Tag: ಸೀತಾರಾಮ ಕಲ್ಯಾಣ

  • ಜನಪ್ರತಿನಿಧಿಗಳಿಂದಲೇ ಹಂಚಿಕೆ – ಮಂಡ್ಯದಲ್ಲಿ ‘ಸೀತಾರಾಮ ಕಲ್ಯಾಣ’ ಸಿನಿಮಾ ಟಿಕೆಟ್ ಫ್ರೀ!

    ಜನಪ್ರತಿನಿಧಿಗಳಿಂದಲೇ ಹಂಚಿಕೆ – ಮಂಡ್ಯದಲ್ಲಿ ‘ಸೀತಾರಾಮ ಕಲ್ಯಾಣ’ ಸಿನಿಮಾ ಟಿಕೆಟ್ ಫ್ರೀ!

    ಮಂಡ್ಯ: ಮುಂಬರುವ ಲೋಕಸಬಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ. ಆದರೆ ಇದೀಗ ಮಂಡ್ಯದ ಜೆಡಿಎಸ್ ಮುಖಂಡರು ನಿಖಿಲ್ ಕುಮಾರಸ್ವಾಮಿ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರದ ಟಿಕೆಟ್‍ಗಳನ್ನು ಹಳ್ಳಿ ಹಳ್ಳಿಗಳಲ್ಲಿ ಉಚಿತವಾಗಿ ಹಂಚುವ ಮೂಲಕ ಈಗಿನಿಂದಲೇ ನಿಖಿಲ್ ಪರವಾಗಿ ಪ್ರಚಾರ ಆರಂಭಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಆಗುತ್ತಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಜೋರಾಗಿದೆ. ಸ್ವತಃ ಜೆಡಿಎಸ್ ಮುಖಂಡರು, ಪಕ್ಷದ ವರಿಷ್ಠರ ಬಳಿ ತೆರಳಿ ನಿಖಿಲ್‍ಗೆ ಟಿಕೆಟ್ ನೀಡುವಂತೆ ಒತ್ತಾಯ ಕೂಡ ಮಾಡಿದ್ದಾರೆ. ಇದೆಲ್ಲ ಸತ್ಯ ಎಂಬ ರೀತಿಯಲ್ಲಿ, ಚುನಾವಣೆವರೆಗೂ ನಿಖಿಲ್ ಕುಮಾರಸ್ವಾಮಿ ಎಲ್ಲರ ಮನದಲ್ಲೂ ಉಳಿಯಲಿ ಎಂಬ ಉದ್ದೇಶದಿಂದ ಸೀತಾರಾಮ ಕಲ್ಯಾಣ ಚಿತ್ರದ ಟಿಕೆಟ್‍ಗಳನ್ನು ಜೆಡಿಎಸ್ ಮುಖಂಡರು ಮತ್ತು ಜನಪ್ರತಿನಿಧಿಗಳು ಮಂಡ್ಯದ ಹಳ್ಳಿ ಹಳ್ಳಿಗಳಲ್ಲಿ ಉಚಿತವಾಗಿ ಹಂಚುತ್ತಿದ್ದಾರೆ.

    ರೈತರ ಕಷ್ಟಕ್ಕೆ ಮಿಡಿಯುವ, ರೈತ ಪರ ಕಾಳಜಿಯುಳ್ಳ ಯುವಕನ ಪಾತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಮಂಡ್ಯದ ಎಲ್ಲ ಜನರಿಗೂ ಉಚಿತವಾಗಿ ತೋರಿಸುವ ಮೂಲಕ, ನಿಖಿಲ್ ಎಲ್ಲರ ಮನಸ್ಸಲ್ಲೂ ಸ್ಥಾನ ಗಿಟ್ಟಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಲಭವಾಗಿ ಮತ ಪಡೆಯುವಂತಾಗಲಿ ಎಂಬ ಉದ್ದೇಶದಿಂದ ಜೆಡಿಎಸ್ ಮುಖಂಡರು ಹಳ್ಳಿ ಹಳ್ಳಿಗಳಲ್ಲಿ ಉಚಿತವಾಗಿ ಚಿತ್ರದ ಟಿಕೆಟ್ ಹಂಚುತ್ತಿರುವ ಮಾತು ಕೇಳಿ ಬರುತ್ತಿದ್ದು, ಈ ಬಗ್ಗೆ ಹಲವರು ವ್ಯಂಗ್ಯವಾಡಿದ್ದಾರೆ ಎಂದು ರೈತ ಮುಖಂಡರಾದ ಸುಧೀರ್ ಕುಮಾರ್ ಮತ್ತು ಚಂದ್ರಶೇಖರ್ ಹೇಳಿದ್ದಾರೆ.

    ನಿಖಿಲ್ ಕುಮಾರಸ್ವಾಮಿ ಚಿತ್ರದ ಯಶಸ್ಸಿಗೆ ಶುಭ ಕೋರಿ ಹಾಕಿರುವ ಎಲ್ಲ ಬ್ಯಾನರ್ ಗಳಲ್ಲೂ ಮಂಡ್ಯ ಜಿಲ್ಲೆಯ ಜೆಡಿಎಸ್ ಮುಖಂಡರು, ಜನಪ್ರತಿನಿಧಿಗಳು ರಾರಾಜಿಸುತ್ತಿದ್ದಾರೆ. ಜನಪ್ರತಿನಿಧಿಗಳು ಜನರ ಸಮಸ್ಯೆ ಬಗೆಹರಿಸೋದು ಬಿಟ್ಟು ನಾಮುಂದು ತಾಮುಂದು ಎಂಬ ರೀತಿ ಚಿತ್ರದ ಪ್ರಮೋಷನ್‍ಗೆ ಮುಂದಾಗಿರುವುದಕ್ಕೂ ಟೀಕೆ ವ್ಯಕ್ತವಾಗಿದೆ. ಆದರೆ ಉಚಿತ ಟಿಕೆಟ್ ಹಂಚಿಕೆ ಆರೋಪ ನಿರಾಕರಿಸುತ್ತಿರುವ ಮಂಡ್ಯ ಶಾಸಕ ಶ್ರೀನಿವಾಸ್, ಇದೆಲ್ಲ ರಾಜಕೀಯ ವಿರೋಧಿಗಳು ಆಧಾರವಿಲ್ಲದೆ ಮಾಡುತ್ತಿರವ ಕುಹಕವಾಗಿದೆ. ನಿಖಿಲ್ ಈಗಾಗಲೇ ಎಲ್ಲರಿಗೂ ಚಿರಪರಿಚಿತವಾಗಿರುವ ಯುವ ನಾಯಕರಾಗಿದ್ದು, ಒಂದು ಒಳ್ಳೆಯ ಚಿತ್ರವನ್ನು ಜನ ಇಷ್ಟಪಟ್ಟು ನೋಡುತ್ತಾರೆ ಎಂದು ಹೇಳಿದ್ದಾರೆ.

    ಸೀತಾರಾಮ ಕಲ್ಯಾಣ ಚಿತ್ರ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅಭಿನಯಿಸಿರುವ ಕಾರಣಕ್ಕೆ, ಮಂಡ್ಯದಲ್ಲಿ ರಾಜಕೀಯವಾಗಿಯೂ ಚರ್ಚೆಗೆ ಗ್ರಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸೀತಾರಾಮನದ್ದು ಅರ್ಥಪೂರ್ಣ ಕಲ್ಯಾಣ!

    ಸೀತಾರಾಮನದ್ದು ಅರ್ಥಪೂರ್ಣ ಕಲ್ಯಾಣ!

    ಬೆಂಗಳೂರು: ನಿಖಿಲ್ ನಾಯಕನಾಗಿ ನಟಿಸಿರೋ ಸೀತಾರಾಮ ಕಲ್ಯಾಣ ಚಿತ್ರ ಬಿಡುಗಡೆಯಾಗಿದೆ. ಆರಂಭದಿಂದಲೂ ಭರ್ಜರಿ ಫ್ಯಾಮಿಲಿ ಎಂಟರ್ ಟೇನರ್ ಎಂಬ ಸುಳಿವಿನೊಂದಿಗೆ ಎಲ್ಲರನ್ನು ಈ ಸಿನಿಮಾ ಸೆಳೆದುಕೊಂಡಿತ್ತು. ಅಂಥಾ ಅಗಾಧ ನಿರೀಕ್ಷೆಯಿಟ್ಟುಕೊಂಡು ಥೇಟರು ಹೊಕ್ಕ ಪ್ರತೀ ಪ್ರೇಕ್ಷಕರನ್ನೂ ಸೀತಾರಾಮ ಖುಷಿಗೊಳಿಸಿದ್ದಾನೆ.

    ಇಡೀ ಚಿತ್ರದಲ್ಲಿ ಪ್ರಧಾನವಾಗಿ ಗಮನ ಸೆಳೆಯುವಂತಿರೋದು ನಿರ್ದೇಶಕ ಎ ಹರ್ಷ ಅವರ ಜಾಣ್ಮೆ ಬೆರೆತ ಕಸುಬುದಾರಿಕೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಮುದ ನೀಡುವಂತೆ, ಸಿಎಂ ಮಗನೇ ನಾಯಕನಾದ್ದರಿಂದ ಆ ದೃಷ್ಟಿಯಲ್ಲಿಯೂ ಕುಂದುಂಟಾಗದಂತೆ ಮತ್ತು ಯಾವುದನ್ನೂ ಉದ್ದೇಶಪೂರ್ವಕವಾಗಿ ತುರುಕಲಾಗಿದೆ ಎಂಬಂಥಾ ಭಾವವೇ ಕಾಡದಂತೆ ಹರ್ಷ ಇಡೀ ಚಿತ್ರವನ್ನ ರೂಪಿಸಿದ್ದಾರೆ.

    ಸೀತಾರಾಮ ಕಲ್ಯಾಣ ದೊಡ್ಡ ಕ್ಯಾನ್ವಾಸಿನ ಸಿನಿಮಾ. ನಿಖಿಲ್ ಇಲ್ಲಿ ಆರ್ಯ ಎಂಬ ಲವಲವಿಕೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಆರ್ಯ ಗೆಳೆಯನ ಮದುವೆಯ ನಿಮಿತ್ತವಾಗಿ ಆತನ ದೊಡ್ಡ ಕುಟುಂಬವೊಂದರ ಪರಿಸರಕ್ಕೆ ಎಂಟ್ರಿ ಕೊಡುತ್ತಾನೆ. ಮದುವೆ ಮುಗಿಯೋ ಹೊತ್ತಿಗೆಲ್ಲ ಆರ್ಯನಿಗೆ ಆ ದೊಡ್ಡ ಮನೆ ಯಜಮಾನನ ಮಗಳ ಮೇಲೆಯೇ ಪ್ರೀತಿ ಮೂಡಿ ಬಿಟ್ಟಿರುತ್ತೆ. ನಂತರವೂ ಪವಾಡವೆಂಬಂತೆ ಆ ಹುಡುಗಿಯೊಂದಿಗೇ ಆರ್ಯನ ಪ್ರೇಮ ಮುಂದುವರೆಯುತ್ತೆ. ಆದರೆ ಈ ಪ್ರೀತಿಯ ಹಿನ್ನೆಲೆಯಲ್ಲಿಯೇ ಆ ಎರಡು ಕುಟುಂಬಗಳ ನಂಟು, ದ್ವೇಷದ ಪ್ಲ್ಯಾಶ್ ಬ್ಯಾಕೂ ತೆರೆದುಕೊಳ್ಳುತ್ತೆ. ಅದೆಂಥಾದ್ದೆಂಬುದನ್ನ ಸೀತಾರಾಮ ಕಲ್ಯಾಣವನ್ನ ನೋಡಿಯೇ ತಿಳಿದುಕೊಳ್ಳೋದು ಉತ್ತಮ.

    ಇನ್ನುಳಿದಂತೆ ಫ್ಯಾಮಿಲಿಯಾಚೆಗೆ ಜನನಾಯಕನಾಗಿಯೂ ನಿಖಿಲ್ ಮಿಂಚಿದ್ದಾರೆ. ರೈತಪರವಾದ ಸೀನುಗಳೂ ಸ್ಫೂರ್ತಿದಾಯಕವಾಗಿವೆ. ರಘು ನಿಡುವಳ್ಳಿಯವರ ಸಂಭಾಷಣೆಯೂ ಕಥೆಯ ಓಘಕ್ಕೆ ಪೂರಕವಾಗಿದೆ. ಸಾಹಸ, ಸೆಂಟಿಮೆಂಟು ಸೇರಿದಂತೆ ಎಲ್ಲವೂ ಬೆರಗಾಗುವಂತಿವೆ. ಶರತ್ ಕುಮಾರ್, ರವಿಶಂಕರ್, ಮಧುಬಾಲಾ ಮುಂತಾದವರೂ ಕೂಡಾ ಬೇರೆಯದ್ದೇ ಥರದ ಪಾತ್ರಗಳಲ್ಲಿ ಆವರಿಸಿಕೊಳ್ಳುತ್ತಾರೆ. ರಚಿತಾ ಕೂಡಾ ಮುದ್ದಾಗಿ ನಟಿಸಿದ್ದಾರೆ. ನಿಖಿಲ್ ಎಲ್ಲ ರೀತಿಯಲ್ಲಿಯೂ ಫುಲ್ ಮಾಕ್ರ್ಸ್ ಪಡೆದುಕೊಳ್ಳುತ್ತಾರೆ. ಸಂಗೀತ, ಸಾಹಸ, ಛಾಯಾಗ್ರಹಣ… ಹೀಗೆ ಎಲ್ಲ ವಿಭಾಗಗಳಲ್ಲಿಯೂ ಹೊಸತನವಿದೆ. ಅದುವೇ ಸೀತಾರಾಮ ಕಲ್ಯಾಣವನ್ನು ಮತ್ತಷ್ಟು ಆಕರ್ಷಕವಾಗಿದೆ.

    https://www.youtube.com/watch?v=GaXuYAfqGQg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೀತಾರಾಮ ಕಲ್ಯಾಣ ಚಿತ್ರದ ಪ್ರೀಮಿಯರ್ ಶೋಗೆ ಹರಿದುಬಂತು ರಾಜಕೀಯ ದಂಡು

    ಸೀತಾರಾಮ ಕಲ್ಯಾಣ ಚಿತ್ರದ ಪ್ರೀಮಿಯರ್ ಶೋಗೆ ಹರಿದುಬಂತು ರಾಜಕೀಯ ದಂಡು

    ಬೆಂಗಳೂರು: ಜಾಗ್ವಾರ್ ಹುಡುಗನ ಹೊಸ ಸಿನಿಮಾ ರಿಲೀಸ್ ಆಗಿದೆ. ಸಿಎಂ ಕುಮಾರಸ್ವಾಮಿ ಪುತ್ರನ ಸೀತರಾಮ ಕಲ್ಯಾಣ ಸಿನಿಮಾ ನೋಡಿ ಸಂಭ್ರಮಿಸೋಕೆ ಸ್ಯಾಂಡಲ್‍ವುಡ್ ಸಿನಿರಸಿಕರು ಕಾಯುತ್ತಿದ್ದಾರೆ. ಈ ಚಿತ್ರದ ಪ್ರೀಮಿಯರ್ ಶೋಗೆ ರಾಜಕೀಯ ದಂಡೇ ಹರಿದುಬಂದಿತ್ತು.

    ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಸ್ಯಾಂಡಲ್‍ವುಡ್ ಯುವರಾಜ್, ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಸಿನಿಮಾ ಸುಮಾರು 300ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ.

    ಎ. ಹರ್ಷ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ನಿಖಿಲ್‍ಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮಿಂಚಿದ್ದಾರೆ. ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ಬಿಜೆಪಿ ನಾಯಕ ಈಶ್ವರಪ್ಪ, ಬಿ.ಸಿ ಪಾಟೀಲ್ ಸೇರಿದಂತೆ ರಾಜಕೀಯ ನಾಯಕರ ದಂಡೆ ಆಗಮಿಸಿತ್ತು. ಈ ವೇಳೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಿಖಿಲ್ ಅಭಿನಯಕ್ಕೆ 100 ಕ್ಕೆ 100 ಅಂಕ ಕೊಡುತ್ತೇನೆ. ಎಲ್ಲ ರಾಜಕೀಯ ನಾಯಕರು ಪಕ್ಷಾತೀತವಾಗಿ ಸಿನಿಮಾ ನೋಡಿ ಮೆಚ್ಚಿದ್ದಾರೆ ಎಂದು ಹೇಳಿದ್ದಾರೆ.

    ಇದೇ ವೇಳೆ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಮಾತನಾಡಿ, ಸೀತಾರಾಮ ಕಲ್ಯಾಣದಲ್ಲಿ ಕುಟುಂಬ ಸಂಬಂಧ ತೋರಿಸಲಾಗಿದೆ. ರೈತರಿಗೆ ಒಳ್ಳೆಯ ಸಂದೇಶವಿದೆ ಎಂದು ಹೇಳಿದ್ದಾರೆ. ಗೃಹ ಸಚಿವ ಎಂ.ಬಿ ಪಾಟೀಲ್ ಚಿತ್ರ ವೀಕ್ಷಿಸಿ ನಿಖಿಲ್ ಭವಿಷ್ಯದ ಸೂಪರ್ ಸ್ಟಾರ್ ಆಗೋದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಬಿ.ಸಿ ಪಾಟೀಲ್, ಬಹಳ ವರ್ಷಗಳ ನಂತರ ಅದ್ಭುತ ಸಿನಿಮಾ ನೋಡಿದಂಗಾಯಿತು ಎಂದಿದ್ದಾರೆ.

    ಜಾಗ್ವಾರ್ ಬಳಿಕ ನಿಖಿಲ್ ಎರಡನೇ ಬಾರಿ ಬೆಳ್ಳಿತೆರೆಯಲ್ಲಿ ಅಖಾಡಕ್ಕಿಳಿದಿದ್ದಾರೆ. ಟೀಸರ್, ಸಾಂಗ್ಸ್ ಮೂಲಕವೇ ಸಖತ್ ಸೌಂಡ್ ಮಾಡಿದ್ದ ಸೀತಾರಾಮ ಕಲ್ಯಾಣ ಕುಟುಂಬ ಕಥಾನಕವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೀತಾರಾಮನ ಅಕೌಂಟಿಗೆ ಜಮೆಯಾಯ್ತು ಮತ್ತೊಂದು ಹಿಟ್ ಸಾಂಗು!

    ಸೀತಾರಾಮನ ಅಕೌಂಟಿಗೆ ಜಮೆಯಾಯ್ತು ಮತ್ತೊಂದು ಹಿಟ್ ಸಾಂಗು!

    ಸೀತಾರಾಮ ಕಲ್ಯಾಣದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈ ಹಿಂದೆ ರಾಜ ನಾನು ರಾಣಿ ನೀನು ಎಂಬ ಹಾಡು ಜನಮನ ಸೆಳೆದಿತ್ತು. ನಿಖಿಲ್ ಮತ್ತು ರಚಿತಾ ರಾಮ್ ಜೋಡಿ ಅಭಿಮಾನಿಗಳನ್ನು ಮುದ್ದು ಮುದ್ದಾಗಿಯೇ ಆವರಿಸಿಕೊಂಡಿತ್ತು. ಈ ಬಿಸಿ ಆರೋ ಮುನ್ನವೇ ಈಗ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈ ಮೂಲಕ ಸೀತಾರಾಮನ ಖಾತೆಗೆ ಮತ್ತೊಂದು ಹಿಟ್ ಸಾಂಗು ಜಮೆಯಾದಂತಾಗಿದೆ!

    ಈ ಸುಂದರ ಕಲ್ಯಾಣ ಮುದ್ದು ಜೋಡಿಯ ಕಲ್ಯಾಣ ಎಂಬ ಈ ಹಾಡು ಇಂದು ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಫ್ಯಾಮಿಲಿ ಬಾಂಧವ್ಯ ಮತ್ತು ಮದುವೆ ಮೂಡಿನ ಮಾಂಗಲ್ಯಂ ತಂತು ನಾನೇನಾ…. ಎಂಬ ಹಾಡನ್ನು ವಿ. ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅನೂಪ್ ರುಬೀನ್ಸ್ ಸಂಗೀತ ನೀಡಿರೋ ಈ ಹಾಡಿಗೆ ವಿಜಯ ಪ್ರಕಾಶ್ ಧ್ವನಿಯಾಗಿದ್ದಾರೆ. ಮಾಧುರ್ಯ ಭರಿತವಾದ ಈ ಹಾಡಿಗೆ ಜನ ವ್ಯಾಪಕವಾಗಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದು ಚಿತ್ರತಂಡಕ್ಕೆ ಮತ್ತಷ್ಟು ಬಲ ತುಂಬಿದೆ.

    ಚನ್ನಾಂಬಿಕಾ ಫಿಲಂಸ್ ಲಾಂಛನದಲ್ಲಿ ಮೂಡಿ ಬಂದಿರೋ ಈ ಚಿತ್ರವನ್ನು ಅನಿತಾ ಕುಮಾರಸ್ವಾಮಿ ನಿರ್ಮಾಣ ಮಾಡಿದ್ದಾರೆ. ರವಿಶಂಕರ್, ಶರತ್ ಕುಮಾರ್ ಮುಂತಾದವರ ಅದ್ಧೂರಿ ತಾರಾಗಣದ ಈ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ.

    https://www.youtube.com/watch?v=CKOvaKWC8kQ&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೀತಾರಾಮ ಕಲ್ಯಾಣ: ಕಿಕ್ಕೇರಿಸಲಿದೆ ಕಾಮಿಡಿ ಝಲಕ್!

    ಸೀತಾರಾಮ ಕಲ್ಯಾಣ: ಕಿಕ್ಕೇರಿಸಲಿದೆ ಕಾಮಿಡಿ ಝಲಕ್!

    ನಿಖಿಲ್ ಕುಮಾರಸ್ವಾಮಿ ಅವರ ಎರಡನೇ ಚಿತ್ರ ಸೀತಾರಾಮ ಕಲ್ಯಾಣ. ಎ.ಹರ್ಷ ನಿರ್ದೇಶನದ ಈ ಸಿನಿಮಾ ಈಗಾಗಲೇ ನಾನಾ ದಿಕ್ಕಿನಿಂದ ಪ್ರೇಕ್ಷಕರನ್ನ ಆವರಿಸಿಕೊಂಡಿದೆ. ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರೋ ಸೀತಾರಾಮ ಕಲ್ಯಾಣದ ಅಂತರಾಳ ಈಗ ಸಿಕ್ಕಿರೋ ಸಣ್ಣಪುಟ್ಟ ಸೂಚನೆಗಳಿಗಿಂತಲೂ ಮಜವಾಗಿದೆ.

    ಒಟ್ಟಾರೆ ಕಥೆಯಲ್ಲಿ ಮಾಸ್, ಆಕ್ಷನ್, ಫ್ಯಾಮಿಲಿ ಎಮೋಷನಲ್… ಹೀಗೆ ಅದೆಷ್ಟೇ ಅಂಶಗಳಿದ್ದರೂ ಈ ಸಿನಿಮಾದ ಪ್ರಧಾನ ಅಂಶ ಮನೋರಂಜನೆ. ಹಾಗಿದ್ದ ಮೇಲೆ ಭರಪೂರವಾದ ಹಾಸ್ಯ ಸನ್ನಿವೇಶಗಳೂ ಇರೋದು ಪಕ್ಕಾ!

    ಅದು ನಿಜ ಅಂತಾರೆ ನಿರ್ದೇಶಕ ಹರ್ಷ. ಸಾಮಾನ್ಯವಾಗಿ ಕಥೆ ಗಂಭೀರವಾಗಿ ಚಲಿಸಿದಾಗ ಒಂದು ಕಾಮಿಡಿ ಟ್ರ್ಯಾಕು ಕ್ರಿಯೇಟ್ ಮಾಡೋದಿದೆ. ಅದು ಹೆಚ್ಚಿನ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡೋದೇ ಹೆಚ್ಚು. ಆದರೆ ಕಥೆಯೊಳಗೇ ಸಹಜ ಕಾಮಿಡಿಯ ಕಿಕ್ಕೇರುವಂತೆ ಮಾಡೋದು ಕೊಂಚ ರಿಸ್ಕಿ ಕೆಲಸ. ನಿರ್ದೇಶಕ ಹರ್ಷ ಅದನ್ನು ಈ ಸಿನಿಮಾದಲ್ಲಿ ಮಾಡಿದ್ದಾರೆ.

    ಸೀತಾರಾಮ ಕಲ್ಯಾಣದಲ್ಲಿ ಕಾಮಿಡಿ ಸನ್ನಿವೇಶಗಳ ಒಡ್ಡೋಲಗವೇ ಇದೆ. ಅದು ಕಥೆಯ ವೇಗದೊಂದಿಗೇ ಬೆರೆತು ಹೋಗಿದೆ. ಚಿಕ್ಕಣ್ಣ, ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ, ಶಿವರಾಜ್ ಕೆ ಆರ್ ಪೇಟೆ, ಸಂಜು ಬಸಯ್ಯ ಮುಂತಾದವರು ಭಿನ್ನ ಪಾತ್ರಗಳ ಮೂಲಕವೇ ನಗೆ ಉಕ್ಕಿಸಲಿದ್ದಾರೆ.

    ಆದರೆ ಈ ಕಾಮಿಡಿ ವಿಚಾರದಲ್ಲಿಯೇ ಮತ್ತೊಂದು ವಿಶೇಷವಿದೆ. ಇದುವರೆಗೆ ಗಂಭೀರವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಲಾವಿದರೂ ಕೂಡಾ ನಗೆ ಚಿಮ್ಮಿಸುವಂಥಾ ಶೇಡಿನ ಪಾತ್ರಗಳನ್ನು ನಿರ್ವಹಿಸಿದ್ದಾರಂತೆ. ವಿಲನ್ ಆಗಿ ಅಬ್ಬರಿಸುತ್ತಾ ಬಂದಿರೋ ರವಿಶಂಕರ್ ಕೂಡಾ ಇಲ್ಲಿ ನಗಿಸಲಿದ್ದಾರೆ. ಹಿರಿಯ ನಟಿ ಗಿರಿಜಾ ಲೋಕೇಶ್ ಕೂಡಾ ಮಜವಾದ, ತಮಾಷೆ ಮಾಡೋ ಪಾತ್ರದಲ್ಲಿ ನಟಿಸಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೀತಾರಾಮ ಕಲ್ಯಾಣ: ಹರ್ಷ ಎಂಟನೇ ಹಾದಿ ತುಂಬಾ ಸ್ಪೆಷಲ್!

    ಸೀತಾರಾಮ ಕಲ್ಯಾಣ: ಹರ್ಷ ಎಂಟನೇ ಹಾದಿ ತುಂಬಾ ಸ್ಪೆಷಲ್!

    ಬೆಂಗಳೂರು: ನೃತ್ಯ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಎ ಹರ್ಷ. ನೃತ್ಯ ನಿರ್ದೇಶಕರಾಗಿ ಬಹು ಬೇಡಿಕೆಯಲ್ಲಿರುವಾಗಲೇ ನಿರ್ದೇಶನಕ್ಕಿಳಿದಿದ್ದ ಹರ್ಷ ಅವರದ್ದು ನಿಜಕ್ಕೂ ಕಲರ್ ಫುಲ್ ಜರ್ನಿ. ಯುವ ಆವೇಗದ ಕಥಾ ಹಂದರದಿಂದಲೇ ಗೆಲ್ಲುತ್ತಾ ಬಂದಿರೋ ಹರ್ಷ ಪಾಲಿಗೆ ನಿರ್ದೇಶಕರಾಗಿ ಸೀತಾರಾಮ ಕಲ್ಯಾಣ ಎಂಟನೇ ಸಿನಿಮಾ.

    ಇದುವರೆಗೂ ಮಾಸ್ ಶೈಲಿಯ ಸಿನಿಮಾಗಳನ್ನೇ ನಿರ್ದೇಶನ ಮಾಡಿರುವವರು ಹರ್ಷ. ಅವರು ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ಮೊದಲ ಬಾರಿಗೆ ಫ್ಯಾಮಿಲಿ ಕಥಾನಕವೊಂದನ್ನ ಹೇಳ ಹೊರಟಿದ್ದಾರೆ. ಈ ಮೂಲಕವೇ ಅವರ ಪಾಲಿಗೆ ತಮ್ಮ ಎಂಟನೇ ಚಿತ್ರ ಬಲು ಮಹತ್ವದ್ದು.

    ಸೀತಾರಾಮ ಕಲ್ಯಾಣ ಮಾಸ್ ಮತ್ತು ಫ್ಯಾಮಿಲಿ ಎಂಟರ್‍ಟೈನರ್ ಚಿತ್ರ. ಇದೇ ಮೊದಲ ಸಲ ಹರ್ಷ ಎಮೋಷನಲ್ ಸನ್ನಿವೇಶಗಳ ಮೂಲಕ ಹೊಸಾ ಬಗೆಯ ಪಾತ್ರಗಳನ್ನು ಕಟ್ಟಿದ್ದಾರಂತೆ. ಹೆಸರೇ ಸೀತಾರಾಮ ಕಲ್ಯಾಣ ಅಂತಿರೋದರಿಂದ ಇದು ಲವ್, ಮದುವೆ ಸುತ್ತಮುತ್ತ ನಡೆಯೋ ಕಥೆ ಅಂತ ಬಹುತೇಕರು ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಸೀತಾರಾಮನ ಕಥೆ ಕಲ್ಯಾಣದಾಚೆಗೂ ಹಬ್ಬಿಕೊಂಡಿದೆ.

    ಮೊದಲ ಸಿನಿಮಾ ಜಾಗ್ವಾರ್ ನಲ್ಲಿ ನಿಖಿಲ್ ಸಕಲ ತಯಾರಿ ಮಾಡಿಕೊಂಡು ಅಖಾಡಕ್ಕಿಳಿದಿದ್ದರು. ಸೀತಾರಾಮ ಕಲ್ಯಾಣದ ಪಾತ್ರದ ಮೂಲಕ ಅವರು ತಾನೋರ್ವ ಅದ್ಭುತ ಪರ್ಫಾರ್ಮರ್ ಅನ್ನೋದನ್ನೂ ಸಾಬೀತು ಪಡಿಸಿದ್ದಾರಂತೆ. ಫ್ಯಾಮಿಲಿ, ಮಾಸ್ ಮತ್ತು ಎಮೋಷನಲ್ ಸನ್ನಿವೇಶಗಳಿಗೆಲ್ಲ ನಿಖಿಲ್ ಬೆರಗಾಗುವಂತೆ ಜೀವ ತುಂಬಿದ್ದಾರಂತೆ. ಇನ್ನು ಈವರೆಗೆ ಒಂದು ವೆರೈಟಿ ಪಾತ್ರಗಳಿಗೆ ಹೆಸರಾಗಿದ್ದ ನಟ ನಟಿಯರನೇಕರು ಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ.

    ಇಂಥಾ ನಾನಾ ವಿಶೇಷತೆಗಳೊಂದಿಗೆ ಮೂಡಿ ಬಂದಿರೋ ಸೀತಾರಾಮ ಪ್ರೇಕ್ಷಕರಿಗೆ ಕ್ಷಣ ಕ್ಷಣವೂ ಸರ್‍ಪ್ರೈಸ್ ಕೊಡೋವಂತೆ ಮೂಡಿ ಬಂದಿದೆ ಅನ್ನೋದು ಹರ್ಷ ಭರವಸೆ.

    https://www.youtube.com/watch?v=IgY3WB1V1wM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವರಾಜ ನಿಖಿಲ್ ಸಿನಿಮಾ ಹೇಗಿರಬಹುದು?

    ಯುವರಾಜ ನಿಖಿಲ್ ಸಿನಿಮಾ ಹೇಗಿರಬಹುದು?

    ಬೆಂಗಳೂರು: ಜಾಗ್ವಾರ್ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ನಿಖಿಲ್ ಕುಮಾರ್ ಎರಡನೇ ಚಿತ್ರ ಸೀತಾರಾಮ ಕಲ್ಯಾಣ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ಕಡೆಗೂ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಇದೇ ಜನವರಿ 25ರಂದು ಸೀತಾರಾಮ ಕಲ್ಯಾಣ ಬಿಡುಗಡೆಯಾಗಲಿದೆ. ಸೀತಾರಾಮ ಕಲ್ಯಾಣ ಈಗಾಗಲೇ ಹಾಡು, ಟೀಸರ್ ಸೇರಿದಂತೆ ಹಲವಾರು ರೀತಿಯಲ್ಲಿ ಸುದ್ದಿ ಮಾಡಿದೆ. ಎ ಹರ್ಷ ಮತ್ತು ನಿಖಿಲ್ ಕಾಂಬಿನೇಷನ್ನಿನ ಈ ಚಿತ್ರ ಎಲ್ಲರನ್ನೂ ಚಕಿತಗೊಳಿಸೋದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಿದೆ ಗಾಂಧಿನಗರ.

    ಮೊದಲ ಚಿತ್ರ ಜಾಗ್ವಾರ್ ಮೂಲಕವೇ ನಿಖಿಲ್ ಕುಮಾರ್ ನಟನೆಯ ಬಗ್ಗೆ ತಮ್ಮ ಬದ್ಧತೆ ಎಂಥಾದ್ದೆಂಬುದನ್ನು ಸಾಬೀತು ಪಡಿಸಿದ್ದರು. ಡ್ಯಾನ್ಸ್, ಸಾಹಸ, ಅಭಿನಯ ಎಲ್ಲದರಲ್ಲಿಯೂ ತರಬೇತಿ ಪಡೆದೇ ಅವರು ಕ್ಯಾಮೆರಾ ಮುಂದೆ ಬಂದು ನಿಂತಿದ್ದರು. ಜಾಗ್ವಾರ್ ಬಿಡುಗಡೆಯಾದ ದಿನವೇ ಮಾಧ್ಯಮದ ಮಂದಿ `ಸ್ಟಾರ್ ಈಸ್ ಬಾರ್ನ್’ ಅಂತಾ ಷರಾ ಬರೆದಿದ್ದವು. ಅದು ಸುಮ್ಮನೇ ದಕ್ಕುವಂಥದ್ದಲ್ಲ. ಒಬ್ಬ ನಟ ತೆರೆ ಮೇಲೆ ಎಲ್ಲ ರೀತಿಯಲ್ಲೂ ಆಕರ್ಷಿಸಿದರೆ ಮಾತ್ರ `ಸ್ಟಾರ್’ ಎನ್ನಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಟಿಸಿದ ಮೊಟ್ಟಮೊದಲ ಸಿನಿಮಾದಲ್ಲೇ ಸ್ಕೋರು ಮಾಡಿದ್ದ ನಿಖಿಲ್ ಎರಡನೇ ಸಿನಿಮಾದ ಕುರಿತು ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ.

    ನೃತ್ಯ ನಿರ್ದೇಶಕರಾಗಿ ಎಂಟ್ರಿ ಕೊಟ್ಟು ನಂತರ ಕನ್ನಡದ ಬಹುತೇಕ ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿರುವ ಎ. ಹರ್ಷ ಈ ವರೆಗೆ ಕೈಗೆತ್ತಿಕೊಂಡ ಸಿನಿಮಾಗಳನ್ನೆಲ್ಲಾ ಗೆಲ್ಲಿಸಿ ಇವತ್ತು ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಸೀತಾರಾಮ ಕಲ್ಯಾಣದಲ್ಲಿ ಹರ್ಷ ನಿಖಿಲ್ ಕುಮಾರ್ ರನ್ನು ಮತ್ತಷ್ಟು ಹೊಸ ರೀತಿಯಲ್ಲಿ ಕಂಗೊಳಿಸುವಂತೆ ಮಾಡಿದ್ದಾರಂತೆ. ಯುವರಾಜ ನಿಖಿಲ್ ಸಿನಿಮಾಗಾಗಿ ಜನ ಕಾತರದಿಂದ ಕಾದಿದ್ದಾರೆ. ಅದರ ಅಸಲಿ ಮಜಾ ಏನೆಂಬುದು ಜನವರಿ 25ರಂದು ತಿಳಿಯಲಿದೆ.

    https://www.youtube.com/watch?v=3pYwtl-VD-Y

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಚ್‍ಡಿಕೆ ಹುಟ್ಟುಹಬ್ಬಕ್ಕೆ ಪುತ್ರ ನಿಖಿಲ್ ಭರ್ಜರಿ ಗಿಫ್ಟ್

    ಎಚ್‍ಡಿಕೆ ಹುಟ್ಟುಹಬ್ಬಕ್ಕೆ ಪುತ್ರ ನಿಖಿಲ್ ಭರ್ಜರಿ ಗಿಫ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ನಿಖಿಲ್ ಕುಮಾರ್ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರ ಕೂಡ ಲಿಸ್ಟ್ ನಲ್ಲಿದೆ. ಈ ಚಿತ್ರದ ಲಿರಿಕಲ್ ಹಾಡೊಂದು ಇಂದು ಬಿಡುಗಡೆಯಾಗಿದೆ.

    ಈ ಚಿತ್ರ ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಬಜಾರ್ ನಲ್ಲಿ ನಿಖಿಲ್ ಅಬ್ಬರ ಶುರುವಿಟ್ಟುಕೊಂಡಿದ್ದಾರೆ. ಸದ್ಯ ಸೀತಾರಾಮ ಕಲ್ಯಾಣ ಸಿನಿಮಾದ ಸೆಕೆಂಡ್ ಸಾಂಗ್ ರಿಲೀಸ್ ಆಗಿದೆ. ತಂದೆ ಕುಮಾರಸ್ವಾಮಿಯವರ ಹುಟ್ಟುಹಬ್ಬಕ್ಕಾಗಿ ನಿಖಿಲ್ `ಓ ಜಾನು.. ಓ ಜಾನು’ ಹೆಸರಿನ ಲಿರಿಕಲ್ ಸಾಂಗ್‍ನ ಬಿಡುಗಡೆ ಮಾಡಿಸಿದ್ದಾರೆ.

    ಕೆ. ಕಲ್ಯಾಣ ಸಾಹಿತ್ಯ, ಅನುಪ್ ರುಬಿನ್ಸ್ ಸಂಗೀತವಿರುವ ಈ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ನಿಖಿಲ್- ರಚಿತಾ ಜೋಡಿ ಮೋಡಿ ಮಾಡುತ್ತಿದೆ. ಎ. ಹರ್ಷ ನಿರ್ದೇಶನ ಚಿತ್ರಕ್ಕಿದ್ದು, ಚೆನ್ನಾಂಬಿಕಾ ಬ್ಯಾನರ್ ಅಡಿಯಲ್ಲಿ ಸಿನಿಮಾ ಅದ್ಧೂರಿಯಾಗಿ ರೆಡಿಯಾಗುತ್ತಿದೆ. ಇಂದು ಈ ಚಿತ್ರದ ಲಿರಿಕಲ್ ಹಾಡನ್ನು ಲಹರಿ ಸಂಸ್ಥೆ ಬಿಡುಗಡೆ ಮಾಡಿದೆ.

    ಈ ಹಿಂದೆ ಸೀತಾರಾಮ ಕಲ್ಯಾಣ ಸಿನಿಮಾದ ಟೀಸರ್ ಬಿಡುಗಡೆಗೊಂಡಿತ್ತು. ಒಂದೇ ದಿನದಲ್ಲಿ 2ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, ಯೂಟ್ಯೂಬ್‍ನಲ್ಲಿ ಟಾಪ್ 1 ಟ್ರೆಂಡಿಂಗ್‍ನಲ್ಲಿತ್ತು. ಈ ಸಿನಿಮಾ ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಕಥೆಯನ್ನು ಒಳಗೊಂಡಿದೆ.

    ಈ ಸಿನಿಮಾವನ್ನು ಹರ್ಷ ಅವರು ನಿರ್ದೇಶನ ಮಾಡಿದ್ದು, ಡಿಂಪಲ್ ಕ್ವೀನ್ ರಚಿತಾರಾಮ್ ನಾಯಕಿಯಾಗಿ ಅಭಿನಯಿಸಿದ್ದಾರೆ. ರವಿಶಂಕರ್, ಶರತ್‍ಕುಮಾರ್, ಚಿಕ್ಕಣ್ಣ, ಮಧು ಸೇರಿದಂತೆ ಹಲವು ದಿಗ್ಗಜ್ಜರ ತಂಡವೇ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿದೆ. ಈ ಸಿನಿಮಾಗಾಗಿ ಚಿತ್ರತಂಡ ಮೈಸೂರು, ಬೆಂಗಳೂರು ಸೇರಿದಂತೆ ಹಲವು ತಾಣಗಳಲ್ಲಿ ಚಿತ್ರೀಕರಣ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೀತಾರಾಮನಿಗೆ ಸಿಕ್ಕ ಬಾಲಿವುಡ್ ಭಾಗ್ಯ!

    ಸೀತಾರಾಮನಿಗೆ ಸಿಕ್ಕ ಬಾಲಿವುಡ್ ಭಾಗ್ಯ!

    ನಿಖಿಲ್ ಕುಮಾರಸ್ವಾಮಿ ಅಭಿನಯದ ಎರಡನೇ ಚಿತ್ರ ಸೀತಾರಾಮ ಕಲ್ಯಾಣ. ಮೊದಲ ಚಿತ್ರ ಜಾಗ್ವಾರ್ ಅನ್ನೇ ಮೀರಿಸುವಂತೆ ಈ ಚಿತ್ರ ಸದ್ದು ಮಾಡುತ್ತಿದೆ. ಅವ್ಯಾಹತವಾಗಿ ಚಿತ್ರೀಕರಣ ನಡೆಸಿಕೊಳ್ತಿರೋ ಈ ಚಿತ್ರಕ್ಕೀಗ ಮತ್ತೋರ್ವ ಅತಿಥಿಯ ಆಗಮನವಾಗಿದೆ!

    ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಭಾಗ್ಯಶ್ರೀ ಇದೀಗ ಸೀತಾರಾಮನಿಗೆ ಜೊತೆಯಾಗಿದ್ದಾರೆ. ಆಕೆ ನಿಖಿಲ್ ಅಮ್ಮನ ಪಾತ್ರಕ್ಕೆ ಜೀವ ತುಂಬಲಿದ್ದಾರಂತೆ.

    ಹಿಂದಿಯ ಮೈನೆ ಪ್ಯಾರ್ ಕಿಯಾ ಚಿತ್ರದ ಮೂಲಕವೇ ಪ್ರಸಿದ್ಧಿ ಪಡೆದಿದ್ದ ಭಾಗ್ಯ ನಾನಾ ಭಾಷೆಗಳ ಚಿತ್ರಗಳಲ್ಲಿಯೂ ಮಿಂಚಿದ್ದರು. ಈ ತಲೆಮಾರಿನ ಕನ್ನಡ ಪ್ರೇಕ್ಷಕರಿಗೆ ಅಷ್ಟಾಗಿ ಪರಿಚಯವಿಲ್ಲದ ಈಕೆ ಈಗ ಇಪ್ಪತ್ತು ವರ್ಷಗಳ ನಂತರ ಮರಳಿದ್ದಾರೆ. ಸೀತಾರಾಮ ಕಲ್ಯಾಣದಲ್ಲಿ ನಾಯಕನ ಫ್ಲ್ಯಾಶ್ ಬ್ಯಾಕ್ ಸೀನೊಂದಿದೆ. ಇಡೀ ಚಿತ್ರದಲ್ಲಿ ಬಹು ಮುಖ್ಯವಾದ ಇದರಲ್ಲಿ ಭಾಗ್ಯ ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಚಿತ್ರತಂಡ ಈ ಪಾತ್ರಕ್ಕೆ ಭಾಗ್ಯ ಅವರನ್ನೇ ಕರೆ ತರಬೇಕೆಂದು ನಿರ್ಧರಿಸಿ ಅದರಲ್ಲಿ ಯಶ ಕಂಡಿದೆ. ಭಾಗ್ಯ ಕೂಡಾ ಇಪ್ಪತ್ತು ವರ್ಷಗಳ ಹಿಂದೆ ತಾನು ನಾಯಕಿಯಾಗಿ ಮಿಂಚಿದ್ದ ಕನ್ನಡ ಚಿತ್ರ ರಂಗಕ್ಕೆ ಖುಷಿಯಿಂದಲೇ ಮರಳಿ ಬರಲು ಒಪ್ಪಿಕೊಂಡಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವರಾಜ್ ಕುಮಾರ್ ಚಿತ್ರಕ್ಕೆ ರಚಿತಾ ರಾಮ್ ನಾಯಕಿ?

    ಶಿವರಾಜ್ ಕುಮಾರ್ ಚಿತ್ರಕ್ಕೆ ರಚಿತಾ ರಾಮ್ ನಾಯಕಿ?

    ಅಯೋಗ್ಯ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ರಚಿತಾ ರಾಮ್ ಅವರಿಗೆ ಇನ್ನೊಂದಷ್ಟು ಒಳ್ಳೆಯ ಅವಕಾಶಗಳು ಹುಡುಕಿ ಬರಲಾರಂಭಿಸಿವೆ. ಅತ್ತ ಸೀತಾರಾಮ ಕಲ್ಯಾಣ, ಮತ್ತೊಂದೆಡೆ ರುಸ್ತುಂ ಚಿತ್ರದಲ್ಲಿನ ಪಾತ್ರದಲ್ಲಿ ತೊಡಗಿಸಿಕೊಂಡಿರೋ ರಚಿತಾ ಇದೀಗ ಶಿವಣ್ಣನ ಚಿತ್ರವೊಂದಕ್ಕೆ ನಾಯಕಿಯಾಗಿದ್ದಾರೆ.

    ಶಿವರಾಜ್ ಕುಮಾರ್ ಈಗ ಸಣ್ಣ ವಿರಾಮವೂ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ. ರುಸ್ತುಂ, ದ್ರೋಣ ಸೇರಿದಂತೆ ಅವರ ಕೈಲಿರೋ ಚಿತ್ರಗಳ ಪಟ್ಟಿ ದೊಡ್ಡದಿದೆ. ಅದಾಗಲೇ ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ದ್ವಾರಕೀಶ್ ಚಿತ್ರ ಬ್ಯಾನರಿನಡಿಯಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರವನ್ನು ಪಿ ವಾಸು ನಿರ್ದೇಶನ ಮಾಡಲಿದ್ದಾರೆ.

    ಈ ಚಿತ್ರಕ್ಕೆ ಇದೀಗ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಶಿವಣ್ಣನ ಜೊತೆ ನಟಿಸಲು ಥ್ರಿಲ್ ಆಗಿಯೇ ಒಪ್ಪಿಕೊಂಡಿರೋ ರಚಿತಾ ಈ ಬಗ್ಗೆ ಹೊರ ಬೀಳಲಿರೋ ಅಧಿಕೃತ ಸುದ್ದಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ಈ ಚಿತ್ರ ಈ ವರ್ಷವೇ ಆರಂಭವಾಗೋದಿಲ್ಲ. ಶಿವರಾಜ್ ಕುಮಾರ್ ಈಗ ಒಪ್ಪಿಕೊಂಡಿರೋ ಚಿತ್ರಗಳನ್ನು ಮುಗಿಸಿಕೊಂಡ ನಂತರ ಹೊಸ ವರ್ಷದ ಆರಂಭದಲ್ಲಿಯೇ ಇನ್ನೂ ಹೆಸರಿಡದ ಈ ಚಿತ್ರ ಚಿತ್ರೀಕರಣ ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv