Tag: ಸುಮಲತಾ ಅಂಬರೀಶ್

  • ಮಂಡ್ಯ ಜನ್ರ ಸೇವೆ ಮಾಡಲು ನಿಂತಿದ್ದೇನೆ – ಸುಮಲತಾಗೆ ಸುಮಲತಾ ಸವಾಲು

    ಮಂಡ್ಯ ಜನ್ರ ಸೇವೆ ಮಾಡಲು ನಿಂತಿದ್ದೇನೆ – ಸುಮಲತಾಗೆ ಸುಮಲತಾ ಸವಾಲು

    ಮಂಡ್ಯ: ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ರೆ ನಾವ್ಯಾರು ನಿಲ್ಲೋದೆ ಬೇಡವಾ? ಜೆಡಿಎಸ್ ನ ನಾಯಕರು ಯಾರೂ ನನಗೆ ಕಣಕ್ಕೆ ನಿಲ್ಲಲು ಸೂಚಿಸಿಲ್ಲ. ನಾನೇ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಸುಮಲತಾ ಹೇಳಿದ್ದಾರೆ.

    ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಹೆಸರಿನ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಸುಮಲತಾ ಅಂಬರೀಶ್ ಅವರ ವಿರುದ್ಧ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಜನತೆಗೆ ಸೇವೆ ಸಲ್ಲಿಸಬೇಕು ಎಂದು ಸ್ಪರ್ಧಿಸಲು ತೀರ್ಮಾನಿಸಿದ್ದೆ. ಹಾಗೆಯೇ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದರು. ಬಳಿಕ ಬೇಕು ಅಂತಲೇ ತಮ್ಮ ವಿರುದ್ಧ ತಮ್ಮ ಹೆಸರಿನ ಅಭ್ಯರ್ಥಿಯನ್ನೆ ಕಣಕ್ಕಿಳಿಸಿದ್ದಾರೆ ಎಂಬ ಸುಮಲತಾ ಅಂಬರೀಶ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಗೋತ್ತಿದೆ ಅಂದಮೇಲೆ ಸುಮ್ಮನಿರಲಿ. ಎಲ್ಲಾ ತಿಳಿದುಕೊಂಡಿರುವ ಮೇಲೆ ಸುಮಲತಾ ಅವರು ಮಾತನಾಡುವ ಅವಶ್ಯಕತೆಯೇ ಎಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸುಮಲತಾಗೆ ಬಿಗ್ ಶಾಕ್ ಕೊಟ್ಟ ದಳಪತಿಗಳು- ಮಂಡ್ಯದಲ್ಲಿ ಒಂದೇ ಹೆಸರಿನ 4 ಮಂದಿ ಸ್ಪರ್ಧೆ

    ಈ ಹಿಂದೆ ನಾನು ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷೆಯಾಗಿದ್ದೆ. ಹೀಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಣ ಅಂತ ಮನಸಾಯ್ತು. ಆದರಿಂದ ಸ್ಪರ್ಧೆ ಮಾಡಿದ್ದೇನೆ ಎಂದರು. ಈಗಾಗಲೇ ಜೆಡಿಎಸ್‍ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಆದ್ರೆ ನನಗೂ ಜನಸೇವೆ ಮಾಡಬೇಕು ಎಂದನಿಸಿತ್ತು, ಈಗ ಅವಕಾಶ ಸಿಕ್ಕಿದೆ. ನನಗೆ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನಿಂದ ಯಾರು ಚುನಾವಣೆಗೆ ನಿಲ್ಲಿ ಅಂತ ಒತ್ತಡ ಹಾಕಿಲ್ಲ. ನನಗೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಅಂತ ಅನಿಸಿತು ಅದಕ್ಕೆ ನಿಂತಿದ್ದೇನೆ ಎಂದು ತಿಳಿಸಿದರು.

    ಬಳಿಕ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ರೆ ನಾವ್ಯಾರು ನಿಲ್ಲುವುದು ಬೇಡವಾ? ನಾವು ರಾಜಕೀಯ ಮಾಡಬಾರದಾ. ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದೇನೆ, ಚುನಾವಣೆ ಎದುರಿಸ್ತೇನೆ. ನಾಮಪತ್ರ ಸಲ್ಲಿಸುವ ವೇಳೆ ಕೂಡ ಜೆಡಿಎಸ್‍ನವರು ಬೆಂಬಲ ನೀಡಿಲ್ಲ. ನಾನು ನನ್ನ ಮಗ ಹೋಗಿ ನಾಮಪತ್ರ ಸಲ್ಲಿಸಿ ಬಂದಿದ್ದೇವೆ. ರಾಜಕೀಯದಿಂದ ದೂರ ಇದ್ದು 8 ವರ್ಷ ಆಗಿದೆ. ಆದ್ರೆ ಈಗ ಮತ್ತೆ ರಾಜಕೀಯಕ್ಕೆ ಬಂದಿದ್ದೇನೆ. ಜನರು ಯಾರು ಮೂರ್ಖರಲ್ಲ. ಜನರಿಗೆ ಯಾರ ಮೇಲೆ ವಿಶ್ವಾಸವಿದೆಯೋ ಅವರಿಗೆ ಮತ ಹಾಕುತ್ತಾರೆ. ನಾನು ನಾಮಪತ್ರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಅಂತ ಟಿಎಂ ಹೊಸೂರು ಸುಮಲತಾ ಹೇಳಿದ್ದಾರೆ.

  • ಅಂಬಿ, ಡಿಬಾಸ್ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದ ಅಭಿಷೇಕ್

    ಅಂಬಿ, ಡಿಬಾಸ್ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದ ಅಭಿಷೇಕ್

    ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ತಾಯಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ಮಾಡುತ್ತಿರುವ ಅಭಿಷೇಕ್, ತಂದೆ ಅಂಬರೀಶ್ ಮತ್ತು ಡಿ.ಬಾಸ್ ದರ್ಶನ್ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಿ.ಹೊಸಹಳ್ಳಿ ಗ್ರಾಮದಲ್ಲಿ ಸುಮಲತಾ ಅವರು ಇಂದು ಪ್ರಚಾರ ನಡೆಸಿದ್ದರು. ಈ ವೇಳೆ ಅಭಿಷೇಕ್ ಅವರು, ಮಂಡ್ಯದವರು ನಮ್ಮ ಮೇಲೆ ಇಟ್ಟಿರುವ ಪ್ರೀತಿ ಬಿಟ್ಟುಕೊಡುವ ಚಾನ್ಸೇ ಇಲ್ಲ ಎಂದು ರೆಬಲ್ ಸ್ಟಾರ್ ಅಂಬರೀಶ್ ಡೈಲಾಗ್ ಹೊಡೆದರು. ಬಳಿಕ ಡಿ ಬಾಸ್ ಡೈಲಾಗ್ ಬೇಕಾ ಎಂದು ಮತದಾರರನ್ನು ಕೇಳಿ, ಅಮ್ಮ ನಡೆದಿದ್ದೆ ದಾರಿ, ತಾಕತ್ತಿದ್ರೆ ಕಟ್ಟಾಕ್ರೋ ಎಂದು ಡೈಲಾಗ್ ಹೇಳಿದರು.

    ಅಭಿಷೇಕ್ ಮಾತನಾಡುವಾಗ ಮೈಕ್ ಕೈ ಕೊಟ್ಟಿತು. ಆಗ ಮಗನ ಕೈಯಿಂದ ಮೈಕ್ ಪಡೆದ ಸುಮಲತಾ ಅವರು, ಮೊನ್ನೆ ಕರೆಂಟ್ ತೆಗೆದರು. ಇವತ್ಯಾರು ಮೈಕ್ ಕಟ್ ಮಾಡಿದ್ದು ಎಂದು ವ್ಯಂಗ್ಯವಾಡಿದರು.

  • ಚಿಹ್ನೆ ಆಯ್ಕೆಯಲ್ಲಿ ದಳಪತಿಗಳಿಗೆ ರೆಬೆಲ್ ಸುಮಲತಾ ಸೆಡ್ಡು!

    ಚಿಹ್ನೆ ಆಯ್ಕೆಯಲ್ಲಿ ದಳಪತಿಗಳಿಗೆ ರೆಬೆಲ್ ಸುಮಲತಾ ಸೆಡ್ಡು!

    ಮಂಡ್ಯ: ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಚಿಹ್ನೆ ಆಯ್ಕೆಯಲ್ಲಿ ದಳಪತಿಗಳಿಗೆ ಶಾಕ್ ನೀಡಿದ್ದಾರೆ. ರೈತರು ಇರುವ ಮೂರು ಚಿಹ್ನೆಗಳಲ್ಲಿ ಒಂದನ್ನು ನೀಡುತ್ತೇವೆ ಆಯೋಗಕ್ಕೆ ಸುಮಲತಾ ಅಂಬರೀಶ್ ಮನವಿ ಮಾಡಿಕೊಂಡಿದ್ದಾರೆ.

    ಈಗಾಗಲೇ ನಾಲ್ಕು ನಾಮಪತ್ರ ಸಲ್ಲಿಸಿರುವ ಸುಮಲತಾ ಅಂಬರೀಶ್ ರೈತ ಪರವಾದ ಮೂರು ಚಿಹ್ನೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಕಬ್ಬಿನ ಗದ್ದೆ ಮುಂದೆ ರೈತ, ತೆಂಗಿನ ತೋಟ, ಕಹಳೆ ಊದುತ್ತಿರುವ ರೈತ ಚಿಹ್ನೆಗಳನ್ನು ಸುಮಲತಾ ಅವರು ಆಯ್ಕೆ ಮಾಡಿಕೊಂಡಿದ್ದಾರೆ.

    ರಾಜ್ಯದಲ್ಲಿ ಪ್ರತಿದಿನ ಸದ್ದು ಮಾಡುತ್ತಿರುವ ಮಂಡ್ಯ ಕ್ಷೇತ್ರ ಒಂದೇ ಹೆಸರಿನ ನಾಲ್ಕು ಅಭ್ಯರ್ಥಿಗಳ ಹೆಸರಿನಿಂದ ಸುದ್ದಿ ಆಗುತ್ತಿದೆ. ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಸುಮಲತಾ ಹೆಸರಿನ 4 ಮಂದಿ ಸ್ಪರ್ಧೆ ಮಾಡುತ್ತಿದ್ದಾರೆ. ಸುಮಲತಾ ಅಂಬರೀಶ್, ಕೆಆರ್ ಪೇಟೆ ತಾಲೂಕಿನ ಗೊರವಿ ಗ್ರಾಮದ ಎಂ.ಸುಮಲತಾ, ರಾಮನಗರ ಜಿಲ್ಲೆಯ ಕನಕಪುರದ ಪಿ.ಸುಮಲತಾ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಗ್ರಾಮದ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.

    ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡೋಕೆ ಸುಮಲತಾ ಎಂಬ ಹೆಸರಿನ ಮೂರು ಮಂದಿಯನ್ನು ಕಣಕ್ಕಿಳಿಸಲಾಗಿದೆ ಎಂಬ ಮಾತುಗಳು ಮಂಡ್ಯದಲ್ಲಿ ಕೇಳಬರತೊಡಗಿವೆ. ಇದರಿಂದ ಸುಮಲತಾ ಅಂಬರೀಶ್ ಅವರಿಗೆ ಬೀಳುವ ಮತಗಳನ್ನು ವಿಭಜನೆಯಾಗಿ, ಅವರನ್ನು ಚುನಾವಣೆಯಲ್ಲಿ ಸೋಲಿಸಲು ಈ ತಂತ್ರ ಮಾಡಲಾಗಿದೆ ಎನ್ನಲಾಗುತ್ತಿದೆ.

  • ಸುಮಲತಾಗೆ ಬಿಗ್ ಶಾಕ್ ಕೊಟ್ಟ ದಳಪತಿಗಳು- ಮಂಡ್ಯದಲ್ಲಿ ಒಂದೇ ಹೆಸರಿನ 4 ಮಂದಿ ಸ್ಪರ್ಧೆ

    ಸುಮಲತಾಗೆ ಬಿಗ್ ಶಾಕ್ ಕೊಟ್ಟ ದಳಪತಿಗಳು- ಮಂಡ್ಯದಲ್ಲಿ ಒಂದೇ ಹೆಸರಿನ 4 ಮಂದಿ ಸ್ಪರ್ಧೆ

    ಮಂಡ್ಯ: ದಿನ ದಿನಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರ ರಂಗೇರುತ್ತಲೇ ಇದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ನಡುವೆ ಭಾರೀ ಸ್ಪರ್ಧೆ ನಡೆಯುತ್ತಿದೆ. ಈ ನಡುವೆ ಇದೀಗ ಸುಮಲತಾ ಎಂಬ ಹೆಸರಿನ ನಾಲ್ಕು ಅಭ್ಯರ್ಥಿಗಳು ಮಂಡ್ಯ ಚುನಾವಣೆ ಕಣದಲ್ಲಿದ್ದಾರೆ.

    ಲೋಕಸಭೆ ಚುನಾವಣೆ ದಿನಾಂಕ ನಿಗದಿಯಾದ ದಿನದಿಂದಲೂ ಮಂಡ್ಯ ಕ್ಷೇತ್ರ ಪ್ರತಿ ದಿನ ಸದ್ದು ಮಾಡುತ್ತಿದೆ. ಹಾಗೆಯೇ ಚುನಾವಣಾ ಅಭ್ಯರ್ಥಿಗಳ ಹೆಸರಿನಿಂದ ಮಂಡ್ಯ ಸುದ್ದಿಯಾಗಿದೆ. ಹೌದು, ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಒಂದೇ ಹೆಸರಿನ 4 ಮಂದಿ ಸ್ಪರ್ಧೆ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವೇನೆಂದರೆ ಸುಮಲತಾ ಎನ್ನುವ ಹೆಸರಿನವರೇ ಸ್ಪರ್ಧೆ ಮಾಡುತ್ತಿದ್ದಾರೆ.

    ಸುಮಲತಾ ಹೆಸರಿನ ಅಭ್ಯರ್ಥಿಗಳು:
    1. ಸುಮಲತಾ ಅಂಬರೀಶ್
    2. ಕೆಆರ್ ಪೇಟೆ ತಾಲೂಕಿನ ಗೊರವಿ ಗ್ರಾಮದ ಎಂ.ಸುಮಲತಾ
    3. ರಾಮನಗರ ಜಿಲ್ಲೆಯ ಕನಕಪುರದ ಪಿ.ಸುಮಲತಾ
    4. ಶ್ರೀರಂಗಪಟ್ಟಣ ತಾಲೂಕಿನ, ಟಿಎಂ ಹೊಸೂರು ಗ್ರಾಮದ ಸುಮಲತಾ

    ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡೋಕೆ ಸುಮಲತಾ ಎಂಬ ಹೆಸರಿನ ಮೂರು ಮಂದಿಯನ್ನು ಕಣಕ್ಕಿಳಿಸಲಾಗಿದೆ ಎಂಬ ಮಾತುಗಳು ಮಂಡ್ಯದಲ್ಲಿ ಕೇಳಬರತೊಡಗಿವೆ. ಇದರಿಂದ ಸುಮಲತಾ ಅಂಬರೀಶ್ ಅವರಿಗೆ ಬೀಳುವ ಮತಗಳು ವಿಭಜನೆಯಾಗಿ, ಅವರನ್ನು ಚುನಾವಣೆಯಲ್ಲಿ ಸೋಲಿಸಲು ಈ ತಂತ್ರ ಮಾಡಲಾಗಿದೆ ಎನ್ನಲಾಗುತ್ತಿದೆ.

    ಈ ಬಾರಿ ಮಂಡ್ಯ ಕ್ಷೇತ್ರದತ್ತ ಇಡೀ ರಾಜ್ಯವೇ ನೋಡುತ್ತಿದೆ. ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ದಾರೆ.

  • ಯಶ್, ದರ್ಶನ್ ದುಡಿಯುವ ಬಾಡಿಗೆ ಜೋಡಿ ಎತ್ತುಗಳು- ವೆಂಕಟರಾವ್ ನಾಡಗೌಡ

    ಯಶ್, ದರ್ಶನ್ ದುಡಿಯುವ ಬಾಡಿಗೆ ಜೋಡಿ ಎತ್ತುಗಳು- ವೆಂಕಟರಾವ್ ನಾಡಗೌಡ

    ರಾಯಚೂರು: ನಟರಾದ ಯಶ್ ಮತ್ತು ದರ್ಶನ್ ದುಡಿಯುವ ಬಾಡಿಗೆ ಜೋಡಿ ಎತ್ತುಗಳು. ಮಂಡ್ಯ ಜನರ ಕಷ್ಟ-ಸುಖಗಳಿಗೆ ಸಿನಿಮಾದವರು ಭಾಗಿಯಾಗಿಲ್ಲ ಎಂದು ಪಶು ಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

    ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆಗೂ ಮುನ್ನ ಮಾತನಾಡಿದ ನಾಡಗೌಡ, ಮಂಡ್ಯದ ಕನಕನಮರಡಿಯಲ್ಲಿ ಬಸ್ ಕಾಲುವೆಗೆ ಬಿದ್ದಾಗ ಸಿನಿಮಾದವರು ಎಲ್ಲಿ ಹೋಗಿದ್ದರು. ಇಂದು ಚುನಾವಣೆಗೆ ಬಂದಿದ್ದಾರೆ ಅಂದ್ರೆ ಅವರು ಬಾಡಿಗೆ ಎತ್ತುಗಳು ಎಂದು ಗರಂ ಆದ್ರು.

    ಇದು ತಮಿಳುನಾಡು ಆಂಧ್ರಪ್ರದೇಶ ಅಲ್ಲ. ಇಲ್ಲಿ ಸಿನಿಮಾ ಹೆಸರಲ್ಲಿ ಚುನಾವಣೆ ಗೆಲ್ಲೋಕೆ ಆಗಲ್ಲ. ಸಿನಿಮಾ ನಟರನ್ನು ನೋಡಲು ಜನ ಬರುತ್ತಾರೆ. ಆದ್ರೆ ಅವರೆಲ್ಲ ವೋಟು ಹಾಕಲ್ಲ. ಸುಮಲತಾ ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದಾಗ ಗೊತ್ತಾಗುತ್ತದೆ. ಸಿನಿಮಾ ನೋಡಲು ಬಂದವರೆಲ್ಲ ವೋಟು ಹಾಕಲ್ಲ. ಮಾಧ್ಯಮದವರು ಬಿಂಬಿಸಿದಂತೆ ಮಂಡ್ಯ ಚುನಾವಣೆ ಯಾವುದೇ ರೀತಿಯ ಟಫ್ ಇಲ್ಲ ಎಂದು ಹೇಳಿದ್ರು.

    ಬಿಜೆಪಿಯನ್ನ ದೂರ ಇಡುವ ಸಲುವಾಗಿ ಮೈತ್ರಿ ಸರ್ಕಾರ ನಡೆಸುತ್ತಿದ್ದೇವೆ. ಹೀಗಾಗಿ ಮೈತ್ರಿ ಅಭ್ಯರ್ಥಿ ಬಿವಿ ನಾಯಕ್ ಗೆಲುವು ಖಚಿತ. ಜೆಡಿಎಸ್‍ನ ಸಂಪೂರ್ಣ ಬೆಂಬಲ ಕಾಂಗ್ರೆಸ್ ಗೆ ಇದೆ. ಬಿವಿ ನಾಯಕ್ ಗೆಲುವಿಗೆ ನಮ್ಮ ಬೆಂಬಲ ಇದೆ. ಕಾಂಗ್ರೆಸ್, ಜೆಡಿಎಸ್ ಮತ ನಮಗೆ ಬರುತ್ತವೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಈ ಹಿಂದೆ ಜಾತ್ಯಾತೀತ ಮತಗಳು ಹಂಚಿ ಹೋಗುತ್ತಿದ್ದವು. ಆದ್ರೆ ಈಗ ಅದಕ್ಕೆ ಅವಕಾಶ ಇಲ್ಲ. ಮುಂಚೆ ಕಾಂಗ್ರೆಸ್, ಜೆಡಿಎಸ್ ಬೇರೆ ಬೇರೆಯಾಗಿ ಸ್ಪರ್ಧೆ ಮಾಡುತ್ತಿದ್ದವು. ಹೀಗಾಗಿ ಮತಗಳು ವಿಭಜನೆ ಆಗುತ್ತಿದ್ದವು. ಈಗ ಹಾಗಲ್ಲ, ನಮ್ಮ ಪಕ್ಷದ (ಜೆಡಿಎಸ್) ಕೆಲ ಮುಖಂಡರಲ್ಲಿ ಅಸಮಾಧಾನ ಇದೆ. ಅದೆಲ್ಲ ಸರಿ ಹೋಗುತ್ತದೆ ಎಂದು ಹೇಳಿದ್ರು.

    ಇದೇ ವೇಳೆ ಸಂಸದ ಬಿ.ವಿ.ನಾಯಕ್ ಮಾತನಾಡಿ, ನಾನು ಪಾಕಿಸ್ತಾನ ಪರ ಯಾವುದೇ ಹೇಳಿಕೆ ನೀಡಿಲ್ಲ. ಭಾರತಕ್ಕೆ ಪಾಕಿಸ್ತಾನ ಯಾವುದಕ್ಕೂ ಸಮವಲ್ಲ. ಸಣ್ಣ ದೇಶದ ಮೇಲೆ ಮೋದಿ ದಾಳಿ ಮಾಡಿದ್ದಾರೆ ಎಂದು ಹೇಳಿದ್ದೇನೆ ಅದನ್ನ ತಿರುಚಲಾಗಿದೆ ಅಂತ ಬಿ.ವಿ.ನಾಯಕ್ ಹೇಳಿದರು.

  • ನಿಜವಾದ ಜೋಡೆತ್ತುಗಳು ನಾವು ಅವರು ಕಳ್ಳೆತ್ತುಗಳು – ಸಿಎಂ ಹೇಳಿಕೆಗೆ ಸುಮಲತಾ ಕೆಂಡ

    ನಿಜವಾದ ಜೋಡೆತ್ತುಗಳು ನಾವು ಅವರು ಕಳ್ಳೆತ್ತುಗಳು – ಸಿಎಂ ಹೇಳಿಕೆಗೆ ಸುಮಲತಾ ಕೆಂಡ

    ಮಂಡ್ಯ: ನಿಜವಾದ ಜೋಡೆತ್ತುಗಳು ನಾವು, ಯಶ್ ಮತ್ತು ದರ್ಶನ್ ಕಳ್ಳೆತ್ತುಗಳು ಎನ್ನುವ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ಕೆಂಡಕಾರಿದ್ದಾರೆ.

    ಈ ಬಗ್ಗೆ ಕೆಆರ್‍ಎಸ್ ನಲ್ಲಿ ಪ್ರಚಾರದ ವೇಳೆ ಸುಮಲತಾ ಪ್ರತಿಕ್ರಿಯೆ ನೀಡಿ, ಸಿಎಂ ಸ್ಥಾನಕ್ಕೆ ಇಂತಹ ಪದಗಳು ಅದು ಶೋಭೆ ತರುವುದಿಲ್ಲ. ಸಿಎಂ ಸ್ವಲ್ಪ ಯೋಚನೆ ಮಾಡಿ ಮಾತನಾಡಬೇಕು. ಈ ವಿಷಯವನ್ನು ಸಾರಾ ಮಹೇಶ್ ಅವರನ್ನು ಕೇಳಬೇಕಿತ್ತು. ಏಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾರಾ ಮಹೇಶ್ ಪರ ಯಶ್ ಪ್ರಚಾರ ಮಾಡಲಿಲ್ಲವೇ? ಇವರ ಪರ ಮತ ಯಾಚನೆ ಮಾಡಿದ್ರೆ ಒಳ್ಳೆಯವರಾ? ನಮ್ಮ ಪರ ಪ್ರಚಾರ ಮಾಡಿದ್ರೆ ಅನಾಚಾರನಾ? ಅಲ್ಲದೆ ಇದು ಸರಿಯಲ್ಲ. ಜನ ಮೂರ್ಖರಲ್ಲ, ಜನರಿಗೆ ಈ ವಿಷಯ ಗೊತ್ತಾಗುತ್ತೆ. ನಿಮ್ಮ ಮಾತುಗಳಿಂದ ಯಾರೂ ಮರುಳಾಗುತ್ತಿಲ್ಲ ಎಂದರು.

    ಡಿಕೆಶಿ ಅವರ ಮಾತಿನ ಅರ್ಥ ನನಗೆ ಅರ್ಥ ಆಗಿಲ್ಲ. ಅದು ಅವರಿಗೆ ಅರ್ಥವಾಗಿರಬೇಕು. ಕಳೆದ ಚುನಾವಣೆಯಲ್ಲಿ ಯಾರ್ಯಾರು ಏನೇನೂ ಮಾತನಾಡಿದ್ದಾರೆ ಎಂಬ ದಾಖಲೆ ಸಿಗುತ್ತೆ. ಈಗ ಬಂದು ಮೈತ್ರಿ ಧರ್ಮ ಪಾಲಿಸಬೇಕು ಎಂದು ಹೇಳುತ್ತಾರೆ. ಅದು ಸಂತೋಷದ ವಿಷಯ. ಹಾಗಂತ ಎಲ್ಲವನ್ನು ಟೇಕ್ ಒವರ್ ಮಾಡಿ ನೀವು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಹೇಳುವುದು ಸರಿಯಲ್ಲ. ಇಲ್ಲಿ ಜನರ ಅಭಿಪ್ರಯ ಮುಖ್ಯ. ಇವರು ಜನರಿಗೆ ಆದೇಶ ನೀಡಿದ ತಕ್ಷಣ ಜನರು ಪಾಲಿಸುವುದಿಲ್ಲ. ನಾವು ಜನರ ಪ್ರೀತಿಯನ್ನು ಸಂಪಾದಿಸಬೇಕು. ಅವರನ್ನು ಕಮಾಂಡ್ ಮಾಡಲು ಆಗುವುದಿಲ್ಲ ಎಂದರು.

    ಡಿಕೆಶಿ ಅವರಿಗೆ ಅಂಬರೀಶ್ ಆತ್ಮ ಶಾಂತಿ ಬಗ್ಗೆ ಕಾಳಜಿ ಇರೋದು ನೋಡಿ ಸಂತೋಷವಾಗುತ್ತಿದೆ. ಅಷ್ಟು ಕಾಳಜಿ ಅವರಿಗೆ ಇದ್ದಿದ್ದರೆ, ಡಿಕೆ ಸುರೇಶ್ ಸ್ಥಾನವನ್ನ ಬಿಟ್ಟು ಕೊಡಬಹುದಿತ್ತು. ಅಂಬರೀಶ್ ಅವರ ಬಗ್ಗೆ ಇರುವ ಭಕ್ತಿಯನ್ನು ಸಾಬೀತು ಮಾಡಬಹುದಿತ್ತು. ಅದನ್ನು ಬಿಟ್ಟು ಮಂಡ್ಯದಲ್ಲಿ ಬಂದು ಈ ರೀತಿ ಮಾತನಾಡೋದು ಎಷ್ಟು ಸರಿ ಎಂಬುದು ಜನರು ಅರ್ಥ ಮಾಡಿಕೊಳ್ಳುತ್ತಾರೆ. ಈಗ ಯಾರಿಗೂ ವಿಧಿ ಇಲ್ಲ. ಮಂಡ್ಯಕ್ಕೆ ಬಂದರೆ ಅಂಬರೀಶ್ ಹೆಸರನ್ನು ಬಿಟ್ಟು ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ ಅವರು ಅಂಬರೀಶ್ ಹೆಸರನ್ನೇ ಉಪಯೋಗಿಸಿಕೊಳ್ಳಬೇಕು. ಆ ಹೆಸರು ಬಿಟ್ಟರೆ ಅವರಿಗೆ ಬೇರೆ ಯಾರ ಹೆಸರು ಇಲ್ಲ ಎಂದು ಡಿಕೆಶಿ ಹೇಳಿಕೆ ಸುಮಲತಾ ಟಾಂಗ್ ನೀಡಿದರು.

    ಸಿಎಂ ಹೇಳಿದ್ದು ಏನು?
    ಒಹೋ ಇವು ಜೋಡೆತ್ತುಗಳಂತೆ, ಇವು ಉಳುವ ಎತ್ತುಗಳಲ್ಲ. ರೈತರು ಬೆಳೆದ ಪೈರನ್ನು ಅರ್ಧ ರಾತ್ರಿ ಹೋಗಿ ತಿನ್ನುವ ಎತ್ತುಗಳು. ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಎಲ್ಲಿದ್ದರು? ಅಮ್ಮನ ಮೇಲಿನ ಪ್ರೀತಿಯಿಂದ ಅವರನ್ನು ಉಳಿಸಲು ಬಂದಿದ್ದಾರಲ್ಲ. ಅಂದು ನಡೆದ ದುರಂತದಲ್ಲಿ ನೀರಲ್ಲಿ ಬಿದ್ದಿದ್ದ ಶವಗಳನ್ನು ತೆಗೆಯಲು ಅವರು ಬಂದಿದ್ದರ ಎಂದು ಪ್ರಶ್ನಿಸಿ ಸಿಎಂ ದರ್ಶನ್ ಮತ್ತು ಯಶ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

  • ನಾನು ದಬ್ಬಾಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗಲ್ಲ: ಸಿಎಂಗೆ ಸುಮಲತಾ ತಿರುಗೇಟು

    ನಾನು ದಬ್ಬಾಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗಲ್ಲ: ಸಿಎಂಗೆ ಸುಮಲತಾ ತಿರುಗೇಟು

    ಮಂಡ್ಯ: ನಾನು ದಬ್ಬಾಳಿಕೆ, ಬೆದರಿಕೆಗೆ ಬಗ್ಗಲ್ಲ ಎಂದು ಹೇಳುವ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

    ಸುಮಲತಾ ತಮ್ಮ ಫೇಸ್‍ಬುಕ್‍ನಲ್ಲಿ, “ನಾನು ಸೌಮ್ಯವಾಗಿ ಪ್ರೀತಿಯಿಂದ ಭಾರತೀಯ ಪ್ರಜಾಪ್ರಭುತ್ವದ ಘನತೆಯನ್ನು ಗಾಂಭೀರ್ಯವನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ನಾನು ದಬ್ಬಾಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗದ ಜಗ್ಗದ ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ. ಅತ್ಯಂತ ಉದಾತ್ತವಾದ ಆದರ್ಶಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ನಡೆಸುವ ಮನಸ್ಥಿತಿಯಿಂದ ಚುನಾವಣಾ ಕಣದಲ್ಲಿದ್ದೇನೆ. ಮಂಡ್ಯದ ನನ್ನ ಪ್ರೀತಿಯ ಜನರು ಇದನ್ನು ಸ್ವೀಕರಿಸುತ್ತಾರೆ ಎಂದು ನನ್ನ ಬಲವಾದ ನಂಬಿಕೆ ಇದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಮತ್ತೊಂದು ಪೋಸ್ಟ್ ನಲ್ಲಿ ಸುಮಲತಾ, ಇಂದು ನಾನು ಶ್ರೀರಂಗಪಟ್ಟಣಕ್ಕೆ ಬರುತ್ತಿದ್ದೇನೆ ನನ್ನ ಶಕ್ತಿ ಮತ್ತು ಆತ್ಮಸ್ಥೈರ್ಯ ಪ್ರತಿಯೊಂದು ನೀವುಗಳೇ. ಶ್ರೀರಂಗಪಟ್ಟಣದಲ್ಲಿ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಇಂದು ಮಂಡ್ಯದಲ್ಲಿ ಸುಮಲತಾ ಅಬ್ಬರದ ಪ್ರಚಾರ ಸಭೆ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಲತಾ ಪ್ರಚಾರ ನಡೆಸುತ್ತಿದ್ದಾರೆ. ಕೆಆರ್‍ಎಸ್, ಬೆಳಗೋಳ, ಚಂದಗಾಲು, ಮಹದೇವಪುರ ಭಾಗದಲ್ಲಿ ಪ್ರಚಾರ ಸಭೆ ಹಾಗೂ ರೋಡ್ ಶೋ ನಡೆಸುತ್ತಿದ್ದು, ಸುಮಾಗೆ ಪುತ್ರ ಅಭಿಷೇಕ್ ಹಾಗೂ ಸ್ಥಳೀಯ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದ್ದಾರೆ.

  • ಬೆಳ್ಳಂಬೆಳಗ್ಗೆ ಬಿಎಸ್‍ವೈ ನಿವಾಸಕ್ಕೆ ಸುಮಲತಾ ಅಂಬರೀಶ್ ಭೇಟಿ

    ಬೆಳ್ಳಂಬೆಳಗ್ಗೆ ಬಿಎಸ್‍ವೈ ನಿವಾಸಕ್ಕೆ ಸುಮಲತಾ ಅಂಬರೀಶ್ ಭೇಟಿ

    ಬೆಂಗಳೂರು: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರು ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ.

    ತಮಗೆ ಬಿಜೆಪಿ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ಸುಮಲತಾ ಅವರು ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿಯ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ.

    ಬಳಿಕ ಮಾಧ್ಯಮಗಳ ಬಳಿ ಮಾತನಾಡಿದ ಅವರು, ಬೆಂಬಲ ನೀಡಿರುವುದರಿಂದ ಕೃತಜ್ಞತೆ ಸಲ್ಲಿಸಲು ಬಂದಿದ್ದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಅನ್ನೊದು ಕಾರ್ಯಕರ್ತರ ಒತ್ತಾಯವಾಗಿತ್ತು. ಬಿಜೆಪಿಗೆ ಚುನಾವಣೆಯ ನಂತರ ಬೆಂಬಲ ಕೊಡಬೇಕಾ ಬೇಡವಾ ಅನ್ನೋದು ಜನ ತಿರ್ಮಾನ ಮಾಡುತ್ತಾರೆ. ನಾವು ಅಂಬರೀಶ್ ಅವರ ಮೇಲಿನ ಅಭಿಮಾನದಿಂದ ಬೆಂಬಲ ಕೊಡುತ್ತಿದ್ದೇವೆ. ಹೀಗಾಗಿ ನಾವು ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸ್ಪರ್ಧೆ ಮಾಡಿಸುತ್ತಿಲ್ಲ ಎಂದು ಹೇಳಿದ್ದಾರೆ. ಯಾವುದೇ ನಿಬಂಧನೆಗಳು ಇಲ್ಲದೆ ನನಗೆ ಬಿಜೆಪಿ ಬೆಂಬಲ ನೀಡಿದೆ ಎಂದ್ರು.

    ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಮಾತುಗಳ ಅವಶ್ಯಕತೆ ಇರಲಿಲ್ಲ. ಅವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನಾವು ಯಾವುದೇ ಪ್ರತಿಕ್ರಿಯೆ ಮಾಡುವುದು ಬೇಡ ಎಂದು ದರ್ಶನ್ ಕೂಡ ಹೇಳಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಅವರ ದರ್ಶನ್ ಹಾಗೂ ಯಶ್ ಕಳ್ಳೆತ್ತುಗಳು ಅನ್ನೊ ಹೇಳಿಕೆಗೆ ಸುಮಲತಾ ತಿರುಗೇಟು ನೀಡಿದ್ದಾರೆ.

    ಸುಮಲತಾ ಅಂಬರೀಶ್ ಅವರು ಇಂದು ನಮ್ಮನ್ನು ಭೇಟಿ ಮಾಡಿದ್ದಾರೆ. ಈ ಹಿಂದೆಯೇ ನಾವು ಸುಮಲತಾ ಅವರಿಗೆ ಬೆಂಬಲ ಕೊಡುತ್ತೇವೆ ಎಂದು ತಿಳಿಸಿದ್ದೆವು. ಅದೇ ರೀತಿ ನಮ್ಮ ಕಾರ್ಯಕರ್ತರು, ಮುಖಂಡರಿಗೂ ಬೆಂಬಲ ನೀಡುವಂತೆ ಸೂಚನೆ ಕೊಟ್ಟಿದ್ದೇವೆ ಎಂದು ಇದೇ ವೇಳೆ ಯಡಿಯೂರಪ್ಪ ಕೂಡ ಪ್ರತಿಕ್ರಿಯಿಸಿದ್ದಾರೆ.

  • ಮಂಡ್ಯದಲ್ಲಿ ಸುಮಲತಾಗೆ ಬಂಡಾಯದ ಬಿಸಿ

    ಮಂಡ್ಯದಲ್ಲಿ ಸುಮಲತಾಗೆ ಬಂಡಾಯದ ಬಿಸಿ

    ಮಂಡ್ಯ: ಬಿಜೆಪಿಯು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹಾಕದೇ ಸುಮಲತಾ ಅವರಿಗೆ ಬೆಂಬಲ ಘೋಷಿಸಿದೆ. ಆದರೆ ಈಗ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಬಿ.ಮಂಜುನಾಥ್ ಮುಂದಾಗಿದ್ದಾರೆ.

    ಭಜರಂಗಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಅವರು ಮಂಡ್ಯ ಲೋಕಸಭಾ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಕರಪತ್ರಗಳನ್ನು ಮುದ್ರಿಸಿದ್ದು, ನಾಮಪತ್ರ ಸಲ್ಲಿಸುವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಬಿ.ಮಂಜುನಾಥ್ ಅವರ ಸ್ಪರ್ಧೆಯಿಂದಾಗಿ ಬಿಜೆಪಿ ಮತಗಳು ವಿಂಗಡನೆ ಆಗುವುದರಿಂದ ಸುಮಲತಾ ಅವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂಬ ಮಾತುಗಳು ಕೇಳ ಬರತೊಡಗಿವೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ್ದ ಸುಮಲತಾ ಅವರು, ಬಿಜೆಪಿಯ ಬೆಂಬಲ ಕೇಳುತ್ತೇನೆ ಹಾಗೂ ರಾಜ್ಯ ನಾಯಕರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದರು. ಶನಿವಾರ ಸಂಜೆ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ನಾಯಕ ಜೆ.ಪಿ.ನಡ್ಡಾ, ಮಂಡ್ಯದಲ್ಲಿ ನಮ್ಮ ಪಕ್ಷದಿಂದ ಯಾವುದೇ ಅಭ್ಯರ್ಥಿ ಕಣಕ್ಕೆ ಇಳಿಯುತ್ತಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾರಿಗೆ ನಾವು ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದರು.

  • ಸಿನಿಮಾದಂತೆ ಡ್ರಾಮಾ ಮಾಡಿದ್ರೆ ಬಹಳ ದಿನ ಉಳಿಯಲ್ಲ: ದರ್ಶನ್‍ಗೆ ಎಚ್‍ಡಿಕೆ ಟಾಂಗ್

    ಸಿನಿಮಾದಂತೆ ಡ್ರಾಮಾ ಮಾಡಿದ್ರೆ ಬಹಳ ದಿನ ಉಳಿಯಲ್ಲ: ದರ್ಶನ್‍ಗೆ ಎಚ್‍ಡಿಕೆ ಟಾಂಗ್

    – ಒಬ್ಬ ನಿಖಿಲ್ ಕುಮಾರಸ್ವಾಮಿ ವಿರುದ್ಧ ಒಂದಾಗಿದ್ದಾರೆ
    – ಸುಮಲತಾಗೆ ಎಚ್‍ಡಿಡಿ ತಿರುಗೇಟು

    ಮಂಡ್ಯ: ಸಿನಿಮಾದಲ್ಲಿ ಡ್ರಾಮಾ ಮಾಡಿದ ಹಾಗೆ ಮಾಡಿದರೆ ಬಹಳ ದಿನ ಉಳಿಯಲ್ಲ ಎಂದು ಸಿಎಂ ಕುಮಾರಸ್ವಾಮಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಜಿಲ್ಲೆಯ ಆದಿಚುಂಚನಗಿರಿ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಚಾಲೆಂಜಿಂಗ್ ಸ್ಟಾರ್ ಅಂತಾರಲ್ಲ ಆ ನಟ ದರ್ಶನ್ ಮನೆ ಮೇಲೆ ಕಲ್ಲು ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರಾದರು ಮೂರು ಗಂಟೆಯಲ್ಲಿ ಕಲ್ಲು ತೂರುತ್ತಾರಾ? ಘಟನೆ ನಡೆದ ಮರುಕ್ಷಣವೇ ಆ ಭಾಗದ ಅಧಿಕಾರಿಗಳಿಗೆ ಸಿಸಿಟಿವಿ ಫೂಟೇಜ್ ಸೀಜ್ ಮಾಡಲು ಹೇಳಿದ್ದೆ. ಆದರೆ ಸಿಸಿಟಿವಿ ಆಫ್ ಆಗಿತ್ತಂತೆ. ಯಾರು ಆಫ್ ಮಾಡಿದ್ದು ಎಂದು ಪ್ರಶ್ನಿಸಿದರು.

    ಒಬ್ಬ ನಿಖಿಲ್ ಕುಮಾರಸ್ವಾಮಿ ವಿರುದ್ಧ ಎಷ್ಟು ಜನ ಒಂದಾಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಇದು ಜನರಿಗೆ ಅರ್ಥ ಆಗಲ್ವಾ? ಮಂಡ್ಯ ಜಿಲ್ಲೆ ಜನತೆ ನಮ್ಮ ಜೊತೆಗಿದ್ದಾರೆ. ಹಣ ಕೊಟ್ಟು ಕೊಂಡುಕೊಳ್ಳುವವರಿಗೆ ಎಲ್ಲಿಂದ ದುಡ್ಡು ಬರುತ್ತಿದೆ. ಪಾಪದ ಹಣದಿಂದ ಚುನಾವಣೆ ನಡೆಸಲು ಹೊರಟಿದ್ದಾರೆ. ಪಾಪದ ಹಣಕ್ಕೆ ಮಂಡ್ಯ ಜಿಲ್ಲೆಯ ಜನ ಮರುಳಾಗುವುದಿಲ್ಲ ಎಂದು ಗುಡುಗಿದರು.

    ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಎಂಟು ಜನ ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು, ಒಬ್ಬರು ಸಂಸದರಿದ್ದಾರೆ. ಆದರೂ ಮೈತ್ರಿ ನಾಯಕರಲ್ಲಿ ಸೋಲುವ ಭಯವಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವೆ. ಪ್ರಾಮಾಣಿಕತೆಯ ಬಗ್ಗೆ ಅವರಿಂದ ಪಾಠ ಕಲಿಬೇಕಾ? ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬ ಹಾಗೂ ಮಂಡ್ಯ ಜಿಲ್ಲೆಯ ಜನರ ಬಾಂಧವ್ಯಕ್ಕೆ ಯಾರು ಧಕ್ಕೆ ತರಲು ಸಾಧ್ಯವಿಲ್ಲ ಎಂದು ಸುಮಲತಾ ಅಂಬರೀಶ್ ಅವರಿಗೆ ತಿರುಗೇಟು ಕೊಟ್ಟರು.

    ಮಾಜಿ ಸಚಿವ ಚಲುವರಾಯಸ್ವಾಮಿ ಆಡಿಯೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಯಾರು ಯಾರಿಗೆ ಬೆಂಬಲ ಕೊಡುತ್ತಾರೆ ಎನ್ನುವ ಬಗ್ಗೆ ನಾನು ಮಾತನಾಡುವುದಿಲ್ಲ. ಇಲ್ಲಿಯ ಜನತೆ ಮತ್ತು ಕಾರ್ಯಕರ್ತರಿಂದ ಬೆನ್ನಿಗೆ ಚೂರಿ ಹಾಕುವವರಿಂದ ತೊಂದರೆ ಆಗಲ್ಲ. ನಿಖಿಲ್ ನಾಮಪತ್ರ ಸಲ್ಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದೇನೆ. ಆದರೆ ಅವರು ಒಂದು ದಿನ ಸಮಾವೇಶಕ್ಕೆ ಬರುತ್ತೇನೆಂದು ತಿಳಿಸಿದ್ದಾರೆ ಎಂದರು.

    ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಚುನಾವಣೆಗೆ ನಾಳೆ ಮಧ್ಯಾಹ್ನ 2ರಿಂದ 3 ಗಂಟೆಯೊಳಗೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಳೆಯಿಂದ ನಿಜವಾದ ಚುನಾವಣೆ ಶುರುವಾಗಲಿದೆ. ಕೆಲವು ಕ್ಷೇತ್ರಗಳಲ್ಲಿ ಗೊಂದಲವೇ ಇಲ್ಲ ಎನ್ನಲ್ಲ. ಕಾರ್ಯಕರ್ತರ ಶಕ್ತಿ ಬೆನ್ನಿಗಿರುವಾಗ ಭಯ ಪಡುವ ಪ್ರಶ್ನೆ ಉದ್ಭವಿಸಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.