Tag: ಸುಮಲತಾ ಅಂಬರೀಶ್

  • ಮಂಡ್ಯ ಜನರ ಪಲ್ಸ್ ಏನು ಅನ್ನೋದು ಪ್ರಚಾರಕ್ಕೆ ಹೋದಾಗ ಗೊತ್ತಾಗಿತ್ತು: ಸುಮಲತಾ

    ಮಂಡ್ಯ ಜನರ ಪಲ್ಸ್ ಏನು ಅನ್ನೋದು ಪ್ರಚಾರಕ್ಕೆ ಹೋದಾಗ ಗೊತ್ತಾಗಿತ್ತು: ಸುಮಲತಾ

    ಬೆಂಗಳೂರು: ನಾನು ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಕೆಳಗಡೆ ಇಳಿದಾಗ ಲೀಡ್‍ನಲ್ಲಿ ಇದ್ದೇನೆ ಎಂದು ನಮ್ಮ ಕಾರ್ಯಕರ್ತರು ಫೋನ್ ಮಾಡಿ ತಿಳಿಸಿದ್ದರು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗೆಲುವಿನ ಬಗ್ಗೆ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಮಲತಾ ಅಂಬರೀಶ್, ನಾನು ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಕೆಳಗೆ ಬಂದಾಗ 18 ಸಾವಿರ ಲೀಡ್ ಎಂಬ ಮಾತನ್ನು ಮೊದಲು ಕೇಳಿಸಿಕೊಂಡೆ. ಆದರೆ ನನಗೆ ಮೊದಲಿನಿಂದ ಆತ್ಮವಿಶ್ವಾಸ ಇತ್ತು. ಯಾಕೆಂದರೆ ಮಂಡ್ಯ ಜನರ ಪಲ್ಸ್ ಏನು ಅಂತ ಪ್ರಚಾರಕ್ಕೆ ಹೋದಾಗ ಗೊತ್ತಾಗಿತ್ತು ಎಂದರು.

    ಅನುಕಂಪ ಎಂಬುದು ಸಹಜ. ಹೀಗಾಗಿ ಅದು ಇತ್ತು. ಅದರ ಜೊತೆಗೆ ದರ್ಶನ್, ಯಶ್, ಮದನ್ ಕುಮಾರ್ ಸೇರಿದಂತೆ ಒಳ್ಳೆಯ ತಂಡ ಇತ್ತು. ಅಷ್ಟೇ ಅಲ್ಲದೇ ಮಂಡ್ಯದಲ್ಲಿ ಕಾಂಗ್ರೆಸ್‍ನ ಸ್ವಾಭಿಮಾನದ ಕಾರ್ಯಕರ್ತರು ಅವರೆಲ್ಲರೂ ಬಹಿರಂಗವಾಗಿ ಅಥವಾ ಪರೋಕ್ಷವಾಗಿ ನನ್ನ ಕಡೆ ಇದ್ದರು. ಅವರು ಮಾಡಿದ್ದ ನಿಂದನೆಗಳೆ ಅವರ ವಿರುದ್ಧವಾಗಿವೆ ಎಂದರು.

    ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿಲ್ಲ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಇರುತ್ತೇನೆ. ಮಂಡ್ಯಕ್ಕಾಗಿ, ಮಂಡ್ಯದ ಜನತೆಗೋಸ್ಕರ, ಮಂಡ್ಯದ ಅಭಿವೃದ್ಧಿಗೋಸ್ಕರ ನಾನು ಏನು ಬೇಕಾದರೂ ಮಾಡುತ್ತೇನೆ. ಬಿಜೆಪಿಯವರು ಬೆಂಬಲ ಕೊಟ್ಟಿದ್ದಾರೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಸಹ ಸಹಾಯ ಮಾಡಿದ್ದಾರೆ. ಅವರನ್ನು ನಾನು ಕೈ ಬಿಡಲ್ಲ. ನಿಂದನೆ ಮಾಡಿಕೊಂಡು ರಾಜಕೀಯ ಮಾಡಬೇಡಿ, ಮುಂದಿನ ದಿನಗಳಲ್ಲಿ ಈ ರೀತಿ ನಿಂದನೆ ಮಾಡಿಕೊಂಡು ರಾಜಕೀಯ ಮಾಡಬೇಡಿ ಎಂದು ಸುಮಲತಾ ಹೇಳಿದ್ದಾರೆ.

  • ಮಂಡ್ಯದ ಜನ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ : ಸುಮಲತಾ

    ಮಂಡ್ಯದ ಜನ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ : ಸುಮಲತಾ

    ಬೆಂಗಳೂರು: ದೇಶದಲ್ಲೇ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದ್ದ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ತನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

    ಚುನಾವಣೆಯ ಫಲಿತಾಂಶದ ಬಗ್ಗೆ ಸುಮಲತಾ ಅಂಬರೀಶ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. “ಯಾರು ಯಾರಿಗೆ ಅಭಿನಂದನೆಗಳನ್ನು ಹೇಳಲಿ. ನನ್ನ ಗೆಲುವಿಗಾಗಿ ಮಂಡ್ಯದ ಜನತೆ ಮಾತ್ರವಲ್ಲದೇ ರಾಜ್ಯದ ಜನತೆಯೂ  ಹಾರೈಸಿದ್ದಾರೆ” ಎಂದು ಪೋಸ್ಟ್ ಮಾಡಿದ್ದಾರೆ.

    ಮತ್ತೊಂದು ಪೋಸ್ಟ್ ಮಾಡಿದ್ದ, “ಮಂಡ್ಯದ ಜನತೆ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ. ಹಣಬಲ ತೋಳ್ಬಲ ಎಲ್ಲವನ್ನು ಮೀರಿ, ಜೊತೆಗೆ ಆಮಿಷಗಳನ್ನು ಮೀರಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದಾರೆ. ಕೋಟಿ ಕೋಟಿ ಅನಂತ ಅಭಿನಂದನೆಗಳು ಮಂಡ್ಯದ ಜನತೆಗೆ” ಸುಮಲತಾ ಅಂಬರೀಶ್ ಎಂದು ಜನರಿಗೆ ಕೃತಜ್ಞತೆ ತಿಳಿಸಿದ್ದಾರೆ.

  • ಆರಂಭಿಕ ಸುತ್ತುಗಳಲ್ಲಿ ಮಂಡ್ಯದ ಮೂವರು ಸುಮಲತಾರಿಗೆ 1,210 ಮತ

    ಆರಂಭಿಕ ಸುತ್ತುಗಳಲ್ಲಿ ಮಂಡ್ಯದ ಮೂವರು ಸುಮಲತಾರಿಗೆ 1,210 ಮತ

    ಮಂಡ್ಯ: ಲೋಕಸಭಾ ಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಈ ನಡುವೆ ಭಾರೀ ಸದ್ದು ಮಾಡುತ್ತಿರುವ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಅವರನ್ನು ಹೊರತುಪಡಿಸಿ ಕಣಕ್ಕಿಳಿದಿದ್ದ ಸುಮಲತಾ ಹೆಸರಿನ ಅಭ್ಯರ್ಥಿಗಳು ಆರಂಭಿಕ ಸುತ್ತುಗಳಲ್ಲಿ ಸುಮಾರು 1,210 ಮತಗಳನ್ನು ಪಡೆದಿದ್ದಾರೆ.

    ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದಲೂ ಮಂಡ್ಯ ಕ್ಷೇತ್ರ ಭಾರೀ ಸುದ್ದಿಯಲ್ಲಿದೆ. ಇಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ಅಭ್ಯರ್ಥಿಗಳ ಹೆಸರಿನಲ್ಲೇ ಭಾರೀ ರಾಜಕೀಯ ನಡೆದಿತ್ತು. ಅದರಲ್ಲೂ ಸುಮಲತಾ ಅಂಬರೀಶ್ ಹೊರತುಪಡಿಸಿ ಸುಮಲತಾ ಹೆಸರಿರುವ ಇತರೇ 3 ಮಂದಿ ಅಭ್ಯರ್ಥಿಗಳು ಕೂಡ ಸಖತ್ ಸುದ್ದಿಯಾಗಿದ್ದರು. ಸದ್ಯ ಈವರೆಗೆ ನಡೆದಿರುವ ಮತ ಏಣಿಕೆಯಲ್ಲಿ 32,183 ಮತಗಳನ್ನು ನಿಖಿಲ್ ಕುಮಾರಸ್ವಾಮಿ ಗಳಿಸಿದ್ದರೆ ಸುಮಲತಾ ಅಂಬರೀಶ್ 30,311 ಮತಗಳನ್ನು ಪಡೆದಿದ್ದಾರೆ. ಅಲ್ಲದೆ 1,872 ಮತಗಳ ಅಂತರದಿಂದ ನಿಖಿಲ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹಾಗೆಯೇ ಉಳಿದ ಮೂವರು ಸುಮಲತಾ ಹೆಸರಿನ ಅಭ್ಯರ್ಥಿಗಳು ಒಟ್ಟು 1,210 ಮತಗಳನ್ನು ಪಡೆದಿದ್ದಾರೆ. ಕ್ರ.ಸಂ19- ಸುಮಲತ 549, ಕ್ರ.ಸಂ21- ಎಂ.ಸುಮಲತ 478, ಕ್ರ.ಸಂ22- ಸುಮಲತಾ 183 ಮತ ಗಳಿಸಿದ್ದಾರೆ.

    ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ಪ್ರತಿಷ್ಠೆಯ ಕಣವಾಗಿ ಏರ್ಪಟ್ಟಿತ್ತು. ಈ ಇಬ್ಬರು ಅಭ್ಯರ್ಥಿಗಳ ನಡುವೆ ಪ್ರಚಾರದ ವೇಳೆ ಹಾಗೂ ಮತದಾನದ ವೇಳೆ ನಡೆದ ಸಣ್ಣ ಗಲಾಟೆ, ಪರ ವಿರೋಧ ಹೇಳಿಕೆಗಳಿಂದಲೇ ಮಂಡ್ಯ ಅಖಾಡ ಹೆಚ್ಚು ಸದ್ದು ಮಾಡಿತ್ತು.

  • ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ನಿಖಿಲ್ -ಇತ್ತ ಸಿಎಂ ಎಚ್‍ಡಿಕೆಯಿಂದ್ಲೂ ಟೆಂಪಲ್ ರನ್

    ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ನಿಖಿಲ್ -ಇತ್ತ ಸಿಎಂ ಎಚ್‍ಡಿಕೆಯಿಂದ್ಲೂ ಟೆಂಪಲ್ ರನ್

    ಮಂಡ್ಯ: ಲೋಕಸಭಾ ಚುನಾಚವಣೆ ಪ್ರಕ್ರಿಯೆ ಶುರುವಾಗಿ ಸಮಾರು ಎರಡು ತಿಂಗಳೇ ಕಳೆದಿವೆ. ಇಂದು ಲೋಕಸಮರದ ಫಲಿತಾಂಶ ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ. ಇತ್ತ ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಪುತ್ರ ನಿಖಿಲ್, ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.

    ಬೆಳ್ಳಂಬೆಳಗ್ಗೆ ನಿಖಿಲ್ ಕುಮಾರಸ್ವಾಮಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದು, ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಇಂದು ಮುಂಜಾನೆ ಸುಮಾರು 5 ಗಂಟೆಗೆ ನಿಖಿಲ್ ಚಾಮುಂಡಿ ಬೆಟ್ಟಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ. ನಿಖಿಲ್ ಅವರಿಗೆ ಸಚಿವರಾದ ಜಿ.ಟಿ.ದೇವೇಗೌಡ, ಪುಟ್ಟರಾಜು ಮತ್ತು ಶಾಸಕ ಸುರೇಶ್ ಗೌಡ ಸಾಥ್ ನೀಡಿದ್ದಾರೆ.

    ಇತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಬೆಳ್ಳಂಬೆಳಗ್ಗೆ ಟೆಂಪಲ್ ರನ್ ಶುರು ಮಾಡಿದ್ದು, ಮೊದಲಿಗೆ ಬೆಂಗಳೂರಿನಲ್ಲಿರುವ ಬನಶಂಕರಿ ದೇವಸ್ಥಾನಕ್ಕೆ ಭೇಟ ನೀಡಿ ತಾಯಿ ಬನಶಂಕರಿ ದೇವಿಯ ದರ್ಶನ ಪಡೆಯಲಿದ್ದಾರೆ. ಬಳಿಕ ಅಲ್ಲಿಂದ ದೊಡ್ಡ ಗಣೇಶ ಟೆಂಪಲ್ ಹಾಗೂ ಗವಿಗಂಗಾದರೇಶ್ವರ ದೇವಾಲಯಕ್ಕೆ ಭೇಟಿ ಕೊಡಲಿದ್ದಾರೆ.

    ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲುವಿಗಾಗಿ ಚಾಮುಂಡೇಶ್ವರಿ ಮೊರೆ ಹೋಗಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ತಮ್ಮ ಬೆಂಬಲಿಗರ ಸೂಚನೆ ಮೇರೆಗೆ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಒಂದು ವೇಳೆ ಸುಮಲತಾ ಗೆಲುವು ಖಚಿತವಾದರೆ ಯಶ್ ಮತ್ತು ದರ್ಶನ್ ಕೂಡ ಮಂಡ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ.

  • ಪಾರ್ವತಮ್ಮನ ಮಗಳು ಇನ್ವೆಸ್ಟಿಗೇಟಿವ್ ಆಫೀಸರ್ ವೈದೇಹಿ!

    ಪಾರ್ವತಮ್ಮನ ಮಗಳು ಇನ್ವೆಸ್ಟಿಗೇಟಿವ್ ಆಫೀಸರ್ ವೈದೇಹಿ!

    ಬೆಂಗಳೂರು: ದಿಶಾ ಎಂಟರ್ ಪ್ರೈಸಸ್ ಮೂಲಕ ಕೆ.ಎಂ ಶಶಿಧರ್ ನಿರ್ಮಾಣ ಮಾಡಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಇದೇ ತಿಂಗಳ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹರಿಪ್ರಿಯಾ ನಾಯಕಿಯಾಗಿ ನಟಿಸಿರೋ ಈ ಚಿತ್ರವೀಗ ಎಲ್ಲ ದಿಕ್ಕಿನಲ್ಲಿಯೂ ಪ್ರೇಕ್ಷಕರನ್ನು ಮೋಡಿಗೀಡು ಮಾಡಿದೆ. ಅದುವೇ ಪ್ರೇಕ್ಷಕರನ್ನು ಕೈ ಹಿಡಿದು ಥೇಟರಿಗೆ ಕೈ ಹಿಡಿದು ಕರೆ ತರುವ ನಿರೀಕ್ಷೆಗಳೂ ದಟ್ಟವಾಗಿವೆ.

    ಇದು ಶಂಕರ್ ಜೆ ನಿರ್ದೇಶನದ ಚೊಚ್ಚಲ ಚಿತ್ರ. ಮೊದಲ ಪ್ರಯತ್ನದಲ್ಲಿಯೇ ಅವರು ಹೊಸಾ ಥರದ ಕಥೆಯೊಂದನ್ನು ಕಮರ್ಶಿಯಲ್ ಶೈಲಿಯಲ್ಲಿಯೇ ಹೇಳಲು ಮುಂದಾಗಿದ್ದಾರೆ. ಈ ಚಿತ್ರ ಆರಂಭ ಕಾಲದಿಂದಲೂ ಹರಿಪ್ರಿಯಾ ಅವರ ಗೆಟಪ್ಪುಗಳ ಝಲಕ್ಕಿನಿಂದಲೇ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿತ್ತು. ಟಾಮ್ ಬಾಯ್ ಲುಕ್ ಅಂತೂ ಎಲ್ಲರನ್ನೂ ಸೆಳೆದುಕೊಂಡಿತ್ತು. ಇದನ್ನೂ ಓದಿ: ಡಾಟರ್ ಆಫ್ ಪಾರ್ವತಮ್ಮ ಮತ್ತು ಟಗರು ಕಾಕ್ರೋಚ್!

    ಈ ಚಿತ್ರದಲ್ಲಿ ಹರಿಪ್ರಿಯಾ ಎರಡು ಶೇಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲ್ಯಾಷ್‍ಬ್ಯಾಕ್‍ನಲ್ಲಿ ಕಾಲೇಜು ಹುಡುಗಿಯಾಗಿ ಟಾಮ್ ಬಾಯ್ ಲುಕ್‍ನಲ್ಲಿ ಅವರು ಕಂಗೊಳಿಸಿದ್ದಾರೆ. ಇನ್ನುಳಿದಂತೆ ಎಂಥಾದ್ದೇ ಪ್ರಕರಣವನ್ನಾದರೂ ಲೀಲಾಜಾಲವಾಗಿ ಬೆಂಬೀಳುವ ಖಡಕ್ ಸಿಐಡಿ ಅಧಿಕಾರಿಯಾಗಿಯೂ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರೇನೆಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಹರಿಪ್ರಿಯಾ ಪಾತ್ರದ ಹೆಸರು ವೈದೇಹಿ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಇದನ್ನೂ ಓದಿ: ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಇಲ್ಲಿ ಕ್ರೈಂ ಥ್ರಿಲ್ಲರ್ ಕಥೆಯ ಜೊತೆ ಜೊತೆಗೇ ತಾಯಿ ಮಗಳ ಸೆಂಟಿಮೆಂಟ್ ದೃಶ್ಯಗಳೂ ಪ್ರಧಾನವಾಗಿರಲಿದೆ. ಸಾಮಾನ್ಯವಾಗಿ ಪೊಲೀಸ್ ಪಾತ್ರವೆಂದಾಕ್ಷಣ ಅಬ್ಬರ ಅರಚಾಟಗಳಿರುತ್ತವೆಂಬ ವಾತಾವರಣವಿದೆ. ಆದರೆ ಸೂಕ್ಷ್ಮ ಸಂವೇದನೆ ಹೊಂದಿರೋ ಈ ಪಾತ್ರ ಎಲ್ಲಕ್ಕಿಂತಲೂ ಭಿನ್ನವಾಗಿ ನೋಡುಗರೆಲ್ಲರ ಆಳಕ್ಕಿಳಿಯುವಷ್ಟು ಸಶಕ್ತವಾಗಿದೆ ಎಂಬುದು ಚಿತ್ರತಂಡದ ಭರವಸೆ.

  • ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಬೆಂಗಳೂರು: ಅಪಾರ ಅಭಿಮಾನಿ ಬಳಗವನ್ನು ಹೊಂದಿರುವವರು ಸುಮಲತಾ ಅಂಬರೀಶ್. ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿರೋ ಅವರು ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜೇಯ್ ರಾವ್ ತಾಯಿಯಾಗಿ ನಟಿಸಿದ್ದರು. ಇದೀಗ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ನಾಯಕಿ ಹರಿಪ್ರಿಯಾ ಅಮ್ಮನಾಗಿ ಭಾವನಾತ್ಮಕವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ.

    ನಿರ್ದೇಶಕ ಶಂಕರ್ ಜೆ ಕಥೆ ಬರೆಯೋ ಸಂದರ್ಭದಲ್ಲಿ ತಾವು ಸೃಷ್ಟಿಸಿದ ಪಾತ್ರಗಳಿಗೆ ಯಾವುದೇ ಕಲಾವಿದರನ್ನು ಕಲ್ಪಿಸಿಕೊಂಡಿರಲಿಲ್ಲವಂತೆ. ಕಥೆ ಬರೆದು, ಸ್ಕ್ರಿಪ್ಟ್ ರೆಡಿಯಾದ ನಂತರವಷ್ಟೇ ಪಾತ್ರಗಳಿಗೆ ಕಲಾವಿದರ ಆಯ್ಕೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರಂತೆ. ಈ ಸಂದರ್ಭದಲ್ಲಿ ಇಡೀ ಕಥೆಯ ಜೀವಾಳದಂತಿರೋ ತಾಯಿಯ ಪಾತ್ರಕ್ಕೆ ಸುಮಲತಾ ಅಂಬರೀಶ್ ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರಂತೆ.

    ನಿರ್ದೇಶಕರು ಇಂಥಾದ್ದೊಂದು ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಸುಮಲತಾ ಅವರು ಬ್ಯುಸಿಯಾಗಿ ಬಿಟ್ಟಿದ್ದರು. ಆಗ ಚಿತ್ರವೊಂದರ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಂಡಿದ್ದರಂತೆ. ಈ ನಡುವೆಯೇ ಶಂಕರ್ ಕಥೆ ಮತ್ತು ಅಮ್ಮನ ಪಾತ್ರದ ಮಹತ್ವವನ್ನು ವಿವರಿಸಿ ಹೇಳಿದ್ದರಂತೆ. ಕಥೆ ಕೇಳಿ ಥ್ರಿಲ್ ಆದ ಸುಮಲತಾ ತಮ್ಮ ಪಾತ್ರವನ್ನೂ ಮೆಚ್ಚಿಕೊಂಡು ಆಗಲೇ ಒಪ್ಪಿಗೆ ಸೂಚಿಸಿದ್ದರಂತೆ. ಹೀಗೆ ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಈ ಚಿತ್ರದಲ್ಲವರು ತಾಯಿಯ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ.

    ಇದೀಗ ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣಕ್ಕಿಳಿದಿದ್ದಾರೆ. ಇದೇ ತಿಂಗಳ ಇಪ್ಪತ್ಮೂರರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಅದಾದ ಮಾರನೇ ದಿನವೇ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಅವರ ಪಾತ್ರ ನಿಜಕ್ಕೂ ಹೇಗಿದೆ ಎಂಬ ಕುತೂಹಲವಂತೂ ಎಲ್ಲರಲ್ಲಿಯೂ ಇದ್ದೇ ಇದೆ.

  • ಡಾಟರ್ ಆಫ್ ಪಾರ್ವತಮ್ಮ ಮತ್ತು ಟಗರು ಕಾಕ್ರೋಚ್!

    ಡಾಟರ್ ಆಫ್ ಪಾರ್ವತಮ್ಮ ಮತ್ತು ಟಗರು ಕಾಕ್ರೋಚ್!

    ಬೆಂಗಳೂರು: ದಿಶಾ ಎಂಟರ್ ಪ್ರೈಸಸ್ ಬ್ಯಾನರ್ ಮೂಲಕ ಕೆ ಎಂ ಶಶಿಧರ್ ನಿರ್ಮಾಣ ಮಾಡಿರೋ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಇದೇ ತಿಂಗಳ 24ರಂದು ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಶಂಕರ್ ಜೆ ನಿರ್ದೇಶನದ ಈ ಚೊಚ್ಚಲ ಸಿನಿಮಾದಲ್ಲಿ ಹರಿಪ್ರಿಯಾ ನಾಯಕಿಯಾಗಿ ಖಡಕ್ ಅಧಿಕಾರಿಯಾಗಿ ನಟಿಸಿದ್ದಾರೆ. ಪ್ರತೀ ಪಾತ್ರಗಳನ್ನೂ ಕೂಡಾ ನೆನಪಿಟ್ಟುಕೊಳ್ಳುವಂತೆಯೇ ರೂಪಿಸಿರೋ ನಿರ್ದೇಶಕರು ಆ ಪಾತ್ರಗಳಿಗೆ ತಕ್ಕುದಾದ ಕಲಾವಿದರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

    ಟಗರು ಚಿತ್ರದಲ್ಲಿ ಕಾಕ್ರೋಚ್ ಎಂಬ ಪಾತ್ರದ ಮೂಲಕವೇ ಪ್ರಸಿದ್ಧಿ ಪಡೆದಿರೋ ಸುಧಿ ಅವರೂ ಕೂಡಾ ಈ ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಟಗರು ಚಿತ್ರಕ್ಕೂ ಮುಂಚೆ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದರೂ ಕಾಕ್ರೋಚ್ ಪಾತ್ರದಿಂದಲೇ ಮುನ್ನೆಲೆಗೆ ಬಂದಿರೋ ಸುಧಿ ಪಾತ್ರ ಹೇಗಿದೆ ಎಂಬಂಥಾ ಕುತೂಹಲ ಎಲ್ಲರಲ್ಲಿಯೂ ಇದೆ. ಆದರೆ ಚಿತ್ರತಂಡ ಅದನ್ನು ಗೌಪ್ಯವಾಗಿಟ್ಟಿದೆ.

    ಅಷ್ಟಕ್ಕೂ ಈ ಚಿತ್ರದಲ್ಲಿ ಸುಧಿ ಕಾಕ್ರೋಚ್ ಪಾತ್ರದಂಥಾದ್ದೇ ಶೇಡಿನಲ್ಲಿ ಕಾಣಿಸಿಕೊಂಡಿದ್ದಾರಾ ಎಂಬುದೂ ನಿಖರವಾಗಿ ಯಾರಿಗೂ ತಿಳಿದಿಲ್ಲ. ವಿಲನ್ ರೋಲಲ್ಲಿಯೇ ನಟಿಸಿದ್ದಾರಾ ಎಂಬುದನ್ನೂ ಚಿತ್ರತಂಡ ಹೇಳಿಕೊಂಡಿಲ್ಲ. ಆದರೆ ಕಾಕ್ರೋಚ್ ಮೂಲಕ ಫೇಮಸ್ ಆಗಿರೋ ಸುಧಿ ಅವರಿಗೆ ಈ ಚಿತ್ರದಲ್ಲಿಯೂ ವಿಶೇಷವಾದ ಪಾತ್ರವೇ ಸಿಕ್ಕಿದೆ. ಅದೇನೆಂಬುದು ಇದೇ ತಿಂಗಳ 24ರಂದು ಗೊತ್ತಾಗಲಿದೆ.

    ಕಾಕ್ರೋಚ್ ಖ್ಯಾತಿಯ ಸುಧಿ ಮಾತ್ರವಲ್ಲದೇ ಅದ್ಧೂರಿ ತಾರಾಗಣ ಈ ಚಿತ್ರದಲ್ಲಿದೆ. ಸೂರಜ್ ಗೌಡ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದರೆ, ತರಂಗ ವಿಶ್ವ, ಶ್ರೀಧರ್ ಮುಂತಾದವರೂ ನಟಿಸಿದ್ದಾರೆ. ತಾಯಿ ಮಗಳ ಸೆಂಟಿಮೆಂಟ್, ಒಂದು ರೋಚಕ ಕ್ರೈಂ ಥ್ರಿಲ್ಲರ್ ಕಥೆ ಹೊಂದಿರೋ ಈ ಸಿನಿಮಾ ಈಗಾಗಲೇ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಂಡಿದೆ. ಇದೊಂದು ಭಿನ್ನ ಜಾಡಿನ ಪಕ್ಕಾ ಕಮರ್ಶಿಯಲ್ ಶೈಲಿಯ ಚಿತ್ರ. ಇದರ ಅಸಲೀ ರೋಚಕತೆ ಏನೆಂಬುದು ಇಷ್ಟರಲ್ಲಿಯೇ ಜಾಹೀರಾಗಲಿದೆ.

  • ರಾಜ್ಯದಲ್ಲಿ ಮೊಳಗಲಿದೆ ಕೇಸರಿ ಕಹಳೆ – ಮಂಡ್ಯದಲ್ಲಿ ಯಾರು `ಎಕ್ಸಿಟ್’?

    ರಾಜ್ಯದಲ್ಲಿ ಮೊಳಗಲಿದೆ ಕೇಸರಿ ಕಹಳೆ – ಮಂಡ್ಯದಲ್ಲಿ ಯಾರು `ಎಕ್ಸಿಟ್’?

    ಬೆಂಗಳೂರು/ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಜನರು ಬಿಜೆಪಿಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ರಾಜ್ಯ ಬಿಜೆಪಿ, ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಡಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳಿಗೆ 2 ಹಂತದಲ್ಲಿ ನಡೆದ ಚುನಾವಣೆಯಲ್ಲಿ ಮತದಾರ ಬಿಜೆಪಿಗೆ ಹೆಚ್ಚಿನ ಒಲವು ತೋರಿದ್ದಾನೆ. ಕಳೆದ ಚುನಾವಣೆಯಲ್ಲಿ 17 ಸ್ಥಾನಗಳಿಗೆ ತೃಪ್ತಿ ಪಟ್ಟಿದ್ದ ಬಿಜೆಪಿ ಈ ಬಾರಿ 20ರ ಗಡಿ ದಾಟಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

    ಪಕ್ಷೇತರ ಅಭ್ಯರ್ಥಿಗಿದೆ ಗೆಲುವಿನ ಅದೃಷ್ಟ!:
    ಸಾಕಷ್ಟು ಕುತೂಹಲ ಕೆರಳಿಸಿದ್ದ ಮಂಡ್ಯದಲ್ಲಿ ಕೆಲವೊಂದು ಸಮೀಕ್ಷೆಗಳು ಸುಮಲತಾ ಗೆಲುವನ್ನ ಸಾರಿ ಹೇಳುತ್ತಿವೆ. ಮತ್ತೆ ಕೆಲವು ನಿಖಿಲ್ ಗೆಲುವಿನ ಸುಳಿವು ನೀಡಿದೆ. ಕರ್ನಾಟಕದಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಒಂಬತ್ತರಲ್ಲಿ ಮತ್ತು ಪಕ್ಷೇತರ ಅಂದರೆ ಸುಮಲತಾ ಮಂಡ್ಯದಲ್ಲಿ ಗೆಲ್ಲಬಹುದು ಎಂದು ಸೀ ವೋಟರ್ ಸರ್ವೆ ಹೇಳಿದೆ.

    ಇಂಡಿಯಾ ಟುಡೇ ಆಕ್ಸಿಸ್ ಸರ್ವೆ ಕೂಡ ಮಂಡ್ಯದ ಬಗ್ಗೆ ಕುತೂಹಲಕಾರಿ ಫಲಿತಾಂಶವನ್ನೇ ಕೊಟ್ಟಿದೆ. ಇವರ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 21ರಿಂದ 25 ಸೀಟುಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ 3ರಿಂದ 6 ಸೀಟುಗಳು ಸಿಗಲಿದ್ದು, ಸ್ವತಂತ್ರ ಅಭ್ಯರ್ಥಿ ಮಂಡ್ಯದಲ್ಲಿ ಗೆಲ್ಲಬಹುದು ಎಂದು ಹೇಳಿದೆ.

    ಟೈಮ್ಸ್ ನೌ ವಿಎಂಆರ್ ಸಮೀಕ್ಷೆಯಲ್ಲಿ ಕೂಡ ಬಿಜೆಪಿಗೆ ಕರ್ನಾಟಕದಲ್ಲಿ 21 ಸ್ಥಾನಗಳ ಸಿಗಲಿವೆಯಂತೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಬರೀ ಏಳೂ ಸ್ಥಾನಗಳು ದೊರಕಲಿದ್ದು ಇತರ ಪಕ್ಷಗಳಿಗಾಗಲಿ ಪಕ್ಷೇತರರಿಗಾಗ್ಲಿ ಯಾವುದೇ ಸ್ಥಾನಗಳು ಸಿಗಲ್ಲ ಅಂದಿದೆ. ಈ ಸಮೀಕ್ಷೆಯಲ್ಲಿ ಸುಮಲತಾಗೆ ಯಾವುದೇ ಸ್ಥಾನಗಳನ್ನ ಕೊಟ್ಟಿಲ್ಲ. ಆದರೆ ಬಿಜೆಪಿ 20ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನ ಗಳಿಸುತ್ತದೆ ಅಂದಿದ್ದು, ಇದೀಗ ಕುತೂಹಲ ಮೂಡಿಸಿದೆ.

    ಚಾಣಾಕ್ಯ ಸಮೀಕ್ಷೆಯ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ, ಬಿಜೆಪಿಗೆ 23 ಸೀಟುಗಳು ಬಂದರೆ, 5 ಸೀಟುಗಳು ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಸಿಗಲಿವೆ. ಪಕ್ಷೇತರ 0 ಅನ್ನೋ ವರದಿಯನ್ನ ಕೊಟ್ಟಿದೆ. ಈ ಪ್ರಕಾರ ನೋಡಿದರೆ ಮಂಡ್ಯದಲ್ಲಿ ಸುಮಲತಾ ಸೋಲು ಕಾಣುತ್ತಾರೆ ಅನ್ನೋದು ಸಮೀಕ್ಷಾ ವರದಿಯಾಗಿದೆ.

    ಎಬಿಪಿ ಸಮೀಕ್ಷೆ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 15 ಕ್ಷೇತ್ರಗಳನ್ನ ಬಾಚಿಕೊಂಡ್ರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ 13 ಕ್ಷೇತ್ರಗಳಲ್ಲಿ ಜಯಭೇರಿಯಾಗಲಿದೆ. ಪಕ್ಷೇತರರಿಗೆ ಯಾವುದೇ ಸ್ಥಾನ ಇಲ್ಲ. ಈ ಪ್ರಕಾರ ಹಾಸನ, ಮಂಡ್ಯ, ತುಮಕೂರು ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ.

    ಇಂಡಿಯಾ ಟಿವಿ ಸಮೀಕ್ಷೆಯಲ್ಲಿ ಬಿಜೆಪಿಗೆ 17 ಸ್ಥಾನಗಳು ಸಿಕ್ರೆ, ಕಾಂಗ್ರೆಸ್‍ಗೆ 8 ಸ್ಥಾನಗಳು ಸಿಗಲಿವೆಯಂತೆ. ಜೆಡಿಎಸ್‍ಗೆ 3 ಸೀಟುಗಳು, ಇತರೆ 0 ಅನ್ನೋ ವರದಿಯನ್ನ ಕೊಟ್ಟಿದೆ. ಈ ಪ್ರಕಾರ ಕರ್ನಾಟಕದಲ್ಲಿ ಜೆಡಿಎಸ್‍ಗೆ ಸಿಗಲಿರೋ 3 ಸೀಟುಗಳು ಹಾಸನ, ಮಂಡ್ಯ, ತುಮಕೂರು ಎನ್ನಲಾಗುತ್ತಿದೆ.

    ಈ ಎಲ್ಲಾ ಮತಗಟ್ಟೆಯ ಸಮೀಕ್ಷೆಗಳನ್ನ ನೋಡಿದರೆ ಕರ್ನಾಟಕದಲ್ಲಿ ಬಿಜೆಪಿ ಪಾಳಯ, ದೋಸ್ತಿಗಳನ್ನ ಸೋಲಿಸುವಂತೆ ಕಾಣಿಸುತ್ತಿದೆ. ಒಟ್ಟಾರೆ ಇದೆಲ್ಲದಕ್ಕೂ ಫೈನಲ್ ಉತ್ತರ ಮೇ 23ಕ್ಕೆ ಸಿಗಲಿದೆ.

  • ಎನ್‍ಡಿಎಗೆ 300ಕ್ಕೂ ಹೆಚ್ಚು ಸ್ಥಾನ ಸಿಗುತ್ತೆ ಎಂದು ಮೋದಿ ನಿನ್ನೆ ಹೇಳಿದ್ರು: ಬಿಎಸ್‍ವೈ

    ಎನ್‍ಡಿಎಗೆ 300ಕ್ಕೂ ಹೆಚ್ಚು ಸ್ಥಾನ ಸಿಗುತ್ತೆ ಎಂದು ಮೋದಿ ನಿನ್ನೆ ಹೇಳಿದ್ರು: ಬಿಎಸ್‍ವೈ

    – ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತ

    ಬೆಂಗಳೂರು: ಬಿಜೆಪಿ ನೇತೃತ್ವದ ಎನ್‍ಡಿಎ ಒಕ್ಕೂಟಕ್ಕೆ 300ಕ್ಕೂ ಹೆಚ್ಚು ಸ್ಥಾನಗಳು ಸಿಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆಯೇ ತಿಳಿಸಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಭಾರೀ ಮುನ್ನಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ನಿಶ್ಚಿತ. ಕರ್ನಾಟಕದಲ್ಲಿ 22 ಸೀಟು ಗೆಲ್ಲುತ್ತೇವೆ ಎಂದು ನಾನು ಹೇಳಿದ್ದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಈಗ 22 ಸೀಟು ಬರುತ್ತವೆ ಅಂತ ಸಮೀಕ್ಷೆಗಳು ವರದಿ ನೀಡಿವೆ. ಇದಕ್ಕೆ ಆಶ್ಚರ್ಯ ಪಡುವಂತಿಲ್ಲ, ನಮ್ಮ ನಿರಂತರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರಸ್‍ನ ಕೆಲ ಮುಖಂಡರು ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ಮೂಲಕ ಜೆಡಿಎಸ್ ಜೊತೆಗಿನ ಹೊಂದಾಣಿಕೆಯಿಂದ ಯಾವುದೇ ಲಾಭ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮೇ 23ರವರೆಗೆ ಕಾಯೋಣ. ಸ್ವಂತ ಶಕ್ತಿಯಿಂದ ನಾವು ಗೆಲ್ಲುತ್ತೇವೆ ಎಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಕನಸನ್ನು ಬಿಚ್ಚಿಟ್ಟರು.

    ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಟ್ವೀಟ್‍ಗೆ ಟಾಂಗ್ ಕೊಟ್ಟ ಬಿ.ಎಸ್.ಯಡಿಯೂರಪ್ಪನವರು, ಸೋಲನ್ನು ಒಪ್ಪಿಕೊಳ್ಳಲು ಆಗಲ್ಲ ಎಂದು ಹೇಳಿಕೆ ನೀಡುತ್ತಾರೆ. ಇದಕ್ಕೆ ವಿಶೇಷ ಅರ್ಥ ಕೊಡುವ ಅಗತ್ಯವಿಲ್ಲ. ಮಮತಾ ಬ್ಯಾನರ್ಜಿಯವರು ಗುಂಡಾಗಿರಿ ಮಾಡಿದ್ದರೂ ನಾವು ಪಶ್ಚಿಮ ಬಂಗಾಳದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯ ಬಗ್ಗೆ ಮೇ 23ರ ವರೆಗೆ ಕಾಯೋಣ. ಯಾವ ಯಾವ ಪಕ್ಷಗಳು ಯಾವ ನಿರ್ಣಯ ಕೈಗೊಳ್ಳುತ್ತವೆ ಅಂತ ನೋಡಿ ನಮ್ಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಗೆಲ್ಲುವುದು ಖಚಿತ. ಬಿಜೆಪಿಯ 2 ಲಕ್ಷ ಮತಗಳು ಅವರಿಗೆ ಸಿಕ್ಕಿವೆ ಎಂದು ತಿಳಿಸಿದರು.

  • ಪುಣ್ಯ ಕ್ಷೇತ್ರದಲ್ಲಿ ನೀರಿಲ್ಲದ್ದಕ್ಕೆ ಸರ್ಕಾರವನ್ನು ದೂರಬಾರದು- ಸುಮಲತಾ

    ಪುಣ್ಯ ಕ್ಷೇತ್ರದಲ್ಲಿ ನೀರಿಲ್ಲದ್ದಕ್ಕೆ ಸರ್ಕಾರವನ್ನು ದೂರಬಾರದು- ಸುಮಲತಾ

    ಬೆಂಗಳೂರು: ಮುಂದಿನ ದಿನಗಳಲ್ಲಿ ಮಳೆ ಬರದಿದ್ದರೆ ಧರ್ಮಸ್ಥಳದ ಮಂಜುನಾಥ ದೇವರಿಗೆ ಅಭಿಷೇಕ ಮಾಡಲು ನೀರು ಇರುವುದಿಲ್ಲ ಎಂಬ ಸುದ್ದಿ ಕೇಳಿ ನನಗೆ ತುಂಬಾ ಬೇಸರವಾಯಿತು ಎಂದು ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ.

    ‘ಅಮರ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ಮಳೆಯಾಗದಿದ್ದರೆ ಧರ್ಮಸ್ಥಳದಲ್ಲಿ ಅಭಿಷೇಕ ಮಾಡಲು ನೀರಿಲ್ಲ ಎಂಬ ಸುದ್ದಿಯನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇದರಿಂದ ನನಗೆ ತುಂಬಾ ಬೇಸರವಾಯಿತು. ಆದರೆ ಇದಕ್ಕೆ ಸರ್ಕಾರವನ್ನು ದೂರಬಾರದು ಎಂದು ಹೇಳಿದರು.

    ನಾವು ಯಾವಾಗಲೂ ಒಂದು ಸಮಸ್ಯೆ ಬಂದರೆ ಮಾತ್ರ ಅದಕ್ಕೆ ಪರಿಹಾರ ಹುಡುಕುತ್ತೇವೆ. ಆದರೆ ಸಮಸ್ಯೆ ಬರುವ ಮೊದಲೇ ಈ ರೀತಿ ಆಗಬಹುದು, ಅದಕ್ಕೆ ಏನು ಪರಿಹಾರ ಎಂಬುದನ್ನು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೂ ತಟ್ಟಿದ ನೀರಿನ ಅಭಾವದ ಬಿಸಿ

    ಅನೇಕ ವರ್ಷಗಳ ಹಿಂದೆಯೇ ಪರಿಸರ ಪರಿಣಿತರೊಬ್ಬರು ಮಾತನಾಡುವಾಗ, ಅರಣ್ಯಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ. ಇದರಿಂದ ಪರಿಸರ ನಾಶವಾಗುತ್ತಿದೆ. ಪರಿಸರ ನಾಶವಾದರೆ ಮಳೆಯಾಗುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ ಎಂದು ಹೇಳಿದ್ದರು. ಆದರೆ ನಾವು ಅವರ ಮಾತನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಈಗ ಅಯ್ಯೋ ನೀರು ನಿಂತು ಹೋಗಿದೆ. ಈಗ ಏನು ಮಾಡುವುದು ಎಂದು ಸಮಸ್ಯೆ ಬಂದಾಗ ಯೋಜನೆ ಮಾಡುವುದು ಬಹಳ ತಪ್ಪು. ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲ: ಡಾ. ವೀರೇಂದ್ರ ಹೆಗ್ಗಡೆ

    ನಾವು ಸರ್ಕಾರವೇ ಕಾರಣ ಎಂದು ಹೇಳಬಾರದು. ಇದಕ್ಕೆ ನಾವು ಏನೇ ಪರಿಹಾರ ಮಾಡಬೇಕೆಂದರೂ ಸಾರ್ವಜನಿಕರು ಮತ್ತು ಸರ್ಕಾರ ಇಬ್ಬರು ಒಟ್ಟಿಗೆ ಕೆಲಸ ಮಾಡಬೇಕು. ಹೀಗಾಗಿ ನಾವು ಪರಿಸರವನ್ನು ಕಾಪಾಡಬೇಕು. ಆಗ ಮಳೆ ಬರುತ್ತದೆ. ಇದರಿಂದ ನೀರಿನ ಸಮಸ್ಯೆ ಪರಿಹರಿಸಬಹುದು ಎಂದು ಸುಮಲತಾ ಅವರು ತಿಳಿಸಿದ್ದಾರೆ.  ಇದನ್ನೂ ಓದಿಧರ್ಮಸ್ಥಳದ ನಂತರ ರಾಯರ ಮಂತ್ರಾಲಯಕ್ಕೂ ತಟ್ಟಿದ ಬರದ ಬಿಸಿ!