ಮಂಡ್ಯ: ಲೋಕಸಭಾ ಕ್ಷೇತ್ರ ಮಂಡ್ಯದಲ್ಲಿ ಹಣ ಹರಿದಾಡಲು ಬಿಡುತ್ತಿಲ್ಲ. ಆದ್ರೆ ಮೈಸೂರಿನಲ್ಲಿ ಹರಿದಾಡಿಸುತ್ತಿದ್ದಾರೆ ಎಂದು ಸಚಿವ ಸಿ.ಎಸ್. ಪುಟ್ಟರಾಜು ಅವರು ಸುಮಲತಾ ವಿರುದ್ಧ ಆರೋಪ ಮಾಡಿದ್ದು, ಈ ಕುರಿತು ಪಕ್ಷೇತರ ಅಭ್ಯರ್ಥಿ ಸಚಿವರಿಗೆ ಸವಾಲು ಹಾಕಿದ್ದಾರೆ.
ದೊಡ್ಡರಸಿನಕೆರೆಯಲ್ಲಿ ಪ್ರಚಾರದ ವೇಳೆ ಪ್ರತಿಕ್ರಿಯಿಸಿದ ಸುಮಲತಾ, ಪುಟ್ಟರಾಜು ಅವರಿಗೆ ಗೊತ್ತಿದ್ರೆ ಅವರು ಕೇಸ್ ಹಾಕಬಹುದು ಎಂದು ಸವಾಲೆಸೆದಿದ್ದಾರೆ. ಅಲ್ಲದೆ ಬೆಲೆ ಇರೋರ ಮಾತಿಗೆ ಮಾತ್ರ ನಾನು ಬೆಲೆ ಕೊಡೋದು. ಇಂಥವರ ಮಾತಿಗೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಸುಮಲತಾ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಐಟಿಯವರು ದೂರವಾಣಿ ಕದ್ದಾಲಿಸಿ ಸುಮಲತಾಗೆ ನೀಡಿದ್ದಾರೆ ಅನ್ನೋ ಪುಟ್ಟರಾಜು ಹೇಳಿಕೆಗೆ ತಿರುಗೇಟು ಕೊಟ್ಟ ಸುಮಲತಾ, ಅವರಿಗೆ ಗಿಲ್ಟಿ ಕಾಡ್ತಿದೆ. ತಪ್ಪು ಮಾಡಿಲ್ಲ ಅಂದ್ರೆ ಅವರೇಕೆ ಭಯಪಡಬೇಕು. ಐಟಿಯವರಾದ್ರು ಮಾಡಿಕೊಳ್ಳಲಿ, ಸಿಬಿಐನವರಾದ್ರು ಮಾಡಿಕೊಳ್ಳಲಿ. ಇವರಲ್ಲಿ ಉಳುಕಿರೋದಕ್ಕೆ ತಾನೆ ಹೀಗೆಲ್ಲ ಮಾಡ್ತಿರೋದು ಎಂದು ಟಾಂಗ್ ಕೊಟ್ಟಿದ್ದಾರೆ.
ಆರೋಪವೇನು?:
ರಾತ್ರಿ ಮೈಸೂರಿನಲ್ಲಿ ತಂಗಿದ ಬಳಿಕ ಏನೇನು ಮಾಡ್ತಿದ್ದಾರೆ ಎಂಬ ಮಾಹಿತಿ ನಮ್ಮ ಬಳಿ ಇದೆ. ಕೆಲವೇ ದಿನಗಳಲ್ಲಿ ಮಾಹಿತಿ ಕೊಡ್ತೀವಿ ಎಂದು ಪುಟ್ಟರಾಜು ಸುಮಲತಾ ವಿರುದ್ಧ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪಿಸಿದ್ದರು.
ಮಂಡ್ಯ: ಸಾವಿನ ರಾಜಕೀಯ, ಮಾತಿನ ರಾಜಕೀಯ ಆಯ್ತು ಇದೀಗ ಮಂಡ್ಯದಲ್ಲಿ ದ್ವೇಷದ ರಾಜಕೀಯ ಆರಂಭವಾಗಿದೆ.
ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದೆ. ಸುಮಲತಾ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಹೊಡಿ ಬಡಿ ಪಾಲಿಟಿಕ್ಸ್ ಗೆ ಜೆಡಿಎಸ್‍ನ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜೆಡಿಎಸ್‍ನ ಕಾರ್ತಿಕ್, ಅನಿಲ್, ಪಾಪಣ್ಣ ಮೇಲೆ ಸುಮಲತಾ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಷಯ ತಿಳಿದು ಭಾನುವಾರ ರಾತ್ರಿ ಕೆಎಂ ದೊಡ್ಡಿ ಆಸ್ಪತ್ರೆಗೆ ನಿಖಿಲ್ ಭೇಟಿ ನೀಡಿದ್ದಾರೆ. ಈ ರೀತಿ ಗಲಾಟೆ ಮಾಡಿದ್ರೆ ನಾನು ಸುಮ್ಮನೆ ಕೂರಲ್ಲ ಎಂದು ನಿಖಿಲ್ ಗರಂ ಆಗಿದ್ದಾರೆ ಎನ್ನಲಾಗಿದೆ.
ಇತ್ತ ನಂಗೇನೂ ಗೊತ್ತಿಲ್ಲ. ಆದರೆ ಜೆಡಿಎಸ್ ನವರ ರೌಡಿಸಂ ಮಿತಿಮೀರಿದೆ ಎಂದು ಸುಮಲತಾ ಪ್ರತ್ಯಾರೋಪ ಮಾಡಿದ್ದಾರೆ. ಗಲಾಟೆ ಬಳಿಕ ಗುರುದೇವರಹಳ್ಳಿಯಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ಈ ಬಗ್ಗೆ ಕೆಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ: ನಾನೊಂದೆರಡು ಪ್ರಶ್ನೆ ಕೇಳುತ್ತೇನೆ. ಸರಿಯಾದ ಉತ್ತರ ಹೇಳುತ್ತೀರಾ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತದಾರರಿಗೆ ಪ್ರಶ್ನೆ ಕೇಳಿದ್ದಾರೆ.
ಮದ್ದೂರು ತಾಲೂಕಿನ ಮಾದರಹಳ್ಳಿಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಸುಮಲತಾ ಅವರು, ನನ್ನ ಕ್ರಮ ಸಂಖ್ಯೆ ಎಷ್ಟು? ನನ್ನ ಚಿಹ್ನೆ ಯಾವುದು ಎಂದು ಪ್ರಶ್ನಿಸಿದರು. ಈ ಮೂಲಕ ತಮ್ಮ ಕ್ರಮ ಸಂಖ್ಯೆ ಹಾಗೂ ಚಿಹ್ನೆಯನ್ನು ಜನರ ಮನದಲ್ಲಿ ಬಿತ್ತಿದರು.
ಸುಮಲತಾ ಅವರು ನನ್ನ ಕ್ರಮ ಸಂಖ್ಯೆ ಎಷ್ಟು ಎಂದು ಪ್ರಶ್ನಿಸುತ್ತಿದ್ದಂತೆ ಗ್ರಾಮಸ್ಥರು 20 ಎಂದು ಕೂಗಿದರು. ಪುನಃ ಚಿಹ್ನೆ ಯಾವುದು ಎಂದು ಸುಮಲತಾ ಕೇಳಿದರು. ತಕ್ಷಣವೇ ಸ್ವಾಭಿಮಾನದ ಕಹಳೆ ಎನ್ನುವ ಕೂಗು ಕೇಳಿಬಂತು. ಆಗ ಸುಮಲತಾ ಅವರು ಕರೆಕ್ಟ್, ಮಂಡ್ಯದ ಸ್ವಾಭಿಮಾನ ಉಳಿಸುತ್ತೀರಾ? ಅಂಬರೀಶಣ್ಣನ ಪ್ರೀತಿ ಉಳಿಸುತ್ತೀರಾ? ನನಗೆ ವೋಟ್ ಹಾಕುತ್ತೀರಾ? ಎಂದಾಗಲೂ ಗ್ರಾಮಸ್ಥರು ಹೌದು, ಹೌದು ಪ್ರತಿಕ್ರಿಯೆ ನೀಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಸುಮಲತಾ ಹೆಸರಿನ 4 ಮಂದಿ ಸ್ಪರ್ಧೆ ಮಾಡುತ್ತಿದ್ದಾರೆ. ಸುಮಲತಾ ಅಂಬರೀಶ್, ಕೆಆರ್ ಪೇಟೆ ತಾಲೂಕಿನ ಗೊರವಿ ಗ್ರಾಮದ ಎಂ.ಸುಮಲತಾ, ರಾಮನಗರ ಜಿಲ್ಲೆಯ ಕನಕಪುರದ ಪಿ.ಸುಮಲತಾ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಗ್ರಾಮದ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡುವುದಕ್ಕಾಗಿ ಸುಮಲತಾ ಎಂಬ ಹೆಸರಿನ ಮೂರು ಮಂದಿಯನ್ನು ಮೈತ್ರಿ ನಾಯಕರು ಚುನಾವಣಾ ಕಣಕ್ಕೆ ಇಳಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಮತದಾರರಿಗೆ ಯಾವುದೇ ರೀತಿಯ ಗೊಂದಲ ಉಂಟಾಗಬಾರದು ಎನ್ನುವ ಉದ್ದೇಶದಿಂದ ಸುಮಲತಾ ಅಂಬರೀಶ್ ಅವರು ತಮ್ಮ ಕ್ರಮ ಸಂಖ್ಯೆ ಹಾಗೂ ಚಿಹ್ನೆಯ ಬಗ್ಗೆ ಮತದಾರರಿಗೆ ತಿಳಿಸುತ್ತಿದ್ದಾರೆ. ಸುಮಲತಾ ಹೆಸರಿನ ಮೂವರು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರ ವಿರುದ್ಧ ಸುಮಲತಾ ಅಂಬರೀಶ್ ಅವರು ಈ ಹಿಂದೆ ವಾಗ್ದಾಳಿ ನಡೆಸಿದ್ದರು.
ಬೆಳಗಾವಿ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪರವಾಗಿ ಬೆಳಗಾವಿಯ ರೈತ ಮಹಿಳೆ ಜಯಶ್ರೀ ಹಾಗೂ ಹಲವು ಮಹಿಳಾ ಸಂಘಟನೆಯ ಮಹಿಳೆಯರು ಪ್ರಚಾರಕ್ಕೆ ಹೋಗುವುದಾಗಿ ನಿರ್ಧರಿಸಿದ್ದಾರೆ.
ಈಗಾಗಲೇ ಮಂಡ್ಯದ ಹಲವು ರೈತ ಸಂಘಟನೆ ಮುಖಂಡರು ಕೂಡ ಜಯಶ್ರೀ ಅವರನ್ನು ಸಂಪರ್ಕ ಮಾಡಿದ್ದು ಪ್ರಚಾರಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯಶ್ರೀ, ಸುಮಲತಾ ಅವರನ್ನು ಗೆಲ್ಲಿಸುವುದು ಹಾಗೂ ನಿಖಿಲ್ ಕುಮಾರಸ್ವಾಮಿ ಸೋಲಿಸಿ ಕುಟುಂಬ ರಾಜಕಾರಣ ಒದ್ದು ಓಡಿಸಲು ನಾವು ಕೂಡ ಪ್ರಚಾರಕ್ಕೆ ಹೋಗುತ್ತಿದ್ದೇವೆ. ಬೆಳಗಾವಿಯಿಂದ ಸುಮಾರು ಇಪ್ಪತ್ತಕ್ಕೂ ಅಧಿಕ ಮಹಿಳೆಯರು ಚುನಾವಣೆ ಮುಗಿಯುವವರೆಗೂ ಅಲ್ಲಿ ಪ್ರಚಾರವನ್ನ ನಡೆಸುತ್ತೇವೆ ಎಂದು ನೇರವಾಗಿ ಸಿಎಂ ಅವರಿಗೆ ಟಾಂಗ್ ನೀಡಿದ್ದಾರೆ.
ಕಬ್ಬಿನ ಬಾಕಿ ಬಿಲ್ ಕೊಡಿ ಎಂದು ಬೆಳಗಾವಿಯಲ್ಲಿ ಹೋರಾಟ ನಡೆಸಿದ್ದ ರೈತ ಮಹಿಳೆಗೆ `ಎಲ್ಲಿ ಮಲಗಿದ್ದೀಯಮ್ಮಾ’ ಎಂದು ಕೇಳಿದ್ದ ಸಿಎಂ ಅವರ ವಿರುದ್ಧ ಈ ಮೂಲಕ ಸೇಡು ತೀರಿಸಿಕೊಳ್ಳಲು ರೈತ ಮಹಿಳೆ ಜಯಶ್ರೀ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
– ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟ
– ನಿಖಿಲ್ ಗೆಲ್ಲಿಸಲು ಎಚ್‍ಡಿಕೆ ತಂತ್ರವಂತೆ
– ಬಿಜೆಪಿಯಿಂದ ಈ ವದಂತಿ ಸೃಷ್ಟಿ: ಶರವಣ
ಬೆಂಗಳೂರು: ಮೊದಲ ಹಂತದ ಮತದಾನಕ್ಕೂ ಎರಡು ದಿನ ಮೊದಲೇ ಸಿಎಂ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗುತ್ತಾರೆ ಎನ್ನುವ ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಅವರನ್ನು ಗೆಲ್ಲಿಸಲು ಸಿಎಂ ಕುಮಾರಸ್ವಾಮಿ ಅವರು ಈ ತಂತ್ರ ಅನುಸರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮತದಾರರಲ್ಲಿ ಕೊನೆ ಕ್ಷಣದಲ್ಲಿ ಅನುಕಂಪದ ಅಲೆ ಸೃಷ್ಟಿಸಲು ಸಿಎಂ ಈ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಯಾರು ಹರಿಬಿಟ್ಟಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ವಕ್ತಾರ ಶರವಣ ಅವರು, ಬಿಜೆಪಿಯವರು ಇಂತಹ ವದಂತಿಗಳನ್ನು ಸೃಷ್ಟಿಸುವಲ್ಲಿ ನಿಸ್ಸಿಮರು. ರಾಜ್ಯದ ರಾಜಕಾರಣದಲ್ಲಿ ಸುಳ್ಳು ಮೊದಲೇ ಅಥವಾ ಬಿಜೆಪಿ ಮೊದಲೇ ಎನ್ನುವ ಪ್ರಶ್ನೆ ಬಂದಾಗ ಬಿಜೆಪಿಯೇ ಮೊದಲು ಎನ್ನುವ ಉತ್ತರ ಬರುತ್ತದೆ. ಸಿಎಂ ಕುಮಾರಸ್ವಾಮಿ ಅವರು ನೀಡಿದ ಕೊಡುಗೆಯನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಎಂ ವಿರುದ್ಧ ಸುಳ್ಳು ವದಂತಿ ಸುದ್ದಿಗಳನ್ನು ಹರಿ ಬಿಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಬರುವ ಇಂತಹ ವದಂತಿಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸಿಎಂ ಕುಮಾರಸ್ವಾಮಿ ಅವರು ಕೂಡ ಈ ವಿಚಾರವನ್ನು ಗಂಭೀರವಾಗಿ ತಗೆದುಕೊಳ್ಳಬಾರದು ಎಂದರು.
ಸಿಎಂ ಕುಮಾರಸ್ವಾಮಿ ಪ್ರತಿ ವಿಚಾರಕ್ಕೂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಪ್ರಚಾರ ಸಿಗುತ್ತದೆ. ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‍ಗೆ ನಾನು ಪ್ರಬಲ ಪ್ರತಿಸ್ಪರ್ಧಿ. ಹೀಗಾಗಿ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಂಡ್ಯ: ಕ್ಷೇತ್ರದ ರಾಜಕಾರಣ ರಾಜ್ಯದ ಜನರ ಗಮನ ಸೆಳೆದಿದ್ದು, ಜಿದ್ದಿನ ರಾಜಕಾರಣಕ್ಕೆ ದಾರಿ ಮಾಡಿದೆ. ಇದರ ನಡುವೆಯೇ ಸುಮಲತಾ ಅವರ ಪರ ಪ್ರಚಾರಕ್ಕೆ ತೆರಳಿದ್ದ ನಟ ದರ್ಶನ್ ಅವರ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಕ್ಷೇತ್ರದ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಬೆಳ್ಳೂರಿನಿಂದ ನಾಗಮಂಗಲ ಕಡೆ ಬರುತ್ತಿರುವಾಗ ಕೃತ್ಯ ನಡೆದಿದೆ. ದರ್ಶನ್ ಪ್ರಚಾರ ವಾಹನ ಮೇಲೆ ಕಲ್ಲು ತೂರಿದ ವೇಳೆ ಪೊಲೀಸ್ ವಾಹನ ಕೂಡ ಜಖಂಗೊಂಡಿದೆ. ರಸ್ತೆ ಬದಿ ನಿಂತಿದ್ದ ಕಿಡಿಗೇಡಿಗಳಿಂದ ಕೃತ್ಯ ಮಡೆದಿದೆ.
ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಈ ವೇಳೆ ಸಿಎಂ ಪರ ಜೈಕಾರ ಕೂಗಿದ್ದು, ಕೆಲ ದಿನಗಳ ಹಿಂದೆ ನಿಖಿಲ್ ಬೆಂಬಲಿಗ ವಾಹನಕ್ಕೆ ಕಲ್ಲು ತೂರಾಟ ನಡೆಸಿದ್ದರು. ಇದೀಗ ದರ್ಶನ್ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಿಂದ ದರ್ಶನ್ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶ ಮಾಡಿ ಲಾಠಿ ಬೀಸಿದ್ದಾರೆ. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂಬ ಮಾಹಿತಿ ಲಭಿಸಿದೆ.
ಇತ್ತ ಪ್ರಚಾರದ ವೇಳೆ ಅಭಿಮಾನಿಯೊಬ್ಬ ದರ್ಶನ್ ಅವರ ಕೈ ಹಿಡಿದು ಎಳೆದಾಡಿದ್ದು, ಪರಿಣಾಮ ಅಪಘಾತದಿಂದ ಗಾಯಗೊಂಡಿದ್ದ ಕೈಯಲ್ಲಿ ಮತ್ತೆ ನೋವು ಕಾಣಿಸಿಕೊಂಡಿದೆ. ಅಭಿಮಾನಿಗಳ ನೂಕು ನುಗ್ಗಲಿನಿಂದಾಗಿ ದರ್ಶನ್ ಬಲಗೈಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.
ಬೆಂಗಳೂರು: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಇಂದು ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ಆಯುಕ್ತ ಸಂಜೀವ್ ಕುಮಾರ್ ರೊಂದಿಗೆ ಮಾತುಕತೆ ನಡೆಸಿದರು.
ಆಯುಕ್ತರ ಭೇಟಿ ಬಳಿಕ ಮಾತನಾಡಿದ ಸುಮಲತಾ ಅವರು, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಕ್ರಮಬದ್ಧ ಆಗಿಲ್ಲ ಎಂದು ಆಯೋಗಕ್ಕೆ ದೂರು ಕೊಟ್ಟಿದ್ದೇವು. ಇದರ ತನಿಖೆ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿ ಕೊಡಲು ಬಂದಿದ್ದೇವೆ. ನಾಮಪತ್ರ ಸಲ್ಲಿಕೆ ವೀಡಿಯೋ ಟ್ಯಾಂಪರಿಂಗ್ ಮಾಡಿದ್ದಾರೆ. ಇದರ ಬಗ್ಗೆ ಇನ್ನಷ್ಟು ದಾಖಲೆ ಕೇಳಿದ್ದೇವು. ಆದರೆ ದಾಖಲೆ ನಮಗೆ ಇನ್ನೂ ಕೊಟ್ಟಿಲ್ಲ. ಹಾಗಾಗಿ ಇದನ್ನು ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
ಚುನಾವಣಾ ಪ್ರಚಾರ ನಡೆಸಲು ನಮಗೆ ರಾತ್ರಿ 9.30ಕ್ಕೆ ಅಂತ್ಯ ಮಾಡುವಂತೆ ಚುನಾವಣಾ ಅಧಿಕಾರಿಗಳು ಒತ್ತಡ ಹಾಕಿದ್ದಾರೆ. ಆದರೆ ಮತ್ತೊಂದು ಕಡೆ ಜೆಡಿಎಸ್ ಅಭ್ಯರ್ಥಿ ರಾತ್ರಿ 11 ಗಂಟೆ ವರೆಗೂ ಪ್ರಚಾರ ಮಾಡುತ್ತಾರೆ. ಇದನ್ನು ಚುನಾವಣಾಧಿಕಾರಿಗಳು ನಿಲ್ಲಿಸ್ತಿಲ್ಲ. ಜೆಡಿಎಸ್ ಅಭ್ಯರ್ಥಿ ಪ್ರಚಾರ ಅವಧಿ ಮುಗಿದ ನಂತರವೂ ನಡೆಯುತ್ತಿರುತ್ತದೆ. ಆದರೆ ಚುನಾವಣಾ ಅಧಿಕಾರಿಗಳು ವೀಕ್ಷಕರಾಗಿ ನೋಡುತ್ತಾರೆ ಹೊರತು ಅವರ ಪ್ರಚಾರ ನಿಲ್ಲಿಸಲ್ಲ. ಈ ಬಗ್ಗೆಯೂ ಕೂಡ ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತಂದಿದ್ದೇವೆ ಎಂದರು.
– ಮಾತಿನ ಭರದಲ್ಲಿ ಶ್ರೀಕಂಠಯ್ಯ ಎಡವಟ್ಟು
– ಸುಮಲತಾ ಪರ ಪ್ರಚಾರ ಮಾಡೋರಲ್ಲಿ ಯಾರು ಜಿಲ್ಲೆಗಾಗಿ ದುಡಿದಿದ್ದಾರೆ?
ಮಂಡ್ಯ: ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಮಾತಿನ ಭರದಲ್ಲಿ ಸುಮಲತಾ ಅಂಬರೀಶ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.
ಜಿಲ್ಲೆಯ ಶ್ರೀರಂಗಪಟ್ಟಣ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕರು, “ಸುಮಲತಾ ಅವರು ಕಾಂಗ್ರೆಸ್ ಅಭ್ಯರ್ಥಿ” ಎಂದು ಹೇಳಿದರು. ತಕ್ಷಣವೇ ಕಾರ್ಯಕರ್ತರು, ಮೈತ್ರಿ ಪಕ್ಷಗಳ ಸ್ಥಳೀಯ ಮುಖಂಡರು “ಅಲ್ಲ, ಅಲ್ಲ” ಎಂದು ಕೂಗಿದರು. ಶಾಸಕರು ಕೂಡಲೇ ಎಚ್ಚೆತ್ತುಕೊಂಡು ತನ್ನ ಹೇಳಿಕೆಯನ್ನು ಸರಿಪಡಿಸಿಕೊಂಡು,”ಸುಮಲತಾ ಅವರು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ” ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ಪರ್ಧೆಗೆ ಇಳಿಸುವ ಪ್ರಸ್ತಾವನೆ ಇರಲಿಲ್ಲ. ನಮ್ಮ ಒತ್ತಾಯದ ಮೇರೆಗೆ ಹಾಗೂ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಿಖಿಲ್ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ಮಾಜಿ ಸಚಿವ ಅಂಬರೀಶ್ ಅವರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದಿದ್ದಾರೆ. ಆದರೂ ಮೂರು ಬಾರಿ ಕಾಂಗ್ರೆಸ್ಸಿನ ಠೇವಣಿ ಕಳೆದರು. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಭವಿಷ್ಯ ಧೂಳೀಪಟವಾಯಿತು ಎಂದು ವ್ಯಂಗ್ಯವಾಡಿದರು.
ಮಧ್ಯರಾತ್ರಿ ದುಡ್ಡು ಪಡೆದವರನ್ನು ನೀವು ನಂಬಿದ್ದೀರಿ. ಪ್ರಾಮಾಣಿಕ ಕಾಂಗ್ರೆಸ್ಸಿಗರನ್ನು ನೀವು ಧೂಳೀಪಟ ಮಾಡುತ್ತಾ ಇದ್ದೀರಿ. 30 ವರ್ಷಗಳ ಕಾಲ ಕಾಂಗ್ರೆಸ್‍ನಲ್ಲಿದ್ದು ದ್ರೋಹ ಮಾಡುತ್ತಿರುವಿರಿ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಉಪವಾಸ ಕುಳಿತ್ತಿದ್ದರಿಂದ ಕಾವೇರಿ ಉಳಿಯಿತು. ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದೇವೆ. ಜಿಲ್ಲೆಯ ಜನರಿಗೆ ತೊಂದರೆ ಕೊಟ್ಟು ರಾಜಕಾರಣ ಮಾಡಬೇಡಿ. ನಿಮ್ಮ ಪರ ಪ್ರಚಾರ ಮಾಡುತ್ತಿರುವವರಲ್ಲಿ ಯಾರು ಜಿಲ್ಲೆಯ ಅಭಿವೃದ್ಧಿಗೆ ದುಡಿದಿದ್ದಾರೆ? ಪ್ರಚಾರಕ್ಕೆ ಸಿನಿಮಾದವರನ್ನು ಕರೆದುಕೊಂಡು ಬಂದಿದ್ದೀರಿ. ಅಭಿವೃದ್ಧಿ ವಿಚಾರವಾಗಿ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದರು.
– ನಾಯಕರ ಮೈತ್ರಿ ವಿನಃ, ಕಾರ್ಯಕರ್ತರ ಮೈತ್ರಿಯಲ್ಲ
– ಮಂಡ್ಯ ಕಾಂಗ್ರೆಸ್ ಸ್ವಾಭಿಮಾನದ, ಉಳಿವಿನ ಪ್ರಶ್ನೆ
ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ ಅಂಬರೀಶ್ ಅವರು ಮೊದಲ ಬಾರಿಗೆ ಪತ್ರಕರ್ತರ ಜೊತೆ ಸಂವಾದ ನಡೆಸಿ ಚುನಾವಣೆಯ ಸ್ಪರ್ಧೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ರಾಜಕೀಯ ಪ್ರವೇಶ ಹಾಗೂ ಸ್ಪರ್ಧೆಯ ಹಿಂದಿನ ಕುರಿತ ಕುತೂಹಲಕಾರಿ ಅಂಶಗಳನ್ನು ತಿಳಿಸಿದ್ದಾರೆ.
ಮೊದಲ ಬಾರಿಗೆ ಪ್ರೆಸ್ ಕ್ಲಬ್‍ಗೆ ಬಂದಿದ್ದೇನೆ. ನಾನು 10ನೇ ತರಗತಿಗೆ ವಿದ್ಯಾಭ್ಯಾಸ ಮುಗಿದ ಬಳಿಕ ಸಿನಿಮಾ ಕ್ಷೇತ್ರಕ್ಕೆ ಬಂದೆ. ಜೀವನದಲ್ಲಿ ಸಾಕಷ್ಟು ಕಲಿತ್ತಿದ್ದು, ಏಳು ವರ್ಷ ಇದ್ದಾಗ ತಂದೆ ತೀರಿಕೊಂಡರು. ಅಮ್ಮನಿಗೆ ಐವರು ಮಕ್ಕಳು. ನನಗೆ ನನ್ನ ತಾಯಿಯೇ ಆದರ್ಶ. ಅಮ್ಮ ಹೇಗೆ ಕಷ್ಟಪಟ್ಟು ಐವರು ಮಕ್ಕಳ ಪೋಷಣೆ ಮಾಡಿದ್ದಾರೆ ಅದುವೇ ನನ್ನ ಜೀವನಕ್ಕೆ ಸ್ಫೂರ್ತಿ ಎಂದರು.
ಸಾಲಮನ್ನಾ ಸುಳ್ಳು ಆಶ್ವಾಸನೆ ಎಚ್ಚರಿಕೆ: ಕೇಂದ್ರ ಮಂತ್ರಿಯಾಗಿ ಅಂಬರೀಶ್ ಎರಡು ತಿಂಗಳು ಮಾತ್ರ ಇದ್ದರೂ ಉತ್ತಮ ಸಾಧನೆ ಮಾಡಿದ್ದಾರೆ. ಇದನ್ನು ಮಂಡ್ಯದಲ್ಲಿ ಬಹಳ ಜನ ಹೇಳುತ್ತಾರೆ. ರೈತರ ಸಾಲಮನ್ನಾ ಮಾಡೋಕೆ ಆಗಲ್ಲ ಎಂದು ಅಂಬರೀಶ್ ಅವರಿಗೆ ಸರ್ಕಾರದ ಹಣಕಾಸು ಕಾರ್ಯದರ್ಶಿ ಹೇಳಿದ್ದರು. ಅಲ್ಲದೇ ರಾಜ್ಯ ಬೊಕ್ಕಸದಲ್ಲಿ ಅಷ್ಟು ದುಡ್ಡಿಲ್ಲ, ರಾಜ್ಯದ ನೌಕರರ ಸಂಬಳ ಕೊಡಲು ಹಣ ಇಲ್ಲ, ಸಾಲ ತೀರಿಸಲು ಹಣ ಎಲ್ಲಿ ತರುತ್ತಾರೆ ಎಂದು ನಿಮ್ಮ ಸ್ನೇಹಿತರಿಗ ತಿಳಿಸಿ. ಇದು ಇದು ಸುಳ್ಳು ಆಶ್ವಾಸನೆ ಆಗುತ್ತೆ ಎಂದು ಹೇಳಿದ್ದರು ಎಂದು ಸುಮಲತಾ ವಿವರಿಸಿದರು. ಆದರೆ ದೇವೇಗೌಡರು ಹಿರಿಯರು, ತಂದೆ ಸಮಾನ. ಅಂಬರೀಶ್ ಸ್ಪರ್ಧೆ ಮಾಡಿದಾಗ ದೇವೇಗೌಡ್ರು ಅವರ ವಿರುದ್ಧ ಪ್ರಚಾರ ಮಾಡಿದ್ದಾರೆ. ಆದರೆ ಅಂದು ಅವರು ಎಂದು ವಿರುದ್ಧ ಮಾತನಾಡಿಲ್ಲ. ಈಗಲೂ ದೇವೇಗೌಡರು ನಮ್ಮ ವಿರುದ್ಧ ಮಾತನಾಡಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ನಾಯಕರ ಟೀಕೆಗೆ ಉತ್ತರಿಸಲ್ಲ ಎಂದರು.
ಅಂಬಿ ನನಗೆ ರಾಜಕೀಯ ಸ್ಫೂರ್ತಿ: ಸಿನಿಮಾ ಹಾಗೂ ರಾಜಕೀಯ ಪ್ರವೇಶ ಎರಡು ನನ್ನ ಜೀವನದಲ್ಲಿ ಅನಿರೀಕ್ಷಿತ. ಅಂಬರೀಶ್ ಅವರಿದ್ದಾಗಲೂ ನಾನು ರಾಜಕೀಯದ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಅವರು ಇಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅಲ್ಲದೇ ಮನಸ್ಸು ಮಾಡಿದ್ದರೆ ಸಿಎಂ ಕೂಡ ಆಗುತ್ತಿದ್ದರು. ಅಂಬರೀಶ್ ನನಗೆ ರಾಜಕೀಯದಲ್ಲಿ ಸ್ಫೂರ್ತಿ. ಅವರು ಯಾವುದನ್ನು ಪ್ಲಾನ್ ಮಾಡಿ ಮಾಡದೇ ನೇರ ಮಾತಿನ ಮೂಲಕ ನಡೆದುಕೊಳ್ಳುತ್ತಿದ್ದರು. ರಾಜಕೀಯ ಪ್ರವೇಶ ಮಾಡಲು ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ನನಗೆ ಧೈರ್ಯ ತುಂಬಿದ್ದಾರೆ. ಇದು ಒಂದು ಭಾಗ್ಯ ಎಂದು ಭಾವಿಸುತ್ತೇನೆ. ಅಂಬರೀಶ್ ಅವರಿಗೆ ಮಂಡ್ಯದ ಬಗ್ಗೆ ಬಹಳ ಒಲವು ಇತ್ತು, ಕನಸುಗಳಿತ್ತು. ಮಂಡ್ಯದ ಅಭಿವೃದ್ಧಿ ನನ್ನ ಗುರಿ. ಮಂಡ್ಯವನ್ನು ಸಿಂಗಾಪುರ ಮಾಡುತ್ತೇನೆ ಎಂದು ನಾನು ಹೇಳಲ್ಲ. ಆದರೆ ಆದರೆ ಅಭಿವೃದ್ಧಿ ಹಾದಿಯಲ್ಲಿ ಸಾಗಲು ನನ್ನ ವ್ಯಾಪ್ತಿ ಮೀರಿ ಕೆಲಸ ಮಾಡುತ್ತೇನೆ ಎಂದರು.
ಸ್ವಾಭಿಮಾನದ ಪ್ರಶ್ನೆ: ಚುನಾವಣೆ ಸ್ಪರ್ಧೆ ಮಾಡಿದ ಬಳಿಕ ಮೊದಲು ನನಗೆ ರೈತ ಸಂಘ ಬೆಂಬಲ ನೀಡಿತು. ಆದರೆ ಆ ನಂತರ ಬೆಂಬಲ ಕೊಟ್ಟ ಬಿಜೆಪಿ ಬಗ್ಗೆ ಮಾತ್ರ ಪ್ರಶ್ನೆ ಮೂಡಿದೆ. ರೈತರ ಸಂಘದ ಬಗ್ಗೆ ಏಕೆ ಪ್ರಶ್ನೆ ಮಾಡಲ್ಲ. ನನ್ನ ಪ್ರಚಾರ ವೇಳೆ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಭಾವುಟ ಹಿಡಿದು ಬರುತ್ತಿದ್ದಾರೆ ಅವರಿಗೆ ಇದು ಸ್ವಾಭಿಮಾನದ, ಉಳಿವಿನ ಪ್ರಶ್ನೆ. ಹಾಗಾಗಿ ನನ್ನ ಪರ ಪ್ರಚಾರಕ್ಕೆ ಬರುತ್ತಿದ್ದಾರೆ. ಇಲ್ಲಿ ನಾಯಕರು ಮೈತ್ರಿ ಮಾಡಿಕೊಂಡಿದ್ದಾರೆ ವಿನಃ ಕಾರ್ಯಕರ್ತರಲ್ಲಿ ಮೈತ್ರಿ ಆಗಿಲ್ಲ ಎಂದು ತಿಳಿಸಿದರು.
ದಬ್ಬಾಳಿಕೆ, ದೌರ್ಜನ್ಯ: ಒಂದು ಪಕ್ಷ ತೀರ್ಮಾನ ತೆಗೆದುಕೊಂಡಾಗ, ಅಲ್ಲಿನ ಕಾರ್ಯಕರ್ತರ ಅಭಿಪ್ರಾಯ ಕೇಳಬೇಕು. ನನ್ನ ಸಂಬಂಧಿಕರು, ಸ್ನೇಹಿತರು ಆ ಪಕ್ಷದಲ್ಲೆ ಇದ್ದಾರೆ. ನಾನು ಅವರನ್ನೆಲ್ಲ ಎದುರು ಹಾಕಿಕೊಂಡು ಸ್ಪರ್ಧೆ ಮಾಡುವುದು ಸರಿನಾ ಎಂಬ ಪ್ರಶ್ನೆ ನಾಮಪತ್ರ ಸಲ್ಲಿಸುವವರೆಗೂ ನನ್ನನ್ನ ಕಾಡುತ್ತಿತ್ತು. ಒಂದೊಮ್ಮೆ ಅದನ್ನೆಲ್ಲಾ ನೆನೆಸಿಕೊಂಡು ಅತ್ತಿದ್ದೀನಿ. ಆದರೆ ಅಂಬರೀಶ್ ಕೆಲಸವನ್ನ ಮುಂದುವರಿಸಲು ಆ ದೇವರೇ ನನಗೆ ಶಕ್ತಿ ತುಂಬಿದ್ದಾನೆ. ಮಂಡ್ಯದಲ್ಲಿ ಕಾಂಗ್ರೆಸ್‍ಗೆ ಲೀಡ್ ಬಂದಿರುವ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡಿಲ್ಲ. ಕೆಲವೆಡೆ ರಸ್ತೆ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಅದನ್ನ ನಾನು ಪ್ರಚಾರಕ್ಕೆ ಹೋದಾಗ ಹಲವರು ನನ್ನ ಮುಂದೆ ಹೇಳಿಕೊಂಡಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಅನ್ಯಾಯ, ದಬ್ಬಾಳಿಕೆ ನೋಡಿ ನಾನು ಮಾಡಿದ್ದು ಸರಿ ಅನಿಸಿತ್ತು ಎಂದರು.
ಹಾದಿ ಕಠಿಣ: ನಾನು ಪಕ್ಷೇತರ ಆಗಿ ಸ್ಪರ್ಧಿಸಿರುವುದಿರಿಂದ ನನ್ನ ಹೋರಾಟ ಕಠಿಣವಾಗಿದೆ. ಇದು ಕಷ್ಟದ ಹಾದಿ, ಜನರನ್ನ ಕೇಳಿ ಈ ಹಾದಿ ಹಿಡಿದಿದ್ದೇನೆ. ಕಾಂಗ್ರೆಸ್ ನಿಂದ ಅವಕಾಶ ಸಿಗಲಿಲ್ಲ. ಆ ವೇಳೆ ಪಕ್ಷೇತರ ಬದಲು ಒಂದು ಪಕ್ಷ ಸೇರಿ ಯಾವುದಾದರೂ ಸ್ಥಾನ ಪಡೆಯಬಹುದಿತ್ತು. ಆದರೆ ನಾನು ಹಾಗೆ ಮಾಡದೇ ಪಕ್ಷೇತರಳಾಗಿ ನಿಂತೆ. ಮನೆ ಮಕ್ಕಳಾಗಿ ದರ್ಶನ್, ಯಶ್ ಪ್ರಚಾರಕ್ಕೆ ಬಂದಿದ್ದಾರೆ ವಿನಃ ಸ್ಟಾರ್ ಗಳಾಗಿ ಅಲ್ಲ. ಚಿರಂಜೀವಿ, ರಜನಿಕಾಂತ್ ಬರುತ್ತಾರೆ ಎಂಬ ನಿರೀಕ್ಷೆ ಇಲ್ಲ. ಏಕೆಂದರೆ ಮಂಡ್ಯದ ಸನ್ನಿವೇಶ ಬೇರೆ. ನನ್ನ ಸ್ಪರ್ಧೆಯಿಂದ ಚಿತ್ರರಂಗ ಇಬ್ಭಾಗ ಆಗಿಲ್ಲ, ಆಗುವುದಿಲ್ಲ. ನಾವು ಪಕ್ಷಗಳನ್ನು ಕಟ್ಟಿಕೊಂಡಿಲ್ಲ. ನನ್ನ ತಾಳ್ಮೆಯೇ ನನ್ನ ಶಕ್ತಿ ಎಂದರು. ಇದೇ ವೇಳೆ ತಮ್ಮ ಬದಲು ಅಭಿಷೇಕ್ ಅವರಿಗೆ ಅವಕಾಶ ಕೊಡಬಹುದಿತ್ತು ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದಿದ್ದೇನೆ. ಆದರೆ ಅಭಿಷೇಕ್ ಇನ್ನೂ ಚಿತ್ರರಂಗದಲ್ಲಿ ನಿಂತಿಲ್ಲ. ಅಂಬರೀಶ್ ಸಹ ಚಿತ್ರರಂಗದಲ್ಲಿ ವೇದಿಕೆ ನಿರ್ಮಿಸಿಕೊಂಡು ಬರಲಿಲ್ಲ. ಅಭಿಷೇಕ್ ಚಿತ್ರರಂಗದಲ್ಲೇ ಬೆಳೆಯಲಿ ಎಂದರು.
ಮಂಡ್ಯದಲ್ಲಿ ಕಾವೇರಿ ನೀರಿನ ಸಮಸ್ಯೆ ದಶಕಗಳಿಂದ ಇದ್ದು, ಅಂಬರೀಶ್ ಕೂಡ ಕೇಂದ್ರ ಸಚಿವ ಸ್ಥಾನ ತೆರೆದು ಸಮಸ್ಯೆ ವಿರುದ್ಧ ಹೋರಾಡಿದ್ದಾರೆ. ಮಂಡ್ಯದಲ್ಲಿ ಕಬ್ಬು ಬೆಳೆಗಾರರ ಸಾಕಷ್ಟು ಸಮಸ್ಯೆಗಳಿವೆ. ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಇದುವರೆಗೆ ರಾಜಕೀಯ ಇಚ್ಛಾಶಕ್ತಿ ಸಿಗಲೇ ಇಲ್ಲ. ಕಬ್ಬು ಬೆಳೆಗಾರರ ಸಮಸ್ಯೆಗೂ ನಾನು ಧ್ವನಿಯಾಗ್ತೇನೆ. ಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ ಸಾರಿಗೆ ವ್ಯವಸ್ಥೆ ದೃಢ ಆಗಬೇಕು. ಕಾರ್ಖಾನೆಗಳಿಗೆ ತೆರಳುವ ಮಹಿಳಾ ಉದ್ಯೋಗಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ಎನ್ ಜಿ ಒ ಗಳ ನೆರವಿನಿಂದ ಈ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ಜೊತೆಗೆ ಮಂಡ್ಯದ ಯುವಜನತೆಗೆ ಉದ್ಯೋಗ ಸೃಷ್ಟಿ ಮಾಡಬೇಕಿದೆ ಎಂದರು.
ಮಂಡ್ಯ: ಅಂಬರೀಶ್ ನಮ್ಮ ಗೌಡ್ರು ಓಕೆ, ಆದ್ರೆ ಸುಮಲತಾ ನಾಯ್ಡು ಜನಾಂಗಕ್ಕೆ ಸೇರಿದವರು. ಜಾತಿ ಬಿಟ್ಟು ಜಾತಿಯವರನ್ನ ಮದುವೆ ಆದಮೇಲೆ ಹೇಗೆ ಗೌಡ್ತಿ ಆಗುತ್ತಾರೆ ಎಂದು ಸಂಸದ ಶಿವರಾಮೇಗೌಡ ಪ್ರಶ್ನೆ ಮಾಡಿದ್ದಾರೆ.
ನಮ್ಮ ಸಿಎಂ ಕುಮಾರಸ್ವಾಮಿ ಏನು ತಪ್ಪು ಮಾಡದಿದ್ದರೂ ಕೂಡ ಇಲ್ಲ ಸಲ್ಲದ ಆರೋಪ ಮಾಡಿದ್ರೆ ಕೈ ಕಟ್ಟಿ ಕುಳಿತು ಕೊಳ್ಳಲು ಆಗುತ್ತಾ? ನಾನು ಗೌಡ್ತಿ ಗೌಡ್ತಿ ಅಂದರೆ, ಯಾವ್ ರೀತಿ ಗೌಡ್ತಿ ಹೇಳಬೇಕಲ್ಲ ಎಂದು ಹೇಳಿದ್ರು.
ಇವರೆಲ್ಲಾ ನಾಯ್ಡುಗಳು ಬೆಂಗಳೂರು ಸುತ್ತಮುತ್ತ ಆವರಿಸಿದ್ದಾರೆ. ಮಂಡ್ಯವನ್ನೂ ನಾಯ್ಡುಮಯ ಮಾಡಲು ಹೊರಟಿದ್ದಾರೆ. ದರ್ಶನ್ ಅವರು ಸುದೀಪ್, ಪುನೀತ್ ರಾಜ್‍ಕುಮಾರ್, ಶಿವರಾಜ್ ಕುಮಾರ್‍ಗಿಂತ ದೊಡ್ಡ ನಟನೇನಲ್ಲ. ಅವರು ಯಾವುದೇ ಪಕ್ಷದ ಅಭ್ಯರ್ಥಿ ಪರ ಚುನಾವಣೆಗೆ ಹೋಗಲ್ಲ ಎಂದು ಹೇಳಿದ್ದಾರೆ. ಇವರು ಬಂದು ಏನು ಮಾಡಲು ಮಾಡಲು ಸಾಧ್ಯ. ದರ್ಶನ್ ಒಳ್ಳೆ ಸಿನಿಮಾ ತೆಗೆಯುತ್ತಾರೆ ಅಷ್ಟೇ ಎಂದರು.
ಒಕ್ಕಲಿಗ, ರೈತ ಸಮುದಾಯದ ವಿರುದ್ಧ ತೊಡೆ ತಟ್ಟಿರುವ ವಿರುದ್ಧ ಸುಮ್ಮನೆ ಇರಲು ಸಾಧ್ಯವೇ? ನಾವು ಚುನಾವಣೆಯನ್ನು ಎದುರಿಸುತ್ತೇವೆ. ಆದರೆ ನಾನು ಈ ಸಮಯದಲ್ಲಿ ಅವರ ಕೊಡುಗೆ ಏನು ಎಂದು ಕೇಳಲು ಇಚ್ಛಿಸುತ್ತೇನೆ ಎಂದರು. ಅಲ್ಲದೇ ಅಂಬರೀಶ್ ಅವರು ಇಲ್ಲದ ವೇಳೆ ಬಾರದ ಜಾತಿ ಪ್ರಶ್ನೆ ಈಗ ಏಕೆ ಬಂತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, 15 ವರ್ಷಗಳಿಂದ ರಾಜಕೀಯಕ್ಕೆ ಬಾರದ ಅವರು ಈಗ ಏಕೆ ಬಂದಿದ್ದಾರೆ. ಅದ್ದರಿಂದಲೇ ಈಗ ಪ್ರಶ್ನೆ ಮಾಡುತ್ತಿದ್ದೇವೆ. ಅವರು ಅಂತರ್‍ಜಾತಿ ವಿವಾಹ ಎಂದು ಹೇಳಲಿ ಎಂದರು.
ಶಿವರಾಮೇಗೌಡರ ಟೀಕೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಈ ಬಗ್ಗೆ ಜನತೆ ತೀರ್ಮಾನ ಮಾಡುತ್ತಾರೆ. ಚುನಾವಣೆ ಬಳಿಕ ಯಾರು ಇರುತ್ತಾರೆ ಇರಲ್ಲ ಎಂಬುದು ತಿಳಿಯಲಿದೆ. ನಾಲ್ಕು ತಿಂಗಳ ಹಿಂದೆ ಸಂಸದರಾಗಿ ಆಯ್ಕೆ ಆಗಿದ್ದ ಅವರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಇದರಲ್ಲೇ ಪಕ್ಷದಲ್ಲಿ ಅವರ ಸ್ಥಾನ ಏನು ಎಂಬುವುದು ತಿಳಿಯಲಿದೆ ಎಂದು ತಿಳಿಸಿದರು.
ಈ ಹಿಂದೆ ಶಿವರಾಮೇಗೌಡ ಹೇಳಿದ್ದೇನು?:
ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ. ಅಂಬರೀಶ್ ಶವ ಸಂಸ್ಕಾರಕ್ಕೆ ಸೇರಿದ ಜನಸಾಗರ ಕಂಡು ಮಂಡ್ಯ ಚುನಾವಣೆಗೆ ಬಂದಿದ್ದಾರೆ. ಅವರು ನಿಜವಾಗಲು ಒಕ್ಕಲಿಗರಾ ಎಂದು ಪ್ರಶ್ನಿಸಿದ ಶಿವರಾಮೇಗೌಡ, ಸುಮಲತಾ ಮತ್ತು ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಸುರೇಶ್‍ಗೌಡರನ್ನು ಕರೆ ತಂದ ರಮ್ಯಾರನ್ನ ಓಡಿಸಿದ್ದೇನೆ. ಅಂಬರೀಶ್‍ರನ್ನೂ ಕರೆತಂದವನು ನಾನೇ, ಅವರನ್ನ ಸೋಲಿಸಿದವನು ನಾನೇ. ನಾನು ನಾಗಮಂಗಲದ ಗಂಡು ಎಂದು ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿ ಸಮೀಪ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ವಿರುದ್ಧ ಕಿಡಿಕಾರಿದ್ದರು.