Tag: ಸುಮಲತಾ ಅಂಬರೀಶ್

  • ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂದ ಸುಮಲತಾಗೆ ಸಿಎಂ ಟಾಂಗ್

    ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂದ ಸುಮಲತಾಗೆ ಸಿಎಂ ಟಾಂಗ್

    ಮಂಡ್ಯ: ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.

    ಜಿಲ್ಲೆಯಲ್ಲಿಂದು ಮಗ ನಿಖಿಲ್ ಪರ ಪ್ರಚಾರ ಮಾಡಿದ ಕುಮಾರಸ್ವಾಮಿ, ಯಾವ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಾರೆ. ನನ್ನ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನ ಜೊತೆ ಚರ್ಚೆ ಮಾಡುವುದಕ್ಕೂ ಅವರ ಕೈಯಲ್ಲಿ ಶಕ್ತಿಯಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಮಂಡ್ಯ ಜಿಲ್ಲೆಗೆ ದೇವೇಗೌಡ ಕುಟುಂಬ ಕೊಟ್ಟಿರುವ ಕೊಡುಗೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೋ ಅಥವಾ ಇನ್ನು ಯಾರ ಬಗ್ಗೆ ಚರ್ಚೆ ಮಾಡುತ್ತಾರೋ ಎಂದು ವ್ಯಂಗ್ಯವಾಡಿದ್ರು.

    ಸುಮಲತಾ ಅವರ ಅಭಿವೃದ್ಧಿ ಏನಿದೆ ಎಂದು ಮತ್ತೆ ಪ್ರಶ್ನಿಸಿದ ಸಿಎಂ, ಅವರು ಇಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ. ಅಂಬರೀಶ್ ಸಂಸದರಾಗಿದ್ದಾಗ ಜನರ ಕಷ್ಟ-ಸುಖ ಕೇಳಿದ್ದಾರಾ. ಅಭಿವೃದ್ಧಿ ಬಗ್ಗೆ ಇವರ ಬಳಿ ನಾವು ಪಾಠ ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಅಲೆ ಇದೆ. ನನಗೆ ಯಾವುದೇ ರೀತಿಯ ಆತಂಕಗಳು ಇಲ್ಲ. ಮಂಡ್ಯ ಜಿಲ್ಲೆಯ ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿಯನ್ನ ಆಯ್ಕೆ ಮಾಡಿ ಅಭಿವೃದ್ಧಿಗೆ ಚಾಲನೆ ಕೊಡುವ ದೃಷ್ಟಿಯಿಂದ ಈ ಅವಕಾಶವನ್ನು ಉಪಯೋಗ ಮಾಡಿಕೊಳ್ಳುವ ನಿರ್ಧಾರದಲ್ಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ನಿಖಿಲ್ ಸವಾಲೇನು?
    ಸುಮ್ಮನೆ ಒಬ್ಬೊಬ್ಬರ ಕಾಲೆಳೆದುಕೊಂಡು ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡೋಣ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸುಮಲತಾಗೆ ನಿಖಿಲ್ ಸವಾಲು ಹಾಕಿದ್ದರು.

    ಸುಮಲತಾ ಏನ್ ಹೇಳಿದ್ದರು?
    ಅಂಬರೀಶ್ ಮತ್ತು ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ. ಎಲ್ಲಿ ಬೇಕಾದರೂ, ಯಾವ ವೇದಿಕೆಯಲ್ಲಾದರೂ ಚರ್ಚೆ ಮಾಡಿ. ನಿಖಿಲ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲನ್ನು ಸುಮಲತಾ ಸ್ವೀಕರಿಸಿದ್ದರು. ಅಲ್ಲದೆ ”Any time, any where..I am ready” ಎನ್ನುವ ಮೂಲಕ ನಿಖಿಲ್ ಸವಾಲು ಸ್ವೀಕರಿಸಿದ್ದರು.

    ನಿಖಿಲ್ ಪ್ರತಿಕ್ರಿಯೆ:
    ಸುಮಲತಾ ಚಾಲೆಂಜ್ ಸ್ವೀಕರಿಸಿದ್ದಕ್ಕೆ ಬುಧವಾರ ಕೆಆರ್ ನಗರದ ಬ್ಯಾಡರಹಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರತಿಕ್ರಿಯಿಸಿದ್ದ ನಿಖಿಲ್, ನಾನು ಯಾವ ಓಪನ್ ಚಾಲೆಂಜ್ ಕೂಡ ಕೊಟ್ಟಿಲ್ಲ. ಓಪನ್ ಚಾಲೆಂಜ್ ಗೀಪನ್ ಚಾಲೆಂಜ್ ನಂಗೆ ಗೊತ್ತಿಲ್ಲ. ನಾನು ಲೈವ್ ಆಗಿ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ತಂದೆ-ತಾಯಂದಿರು ಏನು ಸಮಸ್ಯೆಗಳ ಬಗ್ಗೆ ಮಾತಾಡುತ್ತಾ ಇದ್ದಾರೆಯೋ ಅವರಿಗೆ ನಾನು ಉತ್ತರಿಸಬೇಕಾಗಿದೆ ಎಂದು ತಿಳಿಸಿದ್ದರು.

    ಇಲ್ಲಿ ಬೇರೆಯವರಿಗೆ ಉತ್ತರ ನೀಡುವ ಅಗತ್ಯವಿಲ್ಲ. ಹೀಗಾಗಿ ಏ.18ರ ವರೆಗೆ ಸಮಯ ವ್ಯರ್ಥ ಮಾಡದೇ ದಯವಿಟ್ಟು ಪ್ರಚಾರ ಮಾಡೋದಕ್ಕೆ ಹೇಳಿ. ಈ ಮೂಲಕ ಜನರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡಲು ಹೇಳಿ. ಆಮೇಲೆ ಮಾತನಾಡೋಣ ಎಂದು ನಿಖಿಲ್ ಸಲಹೆ ನೀಡಿದ್ದರು.

  • ವಿಕಲಚೇತನ ಹೆಣ್ಣು ಮಗಳನ್ನ ವರ್ಗಾವಣೆ ಮಾಡಿಸಿದ್ದೇ ಪಕ್ಷೇತರ ಅಭ್ಯರ್ಥಿ ಸಾಧನೆ: ಸಿಎಂ ಎಚ್‍ಡಿಕೆ

    ವಿಕಲಚೇತನ ಹೆಣ್ಣು ಮಗಳನ್ನ ವರ್ಗಾವಣೆ ಮಾಡಿಸಿದ್ದೇ ಪಕ್ಷೇತರ ಅಭ್ಯರ್ಥಿ ಸಾಧನೆ: ಸಿಎಂ ಎಚ್‍ಡಿಕೆ

    ಮಂಡ್ಯ: ಲೋಕ ಮಂಡ್ಯ ಕಣದಲ್ಲಿ ಪ್ರಚಾರ ಜೋರಾಗಿದ್ದು, ಪುತ್ರನನ್ನು ಗೆಲ್ಲಿಸಲೇಬೇಕು ಎಂದು ಹಠಕ್ಕೆ ಬಿದ್ದಿರುವ ಸಿಎಂ ಕುಮಾರಸ್ವಾಮಿ ಇವತ್ತು ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ವಿಕಲಚೇತನ ಹೆಣ್ಣು ಮಗಳು, ಜಿಲ್ಲಾಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ವರ್ಗಾವಣೆ ಮಾಡಿಸಿದ್ದೇ ಪಕ್ಷೇತರ ಅಭ್ಯರ್ಥಿಯ ಸಾಧನೆ ಎಂದು ಆರೋಪಿಸಿದರು.

    ಪ್ರಚಾರದ ವೇಳೆ ಮಾತನಾಡಿದ ಸಿಎಂ, ಮೊದಲು ನಮ್ಮಲ್ಲೇ ಇದ್ದವರು, ಈಗ ನಮ್ಮನ್ನೇ ಮುಗಿಸಲು ಹೊರಟಿದ್ದಾರೆ ಎಂದು ಮಂಡ್ಯ ರೆಬೆಲ್ ಕಾಂಗ್ರೆಸ್ಸಿಗರ ವಿರುದ್ಧ ಕಿಡಿಕಾರಿದರು. ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿರುವ ಮಕ್ಕಳೆಲ್ಲಾ ನಾನು ಕಣ್ಣೀರು ಹಾಕ್ತೀನಿ ಎಂದು ಮಾತನಾಡುತ್ತವೆ ಎಂದು ಹೆಸರು ಹೇಳದೇ ಸುಮಲತಾ ಪುತ್ರ ಅಭಿಷೇಕ್‍ಗೆ ತಿರುಗೇಟು ಕೊಟ್ಟರು.

    ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಒಟ್ಟು 1,127 ಕೋಟಿ ರೂ. ರೈತರು ಸಾಲ ಮಾಡಿದ್ದೀರಿ. ಇದರಲ್ಲಿ ಈಗಾಗಲೇ 400 ಕೋಟಿ ರೂ. ಹಣ ಕೊಟ್ಟಿದ್ದೇನೆ. ಆದರೆ ನನ್ನ ವಿರುದ್ಧ ರೈತರಿಗೆ ಮೋಸ ಮಾಡಿದ್ದೇನೆ ಎಂದು ಹೇಳುವವರ ಮಾತು ನಂಬುತ್ತೀರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ನನ್ನ ಇನ್ನೊಂದು ಮುಖ ನೋಡಿಲ್ಲ. ನೋಡಿದರೆ ಹೆದರಿ ಓಡುತ್ತಾರೆ ಎಂದು ಅವರು ಹೇಳುತ್ತಾರೆ. ನಮಗೆಲ್ಲ ನಿಮ್ಮ ಮೂರು ನಾಲ್ಕು ಮುಖ ಗೊತ್ತಿದೆ. ಜನ ನೋಡಬೇಕು ನಿಮ್ಮ ಇನ್ನೊಂದು ಮುಖ ತೋರಿಸಿ ಎಂದು ಸುಮಲತಾ ಅವರಿಗೆ ಟಾಂಗ್ ನೀಡಿದರು.

    ನನ್ನ ಕೊನೆಯ ಉಸಿರು ಇರುವವರೆಗೂ ಜಿಲ್ಲೆಯ ಅಭಿವೃದ್ಧಿ ಮಾಡುತ್ತೇನೆ. ನಾನು ಯಾರ ಬಗ್ಗೆಯೂ ಚರ್ಚೆ ಮಾಡಲು ಹೋಗಲ್ಲ. ನನ್ನ ವಿರುದ್ಧ ನಿಂತಿರುವವವರಿಗೆ ಬಿಜೆಪಿ ಬೆಂಬಲ ಕೊಡುತ್ತೇನೆ ಎಂದು ಹೇಳಿ ಮುಂದೆ ಬಂದಿದೆ. ಇದೇ ಬಿಜೆಪಿಯವರು ವಿಧಾನಸೌಧದಲ್ಲಿ ನಾನು ಮಂಡ್ಯಕ್ಕಷ್ಟೇ ಸಿಎಂ ಎಂದು ಟೀಕೆ ಮಾಡಿದ್ದರು. ಇಂತಹವರಿಂದ ಮಂಡ್ಯ ಅಭಿವೃದ್ಧಿ ಸಾಧ್ಯವೇ ಯೋಚನೆ ಮಾಡಿ ಮತದಾನ ಮಾಡಿ ಎಂದರು.

    ಅಂದು ನಾವು ಬೆಳೆಸಿದವರೇ ಅಂಬರೀಶ್ ಅವರನ್ನು ಮುಗಿಸಿದ್ದರು. ಈಗ ಇನ್ನೊಬ್ಬರನ್ನ ಮುಗಿಸಲು ಹೊರಟಿದ್ದಾರೆ. ಕುಮಾರಸ್ವಾಮಿ ನೆಗೆದುಬಿದ್ದು ಹೋಗುತ್ತೇನೆ ಎಂದು ಹೇಳುತ್ತಾರೆ. ನಾನು ಅಷ್ಟು ಸುಲಭವಾಗಿ ನೆಗೆದು ಬಿದ್ದು ಹೋಗಲ್ಲ. ನನ್ನ ಮಗ ನಿಮ್ಮ ಬಳಿ ಮತ ಹಾಕಿಸಿಕೊಂಡು ಎಲ್ಲೂ ಹೋಗಲ್ಲ ಇಲ್ಲೇ ಬದುಕುತ್ತಾನೆ, ಇಲ್ಲೇ ಮಣ್ಣಾಗುತ್ತಾನೆ ಎಂದು ಹೇಳಿದರು.

    ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ಸುಮಾರು ಒಂದುವರೆ ಲಕ್ಷ ರೂ. ಖರ್ಚು ಮಾಡಿ ತಯಾರಿಸಿದ್ದ 370 ಕೆಜಿ ತೂಕದ ಒಣದ್ರಾಕ್ಷಿ ಹಾರ ಹಾಕಿ ಸ್ವಾಗತ ಮಾಡಿದ್ದು ವಿಶೇಷವಾಗಿತ್ತು.

  • ಸುಮಲತಾರ ಇನ್ನೊಂದು ಮುಖ ಜನ ನೋಡಿಲ್ಲ: ಸಿಎಂ

    ಸುಮಲತಾರ ಇನ್ನೊಂದು ಮುಖ ಜನ ನೋಡಿಲ್ಲ: ಸಿಎಂ

    ಮಂಡ್ಯ: ಅವರು ಇನ್ನೊಂದು ಮುಖ ತೋರಿಸಿತ್ತೀನಿ ಅಂದಿದ್ದಾರೆ. ಅವರ ಇನ್ನೊಂದು ಮುಖ ನಾವು ನೋಡಿದ್ದೀವಿ. ಮಂಡ್ಯ ಜನರಿಗೆ ಸ್ವಲ್ಪ ಬೇಗ ತೋರಿಸಲಿ ಎಂದು ಸಿಎಂ ಕುಮಾರಸ್ವಾಮಿ ಸುಮಲತಾ ಅವರನ್ನು ಲೇವಡಿ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸುಮಲತಾ ಅವರ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳಲ್ಲಿ. ಯಾರು-ಯಾರ ಪರವಾದರೂ ಪ್ರಚಾರ ಮಾಡಲಿ. ಮಂಡ್ಯ ಜಿಲ್ಲೆಯ ಜನತೆ ಜೆಡಿಎಸ್ ಅಭ್ಯರ್ಥಿ ಪರವಾಗಿದ್ದಾರೆ. ನಾನು ಆ ಕಡೆ ಗುರಿಟ್ಟಿದ್ದೇನೆ. ಹೀಗಾಗಿ ಯಾರು ಯಾರ ಪರವಾದರೂ ಮಾತನಾಡಿಕೊಳ್ಳಲಿ. ಅದನ್ನು ಕಟ್ಟಿಕೊಂಡು ನಾನೇನು ಮಾಡಲಿ ಎಂದು ಪ್ರಧಾನಿ ಮೋದಿ ಅವರು ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದ ಬಗ್ಗೆ ಪ್ರತಿಕ್ರಿಯಿಸಿದರು.

    ನನ್ನ ಸ್ಥಳೀಯ ನಾಯಕರು ನೋಡಿಕೊಂಡು ಉತ್ತರಿಸುತ್ತಾರೆ. ನನಗೆ ಅದರ ಹಣೆಬರಹ ಕಟ್ಟಿಕೊಂಡು ನಾನೇನು ಮಾಡಲಿ. ಅವರು ಇನ್ನೊಂದು ಮುಖ ತೋರಿಸಿತ್ತೀನಿ ಅಂದಿದ್ದಾರೆ. ನಾವು ಅವರ ಇನ್ನೊಂದು ಮುಖ ನೋಡಿದ್ದೀವಿ. ಮಂಡ್ಯ ಜನರಿಗೆ ಸ್ವಲ್ಪ ಬೇಗ ತೋರಿಸಲಿ ಎಂದು ಸುಮಲತಾ ಅವರು ಜೆಡಿಎಸ್ ವಿರುದ್ಧ ಮಾಡಿದ್ದ ಆರೋಪಕ್ಕೆ ಸಿಎಂ ಸಿಡಿಮಿಡಿಗೊಂಡರು.

    ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಮಂಡ್ಯದ ಜನರು ಒಲವು ವ್ಯಕ್ತಪಡಿಸಿದ್ದಾರೆಂಬ ಮಾಹಿತಿ ನನ್ನ ಬಳಿಯಿದೆ. ಸದ್ಯಕ್ಕೆ ಬೇರೆ ಬೇರೆ ಕ್ಷೇತ್ರದಲ್ಲೂ ಪ್ರಚಾರ ಮಾಡುವುದರಿಂದ ಸಮಯ ಸಿಕ್ಕಾಗ ಮಂಡ್ಯಕ್ಕೆ ಬಂದು ಪ್ರಚಾರ ಮಾಡುತ್ತೀನಿ ಎಂದು ನಿಖಿಲ್ ಗೆಲುವು ಖಚಿತವೆಂದು ಸಿಎಂ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಸುಮಲತಾ ಬೆಂಬಲಕ್ಕೆ ನಿಲ್ಲಲ್ಲ, ವೋಟ್ ಹಾಕಲ್ಲ – ಮಂಡ್ಯ ಮುಸ್ಲಿಮರಿಂದ ಬಹಿರಂಗ ಹೇಳಿಕೆ

    ಸುಮಲತಾ ಬೆಂಬಲಕ್ಕೆ ನಿಲ್ಲಲ್ಲ, ವೋಟ್ ಹಾಕಲ್ಲ – ಮಂಡ್ಯ ಮುಸ್ಲಿಮರಿಂದ ಬಹಿರಂಗ ಹೇಳಿಕೆ

    ಮಂಡ್ಯ: ಜಿಲ್ಲೆಯ ಲೋಕ ರಾಜಕೀಯಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಯಾವುದೇ ಕಾರಣಕ್ಕೂ ವೋಟ್ ಹಾಕಲ್ಲ ಎಂದು ಮಂಡ್ಯ ಮುಸ್ಲಿಮರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮುಸ್ಲಿಂ ಮಹಿಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಪ್ರಧಾನಿಯಾಗಿರುವ ನರೇಂದ್ರ ಮೋದಿಯವರೇ ಅಧಿಕೃತವಾಗಿ ಹೇಳಿದ್ದಾರೆ. ಸುಮಲತಾ ಅವರಿಗೆ ಆಶೀರ್ವಾದ ಮಾಡಿ. ಅಲ್ಲಿಗೆ ಅವರು ಬಿಜೆಪಿ ಅಭ್ಯರ್ಥಿ ಎಂದು ಅವರೇ ಒಪ್ಪಿಕೊಂಡಂತೆ ಆಯಿತು. ಹೀಗಾಗಿ ಪಕ್ಷೇತರ ಅಭ್ಯರ್ಥಿಗೆ ನಾವು ವೋಟ್ ಹಾಕಲ್ಲ ಎಂದು ಹೇಳಿದ್ದಾರೆ.

    ಅಂಬರೀಶ್ ಅಭಿಮಾನಿಗಳಾಗಿರುವ ನಮಗೆ ಮೊದಲೇ ಗೊಂದಲ ಇತ್ತು. ಅಣ್ಣ ಚಿರಸ್ಮರಣೆ ಆಗಿದ್ದರೂ ಕೂಡ ಅವರು ನಮ್ಮ ಮನದಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಅವರ ಮುಖಾಂತರ ನಾವು ಸುಮಲತಾ ಅವರಿಗೆ ಬೆಂಬಲ ಕೊಡಬೇಕು ಅಂದುಕೊಂಡಿದ್ದೆವು. ಆದ್ರೆ ಇದೀಗ ಮೋದಿ ಕೊಟ್ಟಿರುವ ಹೇಳಿಕೆ ಗಮನಿಸಿದ್ರೆ ಅವರು ಬಿಜೆಪಿ ಕ್ಯಾಂಡಿಡೇಟ್ ಎಂದು ಖಚಿತವಾಗಿದೆ ಅಂದ್ರು. ಇದನ್ನೂ ಓದಿ: ಮಂಡ್ಯ ಲೋಕ ಕಣದಲ್ಲಿ ಟ್ವಿಸ್ಟ್- ಸಕ್ಕರೆ ನಾಡಿನಲ್ಲಿ ಬದಲಾಗುತ್ತಾ ರಾಜಕೀಯ ಸಮೀಕರಣ?

    ಮುಸ್ಲಿಂ ಸಮುದಾಯವನ್ನು ಬಿಜೆಪಿಯವರು ಟಾರ್ಗೆಟ್ ಮಾಡುತ್ತಾರೆ. ಜಾತಿ ರಾಜಕೀಯ ಮಾಡುತ್ತಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಮುಸ್ಲಿಂ ಜನಾಂಗ ಬಿಜೆಪಿಗೆ ವೋಟ್ ಹಾಕಲ್ಲ. ಇಲ್ಲಿ ನಾವು ವ್ಯಕ್ತಿ ನೋಡಲ್ಲ ನಾವು ಪಕ್ಷ ನೋಡುತ್ತೇವೆ. ನಮಗೆ ಮೊದಲು ಬೇಕಾಗಿರೋದು ದೇಶ, ನಂತರ ಪಕ್ಷ, ಆ ಬಳಿಕ ವ್ಯಕ್ತಿ ವಿನಃ ವ್ಯಕ್ತಿಯಿಂದ ಪಕ್ಷ ನೋಡಲ್ಲ ಎಂದು ಹೇಳಿದ್ರು. ಇದನ್ನೂ ಓದಿ: ಸುಮಲತಾಗೆ ಆಶೀರ್ವಾದ ಮಾಡಿ, ನನಗೆ ಶಕ್ತಿ ತುಂಬಿ: ಪ್ರಧಾನಿ ಮೋದಿ

    ಸುಮಲತಾ ಪಕ್ಷೇತರ ಆದ್ರೂ ನರೇಂದ್ರ ಮೋದಿಯವರೇ ಆಶೀರ್ವಾದ ಮಾಡಿದ್ದಾರೆ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸುಮಲತಾ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ನಾವೇನು ದಡ್ಡರಲ್ಲ. ಯಾರು ಯಾವ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳುವಷ್ಟು ನಮಗೆ ಸಾಮಥ್ರ್ಯ ಇದೆ. ಹಾಗಾಗಿ ನಾವು ಯಾವುದೇ ಕಾರಣಕ್ಕೂ ಸುಮಲತಾಗೆ ಬೆಂಬಲ ನೀಡಲ್ಲ ಎಂದು ಖಡಕ್ ಆಗಿ ನುಡಿದಿದ್ದಾರೆ.

    ಒಟ್ಟಿನಲ್ಲಿ ಪ್ರಧಾನಿಯವರ ಸುಮಲತಾರನ್ನು ಬೆಂಬಲಿಸಿ ನನಗೆ ಶಕ್ತಿ ನೀಡಿ ಎಂಬ ಹೇಳಿಕೆಯಿಂದ ಸುಮಲತಾಗೆ ವೋಟ್ ಹಾಕಬೇಕು ಅಂದುಕೊಂಡವರು ಉಲ್ಟಾ ಹೊಡೆದ್ರಾ ಉಲ್ಟಾ ಅನ್ನೊ ಪ್ರಶ್ನೆ ಎದ್ದಿದೆ.  ಇದನ್ನೂ ಓದಿ: ನನಗೆ ಹೇಳೋಕೆ ಪದಗಳೇ ಬರುತ್ತಿಲ್ಲ, ಪ್ರಧಾನಿಯವರಿಗೆ ಹೃದಯಪೂರ್ವಕ ಥ್ಯಾಂಕ್ಸ್: ಸುಮಲತಾ

  • ಮಂಡ್ಯ ಲೋಕ ಕಣದಲ್ಲಿ ಟ್ವಿಸ್ಟ್- ಸಕ್ಕರೆ ನಾಡಿನಲ್ಲಿ ಬದಲಾಗುತ್ತಾ ರಾಜಕೀಯ ಸಮೀಕರಣ?

    ಮಂಡ್ಯ ಲೋಕ ಕಣದಲ್ಲಿ ಟ್ವಿಸ್ಟ್- ಸಕ್ಕರೆ ನಾಡಿನಲ್ಲಿ ಬದಲಾಗುತ್ತಾ ರಾಜಕೀಯ ಸಮೀಕರಣ?

    ಮಂಡ್ಯ: ಲೋಕ ರಾಜಕೀಯಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ಸಕ್ಕರೆ ನಾಡಿನಲ್ಲಿ ರಾಜಕೀಯ ಸಮೀಕರಣ ಬದಲಾಗುತ್ತಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.

    ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದು ಹೇಳಿದ್ದರು. ಆದ್ರೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಿ ಬಳಿಕ ಸಮಾವೇಶದಲ್ಲಿ ಆಡಿದ ಮಾತು ಇದೀಗ ಬೇರೆಯದ್ದೇ ಸುಳಿವು ನೀಡುತ್ತಿದೆ.


    ಸುಮಲತಾಗೆ ಬೆಂಬಲ ನೀಡುವುದಾಗಿ ಪ್ರಧಾನಿಯವರು ಬಹಿರಂಗ ಹೇಳಿದ್ದರ ಪರಿಣಾಮದಿಂದಾಗಿ ಸಕ್ಕರೆ ನಾಡಿನ ರಾಜಕೀಯ ಸಮೀಕರಣ ಬದಲಾಗುತ್ತಾ ಅನ್ನೋ ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ. ಒಂದು ವೇಳೆ ಚುನಾವಣೆಯಲ್ಲಿ ಸುಮಲತಾ ಗೆದ್ರೆ ಬಿಜೆಪಿಗೆ ಹೋಗಬಹುದು ಎಂಬ ಭೀತಿಯಿಂದ ಸುಮಲತಾಗೆ ವೋಟ್ ಹಾಕಬೇಕು ಅಂದುಕೊಂಡವರು ಉಲ್ಟಾ ಹೊಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ಬಿಜೆಪಿ ವಿರೋಧಿಗಳು ಹಾಗೂ ಮುಸ್ಲಿಮರು ಸುಮಲತಾರಿಂದ ಸಂಪೂರ್ಣವಾಗಿ ದೂರ ಉಳಿಯುವ ಸಾಧ್ಯತೆಗಳಿವೆ. ಈ ಮೂಲಕ ಮೋದಿ ಕೈಯಾರೆ ಸುಮಲತಾ ಗೆಲುವನ್ನು ತಪ್ಪಿಸುತ್ತಿದ್ದಾರಾ ಎಂಬ ಪ್ರಶ್ನೆಯೂ ಮೂಡಿದ್ದು, ಮೋದಿ ಹಾಗೂ ಬಿಜೆಪಿ ವಿರೋಧಿ ಮತಗಳು ನಿಖಿಲ್‍ಗೆ ಬೀಳುವ ಲಕ್ಷಣಗಳು ಕಂಡುಬರುತ್ತಿದೆ. ಒಟ್ಟಿನಲ್ಲಿ ಮತದಾನಕ್ಕೆ ಇನ್ನೇನು 8 ದಿನ ಬಾಕಿ ಇರುವಾಗಲೇ ಮಂಡ್ಯ ಪಾಲಿಟಿಕ್ಸ್ ಮೆಗಾ ಟ್ವಿಸ್ಟ್ ಪಡೆದುಕೊಂಡಿದೆ.

    ಮೋದಿ ಹೇಳಿದ್ದೇನು?
    ಚಿತ್ರದುರ್ಗದ ನಂತರ ಮೈಸೂರಿಗೆ ಭೇಟಿ ನೀಡಿದ ಪ್ರಧಾನಿಯವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಅಂಬರೀಶ್ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಮಾಜಿ ಸಚಿವ, ನಟ ಅಂಬರೀಶ್ ಕನ್ನಡ ನಾಡಿನ ಜನರ ಹೃದಯದಲ್ಲಿದ್ದಾರೆ. ಅಂಬರೀಶ್ ಅವರು ಸುಮಲತಾ ಜೊತೆ ಸೇರಿಕೊಂಡು ಈ ಸಂಸ್ಕೃತಿ ಸೇವೆ ಮಾಡಿದ್ದಾರೆ. ಹೀಗಾಗಿ ಅವರಿಗೆ ಆಶೀರ್ವಾದ ಮಾಡಿ ನನಗೆ ಶಕ್ತಿ ತುಂಬಿ ಎಂದು ಹೇಳಿದ್ದರು.

    ಸುಮಲತಾ ಹೇಳಿದ್ದೇನು?
    ಮೋದಿ ಮಾತಿಗೆ ಪ್ರತಿಕ್ರಿಯಿಸಿದ್ದ ಸುಮಲತಾ, ಪ್ರಧಾನಿ ಮೋದಿ ಅವರು ಅಂಬರೀಶ್ ಅವರನ್ನ ನೆನಪು ಮಾಡಿಕೊಂಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನನಗೆ ಹೇಳಲು ಪದಗಳೇ ಬರುತ್ತಿಲ್ಲ. ಮೋದಿ ಅವರಿಗೆ “ಹಾರ್ಟ್ ಫೆಲ್ಟ್ ಥ್ಯಾಂಕ್ಸ್”. ಇದು ಹೆಮ್ಮೆ ಪಡುವಂತ ವಿಚಾರ. ಇದಕ್ಕೆ ಕಾರಣ ಅಂಬರೀಶ್ ಅವರ ಸಾಧನೆ. ಮೋದಿ ಈ ಮಾತಿನಿಂದ ನಮ್ಮ ಕಾರ್ಯಕರ್ತರಲ್ಲಿ ಇನ್ನಷ್ಟು ಸ್ಫೂರ್ತಿ ಬರುತ್ತದೆ ಎಂದು ಅಭಿನಂದಿಸಿದ್ದರು.

  • ಸುಮಲತಾಗೆ ಆಶೀರ್ವಾದ ಮಾಡಿ, ನನಗೆ ಶಕ್ತಿ ತುಂಬಿ: ಪ್ರಧಾನಿ ಮೋದಿ

    ಸುಮಲತಾಗೆ ಆಶೀರ್ವಾದ ಮಾಡಿ, ನನಗೆ ಶಕ್ತಿ ತುಂಬಿ: ಪ್ರಧಾನಿ ಮೋದಿ

    ಮೈಸೂರು: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಆಶೀರ್ವಾದ ಮಾಡಿ, ನನಗೆ ಶಕ್ತಿ ತುಂಬಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಸಾಂಸ್ಕೃತಿಕ ನಗರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಮಾಜಿ ಸಚಿವ, ನಟ ಅಂಬರೀಶ್ ಕನ್ನಡ ನಾಡಿನ ಜನರ ಹೃದಯದಲ್ಲಿದ್ದಾರೆ. ಅಂಬರೀಶ್ ಅವರು ಸುಮಲತಾ ಜೊತೆ ಸೇರಿಕೊಂಡು ಈ ಸಂಸ್ಕೃತಿ ಸೇವೆ ಮಾಡಿದ್ದಾರೆ. ಅವರನ್ನು ಗೆಲ್ಲಿಸಿ ಎಂದು ಮತದಾರರಿಗೆ ಮನವಿ ಮಾಡಿಕೊಂಡರು.

    ಬಿಜೆಪಿ ವಿರೋಧಿ ಪಕ್ಷಗಳಿಗೆ ಗೊತ್ತಿರುವುದು ಮೋದಿ ಹಠಾವೋ, ಮೋದಿ ಹಠವೋ ಎನ್ನುವ ಮಾತು ಅಷ್ಟೇ. ಆದರೆ ನೀವು ನನಗೆ ತೋರಿಸುವ ಪ್ರೀತಿಯಿಂದ ಅವರಿಗೆ ನಿದ್ದೆ ಬರುತ್ತಿಲ್ಲ. ಕಾಂಗ್ರೆಸ್ ಓಡಿಸಿದರೆ ದೇಶದಲ್ಲಿ ಗರೀಬಿ ಹಠಾವೋ ಆಗುತ್ತದೆ. ಎಲ್ಲಿಯವರೆಗೂ ಈ ಚೌಕಿದಾರ ಇರುತ್ತಾನೋ ಅಲ್ಲಿಯವರೆಗೂ ನೀವು ಕಟ್ಟುವ ತೆರಿಗೆ ಹಣದ ಒಂದು ಪೈಸೆಯೂ ವ್ಯರ್ಥವಾಗಲ್ಲ ಎಂದು ಭರವಸೆ ನೀಡಿದರು.

    ಕರ್ನಾಟಕದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ನಂಗಾನಾಚ್ ನಡೆಸುತ್ತಿದೆ. ಸಿಎಂ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್‍ನವರು ಪಂಚಿಂಗ್ ಬ್ಯಾಗ್ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಈ ಹಿಂದೆ ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದಾಗ ಅವರ ಬೆನ್ನಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಚೂರಿ ಹಾಕಿದ್ದರು. ಆ ಸೇಡನ್ನು ದೇವೇಗೌಡ ತೀರಿಸಿಕೊಳ್ಳಬಹುದು ಎನ್ನುವ ಭೀತಿ ಸೋನಿಯಾ ಗಾಂಧಿ ಅವರಿಗೆ ಕಾಡುತ್ತಿತ್ತು. ಕರ್ನಾಟಕದಿಂದ ಪುತ್ರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸಿದರೆ ಎಚ್.ಡಿ.ದೇವೇಗೌಡರೇ ಸೋಲಿಸುತ್ತಾರೆ ಎನ್ನುವ ಅನುಮಾನವಿತ್ತು. ಹೀಗಾಗಿ ಕೇರಳದ ವಯನಾಡಿನಿಂದ ರಾಹುಲ್ ಗಾಂಧಿ ಕಣಕ್ಕೆ ಇಳಿದರು ಎಂದು ಹೊಸ ಬಾಂಬ್ ಸಿಡಿಸಿದರು.

    ಕಾಂಗ್ರೆಸ್ ದೇಶಕ್ಕೆ 2ಜಿ ಹಗರಣ ನೀಡಿತ್ತು. ಇದು ನೆನಪಿದೆಯಾ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಪ್ರಶ್ನಿಸಿದ ಮೋದಿ ಅವರು, ನಾವು ನಿಮ್ಮ ಕೈಗೆ ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಕೊಟ್ಟಿದ್ದೇವೆ. ಇಂಟರ್ ನೆಟ್ ಡಾಟಾ ನೀಡಿದ್ದೇವೆ ಎಂದು ಹೇಳಿದರು.

  • ಅಂಬರೀಶ್ ಅಣ್ಣಂಗೆ ಇರೋದು ಒಬ್ಬರೇ ಹೆಂಡ್ತಿ- ಎಚ್‍ಡಿಕೆಗೆ ಯಶ್ ಟಾಂಗ್

    ಅಂಬರೀಶ್ ಅಣ್ಣಂಗೆ ಇರೋದು ಒಬ್ಬರೇ ಹೆಂಡ್ತಿ- ಎಚ್‍ಡಿಕೆಗೆ ಯಶ್ ಟಾಂಗ್

    ಮಂಡ್ಯ: ಯುಗಾದಿ ಹಬ್ಬದ ಬ್ರೇಕ್ ಬಳಿಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ರಾಕಿಂಗ್ ಸ್ಟಾರ್ ಪ್ರಚಾರಕ್ಕೆ ಇಳಿದಿದ್ದು, ಇಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಗೆ ನಟ ಯಶ್ ಟಾಂಗ್ ನೀಡಿದ್ದಾರೆ.

    ಅಂಬರಳ್ಳಿಯಲ್ಲಿ ನಡೆದ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನತೆಗೆ ಯಾವುದೇ ಕನ್ ಫ್ಯೂಶನ್ ಇಲ್ಲ. ಯಾಕಂದ್ರೆ ಅಂಬರೀಶ್ ಅಣ್ಣನಿಗೆ ಇರೋದು ಒಬ್ಬರೇ ಹೆಂಡತಿ. ಜನರ ಮುಗ್ಧತೆಯನ್ನ ಮಿಸ್‍ಯೂಸ್ ಮಾಡಿಕೊಳ್ಳಬಾರದು ಎಂದು ತಿರುಗೇಟು ನೀಡಿದ್ದಾರೆ.

    ಇದೇ ವೇಳೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈಗಾಗಲೇ ಬಿಜೆಪಿ ಸುಮಲತಾಗೆ ಬೆಂಬಲವನ್ನು ನೀಡುತ್ತಿದೆ. ಹೀಗಾಗಿ ಮೋದಿ ಭೇಟಿಯ ಬಗ್ಗೆ ಪ್ರಶ್ನಿಸಿದಾಗ, ಮೋದಿಯನ್ನ ಭೇಟಿ ಮಾಡಲ್ಲ. ಅವರ ಭೇಟಿ ಬಗ್ಗೆ ನಮ್ಮ ಅಭ್ಯರ್ಥಿ ಸುಮಲತಾ ಅಂಬರೀಶ್ ನಿರ್ಧರಿಸುತ್ತಾರೆ ಎಂದರು.

    ಹಳ್ಳಿ ಹಳ್ಳಿಗೂ ಹೋಗಿ ನಮ್ಮ ಕರ್ತವ್ಯದಂತೆ ನಾವು ಪ್ರಚಾರ ಮಾಡುತ್ತಿದ್ದೇವೆ. ಬೇರೆಯವರ ಬಗ್ಗೆ ಮಾತನಾಡುವುದಕ್ಕಿಂತ ನಮ್ಮ ಕರ್ತವ್ಯದ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಅಭ್ಯರ್ಥಿ ಏನು ಮಾಡಿದ್ದಾರೆ. ಅವರ ಅಭಿವೃದ್ಧಿ ಏನು ಮಾಡುತ್ತಾರೆ. ಇದಕ್ಕಾಗಿ ಅವರ ಯೋಜನೆಗಳು ಏನು ಎಂಬುದರ ಬಗ್ಗೆ ಅವರು ಮಾತಾಡುತ್ತಾರೆ. ಹೀಗಾಗಿ ನಾನು ಅಭಿವೃದ್ಧಿ ಬಗ್ಗೆ ಮಾತನಾಡುವುದಕ್ಕಿಂತ ಅವರು ಮಾತನಾಡುವುದೇ ಸೂಕ್ತ ಎಂದು ಯಶ್ ಹೇಳಿದ್ರು.

    ಸುಮಲತಾ ಅವರು ಸುಮ್ಮನೆ ಹಿಂಗೆ ಬಂದು ಹಿಂಗೆ ಹೋಗುವವರು ಅಲ್ಲ. ಬಹಳಷ್ಟು ದಿನ ಉಳಿಯುತ್ತಾರೆ. ಇಲ್ಲಿ ಕೆಲಸಗಳನ್ನು ಮಾಡುತ್ತಾರೆ. ಜನರ ಪ್ರೀತಿ ಗಳಿಸೋದಕ್ಕೆ ಅಂತಾನೇ ಅವರು ಬಂದಿದ್ದಾರೆ. ಅಮೆರಿಕದಂತೆ ಇಲ್ಲಿಯೂ ಅಭ್ಯರ್ಥಿಗಳಿಬ್ಬರನ್ನು ನಿಲ್ಲಿಸಿ ಒಂದು ವೇದಿಕೆ ಕ್ರಿಯೇಟ್ ಮಾಡಿ. ಆವಾಗ ಯಾರು ಏನೇನು ಯೋಜನೆಗಳನ್ನಿಟ್ಟುಕೊಂಡಿದ್ದಾರೆ. ಯಾರು ಎಷ್ಟು ಯೋಜನೆಗಳನ್ನು ಇಟ್ಟುಕೊಂಡು ಅದರ ಬಗ್ಗೆ ಆಸಕ್ತಿ, ಶಕ್ತಿ, ಜ್ಞಾನ ಇದೆ ಎಂಬುದು ಗೊತ್ತಾಗುತ್ತೆ ಎಂದು ಸಲಹೆ ನೀಡಿದ ಅವರು, ಮಂಡ್ಯದ ಯುವಕರು ಬೇರೆ ಬೇರೆ ಕಡೆ ಕೆಲಸಕ್ಕೆಂದು ತೆರಳುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಬೇಕು ಎಂಬಂತೆ ಸಾಕಷ್ಟು ಪತ್ರಗಳು ಬಂದಿದೆ. ಅಲ್ಲದೇ ಮಂಡ್ಯದಲ್ಲಿ ಸಾಕಷ್ಟು ಕೆಲಸಗಳು ಬಾಕಿ ಇದೆ. ಇವುಗಳನ್ನೆಲ್ಲಾ ಸುಮಲತಾ ಅಂಬರೀಶ್ ಮಾಡುತ್ತಾರೆ ಎಂದು ಭರವಸೆ ನೀಡಿದರು.

  • 1 ಸೈಟ್, 15 ಲಕ್ಷ ಆಫರ್ – ಜೆಡಿಎಸ್ ವಿರುದ್ಧ ಸುಮಲತಾ ಸ್ಫೋಟಕ ಆರೋಪ

    1 ಸೈಟ್, 15 ಲಕ್ಷ ಆಫರ್ – ಜೆಡಿಎಸ್ ವಿರುದ್ಧ ಸುಮಲತಾ ಸ್ಫೋಟಕ ಆರೋಪ

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಜೆಡಿಎಸ್‍ನ ಟಾಪ್ ಲೀಡರ್ ಒಬ್ಬರು ನನ್ನನ್ನು ಸಂಪರ್ಕ ಮಾಡಿದ್ದರು ಎಂದು ಜೆಡಿಎಸ್ ವಿರುದ್ಧ ಆರೋಪ ಮಾಡಿದ್ದಾರೆ.

    ಶ್ರೀರಂಪಟ್ಟಣದ ಕಾಳೇನಹಳ್ಳಿಯಲ್ಲಿ ಪ್ರಚಾರ ಮಾಡುವಾಗ ಸುಮಲತಾ ಅವರು, ಈ ಸಂದರ್ಭದಲ್ಲಿ ನಾನು ಈ ವಿಚಾರವನ್ನು ಈಗ ಹೇಳಬೇಕಾ ಅಥವಾ ಮುಂದೆ ಹೇಳಬೇಕಾ ಗೊತ್ತಾಗುತ್ತಿಲ್ಲ. ಜೆಡಿಎಸ್‍ನ ಟಾಪ್ ಲೀಡರ್ ಒಬ್ಬರು ನನ್ನ ಸಂಪರ್ಕ ಮಾಡಿದ್ದರು. ನನ್ನ ಫೋಟೋ ಮಾರ್ಫ್ ಮಾಡಿ ಏನ್ ಬೇಕಾದರೂ ಮಾಡುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ಜೆಡಿಎಸ್ ಅವರು ನನ್ನ ಖಾಸಗಿ ಜೀವನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಪ್ಲಾನ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಫೋಟೋ ಮಾರ್ಫ್ ಮಾಡಿರುವ ವೀಡಿಯೊಗಳನ್ನ ನೀವು ನೋಡಿದರೂ ನೋಡಬಹುದು ಎಂದು ಜೆಡಿಎಸ್ ವಿರುದ್ಧ ಆರೋಪಿಸಿದ್ದಾರೆ.

    ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಇಬ್ಬರು ಹುಡುಗರನ್ನ ಸಂಪರ್ಕ ಮಾಡಿದ್ದಾರೆ. ಈ ರೀತಿಯಾಗಿ ಮಾಡಬೇಕು ಎಂದು ಹೇಳಿಕೊಟ್ಟಿದ್ದಾರೆ. ಜೊತೆಗೆ ಅವರಿಗೆ ಒಂದು ಸೈಟ್ ಹಾಗೂ 15 ಲಕ್ಷ ಕೊಡುವುದಾಗಿ ಆಮಿಷ ವೊಡ್ಡಿದ್ದಾರೆ. ಅಷ್ಟೇ ಅಲ್ಲದೇ ಫಾರೀನ್‍ಗೆ ಕಳಿಸುವುದಾಗಿ ಹುಡುಗರಿಗೆ ಹೇಳಿದ್ದಾರೆ. ನೀವು ಫಾರೀನ್‍ಗೆ ಹೋಗಿ. ಇಲ್ಲಿ ಯಾವುದೇ ಸಂದರ್ಭ ಬಂದರೂ ನಾವು ನಿಭಾಯಿಸುತ್ತೇವೆ ಎಂದು ಹೇಳಿದ್ದಾರೆ. ಈ ರೀತಿಯಾಗಿ ಜೆಡಿಎಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಕೆಳಮಟ್ಟಕ್ಕೆ ಇಳಿಯುವುದಕ್ಕೆ ರೆಡಿಯಾಗಿದ್ದಾರೆ ಎಂದು ಸುಮಲತಾ ಅವರು ಆರೋಪಿಸಿದ್ದಾರೆ.

    ಈ ಎಲ್ಲ ಮಾಹಿತಿ ನನಗೆ ಅವರ ಕುಟುಂಬದವರು ಹೇಳಿದ್ದಾರೆ. ಜೆಡಿಎಸ್ ಅವರ ಇಂತಹ ಕೀಳುಮಟ್ಟದ ರಾಜಕೀಯವನ್ನು ನಾನು ನೋಡಿರಲಿಲ್ಲ. ಮುಂದಿನ ದಿನಗಳಲ್ಲಿ ನನ್ನ ಫೋಟೋ ಮಾರ್ಫ್ ಮಾಡಿ ರುವ ವಿಡಿಯೋಗಳ ಬರಬಹುದು. ನೋಡೋಣ ಏನು ಬರುತ್ತೊ ಅದನ್ನ ಫೇಸ್ ಮಾಡುವುದಕ್ಕೆ ನಾನು ರೆಡಿ ಇದ್ದೇನೆ ಎಂದು ಸುಮಲತಾ ಹೇಳಿದ್ದಾರೆ.

  • ನಾವೂ ಮಾತನಾಡಿದ್ರೆ ಸಿನಿಮಾದವರಂತೆ ಅವರು ಸತ್ಯಹರಿಶ್ಚಂದ್ರನ ತುಂಡುಗಳಾ: ನಟ ಯಶ್ ಖಡಕ್ ತಿರುಗೇಟು

    ನಾವೂ ಮಾತನಾಡಿದ್ರೆ ಸಿನಿಮಾದವರಂತೆ ಅವರು ಸತ್ಯಹರಿಶ್ಚಂದ್ರನ ತುಂಡುಗಳಾ: ನಟ ಯಶ್ ಖಡಕ್ ತಿರುಗೇಟು

    ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ವಾಕ್ ಸಮಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಮ್ಮ ವಿರುದ್ಧ ಟೀಕೆ ಮಾಡಿ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿ ನಿಖಿಲ್ ಅವರಿಗೆ ನಟ ಯಶ್ ಸಿನಿಮಾ ಶೈಲಿಯಲ್ಲೇ ತಿರುಗೇಟು ನೀಡಿದ್ದಾರೆ.

    ಮಂಡ್ಯದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ನಟ ಯಶ್, ರಾಜ್ಯದಲ್ಲಿ ಆಡಳಿತ ನಡೆಸಿದ ಕೆಲವರು ಮಾಡದ ಕೆಲಸಗಳಿಂದ ಉತ್ತರ ಕರ್ನಾಟಕದಲ್ಲಿ ಜನರಿಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಅವರಿಗೆ ನೀರು ಕೊಡುವ ಕಾರ್ಯದಿಂದ ಮನೆ ಬಾಡಿಗೆ ಕಟ್ಟಲು ಆಗಲಿಲ್ಲ. ಬಾಡಿಗೆ ಕಟ್ಟಬೇಕಾ? ನೀರು ಕೊಡಬೇಕಾ? ಎಂಬ ಪ್ರಶ್ನೆ ಬಂದಾಗ ನಾನು ಅದನ್ನು ಜನರಿಗೆ ಉಪಯೋಗಿಸಿದೆ. ಆದ್ದರಿಂದ ನನ್ನ ಮೇಲೆ ಅದೊಂದು ಮಾತು ಇದೆ. ಆದರೆ ಕೆಲವರು ಹುಟ್ಟುತ್ತಲೇ ಎಲ್ಲವನ್ನು ಕೇಳಿಕೊಂಡು ಬಂದಿರುತ್ತಾರೆ. ಎಲ್ಲದಕ್ಕೂ ಜನ ಉತ್ತರ ನೀಡುತ್ತಾರೆ. ಜನರಿಗೆ ಮಾಡಬೇಕು ಎಂದರೆ ದೇವರು ಕೊಡುತ್ತಾರೆ. ಆದರೆ ಬಾಡಿಗೆ ಕಟ್ಟಲು ಕೊಡಲ್ಲ. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಬರುವುದು ಬೇಡ ಎಂದು ಪ್ರಾರ್ಥನೆ, ನೀವು ನನ್ನ ಪರ ಪ್ರಾರ್ಥನೆ ಮಾಡಿ ಎಂದರು.

    ಸಿನಿಮಾದಲ್ಲಿ ಬಂಡವಾಳ ಹಾಕಿ ಕಷ್ಟ ಪಡುತ್ತೇವೆ. ಅದರಿಂದ ಹಣ ಬರುತ್ತದೆ ಅಷ್ಟೇ. ಆದರೆ ನಾವು ಅಭಿವೃದ್ಧಿ ಮಾಡಿಲ್ಲ ಎನ್ನುತ್ತಾರೆ. ಅವರಿಗೆ ಒಂದು ಮಾತನ್ನು ಹೇಳಲು ಇಷ್ಟ ಪಡುತ್ತೇನೆ. ನಾವು ಎಂದು ಸುಳ್ಳು ಭರವಸೆಗಳನ್ನು ನೀಡಿಲ್ಲ. ಈಗ ಮಾಡುತ್ತೇವೆ ಎಂದು ಹೇಳುತ್ತಿದ್ದೇವೆ ಅದನ್ನು ಮುಂದೇ ಮಾಡುತ್ತೇವೆ. ನಾವು ಯಾರನ್ನು ಟೀಕೆ ಮಾಡಿಲ್ಲ. ನಿಮ್ಮ ಸಾಮಥ್ರ್ಯ ಏನಿದೆ ಅದನ್ನು ಮಾಡಿ. ಮಂಡ್ಯ ಜನರಿಗೆ ಹೇಳುವುದಿಷ್ಟೇ ಒಳ್ಳೆಯ ಅಭ್ಯರ್ಥಿ ಸಿಕ್ಕಿದ್ದಾರೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ರು.

    ಸಂಜೆ ಮಳವಳ್ಳಿ ಸರ್ಕಲ್ ಬಳಿ ಮಾತನಾಡಿದ ಯಶ್, ಇಲ್ಲಿ ಯಾರು ಕೂಡ ದುಡ್ಡಿನ ಆಸೆಗೆ ಬಂದಿಲ್ಲ. ಕಳೆದ ಒಂದು ವಾರದಿಂದ ಮಂಡ್ಯದಲ್ಲಿ ಓಡಾಡುತ್ತಿದ್ದು, ಕ್ಷೇತ್ರದ ಎಲ್ಲ ಊರಿನಲ್ಲೂ ಅಂಬರೀಶ್ ಅಣ್ಣನ ಕೊಡುಗೆ ಕಾಣುತ್ತಿದೆ. ನಾವು ಕಳ್ಳೆತ್ತುಗಳಂತೆ ಎಂದು ಹೇಳಿಕೆ ನೀಡಿದ್ದು, ಏನು ಕದಿದ್ದೀವಿ ಹೇಳಿ ಸ್ವಾಮಿ? ನಾವೂ ಮಾತನಾಡಿದರೆ ಸಿನಿಮಾದವರಂತೆ, ಅವರು ಸತ್ಯಹರಿಶ್ಚಂದ್ರನ ತುಂಡುಗಳ ಎಂದು ಯಶ್ ಪ್ರಶ್ನೆ ಮಾಡಿದರು.

    ಅಂಬರೀಶ್ ಅಣ್ಣನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಯಾವುದೇ ಕಾರಣಕ್ಕೂ ಸಹಿಸಲ್ಲ. ನಿಮಗೆ ಕೆಲಸ ಮಾಡಿದ್ದೇವೆ ಎಂದು ಸಾಕ್ಷಿ ಕೊಡಕ್ಕೆ ಆಗಲ್ಲ. ಆ ಸಾಕ್ಷಿ ಜನ ಕೊಡುತ್ತಾರೆ. ನಾವು ಮನಸಾಕ್ಷಿ ಇಟ್ಟುಕೊಂಡು ಬದುಕುತ್ತಿದ್ದೇವೆ. ಇವತ್ತು ದುಶ್ಮನಿ ಮಾಡಿದರೆ ನಾಳೆ ಸ್ನೇಹ ಮಾಡಲ್ಲ. ಒಂದು ಸಾರಿ ದುಶ್ಮನಿ ಅಂದರೆ ಅಷ್ಟೇ ಜೀವನಪೂರ್ತಿ ದುಶ್ಮನಿ ಮಾಡುತ್ತೇವೆ ಎಂದರು.

    ಅಂಬರೀಶಣ್ಣನ ಮೇಲಿನ ಅಭಿಮಾನದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಯಾರ ಜೊತೆ ದುಶ್ಮನಿ ಮಾಡುವ ಉದ್ದೇಶ ಇಲ್ಲ. ಆದರೆ ಅಂಬರೀಶಣ್ಣನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಮಾತ್ರ ಸಹಿಸಲ್ಲ. ಈ ಸಲ ನೀವು ಸುಮಕ್ಕನನ್ನ ಗೆಲ್ಲಿಸಲಿಲ್ಲ ಎಂದರೆ ಮತ್ತೆ ನಾನು ನಿಮ್ಮ ಮುಂದೆ ಬರಲು ಮುಖ ಇರಲ್ಲ, ಬರೋದು ಇಲ್ಲ. ದಯವಿಟ್ಟು ಅಕ್ಕನನ್ನ ಗೆಲ್ಲಿಸಿ ಎಂದು ಮನವಿ ಮಾಡಿದರು.

  • ಮಂಡ್ಯ ಬಳಿಕ ಬೆಂಗ್ಳೂರಲ್ಲಿ ಚಾಲೆಂಜಿಂಗ್ ಸ್ಟಾರ್ ಪ್ರಚಾರ!

    ಮಂಡ್ಯ ಬಳಿಕ ಬೆಂಗ್ಳೂರಲ್ಲಿ ಚಾಲೆಂಜಿಂಗ್ ಸ್ಟಾರ್ ಪ್ರಚಾರ!

    ಬೆಂಗಳೂರು: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿ ಬ್ರೇಕ್ ತೆಗೆದುಕೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬೆಂಗಳೂರಿನಲ್ಲಿ ಪ್ರಚಾರಕ್ಕೆ ಧುಮುಕಿದ್ದಾರೆ.

    ಹೌದು. ದರ್ಶನ್ ಅವರು ಇಂದು ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ ಮೋಹನ್ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಈ ಕುರಿತು ಪಿಸ್ ಮೋಹನ್ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    ನನ್ನ ಆತ್ಮೀಯ ಸ್ನೇಹಿತ, ಹಿತೈಷಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಳೆ(ಸೋಮವಾರ) ನನ್ನ ಜೊತೆಗೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರ ಜೊತೆಗೆ ಸಿವಿ ರಾಮನ್ ನಗರ ಮತ್ತು ಶಾಂತಿನಗರ ಕ್ಷೇತ್ರಗಳಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದು, ತಾವು ಬನ್ನಿ, ಬೆಂಬಲಿಸಿ, ಆಶೀರ್ವದಿಸಿ ಎಂದು ಬರೆದುಕೊಂಡಿದ್ದರು.

    ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಪಿ.ಸಿ ಮೋಹನ್ ಸ್ಪರ್ಧಿಸಿದ್ರೆ, ಕಾಂಗ್ರೆಸ್ ನಿಂದ ರಿಜ್ವಾನ್ ಅರ್ಷದ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ನಟ ಪ್ರಕಾಶ್ ರೈ ಕಣಕ್ಕಿಳಿದಿದ್ದಾರೆ. ಇತ್ತ ಬ್ರೇಕ್ ಬಳಿಕ ನಟ ಯಶ್ ಅವರು ಇಂದು ಮಂಡ್ಯದಲ್ಲಿ ಮತ್ತೆ ಸುಮಲತಾ ಪರ ಪ್ರಚಾರ ಆರಂಭಿಸಿದ್ದಾರೆ.