Tag: ಸುಮಲತಾ ಅಂಬರೀಶ್

  • ಪ್ರತಿಭಟನೆಯ ಬಿಸಿಯಿಂದ ಜಾರಿಕೊಂಡ ಬುದ್ಧಿವಂತ!

    ಪ್ರತಿಭಟನೆಯ ಬಿಸಿಯಿಂದ ಜಾರಿಕೊಂಡ ಬುದ್ಧಿವಂತ!

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸಂಸದ ಶಿವರಾಮೇಗೌಡ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯ ಬಿಸಿ ನಟ, ರಿಯಲ್ ಸ್ಟಾರ್ ಉಪೇಂದ್ರ ಅವರಿಗೂ ತಟ್ಟಿತು.

    ಹೌದು. ಮದ್ದೂರು-ಮಳವಳ್ಳಿ ಹೆದ್ದಾರಿ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾಗ ನಟ, ರಿಯಲ್ ಸ್ಟಾರ್ ಉಪೇಂದ್ರ ಅದೇ ಮಾರ್ಗವಾಗಿ ಸಾಗುತ್ತಿದ್ದರು. ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರಿಂದಾಗಿ ಉಪ್ಪಿ ಟ್ರಾಫಿಕ್ ನಲ್ಲಿ ಸಿಲುಕಿದ್ದರು. ಈ ವೇಳೆ ಅವಹೇಳನಕಾರಿ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಆದರೆ ಉಪೇಂದ್ರ ಅವರು ಯಾರ ಪರ, ವಿರುದ್ಧ ಮಾತನಾಡದೇ `ಬುದ್ಧಿವಂತ’ನಂತೆ ಜಾರಿಕೊಂಡಿದ್ದಾರೆ.

    ರಾಜರ (ರಾಜಕಾರಣಿಗಳ) ಹೊಡೆದಾಟ, ಬೈದಾಟವನ್ನು ಇಷ್ಟು ವರ್ಷ ನೋಡಿ ಸಾಕಾಗಿದೆ. ನಾನು ನಿಮಗೆ ಸಂಬಳಕ್ಕೆ ಕೆಲಸ ಮಾಡೋ ಕೆಲಸಗಾರರನ್ನು ಕೊಡ್ತೀನಿ. ರಾಜರು ಬೇಕಾ? ಅಥವಾ ಸಂಬಳಕ್ಕೆ ಕೆಲಸ ಮಾಡೋ ಕೆಲಸಗಾರರು ಬೇಕಾ ನೀವೇ ತೀರ್ಮಾನಿಸಿ ಎಂದು ಎಂದು ಹೇಳುವ ಮೂಲಕ ಜಾರಿಕೊಂಡರು.

    ಪ್ರತಿಭಟನಾಕಾರರ ಆಕ್ರೋಶ:
    ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆಂಬ ಕಾರಣಕ್ಕೆ ಜೆಡಿಎಸ್ ಮುಖಂಡರು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಅಂಬರೀಶ್ ಬದುಕಿದ್ದಾಗ ಕಾಲಿಗೆ ಬೀಳುತ್ತಿದ್ದ ಸಂಸದ ಶಿವರಾಮೇಗೌಡ, ಈಗ ಅಂಬಿ ಕುಟುಂಬದ ವಿರುದ್ಧ ಮಾತನಾಡುತ್ತಿದ್ದಾರೆ. ಸುಮಲತಾ ಮಂಡ್ಯದ ಸೊಸೆ, ನಮ್ಮ ಮನೆ ಮಗಳಾಗಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ಮಂಡ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಶಿವರಾಮೇಗೌಡರ ವಿರುದ್ಧ ಅಂಬಿ ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.


    ಶಿವರಾಮೇಗೌಡ ಹೇಳಿದ್ದೇನು?:
    ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ. ಅಂಬರೀಶ್ ಶವ ಸಂಸ್ಕಾರಕ್ಕೆ ಸೇರಿದ ಜನಸಾಗರ ಕಂಡು ಮಂಡ್ಯ ಚುನಾವಣೆಗೆ ಬಂದಿದ್ದಾರೆ. ಅವರು ನಿಜವಾಗಲು ಒಕ್ಕಲಿಗರಾ ಎಂದು ಪ್ರಶ್ನಿಸಿದ ಶಿವರಾಮೇಗೌಡ, ಸುಮಲತಾ ಮತ್ತು ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಸುರೇಶ್‍ಗೌಡರನ್ನು ಕರೆ ತಂದ ರಮ್ಯಾರನ್ನ ಓಡಿಸಿದ್ದೇನೆ. ಅಂಬರೀಶ್‍ರನ್ನೂ ಕರೆತಂದವನು ನಾನೇ, ಅವರನ್ನ ಸೋಲಿಸಿದವನು ನಾನೇ. ನಾನು ನಾಗಮಂಗಲದ ಗಂಡು ಎಂದು ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿ ಸಮೀಪ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ವಿರುದ್ಧ ಕಿಡಿಕಾರಿದ್ದರು.

  • ಸುಮಲತಾ ಟೀಕಾಕಾರರ ವಿರುದ್ಧ ನಟಿ ಶೃತಿ ಕೆಂಡಾಮಂಡಲ

    ಸುಮಲತಾ ಟೀಕಾಕಾರರ ವಿರುದ್ಧ ನಟಿ ಶೃತಿ ಕೆಂಡಾಮಂಡಲ

    ಹಾವೇರಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯಶ್ ಮೇಲಿನ ಅಭಿಮಾನದಿಂದ ಜನ ಬಂದಿದ್ದಾರೆ. ಇದರಿಂದ ಭಯಗೊಂಡು ಈ ರೀತಿ ಅವರೆಲ್ಲ ಮತನಾಡುತ್ತಿದ್ದಾರೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾರನ್ನು ಟೀಕಿಸುವವರ ವಿರುದ್ಧ ನಟಿ, ಬಿಜೆಪಿ ಮುಖಂಡೆ ಶೃತಿ ಕಿಡಿಕಾರಿದ್ದಾರೆ.

    ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಸಂಸದ ಪ್ರಹ್ಲಾದ ಜೋಶಿ ಪರ ಪ್ರಚಾರ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಸ್ಟಾರ್‍ಗಳು ಮಂಡ್ಯ ಪ್ರಚಾರಕ್ಕೆ ಬಂದ್ರೆ ಸೇರಿದ ಜನಸಾಗರ ನೋಡಿ ಜೆಡಿಎಸ್‍ನವರಿಗೆ ಭಯ ತಂದಿದ್ದಾರೆ. ಜೆಡಿಎಸ್ ಪಕ್ಷದವರು ದುಡ್ಡುಕೊಟ್ಟು ಜನರನ್ನು ನಟರ ಮೇಲಿನ ಅಭಿಮಾನದಿಂದ ಜನ ಬಂದಿದ್ದಾರೆ ಎಂದರು.

    ಸುಮಲತಾ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಒಬ್ಬ ಮಹಿಳೆಗೆ ಇಷ್ಟೊಂದು ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಯಾರು ಕ್ಷಮಿಸೋದಿಲ್ಲ. ಸುಮಲತಾ ಜನರ ಧ್ವನಿಯಾಗುವ ಸಲುವಾಗಿ ತನ್ನ ನೋವಿನಲ್ಲೂ ರಾಜಕಾರಣಕ್ಕೆ ಬಂದಿದ್ದಾರೆ. ಮಹಿಳೆಯನ್ನು ಮುಖ್ಯವಾಹಿನಿಗೆ ತಂದು, ಬೆಳೆಸುವಂತಹ ಕೆಲಸ ಮಾಡಬೇಕು. ಆದರೆ ಸಿಎಂ ಕುಮಾರಸ್ವಾಮಿ ತನ್ನ ಮಗನ ಗೆಲುವಿಗಾಗಿ ವೈಯಕ್ತಿಕ ಟೀಕೆ ಮಾಡುವುದು ತಪ್ಪು ಎಂದು ವಾಗ್ದಾಳಿ ನಡೆಸಿದ್ದಾರೆ.

    ಮುಖದಲ್ಲಿ ನೋವು ಕಾಣ್ತಿಲ್ಲ ಅನ್ನೋ ಕುಮಾರಸ್ವಾಮಿಹಾಗೂ ಗಂಡ ಸತ್ತು ನಾಲ್ಕೈದು ದಿನ ಆಗಲಿಲ್ಲ ಅನ್ನೋ ಸಚಿವ ಎಚ್ ಡಿ ರೇವಣ್ಣ ಹೇಳಿಕೆ ಇಬ್ಬರಿಗೂ ಶೋಭೆ ತರೋದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ರು.

  • ಹುಚ್ಚೇಗೌಡರ ಸೊಸೆ ಆದ ತಕ್ಷಣ ಗೌಡ್ತಿಯಾಗಲ್ಲ-ಸುಮಲತಾ ವಿರುದ್ಧ ಸಂಸದ ವಾಗ್ದಾಳಿ

    ಹುಚ್ಚೇಗೌಡರ ಸೊಸೆ ಆದ ತಕ್ಷಣ ಗೌಡ್ತಿಯಾಗಲ್ಲ-ಸುಮಲತಾ ವಿರುದ್ಧ ಸಂಸದ ವಾಗ್ದಾಳಿ

    ಮಂಡ್ಯ: ಜೆಡಿಎಸ್ ವಿರುದ್ಧ ಮುಗಿಬೀಳುತ್ತಿರೋ ಸುಮಲತಾ ವಿರುದ್ಧ ಸಂಸದ ಶಿವರಾಮೇಗೌಡ ಕಿಡಿಕಾರಿದ್ದಾರೆ.

    ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿ ಸಮೀಪ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿ ಸುಮಲತಾ ಮಂಡ್ಯ ಗೌಡ್ತಿಯೇ ಎಂದು ಪ್ರಶ್ನಿಸಿ ಮತ್ತೆ `ಗೌಡ್ತಿ’ ಹೇಳಿಕೆಯನ್ನು ಕೆಣಕಿದ್ದಾರೆ.

    ಗೌಡ್ತಿ ಹೇಳಿಕೆ ನೀಡಿ ಭಾರೀ ವಿರೋಧಕ್ಕೆ ಗುರಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಸಮ್ಮುಖದಲ್ಲೆ ಸುಮಲತಾ ಮಂಡ್ಯ ಗೌಡ್ತಿಯಲ್ಲ ಎಂದು ಸಂಸದರು ಗುಡುಗಿದ್ದಾರೆ. ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ ಅಂದ್ರು. ಇದನ್ನೂ ಓದಿ: ಅಂಬಿ ಫ್ಯಾನ್ಸ್, ಜೆಡಿಎಸ್ ನಡುವೆ ಗೌಡ್ತಿ ಫೈಟ್!- ವೈರಲ್ ಆಯ್ತು ಸಿಎಂ ತೆಲಗು ಸಂದರ್ಶನ

    ಅಂಬರೀಶ್ ಶವ ಸಂಸ್ಕಾರಕ್ಕೆ ಸೇರಿದ ಜನಸಾಗರ ಕಂಡು ಮಂಡ್ಯ ಚುನಾವಣೆಗೆ ಬಂದಿದ್ದಾರೆ. ಅವರು ನಿಜವಾಗಲು ಒಕ್ಕಲಿಗರಾ ಎಂದು ಪ್ರಶ್ನಿಸಿದ ಶಿವರಾಮೇ ಗೌಡ, ಸುಮಲತಾ ಮತ್ತು ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಸುರೇಶ್‍ಗೌಡ ಕರೆ ತಂದ ರಮ್ಯರನ್ನ ಓಡಿಸಿದ್ದೇನೆ. ಅಂಬರೀಶ್‍ರನ್ನೂ ಕರೆತಂದವನು ನಾನೇ, ಅವರನ್ನ ಸೋಲಿಸಿದವನು ನಾನೇ. ನಾನು ನಾಗಮಂಗಲದ ಗಂಡು ಎಂದು ಸುವಲತಾ ವಿರುದ್ಧ ಕಿಡಿಕಾರಿದ್ರು. ಇದನ್ನೂ ಓದಿ: ಸುಮಲತಾ ಎಂದೂ ಕೂಡ ಮಂಡ್ಯದ ಗೌಡ್ತಿ ಅಲ್ಲ: ಕೆ.ಟಿ.ಶ್ರೀಕಂಠೇಗೌಡ

  • ಚಪ್ಪಲಿ ಪಾಲಿಟಿಕ್ಸ್: ಸುಮಲತಾ ಮೊದಲ ಪ್ರತಿಕ್ರಿಯೆ

    ಚಪ್ಪಲಿ ಪಾಲಿಟಿಕ್ಸ್: ಸುಮಲತಾ ಮೊದಲ ಪ್ರತಿಕ್ರಿಯೆ

    ಮಂಡ್ಯ: ಸಾವಿನ ರಾಜಕೀಯ, ಮಾತಿನ ರಾಜಕೀಯವಾಯ್ತು, ಇದೀಗ ಮಂಡ್ಯ ಚುನಾವಣಾ ಅಖಾಡದಲ್ಲಿ ಚಪ್ಪಲಿ ಪಾಲಿಟಿಕ್ಸ್ ಆರಂಭವಾಗಿತ್ತು. ಇದೀಗ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ವೈರಲ್ ಆಗಿರುವ ವಿಡಿಯೋಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

    ಕಾನೂನು ಉಲ್ಲಂಘನೆ ನಡೆದು ಜೆಡಿಎಸ್ ಅಭ್ಯರ್ಥಿಯ ಸ್ಪರ್ಧೆಯೇ ಅನುಮಾನವಾಗಿದೆ. ಈ ನಡುವೆ ಜನರನ್ನು ಬೇರೆಡೆ ಸೆಳೆಯಲು ಕೆಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ದೊಡ್ಡ ದೊಡ್ಡ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ಚಿಕ್ಕ ವಿಷಯಗಳನ್ನು ದೊಡ್ಡದಾಗಿ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಮಾರ್ಚ್ 20ರಂದು ನಾಮಪತ್ರ ಸಲ್ಲಿಸಲು ಮನೆಯಿಂದ ಹೊರ ಹೋಗುತ್ತಿರುವ ಸಂದರ್ಭದ ಕೆಲ ದೃಶ್ಯಗಳು ವೈರಲ್ ಆಗಿವೆ. ನಾನು ಮತ್ತು ಪುತ್ರ ಅಭಿಷೇಕ್ ಭದ್ರತೆಗಾಗಿ ಗನ್ ಮ್ಯಾನ್ ಗಳನ್ನು ಇಟ್ಟುಕೊಂಡಿಲ್ಲ. ನಾಮಪತ್ರ ಸಲ್ಲಿಸಿದ ಬಳಿಕ ಭದ್ರತೆಗಾಗಿ ಇದೀಗ ಇಬ್ಬರು ಗನ್ ಮ್ಯಾನ್ ಗಳನ್ನು ನೇಮಕ ಮಾಡಲಾಗಿದೆ. ಅಂದು ಚಪ್ಪಲಿಯನ್ನು ನನಗೆ ನಮ್ಮ ಡ್ರೈವರ್ ನೀಡಿದ್ದರು. ನನ್ನ ಬಗ್ಗೆ ಮಾತನಾಡಲು ಕೆಲವರಿಗೆ ಏನೂ ಸಿಗದೇ ಜಿಗುಪ್ಸೆಯಿಂದ ಈ ರೀತಿಯ ವಿಡಿಯೋಗಳನ್ನು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಮಾತಿನ ಚಾಟಿ ಬೀಸಿದರು.

    ಏನಿದು ವೈರಲ್ ವಿಡಿಯೋ:
    ಮನೆಯಿಂದ ಹೊರಬರುತ್ತಿದ್ದಂತೆಯೇ ಸುಮಲತಾ ತಮ್ಮ ಚಾಲಕನಿಗೆ ಕೆಳಗೆ ಏನೋ ತೋರಿಸುವ ಮೂಲಕ ಸೂಚಿಸುತ್ತಾರೆ. ಆಗ ಚಾಲಕ ಕೆಳಗೆ ಬಗ್ಗಿ ಸುಮಲತಾ ಕಾಲಿಗೆ ಚಪ್ಪಲಿ ತೊಡಿಸಿದ್ದಾರೆ. ಇತ್ತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮದ್ದೂರು ಭಾಗದಲ್ಲಿ ಪ್ರಚಾರ ನಡೆಸಿದ ವೇಳೆ ನಡೆದುಕೊಂಡು ಬರುತ್ತಿದ್ದಾಗ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಹಾಕಲು ಬಂದಿದ್ದಾರೆ. ಆದ್ರೆ ನಿಖಿಲ್ ಅವರನ್ನು ತಡೆದು ತಾನೇ ಚಪ್ಪಲಿ ಹಾಕಿಕೊಂಡು ಅವರನ್ನು ಮುಟ್ಟಿ ಕೈ ಮುಗಿದಿರುವ ವಿಡಿಯೋ ಜೊತೆಗೆ ಸುಮಲತಾರ ದೃಶ್ಯಗಳನ್ನು ಹೊಂದಿಸಿ ಹರಿಬಿಡಲಾಗಿದೆ.

  • ಮಂಡ್ಯದಲ್ಲಿ ಆರಂಭವಾಯ್ತು ಚಪ್ಪಲಿ ಪಾಲಿಟಿಕ್ಸ್!

    ಮಂಡ್ಯದಲ್ಲಿ ಆರಂಭವಾಯ್ತು ಚಪ್ಪಲಿ ಪಾಲಿಟಿಕ್ಸ್!

    ಮಂಡ್ಯ: ಸಾವಿನ ರಾಜಕೀಯ, ಮಾತಿನ ರಾಜಕೀಯವಾಯ್ತು, ಇದೀಗ ಮಂಡ್ಯ ಚುನಾವಣಾ ಅಖಾಡದಲ್ಲಿ ಚಪ್ಪಲಿ ಪಾಲಿಟಿಕ್ಸ್ ಆರಂಭವಾಗಿದೆ.

    ಹೌದು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತನ್ನ ಗನ್ ಮ್ಯಾನ್‍ರಿಂದ ಚಪ್ಪಲಿ ಹಾಕಿಸಿಕೊಂಡರೆ, ಇತ್ತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚಪ್ಪಲಿ ಹಾಕಲು ಬಂದವರನ್ನು ತಡೆದಿದ್ದಾರೆ. ಈ ಎರಡೂ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲೇನಿದೆ..?
    ಮನೆಯಿಂದ ಹೊರಬರುತ್ತಿದ್ದಂತೆಯೇ ಸುಮಲತಾ ತಮ್ಮ ಗನ್ ಮ್ಯಾನ್‍ಗೆ ಕೆಳಗೆ ಏನೋ ತೋರಿಸುವ ಮೂಲಕ ಸೂಚಿಸುತ್ತಾರೆ. ಆಗ ಗನ್ ಮ್ಯಾನ್ ಕೆಳಗೆ ಬಗ್ಗಿ ಸುಮಲತಾ ಕಾಲಿಗೆ ಚಪ್ಪಲಿ ತೊಡಿಸಿದ್ದಾರೆ. ಇತ್ತ ತನ್ನ ಕಾಲಿಗೆ ಚಪ್ಪಲಿ ತೊಡಿಸಲು ಬಂದ ಕಾರ್ಯಕರ್ತನನ್ನು ತಡೆದಿದ್ದಾರೆ.

    ಕಳೆದ ಮಾರ್ಚ್ 20ರಂದು ಸುಮಲತಾ ತಮ್ಮ ಬೆಂಬಲಿಗ ಸಚ್ಚಿದಾನಂದರ ಮನೆಗೆ ಹೋಗಿದ್ದಾರೆ. ಮಾತುಕತೆ ನಡೆಸಿ ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಸುಮಲತಾ ತನ್ನ ಗನ್ ಮ್ಯಾನ್ ಕೈಯಲ್ಲಿ ಚಪ್ಪಲಿ ತೊಡಿಸಿಕೊಂಡಿದ್ದಾರೆ. ಆದ್ರೆ ಚಪ್ಪಲಿ ತೊಡಿಸುವ ದೃಶ್ಯ ಸೆರೆಯಾಗಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಟ್ರೋಲ್ ಆಗುತ್ತಿದ್ದು, ಸುಮಲತಾ ಅವರು ಚಪ್ಪಲಿಯನ್ನೇ ತೆಗೆಸಿ ಹಾಕಿಸಿಕೊಂಡಿದ್ದಾರೆ. ಇದು ಎಷ್ಟರಮಟ್ಟಿಗೆ ಸ್ವಾಭಿಮಾನ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

    ಇನ್ನೊಂದೆಡೆ ಶನಿವಾರ ನಿಖಿಲ್ ಅವರು ಮದ್ದೂರು ಭಾಗದಲ್ಲಿ ಪ್ರಚಾರ ನಡೆಸಿದ ವೇಳೆ ನಡೆದುಕೊಂಡು ಬರುತ್ತಿದ್ದಾಗ ಕಾರ್ಯಕರ್ತರೊಬ್ಬರು ಚಪ್ಪಲಿಯನ್ನು ಹಾಕಲು ಬಂದಿದ್ದಾರೆ. ಆದ್ರೆ ನಿಖಿಲ್ ಅವರನ್ನು ತಡೆದು ತಾನೇ ಚಪ್ಪಲಿಕೊಂಡು ಅವರನ್ನು ಮುಟ್ಟಿ ಕೈ ಮುಗಿದಿದ್ದಾರೆ.

  • ನಾನು ಆಕ್ಷೇಪಿಸಿದ್ದ ವಿಡಿಯೋಗೆ ಕತ್ತರಿ: ಮಂಡ್ಯ ಡಿಸಿ ವಿರುದ್ಧ ಗಂಭೀರ ಆರೋಪ

    ನಾನು ಆಕ್ಷೇಪಿಸಿದ್ದ ವಿಡಿಯೋಗೆ ಕತ್ತರಿ: ಮಂಡ್ಯ ಡಿಸಿ ವಿರುದ್ಧ ಗಂಭೀರ ಆರೋಪ

    ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಪರಿಶೀಲನೆ ವೇಳೆ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದೆ. ಆದರೆ ಜಿಲ್ಲಾಧಿಕಾರಿ ಮಂಜುಶ್ರೀ ಅವರು, ನೀವು ಯಾವುದೇ ಆಕ್ಷೇಪಣೆ ಪತ್ರ ನೀಡಿಲ್ಲ ಅಂತ ಹಿಂಬರಹ ನೀಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಚುನಾವಣಾ ಏಜೆಂಟ್ ಮದನ್ ಕುಮಾರ್ ಆರೋಪಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಕ್ಷೇಪ ಸಲ್ಲಿಸಿದ್ದಕ್ಕೆ ಸಂಜೆಯವರೆಗೂ ಜಿಲ್ಲಾಧಿಕಾರಿಗಳು ಉತ್ತರ ನೀಡಲಿಲ್ಲ. ಹೀಗಾಗಿ ಖುದ್ದಾಗಿ ನಾನೇ ಡಿಸಿ ಕಚೇರಿಗೆ ತೆರಳಿ ಮಾಹಿತಿ ಕೇಳಿದಾಗ ನಾಮಪತ್ರ ಅಂಗೀಕರಿಸಿದ್ದೇವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು. ಇದರಿಂದಾಗಿ ನಾಮಪತ್ರ ಪರಿಶೀಲನೆಯ ವಿಡಿಯೋ ರೆಕಾರ್ಡಿಂಗ್ ಕೊಡುವಂತೆ ಮನವಿ ಸಲ್ಲಿಸಿದ್ದೆ ಎಂದರು. ಇದನ್ನು ಓದಿ: ಒಂದು ವಿಡಿಯೋ ನೋಡ್ಕೊಳ್ಳಕ್ಕಾಗದವರು ಅನ್ಯಾಯ ಹೇಗೆ ತಡೀತಾರೆ: ಡಿಸಿ ವಿರುದ್ಧ ಸುಮಲತಾ ಕಿಡಿ 

    ಜಿಲ್ಲಾಧಿಕಾರಿಗಳು ವಿಡಿಯೋ ಕ್ಯಾಮೆರಾಮನ್ ಯಾವುದೋ ಮದುವೆ ಕಾರ್ಯಕ್ಕೆ ಕಳಿಸಿದ್ದೇವೆ. ಹೀಗಾಗಿ ವಿಡಿಯೋ ಫುಟೇಜ್ ನೀಡಲು ಎರಡ್ಮೂರು ದಿನ ಸಮಯ ಬೇಕಾಗುತ್ತದೆ ಅಂತ ಹೇಳಿದರು. ಆದರೆ ಮರುದಿನ ನಮಗೆ ಅರ್ಧ ವಿಡಿಯೋ ಮಾತ್ರ ಕೊಟ್ಟಿದ್ದಾರೆ. ಅದರಲ್ಲಿ ನಾನು ಆಕ್ಷೇಪ ವ್ಯಕ್ತಪಡಿಸಿದ ದೃಶ್ಯವನ್ನೇ ಕತ್ತರಿಸಲಾಗಿದೆ. ಇದರಿಂದಾಗಿ ಸಂಪೂರ್ಣ ವಿಡಿಯೋ ನೀಡುವಂತೆ ಕೇಳಿದಾಗ, ವಿಡಿಯೋಗ್ರಾಫರ್ ಟ್ಯಾಂಪರ್ ಮಾಡಿದ್ದಾನೆ ಎಂಬ ಸಂಶಯ ಬರುತ್ತಿದೆ. ಈ ಸಂಬಂಧ ಆತನ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಆದರೆ ಇಲ್ಲಿಯವರೆಗೂ ಪ್ರಕರಣ ದಾಖಲಾಗಿಲ್ಲ ಎಂದು ದೂರಿದರು.

    ಚುನಾವಣಾ ಆಯುಕ್ತರು ಮತ್ತು ಸ್ಪೆಷಲ್ ಅಬ್ಸರ್ವರ್ ಮಧು ಮಹಾಜನ್ ಅವರನ್ನು ಭೇಟಿ ಮಾಡಿದ್ದೇನೆ. ವಿಚಾರಣೆ ನಡೆಸಿ ಸೂಕ್ತ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ವಿಡಿಯೋಗ್ರಾಫರ್ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಮಂಜುಶ್ರೀ ಅವರು ಕೂಡ ಪ್ರಕರಣದ ಕುರಿತು ವಿಚಾರಣೆಗಾಗಿ ಇಂದು ಬರುವಂತೆ ಸೂಚಿಸಿದ್ದಾರೆ ಎಂದು ಮದನ್ ಕುಮಾರ್ ಹೇಳಿದರು.

  • ಅಯ್ಯೋ, ಅಯ್ಯೋ ಇಂತಹ ದುಸ್ಥಿತಿ ನಮ್ಗೆ ಬಂದಿಲ್ಲ: ಪುಟ್ಟರಾಜು

    ಅಯ್ಯೋ, ಅಯ್ಯೋ ಇಂತಹ ದುಸ್ಥಿತಿ ನಮ್ಗೆ ಬಂದಿಲ್ಲ: ಪುಟ್ಟರಾಜು

    ಬೆಂಗಳೂರು: ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಳ್ಳುವ ದುರ್ಗತಿ ನಮಗೆ ಬಂದಿಲ್ಲ. ಚುನಾವಣಾ ಪ್ರಚಾರದಲ್ಲಿ ಮಂಡ್ಯದ ಜನತೆ ನನ್ನ ಪರವಾಗಿ ಇದ್ದಾರೆ ಎಂದು ಹೇಳುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಇಂತಹ ಕೆಳಮಟ್ಟದ ಪ್ರಚಾರಕ್ಕೆ ಇಳಿಯಬಾರದು ಎಂದು ಸಚಿವ ಸಿ.ಎಸ್ ಪುಟ್ಟರಾಜು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಳೆದ 35 ವರ್ಷಗಳಿಂದ ನಾವು ಮತ್ತು ದೇವೇಗೌಡರ ಕುಟುಂಬ ರಾಜಕಾರಣದಲ್ಲಿದ್ದೇವೆ. ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುತ್ತಾ ಬಂದಿದ್ದೇವೆ. ಸುಮಲತಾ ಪ್ರಥಮ ಬಾರಿಗೆ ಸ್ಪರ್ಧೆ ಮಾಡಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಅಂತಹವರು ನಮಗೆ ಅರ್ಜಿ ಹೇಗೆ ಹಾಕಬೇಕು ಎಂಬುದನ್ನು ಕಲಿಸಿಕೊಡಲು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು.

    ಕಳೆದ 35 ವರ್ಷಗಳಿಂದಲೂ ಚುನಾವಣೆಗಳನ್ನು ಮಾಡಿಕೊಂಡು ಬಂದಿದ್ದೇನೆ. ನನ್ನ ನೇತೃತ್ವದಲ್ಲಿಯೇ ಹಲವರ ನಾಮಿನೇಷನ್ ಮಾಡಿಸಿದ್ದೇನೆ. ನಿಖಿಲ್ ಕುಮಾರಸ್ವಾಮಿ ನಾಮಿನೇಷನ್ ಸಹ ನನ್ನ ಸಮ್ಮುಖದಲ್ಲಿ ನಡೆದಿದೆ. ಇಷ್ಟು ವರ್ಷ ಯಾವುದೇ ಲೋಪ ದೋಷಗಳು ಕಂಡು ಬಂದಿಲ್ಲ. ಇಂದು ಸುಮಲತಾರೇ ಸ್ಪರ್ಧೆ ಮಾಡಿದಾಗ ಇಂತಹ ಲೋಪ ದೋಷಗಳು ಆಗುತ್ತಾ ಎಂದು ಪ್ರಶ್ನಿಸಿದರು.

    ಮಂಡ್ಯ ಜಿಲ್ಲಾಧಿಕಾರಿಯನ್ನು ಹಿಂದಿನ ಅಂಬರೀಶ್ ಅವರ ಕಾಂಗ್ರೆಸ್ ಸರ್ಕಾರವೇ ನೇಮಕ ಮಾಡಿತ್ತು. ಜಿಲ್ಲಾಧಿಕಾರಿಯನ್ನು ಕುಮಾರಸ್ವಾಮಿ ಸರ್ಕಾರ ನೇಮಕ ಮಾಡಿಲ್ಲ. ಚುನಾವಣಾ ಅಧಿಕಾರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತವೆ. ಕಾನೂನಿನಲ್ಲಿ ತಪ್ಪು ಮಾಡಿದವರ ವಿರುದ್ಧ ದೂರು ಸಲ್ಲಿಸಲು ಹಲವಾರು ಅವಕಾಶಗಳನ್ನು ನೀಡಲಾಗಿದೆ. ಸುದ್ದಿಗೋಷ್ಠಿ ನಡೆಸುವ ಮೂಲಕ ಪಕ್ಷೇತರ ಅಭ್ಯರ್ಥಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

  • ಒಂದು ವಿಡಿಯೋ ನೋಡ್ಕೊಳ್ಳಕ್ಕಾಗದವರು ಅನ್ಯಾಯ ಹೇಗೆ ತಡೀತಾರೆ: ಡಿಸಿ ವಿರುದ್ಧ ಸುಮಲತಾ ಕಿಡಿ

    ಒಂದು ವಿಡಿಯೋ ನೋಡ್ಕೊಳ್ಳಕ್ಕಾಗದವರು ಅನ್ಯಾಯ ಹೇಗೆ ತಡೀತಾರೆ: ಡಿಸಿ ವಿರುದ್ಧ ಸುಮಲತಾ ಕಿಡಿ

    – ಮಂಜುಶ್ರೀ ಡಿಸಿಯಾಗಿದ್ದರೆ ನ್ಯಾಯಯುತ ಚುನಾವಣೆ ನಡೆಯಲ್ಲ

    ಮಂಡ್ಯ: ಒಂದು ವಿಡಿಯೋ ನೋಡಿಕೊಳ್ಳಲು ಆಗದ ಜಿಲ್ಲಾಧಿಕಾರಿಗಳು, ಕ್ಷೇತ್ರದ 2,047 ಬೂತ್‍ಗಳಲ್ಲಿ ನನಗೆ ಆಗುವ ಅನ್ಯಾಯವನ್ನು ಹೇಗೆ ತಡೆಯುತ್ತಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪಶ್ನಿಸಿ, ಜಿಲ್ಲಾಧಿಕಾರಿ ಮಂಜುಶ್ರೀ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಚುನಾವಣಾ ಏಜೆಂಟ್ ಮದನ್ ಕುಮಾರ್ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ 2,047 ಬೂತ್‍ಗಳ ಸಂಪೂರ್ಣ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಕೇವಲ ಒಂದು ವಿಡಿಯೋವನ್ನು ನೋಡಿಕೊಳ್ಳಲು ಆಗಲಿಲ್ಲ. ಈ ಮೂಲಕ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಅವರನ್ನು ಗೆಲ್ಲಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರಾ ಎನ್ನುವ ಸಂದೇಹ ನನ್ನಲ್ಲಿ ಮೂಡುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

    ನಾಮಪತ್ರ ಸಲ್ಲಿಸಿದ ನಂತರ ಕೆಲವು ಘಟನೆಗಳು ನಡೆದವು. ಈ ಕುರಿತು ನಾನು ಸಲ್ಲಿಸಿದ ಅನೇಕ ದೂರುಗಳಿಗೆ ಇಲ್ಲಿಯವರೆಗೂ ಸರಿಯಾದ ಮಾಹಿತಿಯೇ ಸಿಕ್ಕಿಲ್ಲ. ಇಂದು ಕೂಡ ಕೆಬಲ್ ಕಡಿತಗೊಳಿಸಿದ್ದಾರೆಂದು ಕೆಲವರು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

    ವಿದ್ಯುತ್ ಕಡಿತ:
    ಪಕ್ಷೇತರ ಅಭ್ಯರ್ಥಿಯಾಗಿ ನಾನು ಮಾರ್ಚ್ 20ರಂದು ನಾಮಪತ್ರ ಸಲ್ಲಿಸಿ, ಬೃಹತ್ ಸಮಾವೇಶ ನಡೆಸಿದ್ದೆ. ಈ ವೇಳೆ ನಗರದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಇದನ್ನು ಯಾರು ಮಾಡಿದ್ದಾರೆ? ಉದ್ದೇಶಪೂರ್ವಕವಾಗಿ ಮಾಡಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಲು ಜನರಿಗೆ ಬಿಟ್ಟಿದ್ದೇನೆ. ಆದರೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವಾಗ ವಿದ್ಯುತ್ ಕಡಿತಗೊಳಿಸದಂತೆ ಸೂಚನೆ ನೀಡಲಾಗಿತ್ತು ಎಂದು ಆರೋಪಿಸಿದರು.

    ವಿದ್ಯುತ್‍ಗಾಗಿ ಎಸ್‍ಪಿ ಪತ್ರ:
    ನಿಖಿಲ್ ಕುಮಾರಸ್ವಾಮಿ ಮಾರ್ಚ್ 25ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಅಂದು ವಿದ್ಯುತ್ ಕಡಿತಗೊಳಿಸಬಾರದು ಎಂದು ಎಸ್‍ಪಿ ಅವರು ಅಧಿಕೃತವಾಗಿ ವಿದ್ಯುತ್ ಸರಬರಾಜು ಅಧಿಕಾರಿಗಳಿಗೆ ಪತ್ರ ನೀಡಿದ್ದಾರೆ. ಈ ವಿಚಾರವನ್ನು ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರ ಗಮನಕ್ಕೆ ತಂದಿದ್ದೇನೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯ ಸೂಚನೆ ನೀಡುವ ಅಧಿಕಾರ ಅವರಿಗೆ ಇರುವುದಿಲ್ಲ. ಚುನಾವಣಾ ಪ್ರಚಾರಕ್ಕೆ ಸಿಎಂ ಬಂದಿದ್ದರೂ ನಾವು ಅವನರನ್ನು ಅಭ್ಯರ್ಥಿಯ ಪರ ಪ್ರಚಾರಕರು ಎಂದು ಭಾವಿಸುತ್ತೇವೆ. ಹೀಗಾಗಿ ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಸೂಕ್ತ ಕ್ರಮಕೈಗೊಳ್ಳುತ್ತೇವೆ ಅಂತ ತಿಳಿಸಿದ್ದಾರೆ ಎಂದು ಸುಮಲತಾ ಅಂಬರೀಶ್ ಹೇಳಿದರು.

    ನಾವು ಸಮಾವೇಶ ನಡೆಸುತ್ತಿದ್ದಾಗ ವಿದ್ಯುತ್ ಕಡಿತಗೊಳಿಸಿ ಸಣ್ಣತನ ತೋರಿದ್ದಾರೆ. ಇದನ್ನು ಇಲ್ಲಿಗೆ ಬಿಟ್ಟರೆ ಮುಂದೆ ನಮಗೆ ದೊಡ್ಡ ಮಟ್ಟದ ಹೊಡೆತ ಕೊಡುವ ಸಾಧ್ಯತೆಗಳಿವೆ. ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ತಿಳಿಸಿದರು.

    ನಿಖಿಲ್ ಕ್ರಮಸಂಖ್ಯೆ ಘೋಷಣೆ:
    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರದ ದಿನವೇ ಖುದ್ದು ಮುಖ್ಯಮಂತ್ರಿಗಳೇ ನಿಖಿಲ್ ಕ್ರಮ ಸಂಖ್ಯೆಯನ್ನು ಘೋಷಣೆ ಮಾಡಿದ್ದಾರೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯಾನವೇ? ನನಗೆ 20ನೇ ಕ್ರಮ ಸಂಖ್ಯೆ ನೀಡಿದ್ದಾರೆ. ನನ್ನ ಹಿಂದೆ ಮುಂದೆ ಸುಮಲತಾ ಹೆಸರಿನ ಅಭ್ಯರ್ಥಿಗಳನ್ನು ಹಾಕಲಾಗಿದೆ. ಈ ಮೂಲಕ ಮತದಾರರಲ್ಲಿ ಗೊಂದಲ ಉಂಟುಮಾಡಲು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು.

    ಅಧಿಕಾರ ಇದೆ ಎಂದು ಏನೆಲ್ಲಾ ಮಾಡುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಐಟಿ ಕಚೇರಿ ಮುಂದೆ ಧರಣಿಗೆ ಕುಳಿತುಕೊಂಡರು. ನನ್ನ ಜೀವನದಲ್ಲಿ ಈ ತರಹದ ಮುಖ್ಯಮಂತ್ರಿಯನ್ನು ನೋಡಿಲ್ಲ. ಇಷ್ಟು ವರ್ಷ ಜನರಿಗೆ ಮೋಸ ಮಾಡಿ, ಮಣ್ಣೆರಚಿಕೊಂಡು ಬಂದಿದ್ದಾರೆ. ಮಂಡ್ಯದಲ್ಲಿ ಈಗ ಅದನ್ನೇ ಮಾಡುತ್ತಿದ್ದಾರೆ ಎಂದು ದೂರಿದರು.

    ನಿಖಿಲ್ ಗೆಲುವಿಗೆ ಅಧಿಕಾರಿಗಳು ಕೆಲಸ:
    ಮಂಡ್ಯ ಲೋಕಸಭಾ ಕ್ಷೇತ್ರದ 2,047 ಬೂತ್‍ಗಳ ಸಂಪೂರ್ಣ ಜವಾಬ್ದಾರಿ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ಇರುತ್ತದೆ. ಒಂದು ವಿಡಿಯೋ ನೋಡಿಕೊಳ್ಳಲು ಆಗದ ಅವರು, ಮುಂದೆ ನನಗೆ ಆಗುವ ಅನ್ಯಾಯವನ್ನು ಹೇಗೆ ನೋಡಿಕೊಳ್ಳುತ್ತಾರೆ? ಸಿಎಂ ಪುತ್ರ ನಿಖಿಲ್ ಅವರನ್ನು ಗೆಲ್ಲಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರಾ ಎನ್ನುವ ಸಂದೇಹ ಮೂಡುತ್ತಿದೆ ಎಂದು ಸುಮಲತಾ ಅಸಮಾಧಾನ ಹೊರ ಹಾಕಿದರು.

    ಸಿಎಂ ಕುಮಾರಸ್ವಾಮಿ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಭಾವನೆ ಡಿಸಿ ಮಂಜುಶ್ರೀ ಅವರಿಗೆ ಇದ್ದರೆ ಗೌರವಯುತವಾಗಿ ತಮ್ಮ ಸ್ಥಾನ ಬಿಟ್ಟು ಹೋಗಬೇಕು. ಬೇರೆಯವರು ಬಂದು ಪ್ರಜಾಪ್ರಭುತ್ವದ ಗೌರವ ಕಾಪಾಡುತ್ತಾರೆ. ಮಂಜುಶ್ರೀ ಅವರೇ ಮಂಡ್ಯದ ಜಿಲ್ಲಾಧಿಕಾರಿಯಾಗಿದ್ದರೆ ನ್ಯಾಯಯುತ ಚುನಾವಣೆ ನಡೆಯಲು ಸಾಧ್ಯವಿಲ್ಲ. ನಾನು ಪ್ರಚಾರಕ್ಕೆ ಹೋದ ಎಲ್ಲ ಕಡೆಯಲ್ಲಿಯೂ ಚುನಾವಣಾ ಸಿಬ್ಬಂದಿ ವಿಡಿಯೋ ಮಾಡುತ್ತಾರೆ. ಆಗ ಮಾತ್ರ ಕ್ಯಾಮೆರಾ ಕೈ ಕೊಡಲ್ಲ ಎಂದು ಪ್ರಶ್ನಿಸಿದರು.

  • ನಾಳೆಯಿಂದ ಸುಮಲತಾ ಪರ ಡಿಬಾಸ್ ಪ್ರಚಾರ

    ನಾಳೆಯಿಂದ ಸುಮಲತಾ ಪರ ಡಿಬಾಸ್ ಪ್ರಚಾರ

    ಮಂಡ್ಯ: ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋಮವಾರದಿಂದ ಮಂಡ್ಯದಲ್ಲಿ ಪ್ರಚಾರ ಆರಂಭಿಸಲಿದ್ದಾರೆ.

    ಲೋಕಸಮರದ ಅಖಾಡಕ್ಕೆ ಸುಮಲತಾ ಪರ ಡಿಬಾಸ್ ಅಬ್ಬರದ ಪ್ರಚಾರ ನಡೆಸಲಿದ್ದು, ಏಪ್ರಿಲ್ 2ರಿಂದ ರಾಕಿಂಗ್ ಸ್ಟಾರ್ ಯಶ್ ಕೂಡ ಸಾಥ್ ನೀಡಲಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಾಳೆ ಬೆಳಗ್ಗೆ 9 ಗಂಟೆಗೆ ಕೆಆರ್‍ಎಸ್‍ನ ಅರಳಿಕಟ್ಟೆ ಸರ್ಕಲ್‍ನಿಂದ ದರ್ಶನ್ ಪ್ರಚಾರ ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಜಿಲ್ಲೆಯ ಹುಲಿಕೆರೆ, ಬೆಳಗೊಳ, ಮಂಟಿ, ಮೊಗರಹಳ್ಳಿ, ಪಂಪ್ಹೌಸ್.ಹೊಸಹಳ್ಳಿ, ಆನಂದೂರು, ಪಾಲಹಳ್ಳಿ, ನಗುವನಹಳ್ಳಿ, ಚಂದಗಾಲು, ಹೊಸೂರು, ಮೇಳಾಪುರ, ಹೆಬ್ಬಾಡಿಹುಂಡಿ, ಹೆಬ್ಬಾಡಿ, ಚಿಕ್ಕಅಂಕನಹಳ್ಳಿ, ಹಂಪಾಪುರ, ಹುರುಳಿಕ್ಯಾತನಹಳ್ಳಿ, ತರೀಪುರ, ಚನ್ನಹಳ್ಳಿ ಬಿದರಹಳ್ಳಿ, ಮಹದೇವಪುರ, ಮಂಡ್ಯಕೊಪ್ಪಲು, ಚಿಂದೇಗೌಡನಕೊಪ್ಪಲು, ಅರಕೆರೆ, ತಡಗವಾಡಿ, ಕೊಡಿಯಾಲ ಗ್ರಾಮಗಳಲ್ಲಿ ದರ್ಶನ್ ಅವರು ಸುಮಲತಾ ಜೊತೆಗೂಡಿ ಭರ್ಜರಿ ಪ್ರಚಾರ ಮಾಡಲಿದ್ದಾರೆ.

    ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ದರ್ಶನ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎನ್ನಲಾಗಿದೆ.

  • ಇವಿಎಂ ಯಂತ್ರದಲ್ಲಿ ನಿಖಿಲ್ ಮೊದಲು ಹೆಸರು- ಸಿಎಂ ಪ್ರತಿಕ್ರಿಯೆ

    ಇವಿಎಂ ಯಂತ್ರದಲ್ಲಿ ನಿಖಿಲ್ ಮೊದಲು ಹೆಸರು- ಸಿಎಂ ಪ್ರತಿಕ್ರಿಯೆ

    – ಸುಮಲತ ಆರೋಪಕ್ಕೆ ನಾನು ಉತ್ತರ ಕೊಡೊಲ್ಲ

    ಬೆಂಗಳೂರು: ವೋಟಿಂಗ್ ಮಿಷನ್‍ನಲ್ಲಿ ಮಾನ್ಯತೆ ಇರುವ ಪಕ್ಷದ ಹೆಸರು ಮೊದಲು ಕೊಡುತ್ತಾರೆ. ಮಂಡ್ಯದಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಮಾತ್ರ ಮಾನ್ಯತೆ ಇರುವ ಪಕ್ಷಗಳು ಹೀಗಾಗಿ ಆಲ್ಫಬೆಟ್ ಪ್ರಕಾರ ಸಂಖ್ಯೆ ಕೊಡುತ್ತಾರೆ ಎಂದು ತಿಳಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಸಿಎಂ, ಮಂಡ್ಯ ಲೋಕಸಭಾ ಕ್ಷೇತ್ರದ ವೋಟಿಂಗ್ ಮಿಷನ್‍ನಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಹೆಸರು ಮೊದಲು ಇರುವುದಕ್ಕೆ ಸ್ಪಷ್ಟನೆ ನೀಡಿದರು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಆರೋಪಕ್ಕೆ ನಾನು ಉತ್ತರ ಕೊಡುವುದಿಲ್ಲ ಹಾಗೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ನಾನು ಅಂತಹ ಆರೋಪಕ್ಕೆ ಗಮನ ಕೂಡ ಕೊಡುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನೀತಿ ನಿಯಮದ ಪ್ರಕಾರ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ ತಪ್ಪುಕಂಡರೆ ಯಾರು ಬೇಕಾದರೂ ಕೋರ್ಟ್ ಗೆ ಹೋಗಲಿ ಎಂದು ಅವರು, ಬಿಜೆಪಿ ಅವರು ಸುಮಲತಾ ಅವರ ಪರ ಪ್ರಚಾರ ಮಾಡಿತ್ತಿರುವುದು ಸಂತೋಷ. ಮಾಡಲಿ ಬಿಡಿ ಎಂದು ವ್ಯಂಗ್ಯವಾಡಿದರು.

    ಇಂಗ್ಲೀಷ್ ಆಲ್ಫಬೆಟ್ ಪ್ರಕಾರ ಎ.ಸುಮಲತಾ ಅನ್ನೋ ನನ್ನ ಹೆಸರು ಇವಿಎಂನಲ್ಲಿ ಮೊದಲು ಇರಬೇಕಿತ್ತು. ನನಗೆ 20ನೇ ನಂಬರ್ ಕೊಡಲಾಗಿದ್ದು 2ನೇ ಇವಿಎಂನಲ್ಲೂ, `ಎನ್’ ಆಲ್ಫಬೆಟ್‍ನ ನಿಖಿಲ್ ಹೆಸರನ್ನು 1ನೇ ಇವಿಎಂನಲ್ಲೂ ಇಡಲಾಗಿದೆ ಎಂದು ಸುಮಲತಾ ಅಂಬರೀಶ್ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇದರ ಜೊತೆಗೆ ಬಿಎಸ್‍ಪಿ ಅಭ್ಯರ್ಥಿಗಳು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ನಮ್ಮ ಪಕ್ಷ 8ನೇ ಪಕ್ಷವಾಗಿದೆ. ಪಕ್ಷದ ಆಲ್ಫಬೆಟ್ ನೋಡಿದರೆ ಬಿಎಸ್‍ಪಿಗೆ ಮೊದಲ ಸ್ಥಾನ ನೀಡಿ ಅಂತ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.