ನವದೆಹಲಿ: ನಿರ್ಭಯಾ ಹಂತಕರು ದೆಹಲಿ ಹೈಕೋರ್ಟ್ ತಮ್ಮ ಅರ್ಜಿಯನ್ನು ವಜಾಗೊಳಿಸುತ್ತಿದ್ದಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮಧ್ಯರಾತ್ರಿ ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತು.
ದೋಷಿಗಳ ಪರ ವಕೀಲ ಎ.ಪಿ.ಸಿಂಗ್ ನ್ಯಾಯಾಲಯದ ಮುಂದೆ ಅಪರಾಧಿ ಪವನ್ ಗುಪ್ತಾ ಪ್ರೌಢನಾಗಿರಲಿಲ್ಲ ಎಂಬ ಅಂಶವನ್ನಿಟ್ಟು ವಾದ ಆರಂಭಿಸಿದ್ದರು. ಹೀಗೆ ಈ ಹಿಂದೆ ಉಲ್ಲೇಖಿಸಿದ್ದ ಹಲವು ವಿಚಾರಗಳನ್ನೇ ಎ.ಪಿ.ಸಿಂಗ್ ನ್ಯಾಯಾಧೀಶರ ಮುಂದೆ ಇಟ್ಟು ವಾದ ಆರಂಭಿಸಿದ್ದರು. ತಡರಾತ್ರಿ ಸುಪ್ರೀಂನಲ್ಲಿ ನಡೆದ ವಾದ-ಪ್ರತಿವಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಸುಪ್ರೀಂನಲ್ಲಿ ನಡೆದ ವಾದ-ಪ್ರತಿವಾದ
* ಜಡ್ಜ್ : ನಿರ್ಭಯಾ ಅಪರಾಧಿ ಪವನ್ ಗುಪ್ತಾ ಪ್ರೌಢನಾಗಿರಲಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಈ ಹಿಂದೆ ವಿಚಾರಣೆಗೆ ಪರಿಗಣಿಸಿತ್ತು. ಈ ವಿಚಾರವನ್ನು ನ್ಯಾಯಾಲಯ ತಿರಸ್ಕರಿಸಿದ ನಂತರವೂ ಪ್ರಸ್ತಾಪಿಸುವುದರಲ್ಲಿ ಯಾವುದೇ ಅರ್ಥವಿಲ್ಲ
* ಎ.ಪಿ.ಸಿಂಗ್, ದೋಷಿಗಳ ಪರ ವಕೀಲ : ಲೆಫ್ಟಿನೆಂಟ್ ಜನರಲ್ ಎದುರು ಕ್ಷಮಾದಾನ ಅರ್ಜಿ ಬಾಕಿಯಿದೆ
* ಜಡ್ಜ್ : ಈ ವಿಚಾರವನ್ನು ನೀವು ಮಧ್ಯಾಹ್ನವೇ ಹೇಳಿದ್ದಿರಿ
* ಎ.ಪಿ.ಸಿಂಗ್, ದೋಷಿಗಳ ಪರ ವಕೀಲ : ದೆಹಲಿಯ ಲೆಫ್ಟಿನೆಂಟ್ ಜನರಲ್ ಮತ್ತು ಮುಖ್ಯಮಂತ್ರಿ ಎದುರು ಕ್ಷಮಾದಾನದ ಅರ್ಜಿ ಬಾಕಿಯಿದೆ. ಅವರು ಕ್ಷಮಾದಾನ ಕೊಟ್ಟರೆ ಗಲ್ಲು ಶಿಕ್ಷೆಗೆ ಯಾವುದೇ ಅರ್ಥವಿರುವುದಿಲ್ಲ ಎಂದು ವಕೀಲ ವಾದ ಮಂಡನೆ.
* ಜಡ್ಜ್ : ಈ ವಿಚಾರವನ್ನು ಪರಿಗಣಿಸಲು ಆಗುವುದಿಲ್ಲ
* ಜಡ್ಜ್ : ಗುರುವಾರವಷ್ಟೇ ಸುಪ್ರೀಂಕೋರ್ಟ್ ಅಕ್ಷಯ್ ಕ್ಷಮಾದಾನ ಅರ್ಜಿ ತಿರಸ್ಕರಿಸಿತ್ತು. ಈಗ ಯಾವುದರ ಆಧಾರದ ಮೇಲೆ ಎರಡನೇ ಕ್ಷಮಾದಾನ ಅರ್ಜಿಯ ತಿರಸ್ಕಾರದ ವಿಚಾರವನ್ನು ಪ್ರಶ್ನಿಸುತ್ತಿದ್ದೀರಿ. ಈಗಾಗಲೇ ಮಂಡಿಸಿರುವ ವಾದವನ್ನೇ ನೀವು ಮತ್ತೆ ಮಂಡಿಸುತ್ತಿದ್ದೀರಿ
* ಎ.ಪಿ.ಸಿಂಗ್, ದೋಷಿಗಳ ಪರ ವಕೀಲ : ಆತುರದ ನ್ಯಾಯತೀರ್ಮಾನವಾಗಿದೆ. ಅಕ್ಷಯ್ ಕ್ಷಮಾದಾನ ಅರ್ಜಿ ತಿರಸ್ಕಾರ ಪ್ರಶ್ನಿಸಿರುವ ಮರುಪರಿಶೀಲನಾ ಅರ್ಜಿ ಸುಪ್ರೀಂನಲ್ಲಿ ಬಾಕಿಯಿದೆ ಎಂಬ ಮಾಹಿತಿ ನೀಡಿದ ನಂತರವೂ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಡೆ ನೀಡದೆ ಇರಲು ಹೇಗೆ ಸಾಧ್ಯ..?
* ಜಡ್ಜ್ : ನೀವು ಈ ಎಲ್ಲಾ ಅಂಶಗಳನ್ನು ಹಿಂದೆಯೇ ಹಲವು ಬಾರಿ ಪ್ರಸ್ತಾಪಿಸಿದ್ದೀರಿ. ಅವು ಇಂದು ಹೇಗೆ ಪ್ರಸ್ತುತವಾಗಲಿವೆ?
* ಎ.ಪಿ.ಸಿಂಗ್, ದೋಷಿಗಳ ಪರ ವಕೀಲ : ಪವನ್ ಗುಪ್ತಾ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಬಚ್ಚಿಡಲಾಗಿತ್ತು. ಅತಿ ಮುಖ್ಯ ಮಾಹಿತಿಗಳಿದ್ದ ದಾಖಲೆಗಳನ್ನೂ ಅಧಿಕಾರಿಗಳು ಕಣ್ಮರೆ ಮಾಡಿದ್ದರು.
* ತುಷಾರ್ ಮೆಹ್ತಾ, ಸಾಲಿಸಿಟರ್ ಜನರಲ್ : ಈಗ ಅಪರಾಧಿಗಳ ಪರ ವಕೀಲರು ಪ್ರಸ್ತಾಪಿಸುತ್ತಿರುವ ಅಂಶಗಳು ಈ ಹಿಂದೆಯೂ ಹಲವು ಬಾರಿ, ಹಲವು ಹಂತದ ನ್ಯಾಯಾಲಯಗಳಲ್ಲಿ ಮತ್ತು ಕ್ಷಮಾದಾನ ಅರ್ಜಿಗಳಲ್ಲಿ ಪ್ರಸ್ತಾಪವಾಗಿದೆ.
* ಜಡ್ಜ್ : ನಿಮಗೆ ಬೇಕು ಎಂದಾಗ ಪ್ರಕರಣಗಳನ್ನು ಮತ್ತೊಮ್ಮೆ ಮಗದೊಮ್ಮೆ ಮರು ವಿಚಾರಣೆ ನಡೆಸಲು ಆಗುವುದಿಲ್ಲ. ರಾಷ್ಟ್ರಪತಿಗಳು ಎರಡನೇ ಬಾರಿಗೆ ಕ್ಷಮಾದಾನ ಮನವಿ ತಳ್ಳಿಹಾಕಿದ್ದನ್ನು ಈ ಆಧಾರದಲ್ಲಿ ಪ್ರಶ್ನಿಸಲು ಆಗುವುದಿಲ್ಲ
* ಜಡ್ಜ್ : ಎಪಿ ಸಿಂಗ್ ಅವರೇ ನೀವು ತೀರ್ಪು ಮರುಪರೀಶಲನೆ ಮಾಡಬೇಕೆಂದು ಹೇಳುತ್ತಿದ್ದೀರಾ..? ಅರ್ಜಿ ವಜಾ
ದೆಹಲಿ ಹೈಕೋರ್ಟ್ ನಲ್ಲಿ ನಡೆದ ವಾದ-ಪ್ರತಿವಾದ
ದೋಷಿಗಳ ಪರ ವಕೀಲ ಎ.ಪಿ ಸಿಂಗ್ : ಪಟಿಯಾಲ ಕೋರ್ಟ್‍ನಲ್ಲಿ ನಮ್ಮ ಅರ್ಜಿ ವಜಾ ಆಗಿದೆ. ಹಾಗಾಗಿ ನೀವು ಅರ್ಜಿ ವಿಚಾರಣೆ ನಡೆಸಬೇಕು
ಜಡ್ಜ್ : ನಿಮ್ಮ ಎಲ್ಲಾ ಕಾನೂನು ಹೋರಾಟ ಅಂತ್ಯವಾಗಿದೆ
ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ : ಹೈಕೋರ್ಟ್ ಮುಂದೆ ಡೆತ್ ವಾರೆಂಟ್‍ಗೆ ತಡೆ ಕೇಳುವಂತಿಲ್ಲ. ಸುಪ್ರೀಂನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು
ದೋಷಿಗಳ ಪರ ವಕೀಲ ಎ.ಪಿ ಸಿಂಗ್ : ದೋಷಿಗಳಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ನನ್ನ ಹತ್ತಿರ ದಾಖಲೆ ಇದೆ. ಕೊರೋನಾ ವೈರಸ್ ಭೀತಿ ಹಿನ್ನೆಲೆ, ಜೆರಾಕ್ಸ್ ಅಂಗಡಿ ತೆರೆದಿಲ್ಲ, ಆದ್ದರಿಂದ ಕೋರ್ಟ್‍ಗೆ ದಾಖಲೆ ನೀಡಲು ಆಗ್ತಿಲ್ಲ.
ಜಡ್ಜ್ : ಇದೊಂದು ಅಡಿಪಾಯ ಇರದ ಅರ್ಜಿ, ಗಲ್ಲು ಶಿಕ್ಷೆ ತಡೆಯಲು ಬೇಕಾಗುವ ಅಂಶ ಹೇಳಿ.
ದೋಷಿಗಳ ಪರ ವಕೀಲ ಎ.ಪಿ ಸಿಂಗ್ : ದೋಷಿಗಳ ಕುಟುಂಬವನ್ನೊಮ್ಮೆ ನೋಡಿ. ಹಿಂದಿನ ಎಲ್ಲಾ ವಿಚಾರಣೆಯಲ್ಲೂ ಭಾಗಿಯಾಗಿದ್ದೇವೆ.
ಜಡ್ಜ್: ಸುಪ್ರೀಂಕೋರ್ಟ್ ಆದೇಶವನ್ನು ಬದಿಗಿರಿಸಬೇಕೆ?
ದೋಷಿಗಳ ಪರ ವಕೀಲ ಎ.ಪಿ ಸಿಂಗ್: ದಾಖಲೆಗಳನ್ನು ಒದಗಿಸಲು ಎರಡ್ಮೂರು ದಿನ ಅವಕಾಶ ಕೊಡಿ.
ಜಡ್ಜ್: ಅರ್ಜಿಯಲ್ಲಿ ಪ್ರಮುಖ ಅಂಶಗಳನ್ನು ಉಲ್ಲೇಖಿಸದೆ ನೀವು ತಡೆ ಕೇಳುವಂತಿಲ್ಲ, ನಿಮ್ಮ ವಾದಕ್ಕೂ ಅರ್ಜಿಯಲ್ಲಿರುವ ಮನವಿಗೂ ಸಂಬಂಧವಿಲ್ಲ.
ಜಡ್ಜ್ : ನಿಮ್ಮ ಕಕ್ಷಿದಾರರು ಇನ್ನು ಕೆಲವೇ ಹೊತ್ತಿನಲ್ಲಿ ದೇವರನ್ನು ಭೇಟಿ ಮಾಡಲಿದ್ದಾರೆ. ನೀವು ಅರ್ಜಿಯಲ್ಲಿನ ಹೊಸ ಅಂಶಗಳ ಬಗ್ಗೆ ಹೇಳದಿದ್ದರೆ ಕೊನೆ ಕ್ಷಣದಲ್ಲಿ ನಾವೂ ಏನೂ ಮಾಡಲಾಗದು.
ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ: ದೋಷಿಗಳು ಸಲ್ಲಿಸಿರುವ ಅರ್ಜಿಯಲ್ಲಿ ಹುರುಳಿಲ್ಲ. ಈ ಅರ್ಜಿಯನ್ನು ವಜಾ ಮಾಡಿ
( ಅತ್ಯಾಚಾರಿಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಜಾ. ಶುಕ್ರವಾರ ಬೆಳಗ್ಗೆ 5.30ಕ್ಕೆ ಗಲ್ಲು ಜಾರಿ )