Tag: ಸುಮಲತಾ ಅಂಬರೀಶ್

  • ಸಕ್ಕರೆ ನಾಡಲ್ಲಿಂದು ‘ಸ್ವಾಭಿಮಾನಿ’ಗಳ ವಿಜಯೋತ್ಸವ-ಸುಮಲತಾಗೆ ಜೋಡೆತ್ತುಗಳ ಸಾಥ್

    ಸಕ್ಕರೆ ನಾಡಲ್ಲಿಂದು ‘ಸ್ವಾಭಿಮಾನಿ’ಗಳ ವಿಜಯೋತ್ಸವ-ಸುಮಲತಾಗೆ ಜೋಡೆತ್ತುಗಳ ಸಾಥ್

    ಮಂಡ್ಯ: ಸಕ್ಕರೆನಾಡು ಮಂಡ್ಯದ ಜನತೆ ಸುಮಲತಾ ಅಂಬರೀಶ್ ಅವರನ್ನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅದರ ಫಲವಾಗಿ ಸುಮಲತಾ ಮತ್ತು ಬೆಂಬಲಿಗರು ಇಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸುವ ಮೂಲಕ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.

    ಸಕ್ಕರೆನಾಡು ಮಂಡ್ಯದ ಜನ ಸ್ವಾಭಿಮಾನಿಗಳು. ಅವರು ಮುಗ್ಧರೇ ಹೊರತು ಮೂರ್ಖರಲ್ಲ ಅಂತಾ ಹೇಳಿಕೊಂಡು ಸುಮಲತಾ ಚುನಾವಣೆಯಲ್ಲಿ ಮತ ಕೇಳಿದ್ದರು. ಹಾಗೆ ಮಂಡ್ಯ ಮತದಾರರು ಸೆರಗೊಡ್ಡಿ ಮತ ಕೇಳಿದ ಸೊಸೆ ಸುಮಲತಾರ ಕೈ ಬಿಡಲಿಲ್ಲ. ಬರೋಬ್ಬರಿ ಒಂದು ಕಾಲು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದರು. ಈಗ ಆ ಮತದಾರರಿಗೆ ಕೃತಜ್ಞತೆ ಸಲ್ಲಿಸೋ ಸಮಯ. ಹೀಗಾಗಿ ಇವತ್ತು ಸುಮಲತಾ ಮತ್ತು ಬೆಂಬಲಿಗರು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸುತ್ತಿದ್ದಾರೆ.

    ಇವತ್ತು ರೆಬೆಲ್ ಸ್ಟಾರ್ ಅಂಬಿ ಹುಟ್ಟಿದ ದಿನ. ಅಂಬಿ ಜಯಂತಿ ಹಾಗೂ ಸ್ವಾಭಿಮಾನಿ ವಿಜಯೋತ್ಸವ ಮಂಡ್ಯದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇವತ್ತಿನ ವಿಜಯೋತ್ಸವದ ಮೇನ್ ಅಟ್ರ್ಯಾಕ್ಷನ್ ಜೋಡೆತ್ತು ದರ್ಶನ್ ಮತ್ತು ಯಶ್. ಸ್ವಾಭಿಮಾನಿ ಮಂತ್ರ ಜಪಿಸಿ ಸುಮಲತಾ ಗೆಲುವಿಗೆ ಸ್ಟಾರ್‍ಡಮ್ ಬಿಟ್ಟು ಹಗಲಿರುಳು ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಅಂಬಿ ಪುತ್ರ ಅಭಿಷೇಕ್ ಸೇರಿ ಹಲವರು ಸುಮಲತಾಗೆ ವಿಜಯ ಯಾತ್ರೆಯಲ್ಲಿ ಸಾಥ್ ನೀಡಲಿದ್ದಾರೆ. ಅದರಲ್ಲೂ ಡಿ ಬಾಸ್ ದಚ್ಚು ಸಂಜಯ್ ನಗರದಲ್ಲಿ ನೆಲಕ್ಕೆ ಮುತ್ತುಕೊಟ್ಟು ಭೂಮಿತಾಯಿಗೆ ನಮಿಸಲಿದ್ದಾರೆ.

    ಬೆಳಗ್ಗೆ ಬೆಂಗಳೂರಿನಲ್ಲಿ ಅಂಬಿ ಸಮಾಧಿಗೆ ನಮನ ಸಲ್ಲಿಸಿ ಮಂಡ್ಯಗೆ ಆಗಮಿಸಲಿರುವ ಸುಮಲತಾ, ಎಂದಿನಂತೆ ಮಂಡ್ಯದ ಗ್ರಾಮದೇವತೆ ಕಾಳಮ್ಮನ ಮೊರೆ ಹೋಗಲಿದ್ದಾರೆ. ಕಾಳಿಕಾಂಬ ದೇಗುಲದಿಂದ ವಿಜಯಯಾತ್ರೆ ಆರಂಭಗೊಳ್ಳಲಿದ್ದು, ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಅಂತ್ಯಗೊಳ್ಳಲಿದೆ. ಅಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಸುಮಲತಾ, ದರ್ಶನ್, ಯಶ್ ಮಾತನಾಡಲಿದ್ದಾರೆ. ಈ ವೇಳೆ ಬಿಜೆಪಿ ಸೇರುವ ವದಂತಿ ಬಗ್ಗೆ ಸುಮಲತಾ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಜೆಡಿಎಸ್ ಸಚಿವರ ಅಸಹಕಾರ ಬಗ್ಗೆಯೂ ವೇದಿಕೆಯಲ್ಲಿ ಉತ್ತರ ಕೊಡುವ ಸಾಧ್ಯತೆ ಇದೆ. ಜೋಡೆತ್ತುಗಳು ಸಿನಿಮಾ ಶೈಲಿಯಲ್ಲೇ ದಳಪತಿಗಳಿಗೆ ತಿರುಗೇಟು ನೀಡುವ ಸಾಧ್ಯತೆ ಇದೆ.

    ಸಮಾವೇಶದಲ್ಲಿ ಅಂಬಿ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ, ಸ್ವಾಭಿಮಾನಿ ವಿಜಯೋತ್ಸವ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

  • ಹುಚ್ಚು ಅಭಿಮಾನ ಪ್ರದರ್ಶಿಸಿದ ಅಂಬರೀಶ್ ಅಭಿಮಾನಿ

    ಹುಚ್ಚು ಅಭಿಮಾನ ಪ್ರದರ್ಶಿಸಿದ ಅಂಬರೀಶ್ ಅಭಿಮಾನಿ

    ಮಂಡ್ಯ: ದಿವಂಗತ ನಟ ಅಂಬರೀಶ್ ಹುಟ್ಟು ಹಬ್ಬದ ಪ್ರಯುಕ್ತ ಅವರ ಹುಚ್ಚು ಅಭಿಮಾನಿಯೊಬ್ಬ ತನ್ನ ಕೈ ಮೇಲೆ ಅಂಬರೀಶ್ ನಟಿಸಿರುವ ಸಿನಿಮಾದ ಹೆಸರುಗಳನ್ನು ಹರಿತವಾದ ಲೋಹದಿಂದ ಬರೆದುಕೊಂಡಿದ್ದಾನೆ.

    ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಪ್ರಕಾಶ್ ಎಂಬವರೇ ಈ ರೀತಿಯ ಹುಚ್ಚು ಅಭಿಮಾನ ಪ್ರದರ್ಶಿಸಿದ್ದಾರೆ. ಪ್ರಕಾಶ್ ತಮ್ಮ ಕೈ ಮೇಲೆ ಅಂಬರೀಶ್, ಸುಮಲತಾ ಹಾಗೂ ಅಭಿ ಎಂದು ಬರೆದುಕೊಂಡಿರುವುದಲ್ಲದೇ ಅಂಬರೀಶ್ ಅವರ ನಟನೆಯ ಚಿತ್ರಗಳ ಹೆಸರನ್ನು ಬರೆದುಕೊಂಡಿದ್ದಾರೆ.

    ಅಂಬರೀಶ್ ಬದುಕಿದ್ದಾಗ ಒಂದು ದಿನ ನಿಮ್ಮೂರಿಗೆ ಭೇಟಿ ನೀಡಿ ನಿಮ್ಮ ಮನೆಗೆ ಬರುವೆ ಎಂದು ಹೇಳಿದ್ದರಂತೆ. ಆದರೆ ಅಭಿಮಾನಿಯ ಆಸೆ ಈಡೇರಿಸುವ ಮೊದಲೇ ಅಂಬರೀಶ್ ಅವರು ಇಹಲೋಕ ತ್ಯಜಿಸಿದ್ದು, ಅವರ ಕುಟುಂಬದವರಾದರು ನಮ್ಮ ಮನೆಗೆ ಬರಬೇಕೆಂದು ಅಂಬಿ ಅಭಿಮಾನಿ ಪ್ರಕಾಶ್ ಒತ್ತಾಯಿಸುತ್ತಿದ್ದಾರೆ.

  • ರವೀಂದ್ರ ಶ್ರೀಕಂಠಯ್ಯ ಸವಾಲು ಸ್ವೀಕರಿಸಿದ ಸುಮಲತಾ

    ರವೀಂದ್ರ ಶ್ರೀಕಂಠಯ್ಯ ಸವಾಲು ಸ್ವೀಕರಿಸಿದ ಸುಮಲತಾ

    – ಬಿಜೆಪಿಗೆ ಬಾಹ್ಯಬೆಂಬಲ ಸಾಧ್ಯತೆ!

    ಬೆಂಗಳೂರು: ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಕಿರುವ ಸವಾಲನ್ನು ಮಂಡ್ಯ ಕ್ಷೇತ್ರದ ನೂತನ ಸಂಸದೆ ಸುಮಲತಾ ಅಂಬರೀಶ್ ಸ್ವೀಕರಿಸಿದ್ದಾರೆ.

    ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅಂಬರೀಶ್, ಕೆಲಸದ ವಿಚಾರದಲ್ಲಿ ಮಂಡ್ಯ ಜಿಲ್ಲೆಯ ರೈತರಿಗೆ ನಾನು ಮೊದಲು ಆದ್ಯತೆ ನೀಡುತ್ತೇನೆಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ನಾಲೆಗಳಿಗೆ ನೀರು ಬಿಡುವ ಕುರಿತಾಗಿ ಎಲ್ಲರ ಮಾರ್ಗದರ್ಶನ ಪಡೆದುಕೊಂಡು ಕೆಲಸ ಮಾಡುತ್ತೇನೆ. ರೈತರ ಬೆಳೆಗಳಿಗೆ ಸರಿಯಾದ ಸಮಯದಲ್ಲಿ ನೀರು ಹರಿಸೋದು ನನ್ನ ಮೊದಲ ಕರ್ತವ್ಯವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ:  ನೂತನ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು

    ಇದೇ ವೇಳೆ ಬಿಜೆಪಿ ಸೇರ್ಪಡೆಯ ಕುರಿತು ಮಾತನಾಡಿದ ಸುಮಲತಾ ಅಂಬರೀಶ್, ಚುನಾವಣೆಯಲ್ಲಿ ಎಲ್ಲ ಪಕ್ಷದವರು ನನಗೆ ಬೆಂಬಲ ನೀಡಿದ್ದರು. ಹಾಗೆಯೇ ಬಿಜೆಪಿ ಬೇಷರತ್ ಬೆಂಬಲ ನೀಡುವ ಮೂಲಕ ತಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಹಾಗಾಗಿ ಬೆಂಬಲ ನೀಡಿದ ನಾಯಕರಿಗೆ ಧನ್ಯವಾದ ಸಲ್ಲಿಸಲು ಬಂದಿದ್ದೇನೆ. ಗೆಲುವು ಸಾಧಿಸಿದ ಪಕ್ಷೇತರ ಅಭ್ಯರ್ಥಿ ಪಕ್ಷ ಸೇರುವ ಅವಕಾಶ ಸಂವಿಧಾನವಿಲ್ಲ. ಕೇವಲ ಬಾಹ್ಯ ಬೆಂಬಲ ನೀಡಲು ಮಾತ್ರ ಸಾಧ್ಯ. ಹಾಗಾಗಿ ಮಂಡ್ಯ ಅಭಿವೃದ್ಧಿಗೆ ಯಾವುದು ಒಳಿತು ಎಂಬುದನ್ನು ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

    ಮುಂದಿನ ದಿನಗಳಲ್ಲಿ ಮಂಡ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ಪ್ರವಾಸಕೈಗೊಂಡು ನನ್ನ ಮುಂದಿನ ನಡೆಯ ಬಗ್ಗೆ ಎಲ್ಲ ಕಾರ್ಯಕರ್ತರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು. ಬಿ.ಎಸ್.ಯಡಿಯೂರಪ್ಪವರ ನಿವಾಸದಿಂದ ನೇರವಾಗಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿದರು.

    ಸುಮಲತಾ ಅಂಬರೀಶ್ ಬರೋದಕ್ಕಿಂತ ಮೊದಲೇ ಎಸ್.ಎಂ.ಕೃಷ್ಣ ನಿವಾಸದಲ್ಲಿ ಕಾಂಗ್ರೆಸ್ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಸುಧಾಕರ್ ಇದ್ದಾರೆಂಬ ಮಾಹಿತಿಗಳು ಲಭ್ಯವಾಗಿದೆ. ಕೃಷ್ಣ ಅವರ ನಿವಾಸದಲ್ಲಿಯೇ ಮೈತ್ರಿ ಸರ್ಕಾರದ ಅಳಿವು-ಉಳಿವಿನ ಬಗ್ಗೆ ಚರ್ಚೆ ನಡೆಸುತ್ತಾರೆ ಎನ್ನಲಾಗುತ್ತಿದೆ.

  • ನೂತನ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು

    ನೂತನ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸವಾಲು

    ಮಂಡ್ಯ: ಸಕ್ಕರೆ ನಾಡಿನ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಸುಮಲತಾ ಅಂಬರೀಶ್ ಅವರಿಗೆ ಮೊದಲ ಸವಾಲು ಎದುರಾಗಿದೆ. ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ರೈತರ ಬೆಳೆಗಳಿಗೆ ನೀರು ಬಿಡಿಸುವ ಜವಾಬ್ದಾರಿಯನ್ನು ಸುಮಲತಾರ ಹೆಗಲಿಗೆ ವರ್ಗಾಯಿಸಿದ್ದಾರೆ.

    ಜಿಲ್ಲೆಯ ರೈತರ ಬೆಳೆಗಳು ಒಣಗುತ್ತಿದ್ದು, ಕೆಆರ್ ಎಸ್‍ನಿಂದ ನೀರು ಬಿಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರ ರವೀಂದ್ರ ಶ್ರೀಕಂಠಯ್ಯ, ಈ ಲೋಕಸಭಾ ಚುನಾವಣೆ ಅನುಕಂಪದ ಆಧಾರದಲ್ಲಿ ಫಲ ಪಡೆದಿದೆ. ಸುಮಲತಾ ಅವರು ಬರೀ ಪಕ್ಷೇತರ ಅಭ್ಯರ್ಥಿಯಾಗಿ ಉಳಿದಿಲ್ಲ. ಅವರು ಈಗ ನಮ್ಮ ಜಿಲ್ಲೆಯ ಸಂಸದೆಯಾಗಿರುವ ಸುಮಲತಾರನ್ನು ಅಭಿನಂದಿಸುತ್ತೇನೆ. ನಮ್ಮ ಜಿಲ್ಲೆಯ ನಾಲೆಗಳಿಗೆ ನೀರು ಹರಿಸುವ ವಿಷಯಲ್ಲಿ ನಮಗೆ ಸಪೋರ್ಟ್ ಸಿಕ್ಕಂತೆ ಆಗಿದೆ ಎಂದರು.

    ನೀರು ನಿರ್ವಹಣಾ ಮಂಡಳಿ ಕೇಂದ್ರದ ಸುಪರ್ದಿಯಲ್ಲಿದ್ದು, ಸುಮಲತಾ ಅವರು ಸಂಸದರಾಗಿರುವದರಿಂದ ಜಿಲ್ಲೆಯ ಜನರಿಗೆ ಕೇಳಿದಾಗ ನೀರು ಬಿಡಿಸಿಕೊಡುತ್ತಾರೆ. ಇದರಿಂದ ಜಿಲ್ಲೆಯ ಜನರಿಗೆ ನ್ಯಾಯ ಸಿಗಲಿದೆ. ನಮ್ಮ ಜವಾಬ್ದಾರಿಗಳನ್ನು ಸುಮಲತಾರು ಸ್ವಲ್ಪ ತೆಗೆದುಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರೈತರ ಪರ, ಬಡವರ ಪರ ಇರಿ ಎಂದು ಸುಮಲತಾರನ್ನು ಕೇಳಿಕೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು.

  • ಜೋಡೆತ್ತು, ಬಿಜೆಪಿ ಬಲದಿಂದ ಸುಮಲತಾ ಅಂಬರೀಶ್ ಗೆದ್ದಾಯ್ತು, ಮುಂದೇನು?

    ಜೋಡೆತ್ತು, ಬಿಜೆಪಿ ಬಲದಿಂದ ಸುಮಲತಾ ಅಂಬರೀಶ್ ಗೆದ್ದಾಯ್ತು, ಮುಂದೇನು?

    ಬೆಂಗಳೂರು: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಂಡ ಬಹುಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಮುಂದೆ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಏನು ಎಂಬುದರ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಬಿಜೆಪಿ ಸೇರ್ಪಡೆಯ ಬಗ್ಗೆ ಚಿಂತಿಸಿಲ್ಲ. ಮುಂದಿನ ದಿನಗಳಲ್ಲಿ ಮಂಡ್ಯ ಜನತೆಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಗೆಲುವಿನ ಬಳಿಕ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಇಂದು ಭೇಟಿಯಾಗಲಿದ್ದಾರೆ. ಕೇವಲ ಧನ್ಯವಾದ ತಿಳಿಸಲು ನಾಯಕರನ್ನು ಭೇಟಿಯಾಗುತ್ತಿದ್ದಾರೆ ಎಂದು ಸುಮಲತಾ ಆಪ್ತ ಮೂಲಗಳು ತಿಳಿಸಿವೆ.

    ಸುಮಲತಾರ ಭೇಟಿಯ ಉದ್ದೇಶವೇನು? ಮುಂದಿನ ದಿನಗಳಲ್ಲಿ ಬಿಜೆಪಿ ಸೇರ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಒಂದು ವೇಳೆ ಪಕ್ಷ ಸೇರ್ಪಡೆಯಾಗದಿದ್ದರೂ ಬಾಹ್ಯ ಬೆಂಬಲ ನೀಡಿ ಸಚಿವ ಸ್ಥಾನ ಪಡೆಯುತ್ತಾರಾ ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಹುಟ್ಟಿಕೊಂಡಿವೆ.

  • ಸುಮಲತಾ ಎನ್‍ಡಿಎಗೆ ಬೆಂಬಲಿಸಿದ್ರೆ ಎಲ್ಲರಿಗೂ ಗೌರವ- ಕೋಟ ಶ್ರೀನಿವಾಸ ಪೂಜಾರಿ

    ಸುಮಲತಾ ಎನ್‍ಡಿಎಗೆ ಬೆಂಬಲಿಸಿದ್ರೆ ಎಲ್ಲರಿಗೂ ಗೌರವ- ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ: ಸುಮಲತಾ ಅಂಬರೀಶ್ ಗೆಲುವು ಸಾಮಾನ್ಯ ಎಂದು ಭಾವಿಸಿಲ್ಲ. ಬಿಜೆಪಿ ಸುಮಲತಾರಿಗೆ ಬೇಷರತ್ ಬೆಂಬಲ ನೀಡಿತ್ತು. ಅವರಾಗಿಯೇ ಎನ್‍ಡಿಎ ಗೆ ಬೆಂಬಲ ನೀಡಿದರೆ ಎಲ್ಲರಿಗೂ ಒಂದು ಗೌರವ ಬರುತ್ತದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಇಡೀ ಕರ್ನಾಟಕ ಸರ್ಕಾರವನ್ನು ಎದುರಿಸಿ ಸುಮಲತಾ ಗೆದ್ದಿದ್ದಾರೆ. ಮಂಡ್ಯ ಸಾಭಿಮಾನದ ಜಿಲ್ಲೆ ಎಂದು ಸಾಬೀತಾಗಿದೆ. ಮೈತ್ರಿ ಸರ್ಕಾರಕ್ಕೆ ಕಪಾಳ ಮೋಕ್ಷವಾಗಿದೆ ಎಂದು ಹೇಳಿದರು.

    ಸುಮಲತಾಗೆ ಬೆಂಬಲ ಕೊಡುವಾಗ ಯಾವುದೇ ಷರತ್ತು ಹಾಕಿಲ್ಲ. ನಮ್ಮ ಅಪೇಕ್ಷೆಯಿಲ್ಲ, ಯಾವ ಕರಾರು ಮಾಡಿಕೊಂಡಿಲ್ಲ. ಈಗಲೂ ಈ ನಿಲುವಿಗೆ ಬದ್ಧವಾಗಿದ್ದೇವೆ. ಅವರಾಗಿಯೇ ಎನ್ ಡಿ ಎಗೆ ಬೆಂಬಲ ಕೊಟ್ಟರೆ ಎಲ್ಲರಿಗೂ ಗೌರವ ಬರುತ್ತದೆ ಎಂದರು.

    ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ ಕೋಟ, ಜಂಟಿ ಸರ್ಕಾರವನ್ನು ಬೀಳಿಸುವುದು ಬೇಡ. ಅದೇ ಬೀಳುತ್ತದೆ. ಕುಮಾರಸ್ವಾಮಿಯವರು ಮತ್ತು ಸಿದ್ದರಾಮಯ್ಯನವರು ಪ್ರಮಾದವಾಗಿದೆ ಎಂದು ಈಗ ಹೇಳುತ್ತಾರೆ. ಇವರ ಹೊಂದಾಣಿಕೆ ಅಧಿಕಾರ ದಾಹಕ್ಕಾಗಿ ಕುರ್ಚಿಗಾಗಿ ಎಂದು ಜನ ಅರಿತುಕೊಂಡು ಇವರನ್ನು ಜನರೇ ಮನೆಗೆ ಕಳುಹಿಸಿದ್ದಾರೆ. ಘಟನಾನುಘಟಿಗಳು ಸೋಲಲು ಇದೂ ಒಂದು ಕಾರಣ ಎಂದು ಹೇಳಿದರು.

  • ಮೆರೆದಾಡದೆಯೂ ಮನಸು ಮುಟ್ಟೋ ಪಾರ್ವತಮ್ಮನ ಮಗಳು!

    ಮೆರೆದಾಡದೆಯೂ ಮನಸು ಮುಟ್ಟೋ ಪಾರ್ವತಮ್ಮನ ಮಗಳು!

    ಬೆಂಗಳೂರು: ಹರಿಪ್ರಿಯಾ ನಟನೆಯ ಇಪ್ಪತೈದನೇ ಚಿತ್ರವೆಂಬುದೂ ಸೇರಿದಂತೆ ನಾನಾ ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಯಾವುದೇ ಅಬ್ಬರವಿಲ್ಲದ ನಿರೂಪಣೆ, ನಮ್ಮ ಆಸುಪಾಸಲ್ಲಿಯೇ ಕಥೆ ಘಟಿಸುತ್ತಾ ಪಾತ್ರಗಳು ಚಲಿಸಿದಂತೆ ಭಾಸವಾಗುವಷ್ಟು ವಾಸ್ತವಿಕ ದೃಶ್ಯಗಳ ಜೊತೆ ಜೊತೆಗೇ ಡೋಂಟ್ ಕೇರ್ ಸ್ವಭಾವದ ಪಾರ್ವತಮ್ಮನ ಮಗಳ ಸ್ಟೋರಿ ಬಿಚ್ಚಿಕೊಳ್ಳುತ್ತೆ.

    ಜೆ ಶಂಕರ್ ಇದೊಂದು ಭಿನ್ನ ಶೈಲಿಯ ಕಮರ್ಶಿಯಲ್ ಚಿತ್ರ ಎಂಬ ಸುಳಿವನ್ನು ಆರಂಭದಲ್ಲಿಯೇ ಜಾಹೀರು ಮಾಡಿದ್ದರು. ಆದ್ದರಿಂದಲೇ ಮಾಮೂಲಿ ಮೆಥಡ್ಡಿನ ನಾಯಕಿ ಪ್ರಧಾನ ಚಿತ್ರಗಳಿಗಿಂತ ಸಂಪೂರ್ಣವಾಗಿ ಬೇರೆ ರೀತಿಯಲ್ಲಿ ಈ ಸಿನಿಮಾ ಪ್ರೇಕ್ಷಕರಿಗೆಲ್ಲ ಆಪ್ತವಾಗುತ್ತೆ.

    ನಾಯಕಿ ಶಾಲಾ ಕಾಲೇಜು ಹಂತದಿಂದಲೇ ಬೋಲ್ಡ್ ವ್ಯಕ್ತಿತ್ವ ಹೊಂದಿರುವಾಕೆ. ಈಕೆಯ ಖದರಿನ ಮುಂದೆ ಗಂಡು ಹೈಕಳೇ ಮಂಕು ಬಡಿಯುತ್ತವೆ. ಅಂಥಾ ಡೋಂಟ್ ಕೇರ್ ಸ್ವಭಾವದ ಹುಡುಗಿ ಪಾರ್ವತಮ್ಮನ ಮುದ್ದಿನ ಮಗಳು. ಆಕೆಯ ಬದುಕಲ್ಲಿಯೂ ಕೂಡಾ ಹಲವಾರು ನೋವು, ನಿರಾಸೆಗಳಿರುತ್ತವೆ. ಆದರೆ ಅದ್ಯಾವುದೂ ಕೂಡಾ ತನ್ನ ಪಾದರಸದಂಥಾ ವ್ಯಕ್ತಿತ್ವವನ್ನು ಘಾಸಿಗೊಳಿಸದಂತೆ ನೋಡಿಕೊಂಡು ಮುಂದುವರೆಯೋ ಪಾರ್ವತಮ್ಮನ ಮಗಳು ಕಡೆಗೂ ಕಷ್ಟಪಟ್ಟು ಓದಿ ಪೊಲೀಸ್ ಅಧಿಕಾರಿಯಾಗುತ್ತಾಳೆ. ಎಂಥಾ ಕ್ಲಿಷ್ಟಕರವಾದ ಕೇಸನ್ನೇ ಆದರೂ ಲೀಲಾಜಾಲವಾಗಿ ಬೇಧಿಸೋ ಚಾಕಚಕ್ಯತೆಯೊಂದಿಗೆ ಹೆಸರುವಾಸಿಯಾಗುತ್ತಾಳೆ.

    ಇಂಥಾ ಪೊಲೀಸ್ ಅಧಿಕಾರಿಣಿ ಪಾರ್ವತಮ್ಮನ ಮಗಳ ಮುಂದೆ ಭಯಾನಕವಾದೊಂದು ಪ್ರಕರಣ ತನಿಖೆಗಾಗಿ ಬರುತ್ತದೆ. ಅದು ವೈದ್ಯೆಯೊಬ್ಬಳ ಅಸಹಜ ಸಾವಿನ ಪ್ರಕರಣ. ಅದರಲ್ಲಿ ವೈದ್ಯಕೀಯ ವರದಿ ಸೇರಿದಂತೆ ಎಲ್ಲವೂ ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಈ ಪ್ರಕರಣದ ಸಿಕ್ಕನ್ನು ಪಾರ್ವತಮ್ಮನ ಮಗಳು ಹೇಗೆ ಬಿಡಿಸುತ್ತಾಳೆಂಬುದರ ಸುತ್ತ ಈ ಕಥೆ ರೋಚಕವಾಗಿ, ಯಾವುದೇ ಅಬ್ಬರಗಳಿಲ್ಲದೆ ಸಾಗುತ್ತೆ.

    ಇಂಥಾ ಪೊಲೀಸ್ ವೃತ್ತಿ, ಇನ್ವೆಸ್ಟಿಗೇಷನ್ನುಗಳಾಚೆಗೆ ಪಾರ್ವತಮ್ಮನ ಮಗಳ ಕಥೆ ಮನಸಿಗೆ ನಾಟುತ್ತೆ. ಆಕೆ ಒಳಿತೆಲ್ಲವನ್ನು ಮಗುಮನಸಿನಿಂದ ಸ್ವೀಕರಿಸುತ್ತಾ, ಅನ್ಯಾಯವನ್ನು ನಿಂತ ನಿಲುವಿನಲ್ಲಿಯೇ ಪ್ರತಿಭಟಿಸೋ ಹೆಣ್ಣುಮಗಳಾಗಿ ಎಲ್ಲರ ಮನಸಿಗಿಳಿಯುತ್ತಾಳೆ. ತೀರಾ ಯಾರಾದರೂ ಹುಡುಗ ಇಷ್ಟವಾದರೆ ನೇರಾನೇರ ಹೋಗಿ ಪ್ರಪೋಸ್ ಮಾಡಿ ಬಿಡುವಂಥಾ ಈ ಗಟ್ಟಿಗಿತ್ತಿಯ ಪಾಲಿಗೆ ಅಮ್ಮ ಪಾರ್ವತಮ್ಮ ನಿಜವಾದ ಶಕ್ತಿ. ಆ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸಿದ್ದಾರೆ. ತಾಯ್ತನದ ಎಲ್ಲ ಭಾವಗಳನ್ನೂ ಹೊಂದಿರೋ ಈ ಪಾತ್ರದ ಮೂಲಕ ಅವರ ಎಲ್ಲರನ್ನೂ ಆವರಿಸಿಕೊಳ್ಳುತ್ತಾರೆ.

    ನಾಯಕಿ ಪ್ರಧಾನ ಚಿತ್ರಗಳಲ್ಲಿರೋ ಯಾವ ಅಬ್ಬರವೂ ಇಲ್ಲಿಲ್ಲ. ಆದರೆ ನಿರ್ದೇಶಕ ಜೆ ಶಂಕರ್ ಅವರು ಅದೊಂದು ಕೊರತೆ ಅನ್ನಿಸದಂತೆ ದೃಶ್ಯ ಕಟ್ಟಿದ್ದಾರೆ. ಯಾಕೆಂದರೆ ಹರಿಪ್ರಿಯಾ ಪಾರ್ವತಮ್ಮನ ಮಗಳಾಗಿ ಯಾವ ಮೆರೆದಾಟವೂ ಇಲ್ಲದೆ ನೋಡುಗರ ಮನಸು ಮುಟ್ಟುತ್ತಾರೆ. ನಿರ್ಮಾಪಕರಾದ ಶಶಿಧರ್ ಕೆ ಎಂ ಅವರೂ ಕೂಡಾ ಡಾಕ್ಟರ್ ಪಾತ್ರದಲ್ಲಿ ಮಿಂಚಿದ್ದಾರೆ. ತರಂಗ ವಿಶ್ವ ಸೇರಿದಂತೆ ಎಲ್ಲರೂ ತಂತಮ್ಮ ಪಾತ್ರಗಳಿಗೇ ಬೇರೆಯದ್ದೇ ಟಚ್ ನೀಡಿದ್ದಾರೆ. ಈ ಮೂಲಕವೇ ಜೆ ಶಂಕರ್ ಭಿನ್ನ ಬಗೆಯ, ಕ್ರಿಯೇಟಿವ್ ನಿರ್ದೇಶಕರಾಗಿ ನೆಲೆ ನಿಲ್ಲುವ ಸೂಚನೆಯನ್ನೂ ರವಾನಿಸಿದ್ದಾರೆ. ಎಂಥಾ ಪಾತ್ರಗಳಿಗಾದರೂ ಹೊಂದಿಕೊಳ್ಳುವ ಹರಿಪ್ರಿಯಾ ಪಾರ್ವತಮ್ಮನ ಮಗಳಾಗಿ ಮತ್ತಷ್ಟು ಇಷ್ಟವಾಗುತ್ತಾರೆ. ಇದು ಎಲ್ಲರೂ ನೋಡಲೇ ಬೇಕಾದ ವಿಶಿಷ್ಟವಾದ ಚಿತ್ರ.

    ರೇಟಿಂಗ್: 3.5/5

  • ಅಂಬರೀಶ್ ನೆನೆದು ಕಣ್ಣೀರು – ಬಿಜೆಪಿಗೆ ಹೋಗೋ ಪ್ಲಾನ್ ಸದ್ಯಕ್ಕಿಲ್ಲ: ಸುಮಲತಾ

    ಅಂಬರೀಶ್ ನೆನೆದು ಕಣ್ಣೀರು – ಬಿಜೆಪಿಗೆ ಹೋಗೋ ಪ್ಲಾನ್ ಸದ್ಯಕ್ಕಿಲ್ಲ: ಸುಮಲತಾ

    ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಮಂಡ್ಯದಲ್ಲಿ ಜಯಗಳಿಸಿದ ಬಳಿಕ ಅಂಬರೀಶ್ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಾನು ಸದ್ಯಕ್ಕೆ ಬಿಜೆಪಿಗೆ ಹೋಗೋ ಪ್ಲಾನ್ ಇಲ್ಲ ಎಂದು ಹೇಳಿದ್ದಾರೆ.

    ಅಂಬರೀಶ್ ಸಮಾಧಿಗೆ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, “ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ ಎಂದು ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೀನಿ. ಜನಾಭಿಪ್ರಾಯ ಪಡೆದು ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ದೆ. ಈಗ ಮುಂದಿನ ನನ್ನ ತೀರ್ಮಾನವೂ ಜನಾಭಿಪ್ರಾಯದ ಮೇಲೆ ನಿಂತಿರುತ್ತೆ” ಎಂದು ಹೇಳಿದ್ದಾರೆ.

    ಬಳಿಕ ಮಾತನಾಡಿದ ಅವರು, ಗೆಲುವಿನ ಅಂತರ ನಿರೀಕ್ಷೆ ಮಾಡಿದ್ದೆ. ಡಮ್ಮಿ ಸುಮಲತಾ ಅಭ್ಯರ್ಥಿಗಳಿಗೆ 25000 ವೋಟ್ ಬಿದ್ದಿವೆ. ಅಲ್ಲಿಗೆ 1.50 ಲಕ್ಷ ಅಂತರದಲ್ಲಿ ನಾನು ಗೆದ್ದಿದ್ದೀನಿ. ಸರ್ಕಾರ ನನಗೆ ವಿರುದ್ಧ ಇದ್ದರೂ ಇಡೀ ಮಂಡ್ಯ ಜನ ನನ್ನ ಕಡೆ ಇದ್ದರು. ಹಾಗಾಗಿ ಇದು ನನ್ನ ಗೆಲುವಲ್ಲ ಅಂಬಿ, ಸ್ವಾಭಿಮಾನಿ ಹಾಗೂ ಜೋಡೆತ್ತುಗಳ ಗೆಲುವು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದವರು ನನಗೆ ಸಾಥ್ ಕೊಟ್ಟಿದ್ದಾರೆ. ಸ್ವಾಭಿಮಾನಿ ಏನು ಎನ್ನುವುದನ್ನು ಮಂಡ್ಯದ ಜನ ತೋರಿಸಿಕೊಟ್ಟಿದ್ದಾರೆ ಎಂದರು.

    ನಿಮ್ಮ ಮುಂದಿನ ನಡೆಯೇನು ಎಂಬ ಪ್ರಶ್ನೆಗೆ, ಎಲ್ಲರೂ ವಿಶ್ ಮಾಡಿದ್ದಾರೆ. ಈಗ ಗೆಲುವನ್ನು ಅನುಭವಿಸುವ ಸಮಯ, ಮೇ 29ರಂದು ಅಂಬಿ ಅವರ ಹುಟ್ಟುಹಬ್ಬವಿದೆ. ಸ್ವಾಭಿಮಾನಿಗಳ ವಿಜಯೋತ್ಸವ ಮಂಡ್ಯದಲ್ಲಿ ಆಚರಣೆ ಮಾಡುವುದಕ್ಕೆ ನಿರ್ಧರಿಸಿದ್ದೇನೆ. ಸ್ವಾಭಿಮಾನಿ ವಿಜಯೋತ್ಸವದಲ್ಲಿ ಜೋಡೆತ್ತುಗಳು ಭಾಗಿಯಾಗಲಿದ್ದಾರೆ. ರೆಬೆಲ್ ಇದ್ದಿದ್ರೆ ನನಗೆ ಏನು ಬೇಕಾಗಿರಲಿಲ್ಲ. ಕರ್ಣನಿಲ್ಲ ಆದರೆ ನನಗೆ ಅಂಬರೀಶ್ ಗೈಡ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ನನ್ನ ಮುಂದಿನ ನಡೆ ಜನಾಭಿಪ್ರಾಯದ ಮೇಲೆ ನಿಂತಿರುತ್ತೆ. ಒಬ್ಬ ಸಂಸದೆಯಾಗಿ ನಾನು ಮಾಡಬಹುದೋ ಅದೆಲ್ಲವನ್ನು ನಾನು ಮಂಡ್ಯ ಜನರಿಗೆ ಮಾಡುತ್ತೇನೆ. ಮಂಡ್ಯ ಜನರಿಗಾಗಿ ಅಂಬಿ ಕಂಡು ಕನಸುಗಳು ಒಂದಿಷ್ಟು ಬಾಕಿಯಿವೆ. ಅದೆಲ್ಲವನ್ನು ಪೂರ್ಣ ಮಾಡುವುದಾಗಿ ನಾನು ಭರವಸೆ ನೀಡುತ್ತೇನೆ. ಸದ್ಯ ಈಗ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ಕೆಲವರು ಕಾಲ್ ಮಾಡಿ ವಿಶ್ ಮಾಡಿದ್ದಾರೆ ಎಂದು ತಿಳಿಸಿದರು.

  • ಅಂಬಿ ಪುಣ್ಯತಿಥಿಗೆ ಸುಮಲತಾರಿಂದ ಜಯದ ಉಡುಗೊರೆ

    ಅಂಬಿ ಪುಣ್ಯತಿಥಿಗೆ ಸುಮಲತಾರಿಂದ ಜಯದ ಉಡುಗೊರೆ

    ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಮಂಡ್ಯದಲ್ಲಿ ಜಯಭೇರಿ ಹಿನ್ನೆಲೆ ಅಂಬರೀಶ್ ಸಮಾಧಿಗೆ ನಮನ ಸಲ್ಲಿಸಲಿದ್ದಾರೆ.

    ಅಂಬರೀಶ್ ಅವರು ನಮ್ಮನ್ನ ಅಗಲಿ ಇಂದಿಗೆ 6 ತಿಂಗಳುಗಳೇ ಕಳೆದಿದೆ. ಈ ಹಿನ್ನೆಲೆಯಲ್ಲಿ 6 ನೇ ತಿಂಗಳ ಪುಣ್ಯ ತಿಥಿ ಕೂಡ ಆಚರಣೆ ಮಾಡಲಿದ್ದಾರೆ. ಇಂದು ಬೆಳ್ಳಗ್ಗೆ 10 ಗಂಟೆ ಸುಮಾರಿಗೆ ಕಂಠೀರವ ಸ್ಟುಡಿಯೋದಲ್ಲಿ ಇರುವ ಅಂಬರೀಶ್ ಸಮಾಧಿಗೆ ಸುಮಲತಾ ಮತ್ತು ಅಭಿಷೇಕ್ ಭೇಟಿ ನೀಡಲಿದ್ದಾರೆ.

    ಇಂದು ನಡೆಯುವ ಪೂಜೆಗೆ ಮಧ್ಯರಾತ್ರಿಯಿಂದಲೇ ಪೂರ್ವ ಸಿದ್ಧತೆ ನಡೆಯುತ್ತಿದ್ದು, ಅಂಬರೀಶ್ ಸಮಾಧಿಗೆ ಪುಪ್ಪಲಂಕಾರವನ್ನು ಮಾಡುತ್ತಿದ್ದರು. ಮಂಡ್ಯದ ಗೆಲುವಿನ ಸಂಭ್ರಮ ಮತ್ತು ಅಂಬಿಯ 6ನೇ ತಿಂಗಳಿನ ಪುಣ್ಯ ತಿಥಿ ಒಟ್ಟೊಟ್ಟಾಗಿ ಬಂದಿದ್ದು ಸಮಾಧಿಗೆ ಭೇಟಿ ನೀಡಿ ಪೂಜೆಯನ್ನು ನೇರವೆರಿಸಲಿದ್ದಾರೆ. ಪೂಜೆ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಯಶ್ ಭಾಗಿಯಾಗುವ ಸಾಧ್ಯತೆಗಳಿವೆ.

    ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು 2018ರ ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದ ಕನಗನಮರಡಿಯಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಬೇಸರಗೊಂಡಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

    ಚುನಾವಣೆಯಲ್ಲಿ ಜಯ:
    ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ ಅವರು ಭರ್ಜರಿ ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ. ಆ ಮೂಲಕ ಸುಮಲತಾ ಅವರು ಬರೋಬ್ಬರಿ 1,26,436 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

  • ಮಂಡ್ಯ ಜನರ ಪ್ರೀತಿಗೆ ಸದಾ ಚಿರಋಣಿ: ನಟ ದರ್ಶನ್

    ಮಂಡ್ಯ ಜನರ ಪ್ರೀತಿಗೆ ಸದಾ ಚಿರಋಣಿ: ನಟ ದರ್ಶನ್

    ಬೆಂಗಳೂರು: ಸುಮಲತಾ ಅಂಬರೀಶ್ ಅಮ್ಮ ಅವರ ಅಭೂತಪೂರ್ವ ಗೆಲುವಿಗೆ ಕಾರಣರಾದ ಮಂಡ್ಯದ ಆತ್ಮೀಯ ಮತದಾರ ಬಂಧುಗಳೆ ಮತ್ತು ನನ್ನೆಲ್ಲಾ ಪ್ರೀತಿಯ ಅಭಿಮಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂದು ನಟ ದರ್ಶನ್ ತಿಳಿಸಿದ್ದಾರೆ.

    ಮಂಡ್ಯ ಜನತೆಗೆ ಧನ್ಯವಾದ ತಿಳಿಸಿ ವಿಡಿಯೋ ಟ್ವೀಟ್ ಮಾಡಿರುವ ದರ್ಶನ್, ಮಂಡ್ಯ ಲೋಕಸಭಾ ಜನತೆ ತೋರಿಸುವ ಜನತೆಯ ಪ್ರೀತಿಗೆ ಸದಾ ಚಿರಋಣಿಯಾಗಿರುತ್ತೇನೆ. ಅಂದು ಒಂದೇ ಮಾತು ಹೇಳಿದ್ದು, ಈಗಲೂ ಅದನ್ನೇ ಹೇಳುತ್ತೇನೆ. ಸಾವಯುವವರೆಗೂ ನಿಮ್ಮ ಋಣದಲ್ಲಿ ಇರುತ್ತೇವೆ ಎಂದಿದ್ದಾರೆ.

    ನಾವು ಮಾಡಿದ ಸಣ್ಣ ಅಳಿಲು ಸೇವೆಗೆ ಇಷ್ಟು ಬಹುಮತ ನೀಡಿ ಗೆಲ್ಲಿಸಿಕೊಂಡು ಬಂದ್ದಿದ್ದೀರಿ. ನಮ್ಮ ಪಾಲಿಗೆ ನೀವು ದೇವರ ರೀತಿ ಆಗಿದ್ದು, ಧನ್ಯವಾದ ಎಂದು ಹೇಳಿದರೆ ಅದು ತುಂಬಾ ಸಣ್ಣ ಪದ ಆಗುತ್ತದೆ. ಪ್ರತಿ ಸಣ್ಣ ಹಳ್ಳಿಯಲ್ಲಿಯೂ ನೀವು ತೋರಿದ ಪ್ರೀತಿ ಸ್ಮರಣೀಯವಾದದ್ದು, ಮುಂದಿನ 5 ವರ್ಷದ ಅವಧಿಯಲ್ಲಿ ಸುಮಲತಾ ಅವರು ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ. ಮಂಡ್ಯ ಲೋಕಸಭಾ ವ್ಯಾಪ್ತಿಯ ಎಲ್ಲಾ ಜನರಿಗೂ ಸಾಷ್ಟಾಂಗ ನಮಸ್ಕಾರಗಳು, ಅಮ್ಮ ನಿಮ್ಮ ಪ್ರೀತಿಯನ್ನು ಕಾಪಾಡಿಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ.