Tag: ಸುಮಲತಾ ಅಂಬರೀಶ್

  • ಸುಮಲತಾ ಬೆಂಬಲಿಗನಿಂದ ಸರ್ಕಾರಿ ವಾಹನ ದುರ್ಬಳಕೆ!

    ಸುಮಲತಾ ಬೆಂಬಲಿಗನಿಂದ ಸರ್ಕಾರಿ ವಾಹನ ದುರ್ಬಳಕೆ!

    ಮಂಡ್ಯ: ಕ್ಷೇತ್ರದ ಸಂಸದೆಯಾಗಿ ಸುಮಲತಾ ಅಂಬರೀಶ್ ಅವರು ಗೆಲ್ಲುತ್ತಿದ್ದಂತೆ ಅವರ ಬೆಂಬಲಿಗರಿಂದ ಸರ್ಕಾರಿ ಸವಲತ್ತು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ.

    ಸುಮಲತಾ ಅವರಿಗೆ ನೀಡಲಾಗಿರುವ ಬೆಂಗಾವಲು ಪೊಲೀಸ್ ವಾಹನದಲ್ಲಿ ಅವರ ಬೆಂಬಲಿಗರಾದ ಬೇಲೂರು ಸೋಮಶೇಖರ್ ಸುತ್ತಾಟ ನಡೆಸುತ್ತಿದ್ದಾರೆ. ಪೊಲೀಸರ ವಾಹನದ ದುರುಪಯೋಗ ಆಗುತ್ತಿರುವ ಬಗ್ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಕ್ಷೇತ್ರದ ಕೀಲಾರ ಗ್ರಾಮಕ್ಕೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಶ್ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅಲ್ಲದೇ ಕೀಲಾರ ಗ್ರಾಮದಲ್ಲಿ ನಡೆಯುತ್ತಿರುವ ಸ್ವಚ್ಚಾ ಮೇವ ಜಯತೆ ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು. ಸಂಸದರಾದ ನಂತರ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ನನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಧನ್ಯವಾದ ತಿಳಿಸಿದರು.

    ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಯಾರ ಬಗ್ಗೆಯೂ ಟೀಕೆ ಮಾಡುವುದಿಲ್ಲ. ಬರ, ನೀರಿನ ಸಮಸ್ಯೆ ಹೆಚ್ಚಿದ್ದು, ರಾಜಕಾರಣ ಮಾಡೋ ಸಮಯ ಇದಲ್ಲ. ಟೀಕೆಗಳಿಗೆ ಉತ್ತರ ಕೊಡುತ್ತಾ ಸಮಯ ಹರಣ ಮಾಡಲ್ಲ ಎಂದರು.

  • ಟೀಕೆಗಳಿಗೆ ಉತ್ತರಿಸುತ್ತಾ ಕಾಲ ಹರಣ ಮಾಡಲ್ಲ- ಸುಮಲತಾ

    ಟೀಕೆಗಳಿಗೆ ಉತ್ತರಿಸುತ್ತಾ ಕಾಲ ಹರಣ ಮಾಡಲ್ಲ- ಸುಮಲತಾ

    – ಎಂಪಿಯಾದ ಮೊದಲ ಬಾರಿಗೆ ಮಂಡ್ಯಕ್ಕೆ ಭೇಟಿ
    – ಒಂದೇ ವೇದಿಕೆಯಲ್ಲಿ ಸುಮಲತಾ, ಜೆಡಿಎಸ್ ಮುಖಂಡ
    – ಜನರ ಸಮಸ್ಯೆ ಆಲಿಸಲು ಮಂಡ್ಯದಲ್ಲಿ ಕಚೇರಿ
    – ವಾರಕ್ಕೆ 3 ದಿನ ಮಂಡ್ಯದಲ್ಲೇ ವಾಸ್ತವ್ಯ

    ಮಂಡ್ಯ: ಚುನಾವಣೆಯ ಸಂದರ್ಭದಲ್ಲಿ ನಾನು ಯಾರ ಬಗ್ಗೆ ಕೂಡ ಕೀಳಾಗಿ ಮಾತನಾಡಿಲ್ಲ. ಈಗಲೂ ಸಹ ನಾನು ಯಾರ ಬಗ್ಗೆಯೂ ಮಾತನಾಡಲ್ಲ. ನನಗೆ ಜನ ಜವಾಬ್ದಾರಿ ಕೊಟ್ಟಿದ್ದಾರೆ. ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಸಂಸದೆಯಾದ ಬಳಿಕ ಮೊದಲ ಬಾರಿಗೆ ಮಂಡ್ಯದ ಕೀಲಾರ ಗ್ರಾಮಕ್ಕೆ ಭೇಟಿ ನೀಡಿ ಸ್ವಚ್ಛ ಮೇವ ಜಯತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬರ ಹಾಗೂ ನೀರಿನ ಸಮಸ್ಯೆ ಹೆಚ್ಚಿದೆ. ಅದನ್ನು ಬಗೆಹರಿಸುವತ್ತ ಗಮನ ಹರಿಸಬೇಕು. ರಾಜಕಾರಣ ಮಾಡೋ ಸಮಯ ಅಲ್ಲ. ಟೀಕೆಗಳಿಗೆ ಉತ್ತರ ಕೊಡುತ್ತಾ ಸಮಯ ಹರಣ ಮಾಡಲ್ಲ ಎಂದು ತಿಳಿಸಿದರು.

    ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಅವರ ಕೆಲಸವನ್ನ ಅವರು ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಈಗಾಗಲೇ ನನ್ನ ಮನೆ ಇದೆ. ಪ್ರತಿ ತಾಲೂಕಿಗೂ ಭೇಟಿ ಕೊಡುತ್ತೇನೆ. ವಾರಕ್ಕೆ ಮೂರು ದಿನ ಮಂಡ್ಯದಲ್ಲೇ ವಾಸ್ತವ್ಯ ಹೂಡುತ್ತೇನೆ ಎಂದರು.

    ನಾನು ಸಾಮಾನ್ಯರ ಫೋನ್ ಪಿಕ್ ಮಾಡಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಭೆಗಳು ಅಥವಾ ದೆಹಲಿಯಲ್ಲಿ ಇದ್ದಾಗ ಫೋನ್ ಪಿಕ್ ಮಾಡಿಲ್ಲ. ಮುಂದೆ ಮಂಡ್ಯದಲ್ಲಿ ಕಚೇರಿ ಮಾಡಿ ಜನರ ಸಮಸ್ಯೆ ಆಲಿಸಲು ಸಿಬ್ಬಂದಿ ನೇಮಕ ಮಾಡುತ್ತೇನೆ ಎಂದ ಅವರು, ನಾನು ನಾನಾಗೇ ಇರ್ತೀನಿ. ಜನರ ಪರ ಇರ್ತೀನಿ ಎಂದು ಹೇಳುವ ಮೂಲಕ ಸುಮಲತಾ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಅನ್ನೋ ಊಹಾಪೋಹಗಳಿಗೆ ಖಡಕ್ ಉತ್ತರ ನೀಡಿದರು.

    ನನ್ನಿಂದ ಯಾವುದೇ ವಿವಾದಾತ್ಮಕ ಹೇಳಿಕೆ ನಿಮಗೆ ಸಿಗುವುದಿಲ್ಲ. ಸಂಸತ್ ಪ್ರಜಾಪ್ರಭುತ್ವದ ದೇವಾಲಯ. ಅಲ್ಲಿಗೆ ಹೋದಾಗ ಆತ ಸಂತಸದ ಕ್ಷಣ ಹೇಳಲು ಆಗುತ್ತಿಲ್ಲ ಎಂದು ಸಂಸದೆಯಾಗಿ ಮೊದಲು ಸಂಸತ್ ಪ್ರವೇಶ ಮಾಡಿದ ಅನುಭವವನ್ನು ಹಂಚಿಕೊಂಡರು.

    ಇದಕ್ಕೂ ಮೊದಲು ಮಾತು ಆರಂಭಿಸಿದ ಸುಮಲತಾ, ನನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ನಿಮಗೆಲ್ಲರಿಗೂ ವಂದನೆಗಳು. ಸಂಸದರಾಗಿ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಅದರಲ್ಲೂ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಇದು ನನಗೆ ಹತ್ತಿರದ ವಿಷಯ ಎಂದರು.

    ಚುನಾವಣೆ ಸಮಯದಲ್ಲಿ ಹಾವು, ಮುಂಗುಸಿಯಂತಿಂದ್ದ ಸುಮಲತಾ ಮತ್ತು ಜೆಡಿಎಸ್ ಮುಖಂಡರು, ಇಂದು ಒಂದೇ ವೇದಿಕೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಮತ್ತು ಮಂಡ್ಯ ಕ್ಷೇತ್ರದ ಶಾಸಕ ಶ್ರೀನಿವಾಸ್ ಕಂಡುಬಂದರು. ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಒಂದೇ ವೇದಿಕೆಯಲ್ಲಿ ಕಾಣಿಸಿದ್ದಾರೆ.

    ಇದೇ ವೇಳೆ ಕೀಲಾರ ಕೆರೆ ಅಭಿವೃದ್ಧಿಗೆ ಸಹಾಯ ಮಾಡುವಂತೆ ಗ್ರಾಮದ ಮುಖಂಡ ಕೃಷ್ಣೇಗೌಡರು ಸಂಸದೆ ಸುಮಲತಾ ಅವರಿಗೆ ಮನವಿ ಮಾಡಿದರು. ಸುಮಲತಾ ಅವರಿಗೆ ಗ್ರಾಮದ ಮುಖಂಡ ಮನವಿ ಮಾಡುತ್ತಿದ್ದಂತೆ ಮಾತನಾಡಿದ ಶಾಸಕ ಶ್ರೀನಿವಾಸ್, ನಮ್ಮ ಸರ್ಕಾರದಿಂದ ಕೀಲಾರ ಕೆರೆ ಅಭಿವೃದ್ಧಿಗೆ ಐದೂವರೆ ಕೋಟಿ ಹಣ ನೀಡಲು ಈಗಾಗಲೇ ಘೋಷಣೆಯಾಗಿದೆ. ಸದ್ಯದಲ್ಲೇ ಕೆರೆ ಅಭಿವೃದ್ಧಿ ಕೆಲಸ ಆರಂಭಿಸುವುದಾಗಿ ವೇದಿಕೆಯಲ್ಲೇ ಘೋಷಿಸಿದರು. ಶಾಸಕರ ಮಾತಿಗೆ ಗ್ರಾಮದ ಮುಖಂಡ ಅಸಮಾಧಾನ ವ್ಯಕ್ತಪಡಿಸಿದ್ದು, ಕೆರೆ ಅಭಿವೃದ್ಧಿಗೆ ಐದೂವರೆ ಕೋಟಿ ಸಾಕಾಗಲ್ಲ. ಸಂಸದರೂ ಈ ಬಗ್ಗೆ ಸಹಾಯ ಮಾಡಲಿ ಎಂದು ಗ್ರಾಮಸ್ಥ ಸಲಹೆ ನೀಡಿದ ಪ್ರಸಂಗವೂ ನಡೆಯಿತು.

  • ಹೋರಿಗಳು ಬರ್ತಾವೆ ಹತ್ತಿಸಿಕೊಳ್ಳಿ – ಡಿಸಿ ತಮ್ಮಣ್ಣ

    ಹೋರಿಗಳು ಬರ್ತಾವೆ ಹತ್ತಿಸಿಕೊಳ್ಳಿ – ಡಿಸಿ ತಮ್ಮಣ್ಣ

    ಮಂಡ್ಯ: ಹೋರಿಗಳು ಬರುತ್ತವೆ ಹತ್ತಿಸಿಕೊಳ್ಳಿ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಹೇಳಿಕೆ ನೀಡಿದ್ದಾರೆ.

    ಸಚಿವ ಡಿ.ಸಿ. ತಮ್ಮಣ್ಣ ಅವರು ಮದ್ದೂರು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಕುರುಬರದೊಡ್ಡಿ ಗ್ರಾಮದಲ್ಲಿ, ನಿಮಗೆಲ್ಲಾ ಮಾಡಿಕೊಡುತ್ತಾರೆ, ಮಾಡಿಸಿಕೊಳ್ಳಿ. ಹೋರಿಗಳು ಬರುತ್ತವೆ ಹತ್ತಿಸಿಕೊಳ್ಳಿ. ನನಗೇನಿಲ್ಲ ನಾನೇನಿದ್ದರೂ ನೇರ. ನಾನೇನು ಗೂಟ ಹೊಡೆದುಕೊಂಡು ಇಲ್ಲೇ ಕೂರಬೇಕಿಲ್ಲ ಎಂದು ಹೇಳಿದ್ದಾರೆ.

    ಇಂದು ಬೆಳಗ್ಗೆ ಮದ್ದೂರು ಗ್ರಾಮಸ್ಥರು ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆದ ಕುಡಿಯುವ ನೀರಿನ ಕಾಮಗಾರಿಯ ಶಂಕುಸ್ಥಾಪನೆ ವೇಳೆ ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ಡಿ.ಸಿ ತಮ್ಮಣ್ಣ ಅವರ ಬಳಿ ಕೇಳಿಕೊಂಡಿದ್ದರು.

    ಗ್ರಾಮಸ್ಥರ ಮಾತುಕೇಳಿ ಸಿಟ್ಟಿಗೆದ್ದ ಸಚಿವ ತಮ್ಮಣ್ಣ, ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ವೋಟು ನೀಡಲು ಅವರು ಬೇಕಾ ಎಂದು ತರಾಟೆ ತೆಗೆದುಕೊಂಡಿದ್ದರು. ಅಲ್ಲದೆ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಮದ್ದೂರು ಕ್ಷೇತ್ರದಲ್ಲಿ ನಿಖಿಲ್‍ಗೆ ಮತ ಹಾಕದ ಜನರ ಮೇಲೆ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದರು.

    ಈ ಹಿಂದೆ ಡಿ.ಸಿ ತಮ್ಮಣ್ಣ ಚುನಾವಣೆ ವೇಳೆಯಲ್ಲಿ ತಮ್ಮ ನಾಲಿಗೆ ಹರಿಯಬಿಟ್ಟು ಎಡವಟ್ಟು ಮಾಡಿಕೊಂಡಿದ್ದರು. ತಮ್ಮಣ್ಣ ಅವರು ಹೆಬ್ಬೆರಳು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲದೆ ಹೋದ ಕಡೆಗಳಲ್ಲಿ ಮತ ಹಾಕದ ಮತದಾರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಸುಮಲತಾ ಅವರು, ಒಬ್ಬ ಸಚಿವರಾಗಿ ಡಿಸಿ ತಮ್ಮಣ್ಣ ಈ ರೀತಿ ಮಾತಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಈ ರೀತಿ ಮಾತಾಡಿರುವುದರಿಂದಲೇ ಮತದಾರರು ಪಾಠ ಕಲಿಸಿದ್ದಾರೆ. ನನನ್ನು ಟಾರ್ಗೆಟ್ ಮಾಡಿದರೆ ಸಹಿಸಿಕೊಳ್ಳುತ್ತೇನೆ. ಆದರೆ ಜನರನ್ನ ಟಾರ್ಗೆಟ್ ಮಾಡುವುದು ಸರಿಯಲ್ಲ. ಸಚಿವರಿಗೆ ಜೆಡಿಎಸ್ ಮುಖಂಡರು ಬುದ್ಧಿವಾದ ಹೇಳಬೇಕು ಎಂದು ಕಿಡಿಕಾರಿದರು.

  • ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸ್ತಿದ್ದರೆ 10 ಸೀಟು ಗೆಲ್ಲಬಹುದಿತ್ತು-ಸಂಸದೆ ಸುಮಲತಾ

    ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸ್ತಿದ್ದರೆ 10 ಸೀಟು ಗೆಲ್ಲಬಹುದಿತ್ತು-ಸಂಸದೆ ಸುಮಲತಾ

    ಬೆಂಗಳೂರು: ಲೋಕಸಭೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಬಾರದಿತ್ತು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯಿಸಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದರೆ ಕಾಂಗ್ರೆಸ್‍ಗೆ 10 ಸೀಟು ಬರುತ್ತಿತ್ತು. ಜನ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವನ್ನು ಒಪ್ಪಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.

    ನಾನು ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಲು ಯತ್ನಿಸಿದ್ದೆ. ಒಂದು ವೇಳೆ ಏಕಾಂಗಿಯಾಗಿ ಸ್ಪರ್ಧೆ ಮಾಡದಿದ್ದರೆ ನಿಮಗೆ ನಷ್ಟ ಎಂದು ಹೇಳಿದ್ದೆ. ಆದರೆ ಕಾಂಗ್ರೆಸ್ ಗೆಲ್ಲಬಹುದಾದ ಸೀಟನ್ನು ಕೂಡ ಬಿಟ್ಟುಕೊಟ್ಟಿತ್ತು. ಕಾಂಗ್ರೆಸ್ ನಲ್ಲಿ ಒಳ್ಳೆಯ ಅಭ್ಯರ್ಥಿಗಳಿದ್ದರೂ ಸೀಟು ಬಿಟ್ಟುಕೊಟ್ಟಿದ್ದರಿಂದ ಬಿಜೆಪಿಗೆ ಲಾಭ ಆಯ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಮಂಡ್ಯದಲ್ಲಿ ಸುಮಲತಾರಿಂದ ಮೆಗಾ ಪ್ಲಾನ್- ಜೋಡೆತ್ತುಗಳಿಂದ್ಲೂ ಗ್ರೀನ್ ಸಿಗ್ನಲ್

    ಮಂಡ್ಯದಲ್ಲಿ ಸುಮಲತಾರಿಂದ ಮೆಗಾ ಪ್ಲಾನ್- ಜೋಡೆತ್ತುಗಳಿಂದ್ಲೂ ಗ್ರೀನ್ ಸಿಗ್ನಲ್

    – ಕಾಂಗ್ರೆಸ್‍ಗೆ ಇಲ್ಲ, ಬಿಜೆಪಿಗೂ ಸುಮಲತಾ ಹೋಗಲ್ಲ

    ಬೆಂಗಳೂರು: ತನ್ನನ್ನು ಗೆಲ್ಲಿಸಿದ್ದ ಮಂಡ್ಯ ಜನತೆಗೆ ಸುಮಲತಾ ಅವರು ಯಾರೂ ನಿರೀಕ್ಷೆ ಮಾಡದಂತಹ ಮೆಗಾ ಪ್ಲಾನ್ ಒಂದನ್ನ ಸಿದ್ಧಪಡಿಸುತ್ತಿದ್ದಾರೆ. ಇವರ ಮೆಗಾ ಪ್ಲಾನ್‍ಗೆ ಜೊತೆಯಾಗಿ ಹೆಜ್ಜೆ ಹಾಕೋಕೆ ಜೋಡೆತ್ತುಗಳು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಎದುರಾಳಿಗಳು ಬೆಚ್ಚಿ ಬೀಳುವಂತಹ ಮೆಗಾ ಶೋ ಮಂಡ್ಯದಲ್ಲಿ ನಡೆಯಲಿದೆ.

    ಹೌದು. ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಂಸದರಾಗಿರುವ ಸುಮಲತಾ ಎನ್ ಡಿಎ ಅಥವಾ ಯುಪಿಎ ಎರಡು ಮೈತ್ರಿಕೂಟವನ್ನೂ ಸೇರದೆ ಪಕ್ಷೇತರರಾಗಿ ಪ್ರತ್ಯೇಕ ಅಸ್ತಿತ್ವವನ್ನ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂಬುದಾಗಿ ಅವರ ಆಪ್ತ ಮೂಲಗಳು ತಿಳಿಸಿವೆ.

    ಅಧಿಕಾರದಲ್ಲಿರುವ ಬಿಜೆಪಿ ಜೊತೆ ಗುರುತಿಸಿಕೊಂಡರೆ ಕಾವೇರಿಯಂತಹ ಸೂಕ್ಷ್ಮವಾದ ವಿಚಾರಗಳಲ್ಲಿ ಬೆಳವಣಿಗೆ ಆದರೆ ಆಗ ಧ್ವನಿ ಎತ್ತಿ ಮಾತನಾಡೋಕೆ ಆಗಲ್ಲ. ಇತ್ತ ಕಾಂಗ್ರೆಸ್ ಜೊತೆ ಗುರುತಿಸಿಕೊಂಡರೆ ಬೇರೆ ಬೇರೆ ಯೋಜನೆಗಳು ಹಾಗೂ ಅನುದಾನದ ವಿಷಯದಲ್ಲಿ ಸಮಸ್ಯೆ ಆಗಲಿದೆ. ಆದ್ದರಿಂದ ಪಕ್ಷೇತರರಾಗಿ ಗೆದ್ದವರು ಪಕ್ಷೇತರರಾಗಿಯೇ ಎರಡೂ ಬಣದಿಂದ ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿದ್ದಾರೆ.

    ಮಂಡ್ಯ ಅಭಿವೃದ್ಧಿ ದೃಷ್ಟಿಯಿಂದ ಇಂತಹ ತೀರ್ಮಾನಕ್ಕೆ ಬಂದ ಸುಮಲತಾ ಅವರು, ತಮ್ಮನ್ನು ಗೆಲ್ಲಿಸಿದ್ದ ಮಂಡ್ಯ ಜನರಿಗೆ ಕೃತಜ್ಞತೆ ಸಲ್ಲಿಸಲು ಮೆಗಾ ಶೋ ನಡೆಸಲು ತೀರ್ಮಾನಿಸಿದ್ದಾರೆ. ಮಂಡ್ಯ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೊಂದರಂತೆ ಒಟ್ಟು 8 ಕೃತಜ್ಞತೆ ಸಲ್ಲಿಕೆ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಎಲ್ಲಾ ಎಂಟು ಸಮಾವೇಶಗಳಲ್ಲು ಜೋಡೆತ್ತುಗಳಾದ ದರ್ಶನ್ ಹಾಗೂ ಯಶ್ ಭಾಗವಹಿಸಲಿದ್ದಾರೆ. ಮತಯಾಚನೆ ಸಂದರ್ಭದಲ್ಲಿ ಸುಮಲತಾ ಸರಿ ಸುಮಾರು 200 ಹಳ್ಳಿಗಳಲ್ಲಿ ಮತಯಾಚನೆ ಮಾಡಿ ರೋಡ್ ಶೋ ನಡೆಸಿದ್ದರು. ಆ ಎಲ್ಲಾ ಹಳ್ಳಿಗಳಲ್ಲೂ ಮತ್ತೆ ರೋಡ್ ಶೋ ನಡೆಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ. ಹೀಗೆ ತಮಗೆ ಭರ್ಜರಿ ಗೆಲುವಿನ ಗಿಫ್ಟ್ ನೀಡಿದ ಮಂಡ್ಯ ಜನರ ಮನೆ ಬಾಗಿಲಿಗೆ ಮತ ಕೇಳಲು ಹೋದ ರೀತಿಯಲ್ಲೇ ಕೃತಜ್ಞತೆ ಸಲ್ಲಿಸಲು ಹೋಗಲು ತೀರ್ಮಾನಿಸಿದ್ದಾರೆ. ಆ ಮೂಲಕ ಮಂಡ್ಯ ಜನರ ಮನಸ್ಸಲ್ಲಿ ಶಾಶ್ವತ ಸ್ಥಾನ ಪಡೆಯುವ ಮೆಗಾ ಪ್ಲಾನ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಒಟ್ಟಿನಲ್ಲಿ ಒಂದೆಡೆ ದೆಹಲಿಯಲ್ಲೂ ತಟಸ್ಥ ನಿಲುವು, ಇನ್ನೊಂದೆಡೆ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಹೋಗಿ ಕೃತಜ್ಞತೆ ಸಲ್ಲಿಸುವ ಮೂಲಕ ರಾಜಕೀಯ ಎದುರಾಳಿಗಳಿಗೂ ಖಡಕ್ ಸಂದೇಶ ರವಾನಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

  • ಸಂಸದೆ ಸುಮಲತಾಗೆ ಕಿವಿಮಾತು ಹೇಳಿದ ಕೋಡಿಹಳ್ಳಿ ಚಂದ್ರಶೇಖರ್

    ಸಂಸದೆ ಸುಮಲತಾಗೆ ಕಿವಿಮಾತು ಹೇಳಿದ ಕೋಡಿಹಳ್ಳಿ ಚಂದ್ರಶೇಖರ್

    ಬೆಂಗಳೂರು: ಮಂಡ್ಯದ ನೂತನ ಸಂಸದೆಯಾಗಿ ಸುಮಲತಾ ಅಂಬರೀಶ್ ಆಯ್ಕೆಯಾಗಿದ್ದು, ಜೆಡಿಎಸ್ ಕೆಲ ಶಾಸಕರು ಜಾಣತನದಿಂದ ಕಾವೇರಿ ನೀರಿನ ಜವಾಬ್ದಾರಿಯನ್ನು ಸುಮಲತಾರ ಹೆಗಲಿಗೆ ವರ್ಗಾಯಿಸಿದ್ದಾರೆ. ಇತ್ತ ನೂತನ ಸಂಸದೆಯಾಗಿರುವ ಸುಮಲತಾ ಸಹ ಯಾರಿಂದನೂ ಹೇಳಿಸಿಕೊಂಡು ಕೆಲಸ ಮಾಡೋದು ನನ್ನ ಜಾಯಮಾನವಲ್ಲ. ಮಂಡ್ಯ ರೈತರ ಅಭಿವೃದ್ಧಿಯೇ ನನ್ನ ಮೊದಲ ಕರ್ತವ್ಯ ಎಂದು ತಿರುಗೇಟು ನೀಡಿದ್ದಾರೆ. ರೈತರಿಗೆ ಕಾವೇರಿ ವಿಚಾರದಲ್ಲಿ ಸರ್ಕಾರ ಹಾಗೂ ಸುಮಲತಾ ಸಂಘರ್ಷ ಮುಂದುವರಿಯುವ ಭೀತಿ ಉಂಟಾಗಿದ್ದು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೊಸ ಎಂಪಿಎ ಕಿವಿಮಾತು ಹೇಳಿದ್ದಾರೆ.

     

    ಹೊಸ ಸಂಸದರಾಗಿರುವ ಸುಮಲತಾ ಅಂಬರೀಶ್ ತಮ್ಮ ಕರ್ತವ್ಯಗಳನ್ನು ಜ್ಞಾಪಿಸಿಕೊಳ್ಳಬೇಕು. ಕಾವೇರಿ ನದಿ ನೀರಿನ ವಿಚಾರ ಮತ್ತು ರೈತೆ ಸಮಸ್ಯೆಗಳತ್ತ ಸಂಸದರು ಹೆಚ್ಚು ಗಮನ ನೀಡಬೇಕು. ಸದ್ಯ ಕಾವೇರಿ ನಿರ್ವಹಣಾ ಮಂಡಳಿ ತಮಿಳುನಾಡಿಗೆ ಜೂನ್ ತಿಂಗಳ ನೀರು ಹರಿಸುವಂತೆ ಸೂಚಿಸಿದೆ. ಮಳೆ ಕೈ ಕೊಟ್ಟರೆ ಕರ್ನಾಟಕಕ್ಕೆ ತೊಂದರೆಯಾಗಲಿದೆ. ಅಂತಹ ಸಂದರ್ಭದಲ್ಲಿ ಲೋಕಸಭೆಯಲ್ಲಿ ಹೇಗೆ ಚರ್ಚಿಸಬೇಕು? ಪ್ರಧಾನಿಗಳನ್ನು ಭೇಟಿಯಾಗುವ ಸಂದರ್ಭ ಎದುರಾಗುತ್ತದೆ. ಹಾಗಾಗಿ ಮೊದಲ ಬಾರಿಗೆ ಸಂಸದರಾಗಿರುವ ಸುಮಲತಾ ಅವರು ಇಂತಹ ಕಠಿಣ ಸನ್ನಿವೇಶ ಎದುರಿಸಲು ಮೊದಲೇ ಸಿದ್ಧವಾಗಿರಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.

    ಮಂಡ್ಯ ಭಾಗದಲ್ಲಿ ಚುನಾವಣೆ ಆರಂಭಗೊಂಡಾಗ ರಾಜಕೀಯ ಸಂಘರ್ಷ ತಾರಕಕ್ಕೆ ಹೋಗಿದ್ದನ್ನು ಗಮನಿಸಿದ್ದೇನೆ. ಚುನಾವಣೆಯ ಫಲಿತಾಂಶ ಬಂದಿದ್ದು, ಜನತೆ ನೀಡಿದ ತೀರ್ಪನ್ನು ಎಲ್ಲರು ಒಪ್ಪಿಕೊಳ್ಳಬೇಕು. ಈ ಸಂಘರ್ಷ ಮತ್ತು ವಾದ-ವಿವಾದಗಳನ್ನು ಎಲ್ಲರೂ ಮರೆತು ರಾಜ್ಯದ ಅಭಿವೃದ್ಧಿಯ ಕೆಲಸಗಳಲ್ಲಿ ಒಂದಾಗಬೇಕು ಎಂದು ತಿಳಿಸಿದರು.

  • ನಿಮ್ಮ ಋಣವನ್ನು ಸಾಯೋವರೆಗೂ ಮರೆಯಲ್ಲ: ಮಂಡ್ಯ ಜನತೆಗೆ ದರ್ಶನ್ ಥ್ಯಾಂಕ್ಸ್

    ನಿಮ್ಮ ಋಣವನ್ನು ಸಾಯೋವರೆಗೂ ಮರೆಯಲ್ಲ: ಮಂಡ್ಯ ಜನತೆಗೆ ದರ್ಶನ್ ಥ್ಯಾಂಕ್ಸ್

    ಮಂಡ್ಯ: ನಿಮ್ಮ ಋಣವನ್ನು ಸಾಯುವವರೆಗೂ ಮರೆಯುವುದಕ್ಕೆ ಆಗಲ್ಲ. ನೀವು ನಮಗೆ ಪುನರ್ಜನ್ಮ ಕೊಟ್ಟಿದ್ದೀರ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಂಡ್ಯ ಜನರಿಗೆ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ.

    ನಗರದಲ್ಲಿ ನಡೆದ ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲ್ಲ. ಅವರ ರೂಪದಲ್ಲಿ ಕಾಣುವ ನಿಮ್ಮೆಲ್ಲರಿಗೆ ಜನ್ಮದಿನದ ಶುಭಾಶಯ ಕೋರುತ್ತೇನೆ. ಸುಮಲತಾ ಅಮ್ಮನಿಗೆ ಸಹಕಾರ, ಬೆಂಬಲ ಕೊಟ್ಟಿದ್ದೀರ. ಮಂಡ್ಯದಲ್ಲಿ ನಿಂತು ಮಾತನಾಡುವ ಯೋಗ್ಯತೆ ಕೊಟ್ಟಿದ್ದೀರಿ. ಇಲ್ಲಿಯೇ ನಿಂತು ನಿಮ್ಮ ಪಾದಗಳಿಗೆ ನಮಸ್ಕರಿಸುತ್ತೇನೆ ಎಂದು ಬಾಗಿ ವೇದಿಕೆಗೆ ನಮಸ್ಕರಿಸಿದರು.

    ಒಂದು ವೇಳೆ ನಾವು ಈ ಚುನಾವಣೆ ಹಬ್ಬದಲ್ಲಿ ಸೋಲು ಕಂಡಿದ್ದರೆ ನಮ್ಮ ಪರಿಸ್ಥಿತಿ ಬಹಳ ಕಷ್ಟವಾಗುತಿತ್ತು. ಕೆಲವರು ತಮ್ಮ ಪಕ್ಷದ ನಾಯಕರನ್ನು ಎದುರು ಹಾಕಿಕೊಂಡು ನಮ್ಮ ಪರ ಪ್ರಚಾರಕ್ಕೆ ನಿಂತರು. ನಿಮ್ಮ ಸಹಕಾರ, ಬೆಂಬಲ, ಪ್ರೀತಿಗೆ ನಾನು ಋಣಿಯಾಗಿದ್ದೇನೆ ಎಂದರು.

    ತಪ್ಪು ತಿಳಿಯಬೇಡಿ, ಕೆಲವರಿಗೆ ರಾಜಕೀಯ ನಾಯಕರ ಕಾರ್ಯವನ್ನು ತಿಳಿಸಬೇಕಿದೆ. ಸಂಸದರ ಕೆಲಸ ಏನು? ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಕೆಲಸ ಏನು ಅಂತ ಅರಿವು ಮೂಡಿಸಬೇಕಿದೆ. ನಮ್ಮ ಮನೆ ಮೋರಿ ಕಟ್ಟಿದೆ ಬನ್ನಿ ಎಂದು ಶಾಸಕರಿಗೆ ಹೇಳುವುದಕ್ಕೆ ಆಗುತ್ತಾ? ಹಾಗೆಯೇ ನಾಯಕರು ತಮ್ಮ ವ್ಯಾಪ್ತಿಯ ಕಾರ್ಯವನ್ನು ಮಾಡುತ್ತಾರೆ ಎಂದು ತಿಳುವಳಿಕೆ ಮೂಡಿಸುವ ಪ್ರಯತ್ನ ನಡೆಸಿದರು.

    ಇದೇ ವೇಳೆ ಅಭಿಷೇಕ್‍ನನ್ನು ಕರೆದು, ಮಗು ಚಿಕ್ಕ ಸಿನಿಮಾ ಮಾಡಿದೆ ಹಾರೈಸಿ. ಅಭಿ ನಮಗಿಂತ ಚಿಕ್ಕವನಾದರೂ ಸ್ಕ್ರೀನ್‍ನಲ್ಲಿ ರೊಮಾನ್ಸ್ ಮಾಡುವಾಗ ನಮಗಿಂತ ದೊಡ್ಡವನಾಗಿ ಕಾಣುತ್ತಾನೆ ಎಂದು ಕಿಚಾಯಿಸಿದರು.

  • ಅಂಬಿ ಚಿತ್ರವಿರುವ 750 ಗ್ರಾಂ ತೂಕದ ಬೃಹತ್ ಚಿನ್ನದ ಹಾರ ಧರಿಸಿದ ಅಭಿಮಾನಿ

    ಅಂಬಿ ಚಿತ್ರವಿರುವ 750 ಗ್ರಾಂ ತೂಕದ ಬೃಹತ್ ಚಿನ್ನದ ಹಾರ ಧರಿಸಿದ ಅಭಿಮಾನಿ

    ಮಂಡ್ಯ: ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಹುಟ್ಟುಹಬ್ಬ. ಹೀಗಾಗಿ ಇದೇ ದಿನದಂದು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರು ವಿಜಯೋತ್ಸವದ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಭಿಮಾನಿಯೊಬ್ಬರು ಅಂಬಿ ಭಾವಚಿತ್ರವುಳ್ಳ ಬರೋಬ್ಬರಿ 750 ಗ್ರಾಂ ತೂಕ ಇರುವ ಚಿನ್ನದ ಹಾರ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಮಂಡ್ಯದ ಕೀಲಾರದ ರುದ್ರಗೌಡ ಅವರೇ ಈ ಚಿನ್ನದ ಅಭಿಮಾನಿ. ಕಳೆದ 35 ವರ್ಷದಿಂದ ಅಂಬರೀಶ್ ಅಭಿಮಾನಿಯಾಗಿರುವ ರುದ್ರೆಗೌಡರು, ಅಂಬರೀಶ್ ಭಾವಚಿತ್ರವುಳ್ಳ ಚಿನ್ನದ ಪದಕದ ಜೊತೆ ಬೃಹತ್ ಚಿನ್ನದ ಹಾರ ಹಾಕಿಕೊಂಡಿದ್ದಾರೆ. 7-8 ವರ್ಷಗಳಿಂದ ಅಭಿಮಾನಿ ಈ ಚಿನ್ನದ ಪದಕ ಇರುವ ಹಾರ ಮಾಡಿಸಿಕೊಂಡು, ಅದನ್ನು ಧರಿಸಿ ಅಭಿಮಾನ ಮೆರೆಯುತ್ತಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು 35 ವರ್ಷದಿಂದ ಅಣ್ಣನ ಅಭಿಮಾನಿ. ಅವರ ಚಿತ್ರ ಅವರ ಜೀವನ ನಮಗೆ ಪ್ರೇರಣೆ. ನಾವು ಯಾವಾಗಲೂ ಅವರ ಜೊತೆ ಇರುತ್ತಿದ್ದೇವು. ಇಂದು ಅವರು ನಮ್ಮ ಜೊತೆ ಇಲ್ಲ. ಈ ವಿಜಯೋತ್ಸವವನ್ನ ಅವರು ನೋಡಬೇಕಿತ್ತು ಎಂದರು.

    ಈ ಚಿನ್ನದ ಪದಕಕ್ಕೆ ಯಾವುದೇ ತೆರಿಗೆ ಸಮಸ್ಯೆ ಇಲ್ಲ. ಅಣ್ಣನ ಫೋಟೋ ಇದ್ದ ಮೇಲೆ ಸಮಸ್ಯೆ ಬರುವುದಿಲ್ಲ ಎಂದು ಹೇಳಿದರು.

  • ಸ್ವಾಭಿಮಾನಿ ವಿಜಯೋತ್ಸವದ ಫ್ಲೆಕ್ಸ್‌ನಲ್ಲಿ ರಾರಾಜಿಸಿದ ಕೈ ನಾಯಕರು

    ಸ್ವಾಭಿಮಾನಿ ವಿಜಯೋತ್ಸವದ ಫ್ಲೆಕ್ಸ್‌ನಲ್ಲಿ ರಾರಾಜಿಸಿದ ಕೈ ನಾಯಕರು

    ಮಂಡ್ಯ: ನೂತನ ಸಂಸದೆ ಸುಮಲತಾ ಅಂಬರೀಶ್ ಕೃತಜ್ಞತಾ ಸಮಾವೇಶದ ಫ್ಲೆಕ್ಸ್ ನಲ್ಲಿ ಕಾಂಗ್ರೆಸ್ ಮುಖಂಡರ ಫೋಟೋಗಳು ರಾರಾಜಿಸುತ್ತಿವೆ.

    ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಇಂದು ಸ್ವಾಭಿಮಾನದ ಸಮಾವೇಶ ನಡೆಯಲಿದೆ. ಹೀಗಾಗಿ ಸಮಾವೇಶದ ಕುರಿತು ಹಾಕಲಾಗಿದ್ದ ಫ್ಲೆಕ್ಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಲುವರಾಯಸ್ವಾಮಿ, ಜಮೀರ್ ಅಹಮದ್, ನರೇಂದ್ರಸ್ವಾಮಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ಫೋಟೋಗಳು ಇವೆ.

    ಸುಮಲತಾ ಗೆಲುವಿನ ಹಿಂದೆ ಕಾಂಗ್ರೆಸ್‍ನ ಘಟಾನುಘಟಿಗಳ ಪರೋಕ್ಷ ಬೆಂಬಲವಿತ್ತು ಎಂಬ ಚರ್ಚೆ ಆರಂಭದಿಂದಲೂ ಕೇಳಿ ಬಂದಿತ್ತು. ಇದೀಗ ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ಗಳು ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

    ಸ್ವಾಭಿಮಾನಿಗಳ ವಿಜಯೋತ್ಸವಕ್ಕೆ ಎಸ್.ಪಿ. ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಾವಿರಾರು ಜನರು ಸೇರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದೆ. ಕೆಎಸ್‍ಆರ್‍ಪಿ 2, ಡಿಎಆರ್ 4 ಸೇರಿದಂತೆ 200 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

    ರೆಬೆಲ್ ಸ್ಟಾರ್ ಅಂಬಿ ಜನ್ಮದಿನವಾದ ಇಂದೇ ಸಕ್ಕರೆ ನಾಡಲ್ಲಿ ಸುಮಲತಾ & ಟೀಂ ಸ್ವಾಭಿಮಾನಿ ವಿಜಯೋತ್ಸವ ಆಚರಿಸುತ್ತಿದ್ದು, ಸಮಾವೇಶದಲ್ಲಿ ಜೋಡೆತ್ತುಗಳೂ ಭಾಗಿಯಾಗಲಿದ್ದಾರೆ. ಬೆಂಗಳೂರಿನಲ್ಲಿ ಅಂಬಿ ಸಮಾಧಿಗೆ ನಮನ ಸಲ್ಲಿಸಿ ಮಂಡ್ಯದತ್ತ ಪಯಣ ಬೆಳೆಸಿರುವ ಸುಮಲತಾ, ಸಂಜೆ 4 ಗಂಟೆಗೆ ಸಿಲ್ವರ್ ಜ್ಯುಬಿಲಿ ಪಾರ್ಕ್‍ನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಅವರು, ಕಾವೇರಿ ನೀರು ಹಾಗೂ ಬಿಜೆಪಿ ಸೇರುವ ಬಗ್ಗೆ ನಿಲುವು ಸ್ಪಷ್ಟಪಡಿಸುವ ಸಾಧ್ಯತೆಗಳಿವೆ.