Tag: ಸುಮಲತಾ ಅಂಬರೀಶ್

  • ಮಂಡ್ಯದಿಂದ ಸುಮಲತಾಗೆ ಟಿಕೆಟ್ ಕೊಡಲ್ಲ- ಸಿದ್ದರಾಮಯ್ಯ ಸ್ಪಷ್ಟನೆ

    ಮಂಡ್ಯದಿಂದ ಸುಮಲತಾಗೆ ಟಿಕೆಟ್ ಕೊಡಲ್ಲ- ಸಿದ್ದರಾಮಯ್ಯ ಸ್ಪಷ್ಟನೆ

    ಹುಬ್ಬಳ್ಳಿ: ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ನೀಡಲು ನಿರ್ಧಾರವಾಗಿದೆ. ಸುಮಲತಾ ಪಕ್ಷೇತರರಾಗಿ ನಿಲ್ಲುವುದು ಅವರಿಗೆ ಬಿಟ್ಟ ವಿಚಾರ ಎಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಂಡ್ಯ ಲೋಕಸಭೆಯ ಗೊಂದಲದ ಬಗ್ಗೆ ಸ್ಪಷನೆ ನೀಡಿದರು.

    ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನು ಮೂರು – ನಾಲ್ಕು ದಿನದಲ್ಲಿ ಅಂತಿಮ ನಿರ್ಧಾರವಾಗಲಿದೆ ಎಂದರು.

    ಲೋಕಸಭಾ ಚುನಾವಣಾ ತಯಾರಿ ನಡೆದಿದೆ. ಮಂಡ್ಯದಿಂದ ಸುಮಲತಾಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಈಗಾಗಲೇ ಹಾಲಿ ಜೆಡಿಎಸ್ ಸಂಸದರಿದ್ದಾರೆ. ಹಾಲಿ ಜೆಡಿಎಸ್ ಇರುವಾಗ ಟಿಕೆಟ್ ಕೇಳಲು ಬರುವುದಿಲ್ಲ. ನಮ್ಮ ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮೈತ್ರಿ ಹೆಚ್ಚು ಸ್ಥಾನ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ಉಮೇಶ್ ಜಾಧವ್ ರಾಜೀನಾಮೆ ಅಂಗಿಕಾರ ಆಗುವುದು ಕಷ್ಟ. ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ. ಈಗ ಆಪರೇಷನ್ ಕಮಲಕ್ಕೆ ಬಲಿಯಾಗಲಿದ್ದಾರೆ. ಗೋಕಾಕ್ ಶಾಸಕ, ಜಾಧವ್, ನಾಗೇಂದ್ರ, ಮಹೇಶ್ಕ ಕುಮಟಳ್ಳಿ ವಿರುದ್ಧ ಸ್ಪೀಕರ್ ಗೆ ದೂರು ನೀಡಲಾಗಿದೆ ಅಂದ್ರು.

    ಪಕ್ಷಾಂತರ ಕಾಯ್ದೆ ವಿರುದ್ಧ ಕ್ರಮ ಜರುಗಿಸಿ ಎಂದು ನಾನೇ ದೂರು ನೀಡಿದ್ದೇನೆ. ಪಕ್ಷಾಂತರ ನಿಷೇಧ ಕಾಯ್ದೆ ಇವರಿಗೂ ಅನ್ವಯಿಸುತ್ತೆ. ಅಲ್ಲದೆ ಸ್ಪೀಕರ್ ರಾಜೀನಾಮೆ ಅಂಗಿಕಾರ ಮಾಡುವುದಿಲ್ಲ ಎಂದು ನಾ ಅಂದುಕೊಂಡಿರುವೆ. ಇವರೆಲ್ಲ ಪಕ್ಷಾಂತರ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಜಾಧವ್ ವಿಷಯದಲ್ಲಿ 25-30 ಕೋಟಿ ವ್ಯವಹಾರ ನಡೆದಿದೆ. ಹಾಗಂತ ನಾ ಹೇಳುತಿಲ್ಲ ಬದಲಾಗಿ ರಾಜ್ಯದ ಜನ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಮಲತಾ ಅಂಬರೀಶ್ ಮುಂದೆ ‘ಪಂಚ’ ಪ್ರಶ್ನೆಗಳನ್ನಿಟ್ಟ ಜೆಡಿಎಸ್ ಕಾರ್ಯಕರ್ತರು

    ಸುಮಲತಾ ಅಂಬರೀಶ್ ಮುಂದೆ ‘ಪಂಚ’ ಪ್ರಶ್ನೆಗಳನ್ನಿಟ್ಟ ಜೆಡಿಎಸ್ ಕಾರ್ಯಕರ್ತರು

    ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ಮೈತ್ರಿಯಲ್ಲಿ ಸೀಟುಗಳ ಹಂಚಿಕೆಯಲ್ಲಿ ಒಮ್ಮತವೇ ಬರುತ್ತಿಲ್ಲ. ಈ ಎಲ್ಲದರ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿಗೆ ಕಬ್ಬಿಣದ ಕಡಲೆಯಾದಂತೆ ಆಗಿದೆ. ಚುನಾವಣೆಗೆ ಸ್ಪರ್ಧಿಸಲು ನಟಿ ಸುಮಲತಾ ಅಂಬರೀಶ್ ಮುಂದಾಗಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೈತ್ರಿಯ ಜೆಡಿಎಸ್ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಅಖಾಡಕ್ಕಿಳಿಸಲು ಸಿದ್ಧಗೊಂಡಿದೆ. ಅಂಬರೀಶ್ ಅಭಿಮಾನಿಗಳಾಗಿರುವ ಜೆಡಿಎಸ್ ಕಾರ್ಯಕರ್ತರು ಸುಮಲತಾರ ಮುಂದೆ ಪಂಚ ಪ್ರಶ್ನೆಗಳನ್ನು ಇಟ್ಟಿದ್ದಾರೆ.

    ಪಂಚ ಪ್ರಶ್ನೆಗಳು:
    ಪ್ರಶ್ನೆ 1: ಅಂಬರೀಶಣ್ಣ ಬದುಕಿದ್ದಾಗ ನನ್ನ ಕುಟುಂಬಸ್ಥರನ್ನು ರಾಜಕೀಯಕ್ಕೆ ಕರೆತರಲ್ಲ ಅಂದಿದ್ರು. ಅವರ ಮಾತಿಗೆ ಕಿಂಚಿತ್ತೂ ಬೆಲೆ ಕೊಡಲ್ವಾ..?
    ಪ್ರಶ್ನೆ 2: ಕಳೆದ ಬಾರಿ ಮನೆ ಬಾಗಿಲಿಗೆ ಬಿ-ಫಾರಂ ಕೊಟ್ಟಿದ್ರೂ ಎಲೆಕ್ಷನ್‍ನಿಂದ ದೂರ ಉಳಿದಿದ್ದು ನಿಮಗೆ ಮರೆತು ಹೋಯ್ತಾ..?
    ಪ್ರಶ್ನೆ 3: ಮಂಡ್ಯ ಜನರ ಋಣ ತೀರಿಸಲು ರಾಜಕೀಯನೇ ಬೇಕಾ…? ಎನ್‍ಜಿಓ ತೆರೆದು ಸಹಾಯ ಮಾಡೋಕೆ ಆಗಲ್ವಾ..?
    ಪ್ರಶ್ನೆ 4: ಅಂಬರೀಶ್ ನಿಧನರಾದಾಗ ಕುಮಾರಣ್ಣ ಸಾಮಾನ್ಯ ಅಭಿಮಾನಿಯಂತೆ ಮಂಡ್ಯದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ಮರೆತು ಹೋಯ್ತಾ..?
    ಪ್ರಶ್ನೆ 5: ಅಂಬಿ ಅಣ್ಣನ ಅಗಲಿಕೆಯನ್ನೇ ಬಂಡವಾಳ ಮಾಡಿಕೊಂಡ ನಿಮ್ಮನ್ನ ಗೆಲ್ಲಿಸಬೇಕಾ..? ನೇರವಾಗಿ ಹೇಳಿಬಿಡಿ.. (ಅಂಬರೀಶ್ ಅಣ್ಣನ ಹೆಸರಿನಲ್ಲಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ಕಟ್ಟಬೇಕು ಎಂದ ಕುಮಾರಣ್ಣನ ಗೆಲ್ಲಿಸಬೇಕೋ..? ಅಥವಾ ನಿಮ್ಮನ್ನ ಗೆಲ್ಲಿಸಬೇಕಾ..?)

    ಹೀಗೆ ಸಾಮಾಜಿಕ ಜಾಲತಾಣದ ಮೂಲಕ ಜೆಡಿಎಸ್ ಕಾರ್ಯಕರ್ತರು ಸುಮಲತಾರಿಗೆ ನಮ್ಮ ಈ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಕೇಳಿಕೊಂಡಿದ್ದಾರೆ. ಇತ್ತ ಸುಮಲತಾ ಅಂಬರೀಶ್ ಮಂಡ್ಯದಲ್ಲಿರುವ ಶಿಫ್ಟ್ ಆಗುತ್ತಿದ್ದು, ಚುನಾವಣೆಗೆ ಸ್ಪರ್ಧಿಸೋದು ಖಂಡಿತ ಎಂದು ಹೇಳಿದ್ದಾರೆ.

    ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಂಡ್ಯದಿಂದ ಮೊಮ್ಮಗ ನಿಖಿಲ್ ಕುಮಾರ್ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಇತ್ತ ನಿಖಿಲ್ ಕುಮಾರ್ ಸಹ ಮಂಡ್ಯದಲ್ಲಿ ಮಿಂಚಿನಂತೆ ಸಂಚಾರ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಿಂದ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

    ಮಂಡ್ಯದಿಂದ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

    ಮಂಡ್ಯ: ನನ್ನ ಬಳಿ ಕೋಟೆಯೂ ಇಲ್ಲ ಕೋಟಿಯೂ ಇಲ್ಲ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನನ್ನ ಸ್ಪರ್ಧೆ ಖಚಿತ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಅಂಬಿ ಅಭಿಮಾನಿಗಳ ಜೊತೆ ಮಾತನಾಡಿದ್ದೇನೆ. ಎಲ್ಲ ಕಡೆ ಒಳ್ಳೆ ರೆಸ್ಪಾನ್ಸ್ ಇದೆ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯದಂತೆ ಹೇಳಿದ್ದಾರೆ. ಜನರ ಪ್ರೀತಿ ನೋಡಿ ತುಂಬಾ ಖುಷಿಯಾಗಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿದ್ದೇನೆ. ಆದರೆ ಟಿಕೆಟ್ ಕೊಡದಿದ್ರೆ ಪಕ್ಷೇತರ ಅಥವಾ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕಾ ಎಂಬುದನ್ನು ನಿರ್ಧರಿಸಿಲ್ಲ ಅಂದ್ರು.

    ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಮ್ಮ ಟೀಂ ರೆಡಿಯಿದೆ. ನಾವು ಎಲ್ಲರನ್ನೂ ಸೇರಿಸಿ ಒಂದು ಗ್ರೂಪ್ ಮಾಡಿಕೊಂಡು ಎಲ್ಲರ ಸಲಹೆ ಪಡೆದು ಕೆಲಸ ಮಾಡುತ್ತೇವೆ. ಮಂಡ್ಯದ ಮಂಜುನಾಥ ನಗರದಲ್ಲಿ ನಮ್ಮ ಸ್ವಂತ ಮನೆಯಿದ್ದು, ಅಲ್ಲಿಯೇ ಮನೆ ಕಟ್ಟಲು ನಿರ್ಧರಿಸಿದ್ದೇನೆ ಎಂದು ಸುಮಲತಾ ತಿಳಿಸಿದ್ರು.

    ಇದೇ ವೇಳೆ ತಮ್ಮ ವಿರುದ್ಧ ನಿಖಿಲ್ ಸ್ಪರ್ಧಿಸುತ್ತಾರೆ ಎಂಬುದಕ್ಕೆ ಪ್ರತಿಕ್ರಿಯಿಸಿ, ನಿಖಿಲ್ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ರೆ ಸ್ವಾಗತ. ನಿಖಿಲ್ ನಮಗೆ ಶತ್ರು ಅಲ್ಲ. ಅಭಿಷೇಕ್‍ಗೆ ನಿಖಿಲ್ ತುಂಬ ಒಳ್ಳೆ ಸ್ನೇಹಿತ. ನನಗೆ ನಿಖಿಲ್ ಬೇರೆಯವನಲ್ಲ ಅಂದ್ರು. ಇದನ್ನೂ ಓದಿ: ಮಂಡ್ಯದಿಂದ ಸ್ಪರ್ಧೆ ಖಚಿತ – ಸುಮಕ್ಕನ ಬಗ್ಗೆ ಮಾತನಾಡಲ್ಲ ಅಂದ್ರು ನಿಖಿಲ್

    ಸಾಮಾಜಿಕ ಜಾಲತಾಣದ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿ, ಕೆಲವೊಂದು ಚರ್ಚೆ ಅವೈಡ್ ಮಾಡಲು ಆಗಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಮಂಡ್ಯ ಜೆಡಿಎಸ್ ಭದ್ರಕೋಟೆ ಆಗಿದ್ರು ನನ್ನ ಬಳಿ ಜನರ ಪ್ರೀತಿ ಇದೆ. ಅದನ್ನು ಇಟ್ಟುಕೊಂಡು ಜನರ ಬಳಿ ಹೋಗುತ್ತೇನೆ. ನನ್ನ ಹಿಂದೆ ಈಗ ಯಾರಿದ್ದಾರೆ. ಅಂಬರೀಶ್ ಇದ್ದಾಗ ಒಂದು ಫೋನಿನಲ್ಲಿ ಎಲ್ಲ ಕೆಲಸ ಆಗುತ್ತಿತ್ತು. ಈಗ ನನ್ನ ಜೊತೆ ಯಾರಿದ್ದಾರೆ ಹೇಳಿ. ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಜನರ ಜೊತೆ ಇರುತ್ತೇನೆ. ಅಂಬರೀಶ್ ಅವರು ದೇವೇಗೌಡರನ್ನು ತಂದೆ ಸ್ಥಾನದಲ್ಲಿ ನೋಡುತ್ತಿದ್ದರು. ಅದೇ ಪ್ರೀತಿ ದೇವೇಗೌಡರಿಗೆ ಇತ್ತು ಎಂದು ಸುಮಲತಾ ಹೇಳಿದ ಚುನಾವಣೆ ಯುದ್ಧವಲ್ಲ ಅದೊಂದು ಸ್ಪರ್ಧೆ ಎಂದು ತಿಳಿಸಿದ್ರು.

    ಗುರು ಕುಟುಂಬಕ್ಕೆ ಜಮೀನು ಪತ್ರ:
    ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನಪ್ಪಿದ್ದ ಮಂಡ್ಯದ ಗುಡಿಗೆರೆ ಗ್ರಾಮದ ವೀರ ಯೋಧ ಗುರು ಕುಟುಂಬಕ್ಕೆ ನಟಿ ಸುಮಲತಾ ಅಂಬರೀಷ್ 20 ಗುಂಟೆ ಜಮೀನು ನೀಡೋದಾಗಿ ಘೋಷಿಸಿದ್ದಂತೆ ಇಂದು ಆ ಕುಟುಂಬಕ್ಕೆ ಜಮೀನು ಪತ್ರ ಹಸ್ತಾಂತರಿಸಿದ್ರು. ಮಂಡ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ಹಿಂದೆ ನಾನು ಗುರು ಕುಟುಂಬಕ್ಕೆ ಜಮೀನು ನೀಡೋದಾಗಿ ಹೇಳಿದ್ದೆ. ಆ ಪ್ರಕಾರವಾಗಿ ಅಭಿಷೇಕ್ ಅಂಬರೀಶ್ ಹೆಸರಲ್ಲಿದ್ದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಜಮೀನಿನ ಪೈಕಿ 20 ಗುಂಟೆಯ ಜಾಗವನ್ನು ಗುರು ಪತ್ನಿ ಕಲಾವತಿಗೆ ಹಸ್ತಾಂತರಿಸೋದಾಗಿ ಹೇಳಿ ದಾನ ಪತ್ರವನ್ನು ಆ ಕುಟುಂಬಕ್ಕೆ ನೀಡಿದ್ರು.

    ಇನ್ನು ಜಮೀನು ಪಡೆದ ಕಲಾವತಿ, ಕೂಡ ಈ ಜಮೀನನ್ನು ಯಾವುದೇ ಕಾರಣಕ್ಕೂ ಮಾರಲ್ಲ. ಸುಮಲತಾ ಅವರ ನೆನಪಾರ್ಥವಾಗಿ ಸ್ವೀಕರಿಸುವೆ ಎಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಿಂದ ಸ್ಪರ್ಧೆ ಖಚಿತ – ಸುಮಕ್ಕನ ಬಗ್ಗೆ ಮಾತನಾಡಲ್ಲ ಅಂದ್ರು ನಿಖಿಲ್

    ಮಂಡ್ಯದಿಂದ ಸ್ಪರ್ಧೆ ಖಚಿತ – ಸುಮಕ್ಕನ ಬಗ್ಗೆ ಮಾತನಾಡಲ್ಲ ಅಂದ್ರು ನಿಖಿಲ್

    ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸುವುದು ಖಚಿತ ಎಂದು ನಟ ನಿಖುಲ್ ಕುಮಾರಸ್ವಾಮಿ ಅವರು ಒಪ್ಪಿಕೊಂಡಿದ್ದು, ಆದ್ರೆ ಸುಮಲತಾ ಅಂಬರೀಶ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಹೀಗಾಗಿ ಅವರ ಸ್ಪರ್ಧೆ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದ್ದಾರೆ.

    ಮದ್ದೂರಿನ ಬಳಿ ಬಸ್ ಉರುಳಿ 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಿಮ್ಸ್ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು, ರಾಷ್ಟ್ರಾಧ್ಯಕ್ಷರು ಸೇರಿದಂತೆ ಎಲ್ಲರು ಕುಳಿತು ತೀರ್ಮಾನ ಮಾಡಿದ್ದಾರೆ. ನನಗೆ ಟಿಕೆಟ್ ಕೊಡಲು ಪಕ್ಷ ತೀರ್ಮಾನ ಮಾಡಿದೆ. ನಾನು ನನ್ನ ಸೇವೆ ಮಾಡುತ್ತೇನೆ ಎಂದು ತಿಳಿಸಿದ್ರು.

    ಇದೇ ವೇಳೆ ಮೈಸೂರಿನಿಂದ ಸ್ಪರ್ಧೆ ಮಾಡುತ್ತಾರೆ ಎಂದು ತಮ್ಮ ಬಗ್ಗೆ ಕೇಳಿ ಬಂದ ಊಹಾಪೋಹವನ್ನು ನಿಖಿಲ್ ನಿರಾಕರಿಸಿದ್ರು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಕಾಂಗ್ರೆಸ್‍ನವರ ಜೊತೆ ಮಾತನಾಡುತ್ತೇನೆ. ದೊಡ್ಡವರು ಕೂಡ ಕುಳಿತು ಮಾತನಾಡ್ತಾರೆ. ಹೀಗಾಗಿ ಕಾಂಗ್ರೆಸ್‍ನವರು ನನಗೆ ಸಪೋರ್ಟ್ ಮಾಡ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

    ಸುಮಲತಾ ಅವರ ಸ್ಪರ್ಧೆ ಬಗ್ಗೆ ಮಾತನಾಡಿ, ಸುಮಕ್ಕನ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಸ್ಪರ್ಧೆ ಬಗ್ಗೆ ನಾನು ಮಾತನಾಡಲ್ಲ. ಸುಮಲತಾ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಅಭಿ ನನ್ನ ತಮ್ಮನ ರೀತಿ. ಅಂಬರೀಶ್ ಅವರು ನನ್ನನ್ನು ಮಗನ ರೀತಿ ಕಾಣುವವರು. ಅವರ ಬಗ್ಗೆ ತುಂಬಾ ಗೌರವವಿದೆ. ಕುರುಕ್ಷೇತ್ರ ಸಿನಿಮಾ ಚಿತ್ರೀಕರಣದ ವೇಳೆ ಅವರ ಜೊತೆ ತುಂಬಾ ಸಮಯ ಕಳೆದಿದ್ದೇನೆ ಎಂದು ತಿಳಿಸಿದ್ರು.

    ನಿಖಿಲ್ ಸ್ಥಳೀಯರಲ್ಲ ಎಂಬ ಟೀಕೆ ಬಗ್ಗೆ ನಾನು ಮಾತನಾಡಲ್ಲ. ನಾನು ಇಲ್ಲೇ ಇರುತ್ತೇನೆ. ಕಚೇರಿ, ಮನೆ ಮಾಡಿ ಶೀಘ್ರದಲ್ಲೇ ತೊಡಗಿಸಿಕೊಳ್ಳುತ್ತೇನೆ ಎಂದು ತಮ್ಮ ಸ್ಪರ್ಧೆಯನ್ನು ಅಧಿಕೃತಗೊಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಂಡ್ಯದಲ್ಲಿ ಸುಮಲತಾ ಅಂಬರೀಶ್‍ಗೆ ಬಿಜೆಪಿ ಬೆಂಬಲ: ಸಂಸದೆ ಶೋಭಾ ಕರಂದ್ಲಾಜೆ

    ಮಂಡ್ಯದಲ್ಲಿ ಸುಮಲತಾ ಅಂಬರೀಶ್‍ಗೆ ಬಿಜೆಪಿ ಬೆಂಬಲ: ಸಂಸದೆ ಶೋಭಾ ಕರಂದ್ಲಾಜೆ

    ಮಂಗಳೂರು: ರಾಜ್ಯದಲ್ಲಿ ಮಾಜಿ ಪ್ರಧಾನಿಗಳ ಇಡೀ ಕುಟುಂಬವೇ ರಾಜಕಾರಣದಲ್ಲಿ ಮುಳುಗಿದೆ. ಮಂಡ್ಯದಲ್ಲಿ ನಿಖಿಲ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಜೆಡಿಎಸ್ ಹೇಳಿದೆ. ಆದ್ದರಿಂದ ಬಿಜೆಪಿ ಯಾರು ಬಂದರೂ ಸ್ವಾಗತ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ, ಮಂಡ್ಯದಲ್ಲಿ ಸುಮಲತಾ ಅಂಬರೀಶ್‍ಗೆ ಬಿಜೆಪಿ ಬೆಂಬಲ ನೀಡಲಿದೆ. ಯಾರು ಪಕ್ಷಕ್ಕೆ ಸೇರ್ಪಡೆ ಆದ್ರು ನಮ್ಮ ಸ್ವಾಗತ ಇದೆ. ಪಕ್ಷೇತರವಾಗಿ ನಿಂತರು ಕೂಡ ಬಿಜೆಪಿ ಬೆಂಬಲಿಸಲಿದೆ ಎಂದು ಹೇಳಿದರು.

    ಇತ್ತ ವಿಜಯಪುರದಲ್ಲಿ ಮಾತನಾಡಿದ ಗೃಹಸಚಿವ ಎಂಬಿ ಪಾಟೀಲ್, ಮಂಡ್ಯದಿಂದ ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಒಳ್ಳೆಯದು. ಅವರ ಪರ ನಾನು ಪ್ರಚಾರ ಮಾಡುತ್ತೇನೆ. ಆದರೆ ಟಿಕೆಟ್ ನೀಡುವ ನಿರ್ಧಾರ ಹೈಕಮಾಂಡ್ ಮಾಡುತ್ತೆ ಎಂದರು.

    ಸುಮಲತಾ ಅವರು ಸ್ಪರ್ಧೆ ಮಾಡಲು ಟಿಕೆಟ್ ಕೇಳುವುದು ತಪ್ಪೆನಲ್ಲಾ. ಆದರೆ ಕಾಂಗ್ರೆಸ್ ಮೈತ್ರಿ ರಾಜಕಾರಣದಲ್ಲಿ ಸರ್ಕಾರ ನಡೆಸುತ್ತಿರುವ ಕಾರಣ ನಮಗೆ ಟಿಕೆಟ್ ಕೇಳಿದ್ದೇವೆ. ಅವರು ಸ್ಪರ್ಧೆ ಮಾಡುವ ಬಗ್ಗೆ ನಮಗೆ ಯಾವುದೇ ಅತಂಕವಿಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಿಂದ ನಿಖಿಲ್ ಸ್ಪರ್ಧೆ – ಪರೋಕ್ಷವಾಗಿ ತಿಳಿಸಿದ ದೇವೇಗೌಡ

    ಮಂಡ್ಯದಿಂದ ನಿಖಿಲ್ ಸ್ಪರ್ಧೆ – ಪರೋಕ್ಷವಾಗಿ ತಿಳಿಸಿದ ದೇವೇಗೌಡ

    ಮಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುವದನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪರೋಕ್ಷವಾಗಿ ಖಚಿತಪಡಿಸಿದ್ದಾರೆ.

    ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಕುರಿತು ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಕೂಡ ಟಿಕೆಟ್ ಇಚ್ಛೆ ಹೊಂದಿದ್ದಾರೆ. ಜೊತೆಗೆ ನಿಖಿಲ್ ಅವರನ್ನು ರಾಜಕೀಯಕ್ಕೆ ಬರುವಂತೆ ಜಿಲ್ಲೆಯ ಜನತೆ ಒತ್ತಾಯಿಸುತ್ತಿದ್ದಾರೆ ಎಂದ ಅವರು, ಮಂಡ್ಯದಲ್ಲಿ ಹಿಂದಿನಿಂದಲೂ ಜೆಡಿಎಸ್ ಪ್ರಬಲವಾಗಿದೆ. ನಿಖಿಲ್ ಸ್ಪರ್ಧಿಸುವುದಾದರೆ ಸ್ಪರ್ಧೆ ಮಾಡಲಿ ಎಂದು ಹೇಳಿದರು. ಇದನ್ನು ಓದಿ: ಜೆಡಿಎಸ್ ಪಕ್ಷದಿಂದಲೇ ಸುಮಲತಾಗೆ ಟಿಕೆಟ್ ಕೊಡಬಹುದು: ಚಲುವರಾಯ ಸ್ವಾಮಿ

    ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂದರು ಹೇಳಿದರು. ಹೀಗಾಗಿ ಸ್ಪರ್ಧಿಸುವಂತೆ ಹೇಳಿದ್ದೇನೆ. ತಾತ ಪ್ರಜ್ವಲ್ ರೇವಣ್ಣ ಅವರಿಗೆ ಮಾತ್ರ ಆಸಕ್ತಿವಹಿಸುತ್ತಾರೆಂದು ಎಂದುಕೊಳ್ಳುವುದು ಬೇಡ. ಅದಕ್ಕಾಗಿ ನಿಖಿಲ್‍ಗೂ ಅವಕಾಶ ಕೊಡಬೇಕೆಂದು ನಿರ್ಧರಿಸಿದ್ದೇನೆ ಎಂದು ಹೇಳಿದರು. ಇದನ್ನು ಓದಿ: ಎಡಬಿಡಂಗಿಗಳು ಮೈತ್ರಿ ಅಭ್ಯರ್ಥಿ ವಿರೋಧಿಸ್ತಾರೆ: ಕಾಂಗ್ರೆಸ್ ವಿರುದ್ಧ ಸುರೇಶ್‍ಗೌಡ ಕಿಡಿ

    ನಮ್ಮದು ರಾಜಕಿಯ ಕುಟುಂಬ ಅಲ್ಲ, ರೈತರ ಕುಟುಂಬ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ರಾಜಕೀಯಕ್ಕೆ ಬರುವುದು ನನಗೆ ಇಷ್ಟವಿರಲಿಲ್ಲ. ರೇವಣ್ಣನಿಗೋಸ್ಕರ ಇಂಡಸ್ಟ್ರಿಯಲ್ ಸೈಟ್ ಖರೀದಿಸಿದ್ದೆ. ಆದರೆ ರೇವಣ್ಣ ಅದನ್ನು ಬಿಟ್ಟು ರಾಜಕೀಯಕ್ಕೆ ಬಂದ. ಪ್ರಜ್ವಲ್‍ಗೂ ರಾಜಕೀಯಕ್ಕೆ ಬರಬೇಡ ಎಂ.ಟೆಕ್ ಮಾಡುವಂತೆ ಹೇಳಿದ್ದೆ. ಆದರೆ ಅವನು ಮನಸ್ಸು ಮಾಡಲಿಲ್ಲ. ಹೀಗಾಗಿ ಪಕ್ಷದ ಮುಖಂಡರ ಜೊತೆ ಮಾತಾಡಿದ್ದೇನೆ. ದೇವರ ಇಚ್ಛೆ ಏನೋ, ಗೊತ್ತಿಲ್ಲ. ಎಲ್ಲರೂ ರಾಜಕೀಯಕ್ಕೆ ಬಂದಿದ್ದಾರೆ ಎಂದು ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡರು.

    ಲೋಕಸಭಾ ಚುನಾವಣೆಗೆ ಒಂದು ವಾರದಲ್ಲಿ ದಿನಾಂಕ ನಿಗದಿಯಾಗಲಿದೆ. ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಬರುವ ಊಹಾಪೋಹಗಳು ಅಷ್ಟೇ. ನಾವು ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವನ್ನು ಕೊಡಲ್ಲ. ರಾಷ್ಟ್ರೀಯ ಪಕ್ಷದ ಮುಖಂಡರು ಬಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಲು ಒತ್ತಾಯಿಸಿದರು. ಬಿಜೆಪಿಯ ಪ್ರಗತಿಯನ್ನು ತಡೆಗಟ್ಟುವ ಉದ್ದೇಶದಿಂದ ಮೈತ್ರಿಯಾಗಿದ್ದೇವೆ. ಮೈತ್ರಿಗೆ ಅಪಾಯವಾಗುವ ರೀತಿ ಅವಕಾಶ ಕೊಡಲ್ಲ ಎಂದು ತಿಳಿಸಿದರು.

    ರಾಜದಲ್ಲಿ 12 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‍ಗೆ ಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‍ಗೆ ಹೇಳಿದ್ದೇನೆ. ಆದರೆ ಮಾತುಕತೆಯ ಬಳಿಕ ಅಂತಿಮ ತೀರ್ಮಾನಕ್ಕೆ ಬರುತ್ತೇವೆ. ಜೊತೆಗೆ ತೀರ್ಮಾನವನ್ನು ಸೌಹಾರ್ದಯುತವಾಗಿ ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚುನಾವಣೆಗೆ ಸ್ಪರ್ಧಿಸಿದ್ರೆ ಮಂಡ್ಯದಿಂದ ಮಾತ್ರ, ಇಲ್ದಿದ್ರೆ ಮನೇಲಿ ಇರ್ತಿನಿ- ಸುಮಲತಾ

    ಚುನಾವಣೆಗೆ ಸ್ಪರ್ಧಿಸಿದ್ರೆ ಮಂಡ್ಯದಿಂದ ಮಾತ್ರ, ಇಲ್ದಿದ್ರೆ ಮನೇಲಿ ಇರ್ತಿನಿ- ಸುಮಲತಾ

    ಮಂಡ್ಯ: ಚುನಾವಣೆಗೆ ಸ್ಪರ್ಧೆ ಮಾಡಿದ್ರೆ ಮಂಡ್ಯದಿಂದ ಮಾತ್ರ, ಇಲ್ಲದಿದ್ರೆ ಮನೆಯಲ್ಲಿ ಇರುತ್ತೇನೆ ಎಂದು ಸುಮಲತಾ ಅಂಬರೀಶ್ ಖಡಕ್ಕಾಗಿ ಹೇಳಿದ್ದಾರೆ.

    ಇಂದಿನಿಂದ 5 ದಿನಗಳ ಕಾಲ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವ ಅವರು ಮಂಡ್ಯದ ಮುತ್ತೇಗೆರೆಯಲ್ಲಿ ಮಾತನಾಡಿ, ನನಗೆ ಜನಾಭಿಪ್ರಾಯ ಮುಖ್ಯ. ಹೀಗಾಗಿ ಹೋದ ಕಡೆ ಎಲ್ಲ ಅಂಬರೀಶ್ ಫಾಲೋವರ್ಸ್, ಪಕ್ಷದ ಕಾರ್ಯಕರ್ತರನ್ನು ಮಾತನಾಡಿಸುತ್ತಿದ್ದೇನೆ. ರೆಸ್ಪಾನ್ಸ್ ನೂರಕ್ಕೆ ನೂರು ಪಾಸಿಟಿವ್ ಆಗಿದೆ. ನೀವೇ ಚುನಾವಣೆಗೆ ನಿಂತು ಸಂಸದರಾಗಬೇಕು ಎಂದು ಜನ ಹೇಳುತ್ತಿದ್ದಾರೆ. ಆದರೆ ಕೆಲವು ಕಾಂಗ್ರೆಸ್ ನಾಯಕರು ಮೈತ್ರಿ ಧರ್ಮ ಪಾಲನೆ ಮಾಡಬೇಕು ಅಂತಿದ್ದಾರೆ. ಅವರ ಹೆಸರು ನಾನು ಹೇಳಲ್ಲ ಅಂದ್ರು.

    ನನಗೆ ವಿವಾದ, ದ್ವೇಷದ ರಾಜಕೀಯ ಇಷ್ಟ ಆಗಲ್ಲ. ಹೀಗಾಗಿ ಯಾರು ಏನೇ ಮಾತನಾಡಿದ್ರು ನಾನು ಪ್ರತಿಕ್ರಿಯೆ ನೀಡಲ್ಲ. ನಾನು ಏನಾದರೂ ಮಾತನಾಡುವುದಿದ್ರೆ ನೇರವಾಗಿ ಜನರ ಬಳಿ ಮಾತನಾಡುತ್ತೇನೆ. ಚುನಾವಣೆಗೆ ನಿಲ್ಲುವ ಬಗ್ಗೆ ಪಕ್ಷಕ್ಕಿಂತ ನನಗೆ ಅಂತಿಮವಾಗಿ ಜನರ ಅಭಿಪ್ರಾಯ ಮುಖ್ಯ. ನಾನು ಜನರ ಆಸೆಯಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ರು.

    ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಬಯಸಿದ್ದೇನೆ. ಅದು ಆಗದಿದ್ದಾಗ ನನ್ನ ನಿರ್ಧಾರ ಏನು ಎಂದು ಅಂದು ತಿಳಿಸುತ್ತೇನೆ. ನನ್ನ ಮನವಿಗೆ ಕೆಲವು ಕಾಂಗ್ರೆಸ್ ಮುಖಂಡರು ಪಾಸಿಟಿವ್ ಆಗಿದ್ದಾರೆ. ಮತ್ತೆ ಕೆಲವರು ಮೈತ್ರಿ ಧರ್ಮ ಪಾಲನೆ ಅಂತಾರೆ. ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಅಂತಾರೆ. ಆದರೆ ಅವರಿಗೆ ನಾನು ಸ್ಪರ್ಧೆ ಮಾಡಿದ್ರೆ ಅದು ಮಂಡ್ಯದಿಂದ. ಇಲ್ಲದಿದ್ರೆ ಮನೆಯಲ್ಲಿರುತ್ತೇನೆ ಎಂದು ತಿಳಿಸಿದ್ದೇನೆ ಎಂದು ಹೇಳಿದ್ರು.

    ಮಂಡ್ಯದ ಪ್ರತಿಯೊಬ್ಬರ ಮನೆ ನಮ್ಮ ಮನೆಯಿದ್ದಂತೆ ಎಂದು ಮಂಡ್ಯ ಜನರ ಬಗ್ಗೆ ಅಭಿಮಾನದ ಮಾತನಾಡಿದ್ರು. ಇದೇ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅನುಕಂಪದ ಮಾತಿಗೆ ಮರುಳಾಗಬೇಡಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಯಾರ ಹೇಳಿಕೆಗೂ ಪ್ರತಿಕ್ರಿಯೆ ನೀಡಲ್ಲ. ಆ ರೀತಿಯ ಸಂಸ್ಕಾರ ಅಂಬರೀಶ್ ಬೆಳೆಸಿಕೊಂಡಿಲ್ಲ. ನಾವು ಅವರ ಮಾರ್ಗದರ್ಶನದಲ್ಲಿ ಹೋಗುತ್ತಿದ್ದೇವೆ ಅಂದ್ರು.

    ಅಂಬರೀಶ್ ಜಿಲ್ಲೆಗೆ ಕೆಲಸ ಮಾಡಿಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಅಂಬರೀಶ್ ಅವರು ಯಾವಾಗಲೂ ನಮ್ಮ ಸಾಧನೆ ಬಗ್ಗೆ ನಾವು ಮಾತನಾಡಬಾರದು, ನಮ್ಮ ಸಾಧನೆಯೇ ನಮ್ಮ ಬಗ್ಗೆ ಮಾತನಾಡಬೇಕು ಅಂತಿದ್ರು. ಅವರು ಯಾವತ್ತೂ ಪಬ್ಲಿಸಿಟಿ ಇಷ್ಟಪಟ್ಟಿಲ್ಲ. ಹಾಗಾಗಿ ಅವರ ಸಾಧನೆ ಏನಿದೆ ಜನಕ್ಕೆ ಗೊತ್ತು ಅವರೇ ಉತ್ತರ ಕೊಡ್ತಾರೆ ಅಂದ್ರು. ಇದೇ ವೇಳೆ ನಾನು ಇಲ್ಲದಿದ್ರೆ ಪಾರ್ಥೀವ ಶರೀರ ಮಂಡ್ಯಕ್ಕೆ ತರಲು ಆಗುತ್ತಿರಲಿಲ್ಲ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ಮಾತನಾಡಲು ಇಷ್ಟಪಡಲ್ಲ ಎಂದಷ್ಟೇ ಹೇಳಿ ಸುಮ್ಮನಾದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಕ್ಷೇತರರಾಗಿ ಸ್ಪರ್ಧಿಸಿದ್ರೂ ಸುಮಲತಾ ಪರವಾಗಿಯೇ ಕೆಲಸ ಮಾಡ್ತೇವೆ- ಕೆಪಿಸಿಸಿ ಸದಸ್ಯ

    ಪಕ್ಷೇತರರಾಗಿ ಸ್ಪರ್ಧಿಸಿದ್ರೂ ಸುಮಲತಾ ಪರವಾಗಿಯೇ ಕೆಲಸ ಮಾಡ್ತೇವೆ- ಕೆಪಿಸಿಸಿ ಸದಸ್ಯ

    ಮಂಡ್ಯ: ಒಂದು ವೇಳೆ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೇ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ರೆ, ನಾವು ಅವರ ಪರವಾಗಿಯೇ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮೈತ್ರಿಯಾದರೂ ಮಂಡ್ಯದಲ್ಲಿ ಮಾತ್ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸಾಧ್ಯವಿಲ್ಲ ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸಿದ್ದಾರೆ.

    ಇಂದಿನಿಂದ ಐದು ದಿನಗಳ ಕಾಲ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪ್ರವಾಸ ಮಾಡಲಿದ್ದು, ಕಾಂಗ್ರೆಸ್ ಮುಖಂಡರು ಮತ್ತು ಅಂಬರೀಶ್ ಅಭಿಮಾನಿಗಳನ್ನು ಭೇಟಿ ಮಾಡಿ ಚುನಾವಣಾ ಸಂಬಂಧ ಮಾತುಕತೆ ನಡೆಸಲಿದ್ದಾರೆ.

    ಮಂಡ್ಯ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿ ಸುಮಲತಾ ಅಂಬರೀಶ್ ಈಗಾಗಲೇ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಮುಖಂಡರ ಭೇಟಿ ಮಾಡಿದ್ದಾರೆ. ಆದರೆ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಿಲ್‍ಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ಈಗಾಗಲೇ ಮೈತ್ರಿ ಪಕ್ಷದಲ್ಲಿ ತೆರೆಮರೆ ಮಾತುಕತೆ ನಡೆಯುತ್ತಿದೆ.

    ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹಿಂದಿನಿಂದಲೂ ಬದ್ಧ ವೈರಿಗಳಾಗಿದ್ದು, ಸುಮಲತಾ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ರು ಅವರ ಪರ ಚುನಾವಣೆ ಮಾಡಲು ಬಹುತೇಕ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇಷ್ಟೆಲ್ಲ ಬೆಳವಣಿಗೆ ನಡುವೆ ಸುಮಲತಾ ಅವರು ಇಂದಿನಿಂದ ಐದು ದಿನಗಳ ಮಂಡ್ಯ ಪ್ರವಾಸ ಮಾಡುತ್ತಿದ್ದು ಕುತೂಹಲ ಮೂಡಿಸಿದೆ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಮಾಡಲು ಸಾಧ್ಯವಾಗದ ಜಿಲ್ಲೆಯ ಅಭಿವೃದ್ಧಿಗೆ ನಾನು ಚಾಲನೆ ನೀಡಿದ್ದೇನೆ: ಸಿಎಂ ಎಚ್‍ಡಿಕೆ

    ಅಂಬಿ ಮಾಡಲು ಸಾಧ್ಯವಾಗದ ಜಿಲ್ಲೆಯ ಅಭಿವೃದ್ಧಿಗೆ ನಾನು ಚಾಲನೆ ನೀಡಿದ್ದೇನೆ: ಸಿಎಂ ಎಚ್‍ಡಿಕೆ

    – ಆತ್ಮೀಯರ ನಡುವೆ ಬಿರುಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ

    ಮಂಡ್ಯ: ಜಿಲ್ಲೆಯ ಜನರ ಋಣದ ಭಾರ ನನ್ನ ಮೇಲಿದ್ದು, ಆ ಋಣವನ್ನು ತೀರಿಸುವ ಕಾರ್ಯ ನನ್ನ ಮೇಲಿದೆ. ಅಭಿವೃದ್ಧಿಯ ವಿಚಾರಕ್ಕೆ ಜಿಲ್ಲೆಗೆ ದೊಡ್ಡ ಅನಾಯ್ಯವಾಗಿದ್ದು, ಅಂಬರೀಶ್ ಅವರ ಕಾಲದಲ್ಲಿ ಮಾಡಲು ಸಾಧ್ಯವಾಗದ ಕಾರ್ಯಗಳಿಗೆ ನಾನು ಚಾಲನೆ ಕೊಟ್ಟಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಮಂಡ್ಯ ಅಭಿವೃದ್ಧಿ ಯೋಜನೆಗಳ ಚಾಲನೆ ನೀಡುವ ಸಂಬಂಧ ಇಂದು ನಗರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ದೇಶಿಸಿ ಸಿಎಂ ಕುಮಾರಸ್ವಾಮಿ ಅವರು ಮಾತನಾಡಿದರು. ಅಂಬರೀಶ್ ಹಾಗೂ ನಾನು ಆತ್ಮೀಯ ಸ್ನೇಹಿತರು. ಅವರು ನಿಧನ ಹೊಂದಿದ್ದ ಸಂದರ್ಭದಲ್ಲಿ ಅವರಿಗೆ ನೀಡಿದ ಗೌರವ ಇಡೀ ಜಿಲ್ಲೆಗೆ ನೀಡಿದ ಗೌರವ. ಇದನ್ನು ಅಂಬರೀಶ್ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು. ಅಂದು ಮಂಡ್ಯ ಜಿಲ್ಲೆಗೆ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಕರೆತರುವುದು ಬೇಡ ಎಂದವರು ಇಂದು ಈ ಮಣ್ಣಿನ ಬಗ್ಗೆ ಪ್ರೀತಿ ತೋರಿಸುತ್ತಿದ್ದಾರೆ. ಅಂಬರೀಶ್ ಅವರಿಂದ ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡುತ್ತಿದ್ದು, ನಿಮ್ಮ ಋಣವನ್ನು ತೀರಿಸುವ ಕಾರ್ಯವನ್ನು ಮಾಡಿದ್ದೇನೆ ಎಂದರು.

    ನನ್ನ ಕುಟುಂಬವನ್ನು ಇಂದು ಬೀದಿಗೆ ಎಳೆದಿದ್ದಾರೆ. ನಾನು ಎಂದಾದರೂ ನನ್ನ ಮಗನನ್ನು ರಾಜಕೀಯಕ್ಕೆ ಕರೆತರುವ ಬಗ್ಗೆ ಮಾತನಾಡಿದ್ದೇನಾ ಎಂದು ಪ್ರಶ್ನಿಸಿದರು. ಅಲ್ಲದೇ ಜಿಲ್ಲೆಯ ಅಭಿವೃದ್ಧಿ ನನ್ನ ಜೀವನದ ಗುರಿಯಾಗಿದ್ದು, ಕಳೆದ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ನಮ್ಮನ್ನು ಗೆದ್ದು ತಂದಿದ್ದೀರಿ. ನಿಮ್ಮ ಆಶೀರ್ವಾದದಿಂದ ಈ ಜಾಗದಲ್ಲಿ ನಿಂತಿದ್ದೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಇದನ್ನು ಮರೆಯಲ್ಲ. ಕೇವಲ ಮಂಡ್ಯ ಜಿಲ್ಲೆಗಾಗಿ ಕಾರ್ಯಕ್ರಮ ಮಾಡುತ್ತೇನೆ ಎಂದು ಸಣ್ಣತನದ ಮಾತನಾಡುತ್ತಾರೆ. ಆದರೆ ಬೇರೆ ಬೇರೆ ಜಿಲ್ಲೆಗಳಿಗೆ ಯಾವ ಕೊಡುಗೆ ನೀಡಿದ್ದೇನೆ ನನಗೆ ಗೊತ್ತಿದೆ ಎಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರಿಸಿದರು.

    ಬದುಕಿರುವುದೇ ನಿಮಗಾಗಿ: ಮತ್ತೆ ತಮ್ಮ ಬದುಕಿನ ಕುರಿತು ಪ್ರಸ್ತಾಪ ಮಾಡಿದ ಸಿಎಂ ಎಚ್‍ಡಿಕೆ ನಾನು ಬದುಕಿರುವುದು ನಿಮಗಾಗಿ, ನಾಡಿನ ಜನತೆಗಾಗಿ ಎಂದರು. ಅಲ್ಲದೇ ರೈತರ ಸಾಲಮನ್ನಾ ವಿಚಾರದಲ್ಲಿ ನಾನು ಎಂದು ಸುಳ್ಳು ಹೇಳಿಲ್ಲ. ನಿನ್ನೆ ಬೆಳಗ್ಗೆ ಹತ್ತು ಗಂಟೆವರೆಗೂ 6 ಲಕ್ಷದ 40 ಸಾವಿರ ರೈತ ಕುಟುಂಬಗಳಿಗೆ 4 ಸಾವಿರದ 103 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇನೆ. ರಾಜ್ಯ ಸರ್ಕಾರದ ಖಜಾನೆಯಲ್ಲಿ ಇನ್ನೂ 6 ಸಾವಿರ ದುಡ್ಡು ಇಟ್ಟಿದ್ದೇನೆ. ಕೇಂದ್ರ ಪ್ರಧಾನಿ ರೀತಿ ನಾನು ಮಾತನಾಡಲ್ಲ ಎಂದು ಕಿಡಿಕಾರಿದರು.

    ರೈತರ ಸಾಲಮನ್ನಾ ಮಾಡಿದರೆ ಮಾತ್ರ ರೈತರು ಆರಾಮವಾಗಿ ಇರುತ್ತಾರೆ ಎಂಬ ಭ್ರಮೆ ನನಗಿಲ್ಲ. ಸಮಗ್ರ ಅಭಿವೃದ್ಧಿಗಾಗಿ ನಾನು ದುಡಿಯುತ್ತೇನೆ. ಗಿರವಿ ಇಟ್ಟಿರುವ ಒಡವೆಗಳನ್ನ ಬಿಡಿಸಿಕೊಡುವ ನಿಟ್ಟಿನಲ್ಲಿ ಹೊಸ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಯೋಜನೆ ಮುಗಿಯುವವರೆಗೂ ಯಾವುದೇ ಮಾನಸಿಕ ಹಿಂಸೆ ಕೊಟ್ಟರೂ ಅಧಿಕಾರದಲ್ಲಿ ಇರುತ್ತೇನೆ. ಆದರೆ ಜಿಲ್ಲೆಯ ಟಿಕೆಟ್ ವಿಚಾರದಲ್ಲಿ ಈ ವೇದಿಕೆಯಲ್ಲಿ ಪ್ರಸ್ತಾಪ ಮಾಡಲ್ಲ. ಅದಕ್ಕೆ ರಾಜಕೀಯ ವೇದಿಕೆ ಇದೆ. ಆಗ ಮಾತನಾಡುತ್ತೇನೆ ಎಂದರು.

    ಜಿಲ್ಲೆಯ ಜನ ಹಣ ಪಡೆದು ಮೋಸ ಹೋಗುವುದಿಲ್ಲ. ಯಾವುದೇ ಆಮಿಷಗಳಿಗೆ ಒಳಗಾಗಲ್ಲ. ಇದೇ ರೀತಿ ನಿಮ್ಮ ಬೆಂಬಲ ನಮಗೆ ನೀಡಿ ಯಾವುದೇ ಕಾರಣಕ್ಕೂ ಅನುಕಂಪದ ಮಾತುಗಳಿಗೆ ಮರುಳಾಗಬೇಡಿ. ನಿಜವಾಗಿ ಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಡಿ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ಕೊಟ್ಟರು.

    ಕನ್ನಡಿಗ ಮತ್ತೊಮ್ಮೆ ಪ್ರಧಾನಿ: ರಾಜ್ಯದಲ್ಲಿ 20 ಸ್ಥಾನಗಳಿಗೆ ಹೆಚ್ಚು ಸ್ಥಾನ ಪಡೆದುಕೊಂಡರೆ ದೆಹಲಿಯಲ್ಲಿ ಮತ್ತೊಮ್ಮೆ ಕನ್ನಡಿಗರೊಬ್ಬರು ಪ್ರಧಾನಿಯಾಗ ಬಹುದು ಎಂದು ಹೇಳಿದ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ ಆಗುವ ವಿಚಾರವನ್ನು ಬಿಚ್ಚಿಟ್ಟರು. ಅಲ್ಲದೇ ದೇವೇಗೌಡರು ಪ್ರಧಾನಿ ಆಗಿದ್ದಾಗ ಒಂದೇ ಒಂದು ಯೋಧರ ಕುಟುಂಬ ಅನಾಥರಾಗುವ ಘಟನೆ ನಡೆಯಲಿಲ್ಲ. ರೈತರ ಸಾಲಮನ್ನಾ ಮಾಡುವುದು ಪಾಪದ ಕೆಲಸ ಎನ್ನುವ ಪ್ರಧಾನಿಗೆ ಸರಿಯಾದ ಉತ್ತರ ಕೊಡಿ ಎಂದರು.

    ಗುರು ಪತ್ನಿಗೆ ನಾಳೆಯೇ ಉದ್ಯೋಗ: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹುತಾತ್ಮ ಗುರು ಪತ್ನಿ ಕಲಾವತಿಯರಿಗೆ ಸಂತ್ವಾನ ಹೇಳಿದ ಸಿಎಂ ಕುಮಾರಸ್ವಾಮಿ ಅವರು, ಕಲಾವತಿಯವರು ಗೌರವಯುತವಾಗಿ ಬದುಕು ನಡೆಸಲು ಕೆಲಸ ನೀಡುವ ಆಶ್ವಾಸನೆ ನೀಡಿದ್ದೆ. ಅದರಂತೆ ಅವರಿಗೆ ಬೆಂಗಳೂರಿಗೆ ಬರಲು ಹೇಳಿದ್ದೇನೆ. ನಾಳೆಯೇ ಕೆಲಸ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಲ್ಲಿ ಮನೆ ಹುಡುಕ್ತಿರುವ ಸುಮಲತಾ ಅಂಬರೀಶ್..!

    ಮಂಡ್ಯದಲ್ಲಿ ಮನೆ ಹುಡುಕ್ತಿರುವ ಸುಮಲತಾ ಅಂಬರೀಶ್..!

    ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸುಮಲತಾ ಅವರು ಮಂಡ್ಯದಲ್ಲಿ ಮನೆ ಹುಡುಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂಬ ಮಾತು ಕೇಳಿ ಬರುತ್ತಿದೆ.

    ಮಂಡ್ಯದಲ್ಲಿ ಸುಮಲತಾ ಅವರು ಕಾಂಗ್ರೆಸ್ ಅಥವಾ ಪಕ್ಷೇತರರಾಗಿ ಸುಮಲತ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಹೀಗಾಗಿ ಅವರು ಮಂಡ್ಯದಲ್ಲಿ ಮನೆ ಹುಡುಕುತ್ತಿದ್ದಾರೆ. ಸುಮಲತಾ ಅವರು ತಮ್ಮ ಆಪ್ತರಿಗೆ ಮಂಡ್ಯದಲ್ಲಿ ಮನೆ ನೋಡಲು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಮನೆ ನೋಡಲು ಹೇಳಿದ ಸುಮಲತಾ ಅವರಿಗೆ ಬಾಡಿಗೆ ಮನೆ ಬೇಡ ಸ್ವಂತ ಮನೆ ಕೊಂಡುಕೊಳ್ಳಿ ಎಂದು ಆಪ್ತರು ಸಲಹೆ ನೀಡಿದ್ದಾರೆ. ಬಾಡಿಗೆ ಮನೆ ಮಾಡಿದರೆ ಮಾಜಿ ಸಂಸದೆ ರಮ್ಯಾ ಅವರಂತೆ ನೀವು ಕೂಡ ಚುನಾವಣೆ ಮುಗಿದ ಮೇಲೆ ಹೊರಟು ಹೋಗುತ್ತೀರಿ ಅಂತ ಅಪಪ್ರಚಾರ ಮಾಡುತ್ತಾರೆ. ಹೀಗಾಗಿ ಸ್ವಂತಕ್ಕೆ ಮನೆ ತೆಗೆದುಕೊಳ್ಳಿ. ಚುನಾವಣೆ ಇರಲಿ ಬಿಡಲಿ ಮಂಡ್ಯದಲ್ಲಿ ಇದ್ದು ಜನರ ಕಷ್ಟಕ್ಕೆ ಸ್ಪಂದಿಸಲು ಸ್ವಂತ ಮನೆ ಮಾಡಿ ಎಂದು ಅಂಬರೀಶ್ ಅಭಿಮಾನಿಗಳು ಮತ್ತು ಬೆಂಬಲಿಗರು ಸುಮಲತಾ ಅವರಿಗೆ ಮನವಿ ಮಾಡಿದ್ದಾರೆ.

    ಆಪ್ತರು, ಅಭಿಮಾನಿಗಳು ಮಾಡಿದ ಮನವಿಯಿಂದ ಸುಮಲತಾ ಅವರು ಸ್ವಂತಕ್ಕೆ ಕೊಂಡುಕೊಳ್ಳಲು ಮಂಡ್ಯದಲ್ಲಿ ಮನೆ ಹುಡುಕುತ್ತಿದ್ದಾರೆ. ಈಗಾಗಲೇ ಕಟ್ಟಿರುವ ಮನೆಯನ್ನೇ ಕೊಂಡುಕೊಳ್ಳಲು ಅಂತಹ ಮನೆ ಹುಡುಕಲು ಬೆಂಬಲಿಗರಿಗೆ ಸುಮಲತಾ ಅವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

    ಈ ಹಿಂದೆ ಮಂಡ್ಯದಿಂದ ಸ್ಪರ್ಧೆ ಮಾಡುವಾಗ ಮಾಜಿ ಸಂಸದೆ ರಮ್ಯಾ ಅವರು ಕೂಡ ಬಾಡಿಗೆ ಮನೆ ಮಾಡಿಕೊಂಡು ಪ್ರಚಾರ ಮಾಡುತ್ತಿದ್ದರು. ಆದರೆ ಚುನವಾಣೆಯಲ್ಲಿ ಸೋತ ಬಳಿಕ ಮನೆ ಖಾಲಿ ಮಾಡಿಕೊಂಡು ಹೋಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv