Tag: ಸೀಸ್‌ ಕಡ್ಡಿ ಸಿನಿಮಾ

  • ‘ಸೀಸ್ ಕಡ್ಡಿ’ ಚಿತ್ರದ ಟ್ರೈಲರ್ ಬಿಡುಗಡೆ!

    ‘ಸೀಸ್ ಕಡ್ಡಿ’ ಚಿತ್ರದ ಟ್ರೈಲರ್ ಬಿಡುಗಡೆ!

    ತನ್ ಗಂಗಾಧರ್ (Rathan Gangadhar) ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಸೀಸ್ ಕಡ್ಡಿ’ ಚಿತ್ರದ (Sees Kaddi) ಟ್ರೈಲರ್ ರಿಲೀಸ್‌ ಆಗಿದೆ. ಈ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಿನಿಮಾ ಬಗೆಗಿನ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಐವರು ಪ್ರತಿಭಾನ್ವಿತ ನಿರ್ದೇಶಕರು ಅತಿಥಿಗಳಾಗಿ ಆಗಮಿಸಿದ್ದು ವಿಶೇಷ. ಘೋಸ್ಟ್‌ ಖ್ಯಾತಿಯ ಶ್ರೀನಿ, ಮಹಿರಾ ಖ್ಯಾತಿಯ ನಿರ್ದೇಶಕ ಮಹೇಶ್ ಗೌಡ, ಡೊಳ್ಳು ಖ್ಯಾತಿಯ ನಿರ್ದೇಶಕ ಸಾಗರ್ ಪುರಾಣಿಕ್, ಆಯುಷ್ ಮಲ್ಲಿ, ಚೆಲುವರಾಜ್ ಮುಂತಾದವರು ಈ ಪತ್ರಿಕಾಗೋಷ್ಠಿಯಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಇದನ್ನೂ ಓದಿ:ಬೇಕಂತಲೇ ಪಿತೂರಿ ಮಾಡಲಾಗಿದೆ, ನನ್ನ ಗಂಡನಿಗೆ ನ್ಯಾಯ ಸಿಗೋವರೆಗೂ ಹೋರಾಡ್ತೀನಿ: ಮಡೆನೂರು ಮನು ಪತ್ನಿ

    ಈ ಸಂದರ್ಭದಲ್ಲಿ ಮಾತಾನಾಡಿದ ನಿರ್ದೇಶ ರತನ್ ಗಂಗಾಧರ್, ಈ ಸಿನಿಮಾ ಕಥೆಗೆ ಸ್ಫೂರ್ತಿಯಾದ ವಿಚಾರವನ್ನು ತೆರೆದಿಟ್ಟಿದ್ದಾರೆ. ಪುಸ್ತಕವೊಂದನ್ನು ಓದಿದಾಗ ಅದರಲ್ಲಿ ಪೆನ್ಸಿಲ್ ನ ನಾನಾ ಸೂಕ್ಷ್ಮಗಳ ವಿವರವಿತ್ತು. ಅದನ್ನು ಐದು ಪಾತ್ರಗಳನ್ನಾಗಿಸಿ, ಅದಕ್ಕೆ ಹೊಂದಿಕೊಂಡಂತೆ ಐದು ಕಥೆಗಳನ್ನು ಸೃಷ್ಟಿಸಿ, ಆ ಕಥೆಗಳೆಲ್ಲ ಒಂದು ಬಿಂದುವಿನಲ್ಲಿ ಸಂಧಿಸುವ ಅಚ್ಚರಿಯ ಸಾರವೇ ಸೀಸ್ ಕಡ್ಡಿಯ ಕಥೆ ಎಂದರು. ಈ ಚಿತ್ರದಲ್ಲಿ ಬೇರೆ ಬೇರೆ ಬಗೆಯ ಕನ್ನಡ ಭಾಷಾ ಶೈಲಿಗಳಿವೆ. ಬೆಂಗಳೂರು ಕನ್ನಡ, ಹವ್ಯಕ ಕನ್ನಡ, ತುಮಕೂರು ಭಾಗದ ಹಳ್ಳಿಗಾಡಿನ ಶೈಲಿಯ ಕನ್ನಡ ಹಾಗೂ ಮೈಸೂರು ಸೀಮೆಯ ಕನ್ನಡದ ಬಳಕೆ ಕೂಡ ಪ್ರೇಕ್ಷಕರಿಗೆ ಹೊಸಾ ಅನುಭೂತಿ ನೀಡಲಿದೆ ಎಂಬ ನಂಬಿಕೆ ನಿರ್ದೇಶಕರ ಮಾತುಗಳಲ್ಲಿ ಧ್ವನಿಸುತ್ತಿತ್ತು. ಇದನ್ನೂ ಓದಿ:ನಮ್ಮ ಜಗಳ ನಮ್ಮಲ್ಲೇ ಇರಬೇಕಿತ್ತು, ನಾನು ಸತ್ತರೂ ಯಾರೂ ಕಾರಣರಲ್ಲ: ಸಹ ಕಲಾವಿದೆ

    ಗ್ರಹಣ ಪ್ರೊಡಕ್ಷನ್ ಮೂಲಕ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಲ್ಯ ಸ್ನೇಹಿತರಾದ ಇವರೆಲ್ಲರೂ ಒಟ್ಟಿಗೆ ಈ ಸಿನಿಮಾ ನಿರ್ಮಾಣ ಮಾಡಿದ್ದರ ಹಿಂದೆ ಸಿನಿಮಾ ವ್ಯಾಮೋಹವಿದೆ. ಈ ಸಂದರ್ಭದಲ್ಲಿ ಮಾತಾಡಿದ ನಿರ್ದೇಶಕ ಶ್ರೀನಿ, ಮಕ್ಕಳ ಮುಗ್ಧತೆಯನ್ನು ತಾಜಾತನದಿಂದ ಸೆರೆ ಹಿಡಿದು ದೃಶ್ಯವಾಗಿಸೋದೇ ನಿರ್ದೇಶನದ ನಿಜವಾದ ಸವಾಲು. ಅದನ್ನು ಈ ಚಿತ್ರದಲ್ಲಿ ಸಮರ್ಥವಾಗಿ ಮಾಡಲಾಗಿದೆ. ಈ ಸಿನಿಮಾ ಗೆಲ್ಲಬೇಕು. ಕಮರ್ಷಿಯಲ್‌ ಆಗಿ ಇಂತಹ ಸಿನಿಮಾಗಳು ಯಶಸ್ಸು ಕಾಣಬೇಕೆಂದು ಶುಭಹಾರೈಸಿದರು.

    ಇತ್ತೀಚೆಗಷ್ಟೇ ತೆರೆಗಂಡು ಯಶಸ್ವಿ ಪ್ರದರ್ಶನ ಕಾಣುತ್ತಿರೋ ‘ಪಪ್ಪಿ’ ಚಿತ್ರದ ನಿರ್ದೇಶಕ ಆಯುಶ್ ಮಲ್ಲಿ ಮಾತನಾಡಿ, ತಮ್ಮ ಸಿನಿಮಾಗೆ ನೀಡಿದಂಥಾದ್ದೇ ಪ್ರೋತ್ಸಾಹವನ್ನು ‘ಸೀಸ್ ಕಡ್ಡಿ’ ಚಿತ್ರಕ್ಕೂ ಕೊಡುವಂತೆ ಅರಿಕೆ ಮಾಡಿಕೊಂಡರು. ಐದು ಕಥೆ, ಐದು ಕನ್ನಡದ ಉಪಭಾಷೆ ಮತ್ತು ಐದು ಪ್ರದೇಶಗಳ ಸಮಾಗಮದೊಂದಿಗೆ ಇಲ್ಲಿನ ಕಥೆ ಗರಿಬಿಚ್ಚಿಕೊಂಡಿದೆಯಂತೆ. ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಸುನಿಲ್ ನರಸಿಂಹಮೂರ್ತಿ ಛಾಯಾಗ್ರಹಣ, ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ, ಅನಿರುದ್ಧ್ ಹರ್ಷವರ್ಧನ್ ಸಂಕಲನ, ಆಶಾ ಥಾಮಸ್ ವಸ್ತ್ರ ವಿನ್ಯಾಸವಿದೆ. ಸಿತಿನ್ ಅಪ್ಪಯ್ಯ, ಬಿ ಎಸ್ ರಾಮಮೂರ್ತಿ, ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ, ಪ್ರಥಮ್ ರಾಜೇ ಅರಸ್, ಸಂತೋಷ್ ಕರ್ಕಿ, ಅನುಷ್ಕಾ ಟಕ್ಕಲಕಿ, ಸಂಜಯ್ ಗೌಡ, ಶ್ರೇಷ್ಠ್ ಜಪ್ತಿಮಠ್, ಮಹೇಂದ್ರ ಗೌಡ, ದೀಪಿಕಾ ಅಡ್ತಲೆ, ರಾಘವೇಂದ್ರ ಭಟ್, ನಾಗರಾಜ್ ರಾವ್, ರೇಖಾ ಕೂಡ್ಲಿಗಿ, ಉದಾತ್, ಜಯಂತ್ ವೆಂಕಟ್, ಅಮೋಘವರ್ಷ, ಅನೂಪ್ ಬಿ ಆರ್, ಶರ್ಮಿಳಾ ಕಾರ್ತಿಕ್, ಅಭಿಲಾಶ್ ಗೌಡ, ಗಂಗಾಧರ್, ಅಭಿಷೇಕ್, ಅಕುಲ್ ಮುಂತಾದವರ ತಾರಾಗಣವಿರುವ ಈ ಚಿತ್ರ ಜೂನ್ 6ರಂದು ತೆರೆಗಾಣಲಿದೆ.

  • ವಿಶಿಷ್ಟ ಕಥಾ ಹಂದರದ ಮಕ್ಕಳ ಚಿತ್ರ ‘ಸೀಸ್ ಕಡ್ಡಿ’ ಬಿಡುಗಡೆಗೆ ರೆಡಿ!

    ವಿಶಿಷ್ಟ ಕಥಾ ಹಂದರದ ಮಕ್ಕಳ ಚಿತ್ರ ‘ಸೀಸ್ ಕಡ್ಡಿ’ ಬಿಡುಗಡೆಗೆ ರೆಡಿ!

    ತ್ತೀಚಿನ ದಿನಗಳಲ್ಲಿ ಮಕ್ಕಳ ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆ ಅಂತೊಂದು ಕೊರಗು ಕನ್ನಡದ ಸಿನಿಮಾ ಪ್ರೇಮಿಗಳಲ್ಲಿದೆ. ಒಂದು ಸಿನಿಮಾ ರಂಗದ ಜೀವಂತಿಕೆಯ ದೃಷ್ಟಿಯಿಂದ ಎಲ್ಲ ಬಗೆಯ ಸಿನಿಮಾಗಳು ಕೂಡ ಕಾಲ ಕಾಲಕ್ಕೆ ರೂಪುಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿನಿಮಾಸಕ್ತರ ನಡುವಲ್ಲೊಂದು ಚರ್ಚೆ ಚಾಲ್ತಿಯಲ್ಲಿರುವಾಗಲೇ ಸದ್ದಿಲ್ಲದೆ ತಯಾರಾಗಿ ನಿಂತಿರುವ ವಿಶಿಷ್ಟ ಕಥಾನಕದ ಮಕ್ಕಳ ಚಿತ್ರವೊಂದು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಸದ್ದು ಮಾಡಿದೆ. ಇನ್ನೇನು ಆರಂಭವಾಗಲಿರೋ ಶಾಲಾ ರಜಾ ದಿನಗಳು ಅಂತಿಮ ಘಟ್ಟ ತಲುಪಿಕೊಳ್ಳುವ ಹೊತ್ತಿಗೆಲ್ಲ ಅದ್ಧೂರಿಯಾಗಿ ತೆರೆಗಾಣಲು ತಯಾರಿಯೂ ಆರಂಭವಾಗಿದೆ. ಹಾಗೆ ಬಿಡುಗಡೆಗೆ ತಯಾರಾಗಿರುವ ಮಕ್ಕಳ ಚಿತ್ರ ‘ಸೀಸ್ ಕಡ್ಡಿ’. ಇದನ್ನೂ ಓದಿ:ದುಬೈ ಮರಳುಗಾಡಿನಲ್ಲಿ ನಟಿ ಫೋಟೋಶೂಟ್- ಬಾಲಿವುಡ್ ಬ್ಯೂಟಿಯಂತೆ ಮಿಂಚಿದ ಇಶಿತಾ

    ಇದು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ನಿರ್ದೇಶಕರಾಗಿ ಪರಿಚಿತರಾಗಿರುವ ರತನ್ ಗಂಗಾಧರ್ ನಿರ್ದೇಶನದ ಚಿತ್ರ. ‘ಸೀಸ್ ಕಡ್ಡಿ’ (Seas Kaddi) ಎಂಬುದು ನಮ್ಮೆಲ್ಲರ ಪಾಲಿಗೆ ಅಕ್ಷರದ ಬೆಳಕು ತೋರುವ ವಸ್ತು. ಅಂತಹ ಪೆನ್ಸಿಲ್ ಅನ್ನು ರೂಪಕವಾಗಿಟ್ಟುಕೊಂಡು, ಅದರ ಭಾಗವಾಗಿರೋ ಲೆಡ್, ಶಾರ್ಪ್ನರ್, ಇರೇಜರ್ ಮುಂತಾದವುಗಳನ್ನು ಹೋಲುವ ಪಾತ್ರಗಳ ಮೂಲಕ ಈ ಸಿನಿಮಾ ಕಥೆ ತುಂಬಿಕೊಂಡಿದೆಯಂತೆ. ಈ ರೂಪಕಗಳನ್ನಿಟ್ಟುಕೊಂಡು ಎಂತಹ ಪಾತ್ರಗಳು ಸೃಷ್ಟಿಯಾಗಿರಬಹುದೆಂಬ ಕುತೂಹಲಕ್ಕೆ ತಿಂಗಳೊಪ್ಪತ್ತಿನಲ್ಲಿಯೇ ಮಜವಾದ ಉತ್ತರ ಸಿಗಲಿದೆ. ಒಂದು ಪೆನ್ಸಿಲ್‌ನ ರೂಪಕದೊಂದಿಗೆ ಬದುಕಿನ ಅಚ್ಚರಿದಾಯಕ ಮಜಲುಗಳನ್ನು ತೆರೆದಿಡುವ ಈ ಸಿನಿಮಾ ಮಕ್ಕಳ ಚಿತ್ರಗಳ ಸಾಲಿನಲ್ಲಿ ಭಿನ್ನವಾಗಿ ನೆಲೆಕಂಡುಕೊಳ್ಳುವ ಸಾಧ್ಯತೆಗಳಿವೆ. ಇದುವರೆಗೂ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರವನ್ನು ನೋಡಿದವರೆಲ್ಲ ನಾನಾ ದಿಕ್ಕಿನಲ್ಲಿ ವಿಮರ್ಶೆ ಮಾಡಿದ್ದಾರೆ. ಅವೆಲ್ಲವೂ ಸಕಾರಾತ್ಮಕವಾಗಿವೆ ಅನ್ನೋದೇ ‘ಸೀಸ್ ಕಡ್ಡಿ’ಯ ನಿಜವಾದ ಹೆಗ್ಗಳಿಕೆ. ಒಂದಿಡೀ ಸಿನಿಮಾ ಲೈವ್ ಸೌಂಡ್ ರೆಕಾರ್ಡಿಂಗ್ ಮೂಲಕ ಮೂಡಿ ಬಂದಿರೋದು ಮತ್ತೊಂದು ವಿಶೇಷ.

    ಇಲ್ಲಿ ಹರಿಕಥೆಯಲ್ಲಿ ಪ್ರಾವಿಣ್ಯ ಹೊಂದಿರೋ ಸೆಕ್ಯೂರಿಟಿ ಗಾರ್ಡ್ ಮತ್ತು ಕಾಂದಂಬರಿಕಾರನೋರ್ವನ ಮುಖಾಮುಖಿಯಾಗುತ್ತೆ. ಹಾಗೆ ಸಿಕ್ಕ ಸೆಕ್ಯೂರಿಟಿ ಗಾರ್ಡ್ ಅನ್ನೇ ಬೇತಾಳನಾಗಿ ಕಲ್ಪಿಸಿಕೊಂಡು ಆ ಕಾದಂಬರಿಕಾರ ಕಥೆಯೊಂದನ್ನು ಬರೆಯಲಾರಂಭಿಸುತ್ತಾನೆ. ಆ ಬೇತಾಳನ ಪ್ರಶ್ನೆಗಳಿಗೆ ವಿಕ್ರಮಾದಿತ್ಯನ ಪಾತ್ರ ಕೊಡುವ ಉತ್ತರಗಳ ಮೂಲಕ ಕಥೆ ಗರಿಬಿಚ್ಚಿಕೊಳ್ಳುತ್ತೆ. ಮಕ್ಕಳ ಕಥನದಲ್ಲಿಯೇ ಹಿರೀಕರ ಕಥೆಯೂ ತೆರೆದುಕೊಳ್ಳುತ್ತಾ ಸಾಗುತ್ತದೆ. ಅದರೊಂದಿಗೇ ಒಟ್ಟಾರೆ ಸಿನಿಮಾದ ಪಾತ್ರಗಳೂ ಕದಲಲಾರಂಭಿಸುತ್ತವೆ. ಈ ಸಿನಿಮಾ ಈಗಾಗಲೇ ನೋಯ್ಡಾದಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಉತ್ತಮ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿಯನ್ನೂ ಬಾಚಿಕೊಂಡಿದೆ. ಮೆಲ್ಬೋರ್ನ್ ಸಿನಿಮಾ ಫೆಸ್ಟಿವಲ್ (Film Festival) ನಲ್ಲಿಯೂ ಪ್ರದರ್ಶನ ಕಂಡು ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ.

    ಸಾಮಾನ್ಯವಾಗಿ ಮಕ್ಕಳ ಸಿನಿಮಾ ಅಂದಾಕ್ಷಣ ಸಿದ್ಧಸೂತ್ರದ ಸುತ್ತ ಒಂದಷ್ಟು ಕಲ್ಪನೆಗಳು ಮೂಡಿಕೊಳ್ಳುತ್ತವೆ. ಅಂಥಾ ಕಲ್ಪನೆಗಳ ನಿಲುಕಿನಾಚೆಗೆ ಹಬ್ಬಿಕೊಂಡ ಲಕ್ಷಣಗಳಿದ್ದಾವೆ. ಚಿತ್ರತಂಡ ಹಂಚಿಕೊಂಡಿರೋ ಕೆಲ ವಿಚಾರಗಳನ್ನು ಗಮನಿಸಿದರೆ ಆ ವಿಚಾರ ಸ್ಪಷ್ಟವಾಗುತ್ತದೆ. ಇಲ್ಲಿ ಐದು ಕಥೆಗಳಿವೆ. ಅವೆಲ್ಲವೂ ಒಂದು ಬಿಂದುವಿನಲ್ಲಿ ಸಂಧಿಸುತ್ತವೆ. ಒಬ್ಬ ಕಾದಂಬರಿಕಾರ ಮತ್ತು ಆತನ ಸುತ್ತ ಹಬ್ಬಿಕೊಂಡ ಮಕ್ಕಳ ಪಾತ್ರಗಳಾಗಿವೆ. ಅವುಗಳ ಸುತ್ತ ಥ್ರಿಲ್ಲಿಂಗ್ ಅಂಶಗಳಗೊಂಡು, ಚಿಂತನೆಗೂ ಹಚ್ಚುವಂಥಾ ಧಾಟಿಯಲ್ಲಿ ಈ ಸಿನಿಮಾವನ್ನು ರೂಪಿಸಲಾಗಿದೆಯಂತೆ. ಒಟ್ಟಾರೆಯಾಗಿ ಮಕ್ಕಳ ಚಿತ್ರವಾದರೂ ಕೂಡ ಎಲ್ಲ ವಯೋಮಾನದವರನ್ನೂ ಆವರಿಸಿಕೊಳ್ಳುವ ಕಥನ ಸೀಸ್ ಕಡ್ಡಿಯದ್ದು.

    ಪ್ರಯೋಗಾತ್ಮಕ ಗುಣದೊಂದಿಗೆ ಈ ಸಿನಿಮಾವನ್ನು ನಿರ್ದೇಶನ ಮಾಡಿರುವವರು ರತನ್ ಗಂಗಾಧರ್. ಸಂಪತ್ ಶಿವಶಂಕರ್, ಕೃತಿ ನಾಣಯ್ಯರೊಂದಿಗೆ ರತನ್ ಅವರೂ ಸೇರಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿನ ಒಂದೊಂದು ಭಾಗದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಒಬ್ಬೊಬ್ಬರು ನಿರ್ವಹಿಸಿದ್ದಾರೆ. ವಿಕ್ರಮ ಬೇತಾಳ ಭಾಗಕ್ಕೆ ಆಕರ್ಷ ಕಮಲ, ಚಿಕ್ಕಿ ಪಾತ್ರಕ್ಕೆ ಅಕ್ಷರ ಭಾರದ್ವಾಜ್, ರವೀಶ ಪಾತ್ರಕ್ಕೆ ಶರತ್ ಕೆ ಪರ್ವತವಾಣಿ, ಮಂಜಿ ಪಾತ್ರಕ್ಕೆ ಜಯಂತ್ ವೆಂಕಟ್ ಹಾಗೂ ತೌಫಿಕ್ ಪಾತ್ರಕ್ಕೆ ಮಹೇಂದ್ರ ಗೌಡ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನದಲ್ಲಿ ಈ ಸಿನಿಮಾ ಹಾಡುಗಳು ರೂಪುಗೊಂಡಿವೆ. ಮಹೇಶ್ ಎನ್.ಸಿ, ಪ್ರತಾಪ್ ವಿ ಭಟ್, ಮಹೇಂದ್ರ ಗೌಡ ಅನುಜಯ ಎಸ್. ಕುಮ್ಟಕರ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಇದೇ ಮೇ ತಿಂಗಳ ಕಡೆಯ ಭಾಗದಲ್ಲಿ ‘ಸೀಸ್ ಕಡ್ಡಿ’ ಚಿತ್ರ ತೆರೆಗಾಣಲಿದೆ. ಈ ಮೂಲಕ ಬೇಸಿಗೆ ರಜೆಯ ಅಂಚಿನಲ್ಲಿ ಒಂದು ಅಪರೂಪದ ಅನುಭೂತಿ ಕನ್ನಡ ಚಿತ್ರ ಪ್ರೇಮಿಗಳಿಗೆ ಕಾದಿದೆ.