Tag: ಸೀಲ್

  • ಯಾವುದೇ ರಾಜ್ಯದಿಂದ ಬೆಂಗಳೂರಿಗೆ ಬಂದ್ರೂ ಕೋವಿಡ್ ವರದಿ ಕಡ್ಡಾಯ- ಸೋಂಕಿತರ ಕೈಗೆ ಸೀಲ್!

    ಯಾವುದೇ ರಾಜ್ಯದಿಂದ ಬೆಂಗಳೂರಿಗೆ ಬಂದ್ರೂ ಕೋವಿಡ್ ವರದಿ ಕಡ್ಡಾಯ- ಸೋಂಕಿತರ ಕೈಗೆ ಸೀಲ್!

    ಬೆಂಗಳೂರು: ಏಪ್ರಿಲ್ 1 ರಿಂದ ಯಾವುದೇ ರಾಜ್ಯದಿಂದ ಬೆಂಗಳೂರಿಗೆ ಬಂದರೂ ಕೋವಿಡ್ ವರದಿ ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಬಿಬಿಎಂಪಿ ಎಂಟು ವಲಯಗಳ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಒಂದೇ ದಿನ 1,400 ಸೋಂಕಿತರು ಪತ್ತೆಯಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಇದು ಅತಿ ಹೆಚ್ಚು. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಹೊರರಾಜ್ಯಗಳಿಂದ ಬರುತ್ತಿರುವವರಲ್ಲಿ ಹೆಚ್ಚಾಗಿ ಕೋವಿಡ್ ಸೋಂಕು ಕಂಡುಬರುತ್ತಿದೆ. ಕೇರಳ, ಮಹಾರಾಷ್ಟ್ರ, ಪಂಜಾಬ್ ಚಂಡೀಗಡದಿಂದ ರಾಜ್ಯಕ್ಕೆ ಬಂದವರಿಗೆ ಕೊರೊನಾ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಯಾವುದೇ ರಾಜ್ಯದಿಂದ ಬಂದರೂ ಕೊರೊನಾ ವರದಿ ಕಡ್ಡಾಯಗೊಳಿಸಲಾಗಿದೆ ಎಂದರು.

    ಸಭೆ, ಸಮಾರಂಭಗಳಿಗೆ ಒಳಾಂಗಣದಲ್ಲಿ 200, ಹೊರಾಂಗಣದಲ್ಲಿ 500 ಮಂದಿ ಸೇರಲು ಅವಕಾಶ ನೀಡಲಾಗಿದೆ. ಪ್ರತಿ ವಾರ್ಡ್ ಗೆ ಒಂದರಂತೆ ಅಂಬುಲೆನ್ಸ್ ನಿಯೋಜಿಸಲಾಗಿದೆ. ಸೋಂಕಿತರ ಸಂಖ್ಯೆ ನೋಡಿಕೊಂಡು ಅಂಬುಲೆನ್ಸ್ ಸಂಖ್ಯೆ ಕೂಡ ಹೆಚ್ಚಿಸಲಾಗುವುದು. ಸೋಂಕಿತರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು, ನಿಗಾ ಇರಿಸುವುದು ಮೊದಲಾದ ಕ್ರಮಗಳನ್ನು ನಿರ್ಧರಿಸಲಾಗುವುದು ಎಂದರು.

    ಸೋಂಕು ನಿಯಂತ್ರಣಕ್ಕೆ ನಿಗದಿತ ಪ್ರದೇಶಗಳಲ್ಲಿ ಸ್ಯಾನಿಟೈಜ್ ಮಾಡಲಾಗುವುದು. ಹಾಸಿಗೆ, ಐಸಿಯು ಲಭ್ಯತೆ ಬಗ್ಗೆ ಆನ್‍ಲೈನ್ ನಲ್ಲೇ ಮಾಹಿತಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರನ್ನು ಕೋವಿಡ್ ಮುಕ್ತ ಮಾಡಲು ಜನರ ಸಹಕಾರ ಬೇಕಿದೆ ಎಂದರು.

    ಸೋಂಕಿತರಿಗೆ ಸೀಲ್
    ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿತರ ಕೈಗೆ ಸೀಲ್ ಹಾಕಲು ನಿರ್ಧರಿಸಲಾಗಿದೆ. ಯುವಕರು, ರೋಗ ಲಕ್ಷಣ ಇಲ್ಲದವರು ಸೋಂಕಿತರಾದರೂ ಹೊರಗೆ ಓಡಾಡುವುದರಿಂದ ಸೋಂಕು ಹರಡುತ್ತದೆ. ಇದನ್ನು ನಿಯಂತ್ರಿಸಲು ಕೈಗೆ ಗುರುತು ಹಾಕಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ರೂಪಾಂತರಿ ವೈರಸ್
    45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕೆಂದು ಆದೇಶವಾಗಿದೆ. ದೇಶದಲ್ಲಿ ರೂಪಾಂತರಿ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿದೆ. ಕೆಲವರಲ್ಲಿ ಹೊಸ ವೈರಾಣು ಕಾಣಿಸಿಕೊಂಡಿದ್ದು, ಸುಮಾರು 700 ಇಂತಹ ಪ್ರಕರಣ ಪತ್ತೆಯಾಗಿವೆ. ತಜ್ಞರ ಪ್ರಕಾರ ಇದು ಬಹಳ ಬೇಗ ಹರಡುತ್ತದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳಾಗುತ್ತಿವೆ. ಸಾರ್ವಜನಿಕರು ಮುಂದಿನ 2 ತಿಂಗಳು ಬಹಳ ಎಚ್ಚರಿಕೆಯಿಂದಿರಬೇಕು. ಸೋಂಕಿನ ಪ್ರಕರಣಗಳು ಹೆಚ್ಚಾಗಬಾರದು. ಒಂದು ಪ್ರಕರಣ ಕಂಡುಬಂದರೆ 20 ಸಂಪರ್ಕಿತರನ್ನು ಪತ್ತೆ ಮಾಡಿ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದರು.

    ಚುನಾವಣೆ ಎಂದಾಕ್ಷಣ ಕೊರೊನಾ ಬರದೇ ಇರುವುದಿಲ್ಲ. ಜನರು ಗುಂಪುಗೂಡುವುದನ್ನು ಕಡಿಮೆ ಮಾಡುವುದೇ ನಮಗೆ ಮುಖ್ಯ. ಹೀಗಾಗಿ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಲಾಗುವುದು. ಚಿತ್ರರಂಗದ ಕಲಾವಿದರಿಗೂ ಮನವಿ ಮಾಡಲಾಗಿದೆ. ನಾಯಕ ನಟರು ಕೂಡ ಸಾಮಾಜಿಕ ಕಳಕಳಿ ಹೊಂದಿದ್ದು, ಅವರು ಕೂಡ ಈ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ವಿಕ್ಟೋರಿಯಾದಲ್ಲಿ 400 ಹಾಸಿಗೆ ಮೀಸಲಿಡಲಾಗಿದೆ. ಪ್ರಕರಣ ಹೆಚ್ಚಿದರೆ ಹಾಸಿಗೆ ಸಂಖ್ಯೆ ಹೆಚ್ಚಿಸಲಾಗುವುದು. ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ಬೌರಿಂಗ್, ಚರಕ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗುವುದು. ರೋಗಿಗಳ ಸಂಖ್ಯೆ ಇನ್ನೂ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ಸಹಾಯ ಪಡೆಯಲಾಗುವುದು. ಈ ಕುರಿತು ಖಾಸಗಿ ಆಸ್ಪತ್ರೆಗಳೊಂದಿಗೆ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿದ್ದಾರೆ. ಈಗ ಪ್ರಕರಣ ಹೆಚ್ಚಿದರೂ ಮೊದಲಿನಷ್ಟು ತೀವ್ರತೆ ಇಲ್ಲ. ಆದರೂ ಎಚ್ಚರಿಕೆ ವಹಿಸಲೇಬೇಕು ಎಂದರು.

    ಅಪಾರ್ಟ್ಮೆಂಟ್ ಗಳಲ್ಲಿ ಹೆಚ್ಚು ಪಾಸಿಟಿವ್ ಕಂಡುಬರುತ್ತಿದೆ. ಒಬ್ಬರಿಗೆ ಪಾಸಿಟಿವ್ ಆದರೆ ಆ ಕುಟುಂಬದ ಎಲ್ಲರಿಗೂ ಕೋವಿಡ್ ಬರುತ್ತಿದೆ. ಹೀಗಾಗಿ ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಥಿಯೇಟರ್, ಮದುವೆ ಛತ್ರ, ವಿವಿಧ ಕಾರ್ಯಕ್ರಮ ಗಳು, ಧಾರ್ಮಿಕ ಸ್ಥಳ, ಶಾಲಾ ಕಾಲೇಜು ಆವರಣದಲ್ಲಿ ಹೆಚ್ಚಾಗಿ ಮಾರ್ಷಲ್ ಗಳು ಹೋಗಿ ಗಮನಹರಿಸಲಿದ್ದಾರೆ.

  • ಲಾಕ್‍ಡೌನ್ ಉಲ್ಲಂಘಿಸಿದ ಸುಂಟಿಕೊಪ್ಪದ ಪ್ಯಾಂಡಿಂಗ್ಟನ್ ರೆಸಾರ್ಟ್‍ಗೆ ಬೀಗಮುದ್ರೆ

    ಲಾಕ್‍ಡೌನ್ ಉಲ್ಲಂಘಿಸಿದ ಸುಂಟಿಕೊಪ್ಪದ ಪ್ಯಾಂಡಿಂಗ್ಟನ್ ರೆಸಾರ್ಟ್‍ಗೆ ಬೀಗಮುದ್ರೆ

    ಮಡಿಕೇರಿ: ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ದೇಶವೇ ಲಾಕ್‍ಡೌನ್ ಆಗಿದ್ದರೂ ಈ ರೆಸಾರ್ಟ್ ಗೆ ಮಾತ್ರ ಧನದಾಹ. ಆದ್ದರಿಂದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಸಮೀಪದ ತೊಂಡೂರಿನಲ್ಲಿರುವ ಪ್ಯಾಡಿಂಗ್ಟನ್ ರೆಸಾರ್ಟ್‍ಗೆ ಬೀಗಮುದ್ರೆ ಹಾಕಲಾಗಿದೆ.

    ಲಾಕ್‍ಡೌನ್ ಮಾಡಿ ಜನ ಸಾಮಾನ್ಯರು ಅಗತ್ಯ ವಸ್ತುಗಳಕೊಳ್ಳಲು ಪರದಾಡುತ್ತಿದ್ದಾರೆ. ಆದರೆ ಇತ್ತ ಶ್ರೀಮಂತರ ಮತ್ತು ಅಧಿಕಾರಸ್ಥರ ಮಕ್ಕಳು ಮಾತ್ರ ಯಾವುದೆ ಅಡ್ಡಿ ಆತಂಕವಿಲ್ಲದೆ ಕೊಡಗಿನ ಪ್ಯಾಡಿಂಗ್ಟನ್ ರೆಸಾರ್ಟ್ ಗೆ ಕಳೆದ ನಾಲ್ಕು ದಿನಗಳ ಹಿಂದೆ ಬಂದು ಅಂದಿನಿಂದಲೂ ಮೋಜು ಮಸ್ತಿ ಮಾಡುತ್ತಿದ್ದರು. ಅಲ್ಲದೆ ಪ್ರವಾಸಿ ತಾಣಗಳಿಗೆ ತೆರಳಿ ಎಂಜಾಯ್ ಮಾಡುತ್ತಿದ್ದರು.

    ವಿಷಯ ತಿಳಿದ ಸುಂಟಿಕೊಪ್ಪ ಪೊಲೀಸ್ ನಿನ್ನೆ ಪ್ರಕರಣ ದಾಖಲಿಸಿದ್ದರು. ಇಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರ ನಿರ್ದೇಶನದಂತೆ ಸುಂಟಿಕೊಪ್ಪ ಪಂಚಾಯಿತಿ ಪಿಡಿಒ ರವೀಶ್ ಮತ್ತು ಸೋಮವಾರಪೇಟೆ ತಹಶೀಲ್ದಾರ್ ಗೋವಿಂದ್ ರಾಜ್ ರೆಸಾರ್ಟ್‍ಗೆ ಬೀಗಮುದ್ರೆ ಮಾಡಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಅಪ್ಪಚ್ಚು ರಂಜನ್ ಸೂಚಿಸಿದ್ದಾರೆ.

  • ಸೀಲ್ ಇದ್ರೂ ರಾಜಾರೋಷವಾಗಿ ಓಡಾಟ – ಅಂಬುಲೆನ್ಸ್‌ನಲ್ಲಿ ಬಂದು ಎತ್ತಾಕೊಂಡು ಹೋದ್ರು!

    ಸೀಲ್ ಇದ್ರೂ ರಾಜಾರೋಷವಾಗಿ ಓಡಾಟ – ಅಂಬುಲೆನ್ಸ್‌ನಲ್ಲಿ ಬಂದು ಎತ್ತಾಕೊಂಡು ಹೋದ್ರು!

    ಹುಬ್ಬಳ್ಳಿ: ಕೈ ಮೇಲೆ ಕ್ವಾರಂಟೈನ್ ಸೀಲ್ ಇದ್ದರೂ ರಾಜಾರೋಷವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಚೆನ್ನಮ್ಮ ವೃತ್ತದ ಬಳಿ ನಡೆದಿದೆ.

    ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ನಿವಾಸಿ ಹಜರತ್ ಅಲಿ ಜೋಡ್ಮನಿ ಎಂಬಾತ ಹೋಂ ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ. ಈತನ ಕೈ ಮೇಲೆ ಸೀಲ್ ಇದ್ದರೂ ಬೇಕಾ ಬಿಟ್ಟಿ ಓಡಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾನೆ.

    ಈತ ಕಳೆದ 10 ದಿನಗಳ ಹಿಂದೆ ಗೋವಾ ರಾಜ್ಯಕ್ಕೆ ಪ್ರವಾಸ ಬೆಳೆಸಿದ್ದನು. ಮಂಗಳವಾರ ಗೋವಾದಿಂದ ಹುಬ್ಬಳ್ಳಿಗೆ ಆಗಮಿಸಿದ್ದ. ಹೀಗಾಗಿ ಬೆಳಗಾವಿ ಗಡಿಯಲ್ಲಿ ಈತನಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ವಾರೈಂಟೈನ್ ಸೀಲ್ ಹಾಕಿದ್ದಾರೆ. ಕೈ ಮೇಲೆ ಸೀಲ್ ಇದ್ದರೂ ಮನೆಯಲ್ಲಿರದ ಜೋಡ್ಮನಿ ರಾತ್ರಿ ಔಷಧಿ ಖರೀದಿಗೆಂದು ಚನ್ನಮ್ಮ ವೃತ್ತದಲ್ಲಿ ಪ್ರತ್ಯಕ್ಷವಾಗಿದ್ದಾನೆ. ಮೆಡಿಕಲ್ ಸ್ಟೋರ್ ಕೆಲಸಗಾರ ನೋಡಿ ತಕ್ಷಣ ಪೊಲೀಸರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾನೆ.

    ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಕೈ ಮೇಲೆ ಸೀಲ್ ಇರುವುದನ್ನು ದೃಢಪಡಿಸಿಕೊಂಡು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಶಂಕಿತನನ್ನು ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ತಪಾಸಣೆಗೆ ಒಳಪಡಿಸಿದ್ದಾರೆ. ಹೆಚ್ಚಿನ ತಪಾಸಣೆಗೆ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

  • ವಿದೇಶದಿಂದ ಬಂದವರ ಕೈ ಮೇಲೆ ಸೀಲ್

    ವಿದೇಶದಿಂದ ಬಂದವರ ಕೈ ಮೇಲೆ ಸೀಲ್

    ಬೆಂಗಳೂರು: ವಿದೇಶದಿಂದ ಬಂದವರ ಮೇಲೆ ಮೊದಲೇ ಈ ಕ್ರಮ ಕೈಗೊಂಡಿದ್ದರೆ ಇಷ್ಟೊಂದು ವೈರಸ್ ಎಫೆಕ್ಟ್ ಆಗುತ್ತಿರಲಿಲ್ಲವೇನೋ ಎಂಬ ಮಾತು ಕೇಳಿ ಬರುತ್ತಿದೆ. ಯಾಕೆಂದರೆ ಇದೀಗ ಕರ್ನಾಟಕ ಆರೋಗ್ಯ ಇಲಾಖೆ ವಿದೇಶದಿಂದ ಬಂದವರ ಕೈ ಮೇಲೆ ಸೀಲ್ ಹಾಕುತ್ತಿದೆ.

    ಕರ್ನಾಟಕ ಆರೋಗ್ಯ ಇಲಾಖೆಯಿಂದ ಸೀಲ್ ಹಾಕಲಾಗುತ್ತಿದೆ. ವಿದೇಶದಿಂದ ಬಂದ ಪ್ರತಿಯೊಬ್ಬರ ಮೇಲೂ 15 ದಿನಗಳ ಕಾಲ ಹೋಮ್ ಕ್ವಾರೆಂಟೈಲ್ ಆದೇಶವಿರುವ ಸೀಲ್ ಹಾಕಲಾಗುತ್ತಿದೆ. ಗುರುವಾರ ಏರ್‌ಪೋರ್ಟ್‌ಗೆ ಬಂದವರ ಕೈಗಳ ಮೇಲೆ ಸೀಲ್ ಹಾಕಲಾಗಿದೆ.

    https://twitter.com/DHFWKA/status/1240525028703125504

    ಸೀಲ್ ಹಾಕಿಸಿಕೊಂಡವರು ಏಪ್ರಿಲ್ 3 ವರೆಗೆ ಹೋಮ್ ಕ್ವಾರೆಂಟೈನ್‍ನಲ್ಲಿರಬೇಕು. ಅಂದರೆ ನಿಗಾದಲ್ಲಿರಬೇಕು. ಈ ವೇಳೆ ಹೊರಗೆ ಸುತ್ತುವುದು ಯಾವುದನ್ನೂ ಮಾಡುವಂತಿಲ್ಲ. ವಿಮಾನದಿಂದ ಬಂದಿಳಿದ ಎಲ್ಲರ ಎಡಗೈಗೆ ಸೀಲ್ ಹಾಕಲಾಗಿದೆ. ಹೋಮ್ ಕ್ವಾರೆಂಟೈನ್‍ನಲ್ಲಿದ್ದ ದಿನದಲ್ಲಿ ಕೊರೊನಾ ವೈರಸ್ ಲಕ್ಷಣಗಳೇನೂ ಕಂಡುಬರದಿದ್ದರೆ ಮನೆಗೆ ಕಳಿಸಲಾಗುತ್ತದೆ.