Tag: ಸುಮಲತಾ ಅಂಬರೀಶ್

  • ನನ್ನನ್ನು ಬೆಂಬಲಿಸಿದವರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ: ಸುಮಲತಾ

    ನನ್ನನ್ನು ಬೆಂಬಲಿಸಿದವರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ: ಸುಮಲತಾ

    – ಯಾರಿಗೆ ಬೆದರಿಕೆ ಹಾಕುತ್ತಿದ್ದಾರೆ ಗೊತ್ತಾಗಬೇಕು
    – ಯಾರೂ ಬೆಟ್ಟಿಂಗ್ ಕಟ್ಟಬೇಡಿ
    – ಮಂಡ್ಯನೇ ನನಗೆ ಸಿಂಗಾಪುರ್

    ಮಂಡ್ಯ: ನನ್ನ ಬೆಂಬಲಕ್ಕೆ ನಿಂತವರನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಆಗ್ರಹಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಮುಗಿದಿದೆ. ಈಗ ನಮ್ಮ ಬೆಂಬಲಿಗರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಸಂಬಂಧ ಎಸ್‍ಪಿ (ಪೊಲೀಸ್ ಅಧೀಕ್ಷಕ) ಗಮನಕ್ಕೆ ತರುತ್ತೇನೆ. ನನ್ನ ಬೆಂಬಲಿಗರ ಪರವಾಗಿ ನಾನು ನಿಲ್ಲುತ್ತೇನೆ. ನನ್ನ ಪರವಾಗಿ ನಿಂತ ಚಿತ್ರನಟರು ಪ್ರಾಯಶ್ಚಿತ್ತ ಪಡಬೇಕಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ಇದರ ಅರ್ಥ ಏನು ಅಂತ ಗೊತ್ತಾಗಬೇಕು. ಯಾರಿಗೆ ಬೆದರಿಕೆ ಹಾಕುತ್ತಿದ್ದಾರೆ ಗೊತ್ತಾಗಬೇಕು ಎಂದು ಕಿಡಿಕಾರಿದರು.

    ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಯಾಕಪ್ಪ ಬೇಕಿತ್ತು ಅಂತ ಕೆಲವೊಮ್ಮೆ ಅನಿಸುತ್ತಿತ್ತು. ಆದರೆ ಜನರಿಗಾಗಿ ನನ್ನಲ್ಲಿ ನಾನೇ ಧೈರ್ಯ ತುಂಬಿಕೊಂಡು ಬಂದೆ. ಜಿಲ್ಲೆಯ ಜನರ ಜೊತೆ ಇರುವ ಸಲುವಾಗಿಯೇ ಚುನಾವಣೆಗೆ ಬಂದಿದ್ದೇನೆ. ನನಗೆ ರಾಜಕೀಯ ಬೇಕಿಲ್ಲ. ಆದರೆ ಜನರ ಜೊತೆ ಇರಲು ಒಳ್ಳೆ ಮಾರ್ಗ ಎಂದು ಅವರೇ ಸೂಚಿಸಿದರು. ಚುನಾವಣೆ ಬರುತ್ತದೆ ಹೋಗುತ್ತದೆ. ಅಂಬರೀಶ್ ಅವರ ಹೆಸರು ಬರೀ ಚುನಾವಣೆಗೆ ಸಂಬಂಧಿಸಿದ್ದಲ್ಲ. ನಾನು ಮಂಡ್ಯ ಜನರ ಜೊತೆ ಇರುತ್ತೇನೆ. ಮಂಡ್ಯವೇ ನನಗೆ ಸಿಂಗಾಪುರ್ ಎಂದು ಹೇಳಿದರು.

    ಅಂಬರೀಶ್ ಅವರ ಪಾರ್ಥಿವ ಶರೀರ ಮಂಡ್ಯಕ್ಕೆ ತೆಗೆದುಕೊಂಡು ಹೋಗಬೇಕು ಅಂದು ಕೊಂಡಿದ್ದೇವು. ತೆಗೆದುಕೊಂಡು ಹೋಗುವುದು ಹೇಳೋಕಾಗಲ್ಲ. ಬಸ್ ವ್ಯವಸ್ಥೆ ಮಾಡುತ್ತೇವೆ ಅಂತ ಹೇಳಿದರು. ಆದರೆ ಅದರ ಈಗ ಬಗ್ಗೆ ಮಾತನಾಡಿದರು. ಯಾವುದು ಸುಳ್ಳು, ಸತ್ಯ ಜನರಿಗೆ ಗೊತ್ತಿದೆ. ಮೇ 29ರಂದು ಅಂಬರೀಶ್ ಜನ್ಮದಿನ. ಅದನ್ನು ಮಂಡ್ಯದಲ್ಲೇ ಮಾಡುತ್ತೇನೆ ಎಂದು ತಿಳಿಸಿದರು.

    ಜಾತಿ ರಾಜಕಾರಣಕ್ಕೆ ನನ್ನ ವಿರೋಧವಿದೆ. ಗೌಡ್ತಿ ಅಲ್ಲ ಎಂಬುದನ್ನು ಒಪ್ಪಲ್ಲ, ಖಂಡಿಸುತ್ತೇನೆ. ಜನ ಅವರ ಮಾತನ್ನು ಒಪ್ಪಲ್ಲ ಎಂದು ಸಂಸದ ಶಿವರಾಮೇಗೌಡ ವಿರುದ್ಧ ಕಿಡಿಕಾರಿದರು.

    ನಾನು 15 ವರ್ಷದವಳಿದ್ದಾಗ ಸಿನಿಮಾಗೆ ಬಂದೆ. ಕುಟುಂಬದ ಜವಾಬ್ದಾರಿ ಇತ್ತು. ನಂತರ ಪತ್ನಿಯಾಗಿ, ತಾಯಿಯಾಗಿ ಜವಾಬ್ದಾರಿ ನಿಭಾಯಿಸಿದೆ. ತಾಯಿಗಿಂತ ದೊಡ್ಡ ಜವಾಬ್ದಾರಿ ಯಾವುದೂ ಇಲ್ಲ. ಅವರು ಮತ್ತು ಮಗನನ್ನು ನೋಡಿಕೊಳ್ಳಬೇಕಿತ್ತು. ಯಾವಾಗ ಅಂಬರೀಷ್ ಇಲ್ಲ ಎಂದು ಮಂಡ್ಯ ಜನರು ಬಂದರೋ ಆಗ ಇಲ್ಲಿಗೆ ಬರಬೇಕಾಯಿತು ಎಂದು ತಿಳಿಸಿದರು.

    ಕನಗನಮರಡಿ ಬಸ್ ದುರಂತದಲ್ಲಿ ಮಡಿದವರಿಗೆ ಕಿರು ಕಾಣಿಕೆ ನೀಡಿದ್ದೇವೆ. ಇದನ್ನು ಪ್ರಚಾರಕ್ಕೆ ಹೇಳಿಕೊಳ್ಳುವುದು ತಪ್ಪು. ಇದರಿಂದ ಜನರಿಗೆ ಏನು ಉಪಯೋಗ? ಹೀಗಾಗಿ ನಾನು ಇದರ ಬಗ್ಗೆ ಮಾತನಾಡಲಿಲ್ಲ. ಹಣದ ಹೊಳೆ ಹರಿಯುತ್ತಿದ್ದು ನಿಜ ಎನ್ನುವುದು ಗೊತ್ತಾಗಿತ್ತು. ದುಡ್ಡು ತೆಗೆದುಕೊಂಡು ವೋಟ್ ಹಾಕೋದು ಬೇಡ ಅಂತ ಜನರ ಬಳಿ ಕೇಳಿಕೊಂಡೆ ಎಂದರು.

    ಯಾರ ಸ್ವಭಾವ ಏನು ಎನ್ನುವುದು ಜನರಿಗೆ ಗೊತ್ತಿದೆ. ಜಿಲ್ಲೆಯಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎಂಬುದು ಕೇಳಿ ಬರುತ್ತಿದೆ. ಯಾರೂ ರಿಸ್ಕ್ ತೆಗೆದುಕೊಳ್ಳಬೇಡಿ. ಬೆಟ್ಟಿಂಗ್ ಒಳ್ಳೆಯ ವಿಷಯವಲ್ಲ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಗೊತ್ತಿಲ್ಲ. ಬೆಟ್ಟಿಂಗ್ ಕಟ್ಟಬೇಡಿ ಎಂದು ಮನವಿ ಮಾಡಿಕೊಂಡರು.

    ಮಂಡ್ಯ ಜಿಲ್ಲೆಯ ಕ್ಷೇತ್ರದ್ಯಾಂತ ಬೆಂಬಲ ಹಾಗೂ ಜನರ ಪ್ರೀತಿ ಸಿಕ್ಕಿದೆ. ಹೀಗಾಗಿ ಎಲ್ಲರನ್ನೂ ಸ್ಮರಿಸುವುದು ಕರ್ತವ್ಯ. ಕಾಂಗ್ರೆಸ್ ಪಕ್ಷದವರು ಮೊದಲ ಹೆಜ್ಜೆ ಇಡಲು ಸ್ಫೂರ್ತಿ ನೀಡಿದ್ದಾರೆ. ಅವರಿಗೆ ವಂದನೆ. ರೈತ ಸಂಘ, ಬಿಜೆಪಿ ನನಗೆ ಶಕ್ತಿ ತುಂಬಿ ನನ್ನ ಹೋರಾಟವನ್ನು ಬಲಿಷ್ಠಗೊಳಿಸಿತು. ದಲಿತ ಸಂಘಟನೆ, ಕನ್ನಡಪರ ಹೋರಾಟಗಾರರು, ಮುಸ್ಲಿಂ ಸಮುದಾಯ ಎಲ್ಲರಿಗೂ ಕೃತಜ್ಞತೆಗಳು ಎಂದು ತಿಳಿಸಿದರು.

    ನಟರಾದ ದರ್ಶನ್, ಯಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಅಂಬರೀಶ್, ಅಭಿಷೇಕ್ ಮತ್ತು ನನ್ನ ಅಭಿಮಾನಿಗಳಿಗೆ ವಂದನೆ. ಕೆಪಿಸಿಸಿ ಸದಸ್ಯ ಸಚ್ಚಿದಾನಂದ, ಪ್ರಸನ್ನ, ರಾಜೀವ್, ಅರವಿಂದ್ ಸೇರಿದಂತೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡವರು, ಶೇ.80ರಷ್ಟು ಮತದಾನ ಮಾಡಿದವರಿಗೆ ವಂದನೆ. ಆದರೆ ಬೆಂಗಳೂರು ನಗರದಲ್ಲಿ ಎಲ್ಲ ಸೌಲಭ್ಯ ಇದ್ದರೂ ಮತದಾನ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ರಾಯಚೂರಿನ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರವು ನ್ಯಾಯ ದೊರಕಿಸಿಕೊಡಬೇಕು. ಆದಷ್ಟು ಬೇಗ ನೊಂದ ಕುಟುಂಬಕ್ಕೆ ಸಾಂತ್ವನ ನೀಡಬೇಕು. ಮೃತ ವಿದ್ಯಾರ್ಥಿನಿಗೆ ಸಂತಾಪ ಸೂಚಿಸುತ್ತೇನೆ. ನ್ಯಾಯ ಮತ್ತು ಅನ್ಯಾಯದ ಹೋರಾಟವಿದು. ಮಾಧ್ಯಮಗಳು ಉತ್ತಮವಾದ ಕೆಲಸ ಮಾಡಿವೆ ಎಂದರು.

  • ಧರ್ಮ ಒಡೆಯುವ ಕಾಂಗ್ರೆಸ್ಸಿಗೆ ಜನರೇ ಪಾಠ ಕಲಿಸ್ತಾರೆ: ಬಿಎಸ್‍ವೈ

    ಧರ್ಮ ಒಡೆಯುವ ಕಾಂಗ್ರೆಸ್ಸಿಗೆ ಜನರೇ ಪಾಠ ಕಲಿಸ್ತಾರೆ: ಬಿಎಸ್‍ವೈ

    ರಾಯಚೂರು: ಹಿಂದೂ ಧರ್ಮವನ್ನು ಒಡೆಯುವ ಕಾಂಗ್ರೆಸ್ಸಿಗೆ ವೀರಶೈವ ಜನ ಈ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

    ಜಿಲ್ಲೆಯ ಸಿರವಾರದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಪರ ಪ್ರಚಾರದ ವೇಳೆ ಮಾತನಾಡಿದ ಅವರು ವೀರಶೈವ ಲಿಂಗಾಯತ ಧರ್ಮದ ವಿಚಾರವಾಗಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದ ಪತ್ರ ಬಹಿರಂಗವಾಗಿದೆ. ಹೀಗಾಗಿ ಈ ಚುನಾವಣೆಯಲ್ಲಿ ವೀರಶೈವರು ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸುತ್ತಾರೆ. ಧರ್ಮ ಒಡೆಯುವ ಮೂಲಕ ನಾನು ಮುಖ್ಯಮಂತ್ರಿಯಾಗದಂತೆ ಮಾಡಿದ್ದಕ್ಕೆ ರಾಜ್ಯದ ಜನರು ಪಾಠ ಕಲಿಸುತ್ತಿದ್ದಾರೆ ಎಂದರು.

    ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ವಿಚಾರವಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರು ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿಯೂ ವೀರಶೈವ ಸಮಾಜದವರು ಕಾಂಗ್ರೆಸ್‍ಗೆ ಉತ್ತರ ನೀಡಲಿದ್ದಾರೆ. ರಾಜ್ಯದ 22ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲ್ಲೆಲ್ಲಿ ಅಕ್ರಮವಾಗಿ ಹಣ ಸಂಗ್ರಹವಾಗಿದೆ ಅಲ್ಲಿ ಐಟಿ ದಾಳಿಯಾಗುತ್ತಿದೆ. ಕೇವಲ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷಗಳ ಮುಖಂಡರ ಮೇಲೆ ದಾಳಿ ನಡೆಯುತ್ತದೆ ಎಂದು ಹೇಳುವುದು ಸರಿಯಲ್ಲ ಎಂದು ತಿಳಿಸಿದರು.

    ಸಿಎಂ ಕುಮಾರಸ್ವಾಮಿ ಅವರು ಪುತ್ರ ನಿಖಿಲ್‍ನನ್ನು ಗೆಲ್ಲಿಸಲು ಮಂಡ್ಯದಲ್ಲಿ ಕುಳಿತಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ವಿರುದ್ಧ ಅನೇಕ ಆರೋಪಗಳನ್ನು ಮಾಡುತ್ತಿದ್ದಾರೆ. ಏನೇ ಆರೋಪ ಮಾಡಿದರೂ ಮಂಡ್ಯದಲ್ಲಿ ಸುಮಲತಾ ಗೆಲ್ಲುವುದು ನಿಶ್ಚಿತ. ಜನರ ದುಡ್ಡು ಲೂಟಿ ಮಾಡಿ, ಚುನಾವಣೆಗಾಗಿ 150 ಕೋಟಿ ರೂ. ಖರ್ಚು ಮಾಡಿ ಗೆಲ್ಲಲು ಹೊರಟಿದ್ದಾರೆ. ಪ್ರಚಾರದ ವೇಳೆ ಮಾಜಿ ಸಚಿವ ಅಂಬರೀಶ್ ಅವರ ಬಗ್ಗೆ ಅಪಮಾನ ಮಾಡಿದ್ದಾರೆ. ಮಂಡ್ಯ ಕ್ಷೇತ್ರದ ಜನರು ಇದಕ್ಕೆ ತಕ್ಕಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

  • ಹಣ ಇರುವ ಕಡೆ ಐಟಿ ದಾಳಿ ಆಗುತ್ತೆ – ಸುಮಲತಾ ಅಂಬರೀಶ್

    ಹಣ ಇರುವ ಕಡೆ ಐಟಿ ದಾಳಿ ಆಗುತ್ತೆ – ಸುಮಲತಾ ಅಂಬರೀಶ್

    ಮಂಡ್ಯ: ಹಣ ಇರುವ ಕಡೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡುತ್ತಾರೆ. ಹಣ ಎಲ್ಲಿದೆ ಎಂದು ಎಲ್ಲರಿಗೂ ಗೊತ್ತು. ಹೀಗಾಗಿ ಯಾಕೆ ಐಟಿ ದಾಳಿ ಆಗುತ್ತಿದೆ ಎಂದು ಕೂಡ ಗೊತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ನಗರದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಜೊತೆ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿ, ಐಟಿ ದಾಳಿಗೂ ನನಗೂ ಸಂಬಂಧವಿಲ್ಲ. ಹೀಗಾಗಿ ನಾನು ಅದರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.

    ಇದೇ ವೇಳೆ ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಹಣ ಇರುವ ಕಡೆ ಐಟಿ ದಾಳಿ ಆಗುತ್ತದೆ. ಹಣ ಎಲ್ಲಿದೆ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಯಾಕೆ ಐಟಿ ದಾಳಿ ಆಗುತ್ತಿದೆ ಅಂತಲೂ ಜನಕ್ಕೆ ಗೊತ್ತಿದೆ. ಈಗಾಗಲೇ ಅವರದ್ದೇ ಎರಡು ವಿಡಿಯೋ ಬಹಿರಂಗ ಆಗಿದೆ. ಜನರಿಗೆ ಇದರ ಬಗ್ಗೆ ಎಲ್ಲ ಗೊತ್ತಿದೆ ಎಂದು ತಿಳಿಸಿದ್ರು.

    ಮಂಡ್ಯದ ವಕೀಲರ ಸಂಘದ ಕಚೇರಿಗೆ ಸುಮಲತಾ ಅಂಬರೀಷ್ ಭೇಟಿ ನೀಡಿ ಬೆಂಬಲ ಕೋರಿದ್ರು. ಈ ವೇಳೆ ಸುಮಲತಾಗೆ ಮೈಸೂರು ಪೇಟಾ ತೊಡಿಸಿ ವಕೀಲರು ಬೆಂಬಲ ಘೋಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಸಮಾವೇಶ ಇಟ್ಟುಕೊಂಡಿದ್ದೇವೆ. ಕಳೆದ ನಾಲ್ಕು ವಾರಗಳ ಅನಿಸಿಕೆಯನ್ನು ಜನರ ಜೊತೆ ಹಂಚಿಕೊಳ್ಳುತ್ತೇವೆ. ಈ ಸಮಾವೇಶ ನಮ್ಮ ಶಕ್ತಿ ಪ್ರದರ್ಶನ ಅಲ್ಲ ಎಂದು ಸ್ಪಷ್ಟಪಡಿಸಿದ್ರು.

    ಬಿಜೆಪಿ ನಾಯಕರ ಜೊತೆ ಸುಮಲತಾ ಭೇಟಿ ವೀಡಿಯೋ ಬಗ್ಗೆ ಸಿ.ಎಸ್ ಪುಟ್ಟರಾಜು ಹೇಳಿಕೆಗೆ ತಿರುಗೇಟು ನೀಡಿದ ಸುಮಲತಾ, ಅವರು ಏನ್ ಬೇಕಾದ್ರೂ ಹೇಳುತ್ತಾರೆ. ಏನು ಬೇಕಾದ್ರೂ ಸೃಷ್ಟಿಸುತ್ತಾರೆ. ಏನು ಬೇಕಾದ್ರೂ ಮಾಡಿದ್ರೂ ಚಿಂತೆ ಇಲ್ಲ. ಜನ ಮೋಸ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಚಿವ ಸ್ಥಾನ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಅವರು ಹೀನಾಯ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ ಎಂದರು.

    ಸುಮಲತಾ ಪ್ರಚಾರದ ವಾಹನದ ಹತ್ತಿರ ನಾಗಾಸಾಧುಗಳು ಕೂಡ ಇಂದು ಕಾಣಿಸಿಕೊಂಡರು. ಉತ್ತರ ಪ್ರದೇಶದ ವಾಹನದಲ್ಲಿ ಮಂಡ್ಯದ ಕಾಳಿಕಾಂಬ ದೇವಸ್ಥಾನ ಅಂಗಳದಲ್ಲಿ ನಾಗಸಾಧುಗಳು ಬಂದಿಳಿದಿದ್ದಾರೆ. ಪ್ರಚಾರದ ವಾಹನದ ಬಳಿ ವಾಹನ ನಿಲ್ಲಿಸಿ ಸುಮಲತಾ ಬೆಂಬಲಿಗರನ್ನು ಮಾತನಾಡಿಸಿದ್ದಾರೆ.

  • ಮಂಡ್ಯ ಕ್ಲೈಮ್ಯಾಕ್ಸ್‌ಗೆ ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ?

    ಮಂಡ್ಯ ಕ್ಲೈಮ್ಯಾಕ್ಸ್‌ಗೆ ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ?

    ಮಂಡ್ಯ: ಕ್ಷೇತ್ರದಲ್ಲಿ ಇಷ್ಟು ದಿನ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭರ್ಜರಿಯಿಂದ ಪ್ರಚಾರ ಮಾಡುತ್ತಿದ್ದರು. ನಾಳೆ (ಮಂಗಳವಾರ) ಚುನಾವಣೆಯ ಕೊನೆಯ ಬಹಿರಂಗ ಪ್ರಚಾರ ನಡೆಯಲಿದೆ. ಈ ಕ್ಲೈಮ್ಯಾಕ್ಸ್ ಪ್ರಚಾರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ ಕೊಡುವ ಸಾಧ್ಯತೆಯಿದೆ.

    ನಾಳೆ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾಗಿದ್ದು, ಇಂದು ಮೈತ್ರಿ ನಿಖಿಲ್ ಕುಮಾರಸ್ವಾಮಿ ಪರ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ನಾಳೆ ರಜನಿಕಾಂತ್ ಕರೆಸಲೇಬೇಕು ಎಂದು ಸುಮಲತಾಗೆ ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ.

    ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಸುಮಲತಾ ಅಂಬರೀಶ್ ಅವರು ಬೃಹತ್ ಸಮಾವೇಶವನ್ನು ಏರ್ಪಡಿಸಿದ್ದಾರೆ. ಈ ಸಮಾವೇಶಕ್ಕೆ ರಜಿನಿಕಾಂತ್ ಕರೆಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ರಜನಿಕಾಂತ್ ಅವರು ಅಂಬರೀಶ್ ಅವರ ಆಪ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರಚಾರಕ್ಕೆ ಬರುವಂತೆ ಸುಮಲತಾ ಅವರು ರಜನಿಕಾಂತ್‍ಗೆ ಕರೆ ಮಾಡಿದ್ದಾರೆ. ಒಂದು ವೇಳೆ ರಜನಿಕಾಂತ್ ಬರೋದು ಓಕೆ ಆದರೆ ನಾಳೆ ಸುಮಲತಾ ನೇತೃತ್ವದ ಸಮಾವೇಶಕ್ಕೆ ಮತ್ತಷ್ಟು ರಂಗು ಬರಲಿದೆ.

    ಮಂಡ್ಯದಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ತಮಿಳು ಭಾಷಿಕರ ಮತವಿದೆ. ಅಷ್ಟೇ ಅಲ್ಲದೆ ಮಂಡ್ಯದಲ್ಲೂ ರಜನಿಕಾಂತ್ ಅವರ ಅಭಿಮಾನಿಗಳು ತುಂಬಾ ಜನರಿದ್ದಾರೆ. ಹೀಗಾಗಿ ರಜನಿಕಾಂತ್ ಬಂದರೆ ಮಂಡ್ಯದಲ್ಲಿರುವ ತಮಿಳರ ವೋಟ್‍ಗಳು ಸುಮಲತಾಗೆ ಬರಲಿವೆ ಎಂಬ ಲೆಕ್ಕಾಚಾರದಲ್ಲಿ ರಜನಿಕಾಂತ್ ಕರೆಸಲು ಸುಮಲತಾ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ರಜನಿಕಾಂತ್ ಬಂದರೆ ಸುಮಲತಾ ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎನ್ನುವ ಲೆಕ್ಕಾಚಾರವನ್ನು ಹಾಕಲಾಗಿದೆ. ಆದರೆ ಕರ್ನಾಟಕದ ವಿರುದ್ಧ ಕಾವೇರಿ ಹೋರಾಟದಲ್ಲಿ ರಜನಿಕಾಂತ್ ಪಾಲ್ಗೊಂಡಿದ್ದರು. ಹೀಗಾಗಿ ರಜನಿಕಾಂತ್ ಬರುತ್ತಾರಾ ಇಲ್ಲವೋ ಎನ್ನುವುದು ಮಂಗಳವಾರ ಸ್ಟಷ್ಟವಾಗಲಿದೆ.

  • ಪ್ರಚಾರ ಮೊಟಕುಗೊಳಿಸಿ ವಾಪಸ್ಸಾದ ನಟ ದರ್ಶನ್!

    ಪ್ರಚಾರ ಮೊಟಕುಗೊಳಿಸಿ ವಾಪಸ್ಸಾದ ನಟ ದರ್ಶನ್!

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಳೆದ ಕೆಲವು ದಿನಗಳಿಂದ ಪ್ರಚಾರ ಮಾಡುತ್ತಿದ್ದು, ಇಂದು ತಮ್ಮ ಪ್ರಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ಮೈಸೂರಿಗೆ ತೆರಳಿದ್ದಾರೆ.

    ಕಳೆದ ಕೆಲ ದಿನಗಳಿಂದ ಪ್ರಚಾರ ಮಾಡಿದ್ದರಿಂದ ದರ್ಶನ್ ಅವರಿಗೆ ಗಂಟಲು ನೋವು, ಕೈನೋವು ಕಾಣಿಸಿಕೊಂಡಿತ್ತು. ಗಂಟಲು ನೋವಿದ್ದರೂ ಪ್ರಚಾರದಲ್ಲಿ ದರ್ಶನ್ ಭಾಗಿಯಾಗಿದ್ದರು. ಇಂದು ಪ್ರಚಾರ ನಡೆಸುತ್ತಿದ್ದಾಗ ಮೈಕ್ ಆಗಾಗ ಕೈ ಕೊಡುತಿತ್ತು. ಗಂಟಲು ಕಟ್ಟಿಕೊಂಡಿದ್ದ ಕಾರಣ ಮೈಕ್ ಇಲ್ಲದೆ ಭಾಷಣ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಇಂದು ಕೇವಲ ನಾಲ್ಕು ಊರುಗಳಲ್ಲಿ ಮಾತ್ರ ಪ್ರಚಾರ ಮಾಡಿ ನಂತರ ತಮ್ಮ ಪ್ರಚಾರ ಕಾರ್ಯವನ್ನು ಮೊಟಕುಗೊಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ನಾಳೆ ಮತ್ತೆ ದರ್ಶನ್ ತಮ್ಮ ಪ್ರಚಾರ ಮುಂದುವರಿಸಲಿದ್ದಾರೆ. ಇತ್ತ ದರ್ಶನ್ ವಾಪಸ್ ಹೋದ ವಿಷಯ ಗೊತ್ತಿಲ್ಲದೇ ಹೆಮ್ಮನಹಳ್ಳಿ, ಸೋಮನಹಳ್ಳಿ ಸೇರಿ ಹಲವು ಗ್ರಾಮಗಳ ಜನ ರಸ್ತೆಯಲ್ಲಿ ಸಾರಥಿಗಾಗಿ ಕಾದು ನಿಂತಿದ್ದಾರೆ.

    ಎಲ್ಲೆಲ್ಲಿ ಪ್ರಚಾರ:
    ಮದ್ದೂರು ತಾಲೂಕಿನ ಗ್ರಾಮಗಳಲ್ಲಿ ಸಾರಥಿ ಅಬ್ಬರದ ಪ್ರಚಾರ ನಡೆಸಿದ್ದರು. ಮಲ್ಲನಕುಪ್ಪೆಯಲ್ಲಿ ಇಂದು ಪ್ರಚಾರ ಆರಂಭಿಸಿದ ದರ್ಶನ್ ಸುಮಲತಾ ಪರ ದರ್ಶನ್ ಮತಯಾಚನೆ ಮಾಡಿದ್ರು. ಮದ್ದೂರಿನ ಮಲ್ಲನಕುಪ್ಪೆ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಗೆ ಶುಭ ಕೋರಿದರು. ದರ್ಶನ್ ಪ್ರಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಬಾವುಟಗಳು ಹಾರಾಡುವುದು ಕಂಡುಬಂತು. ದರ್ಶನ್‍ಗೆ ನಟ, ಸ್ನೇಹಿತ ರವಿಚೇತನ್ ಸಾಥ್ ನೀಡಿದ್ದರು.

    ಮದ್ದೂರಿನ ಕೆಸ್ತೂರಿನಲ್ಲಿ ದರ್ಶನ್‍ಗೆ ಭವ್ಯ ಸ್ವಾಗತ ಸಿಕ್ಕಿದ್ದು, ಗ್ರಾಮಸ್ಥರು ಬೃಹತ್ ಸೇಬಿನ ಹಾರ ಹಾಕಿದರು. ಈ ವೇಳೆ ಜೆಡಿಎಸ್‍ನ ಸ್ಥಳೀಯ ಮುಖಂಡ ಧನಂಜಯ್ ಅವರು, ಪ್ರಚಾರ ವಾಹನ ಹತ್ತಿ ಸುಮಲತಾ ಪರ ಬೆಂಬಲ ಘೋಷಿಸಿದ್ರು.

    ಅಂತಿಮ ಹಂತದ ಪ್ರಚಾರ ಕಣದಲ್ಲಿ ದರ್ಶನ್ ಭಾಷಣ ಮಾಡಿದ್ದು, ಮತಗಳನ್ನು ಮಾರಿಕೊಳ್ಳದಂತೆ ಜನತೆಗೆ ಮನವಿ ಮಾಡಿದ್ರು. ಹಣಕ್ಕೆ ಮತ ಮಾರಿಕೊಳ್ಳಬೇಡಿ. ಸ್ವಾಭಿಮಾನದ ಮತಗಳನ್ನು ಸುಮಲತಾರಿಗೆ ಹಾಕುವಂತೆ ದರ್ಶನ್ ಕೇಳಿಕೊಂಡರು. ಇದೇ ವೇಳೆ ಪ್ರಚಾರದ ಮೈಕ್ ಕೂಡ ಕೈ ಕೊಟ್ಟಿತು. ಈ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಸರಿಯಾಗಿ ಭಾಷಣ ಮಾಡಲು ಸಾಧ್ಯವಾಗಿಲ್ಲ.

    ಮದ್ದೂರಿನ ತೂಬಿನಕೆರೆಯಲ್ಲಿ ಅಭಿಮಾನಿಗಳು ಬೃಹತ್ ರೇಷ್ಮೆ ಗೂಡಿನ ಹಾರ ಹಾಕಿದ್ರು. ಎರಡು ಜೆಸಿಬಿ ಮೂಲಕ ಬೃಹತ್ ರೇಷ್ಮೆ ಗೂಡಿನ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಮದ್ದೂರಿನ ಕೆಸ್ತೂರಿನಲ್ಲಿ ಮಾತನಾಡುವಾಗಲೂ ಮೈಕ್ ಕೈ ಕೊಡ್ತಿದ್ದ ಕಾರಣ ದರ್ಶನ್ ಸಿಟ್ಟಾದ್ರು. ಅಲ್ಲದೆ ತಮ್ಮ ಕೈಲಿದ್ದ ಮೈಕನ್ನು ಕೆಳಕ್ಕೆ ಎಸೆದ ಪ್ರಸಂಗವೂ ನಡೆಯಿತು.

  • ಅಂಬಿ ಸ್ಟೈಲ್‍ನಲ್ಲೇ ಡೈಲಾಗ್ ಹೇಳಿ ಅಭಿಷೇಕ್ ಮತಯಾಚನೆ

    ಅಂಬಿ ಸ್ಟೈಲ್‍ನಲ್ಲೇ ಡೈಲಾಗ್ ಹೇಳಿ ಅಭಿಷೇಕ್ ಮತಯಾಚನೆ

    – ಎಚ್‍ಡಿಡಿಗೆ ತಿರುಗೇಟು

    ಮಂಡ್ಯ: ಲೋಕಸಭಾ ಕ್ಷೇತ್ರ ಮಂಡ್ಯ ರಣಕಣದಲ್ಲಿ ಮಾತಿನ ಸಮರ ಜೋರಾಗಿದೆ. ತಾಯಿ ಸುಮಲತಾ ಪರ ಶನಿವಾರ ಪ್ರಚಾರದ ಅಖಾಡಕ್ಕೆ ಧುಮುಕಿದ್ದ ಅಭಿಷೇಕ್, ಅಂಬಿ ಸ್ಟೈಲ್‍ನಲ್ಲೇ `ಅಂತ’ ಸಿನಿಮಾದ ಡೈಲಾಗ್ ಹೇಳಿ ಮತಯಾಚಿಸಿದ್ರು.

    `ಕುತ್ತೆ ಕನ್ವರ್ ನಹೀ ಕನ್ವರ್ ಲಾಲ್ ಬೋಲೋ’ ಎಂದು ಡೈಲಾಗ್ ಹೇಳಿ 18ಕ್ಕೆ ಸುಮಲತಾ ಅಂಬರೀಶ್ ಬೋಲೋ ಅಂದ್ರು. ಅಭಿಷೇಕ್ ಡೈಲಾಗ್‍ಗೆ ಅಭಿಮಾನಿಗಳು ಕೂಡ ದನಿಗೂಡಿಸಿದರು.

    ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ನಟ ಅಭಿಷೇಕ್ ಅಂಬರೀಶ್ ಭೇಟಿ ನೀಡಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನವಮಿ ಆಗಿದ್ದರಿಂದ ವಿಶೇಷ ಪೂಜೆ ಸಲ್ಲಿಸಲು ಬಂದಿದ್ದೇನೆ ಅಂದ್ರು. ಇದೇ ವೇಳೆ ಸುಮಲತಾ ಬಗ್ಗೆ ಸಂಸದ ಶಿವರಾಮೇಗೌಡ ಮಾಯಾಂಗನೆ ಪದ ಬಳಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನಾನು ಹಾಗೆ ಮಾತನಾಡಲು ಹೋಗಲ್ಲ ಎಂದರು.

    ಅಂಬರೀಶ್ ಮಂಡ್ಯದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂಬ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅಭಿಷೇಕ್, ಅಂಬರೀಶ್ ಮಂಡ್ಯದಲ್ಲಿ ಕೆಲಸ ಮಾಡಿದ್ದಾರಾ? ಇಲ್ಲವಾ? ಎಂಬುದನ್ನು ಮಂಡ್ಯ ಜನ ತೀರ್ಮಾನ ಮಾಡ್ತಾರೆ ಎಂದು ಹೇಳುವ ಮೂಲಕ ಎಚ್‍ಡಿಡಿಗೆ ತಿರುಗೇಟು ನೀಡಿದ್ರು.

    ಇತ್ತ ಸಂಸದ ಶಿವರಾಮೇಗೌಡ, ಚುನಾವಣೆ ಆದ ಬಳಿಕ ಸುಮಲತಾ, ದರ್ಶನ್, ಯಶ್ ನಿಮ್ಮ ಕಷ್ಟ ಸುಖಕ್ಕೆ ಆಗ್ತಾರಾ, ಅವರೆಲ್ಲಾ 18ಕ್ಕೆ ಪ್ಯಾಕಪ್ ಎಂದು ವ್ಯಂಗ್ಯವಾಡಿದ್ರು. ಶಾಸಕ ಸುರೇಶ್ ಗೌಡ, ಪಿಕ್ಚರ್‍ನವರು ಪಿಕ್ಚರ್‍ನವರೇ.. ಅಂಬರೀಶ್ ಇದ್ದಾಗ ಜನರ ಕಷ್ಟ, ಸುಖ ಕೇಳಲು ಬರಲಿಲ್ಲ. ಇವತ್ತು ಕಣ್ಣೀರು ಸುರಿಸಿಕೊಂಡು ಮತ ಕೇಳುತ್ತಿದ್ದಾರೆ. ಯಶ್, ದರ್ಶನ್ ಅವರ ಮಗ ಯಾರೂ ಚುನಾವಣೆ ಬಳಿಕ ಸಿಗಲ್ಲ. ಅವರ ಫೋನ್ ನಂಬರ್ ಸಿಕ್ಕಿದ್ರೆ ನೀವೇ ಪುಣ್ಯವಂತರು ಎಂದು ನಿಖಿಲ್ ಪರ ಮತಯಾಚಿಸಿದ್ರು.

  • ನಮ್ಮಲ್ಲಿ ಭಯೋತ್ಪಾದಕರಿಲ್ಲ, ಭಯ ಪಡೋ ಅಗತ್ಯವಿಲ್ಲ- ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    ನಮ್ಮಲ್ಲಿ ಭಯೋತ್ಪಾದಕರಿಲ್ಲ, ಭಯ ಪಡೋ ಅಗತ್ಯವಿಲ್ಲ- ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    – ನಿಖಿಲ್ ಕಿವಿಗೆ ಗಾಯ

    ಮಂಡ್ಯ: ನಮ್ಮ ಪಕ್ಷದಲ್ಲಿ ಭಯೋತ್ಪಾದಕರಿಲ್ಲ. ಹೀಗಾಗಿ ಭಯ ಪಡುವ ಅಗತ್ಯವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಸಚಿವ ಡಿ.ಸಿ ತಮ್ಮಣ್ಣ ಟಾಂಗ್ ನೀಡಿದ್ರು.

    ಮದ್ದೂರಿನ ಬೋರಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ ಹೇಳಿಕೆಯಿಂದ ನನಗೆ ಭಯವಾಗುತ್ತಿದೆ ಎಂದಿದ್ದ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಸಭ್ಯರು. ನಮ್ಮ ನಡವಳಿಕೆ ನೋಡಿದ್ದೀರಲ್ಲ. ಅವರು ಸಂಬಂಧಿಕರೂ ಆಗಿದ್ದಾರೆ. ನಮ್ಮ ಪಕ್ಷದಲ್ಲಿ ಭಯೋತ್ಪಾದಕರು ಇಲ್ಲ. ಹಾಗಾಗಿ ನಮ್ಮನ್ನ ನೋಡಿ ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ರು. ಇದನ್ನೂ ಓದಿ: ಸಿಎಂ ಹೇಳಿಕೆಯಿಂದ ನನಗೆ ಭಯವಾಗ್ತಿದೆ: ಸುಮಲತಾ

    ಯಾರಿಗೆ ಯಾವ ಸಂದರ್ಭದಲ್ಲಿ ಭಯ ಆಗುತ್ತದೆ ಅನ್ನೋದು ನಮಗೆ ಗೊತ್ತಿಲ್ಲ. ಆದ್ರೆ ನಮ್ಮನ್ನ ನೋಡಿ ಭಯ ಪಡುವ ಅಗತ್ಯ ಇಲ್ಲ. ಮಂಡ್ಯದಲ್ಲಿ ವಾತಾವರಣ ಚೆನ್ನಾಗಿದೆ. ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಇಂದು ಮಾತ್ರ ಮಂಡ್ಯದಲ್ಲಿ ಪ್ರಚಾರ ಮಾಡುತ್ತಾರೆ. ಮತ್ತೆ ಅವರು ಮಂಡ್ಯದಲ್ಲಿ ಪ್ರಚಾರ ಮಾಡುವುದಿಲ್ಲ ಅಂದ್ರು.

    ನಿಖಿಲ್ ಕಿವಿಗೆ ಗಾಯವಾಗಿದ್ದರಿಂದ ಶುಕ್ರವಾರ ಪ್ರಚಾರಕ್ಕೆ ಹೋಗಿಲ್ಲ. ಇಂದಿನಿಂದ ನಿಖಿಲ್ ಅವರು ಸಹ ಪ್ರಚಾರದಲ್ಲಿ ಭಾಗಿಯಾಗುತ್ತಾರೆ. ಸುಮಲತಾ ಬಗ್ಗೆ ಸಂಸದ ಎಲ್.ಆರ್ ಶಿವರಾಮೇಗೌಡ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಆದ್ರೆ ಆ ರೀತಿ ಮಾತನಾಡಬಾರದು ಎಂದು ಪಕ್ಷ ಸೂಚನೆ ನೀಡಿದೆ. ಹೀಗಾಗಿ ಯಾರೂ ವೈಯಕ್ತಿಕವಾಗಿ ಟೀಕೆ ಮಾಡಬಾರದು ಎಂದು ಸಲಹೆಯಿತ್ತರು.  ಇದನ್ನೂ ಓದಿ: ಜಯಲಲಿತಾರನ್ನು ಮೀರಿಸುವ ಮಾಯಾಂಗನೆಯಂತೆ ಹೋರಾಟ: ಶಿವರಾಮೇಗೌಡ

  • ಗುಸು ಗುಸುನೂ ಇಲ್ಲ ಪಸಪಸನೂ ಇಲ್ಲ, ಸುಮಲತಾಗೆ ಬೆಂಬಲ ನೀಡಿಲ್ಲ: ಸಿದ್ದರಾಮಯ್ಯ

    ಗುಸು ಗುಸುನೂ ಇಲ್ಲ ಪಸಪಸನೂ ಇಲ್ಲ, ಸುಮಲತಾಗೆ ಬೆಂಬಲ ನೀಡಿಲ್ಲ: ಸಿದ್ದರಾಮಯ್ಯ

    – ಮೋದಿಗೆ ಅಧಿಕಾರಿದ ಪಿತ್ತ ತಲೆಗೆ ಹತ್ತಿದೆ

    ಮಂಡ್ಯ: ಗುಸು ಗುಸುನೂ ಇಲ್ಲ. ಪಸಪಸನೂ ಇಲ್ಲ, ನಾನು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸುತ್ತಿದ್ದೇನೆ ಎಂದು ಯಾರೋ ಹೇಳುತ್ತಿದ್ದಾರೆ. ಇದು ಸುಳ್ಳು, ಅವರಿಗೆ ಬೆಂಬಲ ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

    ಜಿಲ್ಲೆಯ ಮಳುವಳ್ಳಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ವೇಳೆ ಮಾತನಾಡಿದ ಮಾಜಿ ಸಿಎಂ, ನಾವು ಬಹಿರಂಗವಾಗಿಯೇ ನಿಖಿಲ್ ಅವರನ್ನು ಬೆಂಬಲಿಸುತ್ತಿದ್ದೇವೆ. ಯಾವುದೇ ಗುಸು ಗುಸು ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಎಂದರು. ಈ ವೇಳೆ ಎದ್ದು ನಿಂತ ಕಾರ್ಯಕರ್ತರೊಬ್ಬರು, ಮಾಧ್ಯಮದವರು ನಿಮ್ಮಲ್ಲೇ ಭಿನ್ನಪ್ರಾಯವಿದೆ ಎಂದು ತೋರಿಸುತ್ತಾರೆ. ನೀವು ಒಗ್ಗಟ್ಟಾಗಿ ಬನ್ನಿ. ಎಲ್ಲದಕ್ಕೂ ಮಾಧ್ಯಮದವರೇ ಕಾರಣ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ಮಾಧ್ಯಮದವರು ಸತ್ಯ ತೋರಿಸಿದರೆ ಸಾಕು. ನಮ್ಮ ಪರನೂ ಬೇಡ, ಅವರ ಪರವೂ ತೋರಿಸೋದು ಬೇಡ. ಜನ ಬುದ್ಧಿವಂತರಿದ್ದಾರೆ ಮಾಧ್ಯಮದಲ್ಲಿ ಬರೋದನ್ನ ನಂಬುವುದಿಲ್ಲ ಎಂದರು.

    ನಾನು ಹಾಗೂ ಎಚ್.ಡಿ.ದೇವೇಗೌಡರು ಕಳೆದ 4 ದಿನಗಳಿಂದ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಕೋಮುವಾದಿ ಬಿಜೆಪಿ ಸೋಲಿಸಲು ಜೆಡಿಎಸ್-ಕಾಂಗ್ರೆಸ್ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕಾರಿದ ಪಿತ್ತ ತಲೆಗೆ ಹತ್ತಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಮಹಾಮೈತ್ರಿಯ ಬಗ್ಗೆ ಗೇಲಿ ಮಾಡುತ್ತಿದ್ದಾರೆ. ಮೋದಿ ಅವರು ಈಗಾಗಲೇ ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ದೇಶದಲ್ಲಿ ಕಾಂಗ್ರೆಸ್ 50ರಿಂದ 60ವರ್ಷಗಳ ಕಾಲ ಅಧಿಕಾರ ನಡೆಸಿದೆ. ಯಾರು ಕೂಡ ಚುನಾವಣಾ ಸಂದರ್ಭದಲ್ಲಿ ವಿರೋಧ ಪಕ್ಷದ ಮುಖಂಡರ ಮನೆಯ ಮೇಲೆ ದಾಳಿ ನಡೆಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

    ಐಟಿ ದಾಳಿ ಮಾಡಲಿ ನಮ್ಮದೇನು ತಕರಾರು ಇಲ್ಲ. ಆದರೆ ಬಿಜೆಪಿಯವರ ಮನೆ ಮೇಲೆ ಯಾಕೆ ದಾಳಿ ನಡೆಯುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಕೆ.ಎಸ್.ಈಶ್ವರಪ್ಪ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಬೇಕು. ಈ ಹಿಂದೆ ಕೆ.ಎಸ್.ಈಶ್ವರಪ್ಪ ಅವರ ಮನೆ ಮೇಲೆ ಐಟಿ ದಾಳಿ ನಡೆದಾಗ ನೋಟು ಏಣಿಸುವ ಮಿಷನ್ ಸಿಕ್ಕಿತ್ತು. ಅವರೆಲ್ಲಾ ದೊಡ್ಡ ಖದೀಮರು ಎಂದು ದೂರಿದರು.

    ಬಿಜೆಪಿಯು ಮಂಡ್ಯದಲ್ಲಿ ಅಭ್ಯರ್ಥಿ ಹಾಕದೇ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದೆ. ಮೈಸೂರಿಗೆ ಮೊನ್ನೆ ಬಂದಿದ್ದ ಪ್ರಧಾನಿ ಮೋದಿ ಪಕ್ಷೇತರ ಅಭ್ಯರ್ಥಿಗೆ ಮತ ಹಾಕಿ ಎಂದಿದ್ದಾರೆ. ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಲ್ಲ, ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿಯವರು ಹೇಳುತ್ತಾರೆ. ಹೀಗಾಗಿ ಸುಮಲತಾ ಅಂಬರೀಶ್ ಅವರಿಗೆ ವೋಟ್ ಹಾಕಬೇಕಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

    ಅನಂತ್‍ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸಿ ಆರ್ ಎಸ್‍ಎಸ್ ಹುಡುಗನಿಗೆ ಟಿಕೆಟ್ ನೀಡಲಾಗಿದೆ. ಅವನು ಸಂವಿಧಾನವನ್ನು ಬಿ.ಆರ್.ಅಂಬೇಡ್ಕರ್ ರಚಿಸಿದ್ದಾರೆ. ಹೀಗಾಗಿ ಅವರ ಪ್ರತಿಮೆ ಸುಟ್ಟು ಹಾಕಬೇಕು ಎಂದು ಹೇಳುತ್ತಾನೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅನುಮತಿ ಇಲ್ಲದೇ ಅವನು ಆ ರೀತಿ ಹೇಳಲು ಸಾಧ್ಯವೇ? ಅವನು ಸೂರ್ಯ ಅಲ್ಲ, ಅಮವಾಸ್ಯೆ ಎಂದು ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಹರಿಹಾಯ್ದರು.

    ನಾನು ಇಂದಿರಾ ಕ್ಯಾಟೀನ್ ತೆರೆದೆ. ಪ್ರಧಾನಿ ಮೋದಿ ಮನ್ ಕೀ ಬಾತ್, ಮನ್ ಕೀ ಬಾತ್ ಅಂತಾರೆ. ಅದ್ಯಾವ ಬಾತೋ ಗೊತ್ತಿಲ್ಲ. ಕನಿಷ್ಠ ವಾಂಗಿ ಬಾತ್ ಆದ್ರೂ ಕೊಡೋ ಮಾರಾಯ ಅಂತ ಅವರಿಗೆ ಹೇಳಬೇಕು. ಬಿ.ಎಸ್.ಯಡಿಯೂರಪ್ಪ ಸಾಲಮನ್ನಾ ಮಾಡು ಅಂದ್ರೆ ನೋಟ್ ಪ್ರಿಂಟ್ ಮಾಡೋ ಯಂತ್ರ ಇಲ್ಲ ಅಂತ ಹೇಳುತ್ತಾರೆ ಎಂದು ಮಾಜಿ ಸಿಎಂ ವ್ಯಂಗ್ಯವಾಡಿದರು.

    ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ಮೋದಿ ಅವರು ಅಧಿಕಾರದಲ್ಲಿ ಇದ್ದಾಗಲೇ ಪಂಚ ರಾಜ್ಯ ಚುನಾವಣೆಯಲ್ಲಿ ಸೋತಿದ್ದಾರೆ. ಕರ್ನಾಟಕದ ಉಪಚುನಾವಣೆಯಲ್ಲೂ ಲಕ್ಷಾಂತರ ಮತಗಳಿಂದ ಬಿಜೆಪಿ ಸೋತಿತ್ತು. ನಾನು ಕೂಡ ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದೇನೆ. ಜನರ ಪ್ರತಿಕ್ರಿಯೆ ನೋಡಿದರೆ ರಾಜ್ಯದ 28 ಕ್ಷೇತ್ರದಲ್ಲೂ ನಾವು ಗೆದ್ದೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.

    ಮತದಾನದ ಹಿಂದಿನ ದಿನ ರಜೆ ಇದೆ. ರಜೆ ಇದೆ ಅಂತ ಎಲ್ಲಾದರು ಹೋಗಿಬಿಟ್ಟಿರಾ? ಮತಹಾಕಿ ಎಲ್ಲಾದರು ಹೋಗಿ, ಮೊದಲು ಮತಚಲಾಯಿಸಿ ಎಂದು ಮತದಾರರಿಗೆ ಮನವಿ ಮಾಡಿಕೊಂಡರು.

  • ಜಯಲಲಿತಾರನ್ನು ಮೀರಿಸುವ ಮಾಯಾಂಗನೆಯಂತೆ ಹೋರಾಟ: ಶಿವರಾಮೇಗೌಡ

    ಜಯಲಲಿತಾರನ್ನು ಮೀರಿಸುವ ಮಾಯಾಂಗನೆಯಂತೆ ಹೋರಾಟ: ಶಿವರಾಮೇಗೌಡ

    – ವಿರೋಧ ಪಕ್ಷದವರು ಟೂರಿಂಗ್ ಟಾಕೀಸ್
    – ಎಂಪಿ ಗಿರಿ ಇಲ್ಲ ಅಂದ್ರೆ ನಾನು ಬೀದಿಗೆ ಬರಲ್ಲ

    ಮಂಡ್ಯ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರನ್ನು ಮೀರಿಸುವ ಮಾಯಾಂಗನೆಯಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಸಂಸದ ಶಿವರಾಮೇಗೌಡ, ಸುಮಲತಾ ಅಂಬರೀಶ್ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ದಾರೆ.

    ನಾಗಮಂಗಲ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದರು, ಟೂರಿಂಗ್ ಟಾಕೀಸ್‍ಗೆ ಮಾರು ಹೋಗಬೇಡಿ. ಎಲ್ಲರ ಮೇಲೆ ಆರೋಪ ಮಾಡುವ ನೀಚ ಬುದ್ಧಿ ಇರುವವರಿಗೆ ಅಧಿಕಾರ ಕೊಡಬೇಡಿ. ನಿಮ್ಮ ಸಾವಿಗೆ ಬರುವವರು ನಾವು. ನಿಮ್ಮ ಪಲ್ಲಕ್ಕಿ ಹೊರುವವರು ನಾವು. ವಿರೋಧ ಪಕ್ಷದವರು ಟೂರಿಂಗ್ ಟಾಕೀಸ್, ಅವರ ಸಿನಿಮಾವನ್ನು ದುಡ್ಡು ಕೊಟ್ಟು ನೋಡುತ್ತೇವೆ. ಅವರನ್ನು ನೋಡಲು ಹೋದವರೆಲ್ಲ ವೋಟ್ ಹಾಕಲ್ಲ. ಅವರ ಹಿಂದೆ ಓಡಾಡುವವರಿಗೆ ಯಾವ ಪಕ್ಷಕ್ಕೆ ಹೋಗಬೇಕು ಅಂತ ತೀರ್ಮಾನಿಸುವಂತೆ ಈಗಲೂ ಹೇಳುತ್ತೇನೆ ಎಂದು ಹೇಳಿದರು.

    ಎಂಪಿ ಗಿರಿ ಇಲ್ಲ ಅಂದ್ರೆ ನಾನು ಬೀದಿಗೆ ಬರಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮನೆಯಲ್ಲೇ ಇರುತ್ತೇನೆ. ಇದು ನನ್ನ ಮರ್ಯಾದೆ ಪ್ರಶ್ನೆ. ನನ್ನ ಅಭಿಮಾನಿಗಳು ನನ್ನ ಮಾತು ಕೇಳದಿದ್ದರೆ ಅವರು ಅಭಿಮಾನಿಗಳೇ ಅಲ್ಲ ಎಂದರು.

    ದಿಗ್ಗಜರು ಒಂದೇ ವೇದಿಕೆಯಲ್ಲಿ ಕುಳಿತು ಒಟ್ಟಿಗೆ ಹೋಗುವ ತೀರ್ಮಾನ ಕೈಗೊಂಡಿದ್ದಾರೆ. ಎಚ್.ಡಿ.ದೇವೇಗೌಡರ ಗರಡಿಯಲ್ಲೇ ಪಳಗಿ, ಯಾವುದೇ ಕೆಲಸ ಮಾಡಬಲ್ಲೇ ಎಂದು ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಜೊತೆಯಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಅವರನ್ನು ಗೆಲ್ಲಿಸಲು ಮುಂದಾದ ಸಚಿವ ಪುಟ್ಟರಾಜು ಅವರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದರು.

    ಭಾರತದಲ್ಲಿ ಎಲ್ಲ ಕಡೆಯೂ ಚುನಾವಣೆ ನಡೆಯುತ್ತಿದೆ. ಆದರೆ ಮಾಧ್ಯಮ ಮಿತ್ರರು ಮಂಡ್ಯವನ್ನು ಹೈವೋಲ್ಟೇಜ್ ಕ್ಷೇತ್ರ ಮಾಡಿದ್ದಾರೆ. ಇದು ಬೇಕೇ? ಮಂಡ್ಯ ಜಿಲ್ಲೆಯನ್ನು ಮಾಧ್ಯಮದವರು ಪೆಡಂಭೂತ ಎಂಬ ರೀತಿ ಎಂಬಂತೆ ತೋರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ತೋರಿಸಿದ ರೀತಿ ಇನ್ಯಾರನ್ನೂ ತೋರಿಸಿಲ್ಲ. ಬಿಜೆಪಿಗೆ ಮಂಡ್ಯದಲ್ಲಿ ಅಭ್ಯರ್ಥಿ ಹಾಕಲು ಯೋಗ್ಯತೆಯಿಲ್ಲ. ಹಿಂಬಾಗಿಲ ಮೂಲಕ ಸಪೋರ್ಟ್ ಮಾಡಿದ್ದಾರೆ. ಕುಟುಂಬ ರಾಜಕಾರಣ ಅಂತಾರೆ, ಎಚ್.ಡಿ.ದೇವೇಗೌಡರ ಮೊಮ್ಮಕ್ಕಳು ರಾಜಕೀಯಕ್ಕೆ ಬರಬಾರದೇ ಎಂದು ಸಭೆಯಲ್ಲಿ ಸೇರಿದ್ದ ಜನರಿಗೆ ಪ್ರಶ್ನಿಸಿದರು.

    ಸಭೆ ಆರಂಭವಾಗುವುದಕ್ಕೂ ಮುನ್ನ ವೇದಿಕೆ ಮೇಲಿದ್ದ ಬ್ಯಾನರ್‍ನಲ್ಲಿ ಮಾಜಿ ಶಾಸಕ ಚಲುವರಾಯಸ್ವಾಮಿ ಭಾವಚಿತ್ರವೇ ಇರಲಿಲ್ಲ. ಇದರಿಂದಾಗಿ ತಕ್ಷಣವೇ ಎಚ್ಚೆತ್ತುಕೊಂಡ ಸ್ಥಳೀಯ ಕೆಲ ಮುಖಂಡರು ಬ್ಯಾನರ್ ಅನ್ನು ತೆರವುಗೊಳಿಸಿದರು. ಸಭೆಯಲ್ಲಿ ಸೇರಿದ್ದ ಜನರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿಜವಾದ ಜೋಡೆತ್ತುಗಳು. ಬಣ್ಣ ಹಚ್ಚಿಕೊಳ್ಳುವವರಲ್ಲ ಜೋಡೆತ್ತುಗಳಲ್ಲ ಎಂದು ಘೋಷಣೆ ಕೂಗಿದರು.

  • ತೊಂದರೆ ನೀಡಿ ಒತ್ತಡ ಹಾಕಿದ್ದರಿಂದ ನಿಷ್ಠಾವಂತ ಡಿಸಿ ವರ್ಗಾವಣೆ: ಸುಮಲತಾ ಅಂಬರೀಶ್

    ತೊಂದರೆ ನೀಡಿ ಒತ್ತಡ ಹಾಕಿದ್ದರಿಂದ ನಿಷ್ಠಾವಂತ ಡಿಸಿ ವರ್ಗಾವಣೆ: ಸುಮಲತಾ ಅಂಬರೀಶ್

    ಮಂಡ್ಯ: ನಿಷ್ಠಾವಂತ ಡಿಸಿಯಾಗಿದ್ದ ಮಂಜುಶ್ರೀ ಅವರಿಗೆ ತೊಂದರೆ ಕೊಟ್ಟು, ಒತ್ತಡ ಹಾಕಿ ಕೆಲಸ ಮಾಡಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲು ನಾನು ಹೇಳಿದ್ದನ್ನೆಲ್ಲಾ ಆರೋಪ ಎಂದು ಹೇಳುತ್ತಿದ್ದರು. ಇದೀಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ನನ್ನ ಮಾತಲ್ಲಿ ನಿಜ ಇದ್ದ ಕಾರಣ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ ಅವರನ್ನು ವರ್ಗಾ ಮಾಡಿದ್ದಾರೆ. ನನಗೆ ಸಿಆರ್‍ಪಿಎಫ್ ಭದ್ರತೆ ಬೇಕು ಎಂದು ಕೇಳಿದ್ದೇನೆ ಅಂದ್ರು.

    ಇದೇ ವೇಳೆ ಅಂಗವಿಕಲ ಹೆಣ್ಣು ಮಗಳು ಕಷ್ಟಪಟ್ಟು ಐಎಎಸ್ ಮಾಡಿ ನಿಷ್ಠಾವಂತಳಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಒಬ್ಬಳು ಹೆಣ್ಣು ಮಗಳ ಕಷ್ಟವನ್ನು ಅರ್ಥ ಮಾಡಿಕೊಳ್ಳದೇ ಅವರನ್ನು ಇಲ್ಲಿಂದ ಓಡಿಸಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಈ ಮಾತಲ್ಲಿ ಅರ್ಥವೇ ಇಲ್ಲ. ಯಾಕಂದ್ರೆ ಅಂಥವರಿಗೆ ಮೊದಲು ತೊಂದರೆ ಕೊಟ್ಟು, ಒತ್ತಡ ಹೇರಿದ್ದಾರೆ. ಹೀಗಾಗಿ ಸರ್ಕಾರದ ವಿಷಯದಲ್ಲಿ ಆ ಮಾತುಗಳನ್ನು ಆಡಲೇ ಬಾರದು ಅಂದ್ರು.

    ಸಿದ್ದರಾಮಯ್ಯಗೆ ಟಾಂಗ್:
    ಪಕ್ಷೇತರ ಅಭ್ಯರ್ಥಿ ಸುಮಲತಾರನ್ನು ಸೋಲಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಟಾಂಗ್ ಕೊಟ್ಟ ಸುಮಲತಾ, ಕಾವೇರಿ ನೀರಿಗಾಗಿ ದೇವೇಗೌಡರು ಮಾತ್ರ ಹೋರಾಟ ಮಾಡಿಲ್ಲ. ನನ್ನ ಗಂಡ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಕಾವೇರಿ ನೀರಿಗಾಗಿ ರಾಜೀನಾಮೆ ಕೊಟ್ಟ ಏಕೈಕ ವ್ಯಕ್ತಿ ಅಂಬರೀಶ್ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಮಾಯಾಂಗನೆ ಹೇಳಿಕೆಗೆ ಪ್ರತಿಕ್ರಿಯೆ:
    ಇದೇ ವೇಳೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರನ್ನು ಮೀರಿಸುವ ಮಾಯಾಂಗನೆಯಾಗಿ ಹೋರಾಟ ಮಾಡುತ್ತಿದ್ದಾರೆ ಸಂಸದ ಶಿವರಾಮೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, ಜೆಡಿಎಸ್ ನಲ್ಲಿ ಯಾರು ತಾನೆ ಒಳ್ಳೆಯ ಮಾತನ್ನಾಡುತ್ತಾರೆ. ಅವರ ಹೇಳಿಕೆಗೆ ನಾನು ಬೆಲೆ ಕೊಡಲ್ಲ. ಜನ ಕೂಡ ಅವರ ಮಾತಿಗೆ ಬೆಲೆ ಕೋಡೋದಿಕ್ಕೆ ಸಾಧ್ಯನೇ ಇಲ್ಲ. ಹೀಗಾಗಿ ಅವರ ಮಾತಿಗೆ ನಾನೇನು ತಲೆಕೆಡಿಸಿಕೋಳ್ಳೋದಕ್ಕೆ ಹೋಗಲ್ಲ ಎಂದರು.