Tag: ಸುಬುಧೇಂದ್ರತೀರ್ಥ ಸ್ವಾಮಿ

  • ಬ್ರಾಹ್ಮಣ ಸಮುದಾಯವನ್ನ ಅವಮಾನಿಸಿರುವುದು ಖಂಡನಾರ್ಹ – ಮಂತ್ರಾಲಯ ಶ್ರೀ

    ಬ್ರಾಹ್ಮಣ ಸಮುದಾಯವನ್ನ ಅವಮಾನಿಸಿರುವುದು ಖಂಡನಾರ್ಹ – ಮಂತ್ರಾಲಯ ಶ್ರೀ

    ರಾಯಚೂರು: ಪೊಗರು ಸಿನೆಮಾದಲ್ಲಿ ಬ್ರಾಹ್ಮಣ ಸಮುದಾಯವನ್ನ ಅವಮಾನಿಸಿರುವುದು ಖಂಡನಾರ್ಹ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮ ಪ್ರಕಟಣೆ ಮೂಲಕ ಶ್ರೀಗಳು ಚಲನಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ನೋವುಂಟುಮಾಡುವ ದೃಶ್ಯಗಳಿರುವುದು ಖಂಡನಾರ್ಹ ಎಂದಿದ್ದಾರೆ. ಚಲನಚಿತ್ರ, ಕಿರುತೆರೆ ಮೂಲಕ ಯಾವುದೇ ಸಮುದಾಯದ ಅವಹೇಳನೆ ಸರಿಯಲ್ಲ. ಅಂತಹ ಭಾಗಗಳನ್ನ ಸೆನ್ಸಾರ್ ಮಂಡಳಿ ಕಿತ್ತು ಹಾಕಬೇಕು. ಸೆನ್ಸಾರ್ ಮಂಡಳಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಈ ಕುರಿತಾಗಿ ಎಚ್ಚರವಹಿಸಬೇಕು. ಆಕ್ಷೇಪಾರ್ಹ ಭಾಗವನ್ನು ತೆಗೆಯುವ ಭರವಸೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿ ನೀಡಿದೆ. ದೂರವಾಣಿ ಮೂಲಕ ಸಂಪರ್ಕಿಸಿದಾಗ ಕ್ಷಮೆಯನ್ನೂ ಕೇಳಿದ್ದಾರೆ ಎಂದಿದ್ದಾರೆ.

    ಬ್ರಾಹ್ಮಣ ಸಮುದಾಯದವರು ಯಾವುದೇ ಆವೇಶಕ್ಕೆ ಒಳಗಾಗಬಾರದು. ಶಾಂತಿಯನ್ನು ಕದಡುವ ಕಾರ್ಯದಲ್ಲಿ ತೊಡಗಬಾರದು ಎಂದು ಸುಬುಧೇಂದ್ರತೀರ್ಥ ಸ್ವಾಮಿ ಬ್ರಾಹ್ಮಣ ಸಮಾಜದವರಿಗೆ ಸೂಚನೆ ನೀಡಿದ್ದಾರೆ.

  • ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸುವ ಬಗ್ಗೆ ಈಗ ಪ್ರತಿಕ್ರಿಯಿಸಲ್ಲ: ಸುಬುಧೇಂದ್ರ ತೀರ್ಥ ಸ್ವಾಮಿ

    ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸುವ ಬಗ್ಗೆ ಈಗ ಪ್ರತಿಕ್ರಿಯಿಸಲ್ಲ: ಸುಬುಧೇಂದ್ರ ತೀರ್ಥ ಸ್ವಾಮಿ

    ರಾಯಚೂರು: ಮಂತ್ರಾಲಯ ಹಾಗೂ ಕರ್ನೂಲು ಲೋಕಸಭಾ ಕ್ಷೇತ್ರವನ್ನು ಕರ್ನಾಟಕಕ್ಕೆ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ ನಿರಾಕರಿಸಿದ್ದಾರೆ. ಇದು ರಾಜಕೀಯವಾದ ವಿಷಯ ಸದ್ಯಕ್ಕೆ ಪ್ರತಿಕ್ರಿಯಿಸಲ್ಲ ಎಂದಿದ್ದಾರೆ.

    ರಾಯಚೂರಿನ ಜವಾಹರ ನಗರದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ರಾಯಚೂರು ಜಿಲ್ಲಾ ಬ್ಲೈಂಡ್ನೆಸ್ ಕಂಟ್ರೋಲ್ ಸೊಸೈಟಿ ಹಾಗೂ ಶಂಕರ್ ನೇತ್ರಾಲಯ, ಕಣ್ಣಿನ ವೈದ್ಯಶಾಲೆ ಸಹಯೋಗದಲ್ಲಿ ಕಣ್ಣಿನ ತಪಾಸಣೆ ಶಿಬಿರದ ಸಮಾರೋಪವನ್ನು ಆಯೋಜಿಸಲಾಗಿತ್ತು.

    ಈ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸುಬುಧೇಂದ್ರ ತೀರ್ಥ ಸ್ವಾಮಿ, ನಾನು ಮೆಡಿಕಲ್ ಕ್ಯಾಂಪ್ ವಿಚಾರವಾಗಿ ಬಂದಿದ್ದೇನೆ. ಮಂತ್ರಾಲಯ ಕರ್ನಾಟಕಕ್ಕೆ ಸೇರಿಸುವ ಬಗ್ಗೆ ಪ್ರತ್ಯೇಕವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

    ಕಳೆದ ಒಂದು ತಿಂಗಳಿಂದ ಆಂಧ್ರದ ರಾಯಲ ಸೀಮಾ ಭಾಗವನ್ನು ಕರ್ನಾಟಕಕ್ಕೆ ಸೇರಿಸುವಂತೆ ದೊಡ್ಡ ಮಟ್ಟದ ಕೂಗು ಕೇಳಿ ಬರುತ್ತಿದೆ. ಈಗಾಗಲೇ ಆಂಧ್ರದ ಟಿಡಿಪಿ ಮಾಜಿ ಶಾಸಕ ತಿಕ್ಕಾರೆಡ್ಡಿ ಕನ್ನಡಿಗರನ್ನು ಒಗ್ಗೂಡಿಸಿ ಹೋರಾಟಕ್ಕೆ ಅಣಿಗೊಳಿಸುತ್ತಿದ್ದಾರೆ.