Tag: ಸುನಿಲ್ ಆಚಾರ್ಯ

  • ರಾಂಧವನಿಗಾಗಿ ಗೃಹಬಂಧನ ವಿಧಿಸಿಕೊಂಡಿದ್ದರಂತೆ ಭುವನ್!

    ರಾಂಧವನಿಗಾಗಿ ಗೃಹಬಂಧನ ವಿಧಿಸಿಕೊಂಡಿದ್ದರಂತೆ ಭುವನ್!

    ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ ರಾಂಧವ. ಯಾರೇ ಆದರೂ ಮೊದಲ ಹೆಜ್ಜೆಯಲ್ಲಿಯೇ ನಿರ್ವಹಿಸಲು ಹಿಂದೇಟು ಹಾಕುವಂಥಾ ಪಾತ್ರಗಳೊಂದಿಗೇ ಭುವನ್ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ. ಸುನಿಲ್ ಆಚಾರ್ಯ ನಿರ್ದೇಶನದ ಈ ಚಿತ್ರದಲ್ಲಿ ಭುವನ್ ಮೂರು ಶೇಡ್‍ಗಳ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಪಾತ್ರಗಳಿಗೆ ಅವರು ರೆಡಿಯಾದ ರೀತಿಯೇ ಒಂದು ಮಜವಾದ ಕಥೆ.

    ಹಾಗಂತ ಭುವನ್ ಹೀಗೆ ಇಂಥಾ ಪಾತ್ರಗಳಿಗೆ ಅಣಿಗೊಂಡಿದ್ದರ ಹಿಂದೆ ಬರೀ ಚೇತೋಹಾರಿ ಅನುಭವಗಳು ಮಾತ್ರವೇ ಇಲ್ಲ. ಅಲ್ಲಿ ಸಂಕಟದ, ಮನೋವ್ಯಾಕುಲದ ಅನುಭವಗಳೂ ದಂಡಿಯಾಗಿವೆ. ಇಂಥಾ ಒಂದಷ್ಟು ಅನುಭವಗಳನ್ನು ಖುದ್ದು ಭುವನ್ ಹಂಚಿಕೊಂಡಿದ್ದಾರೆ. ರಾಂಧವದಲ್ಲಿ ಭುವನ್ ಪಾತ್ರಕ್ಕೆ ಒಟ್ಟು ಮೂರು ಶೇಡುಗಳಿವೆ. ಅದರಲ್ಲಿ ರಾಬರ್ಟ್, ರಾಜ ರಾಂಧವ ಮತ್ತು ರಾಣಾ ಎಂಬ ಶೇಡುಗಳಿಗೆ ಭುವನ್ ತಿಂಗಳ ಕಾಲ ರೆಡಿಯಾಗಿದ್ದಾರೆ.

    ಅದರಲ್ಲಿಯೂ ರಾಬರ್ಟ್ ಪಾತ್ರ ಭುವನ್ ನಿಜವಾದ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ. ರಾಬರ್ಟ್ ಪಕ್ಷಿ ಶಾಸ್ತ್ರಜ್ಞ. ಆತ ಮಾತಾಡೋದೇ ಕಡಿಮೆ. ಎಲ್ಲ ಭಾವನೆಗಳನ್ನೂ ಕೂಡಾ ಎಕ್ಸ್ ಪ್ರೆಷನ್ ಮೂಲಕವೇ ತೋರಿಸಿ ಮೌನವಾಗಿರೋದು ಆ ಪಾತ್ರದ ವಿಶೇಷತೆ. ಅದನ್ನು ಸೀದಾ ಸೆಟ್ಟಿಗೆ ಹೋಗಿ ನಿರ್ವಹಿಸೋದು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ತಯಾರಿ ಬೇಕೆಂಬುದು ಭುವನ್‍ಗೆ ಮನವರಿಕೆಯಾಗಿತ್ತು. ಆದ್ದರಿಂದಲೇ ಮೌನವನ್ನು ಮನನ ಮಾಡಿಕೊಳ್ಳಲು ತಿಂಗಳುಗಳ ಕಾಲ ಏಕಾಂತದಲ್ಲಿರಲು ಅವರು ನಿರ್ಧರಿಸಿದ್ದರು.

    ಇದರನ್ವಯ ಮನೆಯೊಳಗೆ ಬಂಧಿಯಾದ ಭುವನ್ ಮೂರೂವರೆ ತಿಂಗಳ ಕಾಲ ಹೊರಗೇ ಬಂದಿರಲಿಲ್ಲ. ಹೆಚ್ಚಾಗಿ ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಅಡುಗೆ ಮಾಡಿ ಹಾಕುವವರೊಬ್ಬರು ಬಿಟ್ಟರೆ ಬೇರ್ಯಾರೂ ಅವರ ಸಂಪರ್ಕದಲ್ಲಿರಲಿಲ್ಲ. ಪ್ರತೀ ದಿನ ಗೆಳೆಯರೊಂದಿಗೆ ಕಲೆತು ಖುಷಿಗೊಳ್ಳುತ್ತಿದ್ದ ಭುವನ್‍ಗೆ ಮೂರೂವರೆ ತಿಂಗಳಾಗೋ ಹೊತ್ತಿಗೆಲ್ಲ ಹುಚ್ಚು ಹಿಡಿಯುವಂಥಾ ಪರಿಸ್ಥಿತಿ ಬಂದೊದಗಿತ್ತು. ಆದರೆ ಹಾಗೆ ಹೊರ ಬರೋ ಹೊತ್ತಿಗೆಲ್ಲ ಭುವನ್ ರಾಬರ್ಟ್ ಪಾತ್ರವಾಗಿ ಬದಲಾಗಿದ್ದರಂತೆ. ಇಂಥಾ ತಯಾರಿಯೊಂದಿಗೇ ರಾಬರ್ಟ್ ಪಾತ್ರ ಪರಿಣಾಮಕಾರಿಯಾಗಿ ಮೂಡಿ ಬಂದಿದೆಯಂತೆ.

  • ಆಡಿಯೋ ಲಾಂಚ್ ಮೂಲಕ ಐತಿಹಾಸಿ ಹೆಜ್ಜೆಯಿಟ್ಟ ರಾಂಧವ!

    ಆಡಿಯೋ ಲಾಂಚ್ ಮೂಲಕ ಐತಿಹಾಸಿ ಹೆಜ್ಜೆಯಿಟ್ಟ ರಾಂಧವ!

    ಬೆಂಗಳೂರು: ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಚಿತ್ರ ಇದೇ ಆಗಸ್ಟ್ ಹದಿನೈದರಂದು ಬಿಡುಗಡೆಯಾಗಲು ರೆಡಿಯಾಗಿದೆ. ಭುವನ್ ಪೊನ್ನಣ್ಣ ನಾನಾ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿರೋ ರೀತಿ, ಕಥೆಯ ಬಗ್ಗೆ ಚಿತ್ರತಂಡ ಜಾಹೀರು ಮಾಡಿರೋ ಒಂದಷ್ಟು ಸುಳಿವುಗಳ ಮೂಲಕವೇ ರಾಂಧವ ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ಇನ್ನೇನು ಬಿಡುಗಡೆಗೆ ಒಂದಷ್ಟು ದಿನಗಳು ಬಾಕಿಯಿರುವಾಗಲೇ ರಾಂಧವನ ಆಡಿಯೋ ಲಾಂಚ್ ಮಾಡಲಾಗಿದೆ. ಈ ಕಾರ್ಯಕ್ರಮದ ಮೂಲಕವೇ ಚಿತ್ರತಂಡ ಐತಿಹಾಸಿಕ ಹೆಜ್ಜೆಯೊಂದರ ಮೂಲಕ ಗಮನ ಸೆಳೆದಿದೆ.

    ಸಿನಿಮಾಗಳ ಯಾವುದೇ ಸಮಾರಂಭವಿದ್ದರೂ ಅಲ್ಲಿ ತಾರೆಯರದ್ದೇ ಕಾರುಬಾರು. ಆಡಿಯೋ ಬಿಡುಗಡೆಯಂಥಾದ್ದಕ್ಕೂ ಸ್ಟಾರ್‍ಗಳನ್ನು ಮಾತ್ರವೇ ಕರೆಸುವಂಥಾ ಪರಿಪಾಠವೂ ಬೆಳೆದು ಬಂದಿದೆ. ಆದರೆ ರಾಂಧವ ತಂಡ ಆಡಿಯೋ ಬಿಡುಗಡೆ ಮಾಡಿಸಿರೋದು ಈ ನಾಡಿನ ಅನ್ನದಾತರಾದ ರೈತರು ಮತ್ತು ದೇಶ ಕಾಯಲು ಬದುಕನ್ನೇ ಮುಡಿಪಾಗಿಟ್ಟಿರುವ ಯೋಧರಿಂದ. ಈ ಮೂಲಕ ರಾಂಧವ ಚಿತ್ರತಂಡ ಹೊಸ ಪರಂಪರೆಗೆ ನಾಂದಿ ಹಾಡಿದೆ.

    ಹೀಗೆ ಹೊಸ ರೀತಿಯಲ್ಲಿ, ರೈತರು ಮತ್ತು ಯೋಧರು ಬಿಡುಗಡೆಗೊಳಿಸಿರೋ ರಾಂಧವ ಚಿತ್ರದ ಹಾಡುಗಳಿಗೆ ಪ್ರೇಕ್ಷಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆಗಳೇ ಬರುತ್ತಿವೆ. ಈವರೆಗೂ ಗಾಯಕರಾಗಿದ್ದ ಶಶಾಂಕ್ ಶೇಷಗಿರಿ ತಮ್ಮ ಗೆಳೆಯ ಸುನೀಲ್ ಆಚಾರ್ಯ ನಿರ್ದೇಶನ ಮಾಡಿರೋ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿಯೂ ಬಡ್ತಿ ಹೊಂದಿದ್ದಾರೆ. ಈ ಮೊದಲ ಹೆಜ್ಜೆಯಲ್ಲಿಯೇ ತಾಜಾತನದಿಂದ ಕೂಡಿರುವ ಸಂಗೀತದ ಪಟ್ಟುಗಳೊಂದಿಗೆ ಹಾಡುಗಳನ್ನು ಕಟ್ಟಿ ಕೊಡುವ ಮೂಲಕ ಭರವಸೆಯನ್ನೂ ಮೂಡಿಸಿದ್ದಾರೆ. ನಿರ್ದೇಶಕ ಸುನೀಲ್ ಆಚಾರ್ಯರ ಕಥೆಗೆ, ಕಲ್ಪನೆಗೆ ಪೂರಕವಾಗಿ ಮೂಡಿ ಬಂದಿರೋ ಈ ಹಾಡುಗಳು ಸೂಪರ್ ಹಿಟ್ ಆಗುವತ್ತ ಮುನ್ನುಗ್ಗುತ್ತಿವೆ.

  • ಟ್ವಿಟ್ಟರ್ ನಲ್ಲಿ ರಾಂಧವ ಹವಾ!

    ಟ್ವಿಟ್ಟರ್ ನಲ್ಲಿ ರಾಂಧವ ಹವಾ!

    ಬೆಂಗಳೂರು: ಸುನಿಲ್ ಆಚಾರ್ಯ ಚೊಚ್ಚಲ ನಿರ್ದೇಶನದ ರಾಂಧವ ಚಿತ್ರ ಆರಂಭದಿಂದ ಇಲ್ಲಿಯವರೆಗೂ ಪ್ರತೀ ಹಂತದಲ್ಲಿಯೂ ಸುದ್ದಿಗೆ ಗ್ರಾಸವಾಗುತ್ತಾ ಬಂದಿದೆ. ಈ ಮೂಲಕವೇ ಪ್ರೇಕ್ಷಕರ ಗಮನವನ್ನೂ ತನ್ನತ್ತಲೇ ಕೇಂದ್ರೀಕರಿಸಿಕೊಂಡಿರೋ ಈ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಈ ಹೊತ್ತಿನಲ್ಲಿಯೇ ಸಾಮಾಜಿಕ ಜಾಲತಾಣಗಳ ತುಂಬಾ ರಾಂಧವನ ಸದ್ದು ಜೋರಾಗಿದೆ. ಟ್ವಿಟರ್ ನಲ್ಲಿಯಂತೂ ಈ ಸಿನಿಮಾ ಸೃಷ್ಟಿಸಿರೋ ಹವಾ ನಿರ್ಣಾಯಕವಾಗಿದೆ.

    ಇದೇ ತಿಂಗಳ ಹದಿನೇಳರಂದು ರಾಂಧವನ ಟೈಟಲ್ ಸಾಂಗ್ ರಿಲೀಸ್ ಆಗಲಿದೆ ಎಂಬ ಸುದ್ದಿ ಹೊರ ಬೀಳುತ್ತಲೇ ಈ ಚಿತ್ರ ಮತ್ತೆ ಸುದ್ದಿ ಕೇಂದ್ರ ತಲುಪಿಕೊಂಡಿದೆ. ಟ್ವಿಟರ್ ನಲ್ಲಂತೂ ಟ್ರೆಂಡಿಂಗ್‍ನಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ತನ್ನಿಂದ ತಾನೇ ಹವಾ ಸೃಷ್ಟಿಯಾಗುತ್ತಿರೋದನ್ನು ಕಂಡು ಚಿತ್ರತಂಡವೂ ಖುಷಿಗೊಂಡಿದೆ.

    ಇದು ರಾಂಧವ ಚಿತ್ರದ ಸಂಗೀತ ನಿರ್ದೇಶಕ ಶಶಾಂಕ್ ಅವರ ಪಾಲಿಗೂ ಮಹತ್ವದ ವಿಚಾರ. ಯಾಕೆಂದರೆ ಈಗಾಗಲೇ ಬಹು ಬೇಡಿಕೆಯ ಗಾಯಕರಾಗಿ ನೆಲೆ ಕಂಡುಕೊಂಡಿರುವ ಅವರು ಈ ಸಿನಿಮಾ ಮೂಲಕವೇ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂಗೀತವನ್ನು ತಪಸ್ಸಿನಂತೆ ಸ್ವೀಕರಿಸಿರೋ ಶಶಾಂಕ್ ಪಾಲಿಗೆ ಈಗ ಸಿಗುತ್ತಿರೋ ಆರಂಭಿಕ ಉತ್ತೇಜನ ಹೊಸಾ ಹುರುಪು ತುಂಬಿದೆ.

    ಇನ್ನುಳಿದಂತೆ ಸುನಿಲ್ ಅವರ ಪಾಲಿಗೂ ನಿರ್ದೇಶಕರಾಗಿ ಇದು ಮೊದಲ ಹೆಜ್ಜೆ. ಒಂದೊಳ್ಳೆ ಕಥೆಯನ್ನು ವರ್ಷಾಂತರಗಳ ಕಾಲ ಜತನದಿಂದ ರಚಿಸಿದ್ದ ಸುನಿಲ್ ಅದನ್ನೇ ದೃಶ್ಯವಾಗಿಸಿದ್ದಾರೆ. ಎರಡು ವರ್ಷಗಳ ಸುದೀರ್ಘಾವಧಿ ತೆಗೆದುಕೊಂಡು ಇಡೀ ಚಿತ್ರವನ್ನು ಅಂದುಕೊಂಡಂತೆಯೇ ಅಚ್ಚುಕಟ್ಟಾಗಿ ಮಾಡಿ ಮುಗಿಸಿರೋ ತೃಪ್ತಿಯೂ ಅವರಲ್ಲಿದೆ. ಇದೀಗ ಟೈಟಲ್ ಟ್ರ್ಯಾಕಿನ ಮೂಲಕ ಮತ್ತೆ ರಾಂಧವನ ಆರ್ಭಟ ಆರಂಭವಾಗಿದೆ.

    https://www.youtube.com/watch?v=eRpnWE0j_mQ