Tag: ಸುಪಾರಿ

  • Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

    Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

    ಬೆಂಗಳೂರು: ರಾಕ್ಷಸ ರವಿಬೆಳಗೆರೆ ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ, ಈ ಕುರಿತು ತನಿಖೆ ನಡೆಸಿ ಶಿಕ್ಷೆ ನೀಡಬೇಕು ಎಂದು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹೇಳಿದ್ದಾರೆ.

    ತನ್ನ ಹತ್ಯೆಗೆ ಸುಪಾರಿ ನೀಡಿ ಬಂಧನವಾಗಿರುವ ರವಿ ಬೆಳಗೆರೆ ಅವರ ಕುರಿತು ಅವರು ಪಬ್ಲಿಕ್ ಟಿವಿ ಗೆ ಪ್ರತಿಕ್ರಿಯೆ ನೀಡಿ, ರವಿ ಬೆಳಗೆರೆ ಅವರ ವಿರುದ್ಧ ನಾನು ಯಾವುದೇ ದೂರು ನೀಡಿಲ್ಲ. ಸಿಸಿಬಿ ಮತ್ತು ಎಸ್‍ಐಟಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. 

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆ ವೇಳೆ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ನನ್ನನ್ನು ಕೊಲೆ ಮಾಡಲು ರವಿಬೆಳಗೆರೆಯಿಂದ ಸುಪಾರಿ ಪಡೆದಿರುವ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಈ ವಿಚಾರ ನನಗೂ ತಿಳಿದಿರಲಿಲ್ಲ. ಇಂದು ಬೆಳಗ್ಗೆ ಪೊಲೀಸರು ಬಂಧನ ನಡೆಸಿದ ಸಂದರ್ಭದಲ್ಲಿ ತಿಳಿಯಿತು ಎಂದರು.

    ಸುಪಾರಿ ನೀಡಿರುವ ಬಗ್ಗೆ ಕೇಳಿ ನನಗೂ ಶಾಕ್ ಆಗಿದ್ದು, ನನ್ನ ಹಾಗೂ ರವಿಬೆಳಗೆರೆ ಅವರ ಸಂಬಂಧ ಸುಮಾರು 14 ವರ್ಷಗಳದ್ದು, ನಿರಂತರವಾಗಿ 14 ವರ್ಷ ಅವರ ಬಳಿ ಕೆಲಸ ಮಾಡಿದ್ದೇನೆ. ಅಲ್ಲದೇ ಅವರಿಗೆ ಎಂದು ಅಸಮಾಧಾನ ಬಾರದ ಹಾಗೇ ಕೆಲಸ ಮಾಡಿದ್ದೇನೆ. ಈಗಿದ್ದು ನನ್ನ ವಿರುದ್ಧ ಸುಪಾರಿ ನೀಡುವ ಸುದ್ದಿ ಕೇಳಿ ಅಶ್ಚರ್ಯ ಹಾಗೂ ಅತಂಕವಾಗುತ್ತಿದೆ ಎಂದು ಹೇಳಿದರು.

    ಹಾಯ್ ಬೆಂಗಳೂರು ಬಿಟ್ಟಿದ್ದು ಯಾಕೆ?
    ನನ್ನ ಅವರ ಮಧ್ಯೆ ಯಾವುದೇ ವೈಯಕ್ತಿಕ ಜಗಳವಿಲ್ಲ. 2014 ಡಿಸೆಂಬರ್ ನಲ್ಲಿ ನಾನು ಅವರ ಬಳಿ ಕೆಲಸ ಬಿಟ್ಟೆ. 14 ವರ್ಷದ ಅವಧಿಯಲ್ಲಿ ನನ್ನ ಹಾಗೂ ನನ್ನ ವರದಿಗಳ ಬಗ್ಗೆ ಯಾವುದೇ ಅನುಮಾನ ವ್ಯಕ್ತವಾಗಿರಲಿಲ್ಲ. ಯಾವುದೇ ವ್ಯಕ್ತಿಯನ್ನು ಬ್ಲಾಕ್ ಮೇಲ್ ಮಾಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ 2014ರಲ್ಲಿ ಅವರು ನನ್ನ ಬಗ್ಗೆ ಸಂಶಯ ವ್ಯಕ್ತಪಡಿಸಲು ಆರಂಭಮಾಡಿದರು. ಹೀಗಾಗಿ ನಂಬಿಕೆ ಇಲ್ಲದ ಜಾಗದಲ್ಲಿ ಕಾರ್ಯನಿರ್ವಹಿಸಬಾರದು ಎಂಬ ಕಾರಣಕ್ಕೆ ಕೆಲಸ ಬಿಟ್ಟೆ ಎಂದು ತಿಳಿಸಿದರು. ಇದನ್ನೂ ಓದಿ: ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ

    ಈ ಹಿಂದೆ ಪ್ಲಾನ್ ಮಾಡಲಾಗಿತ್ತಾ?
    ಈ ಹಿಂದೆ ತಮ್ಮ ಮೇಲೆ ನಡೆದ ದಾಳಿ ಕುರಿತು ಪ್ಲಾನ್ ಮಾಡಲಾಗಿತ್ತು ಎಂದು ಸಿಸಿಬಿ ಪೊಲೀಸರ ಮಾಹಿತಿ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ನನಗೆ ಎಂದು ಸಂಶಯ ಉಂಟಾಗಿರಲಿಲ್ಲ, ಆದರೆ ಪೊಲೀಸ್ ಮಾಹಿತಿ ಪಡೆದ ನಂತರ ನನ್ನ ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸಿ ಕೊಂಡರೆ ಹೌದು ಎನ್ನುವ ಭಾವನೆ ಬರುತ್ತಿದೆ. 2014 ಡಿಸೆಂಬರ್ 20, ಶನಿವಾರ ರವಿಬೆಳಗೆರೆ ಅವರು ನನಗೆ ಪದೆ ಪದೆ ಕರೆಮಾಡಿ ಚಾನಲ್‍ಗೆ ಬಂಡವಾಳ ಹೂಡಲು ಕೆಲವರು ಬರುತ್ತಿದ್ದಾರೆ. ನಿನ್ನ ಬಳಿ ಮಾತನಾಡಬೇಕು ಬಾ ಎಂದು ಕರೆದರು. ಆದರೆ ನಾನು ಅಂದು ತಡವಾಗಿ ಕಚೇರಿ ಬಳಿ ತೆರಳಿದೆ, ಆ ವೇಳೆಗೆ ಕ್ರಿಮಿನಲ್ ಹಿನ್ನೆಲೆಯುಳ್ಳ ಹಲವರು ಅಲ್ಲಿಗೆ ಬಂದಿದ್ದರು. ಆದರೆ ಕಚೇರಿಯಲ್ಲಿ ನೋಡಿದರೆ ಯಾರು ಇರಲಿಲ್ಲ. ಆಗ ನಾನು ಅವರ ಬಳಿ ಬಂಡವಾಳ ಹೂಡುವ ವ್ಯಕ್ತಿಗಳ ಬಗ್ಗೆ ಕೇಳಿದೆ, ಆದರೆ ಈ ಬಗ್ಗೆ ಮಾತನಾಡದೆ ಬೇರೆ ವಿಷಯ ಕುರಿತು ಮಾತನಾಡಿದರು. ಅಂದು ಅನುಮಾನಗೊಂಡು ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಮಾಹಿತಿ ಪಡೆದೆ. ಅವರು ಸಹ ಅನುಮಾನ ವ್ಯಕ್ತಪಡಿಸಿ ನನ್ನನ್ನು ಅಲ್ಲಿಂದ ಹೊರಡುವಂತೆ ಸೂಚಿಸಿದರು. ತಕ್ಷಣ ನಾನು ಅಲ್ಲಿಂದ ನಾನು ಬೇರೆ ಕಡೆ ತೆರಳಿ ಕೆಲಸ ಬಿಡುವ ನಿರ್ಧಾರ ಮಾಡಿದೆ ಎಂದು ವಿವರಿಸಿದರು.

    ವಿಳಾಸ ತಿಳಿಯಲು ಕೊರಿಯರ್ ನೆಪ:
    ಕಳೆದ ಆಗಸ್ಟ್ 28 ರಂದು ನನ್ನ ಮನೆ ಬಳಿ ಆರೋಪಿ ಶಶಿ ಓಡಾಡುವುದನ್ನು ಗಮನಿಸಿದ್ದೇನೆ, ಆತನು ಅಲ್ಲಿಯೇ ಒಂದು ವರ್ಷ ಕೆಲಸ ಮಾಡಿದ್ದ. ಈ ವೇಳೆ ಆತನ ಹಿನ್ನೆಲೆ ತಿಳಿದಿತ್ತು. ನಾನು ಉತ್ತರ ಹಳ್ಳಿ ಬಳಿ ವಾಸಿಸುತ್ತಿದ್ದೆ, ನಂತರ ಕಳೆದ ವರ್ಷ ನನ್ನ ಮಗನ ಶಾಲೆಯ ವಿಚಾರವಾಗಿ ಮಲ್ಲೇಶ್ವರಂ ಬಳಿ ಮನೆ ಬದಲಾಯಿಸಿದೆ. ನಂತರ ವಸಂತಪುರಕ್ಕೆ ಬಂದೆ ಈ ವೇಳೆ ನನಗೆ ಕೊರಿಯರ್ ಅಫೀಸ್ ನಿಂದ ಕರೆ ಬಂತು. ಆಗ ಕೆಲವು ಪುಸ್ತಕ ನೀಡಬೇಕಿದೆ ಎಂದು ನನ್ನ ವಿಳಾಸ ಪಡೆದರು. ಅಂದು ಬಂದ ಪುಸ್ತಕದಲ್ಲಿ ಬಿ.ಎಚ್ ರಾಘವೇಂದ್ರ ಬರೆದ ಪುಸ್ತಕವು ಇತ್ತು, ರಾಘವೇಂದ್ರ ಅವರು ರವಿಬೆಳಗೆರೆ ಅವರ ಆಪ್ತ ಗೆಳೆಯರು. ಇದರಿಂದ ಅನುಮಾನಗೊಂಡು ರವಿಬೆಳಗೆರೆ ಅವರಿಗೆ ಕರೆ ಮಾಡಿ ಈ ಕುರಿತು ವಿಚಾರಿಸಿದೆ. ಆದರೆ ಅವರು ಪುಸ್ತಕ ಕಳುಹಿಸಿಲ್ಲ ಎಂದು ಹೇಳಿದರು. ನಂತರ ಕೊರಿಯರ್ ನಿಂದ ಬಂದ ಕರೆ ಆಧಾರಿಸಿ ನಾನು ಪರಿಶೀಲಿಸಲು ಮುಂದಾದಾಗ ಅದು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ 10 ವರ್ಷಗಳ ಕಾಲ ಕೊರಿಯರ್ ಸೇವೆ ಮಾಡುತ್ತಿದ್ದ ಮಂಜುವಿನ ನಂಬರ್ ಎಂದು ತಿಳಿಯಿತು. ಆಗ ನಾನು ಆತನನ್ನು ವಿಚಾರಿಸಿದಾಗ ಮಹಿಳೆಯೊಬ್ಬರು ಬಂದು ಕೊಟ್ಟರು ಎಂದು ತಿಳಿಸಿದ. ಆಗ ನನಗೆ ಆತ ಸುಳ್ಳು ಹೇಳುತ್ತಿರುವ ಕುರಿತು ಮನವರಿಕೆ ಆಯ್ತು, ನನ್ನ ಮನೆ ವಿಳಾಸ ತಿಳಿಯಲು ಮಾಡಿದ ತಂತ್ರ ಎಂದು ಅರಿವಾಯಿತು ಎಂದರು.

    ಆದರೂ ನಾನು ಏನು ತಪ್ಪು ಮಾಡಿಲ್ಲ ಎಂಬ ಧೈರ್ಯದ ಮೇಲೆ ಸುಮ್ಮನಾದೆ, ಸುಪಾರಿ ಕೊಟ್ಟಿರುವ ಕುರಿತು ಎಲ್ಲೂ ಸುಳಿವು ನನಗೆ ಸಿಗಲಿಲ್ಲ. ಇಲ್ಲವಾದರೆ ಅಂದೇ ರವಿಬೆಳಗೆರೆ ಅವರು ಜೈಲು ಸೇರುತ್ತಿದ್ದರು, ಎಸ್‍ಐಟಿ ಅಧಿಕಾರಿಗಳ ಕಾರ್ಯ ಮೆಚ್ಚುವಂತದ್ದು, ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯಾದೇ ಕಾರ್ಯನಿರ್ವಹಿಸಿದ್ದಾರೆ. ಆದರೆ ಒಬ್ಬ ರಾಕ್ಷಸ ರವಿಬೆಳಗೆರೆ ಬಳಿ 14 ವರ್ಷದ ಕೆಲಸ ಮಾಡಿದ ನಂತರವು ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ, ಈ ಕುರಿತು ತನಿಖೆ ನಡೆಸಿ ಶಿಕ್ಷೆ ನೀಡಬೇಕಿದೆ ಎಂದರು.

    ಇದನ್ನೂ ಓದಿ: ಯಾಕ್ ನೀವ್ ರಿಸ್ಕ್ ತೆಗೆದುಕೊಳ್ತೀರಿ: ಪೊಲೀಸರಿಗೆ ರವಿ ಬೆಳಗೆರೆ ಬುದ್ಧಿವಾದ

    https://www.youtube.com/watch?v=tvAkOpM6ZZo

     

     

  • ರವಿ ಬೆಳಗೆರೆ ಹೆಸರನ್ನ ಸುಪಾರಿ ಹಂತಕ ಬಾಯ್ಬಿಟ್ಟಿದ್ದು ಹೇಗೆ? ಬೆಳಗೆರೆ ಕಚೇರಿಯಲ್ಲಿ ಏನು ಸಿಕ್ಕಿದೆ?

    ರವಿ ಬೆಳಗೆರೆ ಹೆಸರನ್ನ ಸುಪಾರಿ ಹಂತಕ ಬಾಯ್ಬಿಟ್ಟಿದ್ದು ಹೇಗೆ? ಬೆಳಗೆರೆ ಕಚೇರಿಯಲ್ಲಿ ಏನು ಸಿಕ್ಕಿದೆ?

    ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಹಿರಿಯ ಪತ್ರಕರ್ತ ರವಿಬೆಳಗೆರೆ ಮತ್ತು ಸುಪಾರಿ ಕಿಲ್ಲರ್‍ಗಳ ಬಂಧನವಾಗಿದೆ.

    ಡಿಸೆಂಬರ್ 3ರಂದು ಬೆಂಗಳೂರು ನಗರ ಸಿಸಿಬಿ ಪೊಲೀಸ್ ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ತಾಹೀರ್ ಹುಸೇನ್ ಅನೂಪ್ ಗೌಡ ಎಂಬಾತನನ್ನು ಬಂಧಿಸಿದ್ದರು. ಈತನನ್ನು ಪೊಲೀಸ್ ಬಂಧನಕ್ಕೆ ಪಡೆದು ಹೆಚ್ಚಿನ ವಿಚಾರಣೆ ಮಾಡಿದಾಗ ವಿಜಯಪುರ ಜಿಲ್ಲೆಯ ಶಶಿಧರ್ ರಾಮಚಂದ್ರ ಮುಂಡೆವಾಡಿ ಎಂಬಾತ ಮತ್ತೊಂದು ನಾಡ ಪಿಸ್ತೂಲ್ ಮತ್ತು 02 ಜೀವಂತ ಗುಂಡುಗಳನ್ನು ಪಡೆದುಕೊಂಡಿದ್ದನೆಂದು ತಿಳಿಸಿದ್ದ.

    ನಂತರ ಅಕ್ರಮ ಪಿಸ್ತೂಲ್ ಹೊಂದಿದ್ದ ಜಾಲವನ್ನು ಬೆನ್ನಟ್ಟಿದ್ದ ಸಿಸಿಬಿ ಅಧಿಕಾರಿಗಳು ಡಿಸೆಂಬರ್ 07ರಂದು ರಾತ್ರಿ 11.15 ರ ಸಮಯಕ್ಕೆ ಶಶಿಧರ್ ರಾಮಚಂದ್ರ ಮುಂಡೆವಾಡಿಯನ್ನು ಪತ್ತೆ ಮಾಡಿ ಬಂಧಿಸಿದ್ದರು.ಶಶಿಧರ್ ರಾಮಚಂದ್ರ ಮುಂಡೆವಾಡಿನನ್ನು ಕೂಲಂಕುಶವಾಗಿ ವಿಚಾರಣೆ ಮಾಡಿದಾಗ ಹಾಯ್ ಬೆಂಗಳೂರ್ ಪತ್ರಿಕೆಯ ಸಂಸ್ಥಾಪಕರಾದ ರವಿ ಬೆಳಗೆರೆ ನೀಡಿದ ಸುಪಾರಿಯ ಬಗ್ಗೆ ಬಾಯ್ಬಿಟ್ಟಿದ್ದಾನೆ.

    ಹೇಳಿದ್ದು ಏನು?: ಸುಪಾರಿ ಮೇರೆಗೆ ಆಗಸ್ಟ್ 28ರಂದು ನಾನು ನನ್ನ ಸಹಚರ ವಿಜು ಬಡಿಗೇರ್ ಜೊತೆಯಲ್ಲಿ ರವಿಬೆಳಗೆರೆ ಕಚೇರಿಗೆ ಬಂದಿದ್ದೆ. ಅದೇ ದಿನ ರವಿ ಬೆಳಗೆರೆ ಶಶಿಧರ್‍ಗೆ ಒಂದು ಗನ್ ಮತ್ತು 04 ಜೀವಂತ ಗುಂಡುಗಳನ್ನು ಹಾಗೂ 01 ಚಾಕುವನ್ನು ನೀಡಿದ್ದರು. ವೈಯಕ್ತಿಕ ವೈಷಮ್ಯದಿಂದಾಗಿ ತನಗೆ ದ್ರೋಹ ಬಗೆದಿರುವ, ಈ ಹಿಂದೆ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಹೆಗ್ಗರವಳ್ಳಿಯನ್ನು ಕೊಲೆ ಮಾಡು. ನಿನಗೆ ಎಷ್ಟು ಬೇಕೋ ಅಷ್ಟು ಹಣ ಕೊಡುತ್ತೇನೆಂದು ಹೇಳಿದರು. ಸುಪಾರಿಗಾಗಿ ಮುಂಗಡವಾಗಿ 15,000 ರೂ. ನೀಡಿದ್ದರು.

    ಸಂಚು ಹೀಗಿತ್ತು: ರವಿ ಬೆಳಗೆರೆ ಕಚೇರಿಯ ಒಬ್ಬ ಹುಡುಗ ಶಶಿಧರ್ ಮತ್ತು ವಿಜು ಬಡಿಗೇರ್ ಗೆ ಉತ್ತರಹಳ್ಳಿಯಲ್ಲಿರುವ ಸುನೀಲ್ ಹೆಗ್ಗರವಳ್ಳಿಯ ಮನೆಯನ್ನು ತೋರಿಸಿಕೊಟ್ಟಿದ್ದರು. ನಂತರ ಶಶಿಧರ್ ಮತ್ತು ವಿಜು ಬಡಿಗೇರ್ ಸುನೀಲ್ ಹೆಗ್ಗರವಳ್ಳಿಯನ್ನು ಗನ್‍ನಿಂದ ಶೂಟ್ ಮಾಡಿ ಕೊಲೆ ಮಾಡಲು ಮನೆಯ ಬಳಿ ಕಾಯುತ್ತಿದ್ದರು. ಮನೆಯಿಂದ ಹೊರಬಂದ ಸುನೀಲ್ ಹೆಗ್ಗರವಳ್ಳಿಯನ್ನು ಶೂಟ್ ಮಾಡಲು ಶಶಿಧರ್ ರಾಮಚಂದ್ರ ಮುಂಡೆವಾಡಿ ಗುರಿ ಇಟ್ಟಿದ್ದ. ಆಗ ಸುನೀಲ್ ಮರೆಯಾಗಿ ಸರಿಯಾದ ಸಮಯ ದೊರೆಯದ ಕಾರಣ ಆರೋಪಿ ಶಶಿಧರ್ ರವಿ ಬೆಳಗೆರೆಗೆ ಗನ್ ಹಾಗು ಗುಂಡುಗಳನ್ನು ವಾಪಸ್ ನೀಡಿ ಒಂದು ತಿಂಗಳು ಬಿಟ್ಟು ಬಂದು ಕೆಲಸ ಮುಗಿಸಿಕೊಡುವುದಾಗಿ ತಿಳಿಸಿ ವಾಪಸ್ ಊರಿಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಚಿನ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ ಸೆಕ್ಷನ್ 120(ಬಿ), 307 ಸಹಿತ 34 ಜೊತೆಗೆ 1958 ಆಮ್ರ್ಸ್ ಕಾಯ್ದೆಯ 3, 25 ಅಡಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ.

    ಸಿಸಿಬಿ ಅಧಿಕಾರಿಗಳು ಈ ಪ್ರಕರಣದ ಮುಖ್ಯ ಆರೋಪಿ ರವಿ ಬೆಳಗೆರೆಯನ್ನು ಪತ್ತೆ ಮಾಡಲು ನ್ಯಾಯಾಲಯದಿಂದ ಸರ್ಚ್‍ವಾರೆಂಟ್ ಪಡೆದು ಶುಕ್ರವಾರ ಮಧ್ಯಾಹ್ನ 01. 30ಕ್ಕೆ ಹಾಯ್ ಬೆಂಗಳೂರು ಕಚೇರಿಯಲ್ಲಿ ರವಿ ಬೆಳಗೆರೆ ಯವರನ್ನು ಬಂಧಿಸಿದ್ದಾರೆ.

    ರವಿ ಬೆಳಗೆರೆ ಕಚೇರಿಯಿಂದ ಒಂದು ರಿವಾಲ್ವಾರ್, 53 ಜೀವಂತ ಗುಂಡುಗಳು, ಒಂದು ಬಳಸಿರುವ ಗುಂಡು, ಜಿಂಕೆ ಚರ್ಮ, ಒಂದು ಡಬ್ಬಲ್ ಬ್ಯಾರೆಲ್ ಗನ್, 41 ಜೀವಂತ ಗುಂಡುಗಳು, 1.5 ಅಡಿ*1.5 ಅಡಿ ಉದ್ದಗಲದ ಒಂದು ದೊಡ್ಡ ಆಮೆ ಚಿಪ್ಪನ್ನು ವಶಪಡಿಸಿಕೊಂಡಿದ್ದಾರೆ.

    ಶಶಿಧರ್ ಮುಂಡೆವಾಡಿ ವಿರುದ್ಧ ದಾಖಲಾಗಿರುವ ಪ್ರಕರಣಗಳು: 
    1. 2006 ರಲ್ಲಿ ಮುತ್ತು ಮಾಸ್ತರ್ ಎಂಬವನನ್ನು ಕೊಲೆ ಮಾಡಿದ ಬಗ್ಗೆ ಪ್ರಕರಣ
    2. 2013 ರಲ್ಲಿ ಬಸಪ್ಪ ಹರಿಜನ್ ಎಂಬಾತನನ್ನು ಕೊಲೆ ಮಾಡಿದ ಬಗ್ಗೆ ಪ್ರಕರಣ.
    3. 2014 ರಲ್ಲಿ ತನ್ನ ಸ್ನೇಹಿತ ಸುರೇಶ್ ಲಾಳಸಂಗಿ ಎಂಬಾತನನ್ನು ಕೊಲೆ ಮಾಡಿದ ಬಗ್ಗೆ ಪ್ರಕರಣ.
    4. 2016ನೇ ಸಾಲಿನಲ್ಲಿ ಇಂಡಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ.
    5. 2017 ರಲ್ಲಿ ಮಹಾರಾಷ್ಟ್ರದ ಮೀರಜ್‍ನ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಇಟ್ಟುಕೊಂಡಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ.

    https://www.youtube.com/watch?v=TUKBh2D8Qcw&feature=youtu.be&a

  • ನನ್ನ ಕೊಲೆಗೆ ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರೆಂದು ಕೇಳಿ ಶಾಕ್ ಆಗಿದೆ: ಸುನೀಲ್ ಹೆಗ್ಗರವಳ್ಳಿ

    ನನ್ನ ಕೊಲೆಗೆ ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರೆಂದು ಕೇಳಿ ಶಾಕ್ ಆಗಿದೆ: ಸುನೀಲ್ ಹೆಗ್ಗರವಳ್ಳಿ

    ಬೆಂಗಳೂರು: ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ತನ್ನ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಅರೆಸ್ಟ್ ಆಗಿದ್ದಾರೆ. ಈ ಬಗ್ಗೆ ಸುನೀಲ್ ಹೆಗ್ಗರವಳ್ಳಿ ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ್ದಾರೆ.

    ಈ ಸುದ್ದಿಯಿಂದ ನಿಮಗೆ ಹೇಗೆ ಶಾಕ್ ಆಗಿದೆಯೋ ಅದೇ ರೀತಿ ನನಗೂ ಶಾಕ್ ಆಗಿದೆ. ನಿನ್ನೆ ತನಕ ಏನೂ ಗೊತ್ತಿರಲಿಲ್ಲ. ಬೆಳಗ್ಗೆ ನಗರದ ಹಿರಿಯ ಪೊಲೀಸರು ನನ್ನನ್ನು ಕರೆಸಿ ವಿಷಯ ತಿಳಿಸಿದಾಗ ನಾನು ಕೂಡ ನಂಬೋ ಸ್ಥಿತಿಯಲ್ಲಿ ಇರಲಿಲ್ಲ. ಯಾಕಂದ್ರೆ ರವಿ ಬೆಳಗೆರೆ ನನ್ನನ್ನು ಹತ್ಯೆ ಮಾಡಿಸಲು ಪ್ರಯತ್ನಿಸುತ್ತಾರೆಂದರೆ ನಂಬಲಾರದ ವಿಷಯವಾಗಿತ್ತು. ಆದ್ರೆ ಅವರು ಪ್ರತಿಯೊಂದನ್ನೂ ಕೂಡ ದಾಖಲೆಗಳ ಸಮೇತ ವಿವರಿಸಿದಾಗ, ಹಂತಕನ ಬಗ್ಗೆ ಮಾಹಿತಿ ಕೊಟ್ಟಾಗ, ಅವನು ಈ ಹಿಂದೆಯೂ ಹತ್ಯೆಗೆ ಯತ್ನಿಸಿದ್ದನ್ನು ಗಮನಿಸಿದಾಗ ಹಾಗೂ ಹಿಂದೆ ನಡೆದ ಘಟನೆಗಳನ್ನು ಪರಾಮರ್ಶಿಸಿದಾಗ ನನಗೂ ಇದು ಸತ್ಯ ಎನಿಸಿದೆ ಎಂದು ಹೇಳಿದ್ರು.

    ಈ ಹಿಂದೆಯೂ ಕೊಲೆಗೆ ಯತ್ನ?: 2014ರಲ್ಲಿ ನಾನು ಕೆಲಸ ಬಿಟ್ಟಾಗ ಒಂದು ಬಾರಿ ಪ್ರಯತ್ನ ಮಾಡಿದ್ದರು. ಯಾರೋ ಇನ್‍ವೆಸ್ಟರ್ಸ್ ಬರ್ತಾರೆ, ಚಾನಲ್ ಬಗ್ಗೆ ಮಾತನಾಡಬೇಕು ಬಾ ಎಂದು ಕಚೇರಿ ಬಳಿ ನನ್ನನ್ನು ಕರೆಸಿದ್ದರು. ಆದ್ರೆ ನಾನು ಅಲ್ಲಿಗೆ ಹೋದಾಗ ಯಾವುದೇ ಇನ್‍ವೆಸ್ಟರ್ಸ್ ಇರಲಿಲ್ಲ. ಕೆಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಅಲ್ಲಿದ್ದರು. ಅದನ್ನು ಗಮನಿಸಿದಾಗ ಅಂದು ಕೂಡ ಕೊಲೆಗೆ ಯತ್ನಿಸಿದ್ದರು ಅಂತ ಈಗ ಅನ್ನಿಸುತ್ತಿದೆ ಎಂದು ತಿಳಿಸಿದ್ರು.

     

    ಆರೋಪಿಗಳ ಹೆಸರು ಗೊತ್ತಿಲ್ಲ. ಅವರ ಬಗ್ಗೆ ಏನೂ ಗೊತ್ತಿಲ್ಲ. ಅವರನ್ನ ಗಮನಿಸಿದಾಗ ಈ ಹಿಂದೆ ಎರಡು ಮೂರು ಬಾರಿ ಅವರು ಕಚೇರಿಗೆ ಬಂದಾಗ, ಇವರು ಬೇರೆ ಬೇರೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಎಂದು ರವಿ ಬೆಳಗೆರೆ ಹೇಳಿದ್ರು. ಅವರ ಮುಖಪರಿಚಯ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಅಂತ ಹೇಳಿದ್ರು.

    ನನ್ನ-ರವಿ ಬೆಳಗೆರೆ ಸ್ನೇಹ 17 ವರ್ಷಗಳದ್ದು, ಅದರಲ್ಲಿ 14 ವರ್ಷ ಅವರ ಜೊತೆ ಕೆಲಸ ಮಾಡಿದ್ದೀನಿ. ಯಾವ ಕಾರಣಕ್ಕೆ ನನ್ನ ಕೊಲೆಗೆ ಸುಪಾರಿ ಕೊಟ್ಟರು ಅಂತ ಗೊತ್ತಿಲ್ಲ. ಅದನ್ನ ನೀವು ರವಿ ಬೆಳಗೆರೆ ಅವರನ್ನೇ ಕಳಬೇಕು ಅಥವಾ ತನಿಖೆ ಮಾಡುತ್ತಿರುವ ಅಧಿಕಾರಿಗಳೇ ಇದನ್ನ ಸ್ಪಷ್ಟಪಡಿಸಬೇಕು ಅಂದ್ರು.

    ಸದ್ಯ ಸಿಸಿಬಿ ಪೊಲೀಸರು ಹಾಯ್ ಬೆಂಗಳೂರು ಕಚೇರಿಯಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ರವಿ ಬೆಳಗೆರೆ ಅವರ ಕಾರನ್ನ ತಪಾಸಣೆ ಮಾಡಿದ್ದಾರೆ. ಸುನೀಲ್ ಹೆಗ್ಗರವಳ್ಳಿ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದಾರೆ.

    ಸುನಿಲ್ ಹೆಗ್ಗರವಳ್ಳಿಗೆ ಆಶ್ರಯ ನೀಡಿದ್ದು ಗೌರಿ ಲಂಕೇಶ್. ಆದ್ದರಿಂದ ಗೌರಿ ಲಂಕೇಶ್ ಹತ್ಯೆಗೂ, ಈ ಪ್ರಕರಣಕ್ಕೂ ಸಂಬಂಧವಿದೆಯಾ ಎಂಬ ಆ್ಯಂಗಲ್ ನಲ್ಲೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

     

     

  • ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!

    ಗಂಡನ ಕಾಮದಾಟ ಬೇಸತ್ತು ಸುಪಾರಿ ಕೊಟ್ಟು ಗಂಡನನ್ನೇ ಕೊಲ್ಲಿಸಿದ್ಳು!

    ಬೆಂಗಳೂರು: ಬಡ್ಡಿಗೆ ಹಣ ಕೊಡುತ್ತಿದ್ದ ಗಂಡ ವಾಪಸ್ಸು ಹಣಕೊಡದೇ ಇದ್ರೆ ಮಹಿಳೆಯರನ್ನು ಬೆಡ್‍ರೂಂಗೆ ಕರಿಯುತ್ತಿದ್ದ ಗಂಡನ ಲಂಪಟತನವನ್ನು ನೋಡಿದ ಪತ್ನಿ ಸುಪಾರಿ ಕೊಟ್ಟು ಕೊಲ್ಲಿಸಿದ್ದಾಳೆ.

    ಕುಮಾರ್ ಕೊಲೆಯಾದ ವ್ಯಕ್ತಿ. ಡೋರಿನ್ ಗಂಡನನ್ನು ಕೊಲೆ ಮಾಡಿಸಿದ ಪತ್ನಿ. ಡೋರಿನ್ ಪತಿಯ ಬಳಿ ಸಾಲ ಪಡೆದಿದ್ದ ಬೈಯಪ್ಪನಹಳ್ಳಿ ನಿವಾಸಿ ಶ್ರೀಧರ್ ಎಂಬಾತನಿಗೆ ಪತಿಯನ್ನು ಕೊಲ್ಲಲು 30 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದಳು.

    ಏನಿದು ಪ್ರಕರಣ?
    ಏಪ್ರಿಲ್ 6 ರಂದು ಸಂಜೆ ಪುಲಕೇಶಿ ನಗರದ ಬಳಿಯ ಕಲ್ಪಳ್ಳಿ ಸ್ಮಶಾನದ ಬಳಿಯಲ್ಲಿ ಕುಮಾರ್‍ನನ್ನು ಕೊಲೆ ಮಾಡಲಾಗಿತ್ತು. ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ಕುಮಾರ್‍ನನ್ನು ಹಳೆಯ ದ್ವೇಷದಲ್ಲಿ ಯಾರೋ ಕೊಲೆ ಮಾಡಿರಬಹುದು ಎಂದು ಪೊಲೀಸರು ಮೊದಲಿಗೆ ಅನುಮಾನ ವ್ಯಕ್ತಪಡಿಸಿದ್ದರು.

    ಪೊಲೀಸರು ತನಿಖೆ ಆರಂಭಿಸಿದಾಗ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಕುಮಾರ್ ಹೆಂಗಸರಿಗೆ ಸಾಲ ಕೊಡುತ್ತಿದ್ದ. ಸಾಲ ಏನಾದ್ರೂ ಹಿಂದಿರುಗಿಸಿ ಕೊಡದೇ ಇದ್ರೆ ಅವರನ್ನು ಬೆದರಿಸಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಕೊನೆ ಕೊನೆಗೆ ಹೆಂಗಸರನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ. ಇದ್ರಿಂದ ಬೇಸತ್ತ ಹೆಂಡತಿ ಗಂಡನಿಂದ ಮುಕ್ತಿ ಹೊಂದಬೇಕು ಎಂದು ತೀರ್ಮಾನಿಸಿ ಗಂಡನ ಬಳಿ ಸುಮಾರು 5 ಲಕ್ಷ ರೂ. ಸಾಲ ಪಡೆದು ಬಡ್ಡಿ ಕಟ್ಟುತ್ತಿದ್ದ ಶ್ರೀಧರ್ ಜೊತೆ ಸೇರಿ ಪ್ಲಾನ್ ಹಾಕಿದ್ದಳು.

    ಡೋರಿನ್‍ನೊಂದಿಗೆ ಮಂಚವನ್ನು ಹಂಚಿಕೊಂಡಿದ್ದ ಶ್ರೀಧರ್ ತನ್ನ ಗ್ಯಾಂಗ್ ಜೊತೆಗೂಡಿ ಕುಮಾರ್‍ನನ್ನು ಮುಗಿಸೋಕೆ ಹುಡ್ಗೀರ ಜೊತೆಯಲ್ಲಿ ಫೋನ್ ಮಾಡಿ ಕರೆಸಿ ಕೊಲೆ ಮಾಡಿದ್ದನು.

    ಸುಳಿವೇ ಇಲ್ಲದ ಪ್ರಕರಣದ ಹಿಂದೆ ಬಿದ್ದಿದ್ದ ಬೈಯಪ್ಪನಹಳ್ಳಿ ಪೊಲೀಸ್ರು ಕುಮಾರ್‍ನ ಹೆಂಡತಿ ಡೋರಿನ್, ಶ್ರೀಧರ್ ಮತ್ತು ಗ್ಯಾಂಗ್‍ನ ಸದಸ್ಯರನ್ನು ಈಗ ಸೆರೆಮನೆಗೆ ಕಳುಹಿಸುವಲ್ಲಿ ಯಶ್ವಸಿಯಾಗಿದ್ದಾರೆ.

  • ಮಂಡ್ಯದಲ್ಲಿ ಮುಖ್ಯೋಪಾಧ್ಯಾಯರ ಕೊಲೆ ಪ್ರಕರಣ – ಹೆಂಡತಿ, ಮಗಳಿಂದಲೇ ಸುಪಾರಿ

    ಮಂಡ್ಯದಲ್ಲಿ ಮುಖ್ಯೋಪಾಧ್ಯಾಯರ ಕೊಲೆ ಪ್ರಕರಣ – ಹೆಂಡತಿ, ಮಗಳಿಂದಲೇ ಸುಪಾರಿ

    ಮಂಡ್ಯ: ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳು ಮತ್ತು ಹೆಂಡತಿಯನ್ನ ಪೊಲೀಸರು ಬಂಧಿಸಿದ್ದಾರೆ.

    ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದ ಶಶಿಭೂಷಣ್‍ರನ್ನ ಮಾರ್ಚ್ 31 ರಂದು ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದ ಬಳಿ ನಡುರಸ್ತೆಯಲ್ಲಿ ಶಶಿಭೂಷಣ್‍ರನ್ನ ಕೊಲೆ ಮಾಡಲಾಗಿತ್ತು. ಹಾಡಹಗಲೇ ನಡೆದ ಕೊಲೆಗೆ ಸಾರ್ವಜನಿಕರು ಬೆಚ್ಚಿಬಿದ್ದಿದ್ರು.

    ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇದೀಗ ಕೊಲೆಗೆ ಸುಪಾರಿ ನೀಡಿದ್ದ ಮಗಳು ನವ್ಯಶ್ರೀ ಮತ್ತು ಹೆಂಡತಿ ಶಾಂತಮ್ಮಳನ್ನ ಬಂಧಿಸಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ತಾಯಿ ಮತ್ತು ಮಗಳು ಐದು ಲಕ್ಷ ರೂಪಾಯಿ ಸುಪಾರಿ ನೀಡಿ ಶಶಿಭೂಷಣ್ ಕೊಲೆ ಮಾಡಿಸಿದ್ರು. ಕೊಲೆಗಾರರಿಗೆ ಶಶಿಭೂಷಣ್ ಫೋಟೋ, ಅವರು ದಿನವೂ ಸಂಚರಿಸುವ ರಸ್ತೆ ಮತ್ತು ಪಾಠ ಮಾಡುವ ಶಾಲೆಯ ಫೋಟೋವನ್ನ ತಾಯಿ-ಮಗಳು ವಾಟ್ಸಪ್‍ನಲ್ಲಿ ಕಳುಹಿಸಿಕೊಟ್ಟಿದ್ರು. 6 ತಿಂಗಳ ಹಿಂದೆ ಮಗಳು ಮನೆ ಬಿಟ್ಟು ಹೋಗಿ ವಾಪಸ್ ಬಂದ ನಂತರ ತಂದೆ ಮನೆಗೆ ಸೇರಿಸಿರಲಿಲ್ಲ. ಈ ವಿಚಾರವಾಗಿ ಮಗಳು ತಂದೆಯ ಮಧ್ಯೆ ಸಮಸ್ಯೆ ಇತ್ತು ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

                          

    ಶಶಿಭೂಷಣ್ ಪತ್ನಿ ಶಾಂತಮ್ಮ ಕೂಡ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ರು. ಇದೀಗ ಕೊಲೆಗೆ ಸುಪಾರಿ ನೀಡಿದ್ದ ತಾಯಿ ಮಗಳನ್ನ ಕೆಎಂ ದೊಡ್ಡಿ ಪೊಲೀಸರು ಬಂಧಿಸಿದ್ದು ಸುಪಾರಿ ಪಡೆದು ಕೊಲೆಗೈದ ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.