Tag: ಸುದ್ದಿಗೋಷ್ಟಿ

  • ಸಿದ್ದರಾಮಯ್ಯ ವಿರುದ್ಧ ನಾನು ಯಾವತ್ತೂ  ಮಾತನಾಡಿಲ್ಲ, ಅವರ ಬಗ್ಗೆ ಗೌರವವಿದೆ – ಜಿಟಿಡಿ

    ಸಿದ್ದರಾಮಯ್ಯ ವಿರುದ್ಧ ನಾನು ಯಾವತ್ತೂ ಮಾತನಾಡಿಲ್ಲ, ಅವರ ಬಗ್ಗೆ ಗೌರವವಿದೆ – ಜಿಟಿಡಿ

    ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾನು ಯಾವತ್ತೂ ಮಾತನಾಡಿಲ್ಲ. ಅವರ ಮೇಲೆ ನನಗೆ ಗೌರವವಿದೆ ಎಂದು ಸಚಿವ ಜಿ.ಟಿ ದೇವೇಗೌಡ ಅವರು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯವರು ನನ್ನ ಬಗ್ಗೆ ಟ್ವೀಟ್ ಮಾಡಿರುವುದು ನನಗೆ ಗೊತ್ತಿಲ್ಲ. ನಾನು ಅದನ್ನು ನೋಡಿಲ್ಲ ಎಂದು ಹೇಳಿದ್ದಾರೆ.

    ಮೈತ್ರಿ ಧರ್ಮದಿಂದ ನನ್ನ ಬಾಯಿ ಕಟ್ಟಿಹಾಕಿದ್ದಾರೆ ಹಾಗಾಗಿ ನನ್ನ ಟಾರ್ಗೆಟ್ ಮಾಡಿ ಮೊದಲು ಜಿಟಿಡಿ ಮಾತನಾಡಿದರು ಈಗ ವಿಶ್ವನಾಥ್ ಮಾತನಾಡಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಯಾಕೆ ನನ್ನ ಹೆಸರು ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಾನು ಅವರು ಜೊತೆಯಲ್ಲಿ ಇದ್ದಾಗ, ಅವರು ಬೇರೆ ಪಕ್ಷಕ್ಕೆ ಹೋದಾಗ, ಅವರು ಮುಖ್ಯಮಂತ್ರಿಯಾದಾಗ ನಾನು ವಿರೋಧ ಪಕ್ಷದಲ್ಲಿ ಶಾಸಕನಾಗಿದ್ದಾಗ ಎಲ್ಲೂ ನಾನು ಅವರ ವಿರುದ್ಧ ಮಾತನಾಡಿಲ್ಲ. ಅವರ ಮೇಲೆ ನನಗೆ ಅಪಾರವಾದ ಗೌರವವಿದೆ ಎಂದು ಹೇಳಿದರು.

    ಇದೇ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಮಾತನಾಡಬೇಕು. ಸಿದ್ದರಾಮಯ್ಯನವರೇ 5 ವರ್ಷ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದಾರೆ. ಅವರೇ ಹೇಳಿದ್ದಾರೆ ಅಂದ ಮೇಲೆ ನಾವು ಬೇರೆ ಮಾತನ್ನು ಆಡಬಾರದು. ವಿಶ್ವನಾಥ್ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದರು.

    ಮೇ 23ರ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಮೈತ್ರಿ ಸರ್ಕಾರ ಇರಲ್ಲ ಎಂಬ ಬಿಜೆಪಿ ನಾಯಕರ ಮಾತಿಗೆ ತಿರುಗೇಟು ಕೊಟ್ಟ ಅವರು, ರಿಸಲ್ಟ್ ಬರುವುದು ಕೇಂದ್ರದಲ್ಲಿ. ಯಾವ ಸರ್ಕಾರ ರಚನೆಯಾಗಬೇಕು ಎಂದು ಆ ರಿಸಲ್ಟ್ ಗೂ ರಾಜ್ಯ ಸರ್ಕಾರಕ್ಕೂ ಏನ್ ಸಂಬಂಧ? ರಾಜ್ಯ ಸರ್ಕಾರ ಹೇಗೆ ಪತನವಾಗುತ್ತೆ ಎಂದು ಪ್ರಶ್ನೆ ಮಾಡಿದರು.

    ಮಾಜಿ ಕಾಂಗ್ರೆಸ್ ಶಾಸಕ ಚೆಲುವರಾಯಸ್ವಾಮಿ ಅವರು ಮೈಸೂರಿನಲ್ಲಿ ಜಿಟಿ ದೇವೇಗೌಡರು ಮೈತ್ರಿ ಧರ್ಮ ಪಾಲನೆ ಮಾಡಿಲ್ಲ ಎಂಬ ಮಾತಿಗೆ ತಿರುಗೇಟು ಕೊಟ್ಟ ಅವರು, ಅ ಮಾತಿನ ಅರ್ಥ ಏನು ಎಂದು ಅವರನ್ನೇ ಕೇಳಬೇಕು. ನಾನು ಎಲ್ಲವನ್ನು ಮರೆತು ಸಿದ್ದರಾಮಯ್ಯ ಜೊತೆ ಪ್ರಚಾರ ಮಾಡಿದ್ದೇನೆ. ಮೈತ್ರಿ ಧರ್ಮವನ್ನು ಪಾಲಿಸಿದ್ದೇನೆ. ಆದರೆ ಮಂಡ್ಯದಲ್ಲಿ ಅವರು ಪಾಲಿಸಿಲ್ಲ ಎಂದು ಅವರೇ ನೇರವಾಗಿ ಒಪ್ಪಿಕೊಂಡಿದ್ದಾರೆ. ಜಿಟಿಡಿ ಹೇಗೆ ಕೆಲಸ ಮಾಡಿದ್ದಾರೆ ಅಂತ ಚೆಲುವರಾಯಸ್ವಾಮಿಯನ್ನೆ ಕೇಳಿ ಎಂದರು.

    ಕುಮಾರಸ್ವಾಮಿ ಅವರು ದೇವಸ್ಥಾನಕ್ಕೆ ಹೋಗುವುದೆಲ್ಲ ಟೀಕೆ ಟಿಪ್ಪಣೆಯೇ? ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಲ್ಲರೂ ದೇವಸ್ಥಾನಕ್ಕೆ ಹೋಗಿದ್ದಾರೆ. ದೇವರು ಮನಸ್ಸಿಗೆ ಬಂದಾಗ ದೇವಾಲಯಕ್ಕೆ ಹೋಗುತ್ತಾರೆ. ಅದನ್ನೆ ಟೀಕೆ ಟಿಪ್ಪಣಿ ಮಾಡೋದು ಸರಿಯಲ್ಲ. ನೀರಿಲ್ಲ, ಮೇವಿಲ್ಲ ಆ ವಿಚಾರವನ್ನು ಕೇಳುವುದು ನಿಮ್ಮ ಕೆಲಸ. ಜನಪ್ರತಿನಿಧಿಗಳು ಪ್ರತಿ ಪಕ್ಷದ ನಾಯಕರು ಈ ಬಗ್ಗೆ ನೋಡಿಕೊಂಡು ಮಾತನಾಡಬೇಕು ಎಂದು ಸಿಎಂ ಅವರ ದೇವಸ್ಥಾನಕ್ಕೆ ಹೋಗಿದ್ದನ್ನು ಸಮರ್ಥಿಸಿಕೊಂಡರು.

  • ನಿಮಗೆ ಜನ ಸೇವಕ ಬೇಕೋ? ಅಳುವ ನಾಯಕ ಬೇಕೋ? ನೀವೇ ನಿರ್ಧರಿಸಿ: ನಟ ಉಪೇಂದ್ರ

    ನಿಮಗೆ ಜನ ಸೇವಕ ಬೇಕೋ? ಅಳುವ ನಾಯಕ ಬೇಕೋ? ನೀವೇ ನಿರ್ಧರಿಸಿ: ನಟ ಉಪೇಂದ್ರ

    ಚಿಕ್ಕಬಳ್ಳಾಪುರ: ನಿಮಗೆ ಜನ ಸೇವಕ ಬೇಕೋ? ಅಳುವ ನಾಯಕ ಬೇಕೋ ಎನ್ನುವುದನ್ನು ನೀವೇ ನಿರ್ಧರಿಸಿ ಎಂದು ನಟ ಉಪೇಂದ್ರ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಮುನಿರಾಜು ಪರ ಪಕ್ಷದ ಸಂಸ್ಥಾಪಕ ನಟ ಉಪೇಂದ್ರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮದು ರಾಜಕಾರಣ ಅಲ್ಲ ಪ್ರಜಾಕಾರಣ, 72 ವರ್ಷಗಳಿಂದಲೂ ಇರುವ ರಾಜಕಾರಣದ ಮನಸ್ಥಿತಿಯನ್ನು ಜನರಿಂದ ಬದಲಾವಣೆ ಮಾಡುವ ಸದುದ್ದೇಶದಿಂದಲೇ ಪಕ್ಷ ಅಸ್ತಿತ್ವಕ್ಕೆ ಬಂದಿದೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ನಾವು ನಾಯಕರೂ ಅಲ್ಲ, ನಾವೂ ಜನರ ಸೇವಕರು, ಜನರಿಗಾಗಿ ಕೂಲಿ ಪಡೆದು ಕೆಲಸ ಮಾಡುವ ಕಾರ್ಮಿಕರಾಗಿರುತ್ತೇವೆ ಎಂದರು.

    ಎಲ್ಲಾ ರಾಜಕಾರಣಿಗಳು, ಪಕ್ಷಗಳಂತೆ ನಾವು ಯಾವುದೇ ಚುನಾವಣಾ ರ್ಯಾಲಿ, ಸಭೆ, ಸಮಾರಂಭಗಳನ್ನು ನಡೆಸುವುದಿಲ್ಲ, ಯಾವುದೇ ಪೊಳ್ಳು ಭರವಸೆಗಳ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವುದಿಲ್ಲ. ಕೇವಲ ಪ್ರಚಾರದ ಭಿತ್ತಿ ಪತ್ರಗಳನ್ನಷ್ಟೇ ಜನರಿಗೆ ನೀಡಿ ತಮ್ಮ ಅಭ್ಯರ್ಥಿಯ ಆಟೋ ಗುರುತಿಗೆ ಮತ ನೀಡಿ ಎಂದು ಮನವಿ ಮಾಡ್ತೇವೆ. ಅದೇ ಭಿತ್ತಿ ಪತ್ರದಲ್ಲಿ ನಿಮ್ಮ ಸಮಸ್ಯೆಗಳು, ಬೇಡಿಕೆಗಳು. ಆದೇಶಗಳನ್ನು ನಮಗೆ ಕೊಡುವಂತೆ ಜನರ ಬಳಿ ತಿಳಿಸುತ್ತೇವೆ ಎಂದು ಹೇಳಿದರು.

    ಜನರೇ ಪ್ರಜಾಕಾರಣದ ಸಿದ್ದಾಂತಗಳನ್ನು ಮೆಚ್ಚಿ ಮತ ನೀಡಬೇಕು ಹೊರತು ನಾವು ರ್ಯಾಲಿ ಸಭೆ ಸಮಾರಂಭಗಳ ಮೂಲಕ ಮತದಾರರನ್ನು ಮುಟ್ಟುವುದಿಲ್ಲ. ಒಬ್ಬರಿಂದ ಒಬ್ಬರಿಗೆ ಮಾಧ್ಯಮಗಳ ಮೂಲಕ ಜನರಿಗೆ ಪ್ರಜಾಕಾರಣದ ಸಿದ್ದಾಂತಗಳು ತಿಳಿದು ಒಂದು ದಿನ ಪ್ರಜಾಕಾರಣ ಪಕ್ಷ ಮೇಲೆ ಬರುತ್ತದೆ. ಹೀಗಾಗಿ ಒಂದು ವೇಳೆ ಪ್ರಜಾಕಾರಣ ಸಿದ್ದಾಂತಗಳ ವಿಭಿನ್ನ ಪ್ರಯತ್ನ ಯಶಸ್ವಿಯಾದರೆ ಇಡೀ ಇಂಡಿಯಾವೇ ಪ್ರಜಾಕಾರಣಕ್ಕೆ ಬದಲಾಗುತ್ತೆ. ಒಂದಲ್ಲ ಒಂದು ದಿನ ಪ್ರಜಾಕಾರಣಕ್ಕೆ ಯಶಸ್ಸು ಸಿಕ್ಕೇ ಸಿಗುತ್ತೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.

    ನಟ ಉಪೇಂದ್ರ ಜೊತೆ ಸೆಲ್ಫಿಗಾಗಿ ಸಾಕಷ್ಟು ಮಂದಿ ಮುಗಿಬಿದ್ದರು. ಮತ್ತೊಂದೆಡೆ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ಜೊತೆ ಖಾಕಿ ಶರ್ಟ್, ಕರಿ ಪ್ಯಾಂಟ್, ಟೈ ಧರಿಸಿ, ಗುರುತಿನ ಚೀಟಿ ಹಾಕಿ ಅಭ್ಯರ್ಥಿ ಮುನಿರಾಜು ಭಾಗವಹಿಸಿದ್ದು ವಿಶೇಷವಾಗಿತ್ತು. ಅಭ್ಯರ್ಥಿಗಳ ಪರ ಮತಯಾಚನೆ ಮಾಡುವ ಉದ್ದೇಶದಿಂದ ತಾವು ಸ್ಪರ್ಧೆ ಮಾಡುತ್ತಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಉಪೇಂದ್ರ ತಿಳಿಸಿದರು.

  • ಅಪಘಾತವಾಗಿ 3ನೇ ದಿನವೂ ದರ್ಶನ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ- ವೈದ್ಯರು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ

    ಅಪಘಾತವಾಗಿ 3ನೇ ದಿನವೂ ದರ್ಶನ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ- ವೈದ್ಯರು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸುವ ಸಾಧ್ಯತೆಗಳಿವೆ. ಅಲ್ಲದೇ ದರ್ಶನ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

    ದರ್ಶನ್ ಅವರಿಗೆ ಅಪಘಾತವಾದ ಮೂರನೇ ದಿನವೂ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ನಟ ದರ್ಶನ್ ಅವರ ಆರೋಗ್ಯ ಬಗ್ಗೆ ವೈದ್ಯರು ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ. ವೈದ್ಯರು ಇಂದು ಸುದ್ದಿಗೋಷ್ಟಿ ನಡೆಸುವ ಸಾಧ್ಯತೆಗಳಿದ್ದು, ಸದ್ಯ ಆಸ್ಪತ್ರೆಯಲ್ಲಿ ದರ್ಶನ್ ಹಾಗೂ ಅವರ ಸ್ನೇಹಿತ ಆಂಟೋನಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಈ ಅಪಘಾತದಲ್ಲಿ ಗಾಯಗೊಂಡಿದ್ದ ನಟ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರು ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಘಟನೆಯೇನು?:
    ಶನಿವಾರ ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬ ಮೈಸೂರು ಮೃಗಾಲಯಕ್ಕೆ ತೆರಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದರು. ಆ ಬಳಿಕ ಮೈಸೂರಿನಲ್ಲೇ ಉಳಿದುಕೊಂಡು ಸೋಮವಾರ ಮುಂಜಾನೆ ಅಲ್ಲಿಂದ ಹೊರಟಿದ್ದರು. ಹೀಗೆ ಕಾರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ಹೊರವಲಯದ ಹಿನಕಲ್ ಬಳಿ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಅವರ ಬಲಗೈನ ಮೂಳೆ ಮುರಿದಿದ್ದು, ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬಲಗೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಂತ್ರಸ್ತರಿಗೆ ತಾತ್ಕಾಲಿಕ 3,500 ರೂ. ಪರಿಹಾರ: 2 ಸಾವಿರ ಅಲ್ಯುಮಿನಿಯಮ್ ಶೆಡ್ ನಿರ್ಮಾಣ

    ಸಂತ್ರಸ್ತರಿಗೆ ತಾತ್ಕಾಲಿಕ 3,500 ರೂ. ಪರಿಹಾರ: 2 ಸಾವಿರ ಅಲ್ಯುಮಿನಿಯಮ್ ಶೆಡ್ ನಿರ್ಮಾಣ

    ಬೆಂಗಳೂರು: ಕೊಡಗು ಪ್ರವಾಹ ಪರಿಸ್ಥಿತಿ ಕುರಿತು ಕೈಗೊಂಡಿರುವ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಎಲ್ಲಾ ಸಂತ್ರಸ್ತರಿಗೂ ಹೊಸ ಜೀವನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದ್ದಾರೆ.

    ನೆರೆ ಪರಿಹಾರ ಕುರಿತು ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಸಿಎಂ, ಅತಿಯಾದ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಅನಾಹುತವಾಗಿದ್ದು, ಸರ್ಕಾರ ತಕ್ಷಣ ಸ್ಪಂದನೆ ಮಾಡಿದೆ. ಇದರಲ್ಲಿ ಯಾವುದೇ ಲೋಪ ಆಗಿಲ್ಲ. ಕಳೆದ ತಿಂಗಳು ಕೊಡಗಿಗೆ ಭೇಟಿ ನೀಡಿದ್ದ ವೇಳೆಯೂ ಮೂಲಭೂತ ಸೌಲಭ್ಯ ಕಲ್ಪಿಸಲು 100 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿತ್ತು. ಆಗಸ್ಟ್ 13 ಹಾಗೂ 14ರ ಬಳಿಕ ಕೊಡಗು ಜಿಲ್ಲೆಯಲ್ಲಿ ಅನೇಕ ಕಡೆ ಗುಡ್ಡ ಕುಸಿತ ಪ್ರಾರಂಭವಾಗಿತ್ತು. ಸತಕ್ಷಣದಿಂದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠ ಅಧಿಕಾರಿಗಳು ಶ್ರಮಪಟ್ಟು ಕಾರ್ಯನಿರ್ವಹಿಸಿದ್ದಾರೆ ಎಂದರು.

    ಸದ್ಯ ಕಾರ್ಯಾಚರಣೆಯಲ್ಲಿ 1,725 ಕ್ಕೂ ಹೆಚ್ಚಿನ ರಕ್ಷಣಾ ಸಿಬ್ಬಂದಿ ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಭೂಸೇನೆ, ವಾಯುಪಡೆ, ರಾಷ್ಟ್ರೀಯ ವಿಪತ್ತು ಪಡೆ, ಎನ್‍ಸಿಸಿ ಸೇರಿದಂತೆ ವಿಶೇಷ ಪಡೆಗಳು ಕೆಲಸ ಮಾಡುತ್ತಿವೆ. ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ವಿಶೇಷವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೇ ಪುನರ್ವಸತಿ ಕೇಂದ್ರ ನಿರ್ವಹಣೆಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

    ಇದುವರೆಗೂ ರಾಜ್ಯದಲ್ಲಿ ಮಳೆಯಿಂದ 152 ಜನ ಮೃತರಾಗಿದ್ದಾರೆ. ಇದರಲ್ಲಿ ಕೊಡಗಿನಲ್ಲಿ ಕೇವಲ 7 ಜನರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ವರದಿ ಬಂದಿದೆ. ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲೆಯ ಉಸ್ತುವರಿ ಸಚಿವರು, ಡಿಸಿಎಂ ಸೇರಿದಂತೆ ಬಿಬಿಎಂಪಿ ಪೌರ ಕಾರ್ಮಿಕರು ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಹಿಮಾಚಲ ಪ್ರದೇಶದಲ್ಲಿ ಇಂತಹ ಭೂ ಕುಸಿತ ಪ್ರಕರಣ ಹೆಚ್ಚಾಗಿದ್ದು, ಅಲ್ಲಿನ ತಜ್ಞರ ಜೊತೆ ಮಾತನಾಡಿ ಇಬ್ಬರು ತಜ್ಞರನ್ನು ಹಿಮಾಚಲ ಪ್ರದೇಶದಿಂದ ಕರೆಯಿಸಿಕೊಳ್ಳಲಾಗಿದೆ. ಅಲ್ಲದೇ ಹೈದ್ರಾಬಾದಿನ ಭೂ ವಿಜ್ಞಾನಿಗಳನ್ನು ಕರೆಯಲಾಗಿದೆ. ಭೂಕಂಪದಂತಹ ಯಾವುದೇ ಸುದ್ದಿಗೆ ಜನರು ಅಂತಕ ಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಜೊತೆಗಿದೆ ಎಂದರು.

    ಇದುವರೆಗೂ ಕೊಡಗಿನಲ್ಲಿ 845 ಮನೆ ನಾಶವಾಗಿದ್ದು, 773 ಮನೆಗಳು ಭಾಗಶಃ ಹಾನಿಯಾಗಿದೆ. 123 ಕಿಲೋಮೀಟರ್ ರಸ್ತೆ ಹಾನಿಯಾಗಿದೆ. 58 ಸೇತುವೆ, 3,800 ವಿದ್ಯುತ್ ಕಂಬ ಹಾನಿಯಾಗಿದೆ. ಅದಷ್ಟು ಬೇಗ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಕೊಡಗಿನಲ್ಲಿ 41 ಪರಿಹಾರ ಕೇಂದ್ರ, ದಕ್ಷಿಣ ಕನ್ನಡದಲ್ಲಿ 9 ಕೇಂದ್ರ ಸ್ಥಾಪನೆ ಮಾಡಿ 6,620 ಸಂತ್ರಸ್ತರಿಗೆ ಪರಿಹಾರ ಕೇಂದ್ರದಲ್ಲಿ ಆಶಯ ನೀಡಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಶೌಚಾಲಯ ಕೊರತೆ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ ಎಂದರು.

    ನಿರಾಶ್ರಿತರಿಗೆ ನರೇಗಾ ಯೋಜನೆ ಅಡಿ ಕೆಲಸ ನೀಡಲು ಸೂಚನೆ ನೀಡಲಾಗಿದ್ದು, 2 ಸಾವಿರ ಅಲ್ಯುಮಿನಿಯಂ ಶೆಡ್ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ತಾತ್ಕಾಲಿಕ ಪರಿಹಾರವಾಗಿ ನೆರೆ ಸಂತ್ರಸ್ತರಿಗೆ 3,800 ಪರಿಹಾರ ಹಣ ಹಾಗೂ ಆಹಾರ ಪದಾರ್ಥ ನೀಡಲಾಗುತ್ತದೆ. ನಾಳೆಯಿಂದ ಎಲ್ಲಾ ಕೆಲಸ ಆರಂಭವಾಗುತ್ತದೆ. ಶಾಶ್ವತ ಪರಿಹಾರ ನೀಡಲು ಎಷ್ಟೇ ಹಣ ವೆಚ್ಚವಾದರು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv