Tag: ಸುನಿಲ್ ಅರೋರಾ

  • 5 ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟ – ಮೇ 2ಕ್ಕೆ ಫಲಿತಾಂಶ

    5 ರಾಜ್ಯಗಳ ಚುನಾವಣೆ ದಿನಾಂಕ ಪ್ರಕಟ – ಮೇ 2ಕ್ಕೆ ಫಲಿತಾಂಶ

    – ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಪುದುಚೇರಿಯಲ್ಲಿ ಚುನಾವಣೆ
    – ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ

    ನವದೆಹಲಿ: ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ್ದು, ಮತ ಎಣಿಕೆ ಮೇ 2 ರಂದು ನಡೆಯಲಿದೆ.

    ಚುನಾವಣಾ ಆಯೋಗದ ಆಯುಕ್ತ ಸುನಿಲ್ ಅರೋರಾ ಸುದ್ದಿಗೋಷ್ಠಿ ನಡೆಸಿ ದಿನಾಂಕವನ್ನು ಪ್ರಕಟಿಸಿದ್ದು, ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.

    ಕೇರಳ ಹಾಗೂ ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 6ರಂದು ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ 8 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಮಾರ್ಚ್ 27, ಏಪ್ರಿಲ್ 1 ರಂದು 2ನೇ ಹಂತ, ಏಪ್ರಿಲ್ 6ರಂದು 3ನೇ ಹಂತದ ಮತದಾನ ನಡೆಯಲಿದೆ. ಎಲ್ಲ ರಾಜ್ಯಗಳ ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.

    ಕೇರಳದ 140, ತಮಿಳುನಾಡು 234, ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಿವೆ. ಇತ್ತೀಚೆಗಷ್ಟೇ ವಿ.ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿದ್ದರಿಂದ ಪುದುಚೇರಿ ಕೇಂದ್ರಾಡಳಿತ ಪ್ರದೇಶದ 30 ಕ್ಷೇತ್ರಗಳಲ್ಲಿ ಸಹ ಚುನಾವಣೆ ನಡೆಯಲಿದೆ.

    ಮತಗಟ್ಟೆಗಳಲ್ಲಿನ ಸಿದ್ಧತೆ, ಭದ್ರತೆ ಸೇರಿದಂತೆ ಕೊರೊನಾ ನಿಯಮಗಳ ಪಾಲನೆ ಕುರಿತು ಚುನಾವಣೆ ಆಯೋಗದ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಿದ್ದು, ಭಾರೀ ಬಂದೋಬಸ್ತ್ ನೊಂದಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ.

    ಒಟ್ಟು 824 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 18.6 ಕೋಟಿ ಮತದಾರರು ಮತದಾನ ಮಾಡುತ್ತಿದ್ದು, 2.7 ಲಕ್ಷ ಬೂತ್‍ಗಳನ್ನು ಸ್ಥಾಪಿಸಲಾಗುತ್ತದೆ. ವ್ಯಾಕ್ಸಿನೇಷನ್ ಆಗಿರುವುದರಿಂದ ಸಕಾರಾತ್ಮಕ ವಾತಾವರಣ ಉಂಟಾಗಿದೆ. ಚುನಾವಣೆ ಪ್ರಚಾರದ ವೇಳೆ ರೋಡ್ ಶೋಗಳನ್ನು ನಡೆಸಬಹುದು ಎಂದು ಚುನಾವಣಾ ಆಯೋಗ ಅನುಮತಿ ನೀಡಿದೆ. ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು ಹಾಗೂ ಅಗತ್ಯ ವಸ್ತುಗಳ ಉದ್ಯೋಗಿಗಳಿಗೆ ಮಾತ್ರ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.

  • ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಸುನಿಲ್ ಅರೋರಾ ನೇಮಕ

    ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಸುನಿಲ್ ಅರೋರಾ ನೇಮಕ

    ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಸುನಿಲ್ ಅರೋರಾ ಅವರನ್ನು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ನೇಮಿಸಿದ್ದಾರೆ.

    ಓಂ ಪ್ರಕಾಶ್ ರಾವತ್ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಸುನಿಲ್ ಅರೋರಾ ಅವರನ್ನು ನೇಮಕ ಮಾಡಲಾಗಿದೆ. ಸುನಿಲ್ ಅವರಿಗೆ ಇಂದು ಅಧಿಕಾರ ಹಸ್ತಾಂತರಿಸಲಾಗಿದ್ದು, ಅಕ್ಟೋಬರ್ 2021ರವೆರೆಗೆ ಕಾರ್ಯನಿರ್ವಹಿಸಲಿದ್ದಾರೆ. ಸುನಿಲ್ ಅರೋರಾ ಅವರು 2017 ಆಗಸ್ಟ್ 31ರಂದು ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದರು.

    ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆ ಹಾಗೂ ಜಮ್ಮು-ಕಾಶ್ಮೀರ, ಓಡಿಶಾ, ಮಹಾರಾಷ್ಟ್ರ, ಹರಿಯಾಣ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ಚುನಾವಣೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

    ಸುನಿಲ್ ಅರೋರಾ ಅವರು 1980ರ ಬ್ಯಾಚ್‍ನ ರಾಜಸ್ಥಾನದ ಐಎಎಸ್ ಅಧಿಕಾರಿಯಾಗಿದ್ದಾರೆ. 1993-1998ರವರೆಗೆ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ಕೇಂದ್ರ ಹಣಕಾಸು, ಯೋಜನಾ ಆಯೋಗ ಹಾಗೂ ಜವಳಿ ಸೇರಿದಂತೆ ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೌಶಲ್ಯಾಭಿವೃದ್ಧಿ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

    ಅಧಿಕಾರ ಸ್ವೀಕರಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸುನಿಲ್ ಅರೋರಾ ಅವರು, 2019ರ ಲೋಕಸಭಾ ಚುನಾವಣೆಗಾಗಿ ಆಂತರಿಕ ಸಿದ್ಧತೆಗಳನ್ನು ಆಯೋಗ ಆರಂಭಿಸಿದೆ. ಪ್ರತಿಯೊಬ್ಬರೂ ಮತದಾನ ಮಾಡುವ ಹಕ್ಕನ್ನು ಹೊಂದುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv