Tag: ಸುಂಟರಗಾಳಿ

  • ಅಮೆರಿಕದಲ್ಲಿ ಭೀಕರ ಸುಂಟರಗಾಳಿಗೆ 7 ಬಲಿ

    ಅಮೆರಿಕದಲ್ಲಿ ಭೀಕರ ಸುಂಟರಗಾಳಿಗೆ 7 ಬಲಿ

    ವಾಷಿಂಗ್ಟನ್‌: ಅಮೆರಿಕದ (US) ಅರ್ಕಾನ್ಸಾಸ್‌ ಮತ್ತು ಇಲಿನಾಯ್ಸ್‌ ರಾಜ್ಯಗಳಲ್ಲಿ ಬೀಸಿದ ಭೀಕರ ಸುಂಟಗಾಳಿಗೆ (Tornado) ಅಪಾರ ಪ್ರಮಾಣದ ನಷ್ಟವುಂಟಾಗಿದ್ದು, 7 ಜನರು ಸಾವಿಗೀಡಾಗಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದಾರೆ.

    ಹವಾಮಾನ ವೈಪರಿತ್ಯ ಪರಿಣಾಮವಾಗಿ ಮಿಸೌರಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಘಟನೆ ಕುರಿತು ಮಾತನಾಡಿದ ಲಿಟಲ್ ರಾಕ್‌ನ ಮೇಯರ್ ಫ್ರಾಂಕ್ ಸ್ಕಾಟ್ ಜೂನಿಯರ್, ಕನಿಷ್ಠ 30 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 2,000 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಎಂದು ಹೇಳಿದರು. ಚಂಡಮಾರುತವು ವ್ಯಾಪಾರಗಳು ಮತ್ತು ಅಪಾರ್ಟ್ಮೆಂಟ್ ಸಂಕೀರ್ಣಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನ – ಭಾರತೀಯರು ಸೇರಿ 8 ಮಂದಿ ಸಾವು

    ಭೀಕರ ಸುಂಟರಗಾಳಿಗೆ ನಾರ್ತ್ ಲಿಟಲ್ ರಾಕ್‌ನಲ್ಲಿ ಒಬ್ಬ ಮತ್ತು ವೈನ್ನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೆಲ್ವಿಡೆರೆಯಲ್ಲಿನ ಥಿಯೇಟರ್‌ನಲ್ಲಿ ಮೇಲ್ಛಾವಣಿ ಕುಸಿದು ಒಬ್ಬ ಸಾವಿಗೀಡಾಗಿದ್ದಾನೆ. ಥಿಯೇಟರ್‌ನಲ್ಲಿ 260 ಜನರಿದ್ದರು. ಅವರ ಪೈಕಿ 28 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಲ್ಲಿವಾನ್ ಕಂಟ್ರಿ, ಇಂಡಿನಲ್ಲಿ, ಶೆರ್ಮನ್‌ನ ಪೂರ್ವಕ್ಕೆ ಸರಿಸುಮಾರು 150 ಮೈಲುಗಳಷ್ಟು ಸುಂಟರಗಾಳಿ ಭೀಕರವಾಗಿ ಬೀಸಿದ್ದು, ಈ ಭಾಗದಲ್ಲಿ ಮೂರು ಮೃತಪಟ್ಟಿದ್ದಾರೆ.

    ಇಂಡಿಯಾನಾ, ಇಲಿನಾಯ್ಸ್, ಅರ್ಕಾನ್ಸಾಸ್ ಮತ್ತು ಟೆನ್ನೆಸ್ಸೀಯಲ್ಲಿ ಸುಮಾರು 4,50,000 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ವ್ಯಾಪಾರ, ವ್ಯವಹಾರಕ್ಕೆ ತೊಂದರೆಯುಂಟಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಇದನ್ನೂ ಓದಿ: ಪಾಕ್‌ನಲ್ಲಿ ಪಡಿತರ ವಿತರಣೆ ವೇಳೆ ಕಾಲ್ತುಳಿತಕ್ಕೆ ಸಿಕ್ಕಿ 11 ಮಂದಿ ಸಾವು

    ಕಳೆದ ವಾರ ಅಮೆರಿಕದ (America) ದಕ್ಷಿಣ ರಾಜ್ಯ ಮಿಸಿಸಿಪ್ಪಿಯಲ್ಲಿ ಬೀಸಿದ ಸುಂಟರಗಾಳಿಗೆ ಕನಿಷ್ಠ 25 ಮಂದಿ ಮೃತಪಟ್ಟಿದ್ದರು. ಅಪಾರ ಪ್ರಮಾಣ ಹಾನಿ ಕೂಡ ಸಂಭವಿಸಿತ್ತು.

  • ಅಮೆರಿಕದಲ್ಲಿ ಭೀಕರ ಸುಂಟರಗಾಳಿಗೆ 23 ಮಂದಿ ಬಲಿ

    ಅಮೆರಿಕದಲ್ಲಿ ಭೀಕರ ಸುಂಟರಗಾಳಿಗೆ 23 ಮಂದಿ ಬಲಿ

    ವಾಷಿಂಗ್ಟನ್‌: ಅಮೆರಿಕದ (USA) ಪಶ್ಚಿಮ ಮಿಸಿಸಿಪ್ಪಿಯ (Mississippi) 200 ಜನರಿರುವ ಪಟ್ಟಣವಾದ ಸಿಲ್ವರ್ ಸಿಟಿ ಹಾಗೂ ಅಲ್ಬಾಮಾ ಪ್ರಾಂತ್ಯಗಳಲ್ಲಿ ಸಂಭವಿಸಿದ ಭೀಕರ ಸುಂಟರಗಾಳಿಗೆ (Tornado) ಕನಿಷ್ಠ 23 ಮಂದಿ ಬಲಿಯಾಗಿದ್ದಾರೆ. ನಾಲ್ವರು ಕಾಣೆಯಾಗಿದ್ದು, ರಕ್ಷಣಾ ಕಾರ್ಯಾಚಾರಣೆ ನಡೆಯುತ್ತಿದೆ.

    ಭೀಕರ ಗಾಳಿಯ ಹೊಡೆತಕ್ಕೆ ಅನೇಕ ದೈತ್ಯ ಕಟ್ಟಡಗಳು ಧರೆಗುರುಳಿದ್ದು, ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಮಿಸಿಸಿಪ್ಪಿ ಪ್ರಾಂತ್ಯದ ಗ್ರಾಮೀಣ ಪ್ರದೇಶವಾದ ಸಿಲ್ವಿರ್‌ ಸಿಟಿ ಮತ್ತು ರೋಲಿಂಗ್‌ ಫೋರ್ಕ್‌ ಪಟ್ಟಣ ಹಾಗೂ ಜಾಕ್ಸನ್‌ ನಗರದ ಈಶಾನ್ಯ ಪ್ರದೇಶದಲ್ಲಿ ಹಲವು ಕಟ್ಟಡಗಳು ನೆಲಸಮಗೊಂಡಿವೆ. ಗಂಟೆಗೆ 100 ಮೈಲುಗಳಿಗಿಂತ ಹೆಚ್ಚು (160 ಕಿಮೀ) ವೇಗದಲ್ಲಿ ಗಾಳಿ ಬೀಸಿದ್ದು, ಸಾಕಷ್ಟು ಹಾನಿಯುಂಟುಮಾಡಿದೆ ಎಂದು ರಾಜ್ಯದ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

    ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ ಎಂದು ಮಿಸ್ಸಿಸ್ಸಿಪ್ಪಿ ತುರ್ತು ನಿರ್ವಹಣಾ ಸಂಸ್ಥೆ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದೆ. 1,700 ಜನರಿರುವ ಪಟ್ಟಣವಾದ ರೋಲಿಂಗ್ ಫೋರ್ಕ್‌ನಲ್ಲಿಯೂ ಹಾನಿಯುಂಟಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  • ಪಂಜಾಬ್‍ನಲ್ಲಿ ಸುಂಟರಗಾಳಿ ಅಪ್ಪಳಿಸಿ 12 ಮಂದಿಗೆ ಗಾಯ, 30 ಮನೆಗಳಿಗೆ ಹಾನಿ

    ಪಂಜಾಬ್‍ನಲ್ಲಿ ಸುಂಟರಗಾಳಿ ಅಪ್ಪಳಿಸಿ 12 ಮಂದಿಗೆ ಗಾಯ, 30 ಮನೆಗಳಿಗೆ ಹಾನಿ

    ಚಂಡಿಗಢ: ಪಂಜಾಬ್‍ನ (Punjab) ಬಕೆನ್‍ವಾಲಾ (Bakenwala) ಎಂಬಲ್ಲಿ ಭೀಕರ ಸುಂಟರಗಾಳಿ (Tornado) ಅಪ್ಪಳಿಸಿ 30 ಮನೆಗಳಿಗೆ ಹಾನಿಯಾಗಿದೆ. ಹಾಗೂ 12 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

    ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಗ್ರಾಮಸ್ಥರು ಸುಂಟರಗಾಳಿಯನ್ನು ನೋಡಿದ್ದಾರೆ. ಸುಮಾರು 2ರಿಂದ 2.5 ಕಿಮೀ ಪ್ರದೇಶದಲ್ಲಿ ಸುಂಟರಗಾಳಿ ಹಾನಿಯನ್ನುಂಟು ಮಾಡಿದೆ ಎಂದು ಬಕೆನ್‍ವಾಲಾ ನಿವಾಸಿ ಗುರುಮುಖ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ದಶಪಥ ಹೆದ್ದಾರಿ ಟೋಲ್‍ನಲ್ಲಿ ತಾಂತ್ರಿಕ ಸಮಸ್ಯೆ, ಫಾಸ್ಟ್ ಟ್ಯಾಗ್ ನಲ್ಲಿ ಪದೇ ಪದೆ ಹಣ ಕಡಿತ

    ಗಾಳಿಯ ರಭಸಕ್ಕೆ ಹೊಲಗಳು ಮತ್ತು ತೋಟಗಳಲ್ಲಿ ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿದೆ. ಮನೆ ಹಾನಿಗೊಳಗಾದ ಗ್ರಾಮಸ್ಥರನ್ನು ಸ್ಥಳೀಯ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಜಿಲ್ಲಾಧಿಕಾರಿ (Deputy Commissioner) ಸೇನು ದುಗ್ಗಲ್ ಸಂತ್ರಸ್ತ ಗ್ರಾಮಕ್ಕೆ ಭೇಟಿ ನೀಡಿ ಆಸ್ತಿ ಮತ್ತು ಬೆಳೆ (Property and crop) ನಷ್ಟದ ಪರಿಹಾರವನ್ನು ಸರ್ಕಾರ ನೀಡಲಿದೆ. ಈ ಬಗ್ಗೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಜನರಿಗೆ ಸಮಾಧಾನ ಹೇಳಿದ್ದಾರೆ.

    ಸುಂಟರಗಾಳಿಯ ವಿನಾಶದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದನ್ನೂ ಓದಿ: Congress First List: 6 ಮಹಿಳೆಯರಿಗೆ ಟಿಕೆಟ್‌

  • ಅಮೇರಿಕದಲ್ಲಿ ಭಾರೀ ಸುಂಟರಗಾಳಿ – ಐವರು ಬಲಿ

    ಅಮೇರಿಕದಲ್ಲಿ ಭಾರೀ ಸುಂಟರಗಾಳಿ – ಐವರು ಬಲಿ

    ವಾಷಿಂಗ್ಟನ್: ದಕ್ಷಿಣ ಅಮೇರಿಕದ ಅಲಬಾಮಾ ರಾಜ್ಯದಲ್ಲಿ ಗುರುವಾರ ಬೀಸಿದ ಸುಂಟರಗಾಳಿಗೆ ಸುಮಾರು ಐವರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸುಂಟರಗಾಳಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ, ಸುಂಟರಗಾಳಿ ಅಬ್ಬರಕ್ಕೆ ಮರಗಳು ಹಾಗೂ ಮನೆಗಳು ಹಾನಿಗೊಂಡಿರುವುದನ್ನು ಕಾಣಬಹುದಾಗಿದೆ. ಈ ಕುರಿತಂತೆ ರಾಜ್ಯಪಾಲರು, ಸುಂಟರಗಾಳಿ ಹಾಗೂ ಚಂಡಮಾರುತದ ಅಲೆ ಹೆಚ್ಚಾಗಿರುವುದರಿಂದ ಜನರನ್ನು ಎಚ್ಚರದಿಂದ ಇರಲು ಮನವಿ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಘಟನೆಯಲ್ಲಿ ಮರದಿಂದ ತಯಾರಿಸಿದ್ದ ಮೇಲ್ಛಾವಣಿ ಬಿದ್ದು ಒಂದೇ ಕುಟುಂಬದ ಮೂವರು ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ನಿಧನರಾಗಿದ್ದಾರೆ. ಇನ್ನೊಬ್ಬ ವ್ಯಕ್ತಿ ವೆಲ್ಲಿಂಗ್ಟನ್ ಪಟ್ಟಣದಲ್ಲಿ ಮೃತಪಟ್ಟಿದ್ದಾರೆ ಎಂದು ಕ್ಯಾಲ್ಹೌನ್ ಕೌಂಟಿ ಪರಿಷತ್ತಿನ ಪ್ಯಾಟ್ ಬ್ರೌನ್ ತಿಳಿಸಿದ್ದಾರೆ.

    ಚಂಡಮಾರುತದಿಂದ ಕ್ಯಾಲ್ಹೌನಿ ಕೌಂಟಿಯಲ್ಲಿ ಹೆಚ್ಚಾಗಿ ಹಾನಿಯಾಗಿದ್ದು, ಇನ್ನೂ ಹೆಚ್ಚಿನ ಬಿರುಗಾಳಿ ಬರುವ ಸಾಧ್ಯತೆ ಇದೆ. ಹಾಗಾಗಿ ಜನರು ರಸ್ತೆಗೆ ಇಳಿಯದೇ ಮನೆಯಲ್ಲಿಯೇ ಉಳಿಯುವಂತೆ ಸಲಹೆ ನೀಡಲಾಗಿದೆ. ಗುರುವಾರ ಅಲಬಾಮಾದಲ್ಲಿ ಸುಮಾರು 35,000 ಗ್ರಾಹಕರಿಗೆ ವಿದ್ಯುತ್‍ನ್ನು ಖಡಿತಗೊಳಿಸಲಾಗಿತ್ತು ಎಂದು ಅಮೇರಿಕ ವಿದ್ಯುತ್ ಸರಬರಾಜು ತಿಳಿಸಿದೆ.

    ರಾತ್ರಿಯಿಡೀ ಅಪಾಯಕಾರಿ ಇದೇ ಭಯಾನಕ ಹವಾಮಾನ ಮುಂದುವರಿಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಅಪರೂಪದ ಸುಂಟರಗಾಳಿ, ಸುಳಿ ಮೋಡ – ಪ್ರಕೃತಿ ವೈಭವಕ್ಕೆ ಗ್ರಾಮಸ್ಥರು ಅಚ್ಚರಿ

    ಅಪರೂಪದ ಸುಂಟರಗಾಳಿ, ಸುಳಿ ಮೋಡ – ಪ್ರಕೃತಿ ವೈಭವಕ್ಕೆ ಗ್ರಾಮಸ್ಥರು ಅಚ್ಚರಿ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ರಾಮನಾಳ ಗ್ರಾಮದಲ್ಲಿ ಕಂಡು ಬಂದ ಪ್ರಕೃತಿಯ ಅಪರೂಪದ ದೃಶ್ಯಕ್ಕೆ ಇಡೀ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ.

    ಒಂದೆಡೆ ವಿಚಿತ್ರ ಸುಂಟರಗಾಳಿ ಇನ್ನೊಂದೆಡೆ ಆಕಾಶದಲ್ಲಿ ಸುರಳಿಯಾಕಾರದಲ್ಲಿ ಭೂಮಿಗೆ ಇಳಿಯಲು ಸಜ್ಜಾದ ಮೋಡದ ದೃಶ್ಯ ಬೆರಗು ಮೂಡಿಸಿದೆ. ಪ್ರಕೃತಿಯ ವೈಶಿಷ್ಟ್ಯಕ್ಕೆ ಬೆರಗಾದ ಗ್ರಾಮಸ್ಥರು ವಿಚಿತ್ರ ಸುಳಿ ಗಾಳಿ ಕಂಡು ಗಾಬರಿಗೊಂಡಿದ್ದಾರೆ.

    ಜಮೀನೊಂದರಲ್ಲಿ ಕಂಡು ಬಂದ ಸುಂಟರಗಾಳಿ ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಗ್ರಾಮೀಣ ಭಾಗದಲ್ಲಿ ಸುಳಿಗಾಳಿಗೆ ದೆವ್ವದ ಗಾಳಿ ಅಂತಲೇ ಕರೆಯುತ್ತಾರೆ. ಇನ್ನೂ ಆಗಸದಲ್ಲಿ ಸುರಳಿ ಆಕಾರದಲ್ಲಿ ಕಂಡು ಬಂದ ಮೋಡ ಅಚ್ಚರಿಯನ್ನ ಮೂಡಿಸಿತು.

    ಗ್ರಾಮಸ್ಥರು ಈ ಅಪರೂಪದ ದೃಶ್ಯಗಳನ್ನ ತಮ್ಮ ಮೊಬೈಲ್‍ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ಅಮೂಲ್ಯ ಭಾಷಣ ಮಾಡಬೇಕಿದ್ದ ಕಾಪುವಿನ ಮೈದಾನದಲ್ಲಿ ಬಿರುಗಾಳಿ

    ಅಮೂಲ್ಯ ಭಾಷಣ ಮಾಡಬೇಕಿದ್ದ ಕಾಪುವಿನ ಮೈದಾನದಲ್ಲಿ ಬಿರುಗಾಳಿ

    ಉಡುಪಿ: ಬೆಂಗಳೂರಿನಲ್ಲಿ ನಡೆದ ಸಿಎಎ, ಎನ್.ಆರ್.ಸಿ ವಿರುದ್ಧ ಹೋರಾಟ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನ ಪರಪ್ಪನ ಅಗ್ರಹಾರ ಸೇರಿದ್ದಾಳೆ. ಈ ನಡುವೆ ಅಮೂಲ್ಯ ನಾಳೆ ಭಾಷಣ ಮಾಡಬೇಕಿದ್ದ ಮೈದಾನದಲ್ಲಿ ಸುಂಟರಗಾಳಿ ಎದ್ದಿದೆ.

    ಉಡುಪಿ ಜಿಲ್ಲೆ ಕಾಪು ತಾಲೂಕಿನ ಬೆಳಪು ಎಂಬಲ್ಲಿ ಸಿಎಎ ವಿರುದ್ಧದ ಮತ್ತೊಂದು ಹೋರಾಟಕ್ಕೆ ವೇದಿಕೆ ಸಜ್ಜಾಗಿತ್ತು. ಬೆಳಪು ಗ್ರಾಮದ ಮಲ್ಲಾರ್ ಮುಸ್ಲಿಂ ಒಕ್ಕೂಟ ಸಿಎಎ ವಿರೋಧಿ ಪ್ರತಿಭಟನಾ ಸಭೆಯನ್ನು ಆಯೋಜಿಸಿತ್ತು. ಪ್ರತಿಭಟನಾ ಸಭೆಗೆ ವೇದಿಕೆ ನಿರ್ಮಾಣ ಮತ್ತು ತಯಾರಿಗಳು ನಡೆಯುತ್ತಿದೆ. ಈ ಹೊತ್ತಿನಲ್ಲೇ ಬೆಳಪು ಮೈದಾನದಲ್ಲಿ ದೊಡ್ಡ ಸುಂಟರಗಾಳಿಯೊಂದು ಸುತ್ತಿದೆ. ಸುಂಟರಗಾಳಿಯ ರಭಸಕ್ಕೆ ಹತ್ತಾರು ಖುರ್ಚಿಗಳು ಗಾಳಿಯಲ್ಲಿ ಗಿರಕಿ ಹೊಡೆದವು. ನೆಲದಿಂದ ಚಿಮ್ಮಿಸಿದೆ.

    ಬಿರುಗಾಳಿ ಕಸ, ಕಡ್ಡಿ ಧೂಳು ಪೇಪರ್ ಎಲ್ಲವನ್ನು ಹಾರಿಸಿಬಿಟ್ಟಿದೆ. ಅಮೂಲ್ಯ ಅರೆಸ್ಟ್ ಆಗದಿದ್ದರೆ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣವನ್ನು ಮಾಡಬೇಕಿತ್ತು. ಮೈದಾನದಲ್ಲಿ ಎದ್ದ ಭೀಕರ ಸುಂಟರಗಾಳಿಯ ವಿಡಿಯೋ ಈಗ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಸುಂಟರಗಾಳಿ ಎಂಬ ಹೆಸರಲ್ಲಿ ವೈರಲ್ ಆಗುತ್ತಿದೆ.

  • ಕಾರ್ಕಳದಲ್ಲಿ ಎದ್ದ ಸುಂಟರಗಾಳಿಗೆ ಸಿಕ್ತು ಕಾರಣ

    ಕಾರ್ಕಳದಲ್ಲಿ ಎದ್ದ ಸುಂಟರಗಾಳಿಗೆ ಸಿಕ್ತು ಕಾರಣ

    ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ರಾದ್ಧಾಂತ ಎಬ್ಬಿಸಿದ್ದ ಸುಂಟರಗಾಳಿ ಏಳು ಮನೆಗಳನ್ನು ಹಾರಿಸಿತ್ತು. ನೂರಾರು ಎಕ್ರೆ ಕೃಷಿಯನ್ನು ಹಿಚುಕಿ ಹಾಕಿತ್ತು. ಕೆರೆ ಗದ್ದೆಯ ನೀರನ್ನು ಇನ್ನೂರು ಮೀಟರ್ ಎತ್ತರಕ್ಕೆ ಹಾರಿಸಿತ್ತು. ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಕಾರಣ ಏನು ಎಂದು ಹುಡುಕಿದ ಪಬ್ಲಿಕ್ ಟಿವಿಗೆ ಇದೀಗ ಕಾರಣ ಸಿಕ್ಕಿದೆ.

    ಆಗಸ್ಟ್ 1 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪೆರ್ವಾಜೆ ಗ್ರಾಮದಲ್ಲಿ ಸಿಡಿಲು ಬಡಿದಂತೆ, ಭೂಮಿ ಕಂಪಿಸಿದಂತೆ ಅನುಭವವಾಗಿತ್ತು. ಆ ಮಧ್ಯಾಹ್ನ ಬೀಸಿದ್ದ ಸುಂಟರಗಾಳಿಗೆ ಇದೀಗ ಕಾರಣ ಸಿಕ್ಕಿದೆ. ಉಡುಪಿಯ ಭೌತ ಶಾಸ್ತ್ರಜ್ಞ ಡಾ. ಎ.ಪಿ ಭಟ್ ಸಂಶೋಧನೆ ನಡೆಸಿ, ಸ್ಥಳ ವಿಮರ್ಶೆ ಮಾಡಿದ್ದಾರೆ. ಭೂಮಿಯ ಮೇಲೆ ನಿರ್ವಾತ ಪ್ರದೇಶ ಸೃಷ್ಟಿಯಾಗುವುದೇ ಸುಂಟರಗಾಳಿಯ ಜನ್ಮಕ್ಕೆ ಕಾರಣ ಎಂದು ತಿಳಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಡಾ. ಎ.ಪಿ ಭಟ್, ಕಾರ್ಕಳ ಎನ್ನುವ ತಾಲೂಕಿನ ಹೆಸರಿನ ಅರ್ಥ ಕಪ್ಪು ಕಲ್ಲುಗಳ ಊರು ಎಂದು. ಕಾರ್ಕಳದಲ್ಲಿ ಯಾವ ಭಾಗಕ್ಕೆ ಹೋದರೂ ಅಲ್ಲಿ ಕರಿ ಕಲ್ಲುಗಳೇ ಕಾಣಸಿಗುತ್ತವೆ. ಕಳೆದ ಐದಾರು ದಿನದಿಂದ ಕಾರ್ಕಳದಲ್ಲಿ ನಿರಂತರವಾಗಿ ಮಳೆ ಬೀಳುತ್ತಿದೆ. ಮಳೆ ನಿಂತು ಎರಡು ದಿನ ವಿಪರೀತ ಬಿಸಿಲು. ಬಿಸಿಲಿಗೆ ಬಂಡೆಗಳೆಲ್ಲಾ ಕಾದು ಕೆಂಡವಾಗಿದೆ. ಸುತ್ತಮುತ್ತ ಕಾಡಿನ ವಾತಾವರಣ ತಂಪಿತ್ತು. ಅದ್ದರಿಂದ ಬಿಸಿಗಾಳಿಯ ಜೊತೆ ತಂಗಾಳಿ ಸೇರಿ ಖಾಲಿ ಜಾಗ ಅಂದ್ರೆ ನಿರ್ವಾತ ಪ್ರದೇಶ ಸೃಷ್ಟಿಯಾಗಿತ್ತು. ಈ ಸಂದರ್ಭ ಸುಂಟರಗಾಳಿ ಹುಟ್ಟಿ ಸುರುಳಿಯಾಗುತ್ತದೆ. ಗಾಳಿ ಶಕ್ತಿ ಪಡೆದು ಸುತ್ತೆಲ್ಲಾ ಬೀಸುತ್ತದೆ. ಸಿಕ್ಕ ಸಿಕ್ಕ ವಸ್ತುಗಳನ್ನು ಸುತ್ತಿ ಬಿಸಾಕುತ್ತದೆ. ಕಾರ್ಕಳ ನಕ್ರೆಕಲ್ಲು ಎಂಬಲ್ಲಿ ಸುಂಟರಗಾಳಿ ಹುಟ್ಟಿದೆ. ಮುಂದೆ ಅದು ಕಾರ್ಕಳ, ಪೆರ್ವಾಜೆಯಾಗಿ ಮಾಳ ಗ್ರಾಮದ ಕಡೆ ಹಾರಿದೆ. ಗದ್ದೆ, ನದಿ, ಕೆರೆಯ ನೀರನ್ನು ಬಾನಿಗೆ ಚಿಮ್ಮಿಸಿದೆ ಎಂದು ಹೇಳಿದ್ದಾರೆ.

    ಸಮುದ್ರದಲ್ಲಿ ಸುಂಟರಗಾಳಿ ಸಾಮಾನ್ಯ. ಮೈದಾನಗಳಲ್ಲಿ ಬೇಸಿಗೆ ಸುಳಿಗಾಳಿ ನೋಡಿದ್ದೇವೆ. ಆದರೆ ಇಲ್ಲಿ ಮಳೆಗಾಲದ ಸುಂಟರಗಾಳಿ ಅಲ್ಲೋಲ ಕಲ್ಲೋಲ ಮಾಡಿದೆ. ಕಾಡು ನಾಶದಿಂದ ಇಷ್ಟೆಲ್ಲಾ ಅವಾಂತರ ಆಗಿರೋದು ಸತ್ಯ. ಗಿಡ ನೆಟ್ಟು ಕಾಡನ್ನು ವೃದ್ಧಿಮಾಡದಿದ್ದರೆ. ಈಗ ಕಾರ್ಕಳಕ್ಕಾದ ಗತಿ ಮುಂದೊಂದು ದಿನ ನಮ್ಮ ನಿಮ್ಮ ಊರಿಗೆ ಬಂದರೂ ಆಶ್ಚರ್ಯವಿಲ್ಲ ಎಂದು ಎ.ಪಿ. ಭಟ್ ಹೇಳಿದ್ದಾರೆ.

  • ಕಾರ್ಕಳದಲ್ಲಿ ರಣಭೀಕರ ಸುಂಟರಗಾಳಿ – 200 ಅಡಿ ಎತ್ತರಕ್ಕೆ ಚಿಮ್ಮಿದ ನೀರು

    ಕಾರ್ಕಳದಲ್ಲಿ ರಣಭೀಕರ ಸುಂಟರಗಾಳಿ – 200 ಅಡಿ ಎತ್ತರಕ್ಕೆ ಚಿಮ್ಮಿದ ನೀರು

    ಉಡುಪಿ: ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ ರಣಭೀಕರ ಸುಂಟರ ಗಾಳಿ ಬೀಸಿದ್ದು, ನೋಡ ನೋಡುತ್ತಿದಂತೆ ಪೆರ್ವಾಜೆ ಬಳಿ ಇಂದು ಮಧ್ಯಾಹ್ನದ ವೇಳೆಗೆ ವಿಪರೀತ ಗಾಳಿ ಬೀಸಿದೆ. ಈ ದೃಶ್ಯಗಳನ್ನು ಕಂಡ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ವಿಪರೀತ ಸುಳಿಗಾಳಿಯ ರಭಸಕ್ಕೆ ತರಗೆಲೆಗಳು, ಪ್ಲಾಸ್ಟಿಕ್, ಗೋಣಿ ಚೀಲಗಳು ಅಗಸಕ್ಕೆ ಹಾರಲಾರಂಭಿಸಿದೆ. ಅಲ್ಲದೇ ಪೆರ್ವಾಜೆ ಪ್ರದೇಶದ ನೀರು ಗಾಳಿಯ ಜೊತೆ ಸುರುಳಿ ಆಕಾರದಲ್ಲಿ ಆಕಾಶಕ್ಕೆ ಚಿಮ್ಮಿದೆ. ಗದ್ದೆಯ ನೀರು ಸುಮಾರು 200 ಅಡಿ ಎತ್ತರಕ್ಕೆ ಚಿಮ್ಮಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

    ಪೆರ್ವಾಜೆ ವ್ಯಾಪ್ತಿಯಲ್ಲಿದ್ದ ಸುಮಾರು ಐದು ಮನೆಗಳಿಗೆ ಸುಂಟರಗಾಳಿಯ ಎಫೆಕ್ಟ್ ಆಗಿದ್ದು, ರಭಸದ ಗಾಳಿಯ ಪರಿಣಾಮ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ. ಅಲ್ಲದೇ ಇದೇ ವ್ಯಾಪ್ತಿಯಲ್ಲಿ ಅಡಿಕೆ ಮತ್ತು ತೆಂಗಿನ ತೋಟಕ್ಕೆ ಸುಂಟರಗಾಳಿಯಿಂದ ಸಮಸ್ಯೆಯಾಗಿದ್ದು, ಈ ಭಾಗದ ಮರಗಳು ಬುಡ ಮೇಲಾಗಿದೆ. ಸುಂಟರಗಾಳಿಯ ಪರಿಣಾಮ ಲಭ್ಯವಿರುವ ಮಾಹಿತಿ ಪ್ರಕಾರ ಹತ್ತು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಪರಿಶೀಲನೆಯಲ್ಲಿ ತೊಡಗಿರುವ ಅಧಿಕಾರಿಗಳು ನಷ್ಟ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಸುಂಟರ ಗಾಳಿ ಬೀಸಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಮೋಡ ಕರಗಿ ಮಳೆ ಆಗುವುದನ್ನು ನಾವು ನೋಡಿದ್ದೇವೆ, ಆದರೆ ಮಳೆ ಬಿದ್ದ ಮೇಲೆ ಆ ನೀರು ಮತ್ತೆ ಮೋಡ ಸೇರಿರುವ ದೃಶ್ಯಾವಳಿಗಳು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಹವಾಮಾನ ಇಲಾಖೆ ಅಧಿಕಾರಿಗಳು ಮೊಬೈಲ್ ನಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪಡೆದು ಪರಾಮರ್ಶೆ ನಡೆಸಲು ಮುಂದಾಗಿದ್ದು, ಈ ರೀತಿಯ ಸುಂಟರಗಾಳಿಗೆ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

  • ವಿಡಿಯೋ: 3 ಸುಂಟರಗಾಳಿಗಳ ಮಧ್ಯೆಯೂ ಹಾರಿದ ವಿಮಾನ

    ವಿಡಿಯೋ: 3 ಸುಂಟರಗಾಳಿಗಳ ಮಧ್ಯೆಯೂ ಹಾರಿದ ವಿಮಾನ

    ಮಾಸ್ಕೋ: ವಿಮಾನವೊಂದು ಮೂರು ಸುಂಟರಗಾಳಿಗಳ ಮಧ್ಯೆ ಹಾರಾಡಿದ ಘಟನೆ ರಷ್ಯಾದಲ್ಲಿ ನಡೆದಿದೆ. ವಿಮಾನ ಇಲ್ಲಿನ ಸೋಚಿಯಲ್ಲಿ ಸುರಕ್ಷಿತಾಗಿ ಲ್ಯಾಂಡ್ ಆಗಿದೆ. ಹಲವಾರು ಮಂದಿ ಇದರ ವಿಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಮಂಗಳವಾರದಂದು ಈ ಘಟನೆ ನಡೆದಿದೆ. ಇನ್ನು ಸುಂಟರಗಾಳಿ ಉಂಟಾಗಿದ್ದು ಭೂಮಿಯ ಮೇಲಲ್ಲ, ನೀರಿನ ಮೇಲೆ. ಬ್ಲಾಕ್ ಸೀ ಪ್ರದೇಶದ ಮೇಲೆ ಸುಮಾರು 12 ಸುಂಟರಗಾಳಿಗಳು ಉಂಟಾಗಿದ್ದು, ಮೂರು ಸುಂಟರಗಾಳಿಗಳ ಮಧ್ಯೆಯೇ ವಿಮಾನ ಹಾರಿಹೋಗಿದೆ.

    ಸುಂಟರಗಾಳಿಗಳು ಒಂದಕ್ಕೊಂದು ತೀರಾ ಸಮೀಪವಿದ್ದಿದ್ದರಿಂದ ಸಾಕಷ್ಟು ವಿಮಾನಗಳ ಮಾರ್ಗ ಬದಲಾಯಿಸಲಾಗಿತ್ತು ಎಂದು ವರದಿಯಾಗಿದೆ.

    ಸುಂಟರಗಾಳಿಗಳ ಮಧ್ಯೆ ಹಾರಿದ ವಿಮಾನ ಸುರಕ್ಷಿತವಾಗಿಯೇ ಲ್ಯಾಂಡ್ ಆಗಿದೆ. ಆದರೂ ಪ್ರಯಾಣಿಕರಿಗೆ ಸುಂಟರಗಾಳಿಯ ಅನುಭವವಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಸುಂಟರಗಾಳಿಯ ಫೋಟೋ ಕ್ಲಿಕ್ಕಿಸಿದ್ದಾರೆ.

    ನೀರಿನ ಮೇಲೆ ಉಂಟಾಗುವ ಸುಂಟರಗಾಳಿಯನ್ನ ವಾಟರ್ ಸ್ಪೌಟ್ಸ್ ಅಂತಾರೆ. ಇದಕ್ಕೆ ಭೂಮಿಯ ಮೇಲೆ ಉಂಟಾಗುವ ಸುಂಟರಗಾಳಿಯಷ್ಟು ತೀವ್ರತೆ ಇರುವುದಿಲ್ಲ. ಆದರೂ ವಾಟರ್ ಸ್ಪೌಟ್ಸ್ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತೆ.