Tag: ಸೀಲ್ ಡೌನ್

  • ಬಿಬಿಎಂಪಿಯಿಂದ ಮನೆ ಸೀಲ್‍ಡೌನ್- 5 ದಿನ ಕಸದೊಂದಿಗೆ ಜೀವನ ನಡೆಸಿದ ಮಹಿಳೆ

    ಬಿಬಿಎಂಪಿಯಿಂದ ಮನೆ ಸೀಲ್‍ಡೌನ್- 5 ದಿನ ಕಸದೊಂದಿಗೆ ಜೀವನ ನಡೆಸಿದ ಮಹಿಳೆ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂ) ಎಡವಟ್ಟಿನಿಂದ ಮಹಿಳೆಯೊಬ್ಬರು 5 ದಿನಗಳ ಕಾಲ ಕಸದೊಂದಿಗೆ ಜೀವನ ನಡೆಸಿದ ಘಟನೆಯೊಂದು ಸಿಲಿಕಾನ್ ಸಿಟಿಯ ಸರ್ ಸಿ.ವಿ ರಾಮ್ ನಗರದಲ್ಲಿ ನಡೆದಿದೆ.

    ಹೌದು. ನಿಧಿ ಧಿಂಗ್ರಾ(37) ಅವರ ಪತಿ ಹಾಗೂ ಅತ್ತೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿಧಿ ಮನೆ ಮುಂದೆ ಬಿಬಿಎಂ ಸಿಬ್ಬಂದಿ ಬೃಹತ್ ಬ್ಯಾರಿಕೇಡ್ ಹಾಕಿದ್ದಾರೆ. ಕಂಟೆಂಟ್ ಕ್ರಿಯೆಟರ್ ಆಗಿ ಕೆಲಸ ಮಾಡುತ್ತಿದ್ದ ನಿಧಿ ಕುಟುಂಬದ ಇಬ್ಬರು ಕೊರೊನಾ ವೈರಸ್‍ ಪಾಸಿಟಿವ್ ಬಂದು ಕೋವಿಡ್ ಸೆಂಟರಿನಲ್ಲಿ ದಾಖಲಾಗಿದ್ದರಿಂದ ಈಕೆ ಮನೆಯಲ್ಲಿ ಒಬ್ಬಳೇ ಇದ್ದರು.

    ಆಗಸ್ಟ್ 8 ರಂದು ನಿಧಿ ಪತಿ ಹಾಗೂ ಅತ್ತೆಯನ್ನು ಕೋವಿಡ್ ಸೆಂಟರ್ ಗೆ ಸೇರಿಸಿದ ಬಳಿಕ ಮರುದಿನ ಬಿಬಿಎಂಪಿ ಸಿಬ್ಬಂದಿ ಬಂದು ಮನೆಯನ್ನು ಸ್ಯಾನಿಟೈಸ್ ಮಾಡಿದ್ದಾರೆ. ಆದರೆ ನಿಧಿಗೆ ಕೊರೊನಾ ನೆಗೆಟಿವ್ ಇದ್ದರೂ ಮನೆಯನ್ನು ಎರಡು ದಿನಗಳ ಬಳಿಕ ಸೀಲ್ ಡೌನ್ ಮಾಡಿದ್ದಾರೆ. ಹೀಗಾಗಿ ಆಕೆಗೆ ಮನೆಯಿಂದ ಹೊರ ಬರಲಾಗದೆ ಕಸದೊಂದಿಗೆ ಜೀವನ ಮಾಡುವಂತಾಗಿತ್ತು.

    ಮನೆಯಲ್ಲಿ ಕ್ವಾರಂಟೈನ್ ಆಗಿರುವವರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಸ ವಿಲೇವಾರಿ ಮಾಡಬಹುದಾಗಿದೆ. ಕಂಟೈನ್ಮಂಟ್ ಝೋನ್ ಗಳಲ್ಲಿ ಮಾತ್ರ ಕೋವಿಡ್ ನಿಯಮ ಅನ್ವಯವಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ ರಂದೀಪ್ ತಿಳಿಸಿದ್ದಾರೆ.

    ನಿಧಿ ಎರಡು ಬಾರಿ ಮಾಸ್ಕ್ ಧರಿಸದೇ ಹೊರಗಡೆ ಬಂದಿದ್ದಾರೆ. ಆದರೆ ಅವರು ತನ್ನ ಎದುರು ಇರುವವರಿಂದ 6 ಅಡಿ ಅಂತರ ಕಾಯ್ದುಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ನಿಧಿ, ತನಗೆ ಬೇಕಾದ ಅಗತ್ಯ ವಸ್ತುಗಳು ಹಾಗೂ ತ್ಯಾಜ್ಯ ವಿಲೇವಾರಿ ಮಾಡಲು ಮಾತ್ರ ಮನೆಯಿಂದ ಹೊರಗಡೆ ಬರುತ್ತೇನೆ. ಇಲ್ಲವೆಂದರೆ ನಾನು ಮನೆಯಿಂದ ಹೊರಗಡೆ ಕಾಲಿಡುತ್ತಿರಲಿಲ್ಲ. ಯಾಕೆಂದರೆ ನನಗೆ ಸಾಂಕ್ರಾಮಿಕ ರೋಗದ ತೀವ್ರತೆಯ ಬಗ್ಗೆ ತಿಳಿದಿದೆ ಎಂದು ಹೇಳಿದ್ದಾರೆ.

    ಇತ್ತ ಸೋಂಕಿತರ ಮನೆಯಿಂದ ಕಸ ತೆಗೆದುಕೊಳ್ಳಲು ಕೂಡ ನಿಯಮವಿದೆ. ಸೋಂಕಿತರ ಮನೆಯ ವ್ಯಕ್ತಿ ಕಸ ತೆಗೆದುಕೊಂಡು ಬಂದು ಹೊರಗಡೆ ಇಟ್ಟು ಹೋಗಬೇಕು. ಇತ್ತ ಅದನ್ನು ಪಡೆದುಕೊಳ್ಳಲೆಂದೇ ಬೇರೆ ಸಿಬ್ಬಂದಿ ಹಾಗೂ ವಾಹನ ಇದೆ. ಸಿಬ್ಬಂದಿ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಹಾಕಿಕೊಂಡು ಬಂದು ಕಸವನ್ನು ತೆಗೆದುಕೊಂಡು ಹೋಗುತ್ತಾರೆ.

    ಕಳೆದ ತಿಂಗಳು ಶೀಟ್ ಹಾಕಿ ಸೋಂಕಿತರ ಮನೆಯ ಬಾಗಿಲನ್ನೇ ಬಿಬಿಎಂಪಿ ಸಿಬ್ಬಂದಿ ಸೀಲ್ ಡೌನ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಲವಾರು ಟೀಕೆಗಳು ವ್ಯಕ್ತವಾಗಿದ್ದವು.

  • ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆ ಸೀಲ್‍ಡೌನ್!

    ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆ ಸೀಲ್‍ಡೌನ್!

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಹರಡುವದನ್ನು ತಡೆಗಟ್ಟಲು ಹಗಲು-ರಾತ್ರಿ ದುಡಿಯುತ್ತಿರುವ ಕೊರೊನಾ ವಾರಿಯರ್ಸ್‍ಗಳಿಗೂ ಇದೀಗ ಭೀತಿ ಶುರುವಾಗಿದೆ. ರಾಜಾಜಿನಗರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

    ಹೌದು. ರಾಜಾಜಿನಗರ ಪೊಲೀಸ್ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಹೋಮ್ ಕ್ವಾರಂಟೈನ್ ನಲ್ಲಿದ್ದ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಮೂರು ದಿನ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

    ಪಶ್ಚಿಮ ವಿಭಾಗದ ಚಿಕ್ಕಪೇಟೆ ಎಸಿಪಿ ಕಳೆದ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಸಿಪಿ ಕೊರೊನಾ ಟೆಸ್ಟ್ ಮಾಡಿಸಿ ರಜೆಯಲ್ಲಿದ್ದರು. ಆದರೆ ಇಂದು ಪಾಸಿಟಿವ್ ರಿಪೋರ್ಟ್ ಬಂದಿದ್ದು, ಪರಿಣಾಮ 10ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

    ಇತ್ತ ಹೋಮ್ ಕ್ವಾರಂಟೈನ್ ಉಲ್ಲಂಘನೆ ಆರೋಪ ಎದುರಿಸುತ್ತಿದ್ದ ಮೂವರು ಪೊಲೀಸರ ವಿರುದ್ಧವೇ ಎಫ್‍ಐಆರ್ ದಾಖಲು ಮಾಡಲಾಗಿದೆ. ಪ್ರತ್ಯೇಕ ಎರಡು ಠಾಣೆಗಳಲ್ಲಿ ಮೂವರ ಮೇಲೆ ಪ್ರಕರಣ ದಾಖಲಾಗಿದೆ. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಇಬ್ಬರು ಮತ್ತು ಬೆಗೂರು ಪೊಲೀಸ್ ಠಾಣೆ ಒಬ್ಬರ ಮೇಲೆ ಪಾಲಿಕೆ ಆರೋಗ್ಯ ಅಧಿಕಾರಿಗಳ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಕೊರೊನಾ ಆತಂಕ: ಮಂಗಳೂರು ಮೀನುಗಾರಿಕಾ ಬಂದರು ಸೀಲ್‍ ಡೌನ್

    ಕೊರೊನಾ ಆತಂಕ: ಮಂಗಳೂರು ಮೀನುಗಾರಿಕಾ ಬಂದರು ಸೀಲ್‍ ಡೌನ್

    ಮಂಗಳೂರು: ಕೊರೊನಾದಿಂದ ಮುಕ್ತರಾಗುತ್ತಿದ್ದೇವೆ ಎಂದು ನಿಟ್ಟುಸಿರು ಬಿಡುತ್ತಿದ್ದ ಮಂಗಳೂರಿಗರಿಗೆ ಇದೀಗ ಮೀನುಗಾರಿಕೆಯೇ ದೊಡ್ಡ ಆತಂಕ ತಂದೊಡ್ಡಿದೆ. ಕೇವಲ ವಿದೇಶದಿಂದ, ಮಹಾರಾಷ್ಟ್ರದಿಂದ ಮಂಗಳೂರಿಗೆ ಕೊರೊನಾ ಆತಂಕ ಇದ್ದು ಇದೀಗ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಮೀನುಗಾರಿಕಾ ವಹಿವಾಟು ಭಾರೀ ಆತಂಕ ತಂದಿದೆ.

    ಹೊರ ರಾಜ್ಯದ ಮೀನು ಲಾರಿಗಳ ಎಂಟ್ರಿಯಿಂದ ಮಂಗಳೂರಿನಲ್ಲಿ ಸೋಂಕು ಹರಡಿದೆ. ಕೊರೊನಾ ಸೋಂಕು ಹರಡಿದ ಬೆನ್ನಲ್ಲೇ ಮಂಗಳೂರು ಮೀನುಗಾರಿಕಾ ಬಂದರು ಸೀಲ್ ಡೌನ್ ಮಾಡಲಾಗಿದೆ. ಬಂದರಿನ ಗೇಟುಗಳಿಗೆ ಬೀಗ ಜಡಿದು ಜನರ ಓಡಾಟ, ವಾಹನ ಸಂಚಾರ ಬಂದ್ ಮಾಡಲಾಗಿದೆ. ಅಲ್ಲದೆ ಎಲ್ಲಾ ರೀತಿಯ ಮೀನುಗಾರಿಕಾ ವ್ಯವಹಾರ ಸಂಪೂರ್ಣ ಬಂದ್ ಆಗಿದೆ.

    ಓರ್ವ ಮೀನುಗಾರನಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಬಂದರಿನಲ್ಲಿದ್ದ ಹಲವಾರು ಮೀನುಗಾರರಲ್ಲಿ ಕೊರೋನಾ ಲಕ್ಷಣ ಕಂಡುಬಂದಿದೆ. ಪ್ರತಿ ನಿತ್ಯ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಭಾಗದಿಂದ ಬರುತ್ತಿದ್ದ ಮೀನಿನ ಲಾರಿಗಳಿಂದ ವ್ಯಾಪಾರಿಗಳು ಜಿಲ್ಲೆಯ ಹಲವೆಡೆ ತೆಗೆದುಕೊಂಡು ಹೋಗಿ ಮೀನು ಮಾರಾಟ ಮಾಡುತ್ತಿದ್ದರು. ಸದ್ಯ ಈ ಆತಂಕ ದುಪ್ಪಟ್ಟಾಗಿದೆ.

  • ಮೈಸೂರು ಪೊಲೀಸರ ಬೆನ್ನೇರಿದ ಹೆಮ್ಮಾರಿ- 23 ಮಂದಿ ಖಾಕಿಗಳಿಗೆ ಸೋಂಕು

    ಮೈಸೂರು ಪೊಲೀಸರ ಬೆನ್ನೇರಿದ ಹೆಮ್ಮಾರಿ- 23 ಮಂದಿ ಖಾಕಿಗಳಿಗೆ ಸೋಂಕು

    – ನಂಜನಗೂಡು ಠಾಣೆ, ಡಿವೈಎಸ್‍ಪಿ ಕಚೇರಿ ಸೀಲ್‍ಡೌಲ್

    ಮೈಸೂರು: ಕೊರೊನಾ ಮುಕ್ತ ಆಯ್ತು ಅಂತ ನಿಟ್ಟುಸಿರು ಬಿಡುವ ಸಮಯದಲ್ಲಿ ಮತ್ತೆ ಮೈಸೂರಿನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಸದ್ಯ ಡೆಡ್ಲಿ ವೈರಸ್ ಮೈಸೂರು ಪೊಲೀಸರ ಬೆನ್ನತ್ತಿದೆ.

    ಬೆಂಗಳೂರು ಪೊಲೀಸರಷ್ಟೇ ಅಲ್ಲ. ಮೈಸೂರು ಪೊಲೀಸರಿಗೂ ಕೊರೊನಾ ಸೋಂಕು ಬಂದಿದೆ. ಇಲ್ಲಿವರೆಗೂ ಮೈಸೂರು ಜಿಲ್ಲೆಯೊಂದರಲ್ಲೇ 23 ಮಂದಿ ಪೊಲೀಸರು ಸೋಂಕು ಬಾಧಿತರಾಗಿದ್ದಾರೆ. ಜ್ಯುಬಿಲಿಯಂಟ್ ಕೊರೊನಾ ಮುಕ್ತವಾದ ಬಳಿಕ ಇಡೀ ಮೈಸೂರು ನೆಮ್ಮದಿ ನಿಟ್ಟುಸಿರು ಬಿಟ್ಟಿತ್ತು. ಅಷ್ಟರಲ್ಲೆ ಕಿಲ್ಲರ್ ಕೊರೊನಾ ಪೊಲೀಸರ ಹೆಗಲೇರಿ ಕುಳಿತುಬಿಟ್ಟಿದೆ.

    ನಂಜನಗೂಡು ಗ್ರಾಮಾಂತರ ಠಾಣೆಯ ಕಾನ್ಸ್​​ಟೇಬಲ್​ಗೂ ಕೊರೊನಾ ಪಾಸಿಟಿವ್ ಬಂದಿದೆ. ಈ ಪೇದೆಯ ಪ್ರಾಥಮಿಕ ಸಂಪರ್ಕದಲ್ಲಿ ಅಡಿಷನಲ್ ಎಸ್‍ಪಿ ಸ್ನೇಹ ಸೇರಿ 22 ಜನ ಅಧಿಕಾರಿಗಳು ಇದ್ದಾರೆ. ಇವರೆಲ್ಲರ ಗಂಟಲು ದ್ರವ ಸಂಗ್ರಹಣೆ ಮಾಡಿ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಎಲ್ಲರೂ ಈಗ ಕ್ವಾರಂಟೈನ್‍ನಲ್ಲಿದ್ದಾರೆ.

    ಎಸ್‍ಪಿ ರಿಷ್ಯಂತ್ ಸೇರಿ 36 ಜನರು ಸೆಕೆಂಡರಿ ಸಂಪರ್ಕದಲ್ಲಿದ್ದಾರೆ. ಇವರಲ್ಲಿ ಈಗ ಆತಂಕ ಮನೆ ಮಾಡಿದೆ. ಮೈಸೂರಿನ ಟಿ. ನರಸೀಪುರದ ಪೊಲೀಸ್ ಠಾಣೆಯಲ್ಲಿ ಬುಲೆಟ್ ನಾಪತ್ತೆಯಾಗಿತ್ತು. ಇದರ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಪೇದೆಗೆ ಸೋಂಕು ದೃಢವಾಗಿದೆ. ಹೀಗಾಗಿ ತಂಡದಲ್ಲಿದ್ದ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

    ನಂಜನಗೂಡು ಠಾಣೆ, ಡಿವೈಎಸ್‍ಪಿ ಕಚೇರಿ ಸೀಲ್‍ಡೌನ್!
    ಸೋಂಕಿತ ಕಾನ್ಸ್​​ಟೇಬಲ್​ನಿಂದ ನಂಜನಗೂಡಿನ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಡಿವೈಎಸ್‍ಪಿ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಹಾಗೇ ಗ್ರಾಮಾಂತರ ಪೊಲೀಸ್ ಠಾಣೆಯ ಹಿಂಬದಿಯಲ್ಲಿರುವ ನಾಲ್ಕು ಪೋಲಿಸ್ ಕ್ವಾಟರ್ಸ್ ನಲ್ಲಿದ್ದವರನ್ನು ಹೊಂ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಕಾರ್ಯವೈಖರಿಯನ್ನು ತಾತ್ಕಾಲಿಕವಾಗಿ ಪಟ್ಟಣ ಪೊಲೀಸ್ ಠಾಣೆಗೆ ಸ್ಥಳಾಂತರ ಮಾಡಲಾಗಿದೆ.

  • ಇನ್ನೂ ಬುದ್ಧಿ ಕಲಿಯದ ಪಾದರಾಯನಪುರ ಜನ- ಕೊರೊನಾ ಏರುತ್ತಿದ್ರೂ ಭಯವಿಲ್ಲದೇ ಓಡಾಟ

    ಇನ್ನೂ ಬುದ್ಧಿ ಕಲಿಯದ ಪಾದರಾಯನಪುರ ಜನ- ಕೊರೊನಾ ಏರುತ್ತಿದ್ರೂ ಭಯವಿಲ್ಲದೇ ಓಡಾಟ

    – ಪೊಲೀಸರು ಏನ್ ಹೇಳಿದ್ರೂ ಡೋಂಟ್‍ಕೇರ್

    ಬೆಂಗಳೂರು: ಕೊರೊನಾ ಪ್ರಕರಣಗಳ ಪತ್ತೆ ದಿನೇ ದಿನೇ ಏರುತ್ತಿದ್ದರೂ ಪಾದರಾಯನಪುರದ ಜನ ಕ್ಯಾರೇ ಅಂತಿಲ್ಲ. ಭಯವಿಲ್ಲದೇ ಓಡಾಟ ಮಾಡುವ ಮೂಲಕ ಜನ ಇನ್ನೂ ಬುದ್ಧಿ ಕಲಿತಿಲ್ಲ ಅನ್ನೋದು ಸ್ಪಷ್ಟವಾಗಿ ಕಾಣುತ್ತಿದೆ.

    ಪಾದರಾಯನಪುರ ಪ್ರದೇಶದಲ್ಲಿ ತಳ್ಳೋ ಗಾಡಿ, ಬೈಕ್ ಹಾಗೂ ಆಟೋಗಳು ಸುಖಾ ಸುಮ್ಮನೆ ಸಂಚಾರ ಮಾಡುತ್ತಿವೆ. ಪೊಲೀಸರು ಏನು ವಾರ್ನಿಂಗ್ ಕೊಟ್ಟರೂ ಜನ ಕಿವಿಗೊಡುತ್ತಿಲ್ಲ. ಸೀಲ್‍ಡೌನ್ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರೂ ಪಿಪಿಇ ಕಿಟ್ ಧರಿಸುತ್ತಿಲ್ಲ.

    ಇಷ್ಟು ಮಾತ್ರವಲ್ಲದೆ ಮೇ 24 ರಂದು ರಂಜಾನ್ ಹಬ್ಬ ಇದೆ. ರಂಜಾನ್ ಮುಗಿಯುವವರೆಗೂ ಟೆಸ್ಟ್ ಗೆ ಬರಲ್ಲ. ಉಪವಾಸ, ಜಾಗಣೆ ಆಚರಣೆಗಳಿವೆ. ಹೀಗಾಗಿ ರ್‍ಯಾಂಡಮ್ ಟೆಸ್ಟ್ ಗೆ ಸಹಕರಿಸಲ್ಲ. ಹಬ್ಬ ಮುಗಿಯೇ ಪರೀಕ್ಷೆಗೆ ಬರುತ್ತೇವೆ ಎಂದು ಜನ ಆರೋಗ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.

    ಇತ್ತ ದಿನೇ ದಿನೇ ರ್‍ಯಾಂಡಮ್ ಟೆಸ್ಟ್ ಗೆ ಬರುವವರ ಸಂಖ್ಯೆಯೂ ಇಳಿಕೆಯಾಗಿದೆ. ಕಳೆದ ಬಾರಿ ಹೋಟೆಲ್ ಕ್ವಾರಂಟೈನ್ ಗೆ ಕಿರಿಕ್ ಆಗಿತ್ತು. ಹೀಗಾಗಿ ಬಲವಂತವಾಗಿ ಕರೆ ತರುವುದು ಬೇಡ ಎಂದು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಬ್ಬ ಮುಗಿಯುವಷ್ಟರಲ್ಲಿ ಮತ್ತಷ್ಟು ಪಾಸಿಟಿವ್ ಪತ್ತೆಯಾಗಬಹುದು ಎಂಬ ಆತಂಕ ಹುಟ್ಟಿದೆ.

  • ತಾಯಿ, ಮಗನಿಗೆ ಕೊರೊನಾ – ಮಂಗ್ಳೂರು ನಗರ ಸೀಲ್ ಡೌನ್

    ತಾಯಿ, ಮಗನಿಗೆ ಕೊರೊನಾ – ಮಂಗ್ಳೂರು ನಗರ ಸೀಲ್ ಡೌನ್

    ಮಂಗಳೂರು: ದಕ್ಷಿಣ ಕನ್ನಡದಲ್ಲಿ ಇಂದು ತಾಯಿ ಹಾಗೂ ಮಗನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮಂಗಳೂರು ನಗರದ ಕೆಲವೆಡೆ ಸೀಲ್ ಡೌನ್ ಮಾಡಲಾಗಿದೆ.

    ಮಂಗಳೂರಿನ ಶಕ್ತಿನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತರು ವಾಸ ಮಾಡುತ್ತಿದ್ದ ಮನೆಯಿಂದ 200 ಮೀಟರ್ ಸುತ್ತ ಸೀಲ್ ಡೌನ್ ಮಾಡಲಾಗಿದ್ದು, ಅಲ್ಲಿಂದ 5 ಕಿಲೋಮೀಟರ್ ಅಂದರೆ ಪೂರ್ವಕ್ಕೆ ವಾಮಂಜೂರು ಜಂಕ್ಷನ್, ಪಶ್ಚಿಮಕ್ಕೆ ಉರ್ವ ಮಾರ್ಕೆಟ್, ಉತ್ತರಕ್ಕೆ ಪದವಿನಂಗಡಿ ಹಾಗೂ ದಕ್ಷಿಣಕ್ಕೆ ಬಂಟ್ಸ್ ಹಾಸ್ಟಲ್ ಜಂಕ್ಷನ್ ಬಫರ್ ಝೋನ್ ಮಾಡಲಾಗಿದೆ. ಬಫರ್ ಝೋನ್ ನ ಅಡಿ 4,800 ಮನೆಗಳು, 1,300 ಕಚೇರಿ ಮತ್ತು ಅಂಗಡಿಗಳು, 73 ಸಾವಿರ ಜನ ವಾಸವಾಗಿದ್ದಾರೆ.

    ರಾಜ್ಯದಲ್ಲಿ ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ್ದ ಬುಲೆಟಿನ್ ಪ್ರಕಾರ 8 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಬೆಂಗಳೂರಿನಲ್ಲಿ 1, ಮಂಡ್ಯದಲ್ಲಿ 1, ದಕ್ಷಿಣ ಕನ್ನಡದಲ್ಲಿ 2, ಬಾಗಲಕೋಟೆಯಲ್ಲಿ 2 ಹಾಗೂ ವಿಜಯಪುರದಲ್ಲಿ 2 ಕೊರೊನಾ ಸೋಂಕಿತ ಪ್ರಕರಣ ಕಂಡು ಬಂದಿತ್ತು. ಇದರಲ್ಲಿ ದಕ್ಷಿಣ ಕನ್ನಡದಲ್ಲಿ ರೋಗಿ-506 45 ವರ್ಷದ ಪುರುಷ ರೋಗಿ-432 ಜೊತೆ ಸಂಪರ್ಕ ಹಾಗೂ ರೋಗಿ-507 80 ವರ್ಷದ ವೃದ್ಧೆ ರೋಗಿ-432 ಜೊತೆ ಸಂಪರ್ಕ ಹೊಂದಿದ್ದರಿಂದ ಕೊರೊನಾ ಬಂದಿದೆ ಎಂದು ವರದಿಯಾಗಿತ್ತು.

  • ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್, ಒಳಗೆ ಜನರ ಬಿಂದಾಸ್ ಓಡಾಟ- ಬಾಪೂಜಿನಗರದಲ್ಲಿ ನಿರ್ಲಕ್ಷ್ಯ

    ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್, ಒಳಗೆ ಜನರ ಬಿಂದಾಸ್ ಓಡಾಟ- ಬಾಪೂಜಿನಗರದಲ್ಲಿ ನಿರ್ಲಕ್ಷ್ಯ

    – ಕಾರ್ಪೋರೇಟರ್ ಗಂಭೀರ ಆರೋಪ

    ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಮಾಡಲಾಗಿದ್ದ ಲಾಕ್ ಡೌನ್ ಅನ್ನು ಮೇ.3ರವರೆಗೆ  ವಿಸ್ತರಿಸಿದ್ದು, ಬೆಂಗಳೂರಿನ ಎರಡು ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ. ಆದರೂ ಜನ ನಿರ್ಲಕ್ಷ್ಯಿಸುತ್ತಿರುವುದು ಬೆಳಕಿಗೆ ಬಂದಿದೆ.

    ಹೌದು. ಬೆಂಗಳೂರಿನ ಬಾಪೂಜಿನಗರ ಹಾಗೂ ಪಾದರಾಯನಪುರ ಈ ಎರಡು ಏರಿಯಾಗಳನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ. ಆದರೆ ಬಾಪೂಜಿನಗರದಲ್ಲಿ ಮಾತ್ರ ಹೊರಗೆ ಬಿಗಿ ಪೊಲೀಸ್ ಬಂದೊಬಸ್ತ್ ಆಗಿದ್ದು, ಒಳಗಡೆ ಜನ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.

    ಬಾಪೂಜಿನಗರಕ್ಕೆ ಸಂಪರ್ಕ ಮಾಡೋ ಮೂರು ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ವಾಹನಗಳಿಗೆ ನಿರ್ಬಂಧ ಹೇರಿದ್ದಾರೆ. ಪಾಸ್ ಇದ್ದವರಿಗಷ್ಟೇ ಒಳಗೆ-ಹೊರಗೆ ಹೋಗಲು ಬಿಡುತ್ತಿದ್ದಾರೆ. ಆದರೆ ಏರಿಯಾ ಒಳಗೆ ಜನ ಎಂದಿನಂತೆ ಆರಾಮಾಗಿ ಓಡಾಡುತ್ತಿದ್ದಾರೆ. ಪೊಲೀಸರು ಕೂಡ ಸ್ಥಳೀಯರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೇ ಬೇಸತ್ತಿದ್ದಾರೆ. ನಮ್ ಏರಿಯಾಗೆ ಹಾಲು ಬಂದಿಲ್ಲ, ನಮ್ ಏರಿಯಾ ದಿನಸಿ ಬಂದಿಲ್ಲ ಎಂದು ನೆಪ ಹೇಳಿಕೊಂಡು ಹೊರಗೆ ಓಡಾಡುತ್ತಿದ್ದಾರೆ.

    ಇತ್ತ ಬಾಪೂಜಿ ನಗರ ಕಾರ್ಪೋರೇಟರ್ ಅಜ್ಮಲ್ ಬೇಗ್ ಮಾಧ್ಯಮದೊಂದಿಗೆ ಮಾತನಾಡಿ ಗಂಭೀರ ಆರೋಪ ಮಾಡಿದ್ದಾರೆ. ಬಾಪೂಜಿ ನಗರ ವಾರ್ಡ್ ನಲ್ಲಿ ಸುಮಾರು 80 ಸಾವಿರ ನಿವಾಸಿಗಳಿದ್ದಾರೆ. ಆದರೆ ಕೇವಲ ಎರಡು ಸಾವಿರ ಕಿಟ್ ಗಳನ್ನು ಮಾತ್ರ ಬಿಬಿಎಂಪಿಯಿಂದ ನೀಡಲಾಗಿದೆ. 8 ಸಾವಿರ ಲೀಟರ್ ಹಾಲು ಅವಶ್ಯಕತೆ ಇದೆ. ಆದರೆ ನಮ್ಮ ವಾರ್ಡಿಗೆ ಬಿಬಿಎಂಪಿ ನೀಡ್ತಿರೋದು ಕೇವಲ 900 ಲೀಟರ್ ಹಾಲು ಮಾತ್ರ. ಈ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ಹಾಗೂ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ನಾನು ಕಾಂಗ್ರೆಸ್ ಕಾರ್ಪೊರೇಟರ್ ಅಂತ ನಮ್ಮ ವಾರ್ಡಿಗೆ ತಾರತಮ್ಯ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.