Tag: ಸುನೀಲ್ ಗವಾಸ್ಕರ್

  • ಸ್ಲಿಮ್‌ ಆಗಿರೊರೇ ಬೇಕಿದ್ರೆ ಮಾಡೆಲ್‌ ಆಯ್ಕೆ ಮಾಡಿಕೊಳ್ಳಿ – ರೋಹಿತ್‌ ದಪ್ಪ ಎಂಬ ಶಮಾ ಹೇಳಿಕೆಗೆ ಗವಾಸ್ಕರ್‌ ಆಕ್ಷೇಪ

    ಸ್ಲಿಮ್‌ ಆಗಿರೊರೇ ಬೇಕಿದ್ರೆ ಮಾಡೆಲ್‌ ಆಯ್ಕೆ ಮಾಡಿಕೊಳ್ಳಿ – ರೋಹಿತ್‌ ದಪ್ಪ ಎಂಬ ಶಮಾ ಹೇಳಿಕೆಗೆ ಗವಾಸ್ಕರ್‌ ಆಕ್ಷೇಪ

    ನವದೆಹಲಿ: ಕಾಂಗ್ರೆಸ್‌ ವಕ್ತಾರೆ ಶಮಾ ಮೊಹಮ್ಮದ್‌ (Shama Mohamed), ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಕುರಿತು ನೀಡಿದ ಹೇಳಿಕೆ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಕ್ರಿಕೆಟ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಸಹ ಪ್ರತಿಕ್ರಿಯೆ ನೀಡಿದ್ದು, ಶಮಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಕ್ರಿಕೆಟ್‌ನಲ್ಲಿ ದೈಹಿಕ ಸಾಮರ್ಥ್ಯ ಇರಬೇಕು ನಿಜ. ಆದ್ರೆ ಅದೊಂದೇ ಮುಖ್ಯವಾಗುವುದಿಲ್ಲ. ನಾನು, ಈ ಮೊದಲೂ ಹೇಳಿದ್ದೇನೆ, ನೀವು ಸ್ಲಿಮ್‌ ಆಗಿರುವ ವ್ಯಕ್ತಿಗಳನ್ನ ಬಯಸಿದ್ರೆ ಮಾಡೆಲಿಂಗ್‌ಗೆ ಹೋಗಿ, ಎಲ್ಲಾ ಮಾಡೆಲ್‌ಗಳನ್ನ ಆಯ್ಕೆ ಮಾಡಿ ಅಂತ ಹೇಳಿರುವುದಾಗಿ ತಿಳಿಸಿದ್ದಾರೆ.

    ಕ್ರಿಕೆಟ್‌ನಲ್ಲಿ ಮಾನಸಿಕತೆಯೂ ಹೆಚ್ಚು ಮುಖ್ಯವಾಗುತ್ತದೆ, ಅದಕ್ಕಾಗಿ ಅವರು ಎಷ್ಟು ಚೆನ್ನಾಗಿ ಆಡುತ್ತಾರೆ ಅನ್ನೋದನ್ನು ನೋಡಬೇಕಾಗುತ್ತದೆ. ನಾವು ಸರ್ಫರಾಜ್‌ ಖಾನ್‌ ಬಗ್ಗೆ ಮಾತನಾಡಿದ್ದೇವೆ. ಅವರು ದಪ್ಪ ಇದ್ದಾರೆ ಅನ್ನೋ ಕಾರಣಕ್ಕೆ ಬಹಳ ಸಮಯದವರೆಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗಲಿಲ್ಲ. ಆದ್ರೆ ಭಾರತ ತಂಡಕ್ಕೆ ಸೇರ್ಪಡೆಯಾದ ನಂತರ ಅವರ ಪ್ರದರ್ಶನ ಅಮೋಘವಾಗಿದೆ. ಕೊನೆಯಬಾರಿ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಆಡಿದಾಗಲೂ ಒಂದೇ ಇನ್ನಿಂಗ್ಸ್‌ನಲ್ಲಿ 150 ರನ್‌ ಗಳಿಸಿದ್ದರು ಎಂದು ಸ್ಮರಿಸಿದರು.

    ಶಮಾ ಹೇಳಿದ್ದೇನು?
    ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಶಮಾ, ರೋಹಿತ್ ಶರ್ಮಾ (Rohit Sharma) ದಪ್ಪಗಿದ್ದಾರೆ. ಅವರು ತೂಕ ಕಳೆದುಕೊಳ್ಳಬೇಕಾಗಿದೆ, ರೋಹಿತ್ ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಎಂದು ಬರೆದುಕೊಂಡಿದ್ದರು. ಶಮಾ ಹೇಳಿಕೆಗೆ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ವಿವಾದ ಜೋರಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಛೀಮಾರಿ ಹಾಕಿದ್ದು, ಟ್ವೀಟ್ ಡಿಲೀಟ್ ಮಾಡುವಂತೆ ತಾಕೀತು ಮಾಡಿತ್ತು.

    ಶಮಾ ಮೊಹಮ್ಮದ್ ಯಾರು?
    ಶಮಾ ಮೊಹಮ್ಮದ್ 1973ರ ಮೇ 17 ಕೇರಳದ ಕಣ್ಣೂರು ಜಿಲ್ಲೆಯ ಚೆರುಕಲ್ಲೈನಲ್ಲಿ ಜನಿಸಿದರು. ಶಮಾ ಮೊಹಮ್ಮದ್ ಕಾಂಗ್ರೆಸ್ ವಕ್ತಾರರಾಗಿರುವುದರ ಜೊತೆಗೆ ದಂತವೈದ್ಯರೂ ಆಗಿದ್ದಾರೆ. ಕೇರಳ ಮೂಲದ ವೈದ್ಯೆಯಾದ ಶಮಾ 2015 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಮೂಲಗಳ ಪ್ರಕಾರ ಶಮಾ ಕುವೈತ್‌ನ ಇಂಡಿಯನ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಡೆಂಟಲ್ ಸೈನ್ಸಸ್‌ನಲ್ಲಿ ಪದವಿ ಪಡೆದರು. 2018 ರಲ್ಲಿ ಕಾಂಗ್ರೆಸ್ ಅವರನ್ನು ಮೊದಲ ಬಾರಿಗೆ ತನ್ನ ರಾಷ್ಟ್ರೀಯ ಮಾಧ್ಯಮ ಪ್ಯಾನಲಿಸ್ಟ್ ಆಗಿ ನೇಮಿಸಿತು. ನಂತರ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ಮಾಡಲಾಯಿತು.

  • ಬ್ಯಾಟಿಂಗ್‌ನಲ್ಲಿ ಧಮ್‌ ಇಲ್ಲ – ಕೋಚ್‌ಗಳು ಏನ್‌ ಮಾಡ್ತಿದ್ದಾರೆ? – ಗವಾಸ್ಕರ್‌ ತೀವ್ರ ತರಾಟೆ

    ಬ್ಯಾಟಿಂಗ್‌ನಲ್ಲಿ ಧಮ್‌ ಇಲ್ಲ – ಕೋಚ್‌ಗಳು ಏನ್‌ ಮಾಡ್ತಿದ್ದಾರೆ? – ಗವಾಸ್ಕರ್‌ ತೀವ್ರ ತರಾಟೆ

    – ಸಿಡ್ನಿಯಲ್ಲಿ ಸುನೀಲ್‌ ಗವಾಸ್ಕರ್‌ಗೆ ಅಪಮಾನ

    ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿ ಮುಕ್ತಾಯಗೊಂಡಿದ್ದು, ಭಾರತ ಹೀನಾಯ ಸೋಲಿನೊಂದಿಗೆ ಸರಣಿ ಸೋಲುಕಂಡಿದೆ. ಇದರೊಂದಿಗೆ ಟಿ20 ವಿಶ್ವಕಪ್‌ ಗೆದ್ದ ಬಳಿಕ ಏಕದಿನ ಮತ್ತು ಟೆಸ್ಟ್‌ನಲ್ಲಿ ಸತತ 3ನೇ ಸರಣಿಯಲ್ಲಿ ಭಾರತ ಸೋಲು ಕಂಡಿದೆ. ಟೀಂ ಇಂಡಿಯಾದ ಕಳಪೆ ಬ್ಯಾಟಿಂಗ್‌ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ (Sunil Gavaskar) ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬ್ಯಾಟಿಂಗ್‌ ಕೋಚ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಂದ್ಯದ ಬಳಿಕ ಸ್ಟಾರ್‌ಸ್ಫೋರ್ಟ್ಸ್‌ ಜೊತೆಗೆ ಮಾತನಾಡಿದ ಸುನೀಲ್‌ ಗವಾಸ್ಕರ್‌, ನಾನು ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ಬಗ್ಗೆ ಮಾತನಾಡುತ್ತಿಲ್ಲ. ಆದ್ರೆ ಟೀಂ ಇಂಡಿಯಾ ಬ್ಯಾಟಿಂಗ್‌ ಕೋಚ್‌ಗಳು ಏನ್‌ ಮಾಡ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?

    ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಭಾರತ 46 ರನ್‌ಗಳಿಗೆ ಆಲೌಟ್‌ ಆಗಿದ್ದನ್ನು ನೋಡಿದ್ದೇವೆ. ಅಲ್ಲದೇ ಆ ಸರಣಿಯಲ್ಲೂ ಭಾರತ ಸೋಲು ಅನುಭವಿಸಿತು. ಬೌಲಿಂಗ್‌ ಪ್ರದರ್ಶನ ಉತ್ತಮವಾಗಿದೆ. ಆದ್ರೆ ಬ್ಯಾಟಿಂಗ್‌ನಲ್ಲಿ ಧಮ್‌ ಇಲ್ಲ. ನಾನೊಬ್ಬ ಟೆಸ್ಟ್‌ ಪ್ಲೇಯರ್‌ ಆಗಿ ಇದನ್ನ ಮಾತನಾಡ್ತಿದ್ದೇನೆ. ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ 2 ತಿಂಗಳ ಅಭ್ಯಾಸ ಇತ್ತು. ಈಗ ಕೋಚ್‌ಗಳು ಬ್ಯಾಟಿಂಗ್‌ನಲ್ಲಿ ಏನ್‌ ಇಂಪ್ರೂವ್ಮೆಂಟ್‌ ಆಗಿದೆ ಅಂತ ಹೇಳಲಿ ಎಂದು ಕಿಡಿಕಾರಿದ್ದಾರೆ.

    ಸಿಡ್ನಿಯಲ್ಲಿ ಸುನೀಲ್‌ ಗವಾಸ್ಕರ್‌ಗೆ ಅಪಮಾನ
    ಇನ್ನೂ ಸರಣಿ ಅಂತ್ಯದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್‌ಗೆ ಆಯೋಜಕರು ಅಪಮಾನ ಮಾಡಿದ್ದಾರೆ ಎನ್ನಲಾಗಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸಮಾರಂಭದ ವೇಳೆ ಸುನಿಲ್ ಗವಾಸ್ಕರ್ ಅವರಿಗೆ ಆಯೋಜಕರು ಅಪಮಾನ ಮಾಡಿದ್ದು, ಅವರ ಗೈರಿನಲ್ಲೇ ಪ್ರಶಸ್ತಿ ಪ್ರದಾನ ಮಾಡಿರುವ ಘಟನೆ ನಡೆದಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೆ ಹೀನಾಯ ಸೋಲು – ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌‌ ಫೈನಲ್‌ಗೆ ಆಸೀಸ್‌ ಲಗ್ಗೆ

    ಆಸ್ಟ್ರೇಲಿಯಾದ ಅಲನ್ ಬಾರ್ಡರ್‌ ಹಾಗೂ ಭಾರತದ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಈ ಸರಣಿ ನಡೆದಿತ್ತು. ಸರಣಿ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಬಾರ್ಡರ್ ಅವರು ಟ್ರೋಫಿಯನ್ನು ನೀಡಿದರು. ಆದ್ರೆ ಅದೇ ಸಮಯದಲ್ಲಿ ಗವಾಸ್ಕರ್, ಸ್ಥಳದಲ್ಲಿದ್ದರೂ ಅವರನ್ನು ನಿರ್ಲಕ್ಷಿಸಲಾಗಿತ್ತು. ಆದರೆ ಭಾರತ ವಿರುದ್ಧ ಸರಣಿ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಟ್ರೋಫಿ ನೀಡಲು ತಮ್ಮನ್ನು ಆಹ್ವಾನಿಸದಿದ್ದಕ್ಕಾಗಿ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಟದ ಮಧ್ಯೆಯೇ ಮೈದಾನ ತೊರೆದ ಬುಮ್ರಾ – ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ! 

  • ಕೊನೇ ಓವರ್‌ನಲ್ಲಿ 26 ರನ್‌ ಚಚ್ಚಿಸಿಕೊಂಡ ಪಾಂಡ್ಯ – ಹಾರ್ದಿಕ್‌ ಕಳಪೆ ಬೌಲಿಂಗ್‌ಗೆ ಫುಲ್‌ ಕ್ಲಾಸ್‌

    ಕೊನೇ ಓವರ್‌ನಲ್ಲಿ 26 ರನ್‌ ಚಚ್ಚಿಸಿಕೊಂಡ ಪಾಂಡ್ಯ – ಹಾರ್ದಿಕ್‌ ಕಳಪೆ ಬೌಲಿಂಗ್‌ಗೆ ಫುಲ್‌ ಕ್ಲಾಸ್‌

    – 500 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಮಹಿ
    – ಹ್ಯಾಟ್ರಿಕ್‌ ಸಿಕ್ಸರ್‌ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್‌

    ಮುಂಬೈ: ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ವಿರುದ್ಧ ಸೂಪರ್‌ ಸಂಡೆ ನಡೆದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಕಳಪೆ ಬೌಲಿಂಗ್‌ ಮಾಜಿ ಕ್ರಿಕೆಟಿಗರ ಬೇಸರಕ್ಕೆ ಕಾರಣವಾಗಿದೆ. ಕಳೆದ 2 ಪಂದ್ಯಗಳಲ್ಲಿ ಬೌಲಿಂಗ್‌ ಮಾಡದ ಪಾಂಡ್ಯ ಸಿಎಸ್‌ಕೆ ವಿರುದ್ಧ ಹೆಚ್ಚು ರನ್‌ ಹೊಡೆಸಿಕೊಂಡಿದ್ದು ಭಾರೀ ಟಿಕೆಗೆ ಗುರಿಯಾಗಿದ್ದಾರೆ. ಪಾಂಡ್ಯ ವಿರುದ್ಧ ಸುನೀಲ್‌ ಗವಾಸ್ಕರ್‌, ಇರ್ಫಾನ್‌ ಪಠಾಣ್‌ ಅವರಂತಹ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದ್ದಾರೆ.

    ಮುಂಬೈ ತಂಡದ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ (Sunil Gavaskar), ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ಕಳಪೆಯಾಗಿತ್ತು. ಅವರ ಬೌಲಿಂಗ್‌ ಸಹ ಅಷ್ಟೇನು ಪರಿಣಾಮ ಬೀರಲಿಲ್ಲ, ಸಾಮಾನ್ಯ ಬೌಲಿಂಗ್‌ ಆಗಿತ್ತು. ಬಹುಶಃ ನಾನು ದೀರ್ಘಕಾಲದ ನಂತರ ನೋಡಿದ ಅತ್ಯಂತ ಕೆಟ್ಟ ಬೌಲಿಂಗ್‌ ಇದಾಗಿತ್ತು. ಯಾವುದೇ ಬ್ಯಾಟರ್‌ಗಳು ಸಾಮಾನ್ಯವಾಗಿ ಸ್ಟ್ರೈಟ್‌ ಲೆಂತ್‌ ಬಾಲ್‌ ಹಾಗೂ ಲೆಗ್‌ಸೈಡ್‌ ಫುಲ್‌ಟಾಸ್‌ ಬಾಲ್‌ಗಳನ್ನ ಹುಡುಕುತ್ತಾರೆ. ಅಂತಹ ಅವಕಾಶಗಳು ಸಿಕ್ಕಾಗ ಸಿಕ್ಸರ್‌ ಬಾರಿಸುತ್ತಾರೆ. ಮಹಿ ಈ ಅವಕಾಶವನ್ನೂ ಸರಿಯಾಗಿ ಬಳಸಿಕೊಂಡರು, ಆದ್ರೆ ಪಾಂಡ್ಯ ಅವರ ಬೌಲಿಂಗ್‌ ನಿಯಂತ್ರಿಸುವಲ್ಲಿ ವಿಫಲವಾಗಿತ್ತು ಎಂದು ಟೀಕಿಸಿದ್ದಾರೆ.

    ಇನ್ನೂ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಕುರಿತು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ (Irfan Pathan), ಕೊನೇ ಓವರ್‌ನಲ್ಲಿ ಕ್ಯಾಪ್ಟನ್‌ ಪಾಂಡ್ಯ ತಾವೇ ಬೌಲಿಂಗ್‌ಗೆ ಇಳಿದಿದ್ದು, ಆಕಾಶ್‌ ಮಧ್ವಾಲ್‌ ಅವರ ಬೌಲಿಂಗ್‌ ಮೇಲಿನ ನಂಬಿಕೆಯ ಕೊರತೆಯನ್ನು ತೋರಿಸಿದೆ. ಅಲ್ಲದೇ ಡೆತ್‌ ಓರವ್‌ ಬೌಲರ್‌ ಆಗಿ ಅವರ ಕೌಶಲ್ಯದ ಕೊರತೆಯನ್ನೂ ತೋರಿಸಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

    ಕೊನೇ ಓವರ್‌ ಥ್ರಿಲ್ಲರ್‌:
    ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಪರ ಕೊನೇ ಓವರ್‌ ರೋಚಕವಾಗಿತ್ತು. 19 ಓವರ್‌ಗಳಲ್ಲಿ ಸಿಎಸ್‌ಕೆ 180 ರನ್‌ಗಳನ್ನಷ್ಟೇ ಗಳಿಸಿತ್ತು. ಕೊನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಪಾಂಡ್ಯ ಒಂದು ಎಸೆತ ಪೂರೈಸುವಷ್ಟರಲ್ಲೇ 2 ವೈಡ್‌, 1 ಬೌಂಡರಿ ಚಚ್ಚಿಸಿಕೊಂಡು 6 ರನ್‌ ಬಿಟ್ಟುಕೊಟ್ಟಿದ್ದರು. 2ನೇ ಎಸೆತದಲ್ಲಿ ಡೇರಿಲ್‌ ಮಿಚೆಲ್‌ ಕ್ಯಾಚ್‌ ನೀಡಿ ಔಟಾದರು. ನಂತರ ಕ್ರೀಸ್‌ಗಿಳಿದ ಮಹಿ, ಪಾಂಡ್ಯ ಅವರ 3,4,5ನೇ ಎಸೆತಗಳನ್ನು ಸತತವಾಗಿ ಹ್ಯಾಟ್ರಿಕ್‌ ಸಿಕ್ಸರ್‌ಗಟ್ಟಿದರು, ಕೊನೇ ಎಸೆತದಲ್ಲಿ 2 ರನ್‌ ಬಾರಿಸಿದರು. ಇದರಿಂದ ಸಿಎಸ್‌ಕೆ ತಂಡ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಕೊನೇ ಓವರ್‌ನಲ್ಲಿ 26 ರನ್‌ ಬಿಟ್ಟುಕೊಟ್ಟ ಪಾಂಡ್ಯ ತಾವು ಮಾಡಿದ 3 ಓವರ್‌ಗಳಲ್ಲಿ 2 ವಿಕೆಟ್‌ ಪಡೆದು 43 ರನ್‌ ಚಚ್ಚಿಸಿಕೊಂಡಿದ್ದರು.

    ಹುಚ್ಚೆದ್ದು ಕುಣಿದ ಮಹಿ ಫ್ಯಾನ್ಸ್‌:
    ಕೊನೇ 4 ಎಸೆತಗಳನ್ನ ಎದುರಿಸಿದರೂ 500 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಧೋನಿ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅಂತಿಮ ಓವರ್‌ನಲ್ಲಿ ಕಣಕ್ಕಿಳಿದರೂ ಕೇವಲ 4 ಎಸೆತಗಳಲ್ಲೇ 20 ರನ್‌ ಚಚ್ಚಿದರು. ಅಂತಿಮವಾಗಿ ಸಿಎಸ್‌ಕೆ ಮುಂಬೈ ವಿರುದ್ಧ 20 ರನ್‌ಗಳ ಜಯ ಸಾಧಿಸಿತು.

  • ಅವನಿಗಿಂತ ಉತ್ತಮ ಫಿನಿಶರ್ ಇಲ್ಲ, ಆತ T20 ವಿಶ್ವಕಪ್ ಪಂದ್ಯಕ್ಕೆ ಅರ್ಹ – ಬಜ್ಜಿ ಹೇಳಿದ್ದು ಯಾರಿಗೆ?

    ಅವನಿಗಿಂತ ಉತ್ತಮ ಫಿನಿಶರ್ ಇಲ್ಲ, ಆತ T20 ವಿಶ್ವಕಪ್ ಪಂದ್ಯಕ್ಕೆ ಅರ್ಹ – ಬಜ್ಜಿ ಹೇಳಿದ್ದು ಯಾರಿಗೆ?

    ಮುಂಬೈ: 2022ರ IPL ಆವೃತ್ತಿ ಹೊಸ – ಹೊಸ ಪ್ರತಿಭೆಗಳು ಹುಟ್ಟಿಕೊಳ್ಳುವಂತೆ ಮಾಡಿದೆ. ಕಳೆದ ಐಪಿಎಲ್‌ನಲ್ಲಿ ಕಳಪೆ ಆಟ ಪ್ರದರ್ಶಿಸಿ ಟೀಂ ಇಂಡಿಯಾದಿಂದ ಹೊರಗುಳಿಯುವ ಸಾಧ್ಯತೆಗಳಿದ್ದ ಪ್ಲೇಯರ್‌ಗಳು ಈ ಬಾರಿ ಬೆಸ್ಟ್ ಕ್ರಿಕೆಟರ್ಸ್ ಎನ್ನಿಸಿಕೊಂಡಿದ್ದಾರೆ. ಇನ್ನು ಕೆಲ ಹಿರಿಯ ಆಟಗಾರರು ಲಯ ಕಂಡುಕೊಂಡು ಶಹಬ್ಬಾಸ್ ಎನಿಸಿಕೊಳ್ಳುತ್ತಿದ್ದಾರೆ.

    dinesh karthik

    ಟೀ-20 ವಿಶ್ವಕಪ್‌ನಲ್ಲಿ ಕಳೆದ ಬಾರಿ ಲೀಗ್ ಹಂತದಲ್ಲೇ ಹೊರಗುಳಿದಿದ್ದ ಟೀಂ ಇಂಡಿಯಾ ಈ ಬಾರಿ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದು, ಅದಕ್ಕಾಗಿ ಯಾವೆಲ್ಲಾ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಚರ್ಚೆಯನ್ನೂ ನಡೆಸುತ್ತಿದೆ. ಈ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಹಾಗೂ ಸುನೀಲ್ ಗವಾಸ್ಕರ್ ಓರ್ವ ಆಟಗಾರನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಟೀಕೆಗಳ ನಡುವೆಯೂ ಮೈಲಿಗಲ್ಲು ಸಾಧಿಸಿದ ಕಿಂಗ್ ಕೊಹ್ಲಿ

    ಒಂದು ವೇಳೆ ನಾನು ಆಯ್ಕೆಗಾರರ ಸಮಿತಿಯಲ್ಲಿದ್ದರೆ, ಆತನನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಎಂದು ಭರವಸೆ ನೀಡಿದ್ದಾರೆ. ಅದು ಮತ್ಯಾರೂ ಅಲ್ಲ, ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್.

    dinesh karthik

    ಈ ಕುರಿತು ಮಾತನಾಡಿರುವ ಸಿಂಗ್, ದಿನೇಶ್ ಕಾರ್ತಿಕ್ ಆರ್‌ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಪಂದ್ಯವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ನನ್ನ ಪ್ರಕಾರ, ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಫಿನಿಷರ್ ಯಾರೆಂದರೆ ಅದು ದಿನೇಶ ಕಾರ್ತಿಕ್. ಅವರು ಆಫ್ ಸೈಡ್‌ಗಿಂತಲೂ ಲೆಗ್ ಸೈಡ್‌ನಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಅವರಿಗಿಂತ ಉತ್ತಮ ಫಿನಿಷರ್ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ನಾನು ಆಯ್ಕೆಗಾರನಾದರೆ, ದಿನೇಶ್ ಕಾರ್ತಿಕ್‌ಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಲಿದ್ದೇನೆ. ಆತ ಅರ್ಹನಾಗಿದ್ದಾನೆ. ಟೀಂ ಇಂಡಿಯಾಕ್ಕೆ ಅತ್ಯುತ್ತಮ ಫಿನಿಶರ್ ಬೇಕೆಂದಿದ್ದರೆ ಅದು ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ಆಗಿರಬೇಕು. ಅವರು ತಂಡವನ್ನು ಬಲಿಷ್ಠಗೊಳಿಸುತ್ತಾರೆ ಎಂದು ಹರ್ಭಜನ್ ಹೇಳಿದ್ದಾರೆ. ಇದನ್ನೂ ಓದಿ: RCB ಫ್ಯಾನ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ – ಎಬಿಡಿ ಮತ್ತೆ ಎಂಟ್ರಿ

    dinesh karthik

    15ನೇ ಆವೃತ್ತಿಯ ಐಪಿಎಲ್‌ನ 12 ಪಂದ್ಯಗಳಲ್ಲಿ 274 ರನ್‌ಗಳಿಸಿರುವ ದಿನೇಶ್ ಕಾರ್ತಿಕ್ ಕೆಲ ಮ್ಯಾಚ್‌ಗಳಲ್ಲಿ ಉತ್ತಮ ಫಿನಿಶರ್ ಆಗಿ ಬ್ಯಾಟಿಂಗ್ ಅಬ್ಬರಿಸಿದ್ದಾರೆ. ಮುಂದಿನ ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ತಂಡದೊಂದಿಗೆ ಟಿ20 ಸರಣಿ ನಡೆಯಲಿದೆ. ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಮಾತುಗಳು ಕೇಳಿಬರುತ್ತಿವೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಸಹ, ಕಳೆದ ಬಾರಿ ಟಿ20 ವರ್ಲ್ಡ್ ಕಪ್‌ನಲ್ಲಿ ದಿನೇಶ್ ಕಾರ್ತಿಕ್ ಆಯ್ಕೆಯಾಗಲಿಲ್ಲ. ಆದರೆ ಈ ಬಾರಿ ಐಪಿಎಲ್‌ನಲ್ಲಿ ಅವರು ಆಡಿದ ರೀತಿ ಉತ್ತಮವಾಗಿದೆ. ನಾನು ಆಯ್ಕೆ ತಂಡದಲ್ಲಿದ್ದರೆ, ಖಂಡಿತವಾಗಿ ದಿನೇಶ್ ಕಾರ್ತಿಕ್ ಅವರನ್ನು ಟಿ20 ವರ್ಲ್ಡ್ ಕಪ್‌ಗೆ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    IPL 2022 GT VS LSG

    ರೇಸ್‌ನಲ್ಲಿ ಪಾಂಡ್ಯ: ಕಳೆದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಈ ಬಾರಿ ಹೊಸ ತಂಡದ ಮೂಲಕ ನಾಯಕನಾಗಿ ಪ್ರತಿನಿಧಿಸಿದ್ದು, ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದಾರೆ. ತಂಡದ ನಾಯಕನಾಗಿ ಉತ್ತಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಈ ಐಪಿಎಲ್‌ನ 12 ಪಂದ್ಯಗಳಲ್ಲಿ 273 ರನ್‌ಗಳನ್ನು ಸಿಡಿಸಿ, ತಂಡ ಸೇರ್ಪಡೆಯಾದ ಮೊದಲ ಐಪಿಎಲ್‌ನಲ್ಲೇ ಪ್ಲೇ ಆಫ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್‌ರನ್ನು ಭೇಟಿ ಮಾಡಿದ ರಕ್ಷ್

    ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್‌ರನ್ನು ಭೇಟಿ ಮಾಡಿದ ರಕ್ಷ್

    ಬೆಂಗಳೂರು: ಕಿರುತೆರೆ ನಟ, ಗಟ್ಟಿಮೇಳ ಖ್ಯಾತಿಯ ವೇದಾಂತ್ ಪಾತ್ರಧಾರಿಯ ರಕ್ಷ್ ಅವರು ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಅವರನ್ನು ಭೇಟಿ ಮಾಡಿದ್ದಾರೆ.

    ಇತ್ತೀಚೆಗೆ ರಕ್ಷ್, ಸುನೀಲ್ ಗವಾಸ್ಕರ್ ಅವರನ್ನು ಭೇಟಿ ಮಾಡಿದ್ದು, ಅವರ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, ಈ ಲೆಜೆಂಡ್ ಅನ್ನು ಭೇಟಿ ಆದ ಕ್ಷಣ ಸುಂದರವಾಗಿತ್ತು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ನಿಮ್ಮ ಜೀವನದಲ್ಲಿ ನೀವು ಭೇಟಿಯಾದ ನೂರು ಜನರನ್ನು ಸೂಕ್ಷ್ಮವಾಗಿ ಗಮನಿಸಿದರೆ, ನೀವು ನೂರು ಪುಸ್ತಕಗಳನ್ನು ಓದಿದ್ದೀರಿ ಎಂದು ಅರ್ಥ. ನೀವು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪುಸ್ತಕದಂತೆ. ಕೆಲವು ಬೋರಿಂಗ್, ಕೆಲವು ಅದ್ಭುತ, ಕೆಲವು ಶಕ್ತಿಯುತ, ಕೆಲವು ದುರ್ಬಲ. ಆದರೆ ಅವೆಲ್ಲವೂ ಬಹಳ ಉಪಯೋಗವಾಗಿದೆ. ಏಕೆಂದರೆ ಅವೆಲ್ಲವೂ ವಿಭಿನ್ನ ಅನುಭವಗಳನ್ನು ಹೊಂದಿದೆ ಎಂದು ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

    ಕಳೆದ ತಿಂಗಳು ರಕ್ಷ್ ತಮ್ಮ ಹುಟ್ಟುಹಬ್ಬಕ್ಕಾಗಿ ದುಬಾರಿ ಆಡಿ ಎ5 ಸ್ಪೋರ್ಟ್ ಬ್ಯಾಕ್ ಕಾರು ಖರೀದಿಸಿದ್ದರು. ಈ ಬಗ್ಗೆ ಸ್ವತಃ ರಕ್ಷ್ ತಮ್ಮ ಇನ್‍ಸ್ಟಾದಲ್ಲಿ ಹೇಳಿಕೊಂಡಿದ್ದರು. ಈ ಪೋಸ್ಟ್ ನಂತರ ರಕ್ಷ್ ಕ್ರೆಡಿಟ್ಸ್ ಕರುನಾಡ ಜನತೆಯ ಆಶೀರ್ವಾದ ಹಾಗೂ ಪ್ರೀತಿ ಎಂದು ಬರೆದಿದ್ದರು. ರಕ್ಷ್ ಅವರ ಪೋಸ್ಟ್‌ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭ ಕೋರಿದ್ದರು.

    ನಟ ರಕ್ಷ್ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಮಹೇಶ್ ಪಾತ್ರ ಮಾಡಿದ್ದು, ಪ್ರೇಕ್ಷಕರ ಮನ ಗೆದ್ದಿದ್ದರು. ಧಾರಾವಾಹಿ ಮುಗಿದ ಕೆಲವು ದಿನಗಳ ನಂತರ ರಕ್ಷಿತ್ ಎಂಬ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದರು. ಸದ್ಯ ರಕ್ಷ್ ಇದೀಗ `ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

  • ಬುಮ್ರಾ ಬೌಲಿಂಗ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಿಷಪ್ ಬಾಯಿ ಮುಚ್ಚಿಸಿದ ಗವಾಸ್ಕರ್

    ಬುಮ್ರಾ ಬೌಲಿಂಗ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಿಷಪ್ ಬಾಯಿ ಮುಚ್ಚಿಸಿದ ಗವಾಸ್ಕರ್

    ಕಿಂಗ್‍ಸ್ಟನ್: ಬುಮ್ರಾ ಬೌಲಿಂಗ್ ಶೈಲಿಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಇಯಾನ್ ಬಿಷಪ್ ಅವರಿಗೆ ಸುನಿಲ್ ಗವಾಸ್ಕರ್ ತಿರುಗೇಟು ನೀಡಿ ಬಾಯಿ ಬಂದ್ ಮಾಡಿದ ಪ್ರಸಂಗ ಕಾಮೆಂಟ್ರಿ ಬಾಕ್ಸ್ ನಲ್ಲಿ ನಡೆದಿದೆ.

    ಎರಡನೇ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ಮತ್ತು ವಿಂಡೀಸಿದ ಮಾಜಿ ಆಟಗಾರ ಇಯಾನ್ ಬಿಷಪ್ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡುತ್ತಿದ್ದರು. ಹ್ಯಾಟ್ರಿಕ್ ಸಾಧನೆಗೈದ ಬುಮ್ರಾ ಅವರ ಬೌಲಿಂಗ್ ಪ್ರದರ್ಶನದ ಬಗ್ಗೆ ಮಾತನಾಡುತ್ತಿದ್ದ ಬಿಷಪ್, ಬುಮ್ರಾ ಅವರ ಬೌಲಿಂಗ್ ಶೈಲಿಯ ಬಗ್ಗೆ ಕೆಲವರು ಸಂದೇಹ ವ್ಯಕ್ತಪಡಿಸಿ ಪ್ರಶ್ನೆ ಎತ್ತಿದ್ದರು ಎಂದು ಹೇಳಿದರು.

    ಈ ಮಾತು ಬರುತ್ತಿದ್ದಂತೆ ಕೂಡಲೇ ಮಧ್ಯಪ್ರವೇಶ ಮಾಡಿದ ಗವಾಸ್ಕರ್, “ಪ್ರಶ್ನೆ ಮಾಡಿದ ವ್ಯಕ್ತಿಗಳು ಯಾರು? ಅವರ ಹೆಸರು ಹೇಳಬಹುದೇ?” ಎಂದು ಖಾರವಾದ ಪ್ರಶ್ನೆ ಹಾಕಿದರು. ಆದರೆ ಬಿಷಪ್ ಪ್ರಶ್ನೆ ಎತ್ತಿದವರ ಹೆಸರನ್ನು ಹೇಳದೇ ಈ ವಿಚಾರದಿಂದ ಜಾರಿಕೊಂಡರು.

    ಬುಮ್ರಾ ಬೌಲಿಂಗ್ ಶೈಲಿ ವಿಭಿನ್ನವಾಗಿದೆ. ಕ್ರಿಕೆಟ್ ನಿಯಮದ ಪ್ರಕಾರ ಇದು ಸರಿಯೂ ಹೌದು. ಆದರೆ ಕೆಲವರು ಬೌಲಿಂಗ್ ಶೈಲಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಎಂದು ಬಿಷಪ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

    ಕೂಡಲೇ ಗವಾಸ್ಕರ್ ಅವರು, ಈ ರೀತಿ ಸಂದೇಹ ವ್ಯಕ್ತಪಡಿಸಿದ ವ್ಯಕ್ತಿಗಳ ಹೆಸರನ್ನು ಹೇಳಿ ಎನ್ನುವ ಪ್ರಶ್ನೆಗೆ ಬಿಷಪ್ ಉತ್ತರ ನೀಡಲಿಲ್ಲ. ನಂತರ ಕಮೆಂಟ್ರಿ ಮುಂದುವರಿಸಿದ ಗವಾಸ್ಕರ್, ಬಹಳ ಹತ್ತಿರದಿಂದ ಬುಮ್ರಾ ಬೌಲಿಂಗ್ ಶೈಲಿಯನ್ನು ನೀವು ಗಮನಿಸಿ. ಓಡಿಕೊಂಡು ಬಂದು ಸ್ಟಂಪ್ ಹತ್ತಿರ ಬಂದು ಅಂತಿಮವಾಗಿ ಚೆಂಡನ್ನು ನೇರವಾಗಿ ತೋಳಿನಿಂದ ಬಿಡುತ್ತಾರೆ. ತೋಳು ಬಾಗಿರುವುದು ಎಲ್ಲಿ ಎನ್ನುವುದು ನೀವು ಈಗ ನನಗೆ ವಿವರಿಸಿ. ಬುಮ್ರಾ ಸರಿಯಾಗಿಯೇ ಬಾಲ್ ಹಾಕುತ್ತಿದ್ದಾರೆ. ಸರಿಯಾಗಿದ್ದರೂ ಈ ರೀತಿ ಪ್ರಶ್ನೆ ಮಾಡುವ ಜನರಿಗೆ ಬೇರೆ ಕೆಲಸ ಇಲ್ಲ ಎಂದು ಅಲ್ಲೇ ಖಡಕ್ ತಿರುಗೇಟು ನೀಡಿದರು.

    ವಿಂಡೀಸ್ ವಿರುದ್ಧ ಬುಮ್ರಾ ಹ್ಯಾಟ್ರಿಕ್ ಸಾಧನೆ ಮಾಡಿದ್ದು ಅಲ್ಲದೇ 6 ವಿಕೆಟ್ ಕಿತ್ತಿದ್ದಾರೆ. ಒಟ್ಟು 9.1 ಓವರ್ ಬೌಲ್ ಮಾಡಿದ ಬುಮ್ರಾ 3 ಓವರ್ ಮೇಡನ್ ಮಾಡಿ 16 ರನ್ ನೀಡಿ 6 ವಿಕೆಟ್ ಕಿತ್ತಿದ್ದಾರೆ. ಬುಮ್ರಾ ತಮ್ಮ ನಾಲ್ಕನೇ ಓವರ್ ನಲ್ಲಿ ಡೈರೆನ್ ಬ್ರಾವೋ, ಶಮಾರಾ ಬ್ರೂಕ್ಸ್ ಮತ್ತು ರೋಸ್ಟನ್ ಚೆಸ್ ಅವರ ವಿಕೆಟ್ ಪಡೆದರು. ಈ ಮೊದಲು ಆಸ್ಟ್ರೇಲಿಯಾ ವಿರುದ್ಧ ಹರ್ಭಜನ್ ಸಿಂಗ್ ಮತ್ತು ಪಾಕಿಸ್ತಾನದ ವಿರುದ್ಧ ಇರ್ಫಾನ್ ಪಠಾಣ್ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದರು. ಭಾರತ 416 ರನ್ ಗಳಿಗೆ ಆಲೌಟ್ ಆಗಿದ್ದರೆ ವಿಂಡೀಸ್ 33 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿದೆ.

     

  • ಧೋನಿ ರಣಜಿ ಆಡುವುದು ಒಳ್ಳೆ ಚಿಂತನೆ ಅಲ್ಲ : ಜಾರ್ಖಂಡ್ ಕೋಚ್

    ಧೋನಿ ರಣಜಿ ಆಡುವುದು ಒಳ್ಳೆ ಚಿಂತನೆ ಅಲ್ಲ : ಜಾರ್ಖಂಡ್ ಕೋಚ್

    ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಆಸೀಸ್ ಟೂರ್ನಿಯಲ್ಲಿ ಭಾಗವಹಿಸದ ಕಾರಣ ರಣಜಿ ಪಂದ್ಯದಲ್ಲಿ ಆಡಬೇಕಿತ್ತು ಎಂದು ಟೀಕೆ ಮಾಡಿದ್ದ ವಿಶ್ಲೇಷಕರಿಗೆ ಜಾರ್ಖಂಡ್ ತಂಡಧ ಕೋಚ್ ಉತ್ತರಿಸಿದ್ದು, ಇದು ಯುವ ಕ್ರಿಕೆಟ್ ಆಟಗಾರರ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

    ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಕೋಚ್ ರಾಜೀವ್ ಕುಮಾರ್, ಧೋನಿ ರಣಜಿ ಕ್ರಿಕೆಟ್ ಆಡುವುದು ಒಳ್ಳೆಯ ಚಿಂತನೆ ಅಲ್ಲ. ಏಕೆಂದರೆ ಹಲವು ಯುವ ಆಟಗಾರರು ಪಂದ್ಯದಲ್ಲಿ ಆಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿ ಆಯ್ಕೆಗಾರರ ಗಮನ ಸೆಳೆಯಲು ಶ್ರಮಿಸುತ್ತಿದ್ದಾರೆ. ಆದರೆ ಧೋನಿ ಆಡುವುದರಿಂದ ಯುವ ಆಟಗಾರರ ಅವಕಾಶ ಕೈ ತಪ್ಪುತ್ತದೆ ಎಂದು ತಿಳಿಸಿದ್ದಾರೆ.

    ಧೋನಿ ಯುವ ಆಟಗಾರರ ಬಗ್ಗೆ ಸಾಕಷ್ಟು ಆಸಕ್ತಿ ವಹಿಸಿದ್ದು ತರಬೇತಿ ವೇಳೆ ಹಲವು ಬಾರಿ ಹಾಜರಿದ್ದು, ಬ್ಯಾಟಿಂಗ್ ಸೇರಿದಂತೆ ಹಲವು ವಿಚಾರಗಳಲ್ಲಿ ಸಲಹೆ ನೀಡಿದ್ದಾರೆ. ಇದರಿಂದ ಆಟಗಾರರ ಪ್ರದರ್ಶನ ಶೈಲಿಯೇ ಬದಲಾಗಿದೆ. ಇದು ಆಟಗಾರರಿಗೆ ಮತ್ತಷ್ಟು ಸಹಕಾರಿ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್, ಧೋನಿ ಹಾಗೂ ಶಿಖರ್ ಧವನ್ ಆಸೀಸ್ ಟೂರ್ನಿಯಲ್ಲಿ ಭಾಗವಹಿಸದಿದ್ದರು ಯಾಕೆ ರಣಜಿ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದರು.

    ಧೋನಿ ಆಸೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗಿರಲಿಲ್ಲ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಟೆಸ್ಟ್ ಟೂರ್ನಿ ಆಡಿಲ್ಲ. ಅಂದರೆ ಅಕ್ಟೋಬರ್ ನಿಂದ ಮುಂದಿನ ಜನವರಿ ವರೆಗೂ ಧೋನಿ ಟೀಂ ಇಂಡಿಯಾ ಪರ ಆಡಿಲ್ಲ. ಅದ್ದರಿಂದ ರಣಜಿ ಟೂರ್ನಿಯಲ್ಲಿ ಧೋನಿ ಭಾಗವಹಿಸಬೇಕಿತ್ತು. ಒಂದೊಮ್ಮೆ ಆಸೀಸ್ ಹಾಗೂ ಮುಂದಿನ ನ್ಯೂಜಿಲೆಂಡ್ ಸರಣಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡದಿದ್ದರೆ, ಮುಂದಿನ ವಿಶ್ವಕಪ್ ತಂಡಕ್ಕೆ ಧೋನಿ ಆಯ್ಕೆ ಮಾಡುವ ಪ್ರಶ್ನೆ ಉದ್ಭವಿಸುತ್ತದೆ. ಆಟದಲ್ಲಿ ಹೆಚ್ಚಿನ ಸಮಯ ವಿಶ್ರಾಂತಿ ತೆಗೆದುಕೊಳ್ಳುವುದು ಹೆಚ್ಚಿನ ಪರಿಣಾಮ ಉಂಟುಮಾಡುತ್ತದೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದರು.

    ಉಳಿದಂತೆ ಜನವರಿ 12 ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಧೋನಿ ಭಾಗವಹಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv