Tag: ಸುಮಲತಾ ಅಂಬರೀಶ್

  • ಸಿದ್ದರಾಮಯ್ಯ ಭೇಟಿಯ ಕಾರಣ ರಿವೀಲ್ ಮಾಡಿದ್ರು ಸುಮಲತಾ

    ಸಿದ್ದರಾಮಯ್ಯ ಭೇಟಿಯ ಕಾರಣ ರಿವೀಲ್ ಮಾಡಿದ್ರು ಸುಮಲತಾ

    ಬೆಂಗಳೂರು: ಇತ್ತೀಚೆಗಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸುಮಲತಾ ಅಂಬರೀಶ್ ಭೇಟಿ ಮಾಡಿದ್ದು, ತೀವ್ರ ಕತೂಹಲ ಹುಟ್ಟಿಸಿತ್ತು. ಇದೀಗ ತಾನು ಯಾಕೆ ಮಾಜಿ ಸಿಎಂ ಅವರನ್ನು ಭೇಟಿ ಮಾಡಿದ್ದೇನೆ ಎಂಬುದನ್ನು ಸ್ವತಃ ಸುಮಲತಾ ಅವರೇ ರಿವೀಲ್ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ನನ್ನ ಬಗ್ಗೆ ಒಂದು ಹೇಳಿಕೆ ನೀಡಿದ್ದರು. ಈ ಕಾರಣಕ್ಕೆ ನಾನು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದಾಗಿ ತಿಳಿಸಿದ್ರು.

    ಕುಮಾರಸ್ವಾಮಿಯವರು ಹೇಳಿಕೆ ಕೊಟ್ಟು ಬಹಳ ದಿನಗಳು ಆದ ಬಳಿಕ ನಾನು ಸಿದ್ದರಾಮಯ್ಯ ಅವರ ಮನೆಗೆ ಭೇಟಿ ಕೊಟ್ಟಿರುವುದು. ಎರಡೂವರೆ ತಿಂಗಳ ಹಿಂದೆ ಎಚ್‍ಡಿಕೆ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆಯನ್ನು ಅವರು ತುಂಬಾ ಮುಕ್ತವಾಗಿಯೇ ಹೇಳಿದ್ದರು ಅಂದ್ರು.

    ಎಚ್‍ಡಿಕೆ ಏನ್ ಹೇಳಿದ್ದರು..?
    ಸುಮಲತಾ ಅವರು ನಮ್ಮ ಪಕ್ಷದವರು ಅಲ್ವಲ್ಲ. ಅವರಿಗೆ ಯಾಕೆ ಟಿಕೆಟ್ ಕೊಡಬೇಕು. ಸುಮಲತಾ ಅವರಿಗೆ ಏನೇ ಇದ್ರೂ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಬಹುದೇನೋ. ಅವರನ್ನೇ ಹೋಗಿ ಕೇಳಲಿ. ನಮ್ಮದೇ ಆದ ಶಕ್ತಿ ಮಂಡ್ಯದಲ್ಲಿದೆ. ಹೀಗಾಗಿ ನಾವು ನಮ್ಮದೇ ಅಭ್ಯರ್ಥಿಯನ್ನು ಅಲ್ಲಿ ನಿಲ್ಲಿಸ್ತೀವಿ. ನಾವು ಬೇರೆ ಯಾರಿಗೂ ಟಿಕೆಟ್ ಕೊಡಲ್ಲ ಎನ್ನುವ ಮಾತನ್ನು ಎಚ್ ಡಿಕೆ ಹೇಳಿದ್ದರು.

    ಅದಾದ ಬಳಿಕ ಮಂಡ್ಯಕ್ಕೆ ಸುಮಲತಾ ಅವರ ಕೊಡುಗೆ ಏನು ಎಂದು ಕೇಳಿದ್ರು. ಅಂಬರೀಶ್ ಅವರ ಕೊಡುಗೆ ಏನು..? ಅದೂ ಶೂನ್ಯ ಎಂದು ಹೇಳಿದ್ದರು. ಇದನ್ನೆಲ್ಲಾ ಇಟ್ಟುಕೊಂಡು ಹೇಗೆ ನಾನು ಅವರನ್ನು ಅಪ್ರೋಚ್ ಮಾಡಲಿ. ನಿಮ್ಮದೇನೂ ಇಲ್ಲ. ನೀವು ಯಾರೂ ಇಲ್ಲ ಅನ್ನೋವಾಗ ನಾನು ಅವರ ಕಡೆ ಹೋಗಿ ಕೇಳೋದ್ರಲ್ಲಿ ಅರ್ಥನೇ ಇಲ್ಲ ಎಂದರು.

  • ವೈಯಕ್ತಿಕವಾಗಿ ಯಾರಿಗೂ ನೋಯಿಸುವಂತಹ ಹೇಳಿಕೆ ನೀಡಬೇಡಿ- ಜನರಲ್ಲಿ ಸುಮಲತಾ ಮನವಿ

    ವೈಯಕ್ತಿಕವಾಗಿ ಯಾರಿಗೂ ನೋಯಿಸುವಂತಹ ಹೇಳಿಕೆ ನೀಡಬೇಡಿ- ಜನರಲ್ಲಿ ಸುಮಲತಾ ಮನವಿ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಇಂದು ಸುಮಲತಾ ಅಂಬರೀಶ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಜನರಲ್ಲಿ ಮನವಿ ಕೂಡ ಮಾಡಿಕೊಂಡರು.

    ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ ಅವರು, ವೈಯಕ್ತಿಕವಾಗಿ ಯಾರಿಗೂ ನೋಯಿಸುವಂತಹ ಮಾತುಗಳನ್ನು ಹೇಳುವುದು ಬೇಡ ಎಂದು ಮನವಿ ಮಾಡಿಕೊಂಡರು.

    ಯಾರು ಯಾರಿಗೂ ನೋಯಿಸುವಂತಹ ಮಾತುಗಳನ್ನು ಆಡುವ ಅಗತ್ಯವಿಲ್ಲ. ರಾಜಕಾರಣ ಇರಬಹುದು ಅಥವಾ ಚುನಾವಣೆ ಇರಬಹುದು. ಜನಕ್ಕೆ ಏನೇನು ಒಳ್ಳೆಯದನ್ನು ಮಾಡಬೇಕು ಎಂಬುದರ ಬಗ್ಗೆ ಮಾತಾಡೋಣ. ಅದನ್ನು ಬಿಟ್ಟು ವೈಯಕ್ತಿಕವಾಗಿ ನೋವು ಕೊಡುವಂತಹ ಮಾತುಗಳು ಬೇಕಾಗಿಯೇ ಇಲ್ಲ. ಯುವಕರಿಗೆ ಮಾರ್ಗದರ್ಶನವಾಗಿ ನಿಂತುಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಅಂದ್ರು.

    ನನ್ನ ಜೊತೆ ಇಂದು ಚಿತ್ರರಂಗ ಯಾಕೆ ನಿಂತಿದೆ ಅಂದ್ರೆ ನಮ್ಮಲ್ಲಿ ಒಗ್ಗಟ್ಟಿದೆ. ಹೀಗಾಗಿ ದರ್ಶನ್, ಯಶ್, ಪುನೀತ್ ಹಾಗೂ ದೊಡ್ಡಣ್ಣ ನಿಂತಿದ್ದಾರೆ. ಎಲ್ಲರ ಸಿನಿಮಾ ವಿಚಾರದಲ್ಲಿ ಸ್ಪರ್ಧೆ ಇರುತ್ತದೆ. ಆದ್ರೆ ನಾವು ವೈರಿಗಳಲ್ಲ ಎಂದು ತೋರಿಸೋಕೆ ಇಂದು ನಿಮ್ಮ ಮುಂದೆ ನಾವೆಲ್ಲ ಕೂತಿರೋದೇ ನಿದರ್ಶನವಾಗಿದೆ. ಹಾಗೆಯೇ ರಾಜಕಾರಣದಲ್ಲಿಯೂ ನಾವೇನು ವೈರಿಗಳಾಗಬೇಕಿಲ್ಲ. ಎಲ್ಲಾ ಒತ್ತಡಗಳಿಂದಲೂ ಒಂದು ಚುನಾವಣೆಯಲ್ಲಿ ನಾವು ಫೈಟ್ ಮಾಡಬಹುದು ಅನ್ನೋದನ್ನು ತೋರಿಸೋಣ. ಇದೇ ಒಂದು ಮೊದಲ ಹೆಜ್ಜೆಯಾಗಲಿ ಅನ್ನೋದು ನನ್ನ ಆಸೆಯಾಗಿದೆ ಅಂದ್ರು.

    ನನ್ನ ಬೆನ್ನೆಲುಬಾಗಿ ನಿಂತು ನನಗೆ ಧೈರ್ಯ ಕೊಟ್ಟಿರುವ ನನ್ನ ಕುಟುಂಬ, ದೇವರು ಕೊಟ್ಟಂತಹ ನನ್ನ ಸಹೋದರ ರಾಕ್ ಲೈನ್ ವೆಂಕಟೇಶ್, ಯಾವತ್ತೂ ದೊಡ್ಡ ಮಗನಂತಿರುವ ದರ್ಶನ್, ನೀವು ನನ್ನನ್ನು ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ, ಎಂತಹ ವಿಚಾರದಲ್ಲಿಯೂ ಮನವಿ ಎನ್ನುವ ಪದವನ್ನು ಬಳಸಬಾರದು. ನೀವು ಏನೇ ಕೇಳಿದ್ರೂ ನಾನು ರೆಡಿಯಾಗಿದ್ದೇನೆ ಎಂದು ಹೇಳಿದ್ದಾರೆ.

    ಯಶ್ ನಮ್ಮ ಮನೆ ಮಗನಾಗಿದ್ದು, ಅಂಬರೀಶ್ ಅವರಿಗೆ ತುಂಬಾ ಪ್ರೀತಿ. ನೀವೇನು ನಮ್ಮನ್ನು ಕರೆಯೋದು, ನಾನು ಬಂದು ಏನು ಮಾಡಬೇಕು ಎಂದು ನಿಮ್ಮನ್ನು ಕೇಳಬೇಕು ಅನ್ನೋ ಮಾತು ಹೇಳಿದ್ರು. ಇಂತಹ ಒಂದು ಕುಟುಂಬ, ಇಂತಹ ಮಕ್ಕಳು ಪಡೆಯಲು ನಾನು ಪುಣ್ಯ ಮಾಡಿರಬೇಕು ಎಂದರು.

  • ರೈತರಿಗೆ ನೀವು ಏನು ಮಾಡಿದ್ದೀರಿ: ಖಡಕ್ ಉತ್ತರ ಕೊಟ್ಟ ಸುಮಲತಾ

    ರೈತರಿಗೆ ನೀವು ಏನು ಮಾಡಿದ್ದೀರಿ: ಖಡಕ್ ಉತ್ತರ ಕೊಟ್ಟ ಸುಮಲತಾ

    ಬೆಂಗಳೂರು: ರೈತರಿಗಾಗಿಯೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರಳಾಗಿ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ತಾವು ಚುನಾವಣೆಗೆ ನಿಲ್ಲುವ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದರು. ಈ ವೇಳೆ ಮಾಧ್ಯಮದವರು ಮಂಡ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾದಾಗ ಎಷ್ಟು ಜನರಿಗೆ ಸುಮಲತಾ ಸಹಾಯ ಮಾಡಿದ್ದಾರೆ, ರೈತರ ಬಗ್ಗೆ ಏನು ಕಾಳಜಿ ತೋರಿದ್ದಾರೆ ಎಂಬ ಪ್ರಶ್ನೆಗಳು ಎದ್ದಿದೆ ಎಂದು ಕೇಳಿದರು.

    ಈ ಪ್ರಶ್ನೆಗೆ ಸುಮಲತಾ ಅವರು, ಅಧಿಕಾರದಲ್ಲಿದ್ದಾಗ ಯಾರು ಯಾರು ಏನು ಕಾಳಜಿ ತೋರಿಸುತ್ತಾರೆ ಅನ್ನೋದು ಕೇಳಬೇಕಾಗಿರುವ ಪ್ರಶ್ನೆಯಾಗಿದೆ. ಗೆದ್ದು ಬಂದ ಬಳಿಕ ಈ ಪ್ರಶ್ನೆ ಕೇಳಿದ್ರೆ ಅದಕ್ಕೊಂದು ಅರ್ಥವಿದೆ ಎಂದು ಹೇಳಿದರು.

    ಬಳಿಕ ತಮ್ಮ ಮಾತನ್ನು ಮುಂದುವರಿಸಿ, ಅಂಬರೀಶ್ ಇದ್ದಾಗ ಕಾವೇರಿ ನೀರಿನ ಸಮಸ್ಯೆ ಬಂದಾಗ ಕೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇಂತಹ ಒಂದು ರಾಜಕಾರಣವನ್ನು ಬೇರೇ ಯಾರಾದ್ರೂ ಒಬ್ಬ ರಾಜಕಾರಣಿ ಮಾಡಿದ್ದಾರೆ ಎಂದು ನನಗೆ ತೋರಿಸಿ, ನಾನೇ ಒಪ್ಪಿಕೊಂಡು ಬಿಡುತ್ತೇನೆ. ಹೀಗಾಗಿ ರೈತರ ಪರ ನಾವಿಲ್ಲ ಅನ್ನೋ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ರು.

    ಮಾರ್ಚ್ 20ಕ್ಕೆ ನಾಮಪತ್ರ ಸಲ್ಲಿಸುವುದಾಗಿ ಇದೇ ವೇಳೆ ತಿಳಿಸಿದ್ರು. ಒಟ್ಟಿನಲ್ಲಿ ಮಂಡ್ಯ ಕ್ಷೇತ್ರದಲ್ಲಿ ಗಾಂಧಿನಗರ ವರ್ಸಸ್ ಪದ್ಮನಾಭ ನಗರ ಫೈಟ್ ನಡೆಯಲಿದೆ. ಸುಮಲತಾ ಪರ ಸ್ಯಾಂಡಲ್ ವುಡ್ ಬ್ಯಾಟ್ ಬೀಸಲಿದ್ದು, ಯಶ್ ಹಾಗೂ ದರ್ಶನ್ ಜೆಡಿಎಸ್ ಅಭ್ಯರ್ಥಿ ನಿಖಿಲ್ ವಿರುದ್ಧ ಪ್ರಚಾರಕ್ಕಿಳಿಯಲಿದ್ದಾರೆ.

  • ಮಂಡ್ಯ ಜನರ ಒತ್ತಾಯಕ್ಕೆ ಮಣಿದು ಕಣಕ್ಕೆ ಇಳಿದಿದ್ದೇನೆ: ಸುಮಲತಾ ಘೋಷಣೆ

    ಮಂಡ್ಯ ಜನರ ಒತ್ತಾಯಕ್ಕೆ ಮಣಿದು ಕಣಕ್ಕೆ ಇಳಿದಿದ್ದೇನೆ: ಸುಮಲತಾ ಘೋಷಣೆ

    – ಸುದ್ದಿಗೋಷ್ಠಿಗೆ ದರ್ಶನ್, ಯಶ್ ಸಾಥ್
    – ಅಂಬಿ ಕನಸನ್ನು ನನಸು ಮಾಡಲು ಅವಕಾಶ ನೀಡಿ

    ಬೆಂಗಳೂರು: ಲೋಕಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ಮಂಡ್ಯ ಕ್ಷೇತ್ರ ಜಿದ್ದಾಜಿದ್ದಿಗೆ ಕಾರಣವಾಗಿದೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದು, ಇತ್ತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಶ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

    ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಜನ ಅಂಬರೀಶ್ ಮೇಲಿಟ್ಟಿದ್ದ ಪ್ರೀತಿ ವಿಶ್ವಾಸವನ್ನು ಉಳಿಸಿಕೊಳ್ಳಲು ಅವರ ಒತ್ತಾಯದಂತೆ ಸೇವೆ ಮಾಡಲು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.

    ಅಂಬರೀಶ್ ನೆನೆದು ಭಾವುಕರಾಗಿಯೇ ಮಾತು ಆರಂಭಿಸಿದ ಸುಮಲತಾ, ಜೀವನದಲ್ಲಿ ಕೆಲವು ಕ್ಷಣವನ್ನು ನಾವು ಹುಡುಕಿಕೊಂಡು ಹೋಗಿ ಏನೇನು ಮಾಡಬೇಕೆನ್ನುವ ನಿರ್ಧಾರ ಮಾಡುತ್ತೇವೆ. ಆದರೆ ಒಂದೊಂದು ಸಲ ಆ ಕ್ಷಣಗಳೇ ನಮ್ಮನ್ನು ಹುಡುಕಿಕೊಂಡು ಬಂದು ಅದೇ ನಿರ್ಧಾರ ಮಾಡುತ್ತದೆ. ಈಗ ಆ ಸಮಯ ಬಂದಿದೆ ಎಂದು ಹೇಳಿದ್ರು.

    ಅಂಬರೀಶ್ ಸಾವಿನಿಂದ ನೊಂದಿದ್ದೆ. ಆ ಸಂದರ್ಭದಲ್ಲಿ ಸ್ನೇಹಿತರು ಕುಟುಂಬಸ್ಥರು ಎಲ್ಲರೂ ನನ್ನ ಜೊತೆ ಇದ್ದರು. ಆದರೂ ಮನಸ್ಸಿಗೆ ಸಮಾಧಾನ ಇರುತ್ತಿರಲಿಲ್ಲ. ಈ ಒಂದು ಮನಸ್ಥಿತಿಯಿಂದ ಹೊರಗೆ ಬರುತ್ತೀನೋ ಇಲ್ಲವೋ ಎಂಬ ಪರಿಸ್ಥಿತಿಯಲ್ಲಿದ್ದೆ. ಅಂಬರೀಶ್ ಬದುಕಿದ್ದಾಗ ಅವರ ಜೊತೆ 24 ಗಂಟೆಯೂ ಸ್ನೇಹಿತರಿದ್ದರು. ಯಾವತ್ತೂ ಅವರು ನಾನು, ನನ್ನ ಕುಟುಂಬ, ನನ್ನ ಮನೆ ಎಂದು ಯೋಚನೆ ಮಾಡಿದವರಲ್ಲ. ಆದರೆ ಅವರು ಹೋದ ಬಳಿಕ ಒಂದಷ್ಟು ಜನ ಕಾಣಲಿಲ್ಲ. ಆದ್ರೆ ಆ ಸಮಯದಲ್ಲಿ ನನಗೆ ಧೈರ್ಯ ತುಂಬಲು ನಾವು ನಿಮ್ಮ ಜೊತೆ ಇದ್ದೇವೆ. ನಿಮ್ಮ ನೋವನ್ನು ನಾವು ಹಂಚಿಕೊಳ್ಳಬೇಕು. ಯಾಕಂದ್ರೆ ನಿಮಗಾಗಿರುವ ನೋವು ನಮಗೂ ಆಗಿದೆ. ನಮ್ಮದು ಅದೇ ಮನಸ್ಥಿತಿ ಎಂದು ಹೇಳಿಕೊಂಡು ಮಂಡ್ಯದ ಅಭಿಮಾನಿಗಳ ನಮ್ಮ ಬಳಿ ಬಂದರು ಎಂದು ಭಾವುಕರಾದರು.

    ಅಂಬರೀಶ್ ಅವರನ್ನು ಜನ ಎಷ್ಟು ಪ್ರೀತಿ ಮಾಡುತ್ತಿದ್ದರೆಂದು ನನಗೆ ಗೊತ್ತಿತ್ತು. ಆದ್ರೆ ಅವರ ಹೋದ ಮೇಲೆಯೂ ನನ್ನ ಹಾಗೂ ಅಭಿಷೇಕ್ ಮೇಲೆ ಇಷ್ಟೊಂದು ಪ್ರೀತಿ ಇಟ್ಟುಕೊಂಡು ಇನ್ನೂ ನಮ್ಮ ಹತ್ತಿರ ಬರುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಆ ಸಮಯದಲ್ಲಿ ಇಂದು ಚೂರು ಸಮಾಧಾನ ನನ್ನ ಮನಸ್ಸಿಗೆ ಸಿಕ್ಕಿತ್ತು. ಅಭಿಮಾನಿಗಳ ಪ್ರೀತಿ ವಿಶ್ವಾಸ ಕಳೆದುಕೊಳ್ಳಲು ನಮಗೂ ಇಷ್ಟವಿಲ್ಲ. ನಾವು ಜೀವಂತ ಇರೋವರೆಗೂ ಈ ಪ್ರೀತಿ ಇದ್ದೇ ಇರುತ್ತದೆ ಅನ್ನುವ ಮಾತನ್ನು ನಾನು ಹೇಳಿದ್ದೆ. ಆದ್ರೆ ಪ್ರೀತಿ ಸಂಬಂಧ ಇದ್ದೇ ಇರುತ್ತದೆ. ಅಂದ್ರೆ ನೀವು ಬಂದಾಗ ನಾವು, ನಾವು ಬಂದಾಗ ನೀವು ಮಾತಾಡಿಸುತ್ತೀರಿ ಅಷ್ಟೆ. ಆದ್ರೆ ನಿಮ್ಮ ಸೇವೆಯೂ ನಮಗೆ ಬೇಕಿದೆ ಎಂದು ಹೇಳಿದ್ರು ಅಂದ್ರು.

    ಅಂಬರೀಶ್ ಅವರು ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಹೋಗಿದ್ದಾರೆ. ಆ ಕೆಲಸಗಳನ್ನು ಮಂದುವರಿಸುವುದಕ್ಕೆ ನೀವೇ ಮುಂದಾಗಬೇಕು. ಅವರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿಯನ್ನು ನೀವೇ ಹೊರಬೇಕು ಎಂದು ಸಾವಿರಾರು ಜನ ಹೇಳಿದ್ರು ಎಂದು ತಿಳಿಸಿದ್ರು.

    ನಾನು ರಾಜಕಾರಣಿ ಅಲ್ಲ, ಅದರ ಬಗ್ಗೆಯೂ ಗೊತ್ತಿಲ್ಲ. 2-3 ವಾರಗಳಿಂದ ಮಂಡ್ಯದ ಹಲವಾರು ಊರು ಹಾಗೂ ಜನರನ್ನು ಭೇಟಿ ಮಾಡಿ ನನ್ನಿಂದ ಏನನ್ನು ಬಯಸುತ್ತೀರಾ ಎಂದು ಕೇಳಿದ್ದೆ. ಅವರೆಲ್ಲರದ್ದೂ ಒಂದೇ ಮಾತಾಗಿತ್ತು. ಯಾವುದೇ ಕಾರಣಕ್ಕೂ ಅಂಬರೀಶ್ ಅಣ್ಣನ ಪ್ರೀತಿಯನ್ನು ಕಳೆದುಕೊಳ್ಳಲು ನಾವು ರೆಡಿ ಇಲ್ಲ ಎಂಬುದಾಗಿತ್ತು. ನಿಮ್ಮ ಮೂಲಕ ನಾವು ಮತ್ತೆ ಅಂಬರೀಶ್ ಅಣ್ಣನ ಸ್ಥಾನವನ್ನು ತುಂಬಿದ್ರೆ ನಮಗೂ ಒಳ್ಳೆಯದಾಗುತ್ತೆ ಅಂತ ಹೇಳಿದ್ರು. ಹೀಗಾಗಿ ನನಗೆ ಹತ್ತಿರದವರೆಲ್ಲರನ್ನು ಕರೆದು ಸಲಹೆ ಪಡೆದೆ. ಆದ್ರೆ ಎಲ್ಲರೂ ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು ಅಂದ್ರು ಎಂದು ಸುಮಲತಾ ಹೇಳಿದ್ರು.

    ಅಂಬರೀಶ್ ಪ್ರೀತಿ ವಿಶ್ವಾಸ ಉಳಿಸಿಕೊಳ್ಳಲು ಅಂಬರೀಶ್ ಅಭಿಮಾನಿಗಳ ಮಾತು ಕೇಳಬೇಕು ಅನಿಸಿತ್ತು. ಈ ನನ್ನ ನಿರ್ಧಾರ ಇಂದು ಕೆಲವರಿಗೆ ಇಷ್ಟ ಆಗದೇ ಇರಬಹುದು, ಇನ್ನು ಕೆಲವರಿಗೆ ಅನುಕೂಲ ಇಲ್ಲದೇ ಇರಬಹುದು. ಆದ್ರೆ ಅಂಬರೀಶ್ ಅವರ ಮೇಲೆ ಇಟ್ಟಿರುವ ಪ್ರೀತಿ ಹಾಗೂ ವಿಶ್ವಸಾ ಕಾಪಾಡಿಕೊಳ್ಳಲು ಇಂದು ನಾನು ಈ ನಿರ್ಧಾರಕ್ಕೆ ಬಂದಿರೋದಾಗಿ ಹೇಳಿದ್ರು.

    ಇದರಿಂದ ಒಂದಷ್ಟು ಸಂಬಂಧ ಹಾಗೂ ಸ್ನೇಹಗಳು ದೂರ ಆಗಿದೆ. ಆದ್ರೆ ನಾನು ತೆಗೆದುಕೊಂಡ ನಿರ್ಧಾರ ಯಾರನ್ನು ದೂರ ಮಾಡುವುದಕ್ಕಲ್ಲ. ಈ ಹೆಜ್ಜೆ ಹಾಕೋದಕ್ಕೆ ನನಗೆ ಬೇಕಾದಷ್ಟು ಧೈರ್ಯ, ಆತ್ಮಸ್ಥೈರ್ಯ ಬೇಕಾಗಿತ್ತದೆ. ಅದನ್ನು ನನಗೆ ಜನ ಕೊಟ್ಟಿದ್ದಾರೆ ಎಂದರು.

    ಪುತ್ರ ಅಭಿಷೇಕ್ ರೊಂದಿಗೆ ಸುಮಲತಾ ಅವರಿಗೆ ನಟ ಯಶ್, ದರ್ಶನ್, ದೊಡ್ಡಣ್ಣ ಹಾಗೂ ರಾಕ್‍ಲೈನ್ ವೆಂಕಟೇಶ್ ಸಾಥ್ ನೀಡಿದ್ರು.

  • ಸುಮಲತಾ ವಿರುದ್ಧ ‘ಸೌಮ್ಯ ಅಸ್ತ್ರ’ ಪ್ರಯೋಗಕ್ಕೆ ಮುಂದಾದ ಜೆಡಿಎಸ್

    ಸುಮಲತಾ ವಿರುದ್ಧ ‘ಸೌಮ್ಯ ಅಸ್ತ್ರ’ ಪ್ರಯೋಗಕ್ಕೆ ಮುಂದಾದ ಜೆಡಿಎಸ್

    ಮಂಡ್ಯ: ಚುನಾವಣಾ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ‘ಸೌಮ್ಯ ಅಸ್ತ್ರ’ ಪ್ರಯೋಗಿಸಲು ಮುಂದಾಗಿದೆ. ಈ ಮೂಲಕ ಸುಮಲತಾರನ್ನು ಕಟ್ಟಿಹಾಕಲು ದಳಪತಿಗಳು ಯತ್ನಿಸುತ್ತಿದ್ದಾರೆ.

    ಚುನಾವಣಾ ಪ್ರಚಾರಕ್ಕೆ ಮಹಿಳಾ ಕಾರ್ಯಕರ್ತರನ್ನು ಬಳಸಿಕೊಳ್ಳಲು ಜೆಡಿಎಸ್ ಚಿಂತಿಸಿದ್ದು, ಸೌಮ್ಯವಾಗಿ ಸುಮಲತಾರ ವಿರುದ್ಧ ರಣತಂತ್ರವನ್ನು ರೂಪಿಸಿದೆ. ಪ್ರಚಾರದಲ್ಲಿ ಸುಮಲತಾರ ಮೇಲೆ ಅನುಕಂಪ ತೋರುತ್ತಲೇ ಜೆಡಿಎಸ್ ಮಹಿಳಾ ಕಾರ್ಯಕರ್ತರು ಪಕ್ಷದ ಪರ ಮತ ಯಾಚಿಸಲಿದ್ದಾರೆ. ಇದೇ ವೇಳೆ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಕರ್ತೆಯರು ಮಹಿಳಾ ಮತದಾರರಿಗೆ ತಿಳಿಸಲಿದ್ದಾರೆ.

    ಮಹಿಳಾ ಮತದಾರರೇ ಟಾರ್ಗೆಟ್..?
    ಅನುಕಂಪದ ಆಧಾರದ ಮೇಲೆ ಸುಮಲತಾರನ್ನು ಮತ ಯಾಚನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ಮತದಾರರನ್ನು ಜೆಡಿಎಸ್ ಸೆಳೆಯಲು ಪ್ರಯತ್ನಿಸುತ್ತಿದೆ. ಹಾಗಾಗಿ ಸುಮಲತಾ ವಿರುದ್ಧ ಪ್ರಚಾರಕ್ಕೆ ಮಹಿಳಾಮಣಿಗಳನ್ನೇ ನಿಯೋಜಿಸಲು ಜೆಡಿಎಸ್ ಅಣಿಯಾಗಿದೆ. ಬಹುತೇಕ ಪಕ್ಷೇತರರಾಗಿ ಅಖಾಡಕ್ಕಿಳಿಯುತ್ತಿರೋ ಸುಮಲತಾ ಅವರಿಗೆ ಅಂಬಿ ಅಭಿಮಾನವೇ ಬಂಡವಾಳ ಇದನ್ನು ಅರಿತಿರುವ ಜೆಡಿಎಸ್, ಅಂಬರೀಶ್ ಅಭಿಮಾನಿಗಳನ್ನ ತೆಕ್ಕೆಗೆ ಪಡೆಯಲು ತನ್ನ ಕಾರ್ಯತಂತ್ರ ಬದಲಿಸಿಕೊಂಡಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸ್ತಾ ಇರೋ ಸುಮಲತಾ ಇಂದು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಘೋಷಣೆ ಮಾಡಲಿದ್ದಾರೆ.

  • ಗೌಡರ ಭದ್ರಕೋಟೆಯಲ್ಲಿ ಕೇಸರಿ ರಣವ್ಯೂಹ-ಚಕ್ರವೂಹ್ಯ ಬೇಧಿಸ್ತಾರಾ ದೊಡ್ಡಗೌಡರ ಮೊಮ್ಮಕ್ಕಳು

    ಗೌಡರ ಭದ್ರಕೋಟೆಯಲ್ಲಿ ಕೇಸರಿ ರಣವ್ಯೂಹ-ಚಕ್ರವೂಹ್ಯ ಬೇಧಿಸ್ತಾರಾ ದೊಡ್ಡಗೌಡರ ಮೊಮ್ಮಕ್ಕಳು

    ಮಂಡ್ಯ/ಹಾಸನ: ಮಂಡ್ಯ ಹಾಗು ಹಾಸನ ದೇವೇಗೌಡರ ಕುಟುಂಬದ ಭದ್ರಕೋಟೆ. ಹೀಗಾಗಿ ಗೌಡರ ಈ ಕೋಟೆಯನ್ನು ಬೇಧಿಸಲು ರಣತಂತ್ರ ರೆಡಿಯಾಗಿದೆ. ನಿಖಿಲ್ ಹಾಗೂ ಪ್ರಜ್ವಲ್‍ರನ್ನು ಖೆಡ್ಡಾಗೆ ಕೆಡವಲು ಬಿಜೆಪಿ ಶತಾಯಗತಾಯ ಪ್ರಯತ್ನಿಸ್ತಾ ಇದ್ದು ಹಾಸನದಲ್ಲಿ ಗೌಡರ ಕಡು ಎದುರಾಳಿ ಮಂಜು ಕಣಕ್ಕಿಳಿಯುತ್ತಿದ್ದಾರೆ. ಇತ್ತ ಸುಮಲತಾ ಇಂದು ತಮ್ಮ ಸ್ಪರ್ಧೆಯ ಅಧಿಕೃತ ಘೋಷಣೆ ಹೊರಡಿಸಲಿದ್ದಾರೆ.

    ದೇಶದಲ್ಲಿ ಚುನಾವಣಾ ಜ್ವರ ತಾರಕಕ್ಕೇರಿರುವಂತೆ ರಾಜ್ಯದ ಹೈವೊಲ್ಟೇಜ್ ಕ್ಷೇತ್ರಗಳಾದ ಹಾಸನ ಹಾಗೂ ಮಂಡ್ಯ ಕೊತ ಕೊತ ಕುದಿಯುತ್ತಿವೆ. ಜೆಡಿಎಸ್ ಭದ್ರಕೋಟೆಗಳಾಗಿರುವ ಈ ಉಭಯ ಕ್ಷೇತ್ರಗಳಲ್ಲಿ ಈ ಬಾರಿ ಗೌಡರನ್ನು ಸೋಲಿಸಲು ರಣತಂತ್ರ ರೆಡಿಯಾಗಿದೆ. ಒಕ್ಕಲಿಗರ ಪ್ರಾಬಲ್ಯದ ಈ ಸಾಂಪ್ರದಾಯಿಕ ಕ್ಷೇತ್ರಗಳೇ ದೇವೇಗೌಡರ ದೊಡ್ಡ ಶಕ್ತಿ. ಹೀಗಾಗಿ ತಮ್ಮ ಇಬ್ಬರು ಮೊಮ್ಮಕ್ಕಳನ್ನು ಅಖಾಡಕ್ಕಿಳಿಸಿದ್ದಾರೆ. ಆದರೆ ದೇವೇಗೌಡರನ್ನ ಅವರ ಕ್ಷೇತ್ರದಲ್ಲೇ ಸೋಲಿಸಲು ಚಕ್ರವ್ಯೂಹ ರೆಡಿಯಾಗಿದೆ. ಹಾಸನದಲ್ಲಿ ಪ್ರಜ್ವಲ್ ಎದುರಿಗೆ ದೇವೇಗೌಡರ ಕಡುವೈರಿ ಎ.ಮಂಜು ಕಣಕ್ಕಿಳಿಯುತ್ತಿದ್ದಾರೆ. ನಿನ್ನೆಯೆವರೆಗೆ ಕಾಂಗ್ರೆಸ್ ಪಾಳಯದಲ್ಲಿದ್ದ ಎ.ಮಂಜು ಈಗ ಕೇಸರಿ ಪಾಳಯಕ್ಕೆ ಹಾರಿದ್ದಾರೆ. ಭಾನುವಾರ ಹಾಸನದಲ್ಲಿ ಬಿಜೆಪಿಯ ಪ್ರಾಥಮಿಕ ಸದಸ್ಯ ಪಡೆಯೋ ಮೂಲಕ ಕಮಲಕ್ಕೆ ಜೈ ಎಂದಿದ್ದಾರೆ.

    ದೇವೇಗೌಡರ ಸ್ವಕ್ಷೇತ್ರ ಹಾಸನದಲ್ಲಿ ಎ.ಮಂಜು ಸಾಮಥ್ರ್ಯವನ್ನ ಅಲ್ಲಗಳೆಯೋ ಹಾಗಿಲ್ಲ. ಸದ್ಯದ ಮಟ್ಟಿಗೆ ಇವರೇ ದೊಡ್ಡಗೌಡರಿಗೆ ಸೆಡ್ಡು ಹೊಡೆಯೋ ನಾಯಕ. ಹೀಗಾಗಿ ಬಿಜೆಪಿ ಎ.ಮಂಜು ಆಗಮನದಿಂದ ಫುಲ್ ಜೋಶ್ ನಲ್ಲಿದೆ. ಪ್ರಜ್ವಲ್‍ಗೆ ಹೋಲಿಸಿದ್ರೆ ಎ.ಮಂಜುಗೆ ರಾಜಕೀಯದ ಸಾಕಷ್ಟು ಅನುಭವವಿದೆ. ಅಲ್ಲದೆ ಜಿಲ್ಲೆಯ ಒಕ್ಕಲಿಗರ ಮೇಲೆ ದೇವೇಗೌಡರಷ್ಟೇ ಸರಿ ಸಮಾನವಾಗಿ ಹಿಡಿತ ಹೊಂದಿದ್ದಾರೆ. ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಹಾಗಂತ ಪ್ರಜ್ವಲ್‍ರನ್ನ ಸಲೀಸಾಗಿ ಸೋಲಿಸಲಕ್ಕಾಗೋದಿಲ್ಲ. ಖುದ್ದು ದೊಡ್ಡ ಗೌಡರೇ ಪ್ರಜ್ವಲ್ ಪರ ನಿಂತಿರೋದು ಪ್ಲಸ್ ಪಾಯಿಂಟ್ ಅಲ್ಲದೆ ರೇವಣ್ಣ ಮತ್ತು ದೇವೇಗೌಡರ ಅಭಿವೃದ್ಧಿ ಕಾರ್ಯಗಳು ಕೂಡ ಕೈ ಹಿಡಿಯಬಹುದು.

    ಇತ್ತ ಮಂಡ್ಯದಲ್ಲೂ ದೇವೇಗೌಡರ ಕಿರಿಯ ಮೊಮ್ಮಗ ನಿಖಿಲ್ ಹಾದಿಯೂ ಸುಗಮವಾಗಿಲ್ಲ. ಸುಮಲತಾ ಅಂಬರೀಶ್ ಎಂಟ್ರಿ ಇಡೀ ಚಿತ್ರಣವನ್ನೇ ಬದಲಿಸಿದೆ. ಮೇಲ್ನೋಟಕ್ಕೆ ಮಂಡ್ಯ ಜೆಡಿಎಸ್ ಭದ್ರಕೋಟೆಯೇನೋ ನಿಜ. ಆದ್ರೆ ಅಂಬಿ ಅಭಿಮಾನಿಗಳು ಜೆಡಿಎಸ್‍ಗೆ ದೊಡ್ಡ ತಲೆನೋವಾಗಿದ್ದಾರೆ. ವಿಚಿತ್ರ ಅಂದ್ರೆ ಸುಮಲತಾ ಅಂಬರೀಶ್ ಮಗ ಅಭಿಷೇಕ್ ಸ್ನೇಹಿತ ನಿಖಿಲ್ ಕುಮಾರಸ್ವಾಮಿ ಎದುರಿಗೆ ಅಖಾಡದಲ್ಲಿದ್ದಾರೆ. ಅಂಬಿ ಅಭಿಮಾನವನ್ನೆ ನೆಚ್ಚಿಕೊಂಡು ಕಣಕ್ಕಿಳಿದಿರೋ ಸುಮಲತಾಗೆ ಜನರ ಭರಪೂರ ಬೆಂಬಲವೂ ಸಿಗುತ್ತಿದೆ. ಜೊತೆಗೆ ಕಾಂಗ್ರೆಸ್ ಅಸಮಾಧಾನ ವರವಾಗೋ ಸಾಧ್ಯತೆಗಳಿವೆ.

    ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸ್ತಾ ಇರೋ ಸುಮಲತಾ ಇಂದು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಘೋಷಣೆ ಮಾಡಲಿದ್ದಾರೆ. ಇತ್ತ ನಿಖಿಲ್ ಕುಮಾರಸ್ವಾಮಿ ಪ್ರಚಾರ ಕೂಡ ಜೋರಾಗಿ ನಡೆದಿದೆ. ಸುಮಲತಾ ಸ್ಪರ್ಧೆ ಮೈತ್ರಿ ಪಕ್ಷಕ್ಕೆ ತಲೆ ನೋವಾಗಿದೆ. ವಿಚಿತ್ರ ಅಂದ್ರೆ ಸುಮಲತಾ ಸ್ಪರ್ಧೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂತಸದ ವಿಷಯವಾಗಿದೆ. ಒಟ್ಟಾರೆ ದೇವೇಗೌಡರ ಕುಟುಂಬವನ್ನ ಕಟ್ಟಿ ಹಾಕಲು ರಣತಂತ್ರ ತಯಾರಾಗಿದ್ದು, ಎಲೆಕ್ಷನ್ ಚಕ್ರವ್ಯೂಹದಲ್ಲಿ ನಿಖಿಲ್-ಪ್ರಜ್ವಲ್ ಗೆಲ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

  • ಅಂಬಿ ಸಾಧನೆ, ಜನರ ಪ್ರೀತಿ ಸುಮಲತಾ ಕೈ ಹಿಡಿಯುತ್ತೆ- ಜಗ್ಗೇಶ್

    ಅಂಬಿ ಸಾಧನೆ, ಜನರ ಪ್ರೀತಿ ಸುಮಲತಾ ಕೈ ಹಿಡಿಯುತ್ತೆ- ಜಗ್ಗೇಶ್

    ರಾಯಚೂರು: ನಟಿ ಸುಮಲತಾ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ನಂಬಿಕೆಯಿದೆ. ಅಂಬರೀಶ್ ಸಾಧನೆ, ಜನರ ಪ್ರೀತಿ ಸುಮಲತಾ ಅವರ ಕೈ ಹಿಡಿಯುತ್ತೆ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದಾರೆ.

    56 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ನವರಸನಾಯಕ ಜಗ್ಗೇಶ್ ಪ್ರತೀ ವರ್ಷದಂತೆ ಈ ಬಾರಿಯೂ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಈ ವೇಳೆ ಮಂತ್ರಾಲಯದಲ್ಲಿ ಮಾತನಾಡಿದ ಅವರು, ಎಷ್ಟೇ ದೇವಸ್ಥಾನಗಳಿಗೆ ಹೋದರು ರಾಯರ ದರ್ಶನ ಪಡೆದರೆ ಮಾತ್ರ ಸಮಾಧಾನ ಆಗುತ್ತೆ ಎಂದರು.

    ರಾಜಕೀಯ ವಿಚಾರವಾಗಿ ಸಮಲತಾ ಸ್ಪರ್ಧೆ ಕುರಿತು ಮಾತನಾಡಿ, ರಾಜಕೀಯ ಹೊರತುಪಡಿಸಿ ಅಂಬರೀಶ್ ಅವರ ಜೊತೆ 30 ವರ್ಷಗಳ ಸಂಬಂಧವಿದೆ. ಯಾವತ್ತೂ ಕೂಡ ಅವರ ಕುಟುಂಬಕ್ಕೆ ಒಳಿತನ್ನೇ ಬಯಸುತ್ತೇನೆ. ಸುಮಲತಾ ಅವರು ಸರಿಯಾದ ಸಮಯಕ್ಕೆ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ನಂಬಿಕೆಯಿದೆ. ಅಂಬರೀಶ್ ಸಾಧನೆ, ಜನರ ಪ್ರೀತಿ ಸುಮಲತಾ ಅವರ ಕೈ ಹಿಡಿಯುತ್ತೆ ಎಂದರು.

    ನಟರು ಊಟಕ್ಕಾಗಿ ಬಣ್ಣಹಚ್ಚಿದ್ರೆ ರಾಜಕಾರಣಿಗಳು ವೋಟಿಗಾಗಿ ಬಣ್ಣ ಹಚ್ಚುತ್ತಾರೆ. ಬಣ್ಣ ಹಾಕಿಕೊಳ್ಳುವ ರಾಜಕಾರಣಿಗಳ ಬಣ್ಣ ಜನ ತೆಗೀತಾರೆ. ರಾಜಕಾರಣಿಗಳು ಮಾನ, ಮರ್ಯಾದೆ ಕೆಡಿಸಿಕೊಂಡಿದ್ದೇವೆ. ಅದರಲ್ಲಿ ಯಾರೂ ಉತ್ತಮರು ಅನ್ನೋದನ್ನ ಜನ ನಿರ್ಣಯ ಮಾಡುತ್ತಾರೆ ಎಂದರು.

    ಸ್ವಹಿತಾಸ್ತಕಿಗೆ ಮಹಾಘಟಬಂಧನ್ ಮಾಡಿಕೊಳ್ಳಲಾಗಿದೆ. ಅಭಿವೃದ್ಧಿ ಭಾರತವನ್ನ ನೋಡಬೇಕು ಅಂದ್ರೆ ಮೋದಿಗೆ ಅಧಿಕಾರ ಕೊಡಬೇಕು ಎಂದು ಜಗ್ಗೇಶ್ ಹೇಳಿದರು.

  • ಸುಮಲತಾ ಸ್ಪರ್ಧೆಗೆ ಎಸ್‍ಎಂಕೆ ಗ್ರೀನ್ ಸಿಗ್ನಲ್ ನೀಡಿದ್ರಾ?

    ಸುಮಲತಾ ಸ್ಪರ್ಧೆಗೆ ಎಸ್‍ಎಂಕೆ ಗ್ರೀನ್ ಸಿಗ್ನಲ್ ನೀಡಿದ್ರಾ?

    -ಮಂಡ್ಯ’ಲೋಕ’ ಅಖಾಡದ ಬಿಜೆಪಿ ಇನ್‍ಸೈಡ್ ಸ್ಟೋರಿ

    ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸ ಅಭ್ಯರ್ಥಿಗಳು ಕಣದಲ್ಲಿದ್ದರೂ ಯಾವ ಪ್ರಭಾವಿ ಮುಖಂಡರ ಸ್ಪರ್ಧೆಗಿಂತ ಭಿನ್ನವಾಗಿಲ್ಲ. ಕಾರಣ ಓರ್ವ ಅಭ್ಯರ್ಥಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ, ಇತ್ತ ಮಾಜಿ ಸಚಿವ, ನಟ ಅಂಬರೀಶ್ ಅವರ ಪತ್ನಿ ಸುಮಲತಾ ಮಂಡ್ಯ ಅಖಾಡದಲ್ಲಿ ಮಿಂಚಿನಂತೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಸುಮಲತಾ ಅಂಬರೀಶ್‍ಗೆ ಬಿಜೆಪಿ ಬೆಂಬಲ ನೀಡುತ್ತಾ ಅಥವಾ ಸುಮಲತಾ ಕಮಲವನ್ನು ಹಿಡಿಯುತ್ತಾರಾ ಎಂಬ ಪ್ರಶ್ನೆಗಳು ಮಂಡ್ಯ ರಾಜಕೀಯ ಅಂಗಳದಲ್ಲಿ ಹುಟ್ಟಿಕೊಂಡಿವೆ.

    ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಪರ್ಧಿಸಿದ್ರೆ, ನನ್ನ ಅಭ್ಯಂತರವಿಲ್ಲ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಆದ್ರೆ ಪಕ್ಷದ ಕೋರ್ ಕಮಿಟಿಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಎಸ್‍ಎಂಕೆ ಹೇಳಿದ್ದಾರೆ ಎನ್ನಲಾಗಿದೆ. ಇಂದು ನಡೆಯುವ ಸಭೆಯಲ್ಲಿ ಮಂಡ್ಯ ಹೊರತುಪಡಿಸಿ 27 ಕ್ಷೇತ್ರಗಳ ಅಭ್ಯರ್ಥಿಗಳನ್ನ ಅಂತಿಮಗೊಳಿಸಿ ಶಿಫಾರಸ್ಸು ಮಾಡುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ.

    ಸುಮಲತಾರ ಅಂತಿಮ ನಿರ್ಧಾರದ ಬಳಿಕ ಬಿಜೆಪಿ ಮಂಡ್ಯದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ? ಬೇಡವೋ ಎಂಬುದನ್ನು ಚಿಂತಿಸಲಿದೆ. ಹಾಗಾಗಿ ಸೋಮವಾರದವರೆಗೆ ಅಧಿಕೃತ ನಿರ್ಧಾರ ಪ್ರಕಟಿಸದೆ ಕಾದು ನೋಡುವ ತಂತ್ರಕ್ಕೆ ಬಿಜೆಪಿ ಮುಂದಾಗಿದೆ.

  • ಮಂಡ್ಯದಲ್ಲಿ ಕಣಕ್ಕಿಳಿದ ನಿಖಿಲ್‍ಗೆ ಆನೆ ಬಲ-‘ಜಾಗ್ವಾರ್’ಗೆ ಸಿಕ್ತು ಜಿ.ಮಾದೇಗೌಡರ ಆಶೀರ್ವಾದ

    ಮಂಡ್ಯದಲ್ಲಿ ಕಣಕ್ಕಿಳಿದ ನಿಖಿಲ್‍ಗೆ ಆನೆ ಬಲ-‘ಜಾಗ್ವಾರ್’ಗೆ ಸಿಕ್ತು ಜಿ.ಮಾದೇಗೌಡರ ಆಶೀರ್ವಾದ

    ಮಂಡ್ಯ: ಸಕ್ಕೆರ ನಾಡು ಮಂಡ್ಯ ಲೋಕಸಭಾ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್‍ಗೆ ಕಾಂಗ್ರೆಸ್ ಹಿರಿಯ ಮುಖಂಡ ಜಿ.ಮಾದೇಗೌಡರ ಅಭಯ ಸಿಕ್ಕಿದ್ದು, ಇತ್ತ ಬಿಜೆಪಿ ಇನ್ನು ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಸ್ಪರ್ಧೆಯಿಂದ ಸಕ್ಕರೆನಾಡು ಮಂಡ್ಯದ ರಣಕಣ ನಾನಾ-ನೀನಾ ಎಂಬ ಸ್ಪರ್ಧೆ ಆರಂಭಗೊಂಡಿದೆ.

    ಈ ನಡುವೆ ನಿಖಿಲ್ ಸ್ಪರ್ಧೆಗೆ ಹಿರಿಯ ಕಾಂಗ್ರೆಸ್ ನಾಯಕ ಜಿ. ಮಾದೇಗೌಡ ಬೆಂಬಲಿಸಿದ್ದು, ಆನೆಬಲ ಬಂದಂತಾಗಿದೆ. ಶನಿವಾರ ಅನಿತಾ ಕುಮಾರಸ್ವಾಮಿ ಮತ್ತು ನಿಖಿಲ್, ಕಾಂಗ್ರೆಸ್ ಮುಖಂಡ ಜಿ. ಮಾದೇಗೌಡರನ್ನು ಭೇಟಿಯಾದರು. ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮಾದೇಗೌಡ್ರು ಸಾಕಷ್ಟು ಅನುಭವ ಹಂಚಿಕೊಂಡಿದ್ದಾರೆ. ಅವರ ಸಲಹೆಯಂತೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತೇನೆ ಎಂದು ಹೇಳಿದರು. ಮಾದೆಗೌಡ್ರು ಮಾತನಾಡಿ, ನಿಖಿಲ್‍ಗೆ ಆಶೀರ್ವಾದ ಮಾಡಿದ್ದೇನೆ ಎಂದು ತಿಳಿಸಿದರು.

    ಮಂಡ್ಯ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮಂಡ್ಯದಲ್ಲಿ ಸುಮಲತಾ ಯಾವ ನಿರ್ಧಾರ ಕೈಗೊಳ್ತಾರೆ ಅಂತಾ ಕಾದು ನೋಡಿ ಅಭ್ಯರ್ಥಿ ನಿಲ್ಲಿಸೋ ಬಗ್ಗೆ ಚಿಂತಿಸುತ್ತೇವೆ ಎಂದು ತಿಳಿಸಿದರು. ಮಂಡ್ಯದಲ್ಲಿ ಮಾತನಾಡಿದ ಸುಮಲತಾ, ಜಿಲ್ಲೆಯಲ್ಲಿ ಜೆಡಿಎಸ್‍ನ 8 ಜನ ಶಾಸಕರು, ಮೂವರು ಮಂತ್ರಿಗಳು, ಎಂಎಲ್‍ಸಿ ಇದ್ದಾರೆ. ಆದ್ರೂ ನನ್ನ ಕಂಡ್ರೆ ಭಯ ಯಾಕೋ ಗೊತ್ತಿಲ್ಲ ಎಂದು ಹೇಳುವ ಮೂಲಕ ದಳಪತಿಗಳ ಕಾಲೆಳೆದರು.

    ಇವತ್ತು ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವರ ವೈರಮುಡಿ ಉತ್ಸವ ಜರುಗಲಿದೆ. ಈ ದಿನದಂದು ಪೂಜೆ ಸಲ್ಲಿಸಿದ್ರೆ ಇಷ್ಟಾರ್ಥ ನೆರವೇರುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗಿ ಇವತ್ತು ನಿಖಿಲ್ ಕುಮಾರಸ್ವಾಮಿ, ಸುಮಲತಾ, ರೇವಣ್ಣ ಸೇರಿದಂತೆ ಹಲವರು ಈ ಉತ್ಸವದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಕೃಪೆ ಯಾರಿಗಿದೆ ಅನ್ನೋದನ್ನ ಕಾದು ನೋಡಬೇಕಿದೆ.

    https://www.youtube.com/watch?v=QAz3qIkIdLM

  • ಸುಮಲತಾ ಗೆಲುವಿಗೆ ಶ್ರಮಿಸ್ತಿದ್ದಾರಾ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ..?

    ಸುಮಲತಾ ಗೆಲುವಿಗೆ ಶ್ರಮಿಸ್ತಿದ್ದಾರಾ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ..?

    ಮಂಡ್ಯ: ನಾಗಮಂಗಲದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆ ಸುಮಲತಾ ಗೆಲುವಿಗೆ ಶ್ರಮಿಸುತ್ತಿದ್ದಾರಾ ಅನ್ನೋ ಅನುಮಾನವೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.

    ಚೆಲುವರಾಯ ಸ್ವಾಮಿ ಅವರಿಗೆ ಸುಮಲತಾ ವಂದನೆ ಸಲ್ಲಿಸುತ್ತಿರುವಂತೆ ಪೋಸ್ಟ್ ಹಾಕಿ ವೈರಲ್ ಮಾಡಲಾಗುತ್ತಿದೆ. “ನನ್ನ ಬೆನ್ನ ಹಿಂದೆ ನಿಂತು ನನ್ನ ಗೆಲುವಿಗೆ ಶ್ರಮಿಸುತ್ತಿರುವ ಚೆಲುವರಾಯಸ್ವಾಮಿಯವರಿಗೆ ನನ್ನ ವಂದನೆಗಳು” ಎಂದು ಸುಮಲತಾ ಬರೆದಿದ್ದಾರೆ ಎನ್ನಲಾದ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ ಇದನ್ನು ಸುಮಲತಾ ಅವರೇ ಬರೆದಿದ್ದಾರಾ ಅಥವಾ ಬೇರೆಯವರು ಬರೆದಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ.

    ಸುಮಲತಾ, ನಿಖಿಲ್ ಪ್ರಚಾರ:
    ಮಂಡ್ಯ ಕುರುಕ್ಷೇತ್ರದಲ್ಲಿ ನಾನಾ ನೀನಾ ಅಂತ ಜಿದ್ದಿಗೆ ಬಿದ್ದಿರುವ ಸುಮಲತಾ ಹಾಗೂ ನಿಖಿಲ್‍ರ ಅಬ್ಬರದ ಪ್ರಚಾರ ಇಂದು ಮುಂದುವರಿಯಲಿದೆ. ಸುಮಲತಾ ಅಂಬರೀಶ್ ಮೈಸೂರು ಜಿಲ್ಲೆ ಕೆಆರ್ ನಗರ ಭಾಗದಲ್ಲಿ ಇಂದು ಪ್ರಚಾರ ನಡೆಸಲಿದ್ದಾರೆ. ಇವರಿಗೆ ಪುತ್ರ ಅಭಿಷೇಕ್ ಸಾಥ್ ನೀಡಲಿದ್ದಾರೆ.ಹೀಗಾಗಿ ಬಿಎಸ್‍ವೈ ಭೇಟಿಯನ್ನು ಸುಮಲತಾ ಮುಂದೂಡಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯಲ್ಲಿ ಸಂಚರಿಸಿ ಮತಬೇಟೆಯಾಡಲಿದ್ದಾರೆ. ಇವರಿಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಶಾಸಕ ಸುರೇಶ್ ಗೌಡ ಹಾಗೂ ಸಂಸದ ಶಿವರಾಮೇಗೌಡ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv