Tag: ಸೀಬರ್ಡ್

  • ಕಡಲಾಮೆ, ಸಾಗರ ಪಕ್ಷಿಗೆ ಮರುಜೀವ ನೀಡಿದ ಅರಣ್ಯ ಇಲಾಖೆ

    ಕಡಲಾಮೆ, ಸಾಗರ ಪಕ್ಷಿಗೆ ಮರುಜೀವ ನೀಡಿದ ಅರಣ್ಯ ಇಲಾಖೆ

    ಉಡುಪಿ: ಕಡಲ ಆಮೆ ಮತ್ತು ಸೀಬರ್ಡ್ ಗೆ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿ ಮರುಜೀವ ನೀಡಿದ್ದಾರೆ.

    ಒಂದು ತಿಂಗಳ ಹಿಂದೆ ಬೀಜಾಡಿ ಕಡಲತೀರದಲ್ಲಿ ಗಾಯಗೊಂಡ ಸುಮಾರು 20 ಕೆ.ಜಿ.ಯ ಕಡಲಾಮೆ ಮೀನುಗಾರರಿಗೆ ಸಿಕ್ಕಿತ್ತು. ಹರಿತವಾದ ಬಲೆ ಕಡಲ ಆಮೆಯ ಕಾಲಿಗೆ ಗಾಸಿ ಮಾಡಿತ್ತು. ಮೀನುಗಾರರು ಕಡಲಾಮೆಯ ರಕ್ಷಣೆ ಮಾಡಿ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು. ಸುಮಾರು ಒಂದು ತಿಂಗಳ ಕಾಲ ಪಾಲನೆ-ಪೋಷಣೆ ಮಾಡಿದ ಅರಣ್ಯ ಇಲಾಖೆ, ಕಾಲಿನ ಗಾಯವನ್ನು ಗುಣಪಡಿಸಿದೆ. ಸಾಗರ ಜೀವಿಗಳ ತಜ್ಞ ಬೆಂಗಳೂರಿನ ಡಾ. ಶಂತನು ವಿಶೇಷ ಮುತುವರ್ಜಿಯಲ್ಲಿ ಚಿಕಿತ್ಸೆ ಕೊಟ್ಟಿದ್ದರು.

    ಈ ಮೂಲಕ ಸುಮಾರು 250 ವರ್ಷ ಆಯಸ್ಸು ಇರುವ ಆಮೆಗೆ ಮರುಜೀವ ಸಿಕ್ಕಿದೆ. ಗುಣಪಡಿಸಲಾದ ಆಮೆಯನ್ನು ಇದೀಗ ಮರಳಿ ಸಮುದ್ರಕ್ಕೆ ಬಿಡಲಾಗಿದೆ.

    ಇದಾದ ಬಳಿಕ 15 ದಿನಗಳ ಹಿಂದೆ ಹಾರಲಾಗದೆ ಒದ್ದಾಡುತ್ತಿದ್ದ ಸಮುದ್ರ ಪಕ್ಷಿ ಮೀನುಗಾರರಿಗೆ ಸಿಕ್ಕಿತ್ತು. ಪಕ್ಷಿಯನ್ನು ಮೀನುಗಾರರು ಅರಣ್ಯ ಇಲಾಖೆಗೆ ನೀಡಿದ್ದರು. ಸಮುದ್ರ ಪಕ್ಷಿಗೆ ಶುಶ್ರೂಷೆ ಮಾಡಿದ ಅರಣ್ಯ ಇಲಾಖೆ ಕೆಲ ದಿನಗಳ ಹಿಂದೆ ಸಮುದ್ರ ತೀರದಲ್ಲಿ ಸ್ವಚ್ಛಂದವಾಗಿ ಹಾರಲು ಬಿಟ್ಟಿದ್ದರು. ಆದರೆ ಹಕ್ಕಿ ಹಾರದೆ ಹಿಂದೆ ಬಂದಿತ್ತು. ಇದೀಗ ಅರಣ್ಯ ಇಲಾಖೆ ಕಡಲತಡಿಯಿಂದ ಒಂದು ಕಿಲೋಮೀಟರ್ ದೂರ ಹೋಗಿ ಬಿಟ್ಟು ಬಂದಿದ್ದಾರೆ.

    ಕಡಲ ಆಮೆ ಮತ್ತು ಸಾಗರ ಪಕ್ಷಿ ವನ್ಯಜೀವಿ ವ್ಯಾಪ್ತಿಗೆ ಬರುತ್ತದೆ. ಈ ವರ್ಷ ಎಂಟು ಆಮೆ ರಕ್ಷಣೆ ಮಾಡಿದ್ದೇವೆ. ಮಳೆಗಾಲದಲದಲ್ಲಿ ಕಡಲಬ್ಬರಕ್ಕೆ ಸಿಕ್ಕಿ ಪ್ರತಿ ವರ್ಷ ಕಡಲಾಮೆ, ಪಕ್ಷಿಗಳನ್ನು ಮೀನುಗಾರರು ರಕ್ಷಣೆ ಮಾಡುತ್ತಾರೆ. ನಾವು ಶುಶ್ರೂಷೆ ಮಾಡುತ್ತೇವೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಸೀಬರ್ಡ್ ಟ್ರಾವೆಲ್ಸ್ ಮಾಲೀಕನಿಂದ ಪ್ರಯಾಣಿಕನಿಗೆ ಜೀವಬೆದರಿಕೆ!

    ಸೀಬರ್ಡ್ ಟ್ರಾವೆಲ್ಸ್ ಮಾಲೀಕನಿಂದ ಪ್ರಯಾಣಿಕನಿಗೆ ಜೀವಬೆದರಿಕೆ!

    ಬೆಂಗಳೂರು: ಸೀಬರ್ಡ್ ಟ್ರಾವೆಲ್ಸ್ ಮಾಲೀಕ ಪ್ರಯಾಣಿಕನೊಬ್ಬನಿಗೆ ಧಮ್ಕಿ ಹಾಕಿ ಜೀವ ಬೆದರಿಕೆ ನೀಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಇದೇ ತಿಂಗಳ 14ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಟ್ರಾವೆಲ್ಸ್ ನವರ ದುರ್ವತೆಯನ್ನು ಪ್ರಶ್ನಿಸಲು ಪ್ರಯಾಣಿಕ ಭರತ್ ಕುಮಾರ್ ತೆರಳಿದಾಗ ಮಾಲೀಕ ನಾಗರಾಜ್ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಏನಿದು ಘಟನೆ?:
    ಪ್ರಯಾಣಿಕರು ಸೀಬರ್ಡ್ ಬಸ್ ನಲ್ಲಿ ಅಥಣಿಯಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದರು. ಈ ವೇಳೆ ತುಮಕೂರು ಬಳಿ ಬಸ್ ಅಪಘಾತಕ್ಕೆ ತುತ್ತಾಗಿತ್ತು. ಘಟನೆಯಿಂದ ಯಾರಿಗೂ ಪ್ರಾಣಾಪಾಯ ಸಂಭವಿಸಿರಲಿಲ್ಲ. ಆದರೆ ಬಹುತೇಕ ಪ್ರಯಾಣಿಕರಿಗೆ ಗಾಯಗಳಾಗಿದ್ದವು. ಇದರಿಂದ ದಿಕ್ಕು ತೋಚದೆ ಪ್ರಯಾಣಿಕರು ಸಹಾಯಕ್ಕಾಗಿ ಬೆಂಗಳೂರಿನ ಸೀಬರ್ಡ್ ಟ್ರಾವೆಲ್ಸ್ ಗೆ ಕರೆ ಮಾಡಿದ್ದಾರೆ.

    ಆದರೆ ಟ್ರಾವೆಲ್ಸ್ ನವರು ಯಾವುದೇ ಸಹಾಯ ಮಾಡದೇ ಟ್ಯಾಕ್ಸಿ ಮಾಡಿಕೊಂಡು ಕಚೇರಿಗೆ ಬರುವಂತೆ ಸೂಚಿಸಿದ್ದಾರೆ. ಪ್ರಯಾಣಿಕರಿಗೆ ಗಾಯಗಳಾಗಿದ್ದರಿಂದ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ನಂತರ ಬೆಂಗಳೂರಿಗೆ ಆಗಮಿಸಿದ್ದಾರೆ. ಪ್ರಯಾಣಿಕ ಭರತ್ ಕುಮಾರ್ ಎಂಬವರು ಟ್ರಾವೆಲ್ಸ್ ನವರ ದುರ್ವತನೆಯನ್ನು ಪ್ರಶ್ನಿಸೋದಕ್ಕೆ ಬೆಂಗಳೂರಿನ ಸೀಬರ್ಡ್ ಕಚೇರಿಗೆ ತೆರಳಿದ್ದಾರೆ. ಆಗ ಟ್ರಾವೆಲ್ಸ್ ಮಾಲೀಕ ನಾಗರಾಜ್ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.

    ಈ ಹಿನ್ನೆಲೆಯಲ್ಲಿ ಭರತ್ ಸೀಬರ್ಡ್ ಟ್ರಾವೆಲ್ಸ್ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಾಗರದಿಂದ ಬೆಂಗ್ಳೂರಿಗೆ ತೆರಳ್ತಿದ್ದ ಬಸ್ ಪಲ್ಟಿ- ಮೂವರ ದುರ್ಮರಣ

    ಸಾಗರದಿಂದ ಬೆಂಗ್ಳೂರಿಗೆ ತೆರಳ್ತಿದ್ದ ಬಸ್ ಪಲ್ಟಿ- ಮೂವರ ದುರ್ಮರಣ

    – ಶಾಸಕ ಹರತಾಳು ಹಾಲಪ್ಪ ಸಹಾಯ

    ಶಿವಮೊಗ್ಗ: ಸಾಗರಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೀಬರ್ಡ್ ಖಾಸಗಿ ಬಸ್ ಪಲ್ಟಿಯಾಗಿದ್ದು, ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

    ಈ ಘಟನೆ ಸಾಗರ ಸಮೀಪದ ಉಳ್ಳೂರು ಎಂಬಲ್ಲಿ ನಡೆದಿದೆ. ಹೊನ್ನಾವರದ ಕೀರ್ತನಾ, ಸುಜಾತ, ಚಿತ್ರದುರ್ಗ ಜಿಲ್ಲೆಯ ಮೊಹಮ್ಮದ್ ಮೃತ ದುರ್ದೈವಿಗಳಾಗಿದ್ದಾರೆ. ಬಸ್ಸಿನಲ್ಲಿ ಸುಮಾರು 40 ಜನ ಪ್ರಯಾಣಿಕರಿದ್ದರು.

    ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಪಲ್ಟಿಯಾದ ಬಳಿಕ ಬಸ್ ಒಳಗೆ ಸಿಲುಕಿಕೊಂಡಿದ್ದವರನ್ನು ಹರಸಾಹಸಪಟ್ಟು ಸ್ಥಳೀಯರು, ಪೊಲೀಸರು ಹೊರತೆಗೆದಿದ್ದಾರೆ. ಬಳಿಕ ಗಾಯಾಳುಗಳನ್ನು ಕೂಡಲೇ ಸಾಗರ, ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ.

    ಗಾಯಾಳುಗಳನ್ನು ಸಾಗಿಸುತ್ತಿದ್ದಾಗ ಅದೇ ಮಾರ್ಗವಾಗಿ ಶಾಸಕ ಹರತಾಳು ಹಾಲಪ್ಪ ಬರುತ್ತಿದ್ದರು. ಈ ವೇಳೆ ಅವರು ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದ್ರು.

    ಘಟನೆ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.