Tag: ಸುಮಲತಾ ಅಂಬರೀಶ್

  • ಅಂಬರೀಶ್ ಹೆಸರಲ್ಲಿರೋ ಅರ್ಧ ಎಕರೆ ಜಮೀನನ್ನು ಗುರು ಕುಟುಂಬಕ್ಕೆ ಕೊಡುತ್ತೇನೆ: ಸುಮಲತಾ

    ಅಂಬರೀಶ್ ಹೆಸರಲ್ಲಿರೋ ಅರ್ಧ ಎಕರೆ ಜಮೀನನ್ನು ಗುರು ಕುಟುಂಬಕ್ಕೆ ಕೊಡುತ್ತೇನೆ: ಸುಮಲತಾ

    ಬೆಂಗಳೂರು: ಜಮ್ಮು – ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಮಂಡ್ಯದ ವೀರ ಯೋಧ ಗುರು ಅವರ ಕುಟುಂಬಕ್ಕೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಹೆಸರಿನಲ್ಲಿರುವ ಅರ್ಧ ಎಕರೆ ಜಮೀನನ್ನು ಕೊಡುತ್ತೇನೆ ಎಂದು ಹಿರಿಯ ನಟಿ ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ.

    ವೀರ ಯೋಧರು ಎಂದರೆ ನಮ್ಮನ್ನು ಸುರಕ್ಷಿತವಾಗಿ ಇರಿಸುವುದಕ್ಕೆ ಅವರು ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ. ಅಂತಹವರು ನಮ್ಮ ಊರಿನಲ್ಲಿ ನಮ್ಮ ಮಂಡ್ಯದ ಅದು ಅಂಬರೀಶ್ ಅವರ ಊರಾದ ದೊಡ್ಡ ಅರಿಸಿಕೆರೆನವರು ವೀರಮರಣ ಹೊಂದಿದ್ದಾರೆ ಎಂದರೆ ಅದು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರು ತಂದೆ, ತಾಯಿ ಮಾತನಾಡುವುದನ್ನು ನೋಡಿ ನನಗೆ ತುಂಬಾ ನೋವಾಯಿತು. ಆ ನೋವಿನ ಬಗ್ಗೆ ಏನೂ ಹೇಳಬೇಕು ಎಂದು ಗೊತ್ತಾಗಲ್ಲ. ಅವರು ಮಾಡಿದ ತ್ಯಾಗ ಹಾಗೂ ಸೇವೆಗೆ ನಾವು ಏನೂ ಕೊಡಲು ಸಾಧ್ಯವಿಲ್ಲ. ಶೇ.100 ಇದು ಶೇ.1 ಕೂಡ ಅಲ್ಲ ಎಂದರು.

    ಇದು ಏನೂ ಇಲ್ಲ. ನಮ್ಮ ತೃಪ್ತಿಗೆ ಜಮೀನು ನೀಡುತ್ತಿದ್ದೇವೆ. ಈ ಸಂದರ್ಭದಲ್ಲಿ ಅಂಬರೀಶ್ ಅವರು ಇದ್ದರೆ ಅವರು ಕೂಡ ಈ ಕೆಲಸ ಮಾಡುತ್ತಿದ್ದರು. ಇದರಿಂದ ಅಂಬಿ ಅವರ ಆತ್ಮಕ್ಕೆ ಶಾಂತಿ ಸಿಗಬಹುದು ಎಂದುಕೊಂಡಿದ್ದೇನೆ. ನಾನೂ ಹಾಗೂ ಅಭಿ ಈಗ ಮಲೇಶಿಯಾದಲ್ಲಿದ್ದೇವೆ. ಭಾರತಕ್ಕೆ ಬಂದ ಮೇಲೆ ಇಬ್ಬರು ಯೋಧನ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಲು ಪ್ರಯತ್ನಿಸುತ್ತೇವೆ.

    ಅವರಿಗೆ ಧೈರ್ಯ ಹೇಳುವ ಮೊದಲು ನಾವು ಧೈರ್ಯ ತೆಗೆದುಕೊಳ್ಳಬೇಕು. ಏಕೆಂದರೆ ಈ ಕಷ್ಟ ಏನು ಎಂದು ಅನುಭವಿಸಿದವರಿಗೆ ಗೊತ್ತು ಎಂದು ಸುಮಲತಾ ಅವರು ಹೇಳಿದರು.

    ರಾಜಕೀಯ ಪಕ್ಕದಲ್ಲಿ ಇಟ್ಟು ದೇಶಕ್ಕಾಗಿ ಏನಾದರು ಮಾಡುವ ಸಮಯ ಇದು. ಆ ಕುಟುಂಬಕ್ಕೆ ಧೈರ್ಯ ಹೇಳುವ ಮೊದಲು ನಾವು ಧೈರ್ಯ ತುಂಬಿಕೊಳ್ಳಬೇಕು. ಅವರ ನೋವನ್ನು ನಾವು ತುಂಬಲು ಆಗುವುದಿಲ್ಲ. ಆದರೆ ಅವರ ನೋವನ್ನು ನಾವು ಹಂಚಿಕೊಳ್ಳಬಹುದು. ನಮ್ಮ ಕೈಯಲ್ಲಿ ಆದಷ್ಟು ಅವರಿಗೆ ನಾವೆಲ್ಲರೂ ಸಹಾಯ ಮಾಡಬೇಕು ಎಂಬುದು ನನ್ನ ಉದ್ದೇಶ. ಅವರು ಸ್ಮಾರಕ ಕಟ್ಟುತ್ತಾರೆ ಎಂದರೆ ಅಂಬರೀಶ್ ಹಾಗೂ ಅಭಿ ಪರವಾಗಿ ಅದೇ ಊರಿನಲ್ಲಿರುವ ಅದರಲ್ಲಿ ಅರ್ಧ ಎಕ್ರೆ ಜಮೀನನ್ನು ನೀಡಲು ನಿರ್ಧರಿಸಿದ್ದೇನೆ ಎಂದರು.

    https://www.youtube.com/watch?v=8VMxyfP3zjM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನ ಪ್ರೀತಿಯ ಅಂಬಿ ನನ್ನನ್ನು, ಅಭಿಯನ್ನೂ ಯಾವಾಗ್ಲೂ ರಕ್ಷಿಸುತ್ತಾರೆ- ಸುಮಲತಾ ಅಂಬರೀಶ್

    ನನ್ನ ಪ್ರೀತಿಯ ಅಂಬಿ ನನ್ನನ್ನು, ಅಭಿಯನ್ನೂ ಯಾವಾಗ್ಲೂ ರಕ್ಷಿಸುತ್ತಾರೆ- ಸುಮಲತಾ ಅಂಬರೀಶ್

    ಬೆಂಗಳೂರು: ನನ್ನ ಪ್ರೀತಿ(ಅಂಬಿ) ಅಭಿ ಹಾಗೂ ನನ್ನನ್ನು ಯಾವಾಗ್ಲೂ ರಕ್ಷಿಸುತ್ತದೆ ಎಂದು ನಟಿ ಸುಮಲತಾ ಅಂಬರೀಶ್ ಅವರು ವ್ಯಾಲೆಂಟೈನ್ ದಿನ ತಮ್ಮ ಪತಿ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆಪಿಸಿಕೊಂಡಿದ್ದಾರೆ.

    ಸುಮಲತಾ ಅವರು ತಮ್ಮ ಟ್ವಿಟ್ಟರಿನಲ್ಲಿ ಅಂಬರೀಶ್ ಅವರ ಜೊತೆಯಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    “ಪ್ರೀತಿ ಎಂದಿಗೂ ಜೀವಂತವಾಗಿರುತ್ತದೆ. ಅದು ಅಗತ್ಯ ಕೂಡ. ನನ್ನ ಪ್ರೀತಿ(ಅಂಬಿ) ನನ್ನನ್ನು ಹಾಗೂ ನನ್ನ ಅಭಿಯನ್ನು ಯಾವಾಗಲೂ ರಕ್ಷಣೆ ಮಾಡುತ್ತದೆ. ನನ್ನ ಪುತ್ರ ಅಭಿಷೇಕ್ ಅಂಬರೀಶ್‍ಗೆ ಆಶೀರ್ವದಿಸಿ. ಇಂದು ಆತನ ‘ಅಮರ್’ ಚಿತ್ರದ ಟೀಸರ್ ಬಿಡುಗಡೆ ಆಗುತ್ತಿದೆ. ಪ್ರೀತಿ ಏನೆಂದು ತಿಳಿದ ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಕಳೆದ ಡಿಸೆಂಬರ್ 8ರಂದು ಅಂಬರೀಶ್ ಹಾಗೂ ಸುಮಲತಾ ಅವರ 27ನೇ ಮದುವೆ ವಾರ್ಷಿಕೋತ್ಸವವಿತ್ತು. 1991ರ ಡಿಸೆಂಬರ್ 8ರಂದು ಅಂಬಿ ಜೊತೆ ಸುಮಲತಾ ಸಪ್ತಪದಿ ತುಳಿದಿದ್ದರು. 25ನೇ ಮದುವೆ ವಾರ್ಷಿಕೋತ್ಸವವನ್ನು ಮಲೇಶಿಯಾದಲ್ಲಿ ಅದ್ಧೂರಿಯಾಗಿ ಅಂಬಿ ಸುಮಲತಾ ಆಚರಿಸಿಕೊಂಡಿದ್ದರು. ದರ್ಶನ್, ಪುನೀತ್ ಸೇರಿದಂತೆ ಸ್ಯಾಂಡಲ್‍ವುಡ್ ದಂಡೆ ಅಂದು ಪಾಲ್ಗೊಂಡಿತ್ತು.

    ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು ನ.24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದ ಕನಗನಮರಡಿಯಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಬೇಸರಗೊಂಡಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆದಿಚುಂಚನಗಿರಿಯಲ್ಲಿ ಪ್ರತಿ ಮಾತಿಗೂ ಅಪ್ಪನನ್ನು ನೆನೆದ ಅಭಿಷೇಕ್

    ಆದಿಚುಂಚನಗಿರಿಯಲ್ಲಿ ಪ್ರತಿ ಮಾತಿಗೂ ಅಪ್ಪನನ್ನು ನೆನೆದ ಅಭಿಷೇಕ್

    ಮಂಡ್ಯ: ಆದಿಚುಂಚನಗಿರಿಯಲ್ಲಿ ಪ್ರತಿ ಮಾತಿಗೂ ಅಭಿಷೇಕ್ ತನ್ನ ತಂದೆ, ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಭಾವುಕರಾಗಿದ್ದಾರೆ.

    ಫೆಬ್ರವರಿ 14 ಒಳ್ಳೆಯ ದಿನ. ಆ ದಿನ ಚಿತ್ರದ ಆಡಿಯೋ ಅಥವಾ ಟೀಸರ್ ಏನಾದರೂ ರಿಲೀಸ್ ಮಾಡಬೇಕು ಎಂದು ಅಪ್ಪನಿಗೆ ಆಸೆ ಇತ್ತು. ಅವರ ನಿಧನದ ನಂತರ 2 ತಿಂಗಳು ಶೂಟಿಂಗ್‍ಗೆ ನಾನು ಹೋಗಲಿಲ್ಲ. ಇಂದು ರಾತ್ರಿಯಿಂದ ಮತ್ತೆ ಒಂದು ವಾರ ಶೂಟಿಂಗ್ ಇದೆ. ನಾನು ಶೂಟಿಂಗ್‍ಗಾಗಿ ಮಲೇಶಿಯಾಗೆ ಹೋಗುತ್ತಿದ್ದೇನೆ. ಟೀಸರ್ ರಿಲೀಸ್ ಆಗುವ ದಿನ ನಾನು ಭಾರತದಲ್ಲಿ ಇರುವುದಿಲ್ಲ. ನನ್ನ ಚಿತ್ರ ಬಿಡುಗಡೆ ಯಾವಾಗ ಎಂದು ಎಲ್ಲರು ಕೇಳುತ್ತಿದ್ದಾರೆ. ಹಾಗಾಗಿ ಟೀಸರ್ ರಿಲೀಸ್ ಮಾಡುತ್ತಿದ್ದೇವೆ ಎಂದು ಅಭಿಷೇಕ್ ಹೇಳಿದ್ದಾರೆ.

    ಅಂಬರೀಶ್ ನನ್ನ ಸಿನಿಮಾದಲ್ಲಿ ಇರುತ್ತಾರೆ. ಇನ್ನು ಮುಂದೆ ನಾನು ಯಾವ ಸಿನಿಮಾ ಮಾಡಿದರೂ ಅದರಲ್ಲಿ ಅಪ್ಪಾಜಿ ಇರುತ್ತಾರೆ. ಈ ಸಿನಿಮಾವನ್ನು ನಾನು ಅಪ್ಪನಿಗಾಗಿ ಮಾಡಿದೆ. ಅವರೇ ಈ ಸಿನಿಮಾವನ್ನು ಸೆಲೆಕ್ಟ್ ಮಾಡಿದ್ದಾರೆ. ಅವರ ಸಿನಿಮಾದಲ್ಲೇ ಅವರು ಇಷ್ಟು ಇನ್ವಾಲ್ ಆಗಿರಲಿಲ್ಲ. ಅಂಬರೀಶ್ ಅಷ್ಟು ನನ್ನ ಸಿನಿಮಾಗೆ ಇನ್ವಾಲ್ ಆಗಿದ್ದಾರೆ. ಇದು ಅವರಿಂದ ನನಗೆ ಗಿಫ್ಟ್ ಎಂದರು.

    ಸುಮಲತಾ ಅವರು ರಾಜಕೀಯದಲ್ಲಿ ಸ್ಪರ್ಧೆ ಮಾಡುವ ವಿಚಾರ ಬಗ್ಗೆ ಮಾತನಾಡಿದ ಅಭಿಷೇಕ್, “ನನ್ನ ತಾಯಿ ಎಲ್ಲೇ ಹೋದರೂ ಸಪೋರ್ಟ್ ಮಾಡ್ತೀನಿ. ಅಭಿಮಾನಿಗಳು ಹೇಳುವ ಮಾತಿಗೆ ನಾವು ಸ್ಪಂದಿಸುತ್ತೇವೆ. ಆದರೆ ಅಂತಿಮವಾಗಿ ಅಮ್ಮ ತೀರ್ಮಾನಿಸುತ್ತಾರೆ” ಎಂದರು. ಇದೇ ವೇಳೆ ಸುಮಲತಾ ಅವರು ಕೂಡ ಮಾತನಾಡಿ ಅಭಿಮಾನಿಗಳು ಪ್ರೀತಿಯಿಂದ ಆಸೆ ಪಡುತ್ತಿದ್ದಾರೆ. ಅಭಿಮಾನಿಗಳ ಆಸೆ ಸೋಲಬಾರದು. ಅವರ ಆಸೆ ಗೆಲ್ಲಬೇಕು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದಲ್ಲಿ ಜೋರಾದ ಗೌಡ್ತಿ ಗುದ್ದಾಟ- ಆದಿಚುಂಚನಗಿರಿ ಮಠಕ್ಕಿಂದು ಸುಮಲತಾ ಭೇಟಿ

    ರಾಜ್ಯದಲ್ಲಿ ಜೋರಾದ ಗೌಡ್ತಿ ಗುದ್ದಾಟ- ಆದಿಚುಂಚನಗಿರಿ ಮಠಕ್ಕಿಂದು ಸುಮಲತಾ ಭೇಟಿ

    ಮಂಡ್ಯ/ಬೆಂಗಳೂರು: ಒಂದೆಡೆ ಆಪರೇಷನ್ ಕಮಲ ಜೋರಾಗಿದ್ರೆ, ಮತ್ತೊಂದೆಡೆ ಗೌಡ್ತಿಯರ ಗದ್ದಲ ಜೋರಾಗಿದೆ. ಜೆಡಿಎಸ್ ಟೀಕೆಯ ನಡುವೆಯೇ ಇಂದು ಆದಿಚುಂಚನಗಿರಿ ಮಠಕ್ಕೆ ಸುಮಲತಾ ಅಂಬರೀಶ್ ಭೇಟಿ ಕೊಡುತ್ತಿದ್ದಾರೆ. ಇತ್ತ ಅನಿತಾ ಕುಮಾರಸ್ವಾಮಿ ಕೂಡಾ ನಾನು ತೆಲುಗಿನವಳು ಅಲ್ಲ ಅಂತಿದ್ದಾರೆ.

    ಸುಮಲತಾ ಆಂಧ್ರದ ಗೌಡ್ತಿ ಅಂತಾ ಜೆಡಿಎಸ್ ಎಂಎಲ್‍ಸಿ ಶ್ರೀಕಂಠೇಗೌಡ ಟೀಕೆ ಮಾಡಿದ್ರೆ ಮಂಡ್ಯಕ್ಕೆ ಸುಮಲತಾ ಕೊಡುಗೆ ಏನು ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ಜೆಡಿಎಸ್ ನಾಯಕರ ಟೀಕೆಗೆ ಕ್ಯಾರೇ ಎನ್ನದ ಸುಮಲತಾ ಅಂಬರೀಶ್ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಕಾಲಭೈರವೇಶ್ವರನ ಸನ್ನಿಧಾನದಲ್ಲಿ ಬೆಳಗ್ಗೆ 8.30ರ ಸುಮಾರಿಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ರಾಜಕೀಯ ಪ್ರವೇಶದ ಬಗ್ಗೆ ನಿರ್ಮಲಾನಂದ ಸ್ವಾಮೀಜಿ ಜೊತೆ ಚರ್ಚಿಸಲಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

    ಮಂಡ್ಯ ಫೀಲ್ಡ್‍ನಲ್ಲಿ ರಾಜಕೀಯದ ರಣರಂಗಕ್ಕೆ ಸುಮಲತಾ ವೇದಿಕೆ ಗಟ್ಟಿಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ಶಾಸಕಿ, ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಸಣ್ಣದಾಗಿ ಕನಲಿ ಹೋಗಿದ್ದಾರೆ. ಜಾಗ್ವಾರ್ ಚಿತ್ರದ ಸಂದರ್ಶದಲ್ಲಿ ಸಿಎಂ “ನನ್ನ ಪತ್ನಿಯೂ ತೆಲುಗು ಮೂಲದವಳು” ಎಂದಿರುವ ಹಳೆಯ ವಿಡಿಯೋ ಈಗ ವೈರಲ್ ಆಗಿದೆ. ಇದರಿಂದ ಜೆಡಿಎಸ್ ಬುಡಕ್ಕೆ ಬಂದಿರುವ ತಪ್ಪನ್ನು ಅನಿತಾ ಸರಿಮಾಡಲು ನಿಂತಿದ್ದಾರೆ. ಅಲ್ಲದೆ ಮಾಧ್ಯಮದವರ ಬಳಿ ಬಂದು, ನೀವೆಲ್ಲ ಸುದ್ದಿ ಮಾಡ್ತಿರುವಂತೆ ನಾನು ತೆಲುಗಿನವಳಲ್ಲ, ಕನ್ನಡತಿ. ಕೋಲಾರ ಜಿಲ್ಲೆ ನನ್ನ ಮೂಲ. ನನಗೆ ತೆಲುಗು ಒಂದಕ್ಷರನೂ ಬರಲ್ಲ ಅಂದಿದ್ದಾರೆ.

    ಒಟ್ಟಿನಲ್ಲಿ ಜೆಡಿಎಸ್ ಕಟು ಟೀಕೆಯಿಂದ ಸುಮಲತಾ ಕೊಂಚ ಸ್ಟ್ರಾಂಗ್ ಆಗಿಯೇ ಜೆಡಿಎಸ್‍ಗೆ ಏಟು ಕೊಡುವ ಸಾಧ್ಯತೆ ಇದೆ. ಜೆಡಿಎಸ್ ಮಾಡಿರುವ ತೆಲುಗು, ಗೌಡ್ತಿ ಡ್ಯಾಮೇಜನ್ನು ಸರಿಪಡಿಸಲು ಅನಿತಾನೂ ರೆಡಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಅಭಿಮಾನಿಯ ಎವರ್ ಗ್ರೀನ್ ಪ್ರೀತಿಗೆ ಮನಸೋತ ಸುಮಲತಾ

    ಅಂಬಿ ಅಭಿಮಾನಿಯ ಎವರ್ ಗ್ರೀನ್ ಪ್ರೀತಿಗೆ ಮನಸೋತ ಸುಮಲತಾ

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರು ದೈಹಿಕವಾಗಿ ದೂರವಾಗಿದ್ದರೂ ತಮ್ಮ ಅಭಿಮಾನಿಗಳ ಮನಸ್ಸಿನಲ್ಲಿ ಈಗಲೂ ಜೀವಂತವಾಗಿದ್ದಾರೆ. ಅಂಬರೀಶ್ ಅವರ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಟನ ಮೇಲೆ ಪ್ರೀತಿಯನ್ನು ವಿಭಿನ್ನವಾಗಿ ತೋರಿಸಿದ್ದಾರೆ. ಅಭಿಮಾನಿಯ ಈ ಪ್ರೀತಿಗೆ ಸುಮಲತಾ ಅವರು ಮನಸೋತಿದ್ದಾರೆ.

    ಸುಮಲತಾ ಅವರು ತಮ್ಮ ಟ್ವಿಟ್ಟರಿನಲ್ಲಿ ರೈತರೊಬ್ಬರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ರೈತರೊಬ್ಬರು ತಮ್ಮ ಹೊಲದಲ್ಲಿನ ಭತ್ತದ ನಾಟಿ ಮೇಲೆ ಹೃದಯದ ಆಕಾರ ಮಾಡಿ ಮತ್ತೆ ಹುಟ್ಟಿ ಬಾ ಅಂಬರೀಷ್ ಅಣ್ಣ ಎಂದು ಬರೆದಿದ್ದಾರೆ.

    ಸುಮಲತಾ ಅಂಬರೀಶ್ ಅವರು ಈ ಫೋಟೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡು ಅದಕ್ಕೆ, “ಇದು ಎವರ್ ಗ್ರೀನ್ ಪ್ರೀತಿ. ನೆಚ್ಚಿನ ನಟನ ಮೇಲಿರುವ ಪ್ರೀತಿ ತುಂಬಾ ವಿಭಿನ್ನವಾಗಿ ತೋರಿಸಿದ್ದೇನೆ. ಈ ಫೋಟೋ ನೋಡಿ ನಾನು ಮನಸೋತಿದ್ದೇನೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಸುಮಲತಾ ಅವರ ಈ ಟ್ವೀಟ್ ಅನ್ನು ಕಿಚ್ಚ ಸುದೀಪ್ ಅವರು ರೀ-ಟ್ವೀಟ್ ಮಾಡಿದ್ದಾರೆ. ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಇನ್ನೊಬ್ಬರ ಹೃದಯದಲ್ಲಿ ಜೀವಂತವಾಗಿರುವವರು ಎಂದಿಗೂ ಸಾವನ್ನಪ್ಪುದಿಲ್ಲ ಎಂದು ಬರೆದುಕೊಂಡಿದ್ದಾರೆ.

    ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು ನ.24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದ ಕನಗನಮರಡಿಯಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಬೇಸರಗೊಂಡಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಮಲತಾ ಸಹೋದರಿಯಿದ್ದಂತೆ, ನಾನು ಅವರ ಮನೆಯ ಸದಸ್ಯ: ಎಂ.ಬಿ ಪಾಟೀಲ್

    ಸುಮಲತಾ ಸಹೋದರಿಯಿದ್ದಂತೆ, ನಾನು ಅವರ ಮನೆಯ ಸದಸ್ಯ: ಎಂ.ಬಿ ಪಾಟೀಲ್

    – ರಾಜಕೀಯಕ್ಕೆ ಬಂದ್ರೆ ಖಂಡಿತ ಬೆಂಬಲ

    ಧಾರವಾಡ: ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಬಳಿಕ ಇದೀಗ ಅವರ ಕುಟುಂಬದಿಂದ ಸುಮಲತಾ ಅವರು ರಾಜಕೀಯಕ್ಕೆ ಬರಬೇಕು. ಅಲ್ಲದೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದು, ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಕೂಡ ಸುಮಲತಾ ಅವರಿಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ.

    ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಹಾಗೂ ನಾನು ಆತ್ಮೀಯ ಹಾಗೂ ಬಹಳ ವರ್ಷದಿಂದ ಸ್ನೇಹಿತರಾಗಿದ್ದೆವು. ಅವರ ಧರ್ಮ ಪತ್ನಿ ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಿದ್ದಾರೆ. ಯಾಕಂದ್ರೆ ಮಂಡ್ಯದಲ್ಲಿ ಅವರ ಅಭಿಮಾನಿಗಳು ಬಹಳಷ್ಟು ಮಂದಿ ಇದ್ದಾರೆ ಎಂದರು.

    ಸುಮಲತಾ ಅವರು ನಮ್ಮ ಸಹೋದರಿ ಇದ್ದಂತೆ. ಅವರಿಗೂ ಅಭಿಮಾನಿಗಳು ಬಹಳಷ್ಟು ಇದ್ದಾರೆ. ಅಂಬರೀಶ್ ಅವರ ನಿಧನದ ಬಳಿಕ ಅವರ ಕುಟುಂಬದವರು ರಾಜಕೀಯಕ್ಕೆ ಬರಬೇಕೆಂಬ ಒತ್ತಾಯ ಕೇಳಿಬರುತ್ತದೆ. ಆದ್ರೆ ಸುಮಲತಾ ಅವರು ಇನ್ನೂ ಕೂಡ ತಮ್ಮ ನಿಲುವನ್ನು ವ್ಯಕ್ತಪಡಿಸಿಲ್ಲ. ಒಂದು ವೇಳೆ ಸುಮಲತಾ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆಂದರೆ ನಮ್ಮ ಪಕ್ಷ ಖಂಡಿತವಾಗಿ ಬೆಂಬಲ ಸೂಚಿಸುತ್ತದೆ. ವೈಯಕ್ತಿಕವಾಗಿ ಹೇಳಬೇಕಂದ್ರೆ ನಾನು ಅಂಬರೀಶ್ ಕುಟುಂಬದ ಓರ್ವ ಸದಸ್ಯನಾಗಿದ್ದೇನೆ ಎಂದು ಹೇಳಿದ್ರು.

    ಇತ್ತ ಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರು ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ ಎಂಬ ಹೇಳಿಕೆ ನೀಡಿದ್ದು, ಆ ಬಳಿಕ ಮಂಡ್ಯ ಮನೆ ಮಗಳ ವಾದ ವಿವಾದ ಹುಟ್ಟಿಕೊಂಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮನೆಮಗಳು ಯಾರು ಎನ್ನುವುದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಮಂಡ್ಯದ ನಿಜವಾದ ಮನೆ ಮಗಳು ಲಕ್ಷ್ಮಿ ಅಶ್ವಿನ್ ಗೌಡ ಅಥವಾ ಸುಮಲತಾ ಎಂಬ ಚರ್ಚೆ ಎದ್ದಿದೆ. ಕಾಂಗ್ರೆಸ್‍ನಿಂದ ಸುಮಲತಾರನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಜೆಡಿಎಸ್‍ನಿಂದ ಲಕ್ಷ್ಮಿ ಅಶ್ವಿನ್ ಗೌಡ ಹೆಸರು ಚಾಲ್ತಿಗೆ ಬಂದಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಂಡ್ಯದ ನಿಜವಾದ ಮನೆಮಗಳು ಯಾರು? – ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ಮಂಡ್ಯದ ನಿಜವಾದ ಮನೆಮಗಳು ಯಾರು? – ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ಮಂಡ್ಯ: ನಟಿ ಸುಮಲತಾ ಅಂಬರೀಶ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಅನ್ನೋ ವಿಚಾರ ಕೇಳಿ ಬಂದ ಬೆನ್ನಲ್ಲೆ ವಾಟ್ಸಪ್ ನಲ್ಲಿ ಲಕ್ಷ್ಮಿ ಅಶ್ವಿನ್ ಗೌಡ ಹೆಸರು ಹರಿದಾಡ್ತಿದೆ.

    ಮಂಡ್ಯದ ನಿಜವಾದ ಮನೆ ಮಗಳು ಯಾರು? ಲಕ್ಷ್ಮಿ ಅಶ್ವಿನ್ ಗೌಡ ಅಥವಾ ಸುಮಲತಾ ಎಂಬ ಚರ್ಚೆ ಎದ್ದಿದೆ. ಕಾಂಗ್ರೆಸ್‍ನಿಂದ ಸುಮಲತಾರನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಜೆಡಿಎಸ್‍ನಿಂದ ಲಕ್ಷ್ಮಿ ಅಶ್ವಿನ್ ಗೌಡ ಹೆಸರು ಚಾಲ್ತಿಗೆ ಬಂದಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಲಕ್ಷ್ಮಿ ಅಶ್ವಿನ್ ಗೌಡ ಅವರು ಕಳೆದ ವರ್ಷ ನವಂಬರ್‍ನಲ್ಲಿ ನಡೆದ ಲೋಕಸಭಾ ಉಪಚುನಾವಣೆಯ ಆಕಾಂಕ್ಷಿಯಾಗಿದ್ದರು. ಆದ್ರೆ ವರಿಷ್ಠರು ಎಲ್‍ಆರ್ ಶಿವರಾಮೇಗೌಡರಿಗೆ ಟಿಕೆಟ್ ನೀಡಿದ್ದರು. ಇದೀಗ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡೋದಾದ್ರೆ ಅವರ ವಿರುದ್ಧ ಜೆಡಿಎಸ್‍ನಿಂದ ಲಕ್ಷ್ಮಿಅಶ್ವಿನ್ ಗೌಡರನ್ನ ನಿಲ್ಲಿಸುತ್ತಾರೆ. ಆ ಮೂಲಕ ಮಂಡ್ಯದ ನಿಜವಾದ ಮಗಳು ಎಂದು ಅಂಬಿ ಅಭಿಮಾನಿಗಳಿಗೆ ಸೆಡ್ಡು ಹೊಡೆಯುತ್ತಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಇದನ್ನೂ ಓದಿ: ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ: ಕೆ.ಟಿ.ಶ್ರೀಕಂಠೇಗೌಡ

    ಪರಿಷತ್ ಸದಸ್ಯ ಶ್ರೀಕಂಠೇಗೌಡ ಅವರು ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ ಎಂಬ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯಿಂದ ಈ ಮನೆ ಮಗಳ ವಾದ ವಿವಾದ ಹುಟ್ಟಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಮನೆಮಗಳು ಯಾರು ಎನ್ನುವುದರ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿಯಿಂದ ಸ್ಪರ್ಧಿಸಲು ಸುಮಲತಾ ಅವರಿಗೇನು ಹುಚ್ಚು ಇದೆಯಾ: ಡಾ. ಸಿದ್ದರಾಮಯ್ಯ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಂಡ್ಯ ಲೋಕ ಸಮರಕ್ಕೆ ನಾನೇ ಪಕ್ಷದ ಅಭ್ಯರ್ಥಿ: ಎಲ್.ಆರ್. ಶಿವರಾಮೇಗೌಡ

    ಮಂಡ್ಯ ಲೋಕ ಸಮರಕ್ಕೆ ನಾನೇ ಪಕ್ಷದ ಅಭ್ಯರ್ಥಿ: ಎಲ್.ಆರ್. ಶಿವರಾಮೇಗೌಡ

    ಮಂಡ್ಯ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಹಾಲಿ ಸಂಸದ ಎಲ್.ಆರ್. ಶಿವರಾಮೇಗೌಡರು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮುಂದಿನ ಅಭ್ಯರ್ಥಿ ನಾನೇ. ಆದರೆ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದರೆ ನಾನು ಸ್ಥಾನ ಬಿಟ್ಟು ಕೊಡಲು ಸಿದ್ಧವಾಗಿದ್ದೇನೆ. ಈ ಕುರಿತು ಜೆಡಿಎಸ್ ವರಿಷ್ಠರನ್ನು ಕೇಳಿದ್ದು, ನಾನು ಕೇವಲ ಆರು ತಿಂಗಳು ಮಾತ್ರ ಅಧಿಕಾರ ನಡೆಸಿದ್ದೇನೆ ಎಂದರು.

    ಇದೇ ವೇಳೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರು ಸ್ಪರ್ಧೆ ಕುರಿತ ಪ್ರಶ್ನೆಗೆ ಉತ್ತರಿಸಿ, ನಾವು ಜಿಲ್ಲೆಯಲ್ಲಿ ಅಂಬರೀಶ್ ಅವರನ್ನು ಹೊತ್ತು ಮೆರೆದಾಡಿದ್ದೇವೆ. ಅವರು ವಿಧಿವಶರಾದ ವೇಳೆಯೂ ಸಿಎಂ ಕುಮಾರಸ್ವಾಮಿ ಅವರು ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದಾರೆ. ಅದಕ್ಕಿಂತ ಇನ್ನೇನು ಮಾಡಲು ಸಾಧ್ಯ. ಆದರೆ ನಾನು ಸುಮಲತಾ ಅವರ ಸ್ಪರ್ಧೆಯ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.

    ಈ ಬಾರಿ ಕೇಂದ್ರ ಮೋದಿ ಸರ್ಕಾರದ ಬಜೆಟ್ ವಿಚಾರದಲ್ಲಿ ಭಾರೀ ನಿರೀಕ್ಷೆ ಇತ್ತು. ಆದರೆ ಎಲ್ಲವೂ ಹುಸಿ ಆಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಸಾಕಷ್ಟು ರೈತರ ಸಾಲಮನ್ನಾ ಆಗಿದ್ದು, ರೈತರಿಗೆ ಆರು ಸಾವಿರ ಕೊಟ್ಟ ಬಿಜೆಪಿ ರೈತರ ಮೂಗಿಗೆ ತುಪ್ಪ ಸವರಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಸಂಸದರು ತಲೆ ತಗ್ಗಿಸಬೇಕು ಎಂದು ಕಿಡಿಕಾರಿದರು. ಅಲ್ಲದೇ ದೋಸ್ತಿ ಪಕ್ಷವಾದ ಕಾಂಗ್ರೆಸ್ ಮುಖಂಡರು ಬೀದಿಯಲ್ಲಿ ನಿಂತು ಜೆಡಿಎಸ್ ಬಗ್ಗೆ ಮಾತನಾಡುತ್ತಾರೆ. ಅಂತಹ ಮುಖಂಡರ ಹೇಳಿಕೆಗೆ ಪಕ್ಷದ ಹೈಕಮಾಂಡ್ ಬ್ರೇಕ್ ಹಾಕಬೇಕು. ಆ ಮೂಲಕ ಮುಖ್ಯಮಂತ್ರಿಗಳಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು. ಆದರೆ ಮಂತ್ರಿ ಸ್ಥಾನ ಪಡೆದವರು ತಮ್ಮ ನಿಷ್ಠೆಯನ್ನು ಎದೆ ಬಗೆದು ತೋರಿಸಬೇಕಾದ ಅವಶ್ಯಕತೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ ಟಾಂಗ್ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಾಜಕೀಯ ಪ್ರವೇಶದ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ

    ರಾಜಕೀಯ ಪ್ರವೇಶದ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ

    ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲೇಬೇಕೆಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಇಂದು 200ಕ್ಕೂ ಹೆಚ್ಚು ಅಭಿಮಾನಿಗಳು ನಗರದ ಗಾಲ್ಫ್ ಕೋರ್ಸ್ ಬಳಿಯ ನಿವಾಸದಲ್ಲಿ ಸುಮಲತಾ ಅವರ ಭೇಟಿಗೆ ಆಗಮಿಸಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿಯುವಂತೆ ಒತ್ತಾಯಿಸಿದ್ದಾರೆ.

    ಪಕ್ಷದ ಮುಖಂಡರು ಸುಮಲತಾ ಅವರ ಬಳಿ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳಲ್ಲೆ ಗೊಂದಲವುಂಟಾಗಿದ್ದು, ಕೆಲ ಅಭಿಮಾನಿಗಳು ಪಕ್ಷೇತರರಾಗಿಯಾದರು ನಿಲ್ಲಿ ನಾವು ನಿಮ್ಮನ್ನು ಗೆಲ್ಲಿಸ್ತೀವಿ ಎಂದು ಕೂಗುತ್ತಿದ್ದರು. ದೇವೇಗೌಡರು ಅಂಬರೀಶಣ್ಣನ ಮಗ ಎಂದು ಹೇಳುತ್ತಿದ್ದರು. ಮೈತ್ರಿಕೂಟದ ಅಭ್ಯರ್ಥಿಯಾಗಿ ಅಂಬರೀಶ್ ಕುಟುಂಬದವರನ್ನೆ ಕಣಕ್ಕೆ ಇಳಿಸಬೇಕು. ದೇವೇಗೌಡರು ಈ ಬಾರಿ ಸಹಕಾರ ನೀಡಬೇಕು ಎಂದು ಅಭಿಮಾನಿಗಳು ಮನವಿ ಮಾಡಿಕೊಂಡರು. ಈ ವೇಳೆ ರಾಕ್‍ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಉಪಸ್ಥಿತರಿದ್ದರು.

    ನಿಮ್ಮ ಪ್ರೀತಿಗೆ ಬೆಲೆ ಕಟ್ಟೋಕ್ಕಾಗಲ್ಲ:
    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ ಅವರು, “ಅಂಬರೀಶ್ ಅವರನ್ನು ಕಳೆದುಕೊಂಡಾಗ ನಮಗೆ ಆದ ನೋವಿಗಿಂತ 100 ಪಟ್ಟು ಹೆಚ್ಚು ನೋವು ನಿಮಗಾಗಿದೆ. ಅಭಿಮಾನಿಗಳೆಲ್ಲ ಸಂಬಂಧವನ್ನು ಬಿಟ್ಟುಕೊಡಬಾರದು ಎಂದು ಅಭಿಮಾನ ಇಟ್ಟುಕೊಂಡು ಬಂದಿದ್ದಾರೆ. ಕಳೆದ ಒಂದು ತಿಂಗಳಿನಿಂದ ನನಗೆ ಇದೇ ರೀತಿಯ ಒತ್ತಡ ಬರುತ್ತಿದೆ. ಈ ಪ್ರೀತಿಯೇ ಅಂಬಿ ಅವರು ಸಂಪಾದಿಸಿದ ಆಸ್ತಿ. ನನಗೆ ಇದನ್ನು ಕಳೆದುಕೊಳ್ಳುವುದಕ್ಕೆ ಇಷ್ಟ ಇಲ್ಲ. ಅವರು ಇದ್ದಾಗ ಇದೇ ಪ್ರೀತಿ ಇತ್ತು. ಅವರು ಇಲ್ಲದಾಗಲು ಇಷ್ಟು ಪ್ರೀತಿ ಇದೆ ಅಂದರೆ ಅದಕ್ಕೆ ಬೆಲೆ ಕಟ್ಟೋಕೆ ಆಗಲ್ಲ” ಎಂದು ಹೇಳಿದ್ದಾರೆ.

    ಚರ್ಚಿಸಿ, ತೀರ್ಮಾನಕ್ಕೆ ಬರುವೆ:
    ನನಗೆ ಎಂದಿಗೂ ಪದವಿ ಅಥವಾ ರಾಜಕೀಯದ ಆಸೆ ಇರಲಿಲ್ಲ. ಹಾಗಾಗಿ ನಾನು ಸ್ವಲ್ಪ ಯೋಚಿಸಬೇಕಾಗುತ್ತದೆ. ಈ ವಿಷಯದ ಬಗ್ಗೆ ನಾನು ದುಡುಕಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಆಗಲ್ಲ. ಅಂಬರೀಶ್ ಅವರು ಇದ್ದಾಗ ಶಕ್ತಿ ಬೇರೆ, ನೀವು ಇರುವಾಗ ನಿಮ್ಮ ಶಕ್ತಿನೇ ಬೇರೆ. ರಾಜಕೀಯ ಚುನಾವಣೆ ಅಷ್ಟು ಸುಲಭ ಅಲ್ಲ. ಹಾಗಾಗಿ ನಾನು ಎಲ್ಲವನ್ನು ಚರ್ಚೆ ಮಾಡಿ ಒಂದೊಳ್ಳೆ ತೀರ್ಮಾನ ಕೈಗೊಳ್ಳುತ್ತೇನೆ. ನಿಮ್ಮೆಲ್ಲರ ಪ್ರೀತಿಯನ್ನು ನಾನು ಕಳೆದುಕೊಳ್ಳುವುದಿಲ್ಲ. ಈ ಜನ್ಮ ಇರೂವವರೆಗೆ ನಮ್ಮ ಸೇವೆ ಮಂಡ್ಯಕ್ಕೆ ಇರುತ್ತದೆ. ನಾನು ಹಾಗೂ ಅಭಿಷೇಕ್ ಮಂಡ್ಯವನ್ನು ಮರಿಯೋಕೆ ಸಾಧ್ಯವೇ ಇಲ್ಲ ಎಂದರು.

    ಮಂಡ್ಯದಿಂದ್ಲೇ ಸ್ಪರ್ಧೆ:
    ನನಗೆ ರಾಜಕೀಯಕ್ಕೆ ಬರುವ ಯೋಚನೆ ಮೊದಲಿಂದ ಇರಲಿಲ್ಲ. ಆಕಸ್ಮಾತ್ ನಾನು ರಾಜಕೀಯಕ್ಕೆ ಬಂದರೆ ಅದು ಮಂಡ್ಯದಿಂದ ಬರುತ್ತೇನೆ. ನಾನು ಯಾವುದೇ ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿಲ್ಲ ಹಾಗೂ ಯಾರು ಕೂಡ ನನ್ನನ್ನು ಸಂಪರ್ಕಿಸಿಲ್ಲ. ಅಂಬರೀಶ್ ಅವರು ಕಾಂಗ್ರೆಸ್ ನಲ್ಲಿ ಇದ್ದರು. ಹಾಗಾಗಿ ನಾವು ಕಾಂಗ್ರೆಸ್ ನಾಯಕರ ಜೊತೆ ಮಾತನಾಡಬೇಕು. ನಾನು ಏನೋ ಮಾತನಾಡಿ ವಿವಾದ ಮಾಡಿಕೊಳ್ಳಲು ಇಷ್ಟಪಡಲ್ಲ. ನಾವು ಇಲ್ಲಿ ಯಾರಿಗೂ ಚಾಲೆಂಜ್ ಮಾಡುವುದಿಲ್ಲ ಹಾಗೂ ಯಾರ ವಿರುದ್ಧವೂ ನಾವು ಹೋಗಲ್ಲ. ಆದರೆ ಅಭಿಮಾನಿಗಳ ಪ್ರೀತಿಗೆ ಖಂಡಿತ ಬೆಲೆ ಕೊಡುತ್ತೇನೆ. ಈ ಪ್ರೀತಿ ಕಳೆದುಕೊಳ್ಳುವುದಕ್ಕೆ ಇಷ್ಟಪಡಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸುಮಲತಾರನ್ನು ಚುನಾವಣಾ ಕಣಕ್ಕಿಳಿಸಲು ಪಟ್ಟು ಹಿಡಿದ ಅಂಬಿ ಅಭಿಮಾನಿ ಬಳಗ

    ಸುಮಲತಾರನ್ನು ಚುನಾವಣಾ ಕಣಕ್ಕಿಳಿಸಲು ಪಟ್ಟು ಹಿಡಿದ ಅಂಬಿ ಅಭಿಮಾನಿ ಬಳಗ

    ಮಂಡ್ಯ: ಈ ಬಾರಿ ಮಂಡ್ಯ ಲೋಕಸಭೆ ಚುನಾವಣಾ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲೇ ಬೇಕು ಅಂತ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇಂದು ಮಂಡ್ಯದಿಂದ ಸಾವಿರಾರು ಅಂಬಿ ಅಭಿಮಾನಿಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.

    ಸ್ಯಾಂಡಲ್‍ವುಡ್ ಕಲಾವಿದರು ಒತ್ತಾಯ ಮಾಡಿದ್ದು ಆಯ್ತು, ಈಗ ಅಂಬರೀಶ್ ಅಭಿಮಾನಿಗಳ ಒತ್ತಾಯ ಶುರುವಾಗಿದೆ. ಹೌದು ಬರುವ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸುವಂತೆ ರೆಬೆಲ್ ಸ್ಟಾರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಮನವಿ ಮಾಡಿಕೊಳ್ಳಲು ಇಂದು ಮಂಡ್ಯದಿಂದ ಬೆಂಗಳೂರಿನ ಅಂಬರೀಶ್ ಅವರ ನಿವಾಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿದ್ದಾರೆ.

    ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಸಕ್ಕರೆನಾಡಿನಲ್ಲಿ ರಾಜಕೀಯ ಗರಿಗೆದರಿದೆ. ಈ ಬಾರಿ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲೇ ಬೇಕು ಅನ್ನೋ ಒತ್ತಾಯ ತೀವ್ರವಾಗಿ ಕೇಳಿಬರ್ತಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಸ್ಯಾಂಡಲ್‍ವುಡ್‍ನ ಪ್ರಮುಖರು ಕೂಡ ಸುಮಲತಾ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದರು. ಈಗ ಮತ್ತೆ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬಿ ಅಭಿಮಾನಿಗಳಿಂದ ಸುಮಲತಾ ಸ್ಪರ್ಧೆಗೆ ಒತ್ತಾಯ ಕೇಳಿ ಬಂದಿದೆ. ಇಷ್ಟೇ ಅಲ್ಲದೆ ಈಗಾಗಲೇ ಮೈತ್ರಿ ಪಕ್ಷದಿಂದ ಸುಮಲತಾರನ್ನು ಕಣಕ್ಕಿಳಿಸುವ ಉದ್ದೇಶದಿಂದ ಜೆಡಿಎಸ್ ವರಿಷ್ಠ ಹೆಚ್‍ಡಿ ದೇವೇಗೌಡರನ್ನ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ. ಹಾಗೆಯೇ ಅಂಬಿ ಅಭಿಮಾನಿಗಳು ಸುಮಲತಾ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವಂತೆ ಒತ್ತಾಯ ಮಾಡಲಾಗಿದೆ ಅಂತ ಮಾಹಿತಿ ಮೂಲಗಳು ತಿಳಿಸಿವೆ.

    ಇಂದು ಬೆಳಗ್ಗೆ ಮಂಡ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಂಬರೀಶ್ ರವರ ಮನೆಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ಶತಾಯಾ-ಗತಾಯ ಸುಮಲತಾ ಅಂಬರೀಶ್ ರವರ ಮನವೊಲಿಸಿ ಈ ಬಾರಿ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಲಿದ್ದಾರೆ. ಬೆಳಗ್ಗೆ ಮಂಡ್ಯ ನಗರದಿಂದ ಎರಡು ಬಸ್ಸುಗಳನ್ನು ಮಾಡಲಾಗಿದ್ದು, ಜಿಲ್ಲಾದ್ಯಂತ ಹಲವಾರು ಬಸ್ ಮೂಲಕ ತೆರಳಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ.

    ಮತ್ತೊಂದು ಕಡೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲು ಜೆಡಿಎಸ್ ಕೂಡ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಮಂಡ್ಯದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಹಿಂದೆ ಕುಮಾರಸ್ವಾಮಿಯವರು ಕೂಡ ಅಭಿಮಾನಿಗಳ ಒತ್ತಾಯ ಇದೆ. ಹೀಗಾಗಿ ನಿಖಿಲ್ ಮಂಡ್ಯದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಸದ್ಯ ಮಂಡ್ಯದಲ್ಲಿ ಈ ಬಾರಿ ಯಾರು ಅಭ್ಯರ್ಥಿ ಆಗ್ತಾರೆ ಅನ್ನೋ ಗೊಂದಲ ಶುರುವಾಗಿದ್ದು, ಮೈತ್ರಿ ಪಕ್ಷ ಯಾವ ರೀತಿ ಇದನ್ನ ಸರಿಪಡಿಸಿಕೊಂಡು ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತೆ ಅಂತ ಕಾದು ನೋಡಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv