Tag: ಸುಮಲತಾ ಅಂಬರೀಶ್

  • ಸುಮಕ್ಕನಿಗೆ ಟಾಂಗ್ ಕೊಡಲು ಸಜ್ಜಾದ ನಿಖಿಲ್-ಜ್ಯೋತಿಷಿಗಳ ಸಲಹೆಯಂತೆ ಇಂದು ನಾಮಿನೇಷನ್

    ಸುಮಕ್ಕನಿಗೆ ಟಾಂಗ್ ಕೊಡಲು ಸಜ್ಜಾದ ನಿಖಿಲ್-ಜ್ಯೋತಿಷಿಗಳ ಸಲಹೆಯಂತೆ ಇಂದು ನಾಮಿನೇಷನ್

    -ಗುರುವಾರ ನಾಮಪತ್ರ ಸಲ್ಲಿಸಿದ್ರೆ ಕೈ ಹಿಡಿಯುತ್ತಾ ಗುರುಬಲ..?

    ಬೆಂಗಳೂರು: ಮಂಡ್ಯ ರಣಕಣದಲ್ಲಿ ಸುಮಲತಾ ಅಂಬರೀಶ್ ಭರ್ಜರಿಯಾಗಿ ನಾಮಪತ್ರ ಸಲ್ಲಿಸಿದ್ದೂ ಆಯ್ತು. ಅಬ್ಬರದಿಂದ ಪ್ರಚಾರಕ್ಕೆ ಚಾಲನೆ ನೀಡಿದ್ದೂ ಆಯ್ತು. ಇದೀಗ ನಿಖಿಲ್ ಕುಮಾರಸ್ವಾಮಿ ಸರದಿ. ಮೈತ್ರಿಕೂಟ ಅಭ್ಯರ್ಥಿಯಾಗಿ ನಿಖಿಲ್ ಇಂದು ನಾಮಿನೇಷನ್ ಮಾಡಲಿದ್ದಾರೆ.

    ಬುಧವಾರ ಇಡೀ ಜೆಡಿಎಸ್ ಕೋಟೆ ಬೆಚ್ಚಿ ಬೀಳುವಂತೆ ಅಪಾರ ಅಭಿಮಾನಿಗಳೊಂದಿಗೆ ಸುಮಲತಾ ನಾಮಿನೇಷನ್ ಮಾಡಿ ಅಬ್ಬರಿಸಿದ್ದಾರೆ. ಹೀಗಾಗಿ ಸುಮಕ್ಕನಿಗೆ ಟಾಂಗ್ ನೀಡಲು ತೆನೆ ಹೊತ್ತ ನಾಯಕರು ಅಣಿಯಾಗಿದ್ದು, ಇಂದು ನಿಖಿಲ್ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗ್ಗೆ 11 ಗಂಟೆಯಿಂದ 12 ಗಂಟೆಯೊಳಗೆ ನಿಖಿಲ್, ತಮ್ಮ ತಾತ, ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ಸಮಯ ನಿಗದಿಪಡಿಸಲಾಗಿದೆ. ಗುರುವಾರ ನಾಮಪತ್ರ ಸಲ್ಲಿಸಿದ್ರೆ ಗುರುಬಲ ಕೂಡಿಬರಲಿದೆ ಅನ್ನೋ ನಂಬಿಕೆಯಿಂದಾಗಿ ಇಂದು ನಾಮಿನೇಷನ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ವಿಶೇಷ ಅಂದ್ರೆ ಇಂದು ಸಲ್ಲಿಸೋ ನಾಮಿನೇಷನ್ ಕೇವಲ ಸಾಂಕೇತಿಕವಾಗಿದೆ. ಮಾರ್ಚ್ 25 ರಂದು, ತಂದೆ ತಾಯಿ ಜೊತೆ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿರುವ ನಿಖಿಲ್ ಕುಮಾರಸ್ವಾಮಿ, ಅಂದು ಬೃಹತ್ ಬಹಿರಂಗ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲೇ ಇರುವ ಸಿಎಂ ಸಭೆಗಳ ಮೇಲೆ ಸಭೆ ನಡೆಸಿ ಅಖಾಡ ಸಿದ್ಧಗೊಳಿಸಿದ್ದಾರೆ.

    ಇತ್ತ ಸುಮಲತಾ ಇಂದು ಕೂಡ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮುಂದುವರಿಸಲಿದ್ದಾರೆ. ಮಂಡ್ಯ ನಗರದ ವಿವಿಧಡೆ ಸಂಚರಿಸಿ ಮತಯಾಚನೆ ಮಾಡಲಿದ್ದಾರೆ. ಸುಮಲತಾಗೆ ಪುತ್ರ ಅಭಿಷೇಕ್, ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಹಲವರು ಸಾಥ್ ನೀಡಲಿದ್ದಾರೆ. ಒಟ್ಟಾರೆ ಘಟಾನುಘಟಿಗಳ ಸ್ಪರ್ಧೆಯಿಂದ ಸಕ್ಕರೆ ನಾಡಿನ ಅಖಾಡ ರಂಗೇರಿದ್ದು, ಪ್ರಚಾರ ಇನ್ನಷ್ಟು ಬಿರುಸು ಪಡೆಯಲಿದೆ.

  • ಸುಮಲತಾ ಅಂಬರೀಶ್ ಬಳಿ ಚಿನ್ನ, ಆಸ್ತಿ ಎಷ್ಟಿದೆ – ಆಯೋಗಕ್ಕೆ ಸಲ್ಲಿಸಿದ ಮಾಹಿತಿ ಇಲ್ಲಿದೆ

    ಸುಮಲತಾ ಅಂಬರೀಶ್ ಬಳಿ ಚಿನ್ನ, ಆಸ್ತಿ ಎಷ್ಟಿದೆ – ಆಯೋಗಕ್ಕೆ ಸಲ್ಲಿಸಿದ ಮಾಹಿತಿ ಇಲ್ಲಿದೆ

    ಮಂಡ್ಯ: ಜಿಲ್ಲೆಯ ರಾಜಕೀಯ ಅಕ್ಷರಶಃ ಸ್ಟಾರ್ ರಣರಂಗವಾಗಿ ಮಾರ್ಪಟ್ಟಿದ್ದು, ಸುಮಲತಾ ಅಂಬರೀಶ್ ಅವರು ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ನಿಯಮಗಳಂತೆ ನಾಮಪತ್ರದೊಂದಿಗೆ ತಮ್ಮೊಂದಿಗೆ ಇದ್ದ ಹಣ, ಆಸ್ತಿ, ಸಂಪತ್ತಿನ ವಿವರದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

    ಸುಮಲತಾ ಬಳಿ ಐದೂವರೆ ಕೆಜಿ ಚಿನ್ನ, 31 ಕೆಜಿ ಬೆಳ್ಳಿ ಹಾಗೂ 5 ಕೋಟಿ ರೂ. ಚರಾಸ್ತಿ, 17 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು 23 ಕೋಟಿ 41 ಲಕ್ಷ ರೂ. ಆಸ್ತಿ ಇದೆ. ಇದರ ಜೊತೆಯಲ್ಲಿ ಒಂದೂವರೆ ಕೋಟಿ ರೂ. ಸಾಲವೂ ಇದೆ.

    ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ನಿವಾಸದಿಂದ ನೇರವಾಗಿ ಮಂಡ್ಯ ಡಿಸಿ ಕಚೇರಿಗೆ ಆಗಮಿಸಿದ ಸುಮಲತಾ ಅವರು 3 ಸೆಟ್‍ಗಳಲ್ಲಿ ನಾಮಪತ್ರ ಸಲ್ಲಿಸಿದರು. ಪ್ರತಿ ಸೆಟ್ ನಲ್ಲೂ ತಲಾ 10 ಸೂಚಕರ ಹೆಸರನ್ನು ಉಲ್ಲೇಖಿಸಿದ್ದರು.

    ಅಹಿಂದ ಅಸ್ತ್ರ:
    ನಾಮಪತ್ರ ಸಲ್ಲಿಕೆ ವೇಳೆಯೇ ಅಹಿಂದ ಅಸ್ತ್ರ ಪ್ರಯೋಗಿಸಿರುವ ಸುಮಲತಾ ಅವರು, ದಲಿತ, ಕುರುಬ, ಗಂಗಾಮತಸ್ಥ, ಮುಸ್ಲಿಂ ನಾಯಕರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿ ಮಂಜುಶ್ರೀ ಅವರಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ, ಡಿಸಿ ಕಚೇರಿ ಹೊರಗಡೆ ಸುಮಲತಾ ಪರ ಜೈಕಾರ, ಘೋಷಣೆಗಳು ಮುಗಿಲು ಮುಟ್ಟಿದ್ದವು. ಸುಮಲತಾ ಅವರಿಗೆ ಪುತ್ರ ಅಭಿಷೇಕ್, ಅಂಬರೀಶ್ ಸಹೋದರ ಪುತ್ರ ಮಧುಸೂದನ್, ಅಂಬಿ ಆಪ್ತರಾದ ರಾಕ್‍ಲೈನ್ ವೆಂಕಟೇಶ್, ಶ್ರೀನಿವಾಸ್ ಅವರು ಸೇರಿದಂತೆ ಆತೃಪ್ತ ಕಾಂಗ್ರೆಸ್ ಮುಖಂಡರು, ಬಿಜೆಪಿಯ ಸತೀಶ್ ರೆಡ್ಡಿ ಸಾಥ್ ನೀಡಿದ್ದರು.

    ಬೃಹತ್ ಮೆರವಣಿಗೆ:
    ನಾಮಪತ್ರ ಸಲ್ಲಿಕೆ ಬಳಿಕ ಡಿಸಿ ಕಚೇರಿ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸುಮಲತಾ ಅವರು ಸಿಲ್ವರ್ ಜ್ಯುಬಿಲಿ ಪಾರ್ಕ್ ವರೆಗೂ ಸಮಾವೇಶಕ್ಕೆ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ನಟ ದರ್ಶನ್ ಮತ್ತು ಯಶ್ ಅವರು ಸಾಥ್ ನೀಡಿದರು. ಈ ರೋಡ್ ಶೋ ವೇಳೆ ಕೆಂಡದಂತೆ ಸೂರ್ಯ ಪ್ರಕಾಶಿಸುತ್ತಿದ್ದರೂ ಲೆಕ್ಕಿಸದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇತ್ತ ಮದ್ದೂರಿನಿಂದ ಅಭಿಮಾನಿಗಳು ಒಂದು ಸಾವಿರ ಬೈಕ್‍ಗಳ ಮೂಲಕ ರ್ಯಾಲಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

  • ಸುಮಲತಾಗೆ ಭಾರೀ ಜನ ಬೆಂಬಲ – ದಿಢೀರ್ ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆ

    ಸುಮಲತಾಗೆ ಭಾರೀ ಜನ ಬೆಂಬಲ – ದಿಢೀರ್ ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆ

    ಬೆಂಗಳೂರು: ಮಂಡ್ಯ ಕ್ಷೇತ್ರ ಈ ಬಾರಿಯ ಲೋಕಸಭಾ ಚುನಾವಣೆಯ ಸ್ಟಾರ್ ಕ್ಷೇತ್ರವಾಗಿ ಗುರುತಿಸಿಕೊಂಡಿದ್ದು, ಇಂದು ಸಾವಿರಾರು ಬೆಂಬಲಿಗರ ನಡುವೆ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದರು. ಇದರ ಬೆನ್ನಲ್ಲೇ ಮಂಡ್ಯ ಕಾಂಗ್ರೆಸ್ ನಾಯಕರ ಸಭೆಯನ್ನ ಸಚಿವ ಡಿಕೆ ಶಿವಕುಮಾರ್ ಅವರು ಕರೆದಿದ್ದಾರೆ.

    ನಾಮಪತ್ರ ಸಲ್ಲಿಸಿದ ಬಳಿಕ ಸಮಾವೇಶ ನಡೆಸಿ ಮಾತನಾಡಿದ ಸುಮಲತಾ ಅವರಿಗೆ ಅಪಾರ ಪ್ರಮಾಣದಲ್ಲಿ ಜನ ಬೆಂಬಲ ಲಭ್ಯವಾಗಿತ್ತು. ಇದನ್ನು ಕಂಡ ದೋಸ್ತಿ ಪಕ್ಷ ನಾಯಕರು ದಿಢೀರ್ ಎಂದು ಪಕ್ಷದ ನಾಯಕರ ಸಭೆ ಕರೆದಿದ್ದಾರೆ.

    ಸುಮಲತಾ ಅವರಿಗೆ ಇಂದು ಕ್ಷೇತ್ರದಲ್ಲಿ ಸಿಕ್ಕ ಜನಬೆಂಬಲದ ನಡುವೆಯೂ ಹಲವು ಜಿಲ್ಲಾ ನಾಯಕರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಪರಿಣಾಮ ಸಿಎಂ ಕುಮಾರಸ್ವಾಮಿ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ವೇದಿಕೆಯಲ್ಲಿ ನಿಂತು ಭಾಗವಹಿಸಿ ಅತೃಪ್ತ ಕಾಂಗ್ರೆಸ್ಸಿಗರು ಬಹಿರಂಗ ಬೆಂಬಲ ನೀಡಿದ ಕಾರಣ ಸಿಎಂ ಎಚ್‍ಡಿಕೆ, ಸಚಿವ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಪರಿಣಾಮ ಡಿಕೆ ಶಿವಕುಮಾರ್ ಇಂದೇ ಸಭೆ ಕರೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಸುಮಲತಾ ಅವರಿಗೆ ಬೆಂಬಲ ನೀಡಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರ ಮನವೊಲಿಸಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ ಎನ್ನಲಾಗಿದ್ದು, ಮುಖಂಡರ ಅಸಮಾಧಾನಗಳನ್ನ ಸರಿಪಡಿಸುವ ಜವಾಬ್ದಾರಿಯನ್ನು ಡಿಕೆಶಿ ಹೊರಲಿದ್ದಾರೆ. ಆ ಮೂಲಕ ನಿಖಿಲ್ ಕುಮಾರಸ್ವಾಮಿರ ಗೆಲುವಿಗೆ ಶ್ರಮಿಸಲಿದ್ದಾರೆ ಎನ್ನಲಾಗಿದೆ.

  • ನನ್ನ ವಿರುದ್ಧ ಮಾತನಾಡಿದವರಿಗೆ ಉತ್ತರವನ್ನು ನೀವು ನೀಡಿ: ಸುಮಲತಾ

    ನನ್ನ ವಿರುದ್ಧ ಮಾತನಾಡಿದವರಿಗೆ ಉತ್ತರವನ್ನು ನೀವು ನೀಡಿ: ಸುಮಲತಾ

    – ನಾನು ಯಾರೆಂದು ಹೇಳುವ ಸಮಯ ಬಂದಿದೆ
    – ರಾಜಕೀಯದಲ್ಲಿ ನನಗೆ ಎಬಿಸಿಡಿಯೂ ಗೊತ್ತಿಲ್ಲ
    – ಜನರ ಅಭಿಮಾನಕ್ಕೆ ಮಣಿದು ಸ್ಪರ್ಧೆಗೆ ಒಪ್ಪಿಕೊಂಡೆ
    – ಕಾಂಗ್ರೆಸ್-ಜೆಡಿಎಸ್‍ಗೆ ತಿರುಗೇಟು ಕೊಟ್ಟ ಸುಮಲತಾ

    ಮಂಡ್ಯ: ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದಾಗ ಮಾತುಗಳ ಬಾಣ ಬಿಡಲು ಆರಂಭಿಸಿದರು. ನಾನು ಅಂತಹ ಮಾತುಗಳಿಗೆ ಉತ್ತರ ಕೊಡುವುದಿಲ್ಲ. ಅವರ ಮಾತುಗಳಿಗೆ ಮತದಾನದ ದಿನ ನೀವು ಉತ್ತರವನ್ನು ನೀಡಬೇಕು ಎಂದು ಸುಮಲತಾ ಹೇಳಿದ್ದಾರೆ.

    ನಾಮಪತ್ರ ಸಲ್ಲಿಸಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮಂಡ್ಯದ ಮೂಲೆ ಮೂಲೆಗೂ ಹೋಗಿ ಜನರನ್ನು ಕೇಳಿದೆ. ನಾನು ರಾಜಕೀಯಕ್ಕೆ ಬರಬಹುದಾ? ಲೋಕಸಭೆಗೆ ನಿಲ್ಲಬಹುದಾ ಎಂದು ಕೇಳಿ ಅಭಿಪ್ರಾಯ ಕಲೆ ಹಾಕಿದೆ. ನೀವು ಯಾವುದೇ ಪಕ್ಷ, ಪಕ್ಷೇತರರಾಗಿ ನಿಂತರೂ ಪರವಾಗಿಲ್ಲ, ಅಂಬರೀಶ್ ಅಣ್ಣನನ್ನ ನೋಡಿ ವೋಟ್ ಹಾಕುತ್ತೇವೆ ಎಂದು ಜಿಲ್ಲೆಯ ಜನತೆ ಹೇಳಿದರು. ಈ ಕಾರಣಕ್ಕೆ ನಾನು ನಿಮ್ಮ ಮುಂದೆ ನಿಂತಿದ್ದೇನೆ ಎಂದು ಹೇಳಿದರು. ಇದನ್ನು ಓದಿ : ಮೈಯಲ್ಲಿರುವ ರಕ್ತವನ್ನ ತೆಗೆದು ನಿಮ್ಮ ಕಾಲು ತೊಳೆದ್ರೂ ಕಡಿಮೆನೇ: ನಟ ದರ್ಶನ್

    ರಾಜಕೀಯಕ್ಕೆ ಬಂದು ಹೆಸರು ಮಾಡುವ ಆಸೆ ನನಗಿರಲಿಲ್ಲ. ಐದಾರು ಭಾಷೆಗಳಲ್ಲಿ 200 ಚಿತ್ರಗಳನ್ನ ಮಾಡಿದ್ದೇನೆ. ಇವತ್ತಿನ ದಿನ ನನ್ನನ್ನ ನಾನು ಪರಿಚಯ ಮಾಡಿಕೊಳ್ಳಬೇಕು. 40 ವರ್ಷಗಳು ಚಿತ್ರರಂಗದಲ್ಲಿದ್ದೆ. 27 ವರ್ಷಗಳ ಕಾಲ ನಿಮ್ಮ ಅಂಬರೀಶ್ ಅಣ್ಣನ ಧರ್ಮ ಪತ್ನಿಯಾಗಿದ್ದೆ. ಯಾರು ನಾನು ಎನ್ನುವ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಸಮಯ ಬಂದಿದೆ. ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ಈ ಮಣ್ಣಿನ ಸೊಸೆ, ಅಂಬರೀಶ್ ಪತ್ನಿ ಮಂಡ್ಯದ ಹೆಣ್ಣು ಮಗಳು. ಈ ಮಣ್ಣಿನ ಮಗ ಅಭಿಷೇಕ್ ತಾಯಿ ಎಂದು ತಿಳಿಸಿದರು. ಇದನ್ನು ಓದಿ : ನಾವು ಮಾಡೋದು ತಪ್ಪು ಅಂದ್ರೆ ಆ ತಪ್ಪನ್ನೇ ಮಾಡ್ತೀವಿ – ನಮ್ ಬಗ್ಗೆ ಕೆಟ್ಟದಾಗಿ ಮಾತನಾಡೋದು ಬಿಡಿ: ಯಶ್

    ನಾನ್ಯಾರು ಎಂದು ಕೇಳುವವರಿಗೆ ನೀವು ಉತ್ತರ ಕೊಟ್ಟಿದ್ದೀರಿ. ಜೀವನದಲ್ಲಿ ಯಾವ ದಿನ ಬರಬಾರದೆಂದು ಅಂದುಕೊಂಡಿದ್ದೇನೋ ಆ ದಿನ ಬಂದಿತ್ತು. ನಾನು ಕಳೆದ ಮೂರ್ನಾಲ್ಕು ತಿಂಗಳಿಂದ ತುಂಬಾ ಕಷ್ಟದಲ್ಲಿದ್ದೆ. ಆಗ ನೀವು ನನಗೆ ಧೈರ್ಯ ತುಂಬಿದಿರಿ. ಸಾಕಷ್ಟು ವರ್ಷ ಅಂಬರೀಶ್ ಕಾಂಗ್ರೆಸ್‍ಗಾಗಿ ದುಡಿದಿದ್ದರು. ನೀವು ನಮ್ಮನ್ನ ಕೈಬಿಟ್ಟರೆ ನೀವು ಮಂಡ್ಯದ ಸೊಸೆಯಲ್ಲ ಎಂದು ಅಂಬರೀಶ್ ಅಭಿಮಾನಿಗಳು ಹೇಳಿದರು. ಆದರೆ ನನಗೆ ರಾಜಕೀಯಲ್ಲಿ ಎಬಿಸಿಡಿ ಕೂಡ ಗೊತ್ತಿಲ್ಲ ಅಂದರೂ ಬಿಡದೇ ಅಂಬರೀಶಣ್ಣ ಮಾಡಿರುವ ಕೆಲಸಗಳು ಬೆನ್ನಿಗಿವೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಅಂಬರೀಶ್ ಅಭಿಮಾನಿಗಳು ನನ್ನಲ್ಲಿ ಕೇಳಿಕೊಂಡರು ಎಂದು ಸುಮಲತಾ ಹೇಳಿದರು.

    ಅಂಬರೀಶ್ ಅವರನ್ನ ನಂಬಿದ್ದ ಜನತೆ ಪರ ನಿಂತುಕೊಳ್ಳುವುದು ಸರಿ ಅನಿಸಿತು. ಅಂಬರೀಶ್ ಸಾಕಷ್ಟು ವರ್ಷ ಕಾಂಗ್ರೆಸ್‍ಗಾಗಿ ದುಡಿದಿದ್ದಾರೆ. ಹೀಗಾಗಿ ಕಾಂಗ್ರೆಸ್ ಕದ ತಟ್ಟಿದ್ದೆ. ನಿಮಗೆ ಮಂಡ್ಯ ಬೇಡವೇ? ಯಾಕೆ ಬಿಟ್ಟು ಕೊಡುತ್ತಿರುವಿರಿ ಎಂದು ಕೇಳಿದೆ. ಅದಕ್ಕೆ ಅವರು ಮೈತ್ರಿ ಧರ್ಮದ ಕಥೆ ಹೇಳಿದರು ಎಂದು ತಿಳಿಸಿದರು.

    ನಮ್ಮ ಕುಟುಂಬಕ್ಕಿಂತ ಮಂಡ್ಯಕ್ಕೆ ಅಂಬರೀಶ್ ಅವರ ಅಗತ್ಯವಿದೆ. ಅವರಿಗೆ ಹೆಚ್ಚು ಆಯಸ್ಸು ಕೊಡು ಎಂದು ದೇವರಲ್ಲಿ ಪ್ರಾರ್ಥಿಸಿದೆ. ಆದರೆ ದೇವರಿಗೆ ನನ್ನ ಪ್ರಾರ್ಥನೆ ತಲುಪಲಿಲ್ಲ. ಹೀಗಾಗಿ ಅವರನ್ನ ತನ್ನ ಬಳಿಗೆ ಕರೆದುಕೊಂಡುಬಿಟ್ಟ. ನಾನು ಕಣ್ಣೀರು ಹಾಕುವುದಿಲ್ಲ. ಧೈರ್ಯವಾಗಿ ಎಲ್ಲವನ್ನೂ ಎದುರಿಸುತ್ತೇವೆ ಎಂದು ಹೇಳಿ ಮತದಾರರ ಮನ ಒಲಿಸಲು ಪ್ರಯತ್ನಿಸಿದರು.

    ನಾನು ಗೆಲುವು ಸಾಧಿಸಿದರೆ ವಿದೇಶಕ್ಕೆ ಹೋಗುತ್ತೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂಬರೀಶ್ ಅವರೊಂದಿಗೆ ನಾನು ಎಲ್ಲಾ ದೇಶಗಳನ್ನು ನೋಡಿದ್ದೆ. ಈಗ ಮಂಡ್ಯದ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

    ಅಂಬರೀಶ್ ಅವರ ಪರವಾಗಿ ನಿಂತು ಕೆಲಸ ಮಾಡುವ ಅವಕಾಶ ಕೊಡಿ. ನನಗೆ ಯಾವುದೇ ದುರಾಸೆಯಿಲ್ಲ. ಮಂಡ್ಯದಿಂದ ಸ್ಪರ್ಧೆ ಮಾಡುತ್ತಿರುವುದು ಯಾರನ್ನೂ ವಿರೋಧಿಸಲು ಅಲ್ಲ. ಎದುರು ಹಾಕಿಕೊಳ್ಳಲು ಅಲ್ಲ. ಅಂಬರೀಶ್ ಅವರನ್ನು ಬೆಳೆಸಿದ ಜನತೆಗಾಗಿ ನಾನು ಹೋರಾಡುತ್ತಿರುವೆ ಎಂದು ಕಾಂಗ್ರೆಸ್-ಜೆಡಿಎಸ್‍ಗೆ ಟಾಂಗ್ ಕೊಟ್ಟರು.

    ಅಂಬರೀಶ್ ಕಲಿಯುಗದ ಕರ್ಣ. ಅವರದ್ದು ಕೊಡುಗೈ. ಅಂಬರೀಶ್ ಯಾವತ್ತೂ ಸ್ವಾರ್ಥ ರಾಜಕಾರಣ, ಜಾತಿ, ದ್ವೇಷದ ರಾಜಕಾರಣ ಮಾಡಿಲ್ಲ. ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಹೀಗಾಗಿ ನನ್ನ ವಿರುದ್ಧ ವಾಗ್ದಾಳಿ ನಡೆಸಲು ವಿರೋಧಿಗಳಿಗೆ ಅವಕಾಶ ಸಿಗುತ್ತಿಲ್ಲ. ಅವರು ನನ್ನ ವಿರುದ್ಧ ಏನು ಮಾತನಾಡಬೇಕು ಎನ್ನುವುದನ್ನು ಯೋಚಿಸುತ್ತಿದ್ದಾರೆ ಎಂದರು.

    ಕೇಬಲ್ ಕಟ್ ಆಗಿರುವ ವಿಚಾರವನ್ನು ಪ್ರಸ್ತಾಪ ಮಾಡಿದ ಅವರು, ಜನರ ಹಾಗೂ ನಮ್ಮ ಮಧ್ಯೆ ಇರುವ ಪ್ರೀತಿಯನ್ನು ಅವರು ಕಟ್ ಮಾಡಲಿ. ಹೀಗೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ನಿಮ್ಮ ನಡುವೆ ಎಷ್ಟೋ ಜನ್ಮಗಳ ಸಂಬಂಧವಿದೆ ಎಂದು ಹೇಳಿದರು.

    ನನ್ನ ಬೆಂಬಲಕ್ಕೆ ರೈತ ಸಂಘಗಳು ಬೆಂಬಲ ನೀಡಿವೆ. ನಾನು ರೈತರ ಪರವಾಗಿ ಪಾರ್ಲಿಮೆಂಟ್‍ನಲ್ಲಿ ಮಾತನಾಡುತ್ತೇನೆ. ರೈತರ ಹೋರಾಟದ ಜೊತೆಗೆ ಇರುತ್ತೇನೆ ಎಂದು ಅವರು ಹೇಳಿದರು.

    ಉಸಿರು ಉಸಿರಿನಲ್ಲಿ, ಮನ ಮನದಲ್ಲಿ, ಮನೆ ಮನೆಯಲ್ಲಿ ಅಂಬರೀಶ್ ಅಣ್ಣ ಅಂತಾ ಪೂಜಿಸುತ್ತಿರುವ ಮಂಡ್ಯದ ಜನತೆಗೆ ನನ್ನ ತುಂಬು ಹೃದಯದ ನಮಸ್ಕಾರಗಳು. ಇಲ್ಲಿಗೆ ಬಂದಿರುವ ನಟರಾದ ದರ್ಶನ್, ಯಶ್ ಅಭಿಮಾನಿಗಳಿಗೂ ನಮಸ್ಕಾರ  ಎಂದು ಸುಮಲತಾ ಆರಂಭದಲ್ಲಿ ತಿಳಿಸಿ ತಮ್ಮ ಭಾಷಣವನ್ನು ಆರಂಭಿಸಿದರು.

  • ಅಂಬಿ ಅಭಿಮಾನದ ಹೊಳೆಗೆ ಸಾಕ್ಷಿಯಾಯ್ತು ಸಕ್ಕರೆ ನಾಡು!

    ಅಂಬಿ ಅಭಿಮಾನದ ಹೊಳೆಗೆ ಸಾಕ್ಷಿಯಾಯ್ತು ಸಕ್ಕರೆ ನಾಡು!

    ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಹೀಗಾಗಿ ಇಂದು ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಪ್ರಚಾರಕ್ಕೆ ಧುಮುಕಿದ್ದಾರೆ.

    ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ಸುಮಲತಾ ಬೃಹತ್ ಸಮಾವೇಶ ನಡೆಸಿದ್ದು, ಈ ವೇಳೆ ಸುಮಲತಾ ಅವರಿಗೆ ನಟರಾದ ಯಶ್ ಹಾಗೂ ದರ್ಶನ್ ಎಡಬಲ ನಿಂತು ಮತ್ತಷ್ಟು ಬಲ ನೀಡಿದ್ದಾರೆ. ಅಲ್ಲದೆ ಈ ವೇಳೆ ಸಾವಿರಾರು ಮಂದಿ ಅಂಬಿ ಅಭಿಮಾನಿಗಳು ರೋಡ್ ಶೋದಲ್ಲಿ ಭಾಗಿಯಾಗಿದ್ದಾರೆ. ಸಮಲತಾ, ಯಶ್ ಹಾಗೂ ದರ್ಶನ್ ಜನರತ್ತ ಕೈ ಬೀಸುವ ಮೂಲಕ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ಪಾಸ್ ಮಾಡಿದ್ದಾರೆ.

    ಒಟ್ಟಿನಲ್ಲಿ ಜೆಡಿಎಸ್ ಭದ್ರಕೋಟೆ ಎಂದೇ ಪ್ರಖ್ಯಾತವಾದ ಮಂಡ್ಯದಲ್ಲಿ ಸುಮಲತಾ ಇಂದು ರೋಡ್ ಶೋ ನಡೆಸುವ ಮೂಲಕ ರಣಕಹಳೆ ಮೊಳಗಿಸಿದ್ದಾರೆ.

    ಇಂದು ಬೆಳಗ್ಗೆ ಚಾಮುಂಡಿ ತಾಯಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ನೇರವಾಗಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು. ಸುಮಾರು 11 ಗಂಟೆಯ ನಂತರ ಸುಮಲತಾ ಅವರು ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

    ಡಿಸಿ ಕಚೇರಿಯಿಂದ ನಗರದ ವಿಶ್ವಶ್ವರಯ್ಯ ಪ್ರತಿಮೆಯ ಬಳಿ ಬಂದು ಮಾಲಾರ್ಪಣೆ ಮಾಡಿದ್ರು. ಇದಾದ ಬಳಿಕ ರೋಡ್ ಶೋ ಆರಂಭ ಮಾಡಿದ್ರು. ಈ ವೇಳೆ ನಟ ಯಶ್ ಹಾಗೂ ದರ್ಶನ್ ಜೊತೆಯಾದ್ರು. ರೋಡ್ ಶೋ ವೇಳೆ ಸಾವಿರಾರು ಅಂಬಿ ಅಭಿಮಾನಿಗಳು ಹಾಗೂ ಜಾನಪದ ಕಲಾತಂಡಗಳು ಸುಮಲತಾ ಅವರಿಗೆ ಸಾಥ್ ನೀಡಿತ್ತು.

    ರೋಡ್ ಶೋ ವೇಳೆ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ನೋಡಲು ಮರ ಹತ್ತಿದ್ದಾರೆ. ರೋಡ್ ಶೋನಿಂದಾಗಿ ಹೈವೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಹೀಗಾಗಿ ಸಾಲುಗಟ್ಟಿ ನಿಂತ ವಾಹನಗಳ ಮೇಲೆ ನಿಂತು ಅಭಿಮಾನಿಗಳು ಮೆರವಣಿಗೆ ವೀಕ್ಷಿಸಿದ್ದಾರೆ.

  • ಅಂದು ಅಂಬರೀಶ್ ಜೊತೆ ನಾನಿರುತ್ತಿದ್ದೆ, ಇಂದು ಅವರು ನನ್ನ ಜೊತೆ ಇದ್ದಾರೆ- ಸುಮಲತಾ

    ಅಂದು ಅಂಬರೀಶ್ ಜೊತೆ ನಾನಿರುತ್ತಿದ್ದೆ, ಇಂದು ಅವರು ನನ್ನ ಜೊತೆ ಇದ್ದಾರೆ- ಸುಮಲತಾ

    ಮೈಸೂರು: ಅಂಬರೀಶ್ ಅವರು ನಾಮಪತ್ರ ಸಲ್ಲಿಸುತ್ತಿದ್ದ ವೇಳೆ ಅವರ ಜೊತೆ ನಾನಿರುತ್ತಿದ್ದೆ. ಆದ್ರೆ ಇಂದು ನಾನು ನಾಮಪತ್ರ ಸಲ್ಲಿಸುವಾಗ ಅವರು ನನ್ನ ಜೊತೆ ಇದ್ದಾರೆ ಎಂದು ಸುಮಲತಾ ಹೇಳಿದ್ದಾರೆ.

    ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ಅಂಜಿಕೆ ಇಲ್ಲ. ಅಂದು ಅಂಬಿ ನಾಮಪತ್ರ ಸಲ್ಲಿಸುವ ವೇಳೆ ನಾನು ಜೊತೆಯಲ್ಲಿ ಇರುತ್ತಿದ್ದೆ. ಇಂದು ಅವರು ನನ್ನ ಜೊತೆ ಇದ್ದಾರೆ. ಅಂಬಿ ಅಭಿಮಾನಿಗಳಿಗಾಗಿ ಇಂತಹ ಹಜ್ಜೆ ಇಟ್ಟಿದ್ದೇನೆ. ಇದರಲ್ಲಿ ರಿಸ್ಕ್ ಎನ್ನುವ ಪ್ರಶ್ನೆ ಇಲ್ಲ ಅಂದ್ರು.

    ಇಂದು ನಗರದಲ್ಲಿ ಸುಮಲತಾ ಅವರು ಸಮಾವೇಶ ನಡೆಸಲಿದ್ದು, ಕಾರ್ಯಕ್ರಮದಲ್ಲಿ ನಟ- ನಟಿಯರು ಭಾಗಿಯಾಗಲಿದ್ದಾರೆ. ಸುಮಲತಾ ಸಮಾವೇಶದಲ್ಲಿ ಪಾಲ್ಗೊಳ್ಳುವ ಕೈ ಮುಖಂಡರ ಮೇಲೆ ಜೆಡಿಎಸ್ ಪಕ್ಷ ನಿಗಾ ಇಟ್ಟಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುಖಂಡರ ಮಾಹಿತಿಯನ್ನ ಕಲೆ ಹಾಕುವಂತೆ ವರಿಷ್ಠರಿಂದ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

    ಮೈತ್ರಿ ಧರ್ಮ ಮೀರಿ ಸುಮಲತಾಗೆ ಬೆಂಬಲಿಸಿದ್ರೆ, ನಿಖಿಲ್ ಗೆ ಹಿನ್ನಡೆಯಾಗುವ ಹಿನ್ನಲೆಯಲ್ಲಿ ಗೌಪ್ಯವಾಗಿ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಇಂದು ನಾಗಮಂಗಲ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಸುಮಲತಾಗೆ ಅಧಿಕೃತ ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, 40-50 ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇರುವುದಾಗಿ ತಿಳಿದು ಬಂದಿದೆ.

  • ಇಂದು ಮಂಡ್ಯ ಅಖಾಡದಲ್ಲಿ ಸುಮಲತಾ ನಾಮಪತ್ರ – ಸಿಎಂಗೆ ಬಹಿರಂಗ ಸಮಾವೇಶದ ಮೂಲಕ ಸೆಡ್ಡು

    ಇಂದು ಮಂಡ್ಯ ಅಖಾಡದಲ್ಲಿ ಸುಮಲತಾ ನಾಮಪತ್ರ – ಸಿಎಂಗೆ ಬಹಿರಂಗ ಸಮಾವೇಶದ ಮೂಲಕ ಸೆಡ್ಡು

    – ಸುಮಲತಾಗೆ ನಟ ದರ್ಶನ್, ಯಶ್ ಸಾಥ್

    ಮಂಡ್ಯ: ಹೈವೊಲ್ಟೇಜ್ ಕ್ಷೇತ್ರವಾಗಿರೋ ಮಂಡ್ಯದಲ್ಲಿ ಘಟಾನುಘಟಿಗಳ ಸ್ಪರ್ಧೆಯಿಂದ ಗಮನ ಸೆಳೆದಿರೋ ಕ್ಷೇತ್ರದಲ್ಲಿಂದು ದಿನವಿಡೀ ಪಾಲಿಟಿಕ್ಸ್ ನಡೆಯಲಿದೆ. ಕಾರಣ ಸುಮಲತಾ ಇಂದು ನಾಮಪತ್ರ ಸಲ್ಲಿಸಲಿದ್ದು, ನಟರಾದ ದರ್ಶನ್, ಯಶ್ ಭಾಗಿಯಾಗಲಿದ್ದಾರೆ. ಅಲ್ಲದೆ ಬಹಿರಂಗ ಸಮಾವೇಶ ನಡೆಯಲಿದ್ದು, ಸಿಎಂಗೆ ಭರ್ಜರಿಯಾಗಿಯೇ ಟಾಂಗ್ ನೀಡಲು ವೇದಿಕೆ ಸಜ್ಜಾಗಿದೆ.

    ಹೌದು. ರಾಜ್ಯದ ಹೈವೊಲ್ಟೇಜ್ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರ ಇಂದು ರಣೋತ್ಸಾಹದ ರಾಜಕೀಯ ಸಂಗ್ರಾಮಕ್ಕೆ ಸಾಕ್ಷಿಯಾಗಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕಾಗಿ ಅಂಬಿ ಅಭಿಮಾನಿಗಳು ಅಖಾಡದ ಫೈಟ್‍ಗೆ ಸಜ್ಜಾಗಿದೆ.

    ಮಂಗಳವಾರ ರಾತ್ರಿಯೇ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಸುಮಲತಾ ಬೆಳಗ್ಗೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಬೆಳಗ್ಗೆ 11ಕ್ಕೆ ಮಂಡ್ಯದ ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಾದ ಬಳಿಕ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ನಡೆಯುವ ಬೃಹತ್ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.

    ಸುಮಲತಾ ಪರ ಪ್ರಚಾರಕ್ಕೆ ಸ್ಯಾಂಡಲ್‍ವುಡ್ ದಂಡೇ ಹರಿದು ಬರುವ ಸಾಧ್ಯತೆ ಇದೆ. ಅದರಲ್ಲೂ ನಟ ದರ್ಶನ್ ಹಾಗೂ ಯಶ್ ಭಾಗವಹಿಸುತ್ತಾ ಇರೋದು ಮಂಡ್ಯದ ರಣಕಣವನ್ನು ಮತ್ತಷ್ಟು ರಂಗೇರಿಸಿದೆ. ಇದಲ್ಲದೆ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಅನೇಕರು ಸಾಥ್ ನೀಡಲಿದ್ದಾರೆ. ಜೊತೆಗೆ ಕಾಂಗ್ರೆಸ್ ನ ಕೆಲ ಅತೃಪ್ತರು ಭಾಗವಹಿಸುವ ಸಾಧ್ಯತೆ ಇದೆ.

    ಇತ್ತ ಸುಮಲತಾ ಅಂಬರೀಶ್ ಗೆ ಟಕ್ಕರ್ ಕೊಡಲು ತೀರ್ಮಾನಿಸಿರುವ ಸಿಎಂ ಕುಮಾರಸ್ವಾಮಿ, ನಿನ್ನೆ ರಾತ್ರಿ ಮಂಡ್ಯದ ಕೆ.ಆರ್.ಎಸ್. ನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದು, ಜಿಲ್ಲೆಯ ಜೆಡಿಎಸ್- ಕಾಂಗ್ರೆಸ್ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲದೆ ಇಂದು ಕೂಡ ಮಂಡ್ಯದಲ್ಲೇ ವಾಸ್ತವ್ಯ ಹೂಡಿ ಗೇಮ್ ಪ್ಲಾನ್ ರಚಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಜೆ ವೇಳೆಗೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಶ್ರೀಗಳ ಆಶಿರ್ವಾದ ಪಡೆದು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ. ಇತ್ತ ನಿಖಿಲ್ ಕುಮಾರಸ್ವಾಮಿ ಕೂಡ ಇಂದು ಶ್ರೀರಂಗಪಟ್ಟಣ, ಮದ್ದೂರು ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಲಿದ್ದಾರೆ.

    ಒಟ್ಟಾರೆ ನಿಖಿಲ್ ವರ್ಸಸ್ ಸುಮಲತಾ ಸ್ಪರ್ಧೆಯಿಂದ ಹೈ ವೊಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಇಂದು ರಾಜಕೀಯ ನಾಯಕರು, ಸಿನಿಮಾ ನಟರ ದಂಡೇ ಬೀಡು ಬಿಟ್ಟಿದ್ದು, ಇಡೀ ರಾಜ್ಯದ ಜನರೇ ಕುತೂಹಲದಿಂದ ನೋಡುವಂತೆ ಮಾಡಿದೆ.

  • ರೈತರು ಆತ್ಮಹತ್ಯೆ ಮಾಡ್ಕೊಂಡಾಗ ಜೋಡಿ ಎತ್ತುಗಳು ಎಲ್ಲಿ ಹೋಗಿದ್ವು – ಯಶ್, ದರ್ಶನ್‍ಗೆ ಟಾಂಗ್

    ರೈತರು ಆತ್ಮಹತ್ಯೆ ಮಾಡ್ಕೊಂಡಾಗ ಜೋಡಿ ಎತ್ತುಗಳು ಎಲ್ಲಿ ಹೋಗಿದ್ವು – ಯಶ್, ದರ್ಶನ್‍ಗೆ ಟಾಂಗ್

    ಮಂಡ್ಯ: ನಟಿ ಸುಮಲತಾ ಅಂಬರೀಶ್ ಪರ ನಿಂತ ಸ್ಯಾಂಡಲ್‍ವುಡ್ ನಟರಾದ ಯಶ್ ಹಾಗೂ ದರ್ಶನ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

    ನಾನು ಯಶ್ ಜೋಡಿ ಎತ್ತುಗಳಂತೆ ಸುಮಲತಾರಿಗೆ ಹೆಗಲು ಕೊಡ್ತೀವಿ ಎಂದು ದರ್ಶನ್ ನಿನ್ನೆ ಹೇಳಿಕೆ ನೀಡಿದ್ದ ಬೆನ್ನಲ್ಲೇ ಜೆಡಿಎಸ್ ಕಾರ್ಯಕರ್ತರು ನಟರ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ. ಅಲ್ಲದೆ ತಮ್ಮ ಸಿಟ್ಟನ್ನು ಜೆಡಿಎಸ್ ಕರುನಾಡು ಎಂಬ ಫೇಸ್‍ಬುಕ್ ಪೇಜ್ ನಲ್ಲಿ ಬರೆದುಕೊಳ್ಳುವ ಮೂಲಕ ನಟರಿಗೆ ಸವಾಲೆಸೆದಿದ್ದಾರೆ.

    ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
    “ನಾವು ದುಡ್ಡು ಕೊಟ್ಟು ಮೂರು ಗಂಟೆ ನಿಮ್ಮ ಸಿನಿಮಾ ನೋಡುತ್ತೇವೆ ಅಷ್ಟೆ. ಆದ್ರೆ ಪಕ್ಷದ ವಿಚಾರಕ್ಕೆ ಬಂದಾಗ ನಾವು ಕುಮಾರಣ್ಣನ ಬಿಟ್ಟು ಕೊಡಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗ ಜೋಡೆತ್ತುಗಳು ಎಲ್ಲಿ ಮೇಯೋಕೆ ಹೋಗಿದ್ವು..?. ಮಂಡ್ಯ ಬಸ್ ಆಕ್ಸಿಡೆಂಟ್, ಕಾವೇರಿ ಹೋರಾಟದ ಸಮಯದಲ್ಲಿ ಈ ಜೋಡಿ ಎತ್ತಗಳು ಎಲ್ಲಿ ಹೋಗಿದ್ದವು ಎಂದು ಪ್ರಶ್ನಿಸಿದ ಕಾರ್ಯಕರ್ತರು, ಜೋಡಿ ಎತ್ತುಗಳನ್ನು ಪಳಗಿಸಿ ಉಳುಮೆ ಮಾಡೋದು ಗೊತ್ತು. ಬನ್ನಿ ನಮ್ಮ ಮಂಡ್ಯಕ್ಕೆ” ಎಂದು ಸವಾಲು ಹಾಕಿದ್ದಾರೆ.

    ದರ್ಶನ್ ಹೇಳಿದ್ದೇನು?
    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸುಮಲತಾ ಅಂಬರೀಶ್ ಸೋಮವಾರ ತಮ್ಮ ಅಂತಿಮ ನಿರ್ಧಾರ ತಿಳಿಸಿದ್ದರು. ನಿನ್ನೆ ಖಾಸಗಿ ಹೊಟೇಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಪಕ್ಷೇತರವಾಗಿ ಅಭ್ಯರ್ಥಿಸುವ ತಮ್ಮ ದಿಟ್ಟ ನಿರ್ಧಾರವನ್ನು ಘೋಷಿಸಿದ್ದರು. ಈ ವೇಳೆ ನಟರಾದ ಯಶ್ ಹಾಗೂ ದರ್ಶನ್ ಸಾಥ್ ನೀಡಿದ್ದರು. ಅಲ್ಲದೆ ಇದೇ ಸಂದರ್ಭದಲ್ಲಿ ಮಾತನಾಡಿದ ದರ್ಶನ್, ನಾನೊಬ್ಬನೇ ಇಲ್ಲ. ನಮ್ಮ ಹೀರೋ ಯಶ್ ಕೂಡ ಇದ್ದಾರೆ. ನಮ್ಮದು ಒಂಟಿ ಎತ್ತಲ್ಲ, ಜೋಡಿ ಎತ್ತು. ಸುದೀಪ್ ಪ್ರಚಾರ ಮಾಡುವ ಬಗ್ಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು ಎಂದು ಪ್ರತಿಕ್ರಿಯಿಸಿದ್ದರು. ದರ್ಶನ್ ಅವರ ಈ ಹೇಳಿಕೆ ಇದೀಗ ಮಂಡ್ಯ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದೆ.

  • ಶೃಂಗೇರಿ ಶಾರದಾಂಬೆಗೆ ಎಚ್‍ಡಿಕೆ ಮೊರೆ-ಸಪ್ತಗಿರಿವಾಸ ಸನ್ನಿಧಾನದಲ್ಲಿ ಸುಮಲತಾ ಸಂಕೀರ್ತನೆ

    ಶೃಂಗೇರಿ ಶಾರದಾಂಬೆಗೆ ಎಚ್‍ಡಿಕೆ ಮೊರೆ-ಸಪ್ತಗಿರಿವಾಸ ಸನ್ನಿಧಾನದಲ್ಲಿ ಸುಮಲತಾ ಸಂಕೀರ್ತನೆ

    ಬೆಂಗಳೂರು: ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ಅಣಿಯಾಗಿದ್ದಾಯ್ತು. ನಟಿ ಸುಮಲತಾ ಅಂಬರೀಶ್ ಸ್ಪರ್ಧೆ ಘೋಷಣೆ ಮಾಡಿದ್ದಾಯ್ತು. ಇದೀಗ ಗೆಲುವಿಗಾಗಿ ಉಭಯ ಅಭ್ಯರ್ಥಿಗಳು ದೇವರ ಮೊರೆ ಹೋಗಿದ್ದಾರೆ. ಈಗಾಗಲೇ ನಿಖಿಲ್ ಜಯಕ್ಕಾಗಿ ತಂದೆ ಹೆಚ್.ಡಿ.ಕುಮಾರಸ್ವಾಮಿ ಶೃಂಗೇರಿ ಶಾರದೆ ಸನ್ನಿಧಾನದಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಇತ್ತ ಸುಮಲತಾ ನಾಮಪತ್ರ ಹಿಡಿದುಕೊಂಡು ಶ್ರೀನಿವಾಸನ ಸನ್ನಿಧಿಗೆ ಹೊರಟಿದ್ದಾರೆ.

    ಅತ್ತ ಶಕ್ತಿದೇವತೆಯ ಸನ್ನಿಧಾನಕ್ಕೆ ನಿಖಿಲ್ ಹೆಜ್ಜೆಯಿಡುತ್ತಿದ್ದಂತೆ ಸುಮಲತಾ ಕೂಡ ತಾವು ನಂಬುವ ತಿಮ್ಮಪ್ಪನ ಸನ್ನಿಧಾನಕ್ಕೆ ನಾಮಪತ್ರ ತೆಗೆದುಕೊಂಡು ತೆರಳಿ ಇಂದು ಪೂಜೆ ಸಲ್ಲಿಸಲಿದ್ದಾರೆ. ಅಷ್ಟೇ ಅಲ್ಲ ನಾಳೆ ನಾಮಪತ್ರ ಸಲ್ಲಿಕೆಗೂ ಮುನ್ನ ನಾಡಿನ ಅಧಿದೇವತೆ ಚಾಮುಂಡಿಗೂ ಅಗ್ರಪೂಜೆ ಸಲ್ಲಿಸಲಿದ್ದಾರೆ.

    ಒಂದೇ ಕ್ಷೇತ್ರ ಇಬ್ಬರು ಭಕ್ತರ ಗೆಲುವಿನ ಬೇಡಿಕೆ ದೇವರು ಅದ್ಯಾರಿಗೆ ತಥಾಸ್ತು ಎಂದು ಆಶೀರ್ವಾದ ಮಾಡ್ತಾರೆ ಎಂಬುದ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಮಂಡ್ಯದ ಮಣ್ಣಿನ ಋಣ ಅದ್ಯಾರಿಗಿದೆಯೋ ಗೊತ್ತಿಲ್ಲ. ಆದ್ರೆ ದೇವರಿಗೆ ಮಾತ್ರ ಉಭಯ ಅಭ್ಯರ್ಥಿಗಳು ಜಿದ್ದಿಗೆ ಬಿದ್ದವರಂತೆ ಮೊರೆ ಇಡುತ್ತಿದ್ದಾರೆ.