Tag: ಸುಮಲತಾ ಅಂಬರೀಶ್

  • ಮಾಜಿ ಶಾಸಕ ನರೇಂದ್ರಸ್ವಾಮಿಗೆ ಶಾಸಕ ಅನ್ನದಾನಿ ಬಹಿರಂಗ ಸವಾಲು

    ಮಾಜಿ ಶಾಸಕ ನರೇಂದ್ರಸ್ವಾಮಿಗೆ ಶಾಸಕ ಅನ್ನದಾನಿ ಬಹಿರಂಗ ಸವಾಲು

    ಮಂಡ್ಯ: ಜಿಲ್ಲೆಯಲ್ಲಿ ದೋಸ್ತಿ ಕುಸ್ತಿ ಮತ್ತಷ್ಟು ಉಲ್ಬಣವಾಗಿದ್ದು, ಮೈತ್ರಿ ಧರ್ಮದ ಪಾಲನೆ ವಿಚಾರವಾಗಿ ಮಹದೇಶ್ವರ ಬೆಟ್ಟದಲ್ಲಿ ಪ್ರಮಾಣ ಮಾಡಲು ಬರುವಂತೆ ಶಾಸಕ ಅನ್ನದಾನಿ ಅವರು ಮಾಜಿ ಶಾಸಕ ನರೇಂದ್ರಸ್ವಾಮಿಗೆ ಸವಾಲು ಎಸೆದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರಸ್ವಾಮಿ ಸುಮಲತಾ ಪರ ಪ್ರಚಾರ ಮಾಡದೆ ತಟಸ್ಥವಾಗಿದ್ದೆ ಎಂದು ಹೇಳುತ್ತಾರೆ. ಹಾಗೊಂದು ವೇಳೆ ಸುಮಲತಾ ಪರ ಚುನಾವಣಾ ಪ್ರಚಾರ ಮಾಡಿಯೇ ಇಲ್ಲ ಅನ್ನೋದಾದ್ರೆ ಮಲೈ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲಿ. ನನ್ನ ಜೊತೆ ಬರಲು ಸಾಧ್ಯವಿಲ್ಲ ಅನ್ನೋದಾದ್ರೆ ಅವರೇ ಹೋಗಿ ಪ್ರಮಾಣ ಮಾಡಿ ಬರಲಿ. ಆ ಬಳಿಕ ನಾನು ಹೋಗಿ ಪ್ರಮಾಣ ಮಾಡುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ.

    ಯಾವಾಗಲೂ ದೇವರ ಮೇಲಿನ ಭಕ್ತಿಯಿಂದ ಹಣೆ ಮೇಲೆ ಬೊಟ್ಟು ಇಡುತ್ತಾರೆ ಅದಕ್ಕಾದರೂ ಬೆಲೆ ಬರಲಿ. ಸುಮಲತಾ ಪರ ಪ್ರಚಾರ ಮಾಡಿಲ್ಲ ಎಂದರೆ ಗ್ರಾಮಪಂಚಾಯಿತಿ ಮಟ್ಟದ ಕಾರ್ಯಕರ್ತರ ಸಭೆ ಏಕೆ ಕರೆಯಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

    ನಾವು ಗುಲಾಮಗಿರಿ ರಾಜಕೀಯ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದ್ರೆ ಯಾರು ಗುಲಾಮಗಿರಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಾಬೀತು ಪಡಿಸಲಿ. ರಾಜಕಾರಣಿಗಳೆಲ್ಲರೂ ಮತದಾರರ ಗುಲಾಮರು. ಇವರು ಯೋಜನೆ ಸರಿಯಾಗಿ ರೂಪಿಸದೇ ಅಧಿಕಾರಿಗಳು ಕೆಲಸ ನಿಲ್ಲಿಸಿದರೆ ನಾನೇ ನಿಲ್ಲಿಸಿದೆ ಅಂತಾರೆ. ಭೀಮಾನದಿ ಕಾಮಗಾರಿಯ ಯೋಜನೆ ಹೊನ್ನಗನಹಳ್ಳಿಯಿಂದ ಏಕೆ ತರಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ.

    ಸಚಿವ ಡಿಕೆಶಿ ಅವರು ನೀರಾವರಿ ಯೋಜನೆ ರೂಪಿಸಿ ಮಳವಳ್ಳಿಯಿಂದ ನೀರು ತೆಗೆದುಕೊಂಡು ಹೋಗಿದ್ದಾರೆ. ಆ ಯೋಜನೆಯಲ್ಲೇ ನಮ್ಮ ಭಾಗದ ಹಳ್ಳಿಗೆ ನೀರು ತರಬಹುದಿತ್ತು. ಏಕೆ ಮಾಡಲಿಲ್ಲ ಎಂದು ಶಾಸಕರು ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಸುಮಲತಾಗೆ ಹಾಕಿದ್ದ ಮೊದಲ ಮತ ಅಸಿಂಧು

    ಸುಮಲತಾಗೆ ಹಾಕಿದ್ದ ಮೊದಲ ಮತ ಅಸಿಂಧು

    ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಹಾಕಿದ್ದ ಮೊದಲ ಮತ ಅಸಿಂಧು ಆಗಿದೆ.

    ಸುಮಲತಾ ಅವರಿಗೆ ಮೊದಲ ಅಂಚೆ ಮತ ಹಾಕಿದ್ದ ಯೋಧನ ಮತವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ. ಮಂಡ್ಯ ಮೂಲದ ಸಿಆರ್‌ಪಿಎಫ್‌ ಯೋಧ ರಾಜನಾಯಕ್ ಮತವನ್ನು ಆಯೋಗ ಅಸಿಂಧುಗೊಳಿಸಿದೆ.

    ರಾಜನಾಯಕ್ ಅಂಚೆ ಮತದಾನ ಮೂಲಕ ಸುಮಲತಾ ಅವರಿಗೆ ಮತ ಹಾಕಿದ್ದರು. ಯೋಧ ತಾನು ಸುಮಲತಾಗೆ ಮತ ಹಾಕಿದ್ದನ್ನ ಸೆಲ್ಫಿ ಮೂಲಕ ಫೇಸ್‍ಬುಕ್‍ಗೆ ಹಾಕಿ ಪ್ರಚಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮತದಾನದ ಗೌಪ್ಯತೆ ಹಾಳುಮಾಡಿದ್ದಕ್ಕೆ ಯೋಧನ ಮತವನ್ನು ಚುನಾವಣಾ ಆಯೋಗ ಅಸಿಂಧುಗೊಳಿದೆ.

    ಗೌಪ್ಯ ಮತದಾನವನ್ನು ಮರೆತು ಹಕ್ಕಿನ ದುರ್ಬಳಕೆ ಬಹಿರಂಗಗೊಳಿಸದ್ದಕ್ಕೆ ಯೋಧನ ವಿರುದ್ಧ ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ಯೋಧನ ಮತವನ್ನು ಅಸಿಂಧುಗೊಳಿಸಿ ಶಿಸ್ತು ಕ್ರಮಕೈಗೊಂಡಿದೆ.

    ಪೋಸ್ಟ್‌ನಲ್ಲಿ ಏನಿತ್ತು?
    ಯುಗಾದಿ ಹಬ್ಬದ ದಿನ ನಿಮ್ಮ ಸಿಆರ್‌ಪಿಎಫ್‌ ಯೋಧನಿಂದ ಸುಮಲತಾ ಅಂಬರೀಶ್ ಮೇಡಂ ಅವರಿಗೆ ಮೊದಲನೇ ವೋಟ್ ಹಾಕುವುದರ ಮೂಲಕ ಅವರಿಗೆ ಒಳ್ಳೆದಾಗಲಿ. ಲೀಡಿಂಗ್‍ನಿಂದ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇದೆ. ನಮ್ಮ ಮಂಡ್ಯ ತುಂಬಾ ಅಭಿವೃದ್ಧಿ ಹೊಂದಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದು ನಿಲ್ಲಬೇಕು. ನಮ್ಮ ರೈತರು ಕಷ್ಟದಿಂದ ಹೊರಗೆ ಬರಬೇಕು. ನಮ್ಮಂತ ಯೋಧರ ಕುಟುಂಬಕ್ಕೆ ಒಳ್ಳೆದಾಗಬೇಕು. ಈ ಹಿಂದೆ ನಮ್ಮ ಅಂಬರೀಶ್ ಅಣ್ಣ ಮಂಡ್ಯಕ್ಕೆ ಎಷ್ಟೋ ಕೊಡುಗೆ ನೀಡಿದ್ದಾರೆ. ಅವರ ಪ್ರೀತಿ ನಿಮ್ಮಲ್ಲಿದೆ ದಯವಿಟ್ಟು ಎಲ್ಲರು ಸುಮಲತಾ ಅವರಿಗೆ ಸಪೋರ್ಟ್ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದರು. ಜೊತೆಗೆ ತಾವು ಮತ ಮಾಡಿದ್ದ ಫೋಟೋ ಪೋಸ್ಟ್ ಮಾಡಿದ್ದರು.

  • ಸುಮಲತಾ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ: ಅಶ್ವಥ್ ನಾರಾಯಣ್

    ಸುಮಲತಾ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ: ಅಶ್ವಥ್ ನಾರಾಯಣ್

    ಮಂಡ್ಯ: ಫಲಿತಾಂಶ ಬರುವುದಕ್ಕೂ ಮುನ್ನವೇ, ಸುಮಲತಾ ಅಂಬರೀಶ್ ಗೆಲುವಿಗೆ ಸಹಕರಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರಿಗೆ ಧನ್ಯವಾದಗಳು ಎಂದು ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.

    ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯ ನಂತರ ಮಾತನಾಡಿದ ಅಶ್ವಥ್ ನಾರಾಯಣ್, ಸುಮಲತಾ ಈಗಾಗಲೇ ಗೆದ್ದಾಗಿದೆ. ಫಲಿತಾಂಶ ಬರುವುದೊಂದೆ ಬಾಕಿ ಉಳಿದಿದೆ. ನಾಗಮಂಗಲ ಮತ್ತು ಕೆ.ಆರ್ ಪೇಟೆಗೆ ತಾಲೂಕುಗಳಿಗೆ ಭೇಟಿ ನೀಡಿ ವರದಿ ಪಡೆದಿದ್ದೇನೆ. ಸುಮಲತಾ ಎಲ್ಲ ಕಡೆ ಲೀಡ್ ಪಡೆಯುತ್ತಾರೆ. ಹೀಗಾಗಿ ಅವರು ಗೆಲ್ಲುವುದು ನಿಶ್ಚಿತ ಎಂದು ಹೇಳಿ ಅಭಿನಂದನೆ ತಿಳಿಸಿದರು.

    ಕೆ.ಆರ್ ಪೇಟೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಗೆದ್ದು ಅಧಿಕಾರಕ್ಕೆ ಬರುತ್ತಾರೆ ಎಂದು ಅಶ್ವಥ ನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನಿಂದ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಅಖಾಡಕ್ಕೆ ಧುಮುಕಿದ್ದರು.
    ಏಪ್ರಿಲ್ 18 ರಂದು ಮಂಡ್ಯದಲ್ಲಿ ಎರಡನೇ ಹಂತದಲ್ಲಿ ಲೋಕಸಭಾ ಚುನಾವಣೆ ನಡೆದಿದ್ದು, ಮೇ 23 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

  • ರಮ್ಯಾನ ಮುಂದಿಟ್ಟು ರಾಜಕೀಯ ಮಾಡಿದ್ದ ಸುರೇಶ್‍ಗೌಡ ಶಿಖಂಡಿಯಲ್ವಾ: ಸೋಮಶೇಖರ್ ತಿರುಗೇಟು

    ರಮ್ಯಾನ ಮುಂದಿಟ್ಟು ರಾಜಕೀಯ ಮಾಡಿದ್ದ ಸುರೇಶ್‍ಗೌಡ ಶಿಖಂಡಿಯಲ್ವಾ: ಸೋಮಶೇಖರ್ ತಿರುಗೇಟು

    ಮಂಡ್ಯ: ಜೆಡಿಎಸ್ ಶಾಸಕ ಸುರೇಶ್‍ಗೌಡ ಅವರು ಮಾಜಿ ಸಂಸದೆ ರಮ್ಯಾ ಅವರನ್ನು ಮುಂದಿಟ್ಟು ರಾಜಕೀಯ ಮಾಡಿದ್ದರು. ಆಗ ತಾನು ಶಿಂಖಡಿ ರಾಜಕಾರಣ ಮಾಡುತ್ತಿದ್ದೇನೆ ಅಂತ ತಿಳಿಯಲಿಲ್ಲವೇ ಎಂದು ಸುಮಲತಾ ಬೆಂಬಲಿಗ ಬೇಲೂರು ಸೋಮಶೇಖರ್ ತಿರುಗೇಟು ನೀಡಿದ್ದಾರೆ.

    ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಮ್ಯಾ ಅವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ ಸುರೇಶ್‍ಗೌಡರನ್ನು ಏನೆಂದು ಕರೆಯಬೇಕು? ಜೆಡಿಎಸ್‍ನವರು ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡುತ್ತಿದ್ದಾರೆ. ಈ ರೀತಿಯ ಪದ ಬಳಕೆ ಮಾಡುವುದನ್ನು ಬಿಡಬೇಕು ಎಂದು ಆಕ್ರೋಶ ಹೊರ ಹಾಕಿದರು.

    ಲೋಕಸಭಾ ಚುನಾವಣೆ ಪ್ರಚಾರ ಆರಂಭದಿಂದಲೂ ಜೆಡಿಎಸ್‍ನವರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಚುನಾವಣೆ ಮುಗಿದರೂ ಟೀಕೆ ಮಾಡುತ್ತಿದ್ದಾರೆ ಅಸಮಾಧಾನ ಹೊರ ಹಾಕಿದರು.

    ಸುರೇಶ್‍ಗೌಡ ಹೇಳಿದ್ದೇನು?:
    ಮಂಡ್ಯ ಜಿಲ್ಲೆಯಲ್ಲಿ ಕೆಲವು ಕಾಂಗ್ರೆಸ್ ನಾಯಕರು ಓರ್ವ ಮಹಿಳೆಯನ್ನು ಮುಂದಿಟ್ಟುಕೊಂಡು ಶಿಖಂಡಿ ರಾಜಕಾರಣ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಮೂಲ ಕಾಂಗ್ರೆಸ್ಸಿಗರು ಮಾತ್ರ ಮೈತ್ರಿ ಪಾಲನೆ ಮಾಡಿದ್ದಾರೆ. ಇತ್ತೀಚೆಗೆ ಪಕ್ಷ ಸೇರಿದವರು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪ್ರಚಾರ ಮಾಡಿದ್ದಾರೆ ಎಂದು ಜೆಡಿಎಸ್ ಶಾಸಕ ಸುರೇಶ್‍ಗೌಡ ಹೇಳಿದ್ದರು.

  • ಮಾತಲ್ಲೇ ಮನೆ ಕಟ್ಟಿದೋರು ಎಲ್ಲೋದ್ರು- ಮಂಡ್ಯ ಜನ ಪ್ರಶ್ನೆ

    ಮಾತಲ್ಲೇ ಮನೆ ಕಟ್ಟಿದೋರು ಎಲ್ಲೋದ್ರು- ಮಂಡ್ಯ ಜನ ಪ್ರಶ್ನೆ

    ಮಂಡ್ಯ: ಚುನಾವಣಾ ಸಮಯದಲ್ಲಿ ಮಾತಿನಲ್ಲೇ ಮನೆ ಕಟ್ಟಿದ್ದ ರಾಜಕಾರಣಿಗಳು ಈಗ ಎಲ್ಲಿ ಹೋಗಿದ್ದಾರೆ ಎಂದು ಮಂಡ್ಯ ಜನ ಪ್ರಶ್ನಿಸುತ್ತಿರುವ ವಿಚಾರವೊಂದು ಬೆಳಕಿಗೆ ಬಂದಿದೆ.

    ಹೌದು. ಚುನಾವಣೆಯ ಸಮಯದಲ್ಲಿ ಮನೆ ಬಾಗಿಲಿಗೆ ಹೋಗಿ ಮತದಾರರ ಕೈಕಾಲು ಹಿಡಿದು ಅವರ ಮನೆಗೆ ಹೋಗಿ ಟೀ, ಕಾಫಿ, ಎಳನೀರು ಕುಡಿದು ಮತ ಭಿಕ್ಷೆ ಬೇಡುವ ತಂತ್ರಗಳೆಲ್ಲಾ ನಮ್ಮ ರಾಜಕೀಯ ವ್ಯವಸ್ಥೆಗೆ ಹಳೆಯದ್ದಾಗಿದೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ರಾಜಕಾರಣಿಗಳು ನಿಮ್ಮೂರಲ್ಲೇ ಮನೆ ಮಾಡಿ, ನಿಮ್ಮ ಜೊತೆಗೆಯೇ ಇರುತ್ತೇನೆ ಅನ್ನೋ ಹೊಸ ತಂತ್ರ ಬೆಳೆಸಿಕೊಂಡಿದ್ದಾರೆ. ಇದಕ್ಕೆ ನಟಿ ಸುಮಲತಾ ಅಂಬರೀಶ್ ಮತ್ತು ಕುಮಾರಸ್ವಾಮಿ ಪುತ್ರ ನಿಖಿಲ್ ಹೊರತಾಗಿಯೂ ಇಲ್ಲ.

    ಎಲೆಕ್ಷನ್‍ಗೂ ಮೊದಲೇ ಮಂಡ್ಯದಲ್ಲೇ ಮನೆ ಮಾಡಿ ಮನೆ-ಮಗಳು ಎಂಬ ತನ್ನ ಹೇಳಿಕೆಯನ್ನು ಸಾಬೀತು ಪಡಿಸಲು ಸುಮಲತಾ ಅವರು ಮೈಸೂರಿನಿಂದಲೇ ಚುನಾವಣಾ ಪ್ರಚಾರದ ಹೊತ್ತಲ್ಲೂ ದಿನನಿತ್ಯ ಓಡಾಡುತ್ತಾ ಇದ್ದರು. ಇನ್ನು ನಿಮ್ಮೂರಲ್ಲೇ ಆಫೀಸ್ ಓಪನ್ ಮಾಡುತ್ತೇನೆ, ಇಲ್ಲೇ ಜಮೀನು ಖರೀದಿಸಿ ಇಲ್ಲೇ ಇರುತ್ತೇನೆ ಎಂದು ನಟ ನಿಖಿಲ್ ಕೂಡ ಮಾತು ಕೊಟ್ಟಿದ್ದರು.

    ಆದರೆ ಮಂಡ್ಯದಲ್ಲಿ ಮತದಾನ ಮುಗಿದು ಇವತ್ತಿಗೆ 16 ದಿನಗಳೇ ಕಳೆದು ಹೋಗಿದೆ. ಮಳೆ, ಗಾಳಿ ಬೀಸಿ ವಿದ್ಯುತ್ ಕಂಬ, ಮರಗಳು ಉರುಳಿವೆ, ಬೆಳೆಗಳು ನಾಶವಾಗಿವೆ. ಹಲವಾರು ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲದೇ ಜನ ಒದ್ದಾಡುತ್ತಿದ್ದಾರೆ. ಹೀಗಾಗಿ ಮಾತಿನಲ್ಲೇ ಮನೆ ಕಟ್ಟಿದವರು ಎಲ್ಲಿ ಹೋಗಿದ್ದಾರೆ ಎಂದು ಇದೀಗ ಮಂಡ್ಯ ಜನ ಪ್ರಶ್ನೆ ಮಾಡುತ್ತಿದ್ದಾರೆ.

     

  • ಮಂಡ್ಯ ರೆಬೆಲ್ಸ್ ಡಿನ್ನರ್: ಸಿಎಂಗೆ ಸೆಡ್ಡು ಹೊಡೆದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

    ಮಂಡ್ಯ ರೆಬೆಲ್ಸ್ ಡಿನ್ನರ್: ಸಿಎಂಗೆ ಸೆಡ್ಡು ಹೊಡೆದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

    ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ರೆಬೆಲ್ ನಾಯಕರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರೊಂದಿಗೆ ಡಿನ್ನರ್ ಮಾಡಿದ ವಿಡಿಯೋ ವಿಚಾರವಾಗಿ ಸಿಎಂ ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗೆ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೆಡ್ಡು ಹೊಡೆದಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯ ರೆಬೆಲ್ಸ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳುತ್ತಾರೆ. ಆದರೆ ಒಟ್ಟಿಗೆ ಭೋಜನಕೂಟದಲ್ಲಿ ಭಾಗವಹಿಸಿದರೆ ಅದನ್ನು ತಪ್ಪು ಹೇಳಲು ಸಾಧ್ಯವಿಲ್ಲ. ನಮ್ಮವರು ತಪ್ಪು ಮಾಡಿದ್ದಾರೆ ಎನ್ನುವುದಕ್ಕೆ ಯಾವುದಾದರೂ ಸಾಕ್ಷಿ ಬೇಕಾಗುತ್ತದೆ. ಈಗಾಗಲೇ ನೋಡಿದರೆ ನಮ್ಮ ಪಕ್ಷದಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಪರೋಕ್ಷವಾಗಿ ರೆಬೆಲ್ಸ್ ನಾಯಕರಿಗೆ ಬೆಂಬಲ ವ್ಯಕ್ತಪಡಿಸಿದರು.

    ನಾಯಕರು ಯಾವುದೇ ರಾಜಕೀಯ ವೇದಿಕೆಯಲ್ಲಿ ಭಾಗವಹಿಸಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೇವೆ, ತಪ್ಪು ನಡೆದಿದೆ ಎಂದರೆ ಕ್ರಮಕೈಗೊಳ್ಳುತ್ತೇವೆ. ಮಂಡ್ಯ, ಮೈಸೂರಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂಬುವುದನ್ನು ಒಪ್ಪಿಕೊಳ್ಳುತ್ತೇನೆ. ಇದಕ್ಕೆ ಬೇರೆ ಬೇರೆ ಕಾರಣಗಳಿದ್ದು, ಅದನ್ನು ಮುಚ್ಚಿ ಹಾಕುವ ಕೆಲಸ ಮಾಡಲ್ಲ ಎಂದರು.

    ಕೆಲ ಕ್ಷೇತ್ರಗಳಲ್ಲಿ ನಮಗೇ ಜೆಡಿಎಸ್ ನಾಯಕರು ಬೆಂಬಲ ಕೊಟ್ಟಿಲ್ಲ. ಕೆಲ ಕಡೆ ಬಿಜೆಪಿಯವರೇ ನಮಗೇ ಬೆಂಬಲ ಕೊಟ್ಟಿದ್ದಾರೆ. ರಾಜಕೀಯ ವಿಚಾರದಲ್ಲಿ ಒಂದೇ ಪಕ್ಷದ ನಾಯಕರು ಕೂಡ ಕೆಲ ಸಮಯದಲ್ಲಿ ಸಹಾಯ ಮಾಡಲ್ಲ. ಆದ್ದರಿಂದ ಯಾರೋ ಆರೋಪ ಮಾಡಿದ ತಕ್ಷಣ ನಾವು ಕ್ರಮಕೈಗೊಳ್ಳಲು ಆಗುವುದಿಲ್ಲ. ಆದರೆ ಈ ಬಗ್ಗೆ ಶಿಸ್ತು ಸಮಿತಿಗೆ ಮನವಿ ಮಾಡಿ, ಸಾಕ್ಷಿ ಲಭಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದರು.

    ಇದೇ ವೇಳೆ ಜಿಡಿಟಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ಜೆಡಿಎಸ್ ಪಕ್ಷದ ಶಿಸ್ತು ಕ್ರಮದ ಮೇಲೆ ನಿಂತಿದೆ. ಕೋಲಾರ ಕ್ಷೇತ್ರದಲ್ಲೂ ಕೂಡ ಜೆಡಿಎಸ್ ನಾಯಕರು ಬೆಂಬಲ ಕೊಟ್ಟಿಲ್ಲ. ಇದರ ಬಗ್ಗೆ ಅವರ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಕಾದು ನೀಡುತ್ತೇವೆ ಎಂದರು ಸ್ಪಷ್ಟಪಡಿಸಿದರು. ಅಲ್ಲದೇ ಸ್ಥಳೀಯ ಕಾರಣಗಳಿಗಾಗಿ ಮಂಡ್ಯ, ಮೈಸೂರಿನಲ್ಲಿ ಮೈತ್ರಿ ಯಶಸ್ವಿಯಾಗಿಲ್ಲ ಎಂದರು.

    ನಮ್ಮ ಪಕ್ಷದಲ್ಲಿ ಸಾಕ್ಷಿ ಸಮೇತ ಬಂದ ದೂರುಗಳ ಅನ್ವಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಸೇರಿದಂತೆ ಹಲವು ಮಂದಿಯ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಸರಿ ತಪ್ಪು ಎರಡು ಪಕ್ಷದ ಕಡೆಯಿಂದ ಆಗಿರಬಹುದು. ಸದ್ಯ ಎರಡು ಉಪ ಚುನಾವಣೆ ಇದೆ. ಈ ಬಗ್ಗೆ ಹೆಚ್ಚಿನ ಗಮನ ಕೊಡುತ್ತೇವೆ. ನಾವೆಲ್ಲಾ ಒಂದಾಗಿ ಪ್ರಚಾರ ಮಾಡುತ್ತೇವೆ. ಈ ಬೆಳವಣಿಗೆ ಹಾಗೂ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪ್ರಭಾವ ಬೀರಲ್ಲ ಏನು ಆಗುವುದಿಲ್ಲ ಎಂದರು.

  • ಕಾಂಗ್ರೆಸ್ ವಿರುದ್ಧ ನಿಖಿಲ್ ಅಭಿಮಾನಿಗಳು ಕಿಡಿ

    ಕಾಂಗ್ರೆಸ್ ವಿರುದ್ಧ ನಿಖಿಲ್ ಅಭಿಮಾನಿಗಳು ಕಿಡಿ

    ಬೆಂಗಳೂರು: ಕಾಂಗ್ರೆಸ್ ಮುಖಂಡರು ಮಂಡ್ಯದ ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಶ್ ಅವರೊಂದಿಗಿನ ಭೋಜನಕೂಟದ ವಿಡಿಯೋ ವೈರಲ್ ಆಗಿದ್ದು, ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಕೈ ನಾಯಕರ ನಡೆಗೆ ಕಿಡಿಕಾರಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ನಿಖಿಲ್ ಅಭಿಮಾನಿಗಳು ಪೋಸ್ಟ್ ಹಾಕುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಜೆಡಿಎಸ್ ಮುಗಿಸಲು ಮೈತ್ರಿ ಸರ್ಕಾರದ ಹೆಸರಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಎಷ್ಟೇ ಪ್ರಯತ್ನಿಸಿದರೂ ನಿಖಿಲ್ ಗೆದ್ದೆ ಗೆಲ್ತಾರೆ. ಇದನ್ನು ತಪ್ಪಿಸಲು ಆಗಲ್ಲ. ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಂಡವರು ನಾಳೆ ದೇಶದಲ್ಲಿ ಮಹಾಘಟ್ ಬಂಧನ್ ಆದ್ರೇ ಗೌಡರ ಮನೆ ಗೇಟ್ ನ್ನು ದೇಶದ ಕಾಂಗ್ರೆಸ್ ಅಧ್ಯಕ್ಷ ಕಾಯಬೇಕು. ಮಂಡ್ಯದ ಮೋಸದಿಂದ ನಮಗೆ ನಷ್ಟವಿಲ್ಲ. ಮೈಸೂರು, ಚಾಮರಾಜನಗರದಲ್ಲಿ ಇದ್ಯಾವ ಪರಿಣಾಮ ಬೀರುತ್ತದೆ ಅನ್ನೋದನ್ನು ಅರಗಿಸಿಕೊಳ್ಳಲು ಆಗಲ್ಲ ಅಭಿಮಾನಿಗಳು ಪೋಸ್ಟ್ ಹಾಕಿಕೊಂಡಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ತಮ್ಮ ಬೆಂಬಲಿಗರಿಗಾಗಿ ಭೋಜನ ಕೂಟ ಏರ್ಪಡಿಸಿದ್ದರು. ಕಾಂಗ್ರೆಸ್‍ನ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಕೆ.ಬಿ.ಚಂದ್ರಶೇಖರ್, ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟರಾಜು ಹಾಗೂ ಅಮಾನತುಗೊಂಡ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಈ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಸದ್ಯ ಈ ಭೋಜನಕೂಟದ ವಿಡಿಯೋ ಲೀಕ್ ಆಗಿದ್ದು, ರಾಜಕೀಯ ಅಂಗಳದಲ್ಲಿ ಹೊಸ ಸಂಚಲನವನ್ನ ಸೃಷ್ಟಿಸಿದೆ.

  • ಎಲೆಕ್ಷನ್‍ನಲ್ಲಿ ಓಡಾಡಿದ್ದೀರಿ, ರೆಸ್ಟ್ ಮಾಡಿ- ಸುಮಲತಾಗೆ ಚಲುವರಾಯಸ್ವಾಮಿ ಸಲಹೆ

    ಎಲೆಕ್ಷನ್‍ನಲ್ಲಿ ಓಡಾಡಿದ್ದೀರಿ, ರೆಸ್ಟ್ ಮಾಡಿ- ಸುಮಲತಾಗೆ ಚಲುವರಾಯಸ್ವಾಮಿ ಸಲಹೆ

    -ನಮ್ಮ ಪರವೇ ಸಮೀಕ್ಷಾ ವರದಿಗಳಿವೆ ಎಂದ ಮಾಜಿ ಸಚಿವ

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿದ್ದ ಮಂಡ್ಯ ಕ್ಷೇತ್ರದಲ್ಲಿ ಸದ್ಯ ಸೋಲು ಗೆಲುವಿನ ಲೆಕ್ಕಾಚಾರಗಳು ಆರಂಭವಾಗಿವೆ. ಇದೇ ವೇಳೆ ಇಂದು ಮದುವೆ ಕಾರ್ಯಕ್ರಮವೊಂದರಲ್ಲಿ ಸುಮಲತಾ ಅಂಬರೀಶ್ ಮತ್ತು ಮಾಜಿ ಚಲುವರಾಯಸ್ವಾಮಿ ಅವರು ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

    ಮಂಡ್ಯದ ಕನಕ ಭವನದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸುಮಲತಾ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಪರಸ್ಪರ ಭೇಟಿಯಾದರು. ಭೇಟಿ ವೇಳೆ ಚುನಾವಣೆಯ ಸಂದರ್ಭದಲ್ಲಿ ಸಾಕಷ್ಟು ಓಡಾಡಿದ್ದೀರಿ. ಹೀಗಾಗಿ ಈವಾಗ ಸ್ಪಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸುಮಲತಾಗೆ ಚಲುವರಾಯ ಸ್ವಾಮಿ ಸಲಹೆ ನೀಡಿದ್ದಾರೆ.

    ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಚಲುವರಾಯ ಸ್ವಾಮಿ, ಸ್ವಾಭಿಮಾನದ ಗೆಲುವು ಎಂದು ಎಲ್ಲಾ ಸರ್ವೆ ರಿಪೋರ್ಟ್ ನಮ್ಮ ಪರ ಬಂದಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸುಮಲತಾ ಪರ ನಿಂತಿದ್ದಾರಾ ಎಂಬ ಅನುಮಾನ ಮೂಡಲು ಕಾರಣರಾದರು.

    ಎಲ್ಲರೂ ಅವರಿಗೆ ಬೇಕಾದಂತೆ ಅಭಿಪ್ರಾಯ ಪಡುತ್ತಿದ್ದಾರೆ. ಸರ್ಕಾರ ಇದ್ದು, ಸಚಿವರು, ಶಾಸಕರು, ಮುಖ್ಯಮಂತ್ರಿ, ಮಾಜಿ ಪ್ರಧಾನಿ, ಮುಖ್ಯಮಂತ್ರಿ ಕುಟುಂಬ ಇಷ್ಟು ಜನ ಮಂಡ್ಯದಲ್ಲಿ ಕೆಲಸ ಮಾಡಿದ್ದಾರೆ. ಇಷ್ಟು ಜನ ಕೆಲಸ ಮಾಡಿ ಫಲಿತಾಂಶ ಬರುವ ಮೊದಲೇ ಗೆಲುವು ನಮ್ಮದು ಅಂದರೆ ಯಾರು ಒಪ್ಪುತ್ತಾರೆ? ಮಂಡ್ಯ ಜನ ತೀರ್ಮಾನ ಮಾಡಿ ಆಗಿದ್ದು, ಅದರ ಪ್ರಕಟಣೆಗಾಗಿ ಕಾಯುತ್ತಿದ್ದೇವೆ. ಅಲ್ಲಿವರೆಗೂ ಕಾಯುವ ತಾಳ್ಮೆಯನ್ನ ಜಿಲ್ಲೆಯ ಜನರು ನಮಗೆ ಕಲಿಸಿದ್ದಾರೆ. ಸುಮಲತಾ ಪರವಾಗಿ ದರ್ಶನ್, ಯಶ್ ಸೇರಿದಂತೆ ಜಿಲ್ಲೆಯ ಹಲವು ಸಂಘಟನೆಗಳು ಹಾಗೂ ಎಲ್ಲ ವರ್ಗದವರು ದುಡಿದಿದ್ದಾರೆ ಎಂದರು. ಇದೇ ವೇಳೆ ಸುಮಲತಾ, ನಿಖಿಲ್ ಪರ ಯಾರು ಬೆಟ್ಟಿಂಗ್ ಕಟ್ಟಬಾರದು. ಯಾರೆ ಸೋತರು ನಮ್ಮ ಜಿಲ್ಲೆಯವರಿಗೆ ನಷ್ಟ ಆಗುತ್ತದೆ. ಹೀಗಾಗಿ ಬೆಟ್ಟಿಂಗ್ ಬೇಡ ಎಂದು ಮನವಿ ಮಾಡಿದರು.

    ದೇಶದ ಫಲಿತಾಂಶವೇ ಬೇರೆ ಬರಲಿದ್ದು, ಮಂಡ್ಯ ಜಿಲ್ಲೆಯ ಫಲಿತಾಂಶವೇ ಬೇರೆಯಾಗಲಿದೆ. ಎಲ್ಲಾ ಮಾಧ್ಯಮದವರು ಮಂಡ್ಯವನ್ನೇ ಹೆಚ್ಚು ತೋರಿಸಿದ್ದಾರೆ. ಈ ಶ್ರಮಕ್ಕೆ ಉತ್ತಮ ಫಲಿತಾಂಶ ಬಂದರೆ ಅರ್ಥ ಸಿಗುತ್ತದೆ. ಮಂಡ್ಯ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುವ ಬಗ್ಗೆ ನಾನು ಮಾತನಾಡಲ್ಲ. ಫಲಿತಾಂಶ ಬಂದ ಮೇಲೆ ನಾನು ವಿಶ್ಲೇಷಣೆ ಮಾಡುತ್ತೇನೆ ಎಂದರು.

    ನನಗೆ ಬಂದಿರುವ ಮಾಹಿತಿ ಅನ್ವಯ ಪುಟ್ಟರಾಜು ಎರಡೂವರೆ ಲಕ್ಷ ಮತಗಳ ಅಂತರಕ್ಕಿಂತ ಕಡಿಮೆ ಬಂದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ನಿಖಿಲ್ ಸೋತರೆ ರಾಜಕೀಯ ನಿವೃತ್ತಿ ಬಗ್ಗೆ ಹೇಳಿಲ್ಲ ಎಂದು ನಿವೃತ್ತಿ ಮಾತನ್ನು ಪರೋಕ್ಷವಾಗಿ ನೆನಪಿಸಿದರು. ಇದೇ ವೇಳೆ ಸಮ್ಮಿಶ್ರ ಸರ್ಕಾರ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡಲ್ಲ. ಚುನಾವಣೆಯ ಸಂದರ್ಭದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ನಿರಾಕರಿಸಿದ್ದ ಚಲುವರಾಯಸ್ವಾಮಿ ಅವರು ಮೌನವಹಿಸಿದ್ದರು. ಆದರೆ ಅವರ ಬೆಂಬಲಿಗರು ಸ್ವಾಭಿಮಾನಕ್ಕಾಗಿ ಸುಮಲತಾಗೆ ಮತ ನೀಡಿ ಎಂದು ಪ್ರಚಾರ ಮಾಡಿದ್ದರು.

    ಇದೇ ವೇಳೆ ಮಾತನಾಡಿದ ಸುಮಲತಾ, ಚುನಾವಣೋತ್ತರ ಸಮೀಕ್ಷೆ ವಿಚಾರವನ್ನು ನಾನು ಹೆಚ್ಚು ಗಭೀರವಾಗಿ ಪರಿಗಣಿಸುವುದಿಲ್ಲ. ಒಂದೊಂದು ಸಮೀಕ್ಷೆ ಒಬ್ಬೊಬ್ಬರ ಪರ ಬರುತ್ತದೆ. ಮೇ 23ವರೆಗೂ ಕಾದು ನೋಡೋಣ ಎಂದರು.

    ಚಲುವರಾಯಸ್ವಾಮಿ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯವಾಗಿ ಏನೂ ಮಾತಾಡಿಲ್ಲ. ಚುನಾವಣೆ ಮುಗಿದಿದೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸಲಗೆ ನೀಡಿದ್ದಾರೆ ಎಂದರು. ಇದೇ ವೇಳೆ ದರ್ಶನ್ ಅವರು ರೈತರಿಗೆ ಬೆಂಬಲ ಬೆಲೆ ನೀಡಬೇಕು ಎಂದು ಹೇಳಿಕೆಯನ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯಾವುದೇ ಸರ್ಕಾರ ಇದ್ದರು ಕೂಡ ಇದನ್ನು ಅನುಸರಿಸಬೇಕು ಎಂದರು.

  • 45 ಸಾವಿರ ಮತಗಳ ಅಂತರದಲ್ಲಿ ಸುಮಲತಾಗೆ ಗೆಲುವು – ಬಿಜೆಪಿ ವರದಿ ಸಲ್ಲಿಕೆ

    45 ಸಾವಿರ ಮತಗಳ ಅಂತರದಲ್ಲಿ ಸುಮಲತಾಗೆ ಗೆಲುವು – ಬಿಜೆಪಿ ವರದಿ ಸಲ್ಲಿಕೆ

    ಮಂಡ್ಯ: ಸುಮಲತಾ ಅಂಬರೀಶ್ ಅವರು 45 ಸಾವಿರ ಲೀಡ್‍ನಲ್ಲಿ ಗೆಲ್ಲುತ್ತಾರೆ ಎಂದು ಮಂಡ್ಯ ಬಿಜೆಪಿ ಘಟಕವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ವರದಿ ಒಪ್ಪಿಸಿದೆ.

    ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಚುನಾವಣೆ ನಿರ್ವಹಣಾ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಈ ವೇಳೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗನಗೌಡ ಅವರು ಸುಮಲತಾ ಗೆಲ್ಲುತ್ತಾರೆ ಎಂಬ ವರದಿಯನ್ನು ಸಲ್ಲಿಸಿದ್ದಾರೆ.

    ಪಾಂಡವಪುರ ಮತ್ತು ಮೇಲುಕೋಟೆಯಲ್ಲಿ ಜೆಡಿಎಸ್ ಅಲ್ಪ ಮುನ್ನಡೆ ಪಡೆಯಲಿದ್ದು ಉಳಿದಕಡೆ ಸಮಬಲದ ಮತ ಪಡೆಯಲಿದ್ದಾರೆ. ಅಂತಿಮವಾಗಿ 45 ಸಾವಿರ ಮತಗಳಿಂದ ಸುಮಲತಾ ಜಯಗಳಿಸುತ್ತಾರೆ ಎಂದು ನಾಗನಗೌಡ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

    ವರದಿ ಸಲ್ಲಿಸುವ ವೇಳೆ ವಿಶೇಷ ಘಟನೆಗಳನ್ನು ಪ್ರಸ್ತಾಪಿಸುವಂತೆ ಬಿಎಸ್‍ವೈ ಸೂಚಿಸಿದರು. ಈ ವೇಳೆ ಮಂಡ್ಯದ ಚುನಾವಣೆ ವೇಳೆ ಪ್ರಸ್ತಾಪವಾಗಿದ್ದ ಮಾಯಾಂಗನೆ, ಗಂಡ ಸತ್ತ ಹೆಂಡತಿ, ಕಳ್ಳೆತ್ತು, ಜೋಡೆತ್ತು ಹೇಳಿಕೆಯನ್ನು ನಾಗನಗೌಡ ಪ್ರಸ್ತಾಪಿಸಿದ್ದಾರೆ.

    ವಿವಾದಾತ್ಮಕ ಹೇಳಿಕೆ ಬಗ್ಗೆ ನಾಗನಗೌಡ ಒಂದೊಂದಾಗಿ ಹೇಳುತ್ತಿದ್ದಂತೆ, ಸಾಕು ಬೀಡಿ ಇಡೀ ರಾಜ್ಯವೇ ಆ ಎಲ್ಲ ಹೇಳಿಕೆಯನ್ನು ನೋಡಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.