Tag: ಸುಮನ್ ನಗರ್ಕರ್

  • ಬಿಡುಗಡೆಗೂ ಮುನ್ನವೇ ಬಬ್ರೂ ದಾಖಲೆ!

    ಬಿಡುಗಡೆಗೂ ಮುನ್ನವೇ ಬಬ್ರೂ ದಾಖಲೆ!

    ನ್ನಡ ಚಿತ್ರರಂಗವೀಗ ಹೊಸ ಪ್ರಯತ್ನಗಳಿಂದ ಕಳೆಗಟ್ಟಿಕೊಂಡಿದೆ. ಇದನ್ನು ಮತ್ತಷ್ಟು ಮಿರುಗಿಸುವಂಥಾ ಚಿತ್ರಗಳೇ ಅಡಿಗಡಿಗೆ ತೆರೆಗಾಣುತ್ತಿರುವುದರಿಂದ ಕನ್ನಡದತ್ತ ಪರಭಾಷಾ ಚಿತ್ರರಂಗದ ಮಂದಿಯೂ ಬೆರಗಾಗಿ ನೋಡುವಂಥಾ ವಾತಾವರಣವನ್ನು ಸೃಷ್ಟಿಸಿದೆ. ಅದೇ ಸಾಲಿನಲ್ಲಿ ಮೂಡಿ ಬಂದಿರುವ ಚಿತ್ರ ಬಬ್ರೂ. ಇದು ಕನ್ನಡದಲ್ಲಿ ಇಂಥಾ ಚಿತ್ರವನ್ನೂ ರೂಪಿಸಲು ಸಾಧ್ಯವಾ ಎಂಬ ಪ್ರಶ್ನೆ ಕಾಡುವಷ್ಟು ಅಚ್ಚುಕಟ್ಟುತನದಿಂದ, ಹೊಸ ಪ್ರಯೋಗಗಳಿಂದ ರೂಪುಗೊಂಡಿರುವ ಚಿತ್ರ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕ ಪ್ರೇಕ್ಷಕರನ್ನೆಲ್ಲ ಆಕರ್ಷಿಸಿಕೊಂಡಿರುವ ಈ ಚಿತ್ರ ಇದೇ ಡಿಸೆಂಬರ್ 6ರಂದು ತೆರೆಗಾಣುತ್ತಿದೆ. ಅಚ್ಚರಿಯ ಸಂಗತಿಯೆಂದರೆ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಬರೆದು ಬಿಟ್ಟಿದೆ.

    ಅಮೆರಿಕದ ಸಿನಿ ಲಾಂಚ್‍ನಲ್ಲಿ ಈ ಸಿನಿಮಾದ ಪ್ರೀಮಿಯರ್ ಶೋವನ್ನು ನವೆಂಬರ್ ಎರಡರಂದೇ ಏರ್ಪಡಿಸಲಾಗಿತ್ತು. ಅದಕ್ಕೆ ಸಿಕ್ಕ ಬೆಂಬಲ ಮತ್ತು ಸಿನಿಮಾ ನೋಡಿ ವ್ಯಕ್ತಪಡಿಸಿದ ಅಭಿಪ್ರಾಯಗಳೇಲ್ಲವೂ ಬಬ್ರೂ ಗೆಲುವನ್ನು ನಿಚ್ಚಳವಾಗಿಸುವಂತಿವೆ. ಸಿನಿಲಾಂಚ್ ಮಾಲ್‍ನ ಏಳೂ ಪರದೆಗಳಲ್ಲಿ ಬಬ್ರೂ ಪ್ರದರ್ಶನಗೊಂಡಿವೆ. ಇದರ ಟಿಕೆಟುಗಳೆಲ್ಲವೂ ಅತ್ಯಂತ ವೇಗವಾಗಿ ಸೇಲಾಗಿ ಭರ್ಜರಿ ಪ್ರದರ್ಶನವನ್ನೂ ಕಂಡಿದೆ. ಬಬ್ರೂವನ್ನು ನೋಡಿದವರೆಲ್ಲರೂ ಮೆಚ್ಚಿ ಕೊಂಡಾಡಿದ್ದಾರೆ. ಅಂದಹಾಗೆ, ಅಮೆರಿಕಾದ ಸಿನಿ ಲಾಂಚ್‍ನ ಅಷ್ಟೂ ಪರದೆಗಳಲ್ಲಿ ಪ್ರದರ್ಶನ ಕಂಡ, ಹೌಸ್ ಫುಲ್ ಆಗುವಂತೆ ನೋಡಿಸಿಕೊಂಡ ಕನ್ನಡದ ಮೊದಲ ಚಿತ್ರವಾಗಿ ಬಬ್ರೂ ದಾಖಲಾಗಿದೆ.

    ಇದೊಂದು ಅನಿರೀಕ್ಷಿತ ಜರ್ನಿಯ ಕಥೆ. ಅದರಲ್ಲಿಯೇ ಪ್ರೀತಿ, ಪ್ರೇಮ ಮತ್ತು ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಕಥಾನಕ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಇದರ ಹೆಚ್ಚಿನ ಭಾಗ ಕಾರೊಳಗಿನ ಜರ್ನಿಯಲ್ಲಿಯೇ ಸಾಗುತ್ತದೆ. ಇದರಲ್ಲಿ ಈವರೆಗೆ ಯಾವ ಭಾಷೆಯ ಸಿನಿಮಾಗಳಲ್ಲಿಯೂ ಕಾಣಿಸದಿರುವಂಥಾ ಅಮೆರಿಕಾದ ಪ್ರದೇಶಗಳಿವೆ. ಕನ್ನಡಕ್ಕೆ ಅಪರೂಪದ್ದೆಂಬಂತೆ ಕಾಣುವ ಕಥೆಯೂ ಇದೆ. ಈ ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದಾರೆ. ಲೋಕೇಶ್ ಬಿ.ಎಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಯುಗ ಕ್ರಿಯೇಷನ್ಸ್ ಹಾಗೂ ಸುಮನ್ ನಗರ್‍ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ಬಬ್ರೂ ನಿರ್ಮಾಣಗೊಂಡಿದೆ. ಇಲ್ಲಿ ಸುಮನ್ ನಗರ್‍ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

  • ಹಾಲಿವುಡ್ ಕನ್ನಡ ಚಿತ್ರ ಬಬ್ರೂ!

    ಹಾಲಿವುಡ್ ಕನ್ನಡ ಚಿತ್ರ ಬಬ್ರೂ!

    ನ್ನಡಿಗರ ಪಾಲಿನ ಎವರ್ ಗ್ರೀನ್ ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಮರಳಿ ಬರುತ್ತಿದ್ದಾರೆಂಬ ಕಾರಣಕ್ಕೆ ಆರಂಭಿಕವಾಗಿ ಒಂದಷ್ಟು ಸದ್ದು ಮಾಡಿದ್ದ ಚಿತ್ರ ಬಬ್ರೂ. ಇತ್ತೀಚೆಗಷ್ಟೇ ಈ ಸಿನಿಮಾದ ಹಾಡು ಮತ್ತು ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾ ಇದೇ ಡಿಸೆಂಬರ್ 6ರಂದು ಬಿಡುಗಡೆಯಾಗೋದೂ ಪಕ್ಕಾ ಆಗಿದೆ. ಈ ಘಳಿಗೆಯಲ್ಲಿಯೇ ಬಬ್ರೂ ಟ್ರೇಲರ್ ಮೂಲಕ ಪ್ರೇಕ್ಷಕರಲ್ಲೊಂದು ಕಾತರ ಮೂಡಿಸುವಲ್ಲಿ ಯಶ ಕಂಡಿದೆ. ಅದಕ್ಕೆ ಕಾರಣವಾಗಿರೋದು ವಿಭಿನ್ನ ಕಥೆಯ ಲಕ್ಷಣ ಮತ್ತು ಅದರಲ್ಲಿನ ದೃಶ್ಯಗಳ ತಾಜಾತನ ಬೆರೆತ ಅದ್ಧೂರಿತನ. ಅಷ್ಟಕ್ಕೂ ಈ ಸಿನಿಮಾ ರೂಪುಗೊಂಡಿರುವ ರೀತಿಯೇ ಅಷ್ಟೊಂದು ವಿಶೇಷವಾಗಿದೆ.

    ಕನ್ನಡ ಸಿನಿಮಾ ಮಾಡುವ ಅನೇಕರಿಗೆ ಅಮೆರಿಕದಲ್ಲಿ ಚಿತ್ರೀಕರಣ ನಡೆಸಬೇಕು, ಅಲ್ಲಿನ ಸುಂದರ ಪ್ರದೇಶಗಳನ್ನು ಕಾಣಿಸಬೇಕೆಂಬ ಆಸೆ ಇರುತ್ತದೆ. ಆದರೆ ಒಂದೇ ಒಂದು ಹಾಡಿನ ಚಿತ್ರೀಕರಣ ನಡೆಸೋದರಲ್ಲಿ ಸುಸ್ತು ಹೊಡೆಯಬೇಕಾಗುತ್ತದೆ. ಅಂಥದ್ದರಲ್ಲಿ ಸಿನಿಮಾದ ಇತರೇ ಭಾಗಗಳ ಚಿತ್ರೀಕರಣವನ್ನು ಅಲ್ಲೇ ನಡೆಸೋದಕ್ಕೆ ಹರಸಾಹಸವನ್ನೇ ಪಡಬೇಕಾಗುತ್ತದೆ. ಬಬ್ರೂ ಚಿತ್ರದ ವಿಶೇಷತೆಗಳಿರುವುದು ಈ ವಿಚಾರದಲ್ಲಿಯೇ. ಈ ಇಡೀ ಚಿತ್ರವೇ ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣಗೊಂಡಿದೆ. ಇದು ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡಿರುವ ಕನ್ನಡದ ಏಕೈಕ ಚಿತ್ರವೆಂಬ ಕೀರ್ತಿಗೂ ಭಾಜನವಾಗಿದೆ.

    ಈ ಚಿತ್ರವನ್ನು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರೇ ಸೇರಿಕೊಂಡು ರೂಪಿಸಿದ್ದಾರೆ. ಸುಜಯ್ ರಾಮಯ್ಯ ನಿರ್ದೇಶನದ ಈ ಚಿತ್ರವನ್ನು ಯುಗ ಕ್ರಿಯೇಷನ್ಸ್ ಹಾಗೂ ಸುಮನ್‍ನಗರ್‍ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸುಮನ್ ನಗರ್‍ಕರ್ ಇದರಲ್ಲಿ ಪ್ರಧಾನ ಪಾತ್ರವನ್ನೂ ನಿರ್ವಹಿಸಿದ್ದಾರೆ. ವಿಶೇಷವೆಂದರೆ ಇದರ ತಾಂತ್ರಿಕ ವರ್ಗದಲ್ಲಿಯೂ ಅಮೆರಿಕದವರೇ ಕಾರ್ಯ ನಿರ್ವಹಿಸಿದ್ದಾರೆ. ಒಂದಷ್ಟು ಮುಖ್ಯ ಪಾತ್ರಗಳನ್ನು ಅಮೆರಿಕದ ಕಲಾವಿದರು ನಿರ್ವಹಿಸಿದ್ದಾರೆ. ಇಷ್ಟೆಲ್ಲ ವಿಚಾರಗಳ ಆಧಾರದಲ್ಲಿ ನೋಡುವುದಾದರೆ ಇದನ್ನು ಹಾಲಿವುಡ್ ಕನ್ನಡ ಚಿತ್ರ ಎನ್ನಲಡ್ಡಿಯಿಲ್ಲ.

    ಸುಮನ್ ನಗರ್‍ಕರ್ ಅಖಂಡ ಹದಿನೈದು ವರ್ಷಗಳ ಬಳಿಕ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂಲಕ ನಿರ್ಮಾಪಕಿಯಾಗಿಯೂ ಅವತಾರವೆತ್ತಿರುವ ಅವರು ಬಹಳಷ್ಟು ವರ್ಷಗಳ ಬಳಿಕ ಕನ್ನಡದ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ. ಮಹಿ ಹಿರೇಮಠ್ ಮತ್ತೊಂದು ಪ್ರಧಾನ ಪಾತ್ರದಲ್ಲಿ ಜರ್ನಿಯ ಕ್ರೇಜ್ ಹೊಂದಿರೋ ಸೋಮಾರಿ ಹುಡುಗನಾಗಿ ನಟಿಸಿದ್ದಾರಂತೆ. ಈಗಾಗಲೇ ಬಿಡುಗಡೆಯಾಗಿರೋ ಟ್ರೇಲರ್ ಸೂಪರ್ ಹಿಟ್ ಆಗಿದೆ. ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾದತ್ತ ಪ್ರೇಕ್ಷಕ ವಲಯದಲ್ಲೊಂದು ಕಾತರ ಮನೆ ಮಾಡಿಕೊಂಡಿದೆ. ಈ ಚಿತ್ರಕ್ಕೆ ಲೋಕೇಶ್ ಬಿ.ಎಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಪಾಲಿಗೆ ಮೈಲಿಗಲ್ಲಿನಂತಹ ಈ ಚಿತ್ರ ಇದೇ ಡಿಸೆಂಬರ್ 6ರಂದು ತೆರೆಗಾಣುತ್ತಿದೆ.

  • ಪೈರಸಿ ಹೇಗೆ ಸಿನಿರಂಗದಲ್ಲಿ ಬೇರೂರಿದೆ ಎಂಬುದನ್ನು ಈ ಶಾರ್ಟ್ ಫಿಲ್ಮ್ ನಲ್ಲಿ ನೋಡಿ

    ಪೈರಸಿ ಹೇಗೆ ಸಿನಿರಂಗದಲ್ಲಿ ಬೇರೂರಿದೆ ಎಂಬುದನ್ನು ಈ ಶಾರ್ಟ್ ಫಿಲ್ಮ್ ನಲ್ಲಿ ನೋಡಿ

    ಬೆಂಗಳೂರು: ಪೈರಸಿ ಒಂದು ಚಿತ್ರವನ್ನು ಹೇಗೆ ನಾಶ ಮಾಡುತ್ತದೆ? ಪೈರಸಿಯಿಂದ ಚಿತ್ರತಂಡದ ಮೇಲಾಗುವ ಪರಿಣಾಮ ಎಂಬುದರ ಬಗ್ಗೆ ನಟಿ ಸುಮನ್ ನಗರ್ಕರ್ ಶಾರ್ಟ್ ಫಿಲ್ಮ್ ನಲ್ಲಿ ಮನಸ್ಸಿಗೆ ತಾಗುವಂತೆ ಹೇಳಿದ್ದಾರೆ.

    ಈ ಶಾರ್ಟ್ ಫಿಲ್ಮ್ ನಲ್ಲಿ ಸುಮನ್ ನಗರ್ಕರ್ ನಟನೆಯ `ಮೌನ’ ಸಿನಿಮಾ ಬಿಡುಗಡೆ ಆಗಿರುತ್ತದೆ. ಸಿನಿಮಾ ಬಿಡುಗಡೆ ವೇಳೆ ನಟಿ ಪ್ರೇಕ್ಷಕರ ಬರುವಿಕೆಗಾಗಿ ಚಿತ್ರಮಂದಿರದ ಹೊರಗಡೆಯೇ ಕುಳಿತಿರುತ್ತಾರೆ. ಈ ವೇಳೆ ಸುಮನ್ ಅವರ ಆತ್ಮಸಾಕ್ಷಿ ಎದುರಿಗೆ ಬರುತ್ತದೆ. ಆತ್ಮಸಾಕ್ಷಿಯ ಪ್ರತಿಯೊಂದು ಮಾತುಗಳು ನೋಡುಗರನ್ನು ತಲುಪುತ್ತವೆ. ಒಂದು ವಸ್ತು ಹುಟ್ಟಿದರೆ ಅದರ ಹಿಂದೆ ಕೆಲವೇ ನಿಮಿಷಗಳಲ್ಲಿ ಆ ವಸ್ತುವಿನ ನಕಲು ತಯಾರಾಗುತ್ತದೆ ಎಂಬ ಅರ್ಥಗರ್ಭಿತ ಮಾತನ್ನು ಹೇಳುತ್ತದೆ.

    ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಕೂಡಲೇ ಕೆಲವರು ಅದರ ಪೈರಸಿ ಮಾಡುತ್ತಾರೆ. ಹಾಗೇ ಸಿನಿಮಾ ದಿನವೇ ಸುಮನ್ ನಟನೆಯ `ಮೌನ’ ಚಿತ್ರದ ಪೈರಸಿ ಆಗಿರುತ್ತದೆ. ಮೌನ ಸಿನಿಮಾ ನೋಡಲು ಬಂದವರು ಸಹ ಮೊಬೈಲ್‍ನಲ್ಲಿ ಸಿನಿಮಾದ ಲಿಂಕ್ ನೋಡಿ ಬೇರೆ ಫಿಲ್ಮ್ ನೋಡಲು ಹೋಗುತ್ತಾರೆ. ಕೊನೆಗೆ ಪ್ರೇಕ್ಷಕರ ಕೊರತೆಯಿಂದಾಗಿ ಚಿತ್ರಮಂದಿರದಿಂದ ಸಿನಿಮಾವನ್ನು ತೆಗೆಯಲಾಗುತ್ತದೆ.

    ಕೇವಲ 4 ನಿಮಿಷ 48 ಸೆಕಂಡ್ ಗಳಿರುವ `ಗ್ರೇ’ ಕಿರುಚಿತ್ರ ಅತ್ಯಂತ ಪರಿಣಾಮಕಾರಿಯಾಗಿದೆ. ಸಿನಿಮಾ ತೆರೆಗೆ ತರಲು ಕಷ್ಟಪಟ್ಟ ಚಿತ್ರತಂಡದ ಶ್ರಮವೆಲ್ಲಾ ವ್ಯರ್ಥವಾಗುತ್ತದೆ. ಗ್ರೇ ಕಿರು ಚಿತ್ರಕ್ಕೆ ಸುಜಯ್ ರಾಮಯ್ಯ ನಿರ್ದೇಶನವಿದೆ. ಕಿರುಚಿತ್ರ ಶುಕ್ರವಾರ ಯುಟ್ಯೂಬ್ ಅಪ್ಲೋಡ್ ಆಗಿದ್ದು, ನೋಡುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದೆ.

    ಕಳೆದ ವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ದೃವ ಸರ್ಜಾ ನಟನೆಯ `ಭರ್ಜರಿ’ ಸಿನಿಮಾಗೂ ಪೈರಸಿಯ ಬಿಸಿ ತಟ್ಟಿತ್ತು.