– 10% ನಿಂದ 41% ವರೆಗೆ ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್ ಸಹಿ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ವ್ಯಾಪಾರ ಒಪ್ಪಂದದ ಗಡುವಿಗೆ ಮುಂಚಿತವಾಗಿಯೇ ಹಲವು ವ್ಯಾಪಾರ ಪಾಲುದಾರ ದೇಶಗಳ ಮೇಲೆ ಹೆಚ್ಚಿನ ಸುಂಕದ (Tariffs) ಬರೆ ಎಳೆದಿದ್ದಾರೆ. ಸುಂಕ ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಗಳು ತಿಳಿಸಿವೆ.
69 ವ್ಯಾಪಾರ ಪಾಲುದಾರ (Trading Partners) ದೇಶಗಳ ಮೇಲೆ 10% ರಿಂದ 41% ರಷ್ಟು ಹೆಚ್ಚಿನ ಆಮದು ಸುಂಕ ವಿಧಿಸಿದ್ದು, ಇದು 7 ದಿನಗಳಲ್ಲಿ ಜಾರಿಗೆ ಬರುತ್ತದೆ ಎಂದು ತಿಳಿಸಿದ್ದಾರೆ. ಆದೇಶಕ್ಕೆ ಸಹಿ ಹಾಕುವಾಗ, ವರ್ಷಗಳಿಂದ ನಡೆಯುತ್ತಿರುವ ವ್ಯಾಪಾರ ಅಸಮತೋಲನ ತೆಗೆದುಹಾಕಲು ಮತ್ತು ಅಮೆರಿಕದ ಆರ್ಥಿಕ ಭದ್ರತೆ ಬಲಪಡಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಭಾರತದ್ದು ಸತ್ತೋದ ಆರ್ಥಿಕತೆ – ಹೀನ ಪದ ಬಳಸಿದ ಟ್ರಂಪ್
ಕೆನಡಾ (Canada) ಮೇಲೆ ಸದ್ಯ 25% ರಷ್ಟು ಸುಂಕ ವಿಧಿಸಲಾಗುತ್ತಿದ್ದು, ಅದನ್ನ ಶುಕ್ರವಾರದಿಂದ 35%ಗೆ ಹೆಚ್ಚಿಸಲಾಗುತ್ತದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಅಲ್ಲದೇ ಈ ಆದೇಶದ ಅಡಿಯಲ್ಲಿ, ಭಾರತದ ಮೇಲೆ 25% ಸುಂಕ ವಿಧಿಸಲಾಗಿದೆ. ಪಾಕಿಸ್ತಾನದ ಮೇಲೆ 19%, ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಮೇಲೆ 20%, ದಕ್ಷಿಣ ಆಫ್ರಿಕಾದ ಮೇಲೆ 30% ಮತ್ತು ಸ್ವಿಟ್ಜರ್ಲೆಂಡ್‌ನ ಮೇಲೆ 39% ರಷ್ಟು ಅತ್ಯಧಿಕ ಸುಂಕ ವಿಧಿಸಲಾಗಿದೆ. ಅಲ್ಲದೆ, ಕ್ಯಾಮರೂನ್, ಚಾಡ್, ಇಸ್ರೇಲ್, ಟರ್ಕಿಯೆ, ವೆನೆಜುವೆಲಾ ಮತ್ತು ಲೆಸೊಥೊ ದೇಶಗಳ ಮೇಲೆ 15% ಸುಂಕ ವಿಧಿಸಲಾಗಿದೆ. ಆದ್ರೆ ಚೀನಾ ಜೊತೆಗಿನ ವ್ಯಾಪಾರ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸುನಾಮಿ ಎಂದರೇನು? ಭೂಕಂಪಕ್ಕೂ ಇದಕ್ಕೂ ಏನು ಸಂಬಂಧ?
ಯಾವ ದೇಶಕ್ಕೆ ಎಷ್ಟು ಸುಂಕ?
* 41% ಸುಂಕ – ಸಿರಿಯಾ
* 40% ಸುಂಕ – ಲಾವೋಸ್, ಮ್ಯಾನ್ಮಾರ್ (ಬರ್ಮಾ)
* 39% ಸುಂಕ – ಸ್ವಿಟ್ಜರ್ಲೆಂಡ್
* 35% ಸುಂಕ – ಇರಾಕ್, ಸೆರ್ಬಿಯಾ
* 30% ಸುಂಕ – ಅಲ್ಜೀರಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಲಿಬಿಯಾ, ದಕ್ಷಿಣ ಆಫ್ರಿಕಾ
* 25% ಸುಂಕ – ಭಾರತ, ಬ್ರೂನಿ, ಕಝಾಕಿಸ್ತಾನ್, ಮೊಲ್ಡೊವಾ, ಟುನೀಶಿಯಾ
* 20% ಸುಂಕ – ಬಾಂಗ್ಲಾದೇಶ, ಶ್ರೀಲಂಕಾ, ತೈವಾನ್, ವಿಯೆಟ್ನಾಂ
* 19% ಸುಂಕ – ಪಾಕಿಸ್ತಾನ, ಮಲೇಷ್ಯಾ, ಇಂಡೋನೇಷ್ಯಾ, ಕಾಂಬೋಡಿಯಾ, ಫಿಲಿಪೈನ್ಸ್, ಥೈಲ್ಯಾಂಡ್
* 18% ಸುಂಕ – ನಿಕರಾಗುವಾ
* 15% ಸುಂಕ – ಇಸ್ರೇಲ್, ಜಪಾನ್, ಟರ್ಕಿ, ನೈಜೀರಿಯಾ, ಘಾನಾ ಮತ್ತು ಇತರ ಹಲವು ದೇಶಗಳು
* 10% ಸುಂಕ – ಬ್ರೆಜಿಲ್, ಯುನೈಟೆಡ್ ಕಿಂಗ್‌ಡಮ್ (ಯುಕೆ), ಫಾಕ್‌ಲ್ಯಾಂಡ್ ದ್ವೀಪಗಳು
– ಅಮೆರಿಕದಿಂದ 750 ಶತಕೋಟಿ ಡಾಲರ್ ಮೌಲ್ಯದ ಇಂಧನ ಖರೀದಿ
– ಯುಎಸ್‌ನಲ್ಲಿ 600 ಶತಕೋಟಿ ಡಾಲರ್ ಹೂಡಿಕೆ ಮಾಡಲು ಡೀಲ್
ವಾಷಿಂಗ್ಟನ್: ಯುರೋಪಿಯನ್ ಒಕ್ಕೂಟದೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದುವರೆಗಿನ ಅತಿದೊಡ್ಡ ವ್ಯಾಪಾರ ಒಪ್ಪಂದವನ್ನ (Biggest Trade Deal) ಘೋಷಣೆ ಮಾಡಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ ಒಕ್ಕೂಟದಿಂದ ಬರುವ ಆಮದುಗಳ ಮೇಲೆ 15% ಸುಂಕ ವಿಧಿಸಲಾಗುತ್ತದೆ.
Today, President Trump secured a HUGE, POWERFUL TRADE DEAL between the U.S. and EU 🇺🇸
The EU will:
💰 Invest $600 Billion in U.S.
⚡️ Purchase $750 Billion in American Energy
💸 Open Markets to U.S. pic.twitter.com/PWNtlhpH5b
ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಟ್ರಂಪ್ ತನ್ನ ದೇಶದ ವ್ಯಾಪಾರ ಸುಧಾರಿಸುವ ದೃಷ್ಟಿಯಲ್ಲಿ ಹಲವು ದೇಶಗಳ ಮೇಲೆ ಸುಂಕ ಸಮರ (Tariffs war) ಸಾರಿದ್ದಾರೆ. ಕೆಲ ದಿನಗಳ ಹಿಂದೆ ಟ್ರಂಪ್ 14 ದೇಶಗಳ ಮೇಲೆ ಸುಂಕ ವಿಧಿಸಿದ್ದರು. ಆಗಸ್ಟ್ 1 ರಿಂದಲೇ ಹೊಸ ಸುಂಕ ಜಾರಿಗೆ ಬರಲಿದೆ ಎಂದು ಘೋಷಿಸಿದ್ದರು. ಆದ್ರೆ ಈ ಪಟ್ಟಿಯಲ್ಲಿ ಭಾರತವನ್ನ ಹೊರಗಿಟ್ಟಿದ್ದರು. ಮುಂಬರುವ ಆಗಸ್ಟ್ 1ರಿಂದ ಯುರೋಪಿಯನ್ ಒಕ್ಕೂಟದ (European Union) ರಫ್ತಿನ ಮೇಲೆ 30% ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿದ್ದರು. ಈ ನಡುವೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, 30% ಸುಂಕದಿಂದ ಬಚಾವ್ ಆಗಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ ನೈಸರ್ಗಿಕ ವಿಪತ್ತಾದ ‘ಆಲ್ಗಲ್ ಬ್ಲೂಮ್’ – ಈ ಬಿಕ್ಕಟ್ಟಿನ ಹಿಂದಿನ ಕಾರಣವೇನು?
ಸ್ಕಾಟ್ಲೆಂಡ್‌ನಲ್ಲಿರುವ ತಮ್ಮ ಗಾಲ್ಫ್ ರೆಸಾರ್ಟ್‌ನಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ನಡುವಿನ ಮಹತ್ವದ ಸಭೆಯಲ್ಲಿ ಇದುವರೆಗಿನ ಅತಿದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರನ್ವಯ ಯುರೋಪಿನ್‌ನಿಂದ ರಫ್ತಾಗುವ ಆಟೋಮೊಬೈಲ್, ಔಷಧಗಳು ಮತ್ತು ಅರೆವಾಹಕ ಸೇರಿದಂತೆ ಇತರೇ ಸರಕುಗಳ ಮೇಲೆ 15% ಸುಂಕವನ್ನಷ್ಟೇ ವಿಧಿಸಲಾಗುತ್ತದೆ.
ಮುಂದುವರಿದು… ಜೊತೆಗೆ ಒಪ್ಪಂದದ ಭಾಗವಾಗಿ 27 ರಾಷ್ಟ್ರಗಳ ಯುರೋಪಿಯನ್ ಒಕ್ಕೂಟ ಅಮೆರಿಕದಿಂದ 750 ಶತಕೋಟಿ ಡಾಲರ್ ಮೌಲ್ಯದ ಇಂಧನ ಖರೀದಿಸಲಿದೆ. ಜೊತೆಗೆ ಅಮೆರಿಕದಲ್ಲಿ 600 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಹೂಡಿಕೆ ಮಾಡಲಿವೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ನಂತೆಯೇ ಥಾಯ್ಲೆಂಡ್-ಕಾಂಬೋಡಿಯಾ ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್
ತನ್ನ ದೇಶದ ವ್ಯಾಪಾರ ಸುಧಾರಿಸುವ ದೃಷ್ಟಿಯಲ್ಲಿ ಹಲವು ದೇಶಗಳ ಮೇಲ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸುಂಕ ಸಮರ ಸಾರಿದ್ದಾರೆ. ಕೆನಡಾ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಸುಂಕು ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಒಂದರ ಮೇಲೆ ಒಂದರಂತೆ ವಿವಿಧ ದೇಶಗಳ ಮೇಲೆ ಸುಂಕ ಹೇರಿಕೆ ಸಂಬಂಧ ಆದೇಶ ಪತ್ರಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಟ್ರಂಪ್ ಟ್ಯಾರಿಫ್‌ನಿಂದ ಸದ್ಯ ಭಾರತ ತಪ್ಪಿಸಿಕೊಂಡಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಅದೇನು ಅಂತ ಇಲ್ಲಿ ವಿವರಿಸಲಾಗಿದೆ.
ಭಾರತ ಸೇರಿ ಹಲವು ದೇಶಗಳ ಮೇಲೆ ಟ್ಯಾರಿಫ್ ಸಮರ
ಏಪ್ರಿಲ್ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಟ್ಯಾರಿಫ್ (Tariff) ಹಾಕಿದ್ದರು. ಮೋದಿ ನನ್ನ ಆತ್ಮೀಯ ಸ್ನೇಹಿತ ಎನ್ನುತ್ತಲೇ ಭಾರತಕ್ಕೆ ಶೇ.26 ಪ್ರತಿಸುಂಕ ವಿಧಿಸುವುದಾಗಿ ಘೋಷಿಸಿದ್ದರು. ಅದಾಗ್ಯೂ, ನಂತರ 90 ದಿನಗಳ ವರೆಗೆ ತಮ್ಮ ಆದೇಶವನ್ನು ಅಮಾನತಿನಲ್ಲಿಟ್ಟರು. ಆಗಲೂ ಭಾರತ ಪ್ರತಿಸುಂಕದಿಂದ ತಪ್ಪಿಸಿಕೊಂಡಿತು. ಇದಾದ ಬಳಿಕ ಭಾರತದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಯಿತು. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸೋ ದೇಶಗಳ ಮೇಲೆ 500% ಸುಂಕ – ಭಾರತ, ಚೀನಾಗೆ ಟ್ರಂಪ್ ಶಾಕ್?
ಭಾರತ-ಪಾಕ್ ಸಂಘರ್ಷ; ಟ್ರಂಪ್ ಹೇಳಿದ್ದೇನು?
ಕಾಶ್ಮೀರದ ಪಹಲ್ಗಾಮ್ ಮೇಲೆ ಉಗ್ರರು ನಡೆಸಿದ ದಾಳಿಗೆ 26 ಪ್ರವಾಸಿಗರು ಬಲಿಯಾದರು. ದಾಳಿಗೆ ಪ್ರತೀಕಾರವಾಗಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕ್‌ನಲ್ಲಿ ಉಗ್ರರ ತಾಣಗಳನ್ನು ಗುರಿಯಾಗಿಸಿ ಭಾರತ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತು. ಇದರ ಬೆನ್ನಲ್ಲೇ ಪಾಕ್ ಮತ್ತು ಭಾರತ ನಡುವೆ ಯುದ್ಧ ಸನ್ನಿವೇಶ ಸೃಷ್ಟಿಯಾಯಿತು. ಉಭಯ ದೇಶಗಳು ಪರಸ್ಪರ ವೈಮಾನಿಕ ದಾಳಿ ನಡೆಸಿದವು. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಬಹುದು ಎಂಬುದನ್ನರಿತ ಟ್ರಂಪ್ ಭಾರತ-ಪಾಕ್ ನಡುವೆ ಕದನ ವಿರಾಮಕ್ಕೆ ಒತ್ತಾಯಿಸಿದರು. ಮಾತುಕತೆ ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಮೊದಲು ಟ್ರಂಪ್ ಘೋಷಿಸಿದರು. ನಾವು ವ್ಯಾಪಾರ ಒಪ್ಪಂದಕ್ಕಾಗಿ ಸಂಘರ್ಷ ತಡೆದಿದ್ದೇವೆ. ನೀವಿಬ್ಬರು ಯುದ್ಧ ಮುಂದುವರಿಸಿದರೆ, ನಾವು ನಿಮ್ಮೊಂದಿಗೆ ವ್ಯವಹರಿಸುವುದಿಲ್ಲ ಎಂದು ಎಚ್ಚರಿಸಿದ್ದಾಗಿ ಟ್ರಂಪ್ ತಿಳಿಸಿದ್ದರು. ಅದಾದ ಬಳಿಕ, ಈಚೆಗೆ ಭಾರತದ ಜೊತೆ ಬಿಗ್ ಡೀಲ್ ಇದೆ ಎಂದು ಟ್ರಂಪ್ ಸುಳಿವು ಕೊಟ್ಟಿದ್ದರು. ಅದೇನಂತ ಕಾದುನೋಡಬೇಕಿದೆ.
14 ದೇಶಗಳ ಮೇಲೆ ಹೊಸ ಸುಂಕ
ಏಟಿಗೆ ಎದುರೇಟು ಎಂಬಂತೆ ಜಗತ್ತಿನ 14 ದೇಶಗಳ ಮೇಲೆ ಡೊನಾಲ್ಡ್ ಟ್ರಂಪ್ ಹೊಸ ಸುಂಕ ವಿಧಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತವನ್ನು ಹೊರಗಿಟ್ಟಿದ್ದಾರೆ. ಆಗಸ್ಟ್ 1 ರಿಂದಲೇ ಹೊಸ ಸುಂಕ ಜಾರಿಗೆ ಬರಲಿದೆ. ನಿಮ್ಮ ದೇಶಗಳೊಂದಿಗಿನ ನಮ್ಮ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಸುಂಕದ ಪ್ರಮಾಣವನ್ನು ಮಾರ್ಪಡಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ. ಹೊಸ ಸುಂಕಗಳಿಂದ ಯಾವ ದೇಶಗಳು ಹೆಚ್ಚು ಹಾನಿಗೊಳಗಾಗುತ್ತವೆ? ಯಾವ ದೇಶಗಳನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ? ಇಲ್ಲಿಂದ ಮುಂದಿನ ಹಾದಿ ಏನು ಎಂಬುದಕ್ಕೆ ವಿವರ ಇಲ್ಲಿದೆ.
AI ಚಿತ್ರ
ಯಾವ ದೇಶಕ್ಕೆ ಎಷ್ಟು ಸುಂಕ?
ಬಾಂಗ್ಲಾದೇಶ 35%, ಬೋಸ್ನಿಯಾ ಮತ್ತು ಹರ್ಜೆಗೋವಿನಾ 30%, ಕಾಂಬೋಡಿಯಾ 36, ಇಂಡೋನೇಷಿಯಾ 32, ಜಪಾನ್ 25, ಕಜಕಿಸ್ತಾನ್ 25, ಲಾವೋಸ್ 40, ಮಲೇಷ್ಯಾ 25, ಮ್ಯಾನ್ಮಾರ್ 40, ಸೆರ್ಬಿಯಾ 35, ದಕ್ಷಿಣ ಆಫ್ರಿಕಾ 30, ದಕ್ಷಿಣ ಕೊರಿಯಾ 25, ಥೈಲ್ಯಾಂಡ್ 36, ಟುನೀಶಿಯಾಗೆ 25% ಸುಂಕವನ್ನು ವಿಧಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ, ಅಮೆರಿಕದ ಪ್ರಮುಖ ವ್ಯಾಪಾರ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳಾದ ಜಪಾನ್ & ದಕ್ಷಿಣ ಕೊರಿಯಾಗಳ ಮೇಲೆ ಶೇ.25 ಸುಂಕ ವಿಧಿಸಲಾಗಿದೆ. ಮ್ಯಾನ್ಮಾರ್ ಮತ್ತು ಲಾವೋಸ್‌ಗೆ ಅತಿ ಹೆಚ್ಚು ಸುಂಕ ಹೇರಲಾಗಿದೆ. ಇದನ್ನೂ ಓದಿ: ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್ – ಪ್ರತೀಕಾರಕ್ಕೆ ಮುಂದ್ರಾದ್ರೆ ಇನ್ನಷ್ಟು ಸುಂಕ ವಿಧಿಸುವುದಾಗಿ ವಾರ್ನಿಂಗ್
ಯುಎಸ್ ಪತ್ರ ರವಾನೆ
ಟ್ಯಾರಿಫ್ ಹೇರಲ್ಪಟ್ಟ ದೇಶಗಳಿಗೆ ಅಮೆರಿಕ ಪತ್ರಗಳನ್ನು ಬರೆದಿದೆ. ಅಮೆರಿಕವು ತಮ್ಮೊಂದಿಗಿನ ವ್ಯಾಪಾರ ಕೊರತೆಯನ್ನು ಸರಿಪಡಿಸಲು ಬಯಸುತ್ತದೆ. ಯುಎಸ್ ರಫ್ತು ಮಾಡುವುದಕ್ಕಿಂತ ಈ ದೇಶಗಳಿಂದ ಹೆಚ್ಚು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ, ಹೊಸ ದರದಲ್ಲಿ ತೆರಿಗೆ ವಿಧಿಸುತ್ತದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಇದು ಅಮೆರಿಕ ಘೋಷಿಸಿರುವ ವಲಯ ಸುಂಕಗಳಿಂದ (ಆಟೋಮೊಬೈಲ್, ಉಕ್ಕು ಇತ್ಯಾದಿ..) ಪ್ರತ್ಯೇಕವಾಗಿದೆ. ಟ್ರಾನ್ಸ್ಶಿಪ್ ಮಾಡಲಾದ ಸರಕುಗಳು ಸಹ ಆ ಹೆಚ್ಚಿನ ಸುಂಕಕ್ಕೆ ಒಳಪಟ್ಟಿರುತ್ತವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಟ್ರಾನ್ಸ್ಶಿಪ್‌ಮೆಂಟ್ ಎಂದರೆ, ಹೆಚ್ಚಿನ ಸುಂಕಗಳನ್ನು ಎದುರಿಸುತ್ತಿರುವ ದೇಶಗಳು ಕಡಿಮೆ ಸುಂಕಗಳನ್ನು ಎದುರಿಸುತ್ತಿರುವ ಮೂರನೇ ದೇಶದ ಮೂಲಕ ತಮ್ಮ ಸರಕುಗಳನ್ನು ಯುಎಸ್‌ಗೆ ಸಾಗಿಸಬಹುದು.
ಈ ದೇಶಗಳನ್ನೇ ಆಯ್ಕೆ ಮಾಡಿದ್ದೇಕೆ?
ಏಪ್ರಿಲ್‌ನಲ್ಲಿ ಟ್ರಂಪ್ ಹಲವು ದೇಶಗಳ ಮೇಲೆ ಪ್ರತಿಸುಂಕ ವಿಧಿಸಿದ್ದರು. ಅದರ ಬೆನ್ನಲ್ಲೇ 90 ದಿನಗಳ ಗಡುವು ವಿಧಿಸಿ ತಮ್ಮ ಪ್ರತಿಸುಂಕ ಆದೇಶವನ್ನು ಅಮಾನತಿನಲ್ಲಿಟ್ಟರು. ಈ ಅವಧಿಯಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ದೇಶಗಳಿಗೆ ಸೂಚಿಸಿದ್ದರು. ಈ 90 ದಿನಗಳ ಗಡುವು ಮುಕ್ತಾಯವಾಗಿದೆ. ಆದರೆ, ಯುಕೆ ಮತ್ತು ವಿಯೆಟ್ನಾಂನೊಂದಿಗೆ ಕೇವಲ 2 ಅಸ್ಪಷ್ಟ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನಂತರದ ದಿನಗಳಲ್ಲಿ ಕೆನಡಾ ಕೂಡ ಈ ಲಿಸ್ಟ್‌ಗೆ ಸೇರಿದೆ.
ಈ 14 ದೇಶಗಳನ್ನೇ ಏಕೆ ಆರಿಸಿಕೊಂಡೆ ಎಂಬುದನ್ನು ಅಮೆರಿಕ ಸರ್ಕಾರ ಇನ್ನೂ ಬಹಿರಂಗಪಡಿಸಿಲ್ಲ. ಆದಾಗ್ಯೂ, ಮಾತುಕತೆಗಳಲ್ಲಿನ ನಿಧಾನಗತಿಯ ಪ್ರಗತಿಗಾಗಿ ಟ್ರಂಪ್ ಇತ್ತೀಚೆಗೆ ಜಪಾನ್ ಅನ್ನು ಟೀಕಿಸುತ್ತಿದ್ದರು. ‘ನಾವು ಜಪಾನ್‌ನೊಂದಿಗೆ ವ್ಯವಹರಿಸಿದ್ದೇವೆ. ನಾವು ಒಪ್ಪಂದ ಮಾಡಿಕೊಳ್ಳುತ್ತೇವೆಯೇ ಎಂದು ನನಗೆ ಖಚಿತವಿಲ್ಲ. ಜಪಾನ್‌ನೊಂದಿಗೆ ನನಗೆ ಅನುಮಾನವಿದೆ. ಅವರು ತುಂಬಾ ಕಠಿಣರು. ಅವರು ತುಂಬಾ ಹಾಳಾಗಿದ್ದಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಭಾರತದಂತೆಯೇ ಜಪಾನ್ ಕೂಡ ತನ್ನ ಕೃಷಿ ವಲಯವನ್ನು ಅಮೆರಿಕದ ಆಮದುಗಳಿಗೆ ತೆರೆಯಲು ಬಯಸುವುದಿಲ್ಲ’ ಎಂದು ಟ್ರಂಪ್ ಹೇಳಿದ್ದರು. ಇದನ್ನೂ ಓದಿ: ತಾಮ್ರದ ಮೇಲೆ 50%, ಔಷಧ ಆಮದಿನ ಮೇಲೆ 200% ಸುಂಕದ ಎಚ್ಚರಿಕೆ – ಭಾರತದ ಮೇಲೆ ಏನು ಪರಿಣಾಮ?
ಅದೇ ರೀತಿ, ದಕ್ಷಿಣ ಕೊರಿಯಾದೊಂದಿಗಿನ ಒಪ್ಪಂದವೂ ಪ್ರಗತಿಯಲ್ಲಿಲ್ಲ. ಈ ದೇಶಗಳು ಅಮೆರಿಕಕ್ಕೆ ದೊಡ್ಡ ವ್ಯಾಪಾರ ಪಾಲುದಾರರಾಗಿದ್ದರೂ, ಕಾರುಗಳಂತಹ ನಿರ್ದಿಷ್ಟ ವಲಯಗಳಲ್ಲಿ ವಿನಾಯಿತಿಗಳನ್ನು ಬಯಸಿದ್ದವು. ಅಮೆರಿಕವು ಆಟೋಮೊಬೈಲ್‌ಗಳ ದೊಡ್ಡ ಆಮದುದಾರರಾಗಿದ್ದರೆ, ದೇಶೀಯ ಕಾರು ಉತ್ಪಾದನಾ ಉದ್ಯಮವು ತನ್ನ ಕಳೆದುಹೋದ ಪ್ರಾಬಲ್ಯವನ್ನು ಮರಳಿ ಪಡೆಯಬೇಕೆಂದು ಟ್ರಂಪ್ ಬಯಸುತ್ತಾರೆ. ‘ಅಮೆರಿಕದ ಆಮದುಗಳಿಗೆ ಕೊರಿಯಾದ ಬಹುತೇಕ ಎಲ್ಲಾ ಸುಂಕಗಳು ಶೂನ್ಯದಲ್ಲಿವೆ. ಇದರಿಂದಾಗಿ ಅವರು ಭಾರತ ಅಥವಾ ವಿಯೆಟ್ನಾಂಗಿಂತ ಹೆಚ್ಚಿನ ಸುಂಕಗಳೊಂದಿಗೆ ಅಮೆರಿಕಕ್ಕೆ ನೀಡಲು ಕಡಿಮೆ ಅವಕಾಶವನ್ನು ಹೊಂದಿದ್ದಾರೆ’ ಎಂದು ಏಷ್ಯಾ ಸೊಸೈಟಿ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಉಪಾಧ್ಯಕ್ಷ ಮತ್ತು ದಕ್ಷಿಣ ಕೊರಿಯಾ-ಯುಎಸ್ ಮುಕ್ತ ವ್ಯಾಪಾರ ಒಪ್ಪಂದದ ಮಾಜಿ ಸಮಾಲೋಚಕ ವೆಂಡಿ ಕಟ್ಲರ್ ಹೇಳಿದ್ದಾರೆ.
ಚೀನಾ ಫ್ರೆಂಡ್ಸ್‌ಗೆ ಶಾಕ್!
ಟ್ರಂಪ್ ಟ್ಯಾರಿಫ್ ಹಾಕಿರುವ 14 ದೇಶಗಳಲ್ಲಿ ಆರು (ಮ್ಯಾನ್ಮಾರ್, ಲಾವೋಸ್, ಇಂಡೋನೇಷ್ಯಾ, ಕಾಂಬೋಡಿಯಾ, ಮಲೇಷ್ಯಾ, ಥೈಲ್ಯಾಂಡ್) ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿರುವ ಆಸಿಯಾನ್ ಗುಂಪಿನ ಸದಸ್ಯರಾಗಿದ್ದಾರೆ. ರಫ್ತು ಮತ್ತು ಆಮದು ವಿಚಾರದಲ್ಲಿ ಹಲವು ದೇಶಗಳು ಲಾಭವನ್ನು ಪಡೆದುಕೊಳ್ಳುತ್ತಿವೆ. ಅಮೆರಿಕ ಜೊತೆಗಿನ ವ್ಯಾಪಾರದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿವೆ. ಹೀಗಾಗಿ, ಹೊಸ ಸುಂಕದ ಅಸ್ತ್ರ ಪ್ರಯೋಗಿಸಲಾಗುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಮುಂದೇನು?
ಟ್ರಂಪ್ ಆಗಾಗ್ಗೆ ತಪ್ಪುಗಳನ್ನು ಮಾಡುವುದರಿಂದ ಮತ್ತು ಈ ಸುಂಕಗಳನ್ನು ಮೊದಲು ವಿಧಿಸುವ ಅವರ ಅಧಿಕಾರವು ಅಮೆರಿಕದಲ್ಲಿ ಕಾನೂನು ಸವಾಲನ್ನು ಎದುರಿಸುತ್ತಿರುವುದರಿಂದ ಇದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಸುಂಕಗಳು ಇತರ ದೇಶಗಳು ಅಮೆರಿಕದೊಂದಿಗೆ ಒಪ್ಪಂದಗಳನ್ನು ವೇಗವಾಗಿ ತೀರ್ಮಾನಿಸಲು ಪ್ರೇರೇಪಿಸುವ ಸಾಧ್ಯತೆಯಿದೆ. ಸುಂಕಕ್ಕೆ ಗುರಿಯಾಗಿಸಿಕೊಂಡ ದೇಶಗಳು ಮಾತುಕತೆಗಳನ್ನು ಮುಂದುವರಿಸಲು ಇಚ್ಛೆ ವ್ಯಕ್ತಪಡಿಸಿವೆ. ಇದನ್ನೂ ಓದಿ: ಟ್ರಂಪ್ 25% ಸುಂಕ ಹೇರಿದ್ರೂ ಭಾರತದ ಐಫೋನ್ ಚೀಪ್ – ಅಮೆರಿಕದ್ದು ದುಬಾರಿ
ಸುಂಕಗಳು ಎಂದರೆ ದೇಶದ ಹೊರಗಿನಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ವ್ಯಾಪಾರಿಗಳು ಪಾವತಿಸುವ ಹೆಚ್ಚುವರಿ ತೆರಿಗೆಗಳು. ಹೆಚ್ಚಿನವು ಈ ಹೆಚ್ಚಿದ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ. ಎಲ್ಲಾ ಸುಂಕಗಳು ಜಾರಿಗೆ ಬಂದರೆ, ಅಮೆರಿಕದ ಗ್ರಾಹಕರು ಇತರ ದೇಶಗಳಿಂದ ಅಮೆರಿಕಕ್ಕೆ ಹೋಗುವ ಹಲವಾರು ಸರಕುಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ನಂತರ ಅವರು ಆ ಸರಕುಗಳನ್ನು ಖರೀದಿಸದಿರಲು ಅಥವಾ ಕಡಿಮೆ ಪ್ರಮಾಣದಲ್ಲಿ ಖರೀದಿಸಲು ಮುಂದಾಗಬಹುದು. ಇದು ರಫ್ತುದಾರರಿಗೆ ನಷ್ಟಕ್ಕೆ ಕಾರಣವಾಗಬಹುದು. ಬಾಂಗ್ಲಾದೇಶದಂತಹ ರಫ್ತು-ಚಾಲಿತ ಆರ್ಥಿಕತೆಗಳನ್ನು ಹೊಂದಿರುವ ದೇಶಗಳು ಈ ಸುಂಕಗಳಿಂದಾಗಿ ತೀವ್ರವಾಗಿ ಪರಿಣಾಮ ಬೀರುತ್ತವೆ. ಇತರ ರಾಷ್ಟ್ರಗಳಿಗೆ ಸ್ವಲ್ಪ ಪರಿಣಾಮ ಬೀರಬಹುದು.
ವಾಷಿಂಗ್ಟನ್: ರಷ್ಯಾದಿಂದ ತೈಲ, ಅನಿಲ ಅಥವಾ ಯುರೇನಿಯಂನಂತಹ ಇಂಧನ ಉತ್ಪನ್ನಗಳನ್ನು ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ 500% ಸುಂಕ (Tariff) ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗಂಭೀರವಾಗಿ ಪರಿಗಣಿಸಿದ್ದಾರೆ.
ಸೆನೆಟರ್ ಲಿಂಡ್ಸೆ ಗ್ರಹಾಂ ಅವರಂತಹ ಪ್ರಭಾವಿ ವ್ಯಕ್ತಿಗಳು ಈ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ. ‘ನೀವು ರಷ್ಯಾದಿಂದ ಇಂಧನವನ್ನು ಖರೀದಿಸುತ್ತಿದ್ದರೆ ಮತ್ತು ಉಕ್ರೇನ್‌ಗೆ ಸಹಾಯ ಮಾಡದಿದ್ದರೆ, ಅಮೆರಿಕದಲ್ಲಿರುವ ನಿಮ್ಮ ಸರಕುಗಳಿಗೆ 500% ಸುಂಕ ವಿಧಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದರು.
ಒಂದು ವೇಳೆ ಈ ನಿರ್ಣಯ ಅಂಗೀಕಾರವಾದರೆ, ಜಾಗತಿಕ ನಿರ್ಬಂಧಗಳ ಸಮಯದಲ್ಲಿ ರಷ್ಯಾದ ತೈಲ ಮತ್ತು ಅನಿಲದ ಆಮದನ್ನು ಹೆಚ್ಚಿಸಿರುವ ಭಾರತ ಮತ್ತು ಚೀನಾದಂತಹ ದೇಶಗಳು, ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ತಮ್ಮ ಉತ್ಪನ್ನಗಳ ಮೇಲೆ 500% ವರೆಗಿನ ಅಭೂತಪೂರ್ವ ಸುಂಕವನ್ನು ಎದುರಿಸಬೇಕಾಗುತ್ತದೆ. ಈ ಕ್ರಮವು ವ್ಯಾಪಾರ ಸಂಬಂಧಗಳಲ್ಲಿ, ವಿಶೇಷವಾಗಿ ಪ್ರಮುಖ ಕಾರ್ಯತಂತ್ರದ ಪಾಲುದಾರ ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ತಾಮ್ರದ ಮೇಲೆ 50%, ಔಷಧ ಆಮದಿನ ಮೇಲೆ 200% ಸುಂಕದ ಎಚ್ಚರಿಕೆ – ಭಾರತದ ಮೇಲೆ ಏನು ಪರಿಣಾಮ?
ಈಚೆಗೆ 14 ದೇಶಗಳ ಮೇಲೆ ಹೊಸ ಸುಂಕ ವಿಧಿಸಿ ಟ್ರಂಪ್ ಆದೇಶ ಹೊರಡಿಸಿದ್ದರು. ರಷ್ಯಾದ ಇಂಧನ ಆಮದುದಾರರ ಮೇಲಿನ 500% ತೆರಿಗೆ ಸೇರಿದಂತೆ ಹೊಸ ಸುಂಕಗಳು 2025ರ ಆಗಸ್ಟ್ 1ರಿಂದ ಜಾರಿಗೆ ಬರಲಿವೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ (Tariffs War) ಮತ್ತೆ ಮುಂದುವರಿದಿದೆ. ಮುಂದಿನ ತಿಂಗಳು ಕೆನಡಾದಿಂದ (Canada) ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 35% ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ (Donald trump) ಘೋಷಣೆ ಮಾಡಿದ್ದಾರೆ. ಅಲ್ಲದೇ ಇತರ ಹೆಚ್ಚಿನ ವ್ಯಾಪಾರ ಪಾಲುದಾರರ ಮೇಲೆ 15 ರಿಂದ 20% ಸಂಪೂರ್ಣ ಸುಂಕ ವಿಧಿಸಲು ಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಕುರಿತ ಪತ್ರವನ್ನು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಟ್ರೂತ್ ಸೋಶಿಯಲ್‌ನಲ್ಲಿ ಹಂಚಿಕೊಂಡಿದ್ದಾರೆ. ಬಿಡುಗಡೆ ಮಾಡಿದ ಪತ್ರದಲ್ಲಿ, ಟ್ರಂಪ್ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ (Mark Carney) ಅವರಿಗೆ ಹೊಸ ದರ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಹೊಸ ಸುಂಕವು (Tariff) ಅಮೆರಿಕಕ್ಕೆ ಪ್ರವೇಶಿಸುವ ಕೆನಡಾದ ಉತ್ಪನ್ನಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ. ಮುಂದುವರಿದು.. ಉಳಿದ ವ್ಯಾಪಾರ ಪಾಲುದಾರರ ಮೇಲೆ ಶೇ.15 ಅಥವಾ ಶೇ.20 ರಷ್ಟು ಸುಂಕ ವಿಧಿಸಲು ಯೋಜಿಸುತ್ತಿರುವುದಾಗಿ ಹೇಳಿದ್ದಾರೆ.
ಸುಂಕ ಏರಿಕೆಗೆ ಕಾರಣವನ್ನೂ ಟ್ರಂಪ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೆನಡಾ ಪ್ರಮುಖ ವಿಷಯಗಳಲ್ಲಿ ಸಹಕರಿಸಲು ವಿಫಲವಾಗಿದೆ. ಈ ಕಾರಣದಿಂದಾಗಿ ಸುಂಕ ವಿಧಿಸಲಾಗುತ್ತಿದೆ. ಒಂದು ವೇಳೆ ಕೆನಡಾ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ್ರೆ ದುಪ್ಪಟ್ಟು ಸುಂಕ ವಿಧಿಸಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ.
ಇಲ್ಲಿಯವರೆಗೆ, ಟ್ರಂಪ್ 22 ದೇಶಗಳಿಗೆ ಹೊಸ ಸುಂಕ ವಿಧಿಸುವ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಜಪಾನ್, ಸೌತ್ ಕೊರಿಯಾ, ಮಯನ್ಮಾರ್, ಲಾವೋಸ್, ಥಾಯ್ಲೆಂಡ್, ಸೌತ್ ಆಫ್ರಿಕಾ, ಬಾಂಗ್ಲಾದೇಶ, ಕಜಕಸ್ತಾನ್, ಇಂಡೋನೇಷ್ಯಾ, ಟುನಿಶಿಯಾ, ಮಲೇಷ್ಯಾ, ಸರ್ಬಿಯಾ, ಕಾಂಬೋಡಿಯಾ, ಬೋಸ್ನಿಯಾ ಹರ್ಜೆಗೊವಿನಾ ದೇಶಗಳಿಗೆ ಅಮೆರಿಕ ಹೊಸ ಆಮದು ಸುಂಕಗಳನ್ನು ಪ್ರಕಟಿಸಿದೆ. ಆಗಸ್ಟ್ 1ರಿಂದ ಇದು ಅಧಿಕೃತವಾಗಿ ಜಾರಿಗೆ ಬರಲಿದೆ. ಅಲ್ಲದೇ ಇದು ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.
– ಅಮೆರಿಕದಲ್ಲಿ 9 ಲಕ್ಷ ಕೋಟಿ ಹೂಡಿಕೆ, ಇಂಧನ ಆಮದು ಹೆಚ್ಚಳ ಮಾಡುವುದಾಗಿ ಘೋಷಣೆ
ವಾಷಿಂಗ್ಟನ್: ಪ್ರಸ್ತುತ ನಡೆಯುತ್ತಿರುವ ವಾಣಿಜ್ಯ ಯುದ್ಧದ ನಡುವೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ (Giorgia Meloni) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಭೇಟಿಯಾಗಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಮೆಲೊನಿ, ಟ್ರಂಪ್ ಅವರನ್ನ ಶ್ವೇತಭವನದಲ್ಲಿ ಭೇಟಿಯಾಗಿ ವ್ಯಾಪಾರ ಒಪ್ಪಂದಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
27 ರಾಷ್ಟ್ರಗಳನ್ನೊಳಗೊಂಡ ಐರೋಪ್ಯ ಒಕ್ಕೂಟದ ಮೇಲೆ ಅಮೆರಿಕವು ಶೇ 25ರಷ್ಟು ಆಮದು ಸುಂಕ ಹೇರಿದೆ. ಇದರಲ್ಲಿ ಪ್ರಮುಖವಾಗಿ ಉಕ್ಕು, ಅಲ್ಯುಮಿನಿಯಂ ಮತ್ತು ಕಾರುಗಳು ಸೇರಿವೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಉತ್ಪನ್ನಗಳ ಮೇಲೆ ಯುರೋಪ್‌ನಲ್ಲೂ ಸುಂಕ ಹೆಚ್ಚಳ ಮಾಡಲಾಗಿದೆ. ಇದರಿಂದ ಎರಡೂ ಕಡೆ ಒತ್ತಡ ಸೃಷ್ಟಿಯಾಗಿದೆ. ಈ ನಡುವೆ ಅಮೆರಿಕದ ಪ್ರತಿಸುಂಕದ ಬರೆಯಿಂದ ಪಾರಾಗಲು ಮೆಲೊನಿ ಅವರು ವಾಷಿಂಗ್ಟನ್ ಮತ್ತು ಯುರೋಪ್ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಈ ನಡುವೆ ಟ್ರಂಪ್ ಸುಂಕ ವಿಧಿಸಿದ ಬಳಿಕ ಅಮೆರಿಕಕ್ಕೆ ಭೇಟಿ ನೀಡಿದ ಮೊದಲ ಯುರೋಪಿಯನ್ ನಾಯಕಿ ಮೆಲೊನಿ ಆಗಿದ್ದಾರೆ. ಇದನ್ನೂ ಓದಿ: ಮುಂಬೈ To ದುಬೈ ಮಧ್ಯೆ ಸಮುದ್ರದೊಳಗೆ ರೈಲು! – ದೇಶದ ಭವಿಷ್ಯವನ್ನೇ ಬದಲಿಸಲಿದೆಯಾ ಈ ಪ್ಲ್ಯಾನ್?
ಈ ಸಂರ್ಭದಲ್ಲಿ ಟ್ರಂಪ್, ಇಟಲಿ ಪ್ರಧಾನಿ ಮೆಲೊನಿ ಅವರನ್ನ ಹಾಡಿಹೊಗಳಿದ್ದಾರೆ. ಶ್ವೇತಭವನದಲ್ಲಿ ಮಾತನಾಡುತ್ತಾ, ಮೆಲೊನಿ ಅವರನ್ನ ತುಂಬಾ ಇಷ್ಟಪಡುತ್ತೇನೆ, ಅವರು ಶ್ರೇಷ್ಠ ಪ್ರಧಾನಿಯಾಗಿದ್ದು, ಯುರೋಪಿನಾದ್ಯಂತ ಸಂಚಲನ ಮೂಡಿಸಿದ್ದಾರೆ. ಇಟಲಿಯಲ್ಲೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾನು ಅವರನ್ನು ಮೊದಲಿನಿಂದಲೂ ನೋಡುತ್ತಾ ಬಂದಿದ್ದೇನೆ. ವಿಶ್ವದ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ನಮ್ಮ ಎರಡೂ ರಾಷ್ಟ್ರಗಳ ಸಂಬಂಧ ಉತ್ತಮವಾಗಿದ್ದು, ಮುಂದೆಯೂ ಒಟ್ಟಿಗೆ ಸಾಗಲಿವೆ ಎಂದು ಗುಣಗಾನ ಮಾಡಿದರು. ಇದನ್ನೂ ಓದಿ: ಯುಎಸ್-ಚೀನಾ ಟಾರಿಫ್ ವಾರ್ ಮತ್ತಷ್ಟು ಜೋರು – ಚೀನಾ ಉತ್ಪನ್ನಗಳಿಗೆ 245% ಸುಂಕ ವಿಧಿಸಿದ ಅಮೆರಿಕ
ಇದೇ ವೇಳೆ ಉಭಯ ರಾಷ್ಟ್ರಗಳ ನಡುವೆ ಸುಂಕ, ವಲಸೆ ವಿಚಾರಗಳನ್ನು ಸುದೀರ್ಘ ಚರ್ಚೆ ನಡೆಸಿದರು. ಈ ವೇಳೆ ಸುಂಕಗಳಿಂದ ಅಮೆರಿಕವು ಹೆಚ್ಚು ಪ್ರಯೋಜನ ಪಡೆಯುತ್ತಿದೆ. ಆತುರದಲ್ಲಿ ವ್ಯಾಪಾರ ಒಪ್ಪಂದ ಮಾಡಲು ಬಯಸುವುದಿಲ್ಲ ಎಂದು ಟ್ರಂಪ್ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿ ಮೆಲೊನಿ, ಇಟಾಲಿಯನ್ ಕಂಪನಿಗಳು ಅಮೆರಿಕದಲ್ಲಿ 10 ಬಿಲಿಯನ್ ಯುರೋಗಳನ್ನು (ಸುಮಾರು 9 ಲಕ್ಷ ಕೋಟಿ) ಹೂಡಿಕೆ ಮಾಡಲಿವೆ. ಜೊತೆಗೆ ಅಮೆರಿಕದಿಂದ ಇಂಧನ ಆಮದು ಹೆಚ್ಚಿಸಲಿವೆ ಎಂದು ಘೋಷಣೆ ಮಾಡಿದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: UK | ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಭಾರತೀಯ ಮೂಲದ ಮುಮ್ತಾಜ್ ಆಯ್ಕೆ
ವಾಷಿಂಗ್ಟನ್/ಬೀಜಿಂಗ್: ಅಮೆರಿಕ-ಚೀನಾ (US-China) ನಡುವೆ ವಾಣಿಜ್ಯ ಸಮರ ಜೋರಾಗುತ್ತಿದೆ. ಈ ನಡುವೆ ಟ್ರಂಪ್ ಆಡಳಿತವು ಚೀನಾದ ಆಮದು ಸರಕುಗಳ ಮೇಲೆ ಶೇ.245 ರಷ್ಟು ಸುಂಕ (Tariffs) ವಿಧಿಸಿದೆ. ಶ್ವೇತಭವನದ ಫ್ಯಾಕ್ಟ್ ಶೀಟ್‌ನಿಂದ (White House Fact Sheet) ಈ ಮಾಹಿತಿ ಬಹಿರಂಗವಾಗಿದೆ.
ಮಂಗಳವಾರ ಶ್ವೇತಭವನ ಬಿಡುಗಡೆ ಮಾಡಿದ ಫ್ಯಾಕ್ಟ್ ಶೀಟ್ ಪ್ರಕಾರ 245% ಸುಂಕ ನಿಗಧಿಪಡಿಸಿರುವುದು ಖಚಿತವಾಗಿದೆ. ಈ ಮೂಲಕ ಚೀನಾ (China) ಪ್ರತಿರೋಧಕ್ಕೆ ಅಮೆರಿಕ ದೊಡ್ಡ ಹೊಡೆತ ಕೊಟ್ಟಿದೆ. ಇದನ್ನೂ ಓದಿ: ವಾಹನ ಕಂಪನಿಗಳಿಗೆ ತಾತ್ಕಾಲಿಕ ವಿನಾಯತಿ – ಟ್ರಂಪ್ ಯೂಟರ್ನ್
ವಿಶ್ವದ ಬಲಾಢ್ಯ ಆರ್ಥಿಕತೆ ಹೊಂದಿರುವ ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರ (Tariff War) ಜೋರಾಗುತ್ತಲೇ ಇದೆ. ಇತ್ತೀಚೆಗಷ್ಟೇ ಅಮೆರಿಕದ 145% ಪ್ರತಿಸುಂಕ ನೀತಿಗೆ ವಿರುದ್ಧವಾಗಿ ಚೀನಾ ಅಮೆರಿಕದ ವಸ್ತುಗಳಿಗೆ 125% ಸುಂಕ ವಿಧಿಸಿತ್ತು. ಅಲ್ಲದೇ ಒಂದು ದಿನದ ಹಿಂದೆಯಷ್ಟೇ ಸೆಮಿಕಂಡಕ್ಟರ್, ಐಟಿ ಉತ್ಪನ್ನಗಳಲ್ಲಿ ಬಳಕೆಯಾಗುವ ಅಪರೂಪದ ಲೋಹ ರಫ್ತಿಗೆ ನಿರ್ಬಂಧ ಹೇರಿತ್ತು. ಜೊತೆಗೆ ಅಮೆರಿಕದ ಬೋಯಿಂಗ್ ಕಂಪನಿಯ ವಿಮಾನ ಖರೀದಿ ನಿಲ್ಲಿಸುವಂತೆ ತನ್ನ ದೇಶದ ವಿಮಾನಯಾನ ಸಂಸ್ಥೆಗಳಿಗೆ ಆದೇಶ ನೀಡಿತ್ತು. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ಚೀನಾದ ಆಮದು ವಸ್ತುಗಳ ಮೇಲಿನ ಸುಂಕವನ್ನು ಬರೋಬ್ಬರಿ 245%ಗೆ ಏರಿಕೆ ಮಾಡಿದೆ.
ಅಮೆರಿಕದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, ಸುಂಕದ ವಿಷಯದಲ್ಲಿ ಚೀನಾ ತನ್ನ ಗಂಭೀರ ನಿಲುವನ್ನು ಪದೇ ಪದೇ ಹೇಳುತ್ತಲೇ ಇದೆ. ಸುಂಕದ ಸಮರವನ್ನು ಮೊದಲು ಪ್ರಾರಂಭಿಸಿದ್ದು ಅಮೆರಿಕ. ಚೀನಾ ತನ್ನ ಕಾನೂನುಬದ್ಧ ಹಕ್ಕುಗಳು, ಹಿತಾಸಕ್ತಿ ಕಾಪಾಡಲು ಅಗತ್ಯ ಪ್ರತಿಕ್ರಮಗಳನ್ನು ತೆಗೆದುಕೊಂಡಿದೆ ಅಷ್ಟೇ ಅಂತ ಹೇಳಿದ್ದಾರೆ. ಇದನ್ನೂ ಓದಿ: 30 ದಿನಗಳಿಗಿಂತ ಹೆಚ್ಚು ಕಾಲ ಇರುವ ವಿದೇಶಿ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ
ವಾಷಿಂಗ್ಟನ್: ಅಮೆರಿಕ ಈಗ ಅಸಲಿ ಟಾರೀಫ್ ವಾರ್ ಶುರು ಮಾಡಿದೆ. ಈ ವಿಚಾರದಲ್ಲಿ ಟ್ರಂಪ್ (DonaldT rump) ಮಿತ್ರನನ್ನು ಬಿಟ್ಟಿಲ್ಲ. ಶತ್ರುವನ್ನು ಬಿಟ್ಟಿಲ್ಲ. ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಿದ್ದಾರೆ. ಪರಿಣಾಮ ಭಾರತದ ಮೇಲೆಯೂ ಟ್ರಂಪ್ ಶೇ.26ರಷ್ಟು ಪ್ರತಿ ಸುಂಕ (Reciprocal Tariff) ವಿಧಿಸಿ ಶಾಕ್ ನೀಡಿದ್ದಾರೆ.
ಇಲ್ಲಿಯೂ ಡಿಸ್ಕೌಂಟ್ ನೀಡ್ತಿದ್ದೇನೆ ಎನ್ನುತ್ತಾ ತಮ್ಮನ್ನು ತಾವು ಉದಾರಿ ಎಂದು ತೋರಿಸಿಕೊಳ್ಳಲು ನೋಡಿದ್ದಾರೆ. ಮೋದಿ ನನಗೆ ಉತ್ತಮ ಸ್ನೇಹಿತ.. ಆದ್ರೆ, ನಾನು ಅವರಿಗೆ ನೀವು ನಮ್ಮ ಗೆಳೆಯ, ಆದ್ರೂ ನಮ್ಮನ್ನು ಸರಿಯಾಗಿ ನೋಡಿಕೊಳ್ತಿಲ್ಲ ಎಂದಿದ್ದೆ ಅಂತ ಟ್ರಂಪ್ ಹೇಳಿದ್ದಾರೆ. ಭಾರತ ನಮ್ಮಿಂದ 52% ಕ ವಸೂಲಿ ಮಾಡ್ತಿದೆ. ಹೀಗಾಗಿ ನಾವು ಅದರ ಅರ್ಧದಷ್ಟು ಅಂದ್ರೆ 26% ಸುಂಕ ವಸೂಲಿ ಮಾಡ್ತೇವೆ ಎಂದಿದ್ದಾರೆ.
ಟ್ರಂಪ್ ಟಾರೀಫ್ ಬಗ್ಗೆ ವಿಶ್ಲೇಷಣೆ ನಡೆಸ್ತಿರುವ ಭಾರತದ ವಾಣಿಜ್ಯ ಇಲಾಖೆ, ಇದು ಮಿಶ್ರ ಫಲಿತಾಂಶ.. ಭಾರತಕ್ಕೆ ಹೊಡೆತ ಅಲ್ಲ ಎಂದಿದೆ. ಆದ್ರೆ, ಅಮೆರಿಕಾ ಸುಂಕಾಸ್ತ್ರ, ನಮ್ಮ ಆರ್ಥಿಕತೆಯನ್ನು ಸಂಪೂರ್ಣ ನಾಶ ಮಾಡಲಿದೆ ಎಂಬ ಆತಂಕವನ್ನು ರಾಹುಲ್ ಗಾಂಧಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೇಂದ್ರದ ಕ್ರಮವೇನು ಎಂದು ಪ್ರಶ್ನಿಸಿದ್ದಾರೆ. ಅಂದ ಹಾಗೇ, ಟ್ರಂಪ್ ವಿಧಿಸಿದ 26% ಟಾರೀಫ್‌ನಲ್ಲಿ ಏಪ್ರಿಲ್ 5ರಿಂದ ಶೇ.10ರಷ್ಟು, ಉಳಿದ ಶೇ.16ರಷ್ಟು ಸುಂಕ ಏಪ್ರಿಲ್ 10ರಿಂದ ಜಾರಿ ಆಗಲಿದೆ.
ಭಾರತದ ಮೇಲೇನು ಪರಿಣಾಮ?
* ಔಷಧಿ ಕಂಪನಿಗಳಿಗೆ ರಿಲೀಫ್ – ಜೀರೋ ಟ್ಯಾಕ್ಸ್ (ಅಮೆರಿಕಾಗೆ ರಫ್ತು ಮಾಡುವ ಉತ್ಪನ್ನಗಳಲ್ಲಿ ಔಷಧ ರಂಗದ್ದು ಅಗ್ರಸ್ಥಾನ… ವಾರ್ಷಿಕ 12.7 ಬಿಲಿಯನ್ ಡಾಲರ್ ಮೌಲ್ಯದ ಔಷಧಿಗಳನ್ನು ಅಮೆರಿಕಾಗೆ ರಫ್ತು ಮಾಡಲಾಗ್ತಿದೆ..)
* ಸೆಮಿ ಕಂಡಕ್ಟರ್, ತಾಮ್ರ, ಇಂಧನ ಉತ್ಪನ್ನಗಳಿಗೆ ಸಂಪೂರ್ಣ ರಿಯಾಯ್ತಿ
* ಆಟೋಮೊಬೈಲ್ ಉತ್ಪನ್ನಗಳ ಮೇಲೆ 25% ಸುಂಕ
* ಸ್ಟೀಲ್, ಅಲ್ಯೂಮಿನಿಯಂ ಮೇಲೆ 25% ಸುಂಕ
* ಚಿನ್ನ,ಬೆಳ್ಳಿ, ವಜ್ರಾಭರಣಗಳ ಮೇಲೆ 13.32ರಷ್ಟು ಟಾರೀಫ್
(ಅಮೆರಿಕಾದಲ್ಲಿ ಚಿನ್ನಾಭರಣಗಳ ಖರೀದಿದಾರರಿಗೆ ಹೊರೆ.. ರಫ್ತು ಕುಸಿದರೇ ಭಾರತದಲ್ಲಿ ಚಿನ್ನಾಭರಣಗಳ ಬೆಲೆ ಅಗ್ಗ)
* ಮೊಬೈಲ್, ಟೆಲಿಕಾಂ ಉತ್ಪನ್ನಗಳ ಮೇಲೆ 7.24% ಟಾರೀಫ್
* ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ 7.24% ಟಾರೀಫ್
(14.39 ಬಿಲಿಯನ್ ಡಾಲರ್ ಮೌಲ್ಯ.. ಕಂಪ್ಯೂಟರ್, ಬಾಯ್ಲರ್, ಟರ್ಬೈನ್ ಬೆಲೆ ಹೆಚ್ಚಲಿವೆ)
* ಜವಳಿ ಉದ್ಯಮದ ಮೇಲೆ ತೀವ್ರ ಪ್ರಭಾವ
(ರಫ್ತಿನಲ್ಲಿ 28ರಷ್ಟು ಪಾಲು ಜವಳಿ..9.6 ಬಿಲಿಯನ್ ಡಾಲರ್ ಮೌಲ್ಯ)
* ಕೃಷಿ, ಡೈರಿ, ಸೀಫುಡ್ ಮೇಲೆ ಸುಂಕ.. ರಫ್ತು ಕುಸಿಯಬಹುದು
* ಪಾದರಕ್ಷೆ ಉದ್ಯಮದ ಮೇಲೆ ಪ್ರಭಾವ.. ರಫ್ತು ಕುಸಿಯಬಹುದು
(ಈ ಉತ್ಪನ್ನಗಳ ಮೇಲಿನ ಟಾರೀಫ್ ವ್ಯತ್ಯಾಸ 15.56 ರಷ್ಟಿದೆ.. ಅಮೆರಿಕ ಮಾರ್ಕೆಟ್‌ನಲ್ಲಿ ಭಾರತದಲ್ಲಿ ಉತ್ಪಾದಿಸಿದ ಪಾದರಕ್ಷೆಗಳ ಬೆಲೆ ಹೆಚ್ಚಲಿದೆ)
ಭಾರತ ಅಷ್ಟೇ ಅಲ್ಲ.. ಜಗತ್ತಿನ 130 ದೇಶಗಳ ಮೇಲೆ ಟ್ರಂಪ್ ಸುಂಕಾಸ್ತ್ರ ಪ್ರಯೋಗಿಸಿದ್ದಾರೆ. ಈ ದಿನವನ್ನು ಅಮೆರಿಕಗೆ ಸಿಕ್ಕ ಪುನರ್ಜನ್ಮ ಎಂದು ಬಣ್ಣಿಸಿದ್ದಾರೆ. ಅಮೆರಿಕ ಕೈಗಾರಿಕೋದ್ಯಮಕ್ಕೆ ಇಂದು ಪುನರ್ಜನ್ಮ ಸಿಕ್ಕಿದೆ. ಅಮೆರಿಕ ಮತ್ತೆ ಸುಸಂಪನ್ನ ದೇಶವಾಗಿ ಅವತರಿಸಲಿದೆ. ಕಳೆದ 50 ವರ್ಷದಿಂದ ನಮ್ಮ ತೆರಿಗೆದಾರರನ್ನು ದೋಚಿದ್ರು. ಇನ್ಮುಂದೆ ಅದು ನಡೆಯಲ್ಲ.. ನಮ್ಮ ಮೇಲೆ ಸುಂಕ ವಿಧಿಸುವ ದೇಶಗಳ ಮೇಲೆ ನಾವು ಸುಂಕ ವಿಧಿಸ್ತೇವೆ. ಅಮೆರಿಕಾಗೆ ನಿಜವಾದ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ ಎಂದು ಟ್ರಂಪ್ ಬಣ್ಣಿಸಿದ್ದಾರೆ.
ಸುಂಕ ಘೋಷಣೆಯಿಂದ ಅಮೆರಿಕದಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಆಗುತ್ತವೆ. ಕಂಪನಿಗಳು ವಾಪಸ್ ಬರುತ್ತವೆ. ಎಂದು ಟ್ರಂಪ್ ಅಂದಾಜಿಸಿದ್ದಾರೆ. ಸುಂಕ ಹೇರಿಕೆ ವಿಚಾರದಲ್ಲಿ ಜನವಾಸವಿಲ್ಲದ ಚಿಕ್ಕ ಚಿಕ್ಕ ದ್ವೀಪಗಳನ್ನು ಟ್ರಂಪ್ ಬಿಟ್ಟಿಲ್ಲ. ಆಸ್ಟ್ರೇಲಿಯಾ ನಿಯಂತ್ರಣದಲ್ಲಿರುವ ಹಿಯರ್ಡ್, ಮೆಕ್‌ಡೊನಾಲ್ಡ್ ದ್ವೀಪಗಳ ಮೇಲೆ ಶೇಕಡಾ 10ರಷ್ಟು ಸುಂಕ ವಿಧಿಸಿದ್ದಾರೆ. ಯಾವುದೇ ದೇಶ ಅಮೆರಿಕಾದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು.. ಕನಿಷ್ಠ 10% ಸುಂಕ ವಿಧಿಸ್ತೇವೆ ಎಂದಿದ್ದಾರೆ. ಈಗಾಗಲೇ ಹೆಚ್ಚುವರಿ ಸುಂಕ ಜಾರಿಯಲ್ಲಿರುವ ಕಾರಣ ಈ ಪಟ್ಟಿಯಲ್ಲಿ ಕೆನಡಾ, ಮೆಕ್ಸಿಕೋ ಹೆಸರು ಕಾಣಿಸಿಕೊಂಡಿಲ್ಲ. ಜೊತೆಗೆ ರಷ್ಯಾ, ಬೆಲಾರಸ್, ಉತ್ತರ ಕೊರಿಯಾ, ಕ್ಯೂಬಾ ದೇಶಗಳ ಹೆಸರು ಮಿಸ್ ಆಗಿವೆ. ಈಗಾಗಲೇ ಆ ದೇಶಗಳ ಮೇಲೆ ಹಲವು ನಿರ್ಬಂಧಗಳು ಇರುವ ಹಿನ್ನೆಲೆಯಲ್ಲಿ ಈ ಟಾರೀಫ್ ಅನ್ವಯವಾಗಲ್ಲ ಎಂದು ಶ್ವೇತಭವನ ಸ್ಪಷ್ಟನೆ ನೀಡಿದೆ.
ಟ್ರಂಪ್ ಟಾರೀಫ್ – ಯಾವ ದೇಶದ ಮೇಲೆ ಎಷ್ಟು?
* ಚೀನಾ – 34% – * ಇಯು -20%
* ವಿಯೆಟ್ನಾಂ- 46% – * ತೈವಾನ್ – 32%
* ಜಪಾನ್ – 24% – * ಸೌತ್ ಕೊರಿಯಾ – 25%
* ಥೈಲ್ಯಾಂಡ್- 36% – * ಸ್ವಿಟ್ಜರ್‌ಲ್ಯಾಂಡ್ – 31%
* ಇಂಡೋನೇಷ್ಯಾ- 32% – * ಮಲೇಷ್ಯಾ – 24%
* ಕಾಂಬೋಡಿಯಾ- 49% – * ಲಾವೋಸ್ – 48%
* ಶ್ರೀಲಂಕಾ – 44% – * ಮಯನ್ಮಾರ್ – 44%
* ಬಾಂಗ್ಲಾ – 37% – * ಪಾಕಿಸ್ತಾನ – 29%
(ಚೀನಾ, ಬಾಂಗ್ಲಾ ಮೇಲೆ ವಿಧಿಸಲಾದ ಟಾರೀಫ್ ಪರಿಣಾಮ ಭಾರತದ ಜವಳಿ, ಗಾರ್ಮೆಂಟ್ಸ್ ರಫ್ತು ಪ್ರಮಾಣ ಹೆಚ್ಚಬಹುದು)
* ಸೌತ್ ಆಫ್ರಿಕಾ- 30% – * ಬೋಟ್ಸ್ವಾನಾ -37%
* ಲಾವೋಸ್ – 48% – * ಮಡ್‌ಗಸ್ಕರ್ – 47%
* ಬ್ರಿಟನ್ – 10% – * ಬ್ರೆಜಿಲ್ – 10%
* ಯುಎಇ – 10% – * ಜೋರ್ಡಾನ್- 20%
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಟ್ರಂಪ್ (Donald Trump) ಅಧಿಕಾರಕ್ಕೆ ಏರಿದ ದಿನದಿಂದಲೂ ಭಾರತದೊಂದಿಗೆ ಸುಂಕ ಹೆಚ್ಚಳ ವಿಚಾರದಲ್ಲಿ ಘರ್ಷಣೆ ನಡೆಯುತ್ತಲೇ ಇದೆ. ಆದ್ರೆ ಈಗ ಅಚ್ಚರಿ ಎನ್ನುವಂತೆ ಟ್ರಂಪ್, ಭಾರತದ ಪ್ರಧಾನಿ ಮೋದಿ (Narendra Modi) ಅವರ ಗುಣಗಾನ ಮಾಡಿರುವುದು ಅಚ್ಚರಿವುಂಟುಮಾಡಿದೆ.
ಮೋದಿ, ತುಂಬಾ ಸ್ಮಾರ್ಟ್ ಮ್ಯಾನ್, ನನ್ನ ಒಳ್ಳೇ ಸ್ನೇಹಿತ ಕೂಡ ಹೌದು. ಇತ್ತೀಚೆಗೆ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ನಾವು ತುಂಬಾ ಒಳ್ಳೆಯ ಚರ್ಚೆ ನಡೆಸಿದ್ದೇವೆ. ಇದು ಭಾರತ ಮತ್ತು ನಮ್ಮ ದೇಶದ ನಡುವೆ ಉತ್ತಮ ಬಾಂಧವ್ಯಕ್ಕೆ ಕಾರಣವಾಗಲಿದೆ ಎಂದು ನಾನು ಭಾವಿಸುತ್ತೇನೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಭಾರತ ಒಬ್ಬ ಶ್ರೇಷ್ಠ ಪ್ರಧಾನಿಯನ್ನು ಹೊಂದಿದೆ ಎಂದು ಬಣ್ಣಿಸಿದ್ದಾರೆ.
ಏಪ್ರಿಲ್ 2ರಿಂದ ಭಾರತ ಸೇರಿದಂತೆ ವಿವಿಧ ದೇಶಗಳ ವಿರುದ್ಧ ಪ್ರತೀಕಾರಾತ್ಮಕ ಸುಂಕವನ್ನು ಹೇರಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ಭಾರತದ ವ್ಯಾಪಾರ ನೀತಿಗಳನ್ನು ನಿರಂತರವಾಗಿ ಟ್ರಂಪ್ ಟೀಕಿಸುತ್ತಾ ಬಂದಿದ್ದು, ಭಾರತದ ಆಮದು ಸುಂಕಗಳು (Tariffs) ಅತ್ಯಂತ ನ್ಯಾಯಸಮ್ಮತವಲ್ಲದ್ದು ಹಾಗೂ ಪ್ರಬಲ ಎಂದಿದ್ದಾರೆ. ಜೊತೆಗೆ ಭಾರತವನ್ನು ‘ಸುಂಕದ ರಾಜ’ ಎಂದು ಕರೆದಿದ್ದರು.
ಭಾರತದ ಜೊತೆ ನನಗೆ ಒಳ್ಳೆಯ ಸಂಬಂಧ ಇದೆ. ಆದರೆ ಏಕೈಕ ಸಮಸ್ಯೆಯೆಂದರೆ, ಅದು ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶ. ಸುಸ್ಥಿರತೆಯನ್ನು ಕಾಪಾಡುವ ಸಲುವಾಗಿ ಸುಂಕವನ್ನು ಭಾರತ ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆ ನನ್ನದು. ಆದರೆ ಏಪ್ರಿಲ್ 2ರಂದು ನಮ್ಮ ಮೇಲೆ ಅವರು ವಿಧಿಸುವಷ್ಟೇ ಸುಂಕವನ್ನು ನಾವೂ ಹೇರಲಿದ್ದೇವೆ ಎಂದು ಈ ಮೊದಲು ಹೇಳಿಕೆ ನೀಡಿದ್ದರು.
ಕೆಲ ದಿನಗಳ ಹಿಂದೆಯಷ್ಟೇ ಟ್ರಂಪ್, ಭಾರತವು ಅಮೆರಿಕ ಆಮದು ಉತ್ಪನ್ನಗಳ ಮೇಲಿನ ಸುಂಕ ಕಡಿಮೆ ಮಾಡಲಿದೆ ಎಂದು ಹೇಳಿಕೊಂಡಿದ್ದರು. ಆದ್ರೆ ಆ ರೀತಿಯ ಯಾವುದೇ ಪ್ರಸ್ತಾವನೆ ಇಲ್ಲವೆಂದು ಭಾರತ ಘೋಷಿಸಿತ್ತು.
ಒಟ್ಟಾವಾ: ಅಮೆರಿಕ ದೇಶಗಳಿಗೆ ಆಮದಾಗುವ ವಾಹನಗಳ ಮೇಲೆ ಶೇ.25 ರಷ್ಟು ಸುಂಕ ವಿಧಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ ಬೆನ್ನಲ್ಲೇ, ಅಮೆರಿಕ ಜೊತೆಗಿನ ಹಳೆಯ ಆರ್ಥಿಕ ಮತ್ತು ರಕ್ಷಣಾ ಸಂಬಂಧಗಳು ಕೊನೆಗೊಂಡಿದೆ ಎಂದು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ (Mark Carney) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಮೆರಿಕದ ಸುಂಕ (US Tariff) ವಿಧಿಸುವ ಕ್ರಮವು ಕೆನಡಾದ ಆರ್ಥಿಕತೆಯ ಮೇಲಿನ ನೇರ ದಾಳಿಯಾಗಿದೆ. ಇದು ಕೆನಡಾದ 5 ಲಕ್ಷ ಆಟೋಮೊಬೈಲ್ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಭದ್ರತೆ ಮತ್ತು ವ್ಯಾಪಾರ ಸಂಬಂಧಗಳ ಮಾತುಕತೆಗೆ ಮತ್ತೆ ಸಮಯ ಬರುತ್ತದೆ ಎಂದು ಕಾರ್ನಿ ಹೇಳಿದ್ದಾರೆ. ಇದನ್ನೂ ಓದಿ: ಮೂರು ವರ್ಷಗಳಿಂದ ಪಾಕ್ ಜೈಲಲ್ಲಿದ್ದ ಭಾರತದ ಮೀನುಗಾರ ನೇಣಿಗೆ ಶರಣು
ಟ್ರಂಪ್ ಅವರ ಸುಂಕ ವಿಧಿಸುವ ಕ್ರಮವು ಅನ್ಯಾಯದ ಕ್ರಮ. ಈ ಮೂಲಕ ಟ್ರಂಪ್ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ವ್ಯಾಪಾರ ಒಪ್ಪಂದಗಳನ್ನು ಉಲ್ಲಂಘಿಸುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಸಂಬಂಧವನ್ನು ಶಾಶ್ವತವಾಗಿ ಬದಲಾಯಿಸುತ್ತಿದ್ದಾರೆ. ಭವಿಷ್ಯದ ವ್ಯಾಪಾರ ಸಂಬಂಧಗಳನ್ನು ಲೆಕ್ಕಿಸುತ್ತಿಲ್ಲ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತಕ್ಕಿಂತಲೂ ನಾವು ಹಿಂದಿದ್ದೇವೆ – ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಮುಂದಾದ ಟ್ರಂಪ್
ನಮ್ಮ ಆರ್ಥಿಕತೆ, ಮಿಟರಿ ಸಹಕಾರ ಮತ್ತು ಭದ್ರತೆಯ ಆಧಾರದ ಮೇಲೆ ಅಮೆರಿಕದ ಜೊತೆಗಿನ ಹಳೆಯ ಸಂಬಂಧಗಳನ್ನು ಮುಗಿಸುತ್ತಿದ್ದೇವೆ. ಟ್ರಂಪ್ ಸುಂಕದ ವಿರುದ್ಧ ಹೋರಾಡುವುದು ಆರ್ಥಿಕತೆ ರಕ್ಷಿಸುವುದು ನಮ್ಮ ಮುಂದಿನ ಉದ್ದೇಶ. ಪ್ರತೀಕಾರದ ವ್ಯಾಪಾರ ಕ್ರಮಗಳೊಂದಿಗೆ ಹೋರಾಡುತ್ತೇವೆ, ಇದರಿಂದ ಹೆಚ್ಚು ಪರಿಣಾಮ ಬೀರುವುದು ಅಮೆರಿಕದ ಮೇಲೆಯೇ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕ ಆಮದು ಮೇಲಿನ ಸುಂಕ ಕಡಿತ – ಭಾರತದಿಂದ ಮೊದಲ ಹಂತದ ವ್ಯಾಪಾರ ಒಪ್ಪಂದ