Tag: ಸುಮಲತಾ ಅಂಬರೀಶ್

  • ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆಯಾಗಬೇಕು : ಯಶ್

    ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆಯಾಗಬೇಕು : ಯಶ್

    ಬೆಂಗಳೂರು: ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ನಟ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದು, ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆ ಆಗಬೇಕು ಎಂಬುದು ಎಲ್ಲರ ಆಶಯ ಎಂದು ಹೇಳಿದ್ದಾರೆ.

    ಕೆಜಿಎಫ್ 2 ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಯಶ್ ಅವರು, ರಾಜಕೀಯದಲ್ಲಿ ಆಗುತ್ತಿರುವ ಗೊಂದಲಗಳಿಂದ ಸಹಜವಾಗಿ ಬೇಸರ ಆಗಿದೆ. ಮುಂದೆ ಬರುವ ಸರ್ಕಾರ ರಾಜ್ಯದ ಜನರ ಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಬಹಳಷ್ಟು ಯೋಜನೆಗಳು ಆಗಬೇಕಿದೆ ಎಂದು ಜನರು ಕಾಯುತ್ತಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದರು.

    ಪಕ್ಷಗಳ ಆಂತರಿಕ ಸಮಸ್ಯೆಯಿಂದ ರಾಜ್ಯದ ಜನರಿಗೆ ಅನ್ಯಾಯ ಆಗುವುದು ಒಳ್ಳೆದಲ್ಲ ಎಂಬುವುದು ಅಷ್ಟೇ ನಮ್ಮ ಉದ್ದೇಶ. ಯಾರು ಅಧಿಕಾರಕ್ಕೆ ಬಂದರೂ ಕೂಡ ಒಂದು ನಿಶ್ಚಿತ ಸರ್ಕಾರ ರಚನೆ ಆಗಬೇಕು. ಆ ಮೂಲಕ ಒಳ್ಳೆಯ ಯೋಜನೆಗಳು ಜಾರಿ ಆಗಬೇಕು. ಇಂತಹ ಸಂದರ್ಭದಲ್ಲಿ ಎಲ್ಲರಂತೆ ನಮಗೂ ಬೇಸರ ಆಗುತ್ತದೆ. ಆದರೆ ಮುಂದೆ ಬರುವ ಸರ್ಕಾರ ಉತ್ತಮವಾಗಿ ಇರಬೇಕಿದೆ ಎಂದು ಅಭಿಪ್ರಾಯ ಪಟ್ಟರು.

    ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ್ದ ಯಶ್, ಸಂಸದೆಯಾಗಿ ಕಾರ್ಯನಿರ್ವಹಿಸುತ್ತಿರುವ ಸುಮಲತಾ ಅವರ ಕೆಲಸಗಳ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿದರು. ಮಂಡ್ಯಕ್ಕೆ ಹೊಸ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಕೇಂದ್ರ ನಾಯಕರ ಸಲಹೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

    ಸುಮಲತಾ ಅವರ ಕೆಲಸ ನೋಡಿ ಖುಷಿ ಆಗುತ್ತಿದೆ, ಅವರು ಎಲ್ಲೆ ಹೋದರೂ ನನಗೆ ಆಗಾಗ ಮಾಹಿತಿ ನೀಡುತ್ತಾರೆ. ಜನತೆಗೆ ಬೇಕಾದ ಉತ್ತಮ ಕೆಲಸಗಳನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ. ಕೇಂದ್ರ ಸರ್ಕಾರದ ನಾಯಕರು ಕೂಡ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದಿದ್ದಾರೆ. ಸುಮಲತಾರ ಕಾರ್ಯ ನಮಗೇ ಖುಷಿ ತಂದಿದೆ ಎಂದರು. ಇದನ್ನು ಓದಿ: ಜಿಲ್ಲೆಯ ಸಮಸ್ಯೆ ಬಗೆಹರಿಸಿಕೊಡಿ – ಅಮಿತ್ ಶಾ ಬಳಿ ಸುಮಲತಾ ಮನವಿ

  • ಮಂಡ್ಯಕ್ಕೆ ನೀರು ಬಿಡಲು ಯಾರು ಕಾರಣ – ಚರ್ಚೆಗೆ ಕಾರಣವಾಯ್ತು ಸುಮಲತಾ ಬರೆದ ಸಾಲುಗಳು

    ಮಂಡ್ಯಕ್ಕೆ ನೀರು ಬಿಡಲು ಯಾರು ಕಾರಣ – ಚರ್ಚೆಗೆ ಕಾರಣವಾಯ್ತು ಸುಮಲತಾ ಬರೆದ ಸಾಲುಗಳು

    ಮಂಡ್ಯ: ಕೆಆರ್‌ಎಸ್‌ ಅಣೆಕಟ್ಟೆಯಿಂದ ರೈತರ ಬೆಳೆಗಳಿಗೆ ನೀರು ಬಿಡಿಸಿದ್ದು ಯಾರು? ಇಂತಹದ್ದೊಂದು ಹೊಸ ಚರ್ಚೆಗೆ ಸಂಸದೆ ಸುಮಲತಾ ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಾಲುಗಳು ಕಾರಣವಾಗಿದೆ.

    ಸಂಸದೆ ಸುಮಲತಾ ಅವರು “ಕೇಂದ್ರದ ಜಲಾನಯನ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು. ನನ್ನ ಮನವಿ ಸ್ಪಂದಿಸಿ ನೀರನ್ನು ಮಂಡ್ಯ ನಾಲೆಗೆ ಹರಿಸಲು ಆದೇಶಿಸಿದ ನಿಮಗೆ ಮಂಡ್ಯ ರೈತರ ಪರವಾಗಿ ನನ್ನ ತುಂಬು ಹೃದಯದ ಅಭಿನಂದನೆಗಳು” ಎಂದು ತಮ್ಮ ಅಧಿಕೃತ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಅದಕ್ಕೆ ಸಂಬಂಧಿಸಿದ ಒಂದು ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

    ಸುಮಲತಾ ಜೂನ್ 20 ರಂದು ಸಚಿವ ಗಜೇಂದ್ರ ಸಿಂಗ್ ಶೇಖಾವತ್‍ಗೆ ಪತ್ರ ಬರೆದು ಮಂಡ್ಯ ಜಿಲ್ಲೆಗೆ ಕೆಆರ್‍ಎಸ್ ಅಣೆಕಟ್ಟೆಯಿಂದ 2 ಟಿಎಂಸಿ ನೀರು ಬಿಡಲು ಕೋರಿಕೊಂಡಿದ್ದರು. ಜೂನ್ 28 ರಂದು ಸುಮಲತಾ ಮನವಿಗೆ ಸಚಿವರಿಂದ ಪತ್ರದ ಮೂಲಕ ಉತ್ತರ ಬಂದಿತ್ತು. ಜುಲೈ 15 ರಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದಿತ್ತು. ಆ ಸಭೆಯಲ್ಲಿ ರೈತರ ಬೆಳೆಗಳಿಗೆ 10 ದಿನ ನಾಲೆ ಮೂಲಕ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಜುಲೈ 16ರ ಮಧ್ಯರಾತ್ರಿಯಿಂದ ರೈತರ ಬೆಳೆಗಳಿಗೆ ನಾಲೆ ಮೂಲಕ ನೀರು ಹರಿಸಲಾಗಿತ್ತು.

    ಇದೀಗ ಕೇಂದ್ರ ಜಲಾನಯನ ಸಚಿವರಿಗೆ ಸುಮಲತಾ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಜಲಾನಯನ ಸಚಿವರಿಗೆ ನೀರು ಬಿಡಲು ಪತ್ರದ ಮೂಲಕ ತಾವು ಮನವಿ ಮಾಡಿದ್ದಕ್ಕೆ ಸಚಿವರು ಪ್ರತಿಕ್ರಿಯಿಸಿದ್ದ ಪತ್ರವನ್ನು ಸುಮಲತಾ ಅವರು ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಸುಮಲತಾ ಅವರ ಪತ್ರದ ಬೆನ್ನಲ್ಲೇ ಮಂಡ್ಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ರೈತರಿಗೆ ನೀರು ಬಿಡಿಸಿದ ಕ್ರೆಡಿಟ್ ಪಡೆಯಲು ಸಂಸದೆ ಸುಮಲತಾ ಮತ್ತು ಜೆಡಿಎಸ್ ನಾಯಕರ ನಡುವೆ ತೆರೆಮರೆ ಯತ್ನ ನಡೆಯುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿದೆ.

    https://www.facebook.com/SumalathaAmbi/photos/a.570615780082318/647999459010616/?type=3&theater

    ಸುಮಲತಾ ಸಚಿವರಿಂದ ಪ್ರತ್ಯುತ್ತರ ಬಂದ ದಿನವೇ ಫೇಸ್‍ಬುಕ್‍ನಲ್ಲಿ ಪತ್ರ ಹಾಕಬಹುದಿತ್ತು. ಆದರೆ ನಾಲೆಗೆ ನೀರು ಬಿಟ್ಟ ನಂತರ ಈಗ ಫೇಸ್‍ಬುಕ್‍ಗೆ ಈ ಲೆಟರ್ ಹಾಕಿದ್ದಾರೆ. ಹಾಗಾದರೆ ರೈತರ ಬೆಳೆಗಳಿಗೆ ನೀರು ಬಿಡಿಸಿದ ಕ್ರೆಡಿಡ್ ಪಡೆಯಲು ಸಂಸದೆ ಸುಮಲತಾ ಮುಂದಾದರ ಎಂದು ಮಂಡ್ಯದಲ್ಲಿ ಚರ್ಚೆಯಾಗಿತ್ತದೆ. ಆದರೆ ಸುಮಲತಾ ಕಾರ್ಯಕ್ಕೆ ಫೇಸ್‍ಬುಕ್‍ನಲ್ಲಿ ಅವರ ಬೆಂಬಲಿಗರು ಅಭಿನಂದನೆ ಸಲ್ಲಿಸುತ್ತಿದ್ದಾರೆ.

  • ಜಿಲ್ಲೆಯ ಸಮಸ್ಯೆ ಬಗೆಹರಿಸಿಕೊಡಿ – ಅಮಿತ್ ಶಾ ಬಳಿ ಸುಮಲತಾ ಮನವಿ

    ಜಿಲ್ಲೆಯ ಸಮಸ್ಯೆ ಬಗೆಹರಿಸಿಕೊಡಿ – ಅಮಿತ್ ಶಾ ಬಳಿ ಸುಮಲತಾ ಮನವಿ

    ಮಂಡ್ಯ: ನೂತನ ಸಂಸದೆ ಸುಮಲತಾ ಅಂಬರೀಶ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.

    ಸುಮಲತಾ ಅವರು ಮಂಡ್ಯದಲ್ಲಿನ ಹಲವು ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಕೊಡಿಸುವಂತೆ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ ಎಂದು ಅವರ ಆಪ್ತ ಮೂಲಗಳಿದ ತಿಳಿದು ಬಂದಿದೆ. ಅಮಿತ್ ಶಾ ಅವರನ್ನು ಭೇಟಿಯಾಗಿರುವ ಬಗ್ಗೆ ಸುಮಲತಾ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ. “ದೇಶದ ಗೃಹ ಸಚಿವರೊಂದಿಗೆ ಕ್ಷೇತ್ರದ ಹಲವಾರು ಕೆಲಸಗಳಿಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

    ಜೊತೆಗೆ ಅಮಿತಾ ಶಾ ಜೊತೆ ಇದ್ದ ತಮ್ಮ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಕಡೆ ಮುಂಗಾರು ಕೈ ಕೊಟ್ಟಿದೆ. ಮಂಡ್ಯದ ರೈತರು ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಸರಿಯಾಗಿ ಮಳೆಯಾಗದ ಕಾರಣ ಕಾವೇರಿ ನದಿಯೂ ತುಂಬಿಲ್ಲ. ಇದರಿಂದ ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಸುಮಲತಾ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ಜಿಲ್ಲೆಯ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.


    ಇತ್ತೀಚೆಗಷ್ಟೆ ಸುಮಲತಾ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ದಿನನಿತ್ಯ ಮೈಸೂರು- ಮಂಡ್ಯ-ಬೆಂಗಳೂರು ನಡುವೆ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಹೆಚ್ಚಿನ ಮಹಿಳಾ ಬೋಗಿಗಳನ್ನು ಅಳವಡಿಸುವಂತೆ ಹಾಗೂ ಹೆಚ್ಚಿನ ಪೊಲೀಸ್ ಬಂದೋಬಸ್ತುಗಳನ್ನು ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು.

    ಅಷ್ಟೇ ಅಲ್ಲದೇ ಮುಂಬೈ ಮಾದರಿಯಲ್ಲಿ ವಿಶೇಷ ಮಹಿಳಾ ರೈಲನ್ನು ಬೆಳಗ್ಗೆ ಮತ್ತು ಸಂಜೆ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಜೊತೆಗೆ ಕೆ.ಆರ್ ನಗರದಲ್ಲಿ ರೈಲ್ವೆ ಪೊಲೀಸ್ ಫೋರ್ಸ್ ಟ್ರೈನಿಂಗ್ ಸೆಂಟರನ್ನು ತೆರೆಯಲು ಮನವಿ ಮಾಡಿದ್ದರು.

  • ಸಂಸತ್‍ನಲ್ಲಿ ಕನ್ನಡದಲ್ಲಿ ಸುಮಲತಾ ಮೊದಲ ಮಾತು

    ಸಂಸತ್‍ನಲ್ಲಿ ಕನ್ನಡದಲ್ಲಿ ಸುಮಲತಾ ಮೊದಲ ಮಾತು

    – ರೈತರ ಸಮಸ್ಯೆ ಬಗ್ಗೆ ಪ್ರಸ್ತಾಪ

    ನವದೆಹಲಿ: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕನ್ನಡದಲ್ಲಿ ಮಾತು ಆರಂಭಿಸಿ ಮಂಡ್ಯ ಜನತೆಗೆ ಶುಭ ಕೋರಿದ್ದಾರೆ.

    ಸುಮಲತಾ ಅಂಬರೀಶ್ ಅವರು ಸಂಸತ್ತಿನಲ್ಲಿ, ನನ್ನ ಹೆಮ್ಮೆಯ ಕ್ಷೇತ್ರವಾದ ಮಂಡ್ಯದ ಸ್ವಾಭಿಮಾನಿ ಜನತೆಗೆ ಧನ್ಯವಾದಗಳು ಎಂದು ಮಂಡ್ಯ ಜನತೆಗೆ ಕನ್ನಡದಲ್ಲಿ ಶುಭಾಶಯ ಕೋರಿ ಇಂಗ್ಲಿಷ್‍ನಲ್ಲಿ ತಮ್ಮ ಮಾತನ್ನು ಮುಂದುವರಿಸಿದರು.

    ರಾಜ್ಯದಲ್ಲಿ ಹಾಗೂ ನನ್ನ ಕ್ಷೇತ್ರ ಮಂಡ್ಯದಲ್ಲಿ ಜನರು ತೀವ್ರ ಬರ ಎದುರಿಸುತ್ತಿದ್ದಾರೆ. ಮಾನ್ಸೂನ್ ಮಳೆ ನಿಗದಿತ ಪ್ರಮಾಣದಲ್ಲಿ ಬಂದಿಲ್ಲ. ಅಲ್ಲದೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಬ್ಬು ಹಾಗೂ ಭತ್ತ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

    ರೈತರು ಕೃಷಿ ಸಾಲ ತೀರಿಸಲಾರದ ಪರಿಸ್ಥಿತಿ ತಲುಪಿದ್ದಾರೆ. ನಾವು ಎಲ್ಲರೂ ಕೂಡಲೇ ರೈತರ ನೆರವಿಗೆ ಬರಬೇಕು. ಪ್ರಧಾನಿ ಮೋದಿ ಹಾಗೂ ಜಲಶಕ್ತಿ ಸಚಿವರು ಈ ಬಗ್ಗೆ ತುರ್ತು ಗಮನ ಕೊಡಬೇಕು. ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕಿದೆ. ಎಲ್ಲರೂ ಸೇರಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಸುಮಲತಾ ಮನವಿ ಮಾಡಿಕೊಂಡರು.

    ಸುಮಲತಾ ಅವರು ರೈತರ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ಇದಾದ ಬಳಿಕ ಸುಮಲತಾ ಅವರು ಜೈ ಜವಾನ್, ಜೈ ಕಿಸಾನ್, ಜೈ ಹಿಂದ್, ಜೈ ಕರ್ನಾಟಕ ಎಂದು ಘೋಷಣೆ ಮಾಡುವ ಮೂಲಕ ತಮ್ಮ ಮಾತನ್ನು ಮುಗಿಸಿದರು.

  • ಸುಮಲತಾರನ್ನು ಬಿಜೆಪಿಯತ್ತ ಸೆಳೆಯಲು ಮೆಗಾ ಪ್ಲಾನ್

    ಸುಮಲತಾರನ್ನು ಬಿಜೆಪಿಯತ್ತ ಸೆಳೆಯಲು ಮೆಗಾ ಪ್ಲಾನ್

    ನವದೆಹಲಿ: ಮೈಸೂರಿನಲ್ಲಿ ಸುಮಲತಾ ಗೆಲ್ಲಿಸಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿಯವರ ಒಂದೇ ಒಂದು ಮಾತಿಗೆ ಬಿಜೆಪಿ ಸಂಸದರು ಭಯ ಬಿದ್ದರಾ ಎಂಬ ಪ್ರಶ್ನೆಯೊಂದು ಇದೀಗ ರಾಜಕೀಯ ವಲಯದಲ್ಲಿ ಮೂಡಿದೆ.

    ಸಿಎಂ ಪುತ್ರನನ್ನ ಸೋಲಿಸಿದ್ದ ಕಾರಣಕ್ಕೆ ಸುಮಲತಾಗೆ ವಿಶೇಷ ಗೌರವ ಸಿಗುತ್ತಿದೆ ಎಂದು ಹೇಳಲಾಗುತ್ತಿದ್ದು, ಇತ್ತೀಚೆಗೆ ಮೋದಿ ಕರೆದಿದ್ದ ಡಿನ್ನರ್‍ನಲ್ಲೂ ಸುಮಲತಾ ಹವಾ ಜೋರಾಗಿತ್ತು. ಈಗ ಮಂತ್ರಿಗಳ ಕಚೇರಿಗಳಿಗೂ ಸುಮಲತಾ ಅವರಿಗೆ ಸುಲಭವಾಗಿಯೇ ಎಂಟ್ರಿ ಸಿಗುತ್ತದೆ. ಬಿಜೆಪಿ ಸಂಸದರು ಅಭಿವೃದ್ಧಿ ಕೆಲಸಗಳ ಹೆಸರಿನಲ್ಲಿ ಸುಮಲತಾಗೆ ಬೆಂಬಲ ಕೊಡುತ್ತಿದ್ದಾರೆ. ಈ ಮೂಲಕ ಸುಮಲತಾ ಅವರನ್ನು ಬಿಜೆಪಿಯತ್ತ ಸೆಳೆಯಲು ದೆಹಲಿಯಲ್ಲಿ ಮೆಗಾ ಪ್ಲಾನ್ ನಡೆಯುತ್ತಿದೆ ಎಂಬುದಾಗಿ ತಿಳಿದುಬಂದಿದೆ.

    ಸಂಸದೆ ಸುಮಲತಾ ಅವರು ಮಂಡ್ಯಕ್ಕೆ 2 ಟಿಎಂಸಿ ನೀರಿಗಾಗಿ ಡಿವಿ ಸದಾನಂದ ಗೌಡರಿಗೆ ಮನವಿ ಮಾಡಿದ್ದರು. ಸುಮಲತಾ ಅವರ ಒಂದೇ ಪತ್ರಕ್ಕೆ ಡಿ.ವಿ ಸದಾನಂದಗೌಡರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದರು. ಇದನ್ನೇ ರಾಜ್ಯ ಬಿಜೆಪಿ ಸಂಸದರು ದಾಳವಾಗಿ ಬಳಸಿಕೊಳ್ತಿದ್ದಾರಾ ಅನ್ನೋ ಅನುಮಾನ ಮಾಡಿದೆ.

    ಇತ್ತೀಚೆಗೆ ಸುಮಲತಾ ಅವರು ಬಿಜೆಪಿ ಸಂಸದರ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಮಂಡ್ಯದ ಕೆಲಸಗಳಿಗಾಗಿ ಬಿಜೆಪಿ ಸಂಸದರ ಜೊತೆ ಸುಮಲತಾ ಅಂಬರೀಶ್ ಇದ್ದಾರಾ ಅಥವಾ ಬಿಜೆಪಿ ಸೇರ್ಪಡೆಗೆ ಒಲವು ತೋರಿದ್ದಾರಾ ಅನ್ನೋ ಅನುಮಾನ ಮೂಡುತ್ತಿದೆ. ಒಟ್ಟಿನಲ್ಲಿ ಸುಮಲತಾ ಅಂಬರೀಶ್ ಅವರ ಜಾಣ ನಡೆ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿದೆ.

  • ಮಂಡ್ಯ ಸಂಸದರ ಬಗ್ಗೆ ಕಮೆಂಟ್ ಮಾಡಲ್ಲ: ಸುಮಲತಾಗೆ ಎಚ್‍ಡಿಡಿ ಟಾಂಗ್

    ಮಂಡ್ಯ ಸಂಸದರ ಬಗ್ಗೆ ಕಮೆಂಟ್ ಮಾಡಲ್ಲ: ಸುಮಲತಾಗೆ ಎಚ್‍ಡಿಡಿ ಟಾಂಗ್

    – ಪ್ರಜ್ವಲ್ ರೈತನ ಹೊಟ್ಟೆಯಲ್ಲಿ ಹುಟ್ಟಿ ಬಂದವನು

    ಬೆಂಗಳೂರು: ಸಂಸತ್‍ನಲ್ಲಿ ನೀರಿನ ಬಗ್ಗೆ ಮಾತನಾಡದ ಮಂಡ್ಯ ಸಂಸದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸುಮಲತಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಸಂಸದರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ನಾನು ಯಾಕೆ ಅವರ ಬಗ್ಗೆ ಕಾಮೆಂಟ್ ಮಾಡಲಿ. ಸಂಸದ ಪ್ರಜ್ವಲ್ ರೇವಣ್ಣ ಮಂಡ್ಯ ಜಿಲ್ಲೆಗೆ ನೀರು ಬಿಡಿ ಎಂದು ಸಂಸತ್‍ನಲ್ಲಿ ಧ್ವನಿ ಎತ್ತಿದ್ದಾನೆ. ರೈತರ ಬೆಳೆಗಳಿಗೆ 2 ಟಿಎಂಸಿ ನೀರು ಕೊಡಿ ಅಂತ ಕೇಳಿಕೊಂಡಿದ್ದಾನೆ ಎಂದು ಹೇಳಿದರು.

    ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ತಂದೆ ಎಚ್.ಡಿ.ರೇವಣ್ಣ ಹಾಗೂ ಚಿಕ್ಕಪ್ಪ ಸಿಎಂ ಹೋರಾಟ ಗೊತ್ತಿದೆ. ಹೀಗಾಗಿ ಸಂಸತ್‍ನಲ್ಲಿ ಭ್ರಷ್ಟ ಸರ್ಕಾರ ಎಂಬ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರ ಮಾತಿಗೆ ಪ್ರಜ್ವಲ್ ಸಮರ್ಥ ಉತ್ತರ ಕೊಟ್ಟಿದ್ದಾನೆ ಎಂದು ಖುಷಿ ವ್ಯಕ್ತಪಡಿಸಿದರು.

    ಪ್ರಜ್ವಲ್ ರೈತನ ಹೊಟ್ಟೆಯಲ್ಲಿ ಹುಟ್ಟಿ ಬಂದವನು. ಅವನ ಊರಲ್ಲಿ ಅತ್ಯುತ್ತಮ ಬೆಳೆ ಬೆಳೆಯುತ್ತಾನೆ. ಈ ಮಾತು ಸುಳ್ಳು ಎನ್ನುವುದಾದರೆ ಬನ್ನಿ ನಾನು ಅಲ್ಲಿಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಅವರು ರೈತ ಕೆಲಸ ಮಾಡುತ್ತಿದ್ದಾರೆ. ಈಗ ಸಿಎಂ ಭೂಮಿ ಖರೀದಿ ಮಾಡಿದ್ದಾರೆ. ಈ ಮೂಲಕ ಕೃಷಿ ಚಟುವಟಿಕೆ ನಡೆಸುವ ಆಲೋಚನೆ ಹೊಂದಿದ್ದಾನೆ. ನಿಖಿಲ್ ಕೂಡ ಕೃಷಿ ಮಾಡಲು ಓಡಾಡುತ್ತಿದ್ದಾನೆ ಎಂದು ಹೇಳಿದರು.

  • ಈವರೆಗೂ ರಾಕಿಂಗ್ ಸ್ಟಾರ್ ಪುತ್ರಿಯನ್ನ ನೋಡಿಲ್ಲ- ಸುಮಲತಾ

    ಈವರೆಗೂ ರಾಕಿಂಗ್ ಸ್ಟಾರ್ ಪುತ್ರಿಯನ್ನ ನೋಡಿಲ್ಲ- ಸುಮಲತಾ

    – ಅಂಬರೀಶ್ 7ನೇ ತಿಂಗಳ ಪುಣ್ಯತಿಥಿ
    – ನಟ ಚಿರಂಜೀವಿಗೆ ಶುಭಾಶಯ
    – ಸದ್ಯ ಸಿನಿಮಾ ಬಗ್ಗೆ ಯೋಚಿಸಿಲ್ಲ

    ಬೆಂಗಳೂರು: ರಾಕಿಂಗ್ ಸ್ಟಾರ್ ಪುತ್ರಿ ನನಗೂ ಮೊಮ್ಮಗಳೇ. ನಾನು ಈವರೆಗೂ ಮಗುವನ್ನು ನೋಡಿಲ್ಲ. ಒಂದೊಳ್ಳೆಯ ದಿನ ನೋಡಿ ಯಶ್ ಅವರೇ ತನ್ನ ಮಗುವನ್ನ ತೋರಿಸುವುದಾಗಿ ಹೇಳಿದ್ದಾರೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 7ನೇ ತಿಂಗಳ ಪುಣ್ಯ ತಿಥಿಯಾಗಿದ್ದು, ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಕುಟುಂಬ ಭೇಟಿ ನೀಡಿ ಪೂಜೆ ಸಲ್ಲಿಸಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿರಂಜೀವಿಗೆ ಶುಭಾಶಯ ಕೋರಿದ್ದಾರೆ. ಅವರ ಜೊತೆ 15 ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದರು.

    ಅಂಬರೀಶ್ ಜೊತೆ ಇದ್ದಂತಹ ಸಮಯವನ್ನ ಮರೆಯೋಕಾಗೊಲ್ಲ. ದಿನ ಕಳೆದಂತೆ ನೆನಪುಗಳು ಹೆಚ್ಚಾಗುತ್ತಿವೆಯೇ ಹೊರತು ಮಾಸುತ್ತಿಲ್ಲ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಬಹಳ ಹೆಮ್ಮೆಯ ವಿಷಯವಾಗಿದೆ. 130 ಕೋಟಿ ಜನ ನಮ್ಮನ್ನ ನೋಡಿರುತ್ತಾರೆ. ಮಂಡ್ಯದ ನೀರಿನ ಸಮಸ್ಯೆಯನ್ನು ಜಲಶಕ್ತಿ ಸಚಿವರೊಂದಿಗೆ ಮತ್ತು ಸದಾನಂದ ಗೌಡರ ಜೊತೆ ಚರ್ಚಿಸಿದ್ದೇನೆ. ರೈತರ ಆತ್ಮಹತ್ಯೆ ವಿಚಾರವಾಗಿ ಶಾಶ್ವತ ಪರಿಹಾರ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಮುಂದಿನ ದಿನಗಳಲ್ಲಿ ಜನತಾ ದರ್ಶನಕ್ಕಾಗಿ ಮಂಡ್ಯದಲ್ಲೇ ಕಚೇರಿ ತೆರೆಯಲಿದ್ದೇನೆ ಎಂದು ತಿಳಿಸಿದರು.

    ದೆಹಲಿಯಲ್ಲಿದ್ದರೆ ಮಂಡ್ಯದಲ್ಲಿ ಇಲ್ಲ ಅಂತಾರೆ. ಮಂಡ್ಯಕ್ಕೆ ಬಂದರೆ ಸಂಸತ್‍ಗೆ ಗೈರು ಎಂದು ಹೇಳುತ್ತಾರೆ. ಈ ರೀತಿಯ ಗಾಸಿಪ್‍ಗಳಿಗೆ ಕಿವಿ ಕೊಡಬೇಡಿ. ಅಭಿಷೇಕ್ ಮುಂದಿನ ಚಿತ್ರಕ್ಕೆ ಸಹಿ ಮಾಡಿದ್ದಾನೆ. ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರೆ. ಸದ್ಯಕ್ಕೆ ನಾನು ಸಿನಿಮಾ ಮಾಡುವ ಯೋಚನೆಯಿಲ್ಲ. ಮಂಡ್ಯಕ್ಕಾಗಿ ಕೆಲಸ ಮಾಡುವುದಷ್ಟೇ ನನ್ನ ಉದ್ದೇಶ ಎಂದರು.

    ಈ ವೇಳೆ ಪುತ್ರ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಭಾಗಿಯಾಗಿದ್ದರು.

  • ಸುಮಲತಾ ವೇದಿಕೆಯತ್ತ ಬರುತ್ತಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಕೂಗು

    ಸುಮಲತಾ ವೇದಿಕೆಯತ್ತ ಬರುತ್ತಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಕೂಗು

    ಹುಬ್ಬಳ್ಳಿ/ಧಾರವಾಡ: ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಅವರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಕೂಗಿದ್ದಾರೆ.

    ಹುಬ್ಬಳ್ಳಿಯ ಖಾಸಗಿ ಕಾಲೇಜ್‍ನಲ್ಲಿ ಅಮರ್ ಚಿತ್ರ ತಂಡದ ಸಂವಾದ ಕಾರ್ಯಕ್ರಮ ನಡೆಯುತ್ತಿದೆ. ಈ ಸಂವಾದ ಕಾರ್ಯಕ್ರಮಕ್ಕೆ ಸುಮಲತಾ ಅವರು ವೇದಿಕೆ ಮೇಲೆ ಆಗಮಿಸುತ್ತಾರೆ. ಈ ವೇಳೆ ಸುಮಲತಾ ಅವರು ವೇದಿಕೆಯ ಮೇಲೆ ಬರುತ್ತಿದ್ದಂತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೆಲ್ಲರೂ ‘ನಿಖಿಲ್ ಎಲ್ಲಿದ್ದೀಯಪ್ಪ, ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ. ಆಗ ಸುಮಲತಾ ಅವರು ವೇದಿಕೆಯ ಮೇಲೆಯೇ ನಕ್ಕಿದ್ದಾರೆ.

    ವಿಧ್ಯಾರ್ಥಿಗಳು ‘ನಿಖಿಲ್ ಎಲ್ಲಿದಿಯಪ್ಪಾ’ ಎಂದು ಕೂಗುತ್ತಿದ್ದಂತೆ ಅಭಿಷೇಕ್ ಅವರು, ಯಾರಾದ್ರು ಎಲ್ಲಾದರೂ ಹೋಗಲಿ ನಾವು ಇಲ್ಲಿದ್ದೀವಿ. ಅದನ್ನ ಬಿಟ್ಟು ಬಿಡಿ ಎಂದು ಹೇಳಿದ್ದಾರೆ. ಇಂದು ಅಭಿಷೇಕ್ ಅಭಿನಯದ ‘ಅಮರ್’ ಚಿತ್ರ ಪ್ರಚಾರಕ್ಕಾಗಿ ಚಿತ್ರತಂಡ ಅವಳಿ ನಗರಕ್ಕೆ ಆಗಮಿಸಿದೆ. ಸುಮಲತಾರಿಗೆ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮತ್ತು ಅಮರ್ ಚಿತ್ರ ನಿರ್ದೇಶಕ ನಾಗಶೇಖರ್ ಸಾಥ್ ನೀಡಿದ್ದಾರೆ.

    ಅಷ್ಟೇ ಅಲ್ಲದೇ ಇಂದು ಬೆಳಗ್ಗೆ ಧಾರವಾಡ ಹೊರವಲಯದ ನುಗ್ಗಿಕೇರೆ ಹನುಮಂತ ದೇವಸ್ಥಾನದಲ್ಲಿ ತುಪ್ಪ ಮತ್ತು ಹಾಲಿನ ತುಲಾಭಾರ ಮಾಡಿಸಿದ್ದಾರೆ. ಸುಮಲತಾ ಅವರಿಗೆ 75 ಕೆಜಿ ಸಕ್ಕರೆ, 15 ಕೆಜಿ ತುಪ್ಪದಿಂದ ತುಲಾಭಾರ ಮಾಡಿದ್ದು, ಅಭಿಷೇಕ್ ಅವರಿಗೆ 100 ಕೆಜಿ ಸಕ್ಕರೆ, 15 ಕೆಜಿ ತುಪ್ಪದಲ್ಲಿ ತುಲಾಭಾರ ಮಾಡಿಸಲಾಗಿದೆ. ಅಭಿಮಾನಿ ನಾರಾಯಣ್ ಕಲಾಲ್ ಅಪೇಕ್ಷೆ ಮೇರೆಗೆ ಈ ತುಲಾಭಾರ ನಡೆದಿದೆ.

  • ಸುಮಲತಾರನ್ನ ಭೇಟಿಯಾದ ಮೊದಲ ಮತ ಚಲಾಯಿಸಿದ್ದ ಯೋಧ

    ಸುಮಲತಾರನ್ನ ಭೇಟಿಯಾದ ಮೊದಲ ಮತ ಚಲಾಯಿಸಿದ್ದ ಯೋಧ

    ಮಂಡ್ಯ: ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಪರ ಮತ ಚಲಾಯಿಸಿ ಫೋಟೋ ಹಂಚಿಕೊಂಡಿದ್ದ ಯೋಧ ರಾಜನಾಯಕ್ ಇಂದು ಸುಮಲತಾರನ್ನ ಭೇಟಿ ಮಾಡಿದ್ದಾರೆ.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹಕ್ಕಿಹೆಬ್ಬಾಳು ಗ್ರಾಮದವರಾದ ರಾಜನಾಯಕ್ ಅವರು ಅಂಚೆ ಮತದಾನ ಮಾಡಿ ಸುಮಲತಾ ಅವರಿಗೆ ಮತ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಈ ಫೋಟೋ ಸಖತ್ ವೈರಲ್ ಆಗಿತ್ತು.

    ಇಂದು ಸುಮಲತಾರನ್ನ ಮಂಡ್ಯದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಶುಭ ಕೋರಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಅವರು ಗೆಲುವು ಪಡೆದಿರುವುದು ಸಂತಸ ತಂದಿದೆ. ಅವರಿಗೆ ಶುಭ ಕೋರಲು ಇಂದು ಆಗಮಿಸಿದ್ದೆ. ನಾನು ಅಂಬಿ ಅವರ ಅಭಿಮಾನಿಯಾಗಿದ್ದೆ. ಈಗ ಸುಮಲತಾ ಅವರಿಗೆ ಬೆಂಬಲ ನೀಡಿದ್ದೆ. ಇದೇ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದೆ. ಅವರ ಪಕ್ಕ ಕುಳಿತು ಊಟ ಮಾಡಿದ್ದು, ನನಗೆ ಸ್ಮರಣಿಯ. ಭೇಟಿ ವೇಳೆ ಅವರಿಗೆ ತೆಂಗಿನ ಸಸಿಯನ್ನ ನೀಡಿದ್ದು, ಅವರು ನನಗೆ ಮತ್ತೊಂದು ಸಸಿ ನೀಡಿದ್ದಾರೆ. ಅವರ ನೆನಪಿನಲ್ಲೇ ಇದನ್ನು ತೋಟದಲ್ಲಿ ನಾಟಿ ಮಾಡುತ್ತೇನೆ ಎಂದರು.

     

    ಯೋಧ ರಾಜನಾಯಕ್ ಸುಮಲತಾ ಅವರಿಗೆ ಹಾಕಿದ ಮತ ಮತ ಏಣಿಕೆ ವೇಳೆ ಅಸಿಂಧು ಆಗಿತ್ತು. ಮತದಾನ ಗೌಪ್ಯತೆ ಬಹಿರಂಗವಾದ ಹಿನ್ನೆಲೆಯಲ್ಲಿ ಅವರ ಮತ ಅಸಿಂಧು ಆಗಿತ್ತು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಜನಾಯಕ್, ನನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಆದ್ದರಿಂದ ಫೋಟೋ ಶೇರ್ ಮಾಡಿದ್ದೆ. ನನ್ನ ಸಂತೋಷಕ್ಕಾಗಿ ನಾನು ಇದನ್ನು ಮಾಡಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು. ರಜೆಯ ಹಿನ್ನೆಲೆಯಲ್ಲಿ ರಾಜನಾಯಕ್ ಗ್ರಾಮಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಸುಮಲತಾರನ್ನು ಭೇಟಿ ಮಾಡಿದ್ದಾರೆ.