Tag: ಸುಮಲತಾ ಅಂಬರೀಶ್

  • ನಾನೇನೂ ಕೆಲಸ ಮಾಡ್ತಿಲ್ಲ, ಎಲ್ಲ ಸುಮಲತಾ ಮೇಡಂ ಮಾಡ್ತಿದ್ದಾರೆ: ಶಾಸಕ ಅನ್ನದಾನಿ ಟಾಂಗ್

    ನಾನೇನೂ ಕೆಲಸ ಮಾಡ್ತಿಲ್ಲ, ಎಲ್ಲ ಸುಮಲತಾ ಮೇಡಂ ಮಾಡ್ತಿದ್ದಾರೆ: ಶಾಸಕ ಅನ್ನದಾನಿ ಟಾಂಗ್

    – ಮೇಡಂ ಅವರೇ ಕೆರೆಗೆ ಪೂಜೆ, ಕೆರೆ ತುಂಬಿಸಿದ್ದು

    ಮಂಡ್ಯ: ನಾನು ಏನೂ ಕೆಲಸ ಮಾಡ್ತಾ ಇಲ್ಲ. ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ಓಡಾಡುತ್ತಿದ್ದೇನೆ. ಮಳವಳ್ಳಿಯಲ್ಲಿ ನಂಗೆ ಇದೇ ಕೆಲಸ. ಆದರೆ ಸುಮಲತಾ ಅವರೇ ಪ್ರತಿದಿನ ಇಲ್ಲಿನ ಜನರ ಕಷ್ಟ ಸುಖವನ್ನು ನೋಡ್ತಾ ಇರೋದು ಎಂದು ಸಂಸದೆ ಸುಮಲತಾ ಅಂಬರೀಶ್‍ಗೆ ಜೆಡಿಎಸ್ ಶಾಸಕ ಅನ್ನದಾನಿ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

    ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರ ಬಗ್ಗೆ ಸುಮಲತಾ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ಶಾಸಕರ ಅನ್ನದಾನಿ, ತಾಲೂಕು ಆಫೀಸ್, ಪೊಲೀಸ್ ಸ್ಟೇಷನ್ ಎಲ್ಲವನ್ನೂ ಅವರೇ ಮಾಡುತ್ತಿದ್ದಾರೆ. ಕೆರೆಗೆ ಪೂಜೆ, ಕೆರೆ ತುಂಬಿಸಿದ್ದು ಅಲ್ಲದೇ ಪಿಂಚಣಿ ಕೂಡ ಮೇಡಂ ಅವರೇ ಕೊಡಿಸುತ್ತಿರೋದು. ಅವರೇ ಜಗಳಗಳನ್ನು ಇತ್ಯರ್ಥ ಮಾಡುತ್ತಾ ಇರೋದು. ಈ ತಾಲೂಕಿನ ಕೆಲಸವನ್ನೆಲ್ಲಾ ಅವರೇ ಮಾಡುತ್ತಾ ಇರೋದು. ನಾನು ಏನೂ ಕೆಲಸ ಮಾಡುತ್ತಾ ಇಲ್ಲ. ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ಓಡಾಡುತ್ತಿದ್ದೇನೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ದರ್ಶನ್, ಯಶ್ ನಟನೆ ಸಿನಿಮಾರಂಗಕ್ಕೆ ಸೀಮಿತವಾಗಿರಲಿ ರಾಜಕೀಯಕ್ಕೆ ಬೇಡ: ಶಿವರಾಮೇಗೌಡ

    ಈ ಜಿಲ್ಲೆಯಲ್ಲಿ ನಾರಾಯಣಗೌಡರನ್ನು ಬಿಟ್ಟು ನಾವು ಈಗ 6 ಜನ ಇದ್ದೇವೆ. ನಾವು ಏನೂ ಕೆಲಸ ಮಾಡುತ್ತಿಲ್ಲ. ಊಟ ಮಾಡಿಕೊಂಡು ತಿರುಗಾಡುತ್ತಾ ಇದ್ದೇವೆ. ದಯವಿಟ್ಟು ಸುಮಲತಾ ಅವರು ಇನ್ನೂ ಹೆಚ್ಚಿನ ರೀತಿ ಕೆಲಸ ಮಾಡಬೇಕು. ನಮ್ಮ ಹೊರೆಯನ್ನು ಇಳಿಸಬೇಕು ಎಂದು ಕೈ ಜೋಡಿಸಿ ಮನವಿ ಮಾಡುತ್ತೇನೆ. ಶಾಸಕರೇನು ಇಲ್ಲ, ಅವರ ಕೆಲಸ ನಾನೇ ಮಾಡುತ್ತಿದ್ದೇನೆ ಎಂದು ಅವರೇ ಹೇಳಿದ್ದಾರಲ್ಲ. ಎಲ್ಲಾ ಅವರೇ ಕೆಲಸ ಮಾಡುವಾಗ ನಮಗೇನೂ ಇಲ್ಲ. ನಮ್ಮ ಜವಾಬ್ದಾರಿಯನ್ನು ಮೇಡಂ ಅವರೇ ತೆಗೆದುಕೊಂಡಿದ್ದಾರಂತೆ. ನಮ್ಮ ಜವಾಬ್ದಾರಿ ಏನೂ ಇಲ್ಲ ಎಂದು ಜನರಿಗೆ ಹೇಳಿ ತಿರುಗಾಡಿಕೊಂಡು ಇರುತ್ತೇವೆ ಎಂದು ಕಿಡಿಕಾರಿದರು.

    ಸುಮಲತಾ ಅವರಿಗೆ ರಾಜಕೀಯ ಪ್ರಬುದ್ಧತೆ ಇದೆ. ಅದಕ್ಕೆ ಅವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರು ಕರೆದರೂ ಹೋಗುತ್ತೇನೆ ಅಂತಾರೆ. ಈ ಪ್ರಬುದ್ಧತೆಯಿಂದಲೇ ಅವರು ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಆಗಿರೋದು. ಅವರು ಎಲ್ಲಾ ಪಾರ್ಟಿಗಳಿಗೂ ಹೋಗಲಿ ಎಲ್ಲರನ್ನೂ ಮಾತಾಡಿಸಲಿ ಎಂದು ನಗು-ನಗುತ್ತಲೇ ವ್ಯಂಗ್ಯವಾಗಿ ಸುಮಲತಾ ಅವರ ವಿರುದ್ಧ ಅನ್ನದಾನಿ ಹರಿಹಾಯ್ದರು.

    ಸಂಸದೆ ಹೇಳಿದ್ದೇನು?
    ಅ. 9ರಂದು ಮಂಡ್ಯ ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಕೋರ್ ಕಮಿಟಿ ಸದಸ್ಯರ ಸಭೆಯಲ್ಲಿ ಭಾಗಿಯಾಗಿದ್ದ ಸಂಸದೆ ಸುಮಲತಾ, ಜೋಡೆತ್ತುಗಳು ಈಗ ಎಲ್ಲಿ ಹೋದರು ಎಂಬ ಟೀಕೆಗೆ ತಿರುಗೇಟು ನೀಡಿದ್ದರು. ಜೆಡಿಎಸ್ ಪಕ್ಷದ ಎಂಟು ಜನ ಶಾಸಕರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಸಂಸದರು ಗೆದ್ದ ತಕ್ಷಣ, ಆ ಎಂಟು ಜನ ಶಾಸಕರು ಕೆಲಸ ಮಾಡಬಾರದು ಎಂದು ನಿಯಮ ಇದೆಯೇ ಎಂದು ಪ್ರಶ್ನಿಸಿದ್ದರು.

  • ಸುಮಲತಾ ಮನೆಗೆ ಯಶ್ ದಂಪತಿ ಭೇಟಿ – ಅಂಬಿ ಮೀಸೆ ಮೇಲೆ ಕೈಯಿಟ್ಟ ಐರಾ

    ಸುಮಲತಾ ಮನೆಗೆ ಯಶ್ ದಂಪತಿ ಭೇಟಿ – ಅಂಬಿ ಮೀಸೆ ಮೇಲೆ ಕೈಯಿಟ್ಟ ಐರಾ

    ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮಗಳು ಐರಾ ಜೊತೆಗೆ ನಟಿ, ಮಂಡ್ಯ ಸಂಸದೆ ಆಗಿರುವ ಸುಮಲತಾ ಅಂಬರೀಶ್ ಅವರ ಮನೆಗೆ ಭೇಟಿ ನೀಡಿದ್ದಾರೆ.

    ಯಶ್ ‘ಕೆಜಿಎಫ್-2’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಾಧಿಕಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈಗ ಇಬ್ಬರು ತಮ್ಮ ಮಗಳು ಐರಾಳನ್ನು ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ಕರೆದುಕೊಂಡು ಹೋಗಿದ್ದಾರೆ.

    ಸುಮಲತಾ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಐರಾ, ಅಂಬರೀಶ್ ಫೋಟೋದಲ್ಲಿ ಅವರ ಮೀಸೆ ಮೇಲೆ ಕೈಯಿಟ್ಟಿದ್ದಾಳೆ. ಯಶ್ ಮತ್ತು ರಾಧಿಕಾ, ಅಂಬರೀಶ್ ಮನೆಗೆ ಯಾವಾಗ ಭೇಟಿ ನೀಡಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಅವರು ಸುಮಲತಾ ಅವರ ಮನೆಗೆ ಹೋಗಿರುವ ಫೋಟೋಗಳು ವೈರಲ್ ಆಗುತ್ತಿದೆ.

    ಸುಮಲತಾ ಅಂಬರೀಶ್ ಮನೆಗೆ ಯಶ್ ಮತ್ತು ರಾಧಿಕಾ ಪಂಡಿತ್ ಭೇಟಿ ಕೊಟ್ಟು ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದೇ ವೇಳೆ ಸುಮಲತಾ, ಯಶ್ ಮಗಳ ಜೊತೆ ಕೆಲ ಕಾಲ ಸಂತಸದಿಂದ ಕಾಲ ಕಳೆದಿದ್ದಾರೆ. ಜೊತೆಗೆ ಎಲ್ಲರೂ ಒಟ್ಟಾಗಿ ಫೋಟೋಗೆ ಪೋಸ್ ನೀಡಿದ್ದಾರೆ.

    ಮಂಡ್ಯ ಚುನಾವಣೆ ಬಳಿಕ ಸುಮಲತಾ ಮತ್ತು ಯಶ್ ಯಾವುದೇ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ದಂಪತಿ ಮಗಳ ಸಮೇತ ಸುಮಲತಾ ಅವರನ್ನು ಭೇಟಿ ಮಾಡಿ ಮಾತನಾಡಿಸಿಕೊಂಡು ಬಂದಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

  • ನಕಲಿ ಫೇಸ್‍ಬುಕ್ ಪುಟಗಳನ್ನು ಅನ್‍ಫಾಲೋ ಮಾಡಿ: ಸಂಸದೆ ಸುಮಲತಾ ಮನವಿ

    ನಕಲಿ ಫೇಸ್‍ಬುಕ್ ಪುಟಗಳನ್ನು ಅನ್‍ಫಾಲೋ ಮಾಡಿ: ಸಂಸದೆ ಸುಮಲತಾ ಮನವಿ

    ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಹೆಸರಲ್ಲಿ ಫೇಸ್‍ಬುಕ್‍ನಲ್ಲಿ ನಕಲಿ ಪುಟಗಳ ಹಾವಳಿ ಹೆಚ್ಚಾಗಿದ್ದು, ಇಂತಹ ಪುಟಗಳನ್ನು ಫಾಲೋ ಮಾಡಬೇಡಿ ಎಂದು ಸ್ವತಃ ಸುಮಲತಾ ಅವರೇ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

    ತಮ್ಮ ಅಧಿಕೃತ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಯಿಂದ ಸುಮಲತಾ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನಕಲಿ ಪುಟಗಳ ಹಾವಳಿ ಇನ್ನೂ ಮುಂದುವರಿದಿದೆ. ಇಂತಹ ಫೇಸ್‍ಬುಕ್ ಪುಟಗಳನ್ನು ಫಾಲೋ ಮಾಡಬೇಡಿ. ಇದು ನನ್ನ ಅಧಿಕೃತ ಪುಟವಲ್ಲ, ಈ ಪೇಜ್ ನ್ನು ಫಾಲೋ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ನಕಲಿ ಪುಟದ ಸ್ಕ್ರೀನ್‍ಶಾರ್ಟ್ ತೆಗೆದು ಅದನ್ನು ಕೂಡ ಶೇರ್ ಮಾಡಿ ನಕಲಿ ಪುಟಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ಇದು ನಕಲಿ ಪುಟ ಇನ್ನೂ ಮುಂದುವರಿದಿದೆ. ದಯಮಾಡಿ ಈ ಪುಟವನ್ನು ಅನ್‍ಫಾಲೋ ಮಾಡಿ, ಈ ಪುಟ ಬಳಕೆದಾರ ಇದರಲ್ಲಿ ಹಲವು ಹಾನಿಕಾರಕ ವಿಷಯಗಳನ್ನು, ಸಾಕಷ್ಟು ಎಚ್ಚರಿಕೆಗಳನ್ನು ಪೋಸ್ಟ್ ಮಾಡುತ್ತಿದ್ದಾನೆ. ಈಗಾಗಲೇ ಈ ನಕಲಿ ಪುಟಗಳ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ಈ ರೀತಿ ಅಸಂಬದ್ಧಕ್ಕೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ಕಾಯುತ್ತಿದ್ದೇನೆ ಎಂದು ಬರೆದು, ನಕಲಿ ಪುಟಗಳ ಫೋಟೋ ಜೊತೆಗೆ ಅಪ್ಲೋಡ್ ಮಾಡಿದ್ದಾರೆ.

    ಈ ಹಿಂದೆ ಕೂಡ ಸುಮಲತಾ ಅವರು ತಮ್ಮ ಹೆಸರಿನಲ್ಲಿ ತೆರೆಯಲಾಗಿರುವ ನಕಲಿ ಫೇಸ್‍ಬುಕ್ ಪುಟಗಳ ಬಗ್ಗೆ ತಿಳಿದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಯಾವುದೇ ಅನಧಿಕೃತ ಪುಟಗಳು ನಿಮ್ಮ ಗಮನಕ್ಕೆ ಬಂದರೆ ಅದನ್ನು ದಯಮಾಡಿ ವರದಿ ಮಾಡಿ ಎಂದು ಕೋರಿಕೊಂಡಿದ್ದರು.

  • ಮಂಡ್ಯದಲ್ಲಿ ಎಂಪಿ ಆಫೀಸ್ ಓಪನ್- ಇನ್ಮುಂದೆ ಕಚೇರಿಯಲ್ಲೇ ಸುಮಲತಾ ಅಹವಾಲು ಸ್ವೀಕಾರ

    ಮಂಡ್ಯದಲ್ಲಿ ಎಂಪಿ ಆಫೀಸ್ ಓಪನ್- ಇನ್ಮುಂದೆ ಕಚೇರಿಯಲ್ಲೇ ಸುಮಲತಾ ಅಹವಾಲು ಸ್ವೀಕಾರ

    ಮಂಡ್ಯ: ಜಿಲ್ಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಕಚೇರಿಯನ್ನು ಇಂದು ಉದ್ಘಾಟನೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಗೆ ಮೊದಲು ಪೂಜೆ ಮಾಡಿ ನಂತರ ಕಚೇರಿಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಇನ್ನು ಮುಂದೆ ಸುಮಲತಾ ಅವರು ತಮ್ಮ ಅಧಿಕೃತ ಕಚೇರಿಯಲ್ಲೇ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಒಳ್ಳೆಯ ದಿನ ಹೀಗಾಗಿ ನಾನು ಇಂದು ಕಚೇರಿ ಉದ್ಘಾಟನೆ ಮಾಡಿದ್ದೇನೆ. ಇದು ಅಂಬರೀಶ್ ಅವರು ಇದ್ದ ಕಚೇರಿಯಾಗಿದೆ. ಹೀಗಾಗಿ ಅಂಬರೀಶ್ ಅವರ ಆಫೀಸ್‍ನಲ್ಲಿ ಕೂರುವುದು ನನ್ನ ಭಾಗ್ಯವಾಗಿದೆ ಎಂದರು.

    ಇದೇ ವೇಳೆ ಫೇಸ್ ಬುಕ್ ಫೇಕ್ ಅಕೌಂಟ್ ವಿಚಾರ ಪ್ರತಿಕ್ರಿಯಿಸಿ, ಇದು ಬೇಕು ಅಂತಾನೇ ಮಾಡುತ್ತಿದ್ದಾರೆ. ಒಂದಷ್ಟು ಫೇಸ್‍ಬುಕ್ ಖಾತೆಗಳನ್ನು ತೆಗೆಸಿದ್ದಾರೆ. ಆದರೆ ಒಂದನ್ನು ಮಾತ್ರ ತೆಗೆಸಲು ಸಾಧ್ಯವಾಗುತ್ತಿಲ್ಲ. ಇದು ಯಾರೋ ಪ್ರಭಾವಿಗಳು ಮಾಡಿಸುತ್ತಿದ್ದು, ರಾಜಕೀಯ ಡ್ಯಾಮೇಜ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಡಿಕೆ ಶಿವಕುಮಾರ್ ಅವರ ಪರ ಒಕ್ಕಲಿಗರು ಪ್ರತಿಭಟನೆ ಮಾಡುವ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದ ಸಂಸದೆ, ಉತ್ತರ ಕರ್ನಾಟಕಕ್ಕೆ ಕೇಂದ್ರದ ನೆರವು ವಿಚಾರ ಬಗ್ಗೆ ಗೊತ್ತಿಲ್ಲ. ಕೇಂದ್ರ ಏನೋ ಪ್ಯಾಕೇಜ್ ಮಾಡಿಕೊಂಡಿದೆ ಅಂತಿದ್ದರು. ಸರ್ಕಾರಿ ಪ್ರಕ್ರಿಯೆಗಳು ತಡವಾಗುತ್ತವೆ. ಹೀಗಾಗಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಜನರಿಗೆ ಪರಿಹಾರ ಸಿಗುತ್ತದೆ ಎಂದರು.

    ಬೇರೆ ರಾಜ್ಯಕ್ಕೆ ಬೇಗ ನೆರವು ಕೊಡುವ ವಿಚಾರ ನನಗೆ ಗೊತ್ತಿಲ್ಲ. ಇದು ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿದ್ದಾಗಿದ್ದರಿಂದ ಅದರ ಬಗ್ಗೆ ನನಗೆ ಐಡಿಯಾ ಇಲ್ಲ. ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಹುಮತ ಬಂದರೆ ಆದಷ್ಟು ಬೇಗ ರಾಜ್ಯದಲ್ಲಿ ಉಸ್ತುವಾರಿ ಸಚಿವರ ನೇಮಕ ಮಾಡುತ್ತಾರೆ. ಈಗ ಸ್ಪಲ್ಪ ತಡ ಆಗಿದೆ. ಬೇಗ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಗಿಡ ನೆಟ್ಟು ನನಗೆ ಫೋಟೋ ಕಳುಹಿಸಿ- ಸಂಸದೆ ಸುಮಲತಾರಿಂದ ಪರಿಸರ ಜಾಗೃತಿ

    ಗಿಡ ನೆಟ್ಟು ನನಗೆ ಫೋಟೋ ಕಳುಹಿಸಿ- ಸಂಸದೆ ಸುಮಲತಾರಿಂದ ಪರಿಸರ ಜಾಗೃತಿ

    ಮಂಡ್ಯ: ಸಂಸದೆಯಾದ ಬಳಿಕ ಸುಮಲತಾ ಅವರು ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಅಲ್ಲಿ ಹಾರ, ಶಾಲು, ಪೇಟ ತೊಡಿಸಬೇಡಿ. ಬದಲಾಗಿ ಗಿಡ ನೆಡಿ ಎಂದು ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ್ದಾರೆ.

    ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದ ಮುಗಿದ ಬಳಿಕ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದೇನೆ. ಮಳವಳ್ಳಿ, ಶ್ರೀರಂಗಪಟ್ಟಣ, ಮದ್ದೂರು, ಕೆ.ಆರ್ ನಗರ, ಮಂಡ್ಯ ಹೀಗೆ ಎಲ್ಲಾ ತಾಲೂಕುಗಳಿಗೂ ಹೋಗುತ್ತಿದ್ದೇನೆ. ಜನ ತುಂಬಾ ಪ್ರೀತಿಯಿಂದ ನನ್ನನ್ನು ಸ್ವಾಗತಿಸುತ್ತಿದ್ದಾರೆ ಎಂದರು.

    ಹೋದ ಕಡೆಯೆಲ್ಲಾ ನನಗೆ ಜನ ಪ್ರೀತಿಯಿಂದ ಹೂವಿನ ಹಾರ, ಶಾಲು, ಪೇಟ ತೆಗೆದುಕೊಂಡು ಬಂದು ಸನ್ಮಾನ ಮಾಡುತ್ತಾರೆ. ಈ ಮೂಲಕ ಅವರು ನನ್ನ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಆದರೆ ನಿಜಕ್ಕೂ ಅದು ನನಗೆ ಬೇಡ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಪ್ರೀತಿಯನ್ನು ತೋರಿಸಿಕೊಳ್ಳುವುದಕ್ಕೆ ಅವರು ಎಲ್ಲಿಯಾದರೂ ಒಂದು ಸಸಿ ನೆಟ್ಟು ಆ ಫೋಟೋ ನನಗೆ ಕಳುಹಿಸಿದರೆ ಅವರ ಹೆಸರು ಹಾಕಿ ನನ್ನ ಫೇಸ್ ಬುಕ್ ಪೇಜಿನಲ್ಲಿ ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

    ದುಡ್ಡು ವೇಸ್ಟ್ ಆಗಬಾರದು, ಪರಿಸರಕ್ಕೆ ಒಳ್ಳೆಯದಾಗಬೇಕು. ಇಲ್ಲವೆಂದಲ್ಲಿ ಬಡವರಿಗೆ ಒಂದುಷ್ಟು ಏನಾದರೂ ಕೊಡುವುದಾದರೆ ಕೊಡಲಿ. ಸನ್ಮಾನಕ್ಕಾಗಿ ಹಣ ವ್ಯರ್ಥ ಮಾಡದಂತೆ ಕಾರ್ಯಕರ್ತರು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಅಲ್ಲಿ ಸಂತ್ರಸ್ತರಿದ್ದಾರೆ. ಅವರಿಗೆ ಸಹಾಯ ಮಾಡಲಿ. ಬರುವ ವಾರದಲ್ಲಿ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಯಾರು ಯಾರು ಏನೇನು ಮಾಡಬೇಕು ಎಂಬುದನ್ನು ಯೋಚನೆ ಮಾಡುತ್ತೇನೆ. ಒಟ್ಟಿನಲ್ಲಿ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂಬುದನ್ನು ಒದೇ ವೇಳೆ ಮಂಡ್ಯ ಯುವಕರಲ್ಲಿ ಮನವಿ ಮಾಡಿಕೊಂಡರು.

  • ಇದು ನಿಜವಾಗ್ಲೂ ಶಾಕಿಂಗ್ ಸುದ್ದಿ -ಫೋನ್ ಕದ್ದಾಲಿಕೆಯ ಬಗ್ಗೆ ಸುಮಲತಾ ಪ್ರತಿಕ್ರಿಯೆ

    ಇದು ನಿಜವಾಗ್ಲೂ ಶಾಕಿಂಗ್ ಸುದ್ದಿ -ಫೋನ್ ಕದ್ದಾಲಿಕೆಯ ಬಗ್ಗೆ ಸುಮಲತಾ ಪ್ರತಿಕ್ರಿಯೆ

    ಮಂಡ್ಯ: ಫೋನ್ ಕದ್ದಾಲಿಕೆ ಮಾಡುವುದು ಕ್ರಿಮಿನಲ್ ಎಂದು ಗೊತ್ತಿದ್ದರೂ ಮಾಡಿದ್ದಾರೆ. ಇದು ನಿಜವಾಗಲೂ ಶಾಕಿಂಗ್ ಸುದ್ದಿ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಮಂಡ್ಯದ ಪಣಕನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅವರು, ಚುನಾವಣೆ ವೇಳೆ ನಾನು ಏನೇನು ದೂರು ಕೊಟ್ಟಿದ್ದೆನೋ ಅದರಲ್ಲಿ ಒಂದೊಂದೆ ಸತ್ಯ ಬೆಳಕಿಗೆ ಬರುತ್ತಿದೆ. ನಮಗೆ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಅನುಮಾನ ಇತ್ತು. ಆದರೆ ಯಾರು ಮಾಡಿದ್ದಾರೆ, ಏನು ಎಂದು ಗೊತ್ತಿಲ್ಲ. ಈಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ ಎಂದು ತಿಳಿದಿದೆ. ಸಿಬಿಐಗೆ ನೀಡಿರುವುದು ಒಳ್ಳೆಯ ಕೆಲಸ. ತನಿಖೆಯಿಂದ ಏನೇನು ವಿಚಾರ ಹೊರ ಬರುತ್ತದೆ ಎಂದು ನೋಡಬೇಕಿದೆ ಎಂದರು.

    ಅವರು ಫೋನ್ ಕದ್ದಾಲಿಕೆ ಮಾಡಿದ್ದರೆ ಅದು ಅಪರಾಧವಾಗುತ್ತದೆ. ತಪ್ಪು ನಡೆದಿದೆ ಎಂದರೆ ನ್ಯಾಯ ಸಿಗಲೇಬೇಕು. ಇದು ನಿಜವಾಗಲೂ ಶಾಕಿಂಗ್ ಸುದ್ದಿ. ಈ ರೀತಿ ಫೋನ್ ಕದ್ದಾಲಿಕೆ ಮಾಡುವುದು ಕ್ರಿಮಿನಲ್ ಎಂದು ಗೊತ್ತಿದ್ದರೂ ಮಾಡಿದ್ದಾರೆ, ಇದು ನಿಜಕ್ಕೂ ತಪ್ಪು. ಈ ಸರ್ಕಾರ ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾನು ನೋಡಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

  • ಕುರುಕ್ಷೇತ್ರದ ಪ್ರೀಮಿಯರ್ ಶೋ ನೋಡಿ ನಿಖಿಲ್ ಹೊಗಳಿದ ಸುಮಲತಾ

    ಕುರುಕ್ಷೇತ್ರದ ಪ್ರೀಮಿಯರ್ ಶೋ ನೋಡಿ ನಿಖಿಲ್ ಹೊಗಳಿದ ಸುಮಲತಾ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ, ರವಿಚಂದ್ರನ್ ಹೀಗೆ ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ಇಂದು ಬಿಡುಗಡೆಯಾಗಿದೆ.

    ಬೆಂಗಳೂರಿನ ಮಂತ್ರಿಮಾಲ್‍ನಲ್ಲಿ ಗುರುವಾರ ಸಿನಿಮಾದ ಪ್ರೀಮಿಯರ್ ಶೋ ನಡೆದಿತ್ತು. ನಟ ದರ್ಶನ್, ಸುಮಲತಾ ಅಂಬರೀಶ್, ರಾಕ್‍ಲೈನ್ ವೆಂಕಟೇಶ್ ಅವರು ಪ್ರೀಮಿಯರ್ ಶೋ ವೀಕ್ಷಿಸಿದರು. ಬಳಿಕ ಮಾತಾಡಿದ ಸುಮಲತಾ ಅವರು ನಿಖಿಲ್ ಸೇರಿದಂತೆ ಎಲ್ಲರ ನಟನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

    ಕುರುಕ್ಷೇತ್ರ ಬರಿ ಸಿನಿಮಾ ಎಂದರೆ ತಪ್ಪಾಗುತ್ತದೆ. ಎಲ್ಲ ನಟರಿಗೂ ಇದು ಒಂದು ಜರ್ನಿ ಎಂದೇ ಹೇಳಬಹುದು. ಸಂಗೊಳ್ಳಿ ರಾಯಣ್ಣ ಸಿನಿಮಾ ಬಳಿಕ ದರ್ಶನ್ ಅವರಿಗೆ ಕುರುಕ್ಷೇತ್ರ ಅವರಿಗೆ ಲ್ಯಾಂಡ್ ಮಾರ್ಕ್ ಆಗುತ್ತದೆ. ದುರ್ಯೋಧನ ಅಂದರೇ ದರ್ಶನ್ ಎನ್ನುವಷ್ಟರ ಮಟ್ಟಿಗೆ ಅವರ ನಟನೆ ಇದೆ. ಬರಿ ಡಿ ಬಾಸ್ ಅಲ್ಲ, ಇನ್ನು ಮುಂದೇ ದುರ್ಯೋಧನ ಬಾಸ್. ನನಗೆ ಈ ಸಿನಿಮಾ ತುಂಬಾ ಭಾವನಾತ್ಮಕ ವಿಚಾರವಾಗಿದೆ. ಅಂಬರೀಶ್ ಅವರನ್ನ ಮತ್ತೆ ಈ ಸಿನಿಮಾದಲ್ಲಿ ನೋಡುತ್ತಿದ್ದೇವೆ. ಅವರು ನಟಿಸಲ್ಲ ಎಂದರು ಮುನಿರತ್ನ ಅವರ ಕೋರಿಕೆ ಮೇಲೆ ನಟಿಸಿದ್ದರು. ಆದ್ದರಿಂದಲೇ ಸಅವರನ್ನು ಮತ್ತೆ ನೋಡುವ ಅವಕಾಶ ಸಿಕ್ಕಿದೆ. ಸಿನಿಮಾ ಬಗ್ಗೆ ಗಂಟೆಗಟ್ಟಲೇ ಮಾತನಾಡಬೇಕಾಗುತ್ತದೆ. ಪ್ರತಿಯೊಬ್ಬ ನಟರು ಕೂಡ ಉತ್ತಮವಾಗಿ ನಟಿಸಿದ್ದಾರೆ. ಅರ್ಜುನ್ ಸರ್ಜಾರ ನಟನೆ ಹೃದಯ ಸ್ಫರ್ಶಿಯಾಗಿದೆ. ನಿಖಿಲ್ ಅವರ ನಟನೆಯೂ ಸೂಪರ್ ಆಗಿದೆ. ಸಿನಿಮಾಗೆ ಶುಭಾ ಹಾರೈಸುತ್ತೇನೆ ಎಂದು ಸುಮಲತಾ ಹೇಳಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ನಟ ದರ್ಶನ್ ಅವರು, ಎಲ್ಲರೂ ಸಿನಿಮಾ ನೋಡಿದ ಬಳಿಕ ನಾನು ಪ್ರತಿಕ್ರಿಯಿಸುತ್ತೇನೆ ಎಂದರು. ಸಿನಿಮಾ ಮುಕ್ತಾಯವಾದ ಬಳಿಕ 3 ನಿಮಿಷದ ಕೆಲ ದೃಶ್ಯಗಳಿವೆ ಎಲ್ಲರೂ ತಪ್ಪದೇ ಅದನ್ನು ವಿಕ್ಷೀಸಬೇಕು ಎಂದು ಮನವಿ ಮಾಡಿದರು.

  • ಮಂಡ್ಯ ಕೇಂದ್ರೀಯ ವಿದ್ಯಾಲಯದ ಸಮಸ್ಯೆಗಳ ಕ್ರಮಕ್ಕೆ ಕೇಂದ್ರ ಸಚಿವರಿಗೆ ಸುಮಲತಾ ಮನವಿ

    ಮಂಡ್ಯ ಕೇಂದ್ರೀಯ ವಿದ್ಯಾಲಯದ ಸಮಸ್ಯೆಗಳ ಕ್ರಮಕ್ಕೆ ಕೇಂದ್ರ ಸಚಿವರಿಗೆ ಸುಮಲತಾ ಮನವಿ

    ನವದೆಹಲಿ: ಮಂಡ್ಯದ ಕೇಂದ್ರೀಯ ವಿದ್ಯಾಲಯದಲ್ಲಿರುವ ಸಮಸ್ಯೆಗಳಿಗೆ ತ್ವರಿತ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದೆ ಸುಮಲತಾ ಅಂಬರೀಶ್ ಅವರು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸುಮಲತಾ ಅವರು, ಗುರುವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರನ್ನು ಭೇಟಿಯಾಗಿ ಮಂಡ್ಯ ಕೇಂದ್ರೀಯ ವಿದ್ಯಾಲಯದಲ್ಲಿರುವ ಸಮಸ್ಯೆಗಳನ್ನು ಗಮನಕ್ಕೆ ತಂದಿರುವೆ. ಜೊತೆಗೆ ತ್ವರಿತವಾಗಿ ಶಾಲಾ ಕೊಠಡಿ, ವಸತಿ ಗೃಹ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿರುವೆ. ಸಚಿವರು ಸಹ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಸುಮಲತಾ ಅವರು ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ಮಂಡ್ಯದಲ್ಲಿನ ಹಲವು ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಕೊಡಿಸುವಂತೆ ಮನವಿ ಸಲ್ಲಿಸಿದ್ದರು. ಜೊತೆಗೆ ಅಮಿತ್ ಶಾ ಅವರನ್ನು ಭೇಟಿಯಾಗಿರುವ ಬಗ್ಗೆ ಸುಮಲತಾ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡು, ದೇಶದ ಗೃಹ ಸಚಿವರೊಂದಿಗೆ ಕ್ಷೇತ್ರದ ಹಲವಾರು ಕೆಲಸಗಳಿಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದರು.

    ಮಂಡ್ಯ ಜಿಲ್ಲೆಯ ಕಡೆ ಮುಂಗಾರು ಕೈ ಕೊಟ್ಟಿದೆ. ಮಂಡ್ಯದ ರೈತರು ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ. ಆದರೆ ಸರಿಯಾಗಿ ಮಳೆಯಾಗದ ಕಾರಣ ಕಾವೇರಿ ನದಿಯೂ ತುಂಬಿಲ್ಲ. ಇದರಿಂದ ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಹೀಗಾಗಿ ಸುಮಲತಾ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ಜಿಲ್ಲೆಯ ಸಮಸ್ಯೆಯನ್ನು ಹೇಳಿಕೊಂಡಿದ್ದರು.

    ಇತ್ತೀಚೆಗಷ್ಟೆ ಸುಮಲತಾ ಅವರು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ದಿನನಿತ್ಯ ಮೈಸೂರು- ಮಂಡ್ಯ-ಬೆಂಗಳೂರು ನಡುವೆ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಹೆಚ್ಚಿನ ಮಹಿಳಾ ಬೋಗಿಗಳನ್ನು ಅಳವಡಿಸುವಂತೆ ಹಾಗೂ ಹೆಚ್ಚಿನ ಪೊಲೀಸ್ ಬಂದೋಬಸ್ತುಗಳನ್ನು ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು.

    ಅಷ್ಟೇ ಅಲ್ಲದೇ ಮುಂಬೈ ಮಾದರಿಯಲ್ಲಿ ವಿಶೇಷ ಮಹಿಳಾ ರೈಲನ್ನು ಬೆಳಗ್ಗೆ ಮತ್ತು ಸಂಜೆ ಕೆಲಸಕ್ಕೆ ತೆರಳುವ ಮಹಿಳೆಯರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರು. ಜೊತೆಗೆ ಕೆ.ಆರ್ ನಗರದಲ್ಲಿ ರೈಲ್ವೆ ಪೊಲೀಸ್ ಫೋರ್ಸ್ ಟ್ರೈನಿಂಗ್ ಸೆಂಟರನ್ನು ತೆರೆಯಲು ಮನವಿ ಮಾಡಿದ್ದರು.