Tag: ಸೀರಂ

  • ಕೋವಿಶೀಲ್ಡ್‌ ಲಸಿಕೆ ಸುರಕ್ಷಿತವಾಗಿದೆ, ಹಠಾತ್‌ ಸಾವಿಗೆ ಸಂಬಂಧವಿಲ್ಲ: ಸೀರಮ್‌ ಇನ್‌ಸ್ಟಿಟ್ಯೂಟ್‌

    ಕೋವಿಶೀಲ್ಡ್‌ ಲಸಿಕೆ ಸುರಕ್ಷಿತವಾಗಿದೆ, ಹಠಾತ್‌ ಸಾವಿಗೆ ಸಂಬಂಧವಿಲ್ಲ: ಸೀರಮ್‌ ಇನ್‌ಸ್ಟಿಟ್ಯೂಟ್‌

    ನವದೆಹಲಿ: ಹಠಾತ್ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವುಗಳಿಗೆ ಕೊರೊನಾ ವ್ಯಾಕ್ಸಿನ್ (Covid Vaccine) ಕಾರಣವಲ್ಲ ಎಂದು ಲಸಿಕೆ ತಯಾರಕ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (SII) ಹೇಳಿದೆ. ತಮ್ಮ ಕೋವಿಶೀಲ್ಡ್ (Covishield) ಲಸಿಕೆ ಸುರಕ್ಷಿತವಾಗಿದೆ ಎಂದು ಇದೇ ವೇಳೆ ಅದು ಸ್ಪಷ್ಟಪಡಿಸಿದೆ.

    ಸೀರಮ್‌ ಇನ್‌ಸ್ಟಿಟ್ಯೂಟ್‌ ತಮ್ಮ ಔಷಧವು ಕೋವಿಡ್‌ 19 ವಿರುದ್ಧ ರಕ್ಷಣೆ ನೀಡುವಲ್ಲಿ ಪರಿಣಾಮಕಾರಿಯಾಗಿದೆ. ಕೋವಿಶೀಲ್ಡ್‌ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ವಿಶ್ವಾದ್ಯಂತ ಹಲವಾರು ಕ್ಲಿನಿಕಲ್‌ ಪರೀಕ್ಷೆಗಳು ಮತ್ತು ನಿಯಂತ್ರಕ ಸಂಸ್ಥೆಗಳ ಮೌಲ್ಯಮಾಪನದಿಂದ ದೃಢೀಕರಿಸಲಾಗಿದೆ. ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ದುಷ್ಪರಿಣಾಮಗಳಿಗೆ ವೈಜ್ಞಾನಿಕ ಆಧಾರವಿಲ್ಲ ಎಂದು ಸಂಸ್ಥೆ ವಾದಿಸಿದೆ. ಇದನ್ನೂ ಓದಿ: ಹೃದಯಾಘಾತಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ ನಾಲ್ವರು ಮೊಮ್ಮಕ್ಕಳಿಗೆ ಬೈಪಾಸ್‌ ಸರ್ಜರಿ!

    ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇತ್ತೀಚೆಗೆ ರಾಜ್ಯದಲ್ಲಿ ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡ ಕೆಲವರು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಹೇಳಿಕೆಯು ಸಾರ್ವಜನಿಕರಲ್ಲಿ ಗೊಂದಲ ಮತ್ತು ಚರ್ಚೆಗೆ ಕಾರಣವಾಗಿತ್ತು. ಆದರೆ ಸೀರಂ ತನ್ನ ಲಸಿಕೆಯ ಸುರಕ್ಷತೆಯನ್ನು ಪುನರುಚ್ಚರಿಸಿದ್ದು, ಇಂತಹ ಆರೋಪಗಳಿಗೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿಸಿದೆ.  ಇದನ್ನೂ ಓದಿ: ಹೆಚ್ಚುತ್ತಿರುವ ಹೃದಯಾಘಾತ ಮೈಸೂರಿನ ಜಯದೇವ ಆಸ್ಪತ್ರೆಗೆ ತಪಾಸಣೆಗೆ ಬರುವವರ ಸಂಖ್ಯೆ ದಿಢೀರ್ ಏರಿಕೆ

    ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಭಾರತದ ಔಷಧ ನಿಯಂತ್ರಣ ಸಂಸ್ಥೆಗಳಂತಹ ಸಂಸ್ಥೆಗಳು ಕೋವಿಶೀಲ್ಡ್‌ ಲಸಿಕೆಯನ್ನು ವ್ಯಾಪಕವಾಗಿ ಬಳಕೆಗೆ ಅನುಮೋದಿಸಿವೆ. ಈ ಲಸಿಕೆಯು ಭಾರತದ ಕೋವಿಡ್‌-19 ಲಸಿಕಾ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಕೋಟ್ಯಂತರ ಜನರಿಗೆ ರಕ್ಷಣೆ ನೀಡಿದೆ ಎಂದು ತಿಳಿಸಿದೆ.

    ಆತಂಕ ಮೂಡಿಸುವ ಯಾವುದೇ ಆಧಾರರಹಿತ ಹೇಳಿಕೆಗಳಿಗೆ ಜನರು ಭಯ ಪಡಬಾರದು. ಒಳಗಾಗದಂತೆ ಮನವಿ ಮಾಡಿದ್ದು, ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಅವಲಂಬಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದೆ.

  • ಪುಣೆಯ ಸೀರಂ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ

    ಪುಣೆಯ ಸೀರಂ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ

    ಪುಣೆ: ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನೆ ಮಾಡುವ ಪುಣೆಯ ಸೀರಂ ಸಂಸ್ಥೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ.

    ಕೋವಿಶೀಲ್ಡ್‌ ಅಭಿವೃದ್ಧಿ ಪಡಿಸುತ್ತಿರುವ ಸೀರಂ ಸಂಸ್ಥೆಯ ಒಂದನೇ ಗೇಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಈಗಾಗಲೇ 10 ಅಗ್ನಿ ಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

    ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಜೆನಿಕಾ ಕಂಪನಿ ಅಭಿವೃದ್ಧಿ ಪಡಿಸಿದ್ದ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆ ಸೀರಂ ಸಂಸ್ಥೆಯಲ್ಲಿ ನಡೆಯಿತಿತ್ತು.

    ಕೋವಿಶೀಲ್ಡ್‌ ಲಸಿಕೆಯನ್ನು ಸಂಗ್ರಹಿಟ್ಟ ಜಾಗದಲ್ಲಿ ಅಗ್ನಿ ಅವಘಡ ಸಂಭವಿಸಿಲ್ಲ ಎಂದು ವರದಿಯಾಗಿದೆ.

  • 250 ರೂ.ಗೆ 1 ಡೋಸ್‌ – ಮಾರ್ಚ್‌ನಲ್ಲಿ ಮೆಡಿಕಲ್‌ ಸ್ಟೋರ್‌ನಲ್ಲಿ ಲಭ್ಯ?

    250 ರೂ.ಗೆ 1 ಡೋಸ್‌ – ಮಾರ್ಚ್‌ನಲ್ಲಿ ಮೆಡಿಕಲ್‌ ಸ್ಟೋರ್‌ನಲ್ಲಿ ಲಭ್ಯ?

    – ಶೀಘ್ರವೇ ಸೀರಂ ಜೊತೆ ಖರೀದಿ ಸಂಬಂಧ ಸರ್ಕಾರ ಒಪ್ಪಂದ
    – ಆರಂಭದಲ್ಲಿ ಸಿಗಲಿದೆ 6 ಕೋಟಿ ಡೋಸ್

    ನವದೆಹಲಿ: ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್‌ ಲಸಿಕೆ ಖರೀದಿ ವಿಚಾರವಾಗಿ ಶೀಘ್ರವೇ ಪುಣೆಯ ಸೀರಂ ಮತ್ತು ಭಾರತ ಸರ್ಕಾರದ ನಡುವೆ ಒಪ್ಪಂದ ನಡೆಯುವ ಸಾಧ್ಯತೆಯಿದೆ.

    ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಸೀರಂ 1 ಡೋಸ್‌ಗೆ 250 ರೂ. ದರ ನಿಗದಿ ಪಡಿಸಿದ್ದು ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    ಈ ಕುರಿತು ಮಾತನಾಡಿದ ಸಂಸ್ಥೆ ಸಿಇಒ ಅದರ್ ಪೂನಾವಾಲಾ, ಖಾಸಗಿಯಾಗಿ ಖರೀದಿಸಿದರೆ ಈ ಲಸಿಕೆಗೆ ದರ ಪ್ರತಿ ಡೋಸ್‌ಗೆ 1 ಸಾವಿರ ರೂ. ಆಗಲಿದೆ. ಆದರೆ ಸರ್ಕಾರ ಭಾರೀ ಪ್ರಮಾಣದಲ್ಲಿ ಖರೀದಿಸಿದರೆ ಕಡಿಮೆ ಹಣಕ್ಕೆ ಸಿಗಲಿದೆ ಎಂದು ಹೇಳಿದ್ದಾರೆ.

    ಒಪ್ಪಂದದ ಬಳಿಕ ಆರಂಭದಲ್ಲಿ 6 ಕೋಟಿ ಡೋಸ್‌, ಜನವರಿ- ಫೆಬ್ರವರಿಯಲ್ಲಿ 10 ಕೋಟಿ ಲಸಿಕೆಯನ್ನು ಕಂಪನಿ ಸರ್ಕಾರಕ್ಕೆ ನೀಡಲಿದೆ.

    ಸೀರಂ ಕಂಪನಿ ಬಿಲ್‌ ಗೇಟ್ಸ್‌ ಪ್ರತಿಷ್ಠಾನದ ಜೊತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಜಗತ್ತಿನ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ 250 ರೂ. ನಂತೆ ಲಸಿಕೆಯನ್ನು ನೀಡಬೇಕಿದೆ.

    ಮಾರ್ಚ್‌ ವೇಳೆಗೆ ಕೋವಿಶೀಲ್ಡ್‌ ಲಸಿಕೆ ಭಾರತದ ಮೆಡಿಕಲ್‌ ಸ್ಟೋರ್‌ನಲ್ಲೂ ಸಿಗುವ ಸಾಧ್ಯತೆಯಿದೆ. ಆದರೆ ಇಲ್ಲಿ 1 ಡೋಸ್‌ ಬೆಲೆ 600 ರೂ. ಇರಬಹುದು ಎಂದು ಕಂಪನಿ ಸುಳಿವು ನೀಡಿದೆ.

    ಕೋವಿಶೀಲ್ಡ್‌ ಲಸಿಕೆ ಶೇ.70ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪನಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ  ಸೀರಂ ಸಂಸ್ಥೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ(ಡಿಸಿಜಿಐ) ಅರ್ಜಿ ಸಲ್ಲಿಸಿದೆ.

    ಭಾರತದಲ್ಲಿಈ ರೀತಿ ಮನವಿ ಮಾಡಿಕೊಂಡ ಮೊದಲ ದೇಶಿಯ ಸಂಸ್ಥೆ ಸೀರಂ ಆಗಿದೆ. ಆಕ್ಸ್‌ಫರ್ಡ್‌ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆ ಜಂಟಿಯಾಗಿ ಸಂಶೋಧಿಸಿದ ಕೋವಿಶೀಲ್ಡ್ ಲಸಿಕೆಯನ್ನು ಸಿರಂ ಸಂಸ್ಥೆ ಭಾರತದಲ್ಲಿ ಉತ್ಪಾದನೆ ಮಾಡುತ್ತಿದೆ.

    ಸದ್ಯ ಕೋವಿಶೀಲ್ಡ್ ಲಸಿಕೆಯ ಮೂರನೇ ಹಂತದ ಪ್ರಯೋಗ ಭಾರತದಲ್ಲಿ ನಡೆಯುತ್ತಿದೆ. ಇದು ಪೂರ್ಣಗೊಳ್ಳುವ ಮೊದಲೇ ಲಸಿಕೆಗೆ ಬಳಕೆಗೆ ಅನುಮತಿ ಕೋರಲಾಗಿದೆ. ಕೋವಿಶೀಲ್ಡ್‌ನಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಎಂದು ಸೀರಂ ಸಂಸ್ಥೆ ಹೇಳಿಕೊಂಡಿದೆ.

  • ಕೊರೊನಾ ಲಸಿಕೆಯಿಂದ ತಲೆನೋವು – ವ್ಯಕ್ತಿಯ ವಿರುದ್ಧ 100 ಕೋಟಿ ಕೇಸ್‌ ಹೂಡಿದ ಸೀರಂ

    ಕೊರೊನಾ ಲಸಿಕೆಯಿಂದ ತಲೆನೋವು – ವ್ಯಕ್ತಿಯ ವಿರುದ್ಧ 100 ಕೋಟಿ ಕೇಸ್‌ ಹೂಡಿದ ಸೀರಂ

    ನವದೆಹಲಿ: ಕೋವಿಶೀಲ್ಡ್‌ ಕೋವಿಡ್‌ ಲಸಿಕೆ ಪಡೆದ ಬಳಿಕ ಆರೋಗ್ಯ ಸಮಸ್ಯೆಯಾಗಿದೆ ಎಂದು ದೂಷಿಸಿದ ವ್ಯಕ್ತಿಯ ವಿರುದ್ಧ ಸೀರಂ ಇನ್‌ಸ್ಟಿಟ್ಯೂಟ್‌ 100 ಕೋಟಿ ರೂ. ಮಾನನಷ್ಟ ಕೇಸ್‌ ಹೂಡಿದೆ.

    ಚೆನ್ನೈ ಮೂಲದ 40 ವರ್ಷದ ಸ್ವಯಂಸೇವಕರೊಬ್ಬರು ಕೋವಿಶೀಲ್ಡ್‌ ಲಸಿಕೆಯನ್ನು ಪಡೆದುಕೊಂಡಿದ್ದರು. ಲಸಿಕೆ ಪಡೆದ ಬಳಿಕ ನನಗೆ ತಲೆ ಸಿಡಿತ ಕಾಣಿಸಿಕೊಂಡಿದೆ. ಹೀಗಾಗಿ ನನಗೆ ಸೀರಂ ಸಂಸ್ಥೆ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು.

    ಈ ವಿಚಾರಕ್ಕೆ ಪ್ರತಿಕ್ರಿಯಿಸಿದರುವ ಸೀರಂ ಕಂಪನಿ ಲಸಿಕೆ ಪರೀಕ್ಷೆಗೆ ಒಳಗಾದ ಸ್ವಯಂಸೇವಕನ ಆರೋಗ್ಯ ಸ್ಥಿತಿಗೂ ಕೋವಿಡ್‌ ಲಸಿಕೆಗೆ ಯಾವುದೇ ಸಂಬಂಧವಿಲ್ಲ. ಇದು ದೂರುದ್ದೇಶಪೂರಿತ ಆರೋಪವಾಗಿದ್ದು ತನ್ನ ಆರೋಗ್ಯ ಸಮಸ್ಯೆಗೆ ಈ ಲಸಿಕೆಯನ್ನು ದೂಷಿಸುತ್ತಿದ್ದಾನೆ ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

    ಸುಳ್ಳು ಆರೋಪ ಮಾಡಿ ಸಂಸ್ಥೆಯ ಘನತೆಗೆ ಧಕ್ಕೆ ತಂದಿದ್ದಕ್ಕೆ ಸೀರಂ ಕಂಪನಿ 100 ಕೋಟಿ ರೂ. ಕ್ರಿಮಿನಲ್‌ ಮಾನನಷ್ಟ ಕೇಸ್‌ ಹೂಡಿದ್ದು ಇಂದು ಸ್ವಯಂಸೇವಕನಿಗೆ ನೋಟಿಸ್‌ ಜಾರಿಯಾಗುವ ಸಾಧ್ಯತೆಯಿದೆ.

    ಸೀರಂ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ವಿಶ್ವ ಪ್ರಸಿದ್ಧ ಸಂಸ್ಥೆಯ ವಿರುದ್ಧ ಹಣ ಪಡೆಯಲು ಸುಳ್ಳು ಆರೋಪ ಮಾಡಿದ್ದಾನೆ. ಸ್ವಯಂಸೇವಕನ ಮೇಲೆ ಈಗಾಗಲೇ ಪ್ರಯೋಗ ನಡೆಸಿ ಹಲವು ದಿನಗಳು ನಡೆದಿದೆ. ಈಗ ಸಂಪೂರ್ಣವಾಗಿ ಚೇತರಿಕೆಯಾಗಿದ್ದಾನೆ ಎಂದು ತಿಳಿಸಿದ್ದಾರೆ.

    ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ (ಐಸಿಎಂಆರ್‌)  ಹಿರಿಯ‌ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಸ್ವಯಂಸೇವಕನ ಆರೋಪದ ಹಿನ್ನೆಲೆಯಲ್ಲಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದು, ಸ್ವಯಂ ಸೇವಕನ ಆರೋಗ್ಯ ಸಮಸ್ಯೆಗೂ ಲಸಿಕೆಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

    ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಜೊತೆಯಾಗಿ ಕೋವಿಶೀಲ್ಡ್‌ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ತಯಾರಾಗುತ್ತಿದೆ.