವ ಶರೀರವನ್ನ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಇಂದು ಬೆಳಗ್ಗೆ 10 ಗಂಟೆವೆರಗೂ ಸುಮಾರು 18 ಗಂಟೆಗಳ ಕಾಲ ಅಭಿಮಾನಿಗಳು ಅಂಬಿಯ ಅಂತಿಮ ದರ್ಶನ ಪಡೆದರು. ಮಂಡ್ಯ ಮಾತ್ರವಲ್ಲದೆ ಸುತ್ತಮುತ್ತಲ ಜಿಲ್ಲೆಗಳಿಂದಲೂ ಆಗಮಿಸಿದ್ದ 2 ಲಕ್ಷಕ್ಕೂ ಹೆಚ್ಚು ಜನರು ಪಾರ್ಥಿವ ಶರೀರದ ದರ್ಶನ ಮಾಡಿದರು.
ಇಡೀ ರಾತ್ರಿ ಅಭಿಮಾನಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದರಿಂದ ಬೆಳಗ್ಗೆ 8 ಗಂಟೆಗೆ ಬೆಂಗಳೂರಿಗೆ ಕೊಂಡೊಯ್ಯಬೇಕಾದ ಕರ್ಣನ ಪಾರ್ಥಿವ ಶರೀರವನ್ನು 10 ಗಂಟೆವರೆಗೆ ವಿಸ್ತರಣೆ ಮಾಡಲಾಯ್ತು. ಹೀಗಾಗಿ ಇಂದು ಬೆಳಗ್ಗೆಯೂ ಸಹ ಅಪಾರ ಪ್ರಮಾಣದ ಜನರು ಸ್ಟೇಡಿಯಂಗೆ ಆಗಮಿಸಿ ಮಂಡ್ಯ ಗಂಡಿನ ದರ್ಶನ ಪಡೆದುಕೊಂಡರು.
ಬೆಳಗ್ಗೆ 8.30ರ ಸುಮಾರಿಗೆ ಸ್ಟೇಡಿಯಂಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ, ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಹಕಾರ ನೀಡಿದ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವ ಬಗೆಗೂ ಚಿಂತನೆ ನಡೆಸಿರುವುದಾಗಿ ಹೇಳಿದರು.
ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯುವ ಮೊದಲು ಪುತ್ರ ಅಭಿಷೇಕ್ ಅವರು ಕ್ರೀಡಾಂಗಣದಲ್ಲಿ ಒಂದು ಸುತ್ತು ಹಾಕಿ ನೆರೆದಿದ್ದ ಜನರತ್ತ ಕೈ ಮುಗಿದು ವಂದನೆ ಸಲ್ಲಿಸಿದರು. ಬಳಿಕ ಪತ್ನಿ ಸುಮಲತಾ ಪತಿಯ ಹಣೆಗೆ ಮಂಡ್ಯದ ಮಣ್ಣಿನ ತಿಲಕ ಇಟ್ಟು ಎಲ್ಲರತ್ತ ಕೈ ಮುಗಿದು ಅಂಬಿ ಮತ್ತು ಜಿಲ್ಲೆಯ ಋಣ ಇಂದಿಗೆ ಭೌತಿಕವಾಗಿ ಮುಗಿಯಿತು ಎಂಬಂತೆ ಹೊರಟರು. ಈ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ಒದ್ದೆಮಾಡಿತು.
ಇದೆಲ್ಲದರ ಮಧ್ಯೆ ಅಂಬಿಯ ಅಂತಿಮ ದರ್ಶನ ಪಡೆದುಕೊಂಡು ಹೋದ ಮತ್ತೊಬ್ಬ ಅಭಿಮಾನಿ ಮದ್ದೂರಿನ ಸುರೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ 18 ಗಂಟೆಗಳ ನಂತರ ಜಿಲ್ಲೆಯ ಜನರು ಅಂಬರೀಶ್‍ಗೆ ಭಾವನಾತ್ಮಕವಾಗಿ ಬೀಳ್ಕೊಟ್ಟಿದ್ದಾರೆ.
ಬೆಂಗಳೂರು: ಕನ್ನಡದ ಕರ್ಣ ಅಂಬರೀಶ್ ಮೊದಲ ಬಾರಿಗೆ ಪತ್ನಿ ಸುಮಲತಾರಿಗೆ ಬರೆದ ಪ್ರೇಮ ಪತ್ರದಲ್ಲಿ ‘ನನ್ನನ್ನು ಕ್ಷಮಿಸು’ ಅಂತಾ ಬರೆದಿದ್ದರು ಎಂದು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಒಮ್ಮೆ ಸುಮಲತಾ ಬರ್ತ್ ಡೇ ಇತ್ತು. ನನಗೆ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಹೇಳಲಾಗಿತ್ತು. ಚಿತ್ರೀಕರಣದಲ್ಲಿ ನಾನು ಬ್ಯೂಸಿ ಆಗಿದ್ದರಿಂದ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಲಿಲ್ಲ. ಮರುದಿನ ಶುಭಾಶಯ ತಿಳಿಸಲು ಹೋದಾಗ ಆಕೆ ನನ್ನ ಜೊತೆ ಮಾತನಾಡಲಿಲ್ಲ. ರಾತ್ರಿ ಪಾರ್ಟಿಗೆ ಬಾ ಅಂತಾ ಕರೆದ್ರೆ, ಬೆಳಗ್ಗೆ ಏಕೆ ಬಂದೆ ಎಂದು ಕೋಪಗೊಂಡು ಸುಮಲತಾ ನನ್ನ ಜೊತೆ ಮಾತನಾಡಲೇ ಇಲ್ಲ. ಆವಾಗ ಒಂದು ಪತ್ರದಲ್ಲಿ ಕ್ಷಮಿಸು, ಸಾರಿ, ಕ್ಷಮಿಸಂಡಿ ಎಂದು ಎಲ್ಲ ಭಾಷೆಯಲ್ಲಿ ಬರೆದು ಕೊಟ್ಟೆ. ಅದೇ ನನ್ನ ಮೊದಲ ಲವ್ ಲೆಟರ್ ಎಂದು ಹೇಳಿ ನಕ್ಕರು.
ಅಂದು ಸುಮಲತಾ ಮುಂಬೈನಲ್ಲಿದ್ದರು. ನನಗೆ ಬರ್ತ್ ಡೇ ಗಿಫ್ಟ್ ಏನು ಕೊಡಲೇ ಇಲ್ಲ ಅಂತಾ ಹೇಳಿದಾಗ, ನನಗೆ ಗೊತ್ತಿರುವ ಚಿನ್ನದ ಮಳಿಗೆ ಹೋಗಿ ಖರೀದಿ ಮಾಡು ಬಿಲ್ ಕೊಡುತ್ತೇನೆ ಅಂತಾ ಹೇಳಿದೆ. ಒಂದು ಚಿನ್ನದ ಸರ ಅಥವಾ ಬಳೆನೋ ಖರೀದಿ ಮಾಡಬಹುದು ಅಂತಾ ಗೆಸ್ ಮಾಡಿದ್ದೆ. ಆದ್ರೆ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗ ಐದೂವರೆ ಲಕ್ಷದ ವಜ್ರಾಭರಣ ತೋರಿಸಿದ್ದಾನೆ. ಅಷ್ಟು ಬೆಲೆಯ ನೆಕ್ಲೇಸ್ ಹೇಗೆ ಖರೀದಿ ಮಾಡೋದು ಅಂತಾ ಎರಡೂವರೆ ಲಕ್ಷದ ಬೆಲೆಯದ್ದು ಖರೀದಿ ಮಾಡಿದ್ರು. ಇದನ್ನೂ ಓದಿ: ವ್ಯಕ್ತಿ ಸತ್ತಾಗ ನೋಡದನ್ನ, ಬದುಕಿದ್ದಾಗ ನೋಡಿದವ ನಾನು ಪುಣ್ಯವಂತ
ಅಂದಿನ ಕಾಲದಲ್ಲಿ ಎರಡೂವರೆ ಲಕ್ಷ ಅಂದ್ರೆ ದೊಡ್ಡ ಮೊತ್ತ. ಅಂಗಡಿ ಮಾಲೀಕ ನನಗೆ ಫೋನ್ ಮಾಡಿ ಯಾರು ಈ ಹುಡುಗಿ? ಇಷ್ಟು ಬೆಲೆಯ ನೆಕ್ಲೇಸ್ ಯಾಕೆ ಕೊಡಸ್ತೀಯಾ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ. ಕೂಡಲೇ ಫೋನ್ ಇಡು ಎಂದು ಹೇಳಿ ಕೊನೆಗೆ ಅದೇ ನೆಕ್ಲೇಸ್ ಖರೀದಿ ಆಯ್ತು. ಎರಡೂವರೆ ಲಕ್ಷದ ಮೌಲ್ಯದ ನೆಕ್ಲೇಸ್ ಸುಮಲತಾ ಮನೆಗೆ ಹೋಗುತ್ತೆ ಅಂತಾ ಆಕೆಯನ್ನು ಮದುವೆ ಆಗಿಬಿಟ್ಟೆ ಎಂದು ಹೇಳಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಇದನ್ನೂ ಓದಿ: ನಾನು 500 ರೂ.ಗೆ ಖಳನಾಯಕನಾಗಿ ಬಂದವನು-ಮಗನಿಗೆ ಇದನ್ನೇ ಮಾಡ್ಬೇಕು ಎಂದು ಹೇಳಲ್ಲ
– ವ್ಯಕ್ತಿ ಸತ್ತಾಗ ನೋಡದನ್ನ, ಬದುಕಿದ್ದಾಗ ನೋಡಿದವ ನಾನು ಪುಣ್ಯವಂತ
ಬೆಂಗಳೂರು: “ನಾನು ಎಂದು ಪತ್ನಿ ಸುಮಾಗೆ ಕಂಡಿಷನ್ ಹಾಕಲ್ಲ. ಹಾಕೋದು ಇಲ್ಲ” ಹೀಗಂತ ಹೇಳಿದ್ದು ರೆಬೆಲ್ ಸ್ಟಾರ್ ಅಂಬರೀಶ್.
ಈ ಹಿಂದೆ ಪಬ್ಲಿಕ್ ಟಿವಿಗೆ ಆಗಮಿಸಿದ್ದ ವೇಳೆ ಅಂಬಿಗೆ, ನೀವು ಪತ್ನಿ ಸುಮಲತಾರಿಗೆ ಕಂಡೀಷನ್ ಹಾಕ್ತೀರಾ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನಾನೆಂದು ಕಂಡೀಷನ್ ಹಾಕಿಲ್ಲ, ಹಾಕೋದಿಲ್ಲ. ನೋ ಚಾನ್ಸ್. ಆಕೆಯೊಂದಿಗೆ 25 ವರ್ಷ ಸಂಸಾರ ಮಾಡಿದ್ದೇನೆ. ನಾನು ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕುಳಿತಿದ್ದೇನೆ. ಆಕೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ಬ್ಯೂಸಿ ಆಗಿದ್ದಾಳೆ. ಒಬ್ಬರ ಮೇಲೆ ನಂಬಿಕೆ ಇದ್ದರೆ ಅವರಿಗೆ ಗಂಡ-ಹೆಂಡ್ತಿ ಅಂತಾರೆ ಎಂದು ಉತ್ತರಿಸಿದ್ದರು.
ನಮ್ಮ ಕಾಲದಲ್ಲಿ ಪ್ರೇಮಿಗಳ ದಿನ ಅಂತಾ ಇರಲಿಲ್ಲ. ಇವಾಗಿನವರು ವಾಲೆಂಟೈನ್ ಡೇ ಅಂತಾ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ನಾವು ಒಂದು ದಿನ ಪ್ರೇಮಿಗಳ ದಿನ ಅಂತಾ ಆಚರಣೆ ಮಾಡಿಲ್ಲ. ಪ್ರತಿದಿನ ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಒಂದು ದಿನ ಲವ್ ಮಾಡಿದ್ರೆ ಗಂಡ-ಹೆಂಡತಿ ಆಗಲ್ಲ, ಪ್ರತಿದಿನ ಅವರಲ್ಲಿ ಪ್ರೀತಿ ಇರಬೇಕು. ಆದರೆ ಪ್ರೇಮಿಗಳ ದಿನದಂದು ಹೂಗಳು ತುಂಬಾ ಖರ್ಚು ಆಗುತ್ತೆ ಎಂಬುವುದು ನನಗೆ ಗೊತ್ತಿದೆ ಎಂದು ಹೇಳಿ ನಗೆ ಚಟಾಕಿ ಹಾರಿಸಿದ್ದರು.
ಮದುವೆಯ 25ನೇ ವಾರ್ಷಿಕೋತ್ಸವದಲ್ಲಿ ಯಾರೋ ಒಂದು ಹೂ ತಂದುಕೊಟ್ಟಿದ್ದಕ್ಕೆ, ಕೆಳಗೆ ಕುಳಿತು ಕೊಟ್ಟಿದ್ದೇನೆ. ಇದೇ ಬಣ್ಣ ಅಂತೇನಿಲ್ಲ. ನಮ್ಮ ಜೀವನದ ಪ್ರತಿ ದಿನವೂ ನಾವು ಚೆನ್ನಾಗಿಯೇ ಇದ್ದೇವೆ. ಸ್ವೀಟ್ ಮೆಮೊರಿ ಅಂತಾ ಸಿಕ್ಕಾಪಟ್ಟೆ ಇವೆ ಅಂತ ಹೇಳಿದ್ದಾರೆ.
ವ್ಯಕ್ತಿ ಸಾವನ್ನಪ್ಪಿದಾಗ ಆತನ ಅಂತ್ಯಸಂಸ್ಕಾರ ಎಷ್ಟು ಜನರು ಸೇರ್ತಾರೆ ಎಂಬ ಲೆಕ್ಕಾಚಾರದಲ್ಲಿ ವ್ಯಕ್ತಿತ್ವವನ್ನು ಲೆಕ್ಕ ಹಾಕಲಾಗುತ್ತದೆ. ಬದುಕಿರುವಾಗ ವ್ಯಕ್ತಿಗೆ ತಾನು ಮಾಡಿದ ಆಸ್ತಿ, ಹಣ, ಕಟ್ಟಡ ಕಾಣುತ್ತೆ, ಪ್ರೀತಿ ಕಾಣಲ್ಲ ಅಂತಾ ಹೇಳುವುದುಂಟು. ನನ್ನ ಜೀವನ ತುಂಬಾ ವಿಭಿನ್ನವಾಗಿದ್ದು, ಸಿಂಗಾಪುರದಿಂದ ಚಿಕಿತ್ಸೆ ಪಡೆದು ಬಂದಾಗ ನಾನೇ ಮಂಡ್ಯಕ್ಕೆ ಬರ್ತೀನಿ ಅಂತಾ ಮೊದಲೇ ಹೇಳಿದೆ. ನನ್ನ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನನ್ನ ಹಿಂದೆ ಸುಮಲತಾ ನಿಂತಿದ್ದಳು. ಇನ್ನು ಕೆಂಗೇರಿಯಿಂದ ಮಂಡ್ಯ ಹೋಗುವ ಮಾರ್ಗದ ಉದ್ದಕ್ಕೂ ಅಭಿಮಾನಿಗಳು ನನ್ನನ್ನು ನೋಡಲು ನಿಂತಿದ್ದರು. ಅಂದು ಜೀವನದಲ್ಲಿ ನಾನು ಸಂಪಾದಿಸಿದ್ದು ಏನು ಅಂತಾ ಗೊತ್ತಾಯಿತು. ನನ್ನ ಆರೋಗ್ಯ ಸುಧಾರಿಸಲಿ ಎಂದು ಇಡೀ ರಾಜ್ಯಾದ್ಯಂತ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಪ್ರಾರ್ಥನೆ ಮಾಡಿದ್ದಾರೆ. ವ್ಯಕ್ತಿ ಸತ್ತ ಮೇಲೆ ನೋಡುವುದನ್ನು ನಾನು ಬದುಕಿದಾಗ ನೋಡಿದ್ದೇನೆ ಎಂದು ಹೇಳಿ ಒಂದು ಕ್ಷಣ ಅಂಬರೀಶ್ ಭಾವುಕರಾದರು.
ಬೆಂಗಳೂರು: ಶಶಾಂಕ್ ಸಿನಿಮಾಸ್ ಅಡಿಯಲ್ಲಿ ಶಶಾಂಕ್ ಅವರೇ ನಿರ್ಮಾಣ ಮಾಡಿ ನಿರ್ದೇಶನವನ್ನೂ ಮಾಡಿರೋ ಚಿತ್ರ ತಾಯಿಗೆ ತಕ್ಕ ಮಗ. ಈಗಾಗಲೇ ಮಾಧುರ್ಯದ ಹಾಡುಗಳು ಮತ್ತು ಎನರ್ಜೆಟಿಕ್ ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ.
‘ತಾಯಿಗೆ ತಕ್ಕ ಮಗ’ ಶಶಾಂಕ್ ಅವರ ಸ್ವಂತ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿರೋ ಮೊದಲ ಚಿತ್ರ. ಆದ್ದರಿಂದಲೇ ಆರಂಭವೇ ಅದ್ಧೂರಿಯಾಗಿರಬೇಕೆಂಬ ಮಹದಾಸೆಯಿಂದ ಪ್ರತಿಯೊಂದರಲ್ಲಿಯೂ ನಿಗಾ ವಹಿಸಿಯೇ ಈ ಚಿತ್ರವನ್ನು ರೂಪಿಸಿದ್ದಾರೆ. ಶಶಾಂಕ್ ಈ ಕಥೆಯನ್ನೂ ಕೂಡಾ ಅದಕ್ಕೆ ತಕ್ಕುದಾಗಿಯೇ ಹೊಸೆದಿದ್ದಾರಂತೆ. ಆದ್ದರಿಂದಲೇ ಬಿಡುಗಡೆಯ ಹೊಸ್ತಿಲಲ್ಲಿಯೇ ಗೆಲುವಿನ ಸೂಚನೆ ಮಿರುಗಲಾರಂಭಿಸಿದೆ.
ಇದು ಶಶಾಂಕ್ ಮತ್ತು ಅಜೇಯ್ ರಾವ್ ಒಟ್ಟಾಗಿ ರೂಪಿಸಿದ ಮೂರನೇ ಚಿತ್ರ. ಅಜೇಯ್ ರಾವ್ ಅವರ ವೃತ್ತಿ ಜೀವನದಲ್ಲಿದು ಇಪ್ಪತೈದನೇ ಚಿತ್ರ. ಬಹಳಷ್ಟು ಕಷ್ಟಪಟ್ಟು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅಜೇಯ್ ರಾವ್ ಈ ಹಾದಿಯಲ್ಲಿ ಹದಿನೈದು ವರ್ಷ ಸಾಗಿ ಬಂದಿದ್ದಾರೆ. ಅದನ್ನು ತಾಯಿಗೆ ತಕ್ಕ ಮಗ ಚಿತ್ರ ಸಾರ್ಥಕಗೊಳಿಸಲಿದೆ ಎಂಬ ಭರವಸೆಯನ್ನೂ ಹೊಂದಿದ್ದಾರೆ.
ಕಳೆದ ಹದಿನೈದು ವರ್ಷದ ಅಜೇಯ್ ರಾವ್ ಬಣ್ಣದ ಬದುಕನ್ನೊಮ್ಮೆ ಅವಲೋಕಿಸಿದರೆ ಅವರು ಈವರೆಗೂ ಲವರ್ ಬಾಯ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿದ್ದಾರೆ. ಆದರೆ ಅವರ ಪ್ರಧಾನ ಆಸಕ್ತಿ ಆಕ್ಷನ್‍ನತ್ತಲೇ ಇತ್ತೆಂಬುದು ಅಚ್ಚರಿಯಾದರೂ ಸತ್ಯ. ಅಷ್ಟಕ್ಕೂ ಅಜೇಯ್ ರಾವ್ ಶಾಲಾ ದಿನಗಳಿಂದಲೇ ಕರಾಟೆ ಚಾಂಪಿಯನ್. ಈ ಚಿತ್ರದಲ್ಲಿ ಕರಾಟೆ ಪಟ್ಟುಗಳನ್ನೂ ಕೂಡಾ ಅಜೇಯ್ ಪ್ರದರ್ಶಿಸಿದ್ದಾರಂತೆ!
ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಗಿರಿ ಮಹೇಶ್ ಸಂಕಲನ ಹಾಗೂ ಕೆ.ರವಿವರ್ಮ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣ ಅಜೇಯ್ ರಾವ್, ಸುಮಲತಾ ಅಂಬರೀಶ್, ಆಶಿಕಾ ರಂಗನಾಥ್, ಅಚ್ಯುತಕುಮಾರ್, ಸಾಧುಕೋಕಿಲ, ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ ಮುಂತಾದವರಿದ್ದಾರೆ.
ಬೆಂಗಳೂರು: ತಾಯಿಗೆ ತಕ್ಕ ಮಗ ಚಿತ್ರ ಬಿಡುಗಡೆಗೆ ವಾರವಷ್ಟೇ ಬಾಕಿ ಉಳಿದಿದೆ. ಇದೀಗ ಪ್ರೇಕ್ಷಕರಿಗಾಗಿಯೇ ಚಿತ್ರತಂಡ ವಿನೂತನವಾದೊಂದು ಸ್ಪರ್ಧೆಯನ್ನು ಏರ್ಪಡಿಸಿದೆ. ಇದಕ್ಕೆ ತಾಯಿಗೆ ತಕ್ಕ ಮಗ ಸೆಲ್ಫಿ ಕಂಟೆಸ್ಟ್ ಎಂದೂ ಹೆಸರಿಟ್ಟಿದೆ.
ಇದು ಅಮ್ಮ ಮಗನ ಪ್ರೀತಿಗೆ ಪೂರಕವಾದ ಸ್ಪರ್ಧೆ. ಯಾರೇ ಯಾದರೂ ತಮ್ಮ ಅಮ್ಮನ ಜೊತೆ ಸೆಲ್ಫಿ ತೆಗೆದುಕೊಂಡು 7338259619ಗೆ ವಾಟ್ಸಪ್ ಮಾಡಬಹುದು. ನಿಮ್ಮ ಫೋಟೋ ಮೊದಲ ಬಹುಮಾನಕ್ಕೆ ಪಾತ್ರವಾದರೆ ಐವತ್ತು ಸಾವಿರ ರೂಪಾಯಿಗಳನ್ನು ಗೆಲ್ಲ ಬಹುದು!
ಮೊದಲನೆ ಬಹುಮಾನ 50 ಸಾವಿರ, ಎರಡನೆಯ ಬಹುಮಾನ 25 ಸಾವಿರ, ಮೂರನೇ ಬಹುಮಾನ 15 ಸಾವಿರ ಮತ್ತು ನಾಲಕ್ಕನೇ ಬಹುಮಾನ 10 ಸಾವಿರವೆಂದು ಚಿತ್ರ ತಂಡ ನಿಗದಿ ಮಾಡಿದೆ. ಅಂದಹಾಗೆ ಈ ಸ್ಪರ್ಧೆಗೆ ಫೋಟೋ ಕಳಿಸಲು ನವೆಂಬರ್ 2 ಕಡೆಯ ದಿನಾಂಕ. ನವೆಂಬರ್ 3ರಂದು ಲಕ್ಕಿ ಡ್ರಾ ನಡೆಯಲಿದೆ. ಆ ಬಳಿಕ ಫೇಸ್ ಬುಕ್ ಲೈವ್ ಮೂಲಕ ವಿಜೇತರನ್ನು ಆರಿಸಲಾಗುತ್ತದೆ. ಚಿತ್ರತಂಡಕ್ಕೆ ಸಂಬಂಧಪಟ್ಟವರಿಗೆ ಯಾವ ಕಾರಣಕ್ಕೂ ಈ ಸ್ಪರ್ಧೆಯಲ್ಲಿ ಪ್ರವೇಶವಿಲ್ಲ ಎಂಬ ಸೂಚನೆಯನ್ನೂ ನೀಡಲಾಗಿದೆ.
ಸೆಲ್ಫಿ ಕಾಂಟೆಸ್ಟ್! ಅಮ್ಮನಿಗೆ ಕೊಡಿ, 50,000/- ಗಿಫ್ಟ್! ನಿಮ್ಮ ಅಮ್ಮನ ಜೊತೆ ಸೆಲ್ಫಿ ತೆಗೆದು 7338259619 ಗೆ ವಾಟ್ಸಾಪ್ ಮಾಡಿ, 50,000/- ಗೆಲ್ಲಿ! ಮೊದಲನೆಯ ಬಹುಮಾನ: 50,000/- ಎರಡನೆಯ ಬಹುಮಾನ: 25,000/- ಮೂರನೇ ಬಹುಮಾನ: 15,000/- ನಾಲ್ಕನೇ ಬಹುಮಾನ: 10,000/- ಪ್ರವೇಶಕ್ಕೆ ಕೊನೆಯ ದಿನ: ನವೆಂಬರ್ 2. @AjaiRao@sumalathaApic.twitter.com/NWu3EafB2Y
ಅಜೇಯ್ ರಾವ್ ಅಂದ್ರೆ ಲವರ್ ಬಾಯ್ ಲುಕ್ಕೇ ಕಣ್ಮುಂದೆ ಬರುತ್ತದಲ್ಲಾ? ಅದನ್ನು ಸಂಪೂರ್ಣವಾಗಿ ಅದಲು ಬದಲು ಮಾಡೋ ಸಕಾರಾತ್ಮಕ ಸೂಚನೆಗಳಿರೋ ಚಿತ್ರ ತಾಯಿಗೆ ತಕ್ಕ ಮಗ. ಶಶಾಂಕ್ ತಮ್ಮದೇ ಬ್ಯಾನರಿನಲ್ಲಿ ನಿರ್ಮಾಣ ಮಾಡಿ, ನಿರ್ದೇಶನವನ್ನೂ ಮಾಡಿರುವ ಈ ಚಿತ್ರ ಅಜೇಯ್ ರಾವ್ ಅವರ 25ನೇ ಚಿತ್ರವೂ ಹೌದು. ಈ ಚಿತ್ರವೀಗ ಬಿಡುಗಡೆಯಾಗೋ ಮುಹೂರ್ತ ನಿಗದಿಯಾಗಿದೆ.
ಟ್ರೈಲರ್ ಮತ್ತು ಹಾಡುಗಳ ಮೂಲಕವೇ ಕುತೂಹಲದ ಜ್ವರ ಏರಿಸಿರುವ ಈ ಚಿತ್ರ ನವೆಂಬರ್ 16ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ.
ಸುಮಲತಾ ಅಂಬರೀಶ್ ಅವರು ಬಹು ಕಾಲದ ನಂತರ ಈ ಚಿತ್ರದ ಮೂಲಕ ಅಜೇಯ್ ರಾವ್ ಅಮ್ಮನಾಗಿ, ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಅಜೇಯ್ ರಾವ್ ಅಭಿನಯಿಸಿದ್ದ ಎಕ್ಸ್‍ಕ್ಯೂಸ್ ಮಿ ಚಿತ್ರದಲ್ಲಿ ಸುಮಲತಾ ಅಮ್ಮನಾಗಿ ನಟಿಸಿದ್ದರು. ಆ ಪಾತ್ರ ಮನ ಮಿಡಿಯುವಂತಿತ್ತು. ಈ ಚಿತ್ರದಲ್ಲಿಯೂ ಕೂಡಾ ಈ ಅಮ್ಮ ಮಗನ ಜೋಡಿ ಸಖತ್ತಾಗಿಯೇ ಮೋಡಿ ಮಾಡುವ ಎಲ್ಲ ಲಕ್ಷಣಗಳೂ ಇವೆ.
ಈಗಾಗಲೇ ಈ ಚಿತ್ರದ ಹಾಡುಗಳು ಹಿಟ್ ಆಗಿವೆ. ಟ್ರೈಲರ್ ಸೂಪರಾಗಿದೆ. ಇದರಲ್ಲಿ ಅಜೇಯ್ ರಾವ್ ಅವರ ಮಾಸ್ ಲುಕ್ಕಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ ಈ ಚಿತ್ರ ತೆರೆ ಕಾಣೋದ್ಯಾವಾಇಉಗ ಎಂಬ ಪ್ರಶ್ನೆ ಮಾತ್ರ ಎಲ್ಲರನ್ನೂ ಕೊರೆಯುತ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.