Tag: ಸಿ.ಸಿ.ಪಾಟೀಲ್

  • ಘೋಷಣೆಗಷ್ಟೇ ಸೀಮಿತವಾಗಿದ್ದ ಮುಖ್ಯಮಂತ್ರಿ ಪದಕ ಶೀಘ್ರದಲ್ಲೇ ಅರಣ್ಯ ಸಿಬ್ಬಂದಿಗೆ ವಿತರಣೆ

    ಘೋಷಣೆಗಷ್ಟೇ ಸೀಮಿತವಾಗಿದ್ದ ಮುಖ್ಯಮಂತ್ರಿ ಪದಕ ಶೀಘ್ರದಲ್ಲೇ ಅರಣ್ಯ ಸಿಬ್ಬಂದಿಗೆ ವಿತರಣೆ

    – ಅರಣ್ಯ ಸಚಿವ ಸಿಸಿ ಪಾಟೀಲ್ ಭರವಸೆ

    ಬೆಂಗಳೂರು: ಅರಣ್ಯ ಇಲಾಖೆಗೆ ಮುಖ್ಯಮಂತ್ರಿ ಪದಕ ಪಡೆಯುವ ಕಾಲ ಕೂಡಿ ಬಂದಂತಿದೆ. ವಿತರಣೆಯಾಗದೇ ಇರುವ ಮುಖ್ಯಮಂತ್ರಿ ಪದಕವನ್ನು ಕೊಡಿಸುವುದಾಗಿ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ.

    ಪೊಲೀಸ್ ಇಲಾಖೆ ಮಾದರಿಯಲ್ಲಿ ಅರಣ್ಯ ಇಲಾಖೆಯಲ್ಲೂ ವಿಶೇಷ ಸೇವೆ ಸಲ್ಲಿಸಿದವರಿಗೆ ಮುಖ್ಯಮಂತ್ರಿ ಹೆಸರಿನಲ್ಲಿ ಪದಕ ನೀಡಲು ಇಲಾಖೆ ಮುಂದಾಗಿತ್ತು. 2017ರಲ್ಲಿ ಅರಣ್ಯ ಇಲಾಖೆ ವಿಶೇಷ ಸೇವೆ ಸಲ್ಲಿಸಿದವರ ಹೆಸರು ಸಿದ್ಧಪಡಿಸಿತ್ತು. ಆದರೆ ಈವರೆಗೂ ಒಂದು ಬಾರಿಯೂ ಪದಕ ವಿತರಣೆ ಆಗಿಲ್ಲ. ಘೋಷಣೆಗೆ ಅಷ್ಟೇ ಮುಖ್ಯಮಂತ್ರಿ ಪದಕ ಸೀಮಿತವಾಗಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಬೇಸರ ವ್ಯಕ್ತಪಡಿಸ್ತಾ ಇದ್ದರು. ಈಗ ಸಚಿವರ ಭರವಸೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಖುಷಿ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ ಮಾರಪ್ಪ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮುಂದಿನ ಪೀಳಿಗೆಗಾಗಿ ಅರಣ್ಯವನ್ನು ಉಳಿಸಲು ಅವಿರತ ಶ್ರಮಿಸುತ್ತಿರುವವರಿಗೆ ಕಾನೂನು ಮೂಲಕ ಎಲ್ಲಾ ರೀತಿಯ ರಕ್ಷಣೆ ನೀಡಲಾಗುವುದು. ಅರಣ್ಯ ಇಲಾಖೆಯಲ್ಲಿ ಯಾವುದೇ ಸಾಧನೆ ಮಾಡಿದರೂ ಅದು ಹಿರಿಯರಿಗೆ ಸಲ್ಲುತ್ತದೆ. ಅದರ ಹಿಂದೆ ನಿಜವಾಗಿ ಕೆಲಸ ಮಾಡುವುದು ಕೆಳ ಹಂತದ ಸಿಬ್ಬಂದಿ. ಪ್ರಾಣದ ಹಂಗು ತೊರೆದು ಕಾಡನ್ನು ಕಾಪಾಡುತ್ತಾರೆ. ಇಂಥವರನ್ನು ಗುರುತಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

    ಚಾಮರಾಜನಗರದಲ್ಲಿ ನರಭಕ್ಷಕ ಹಲಿ ಸೆರೆ ಸಿಕ್ಕಾಗ ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಿತ್ತು. ಆದರೆ ನಾನೇನೂ ಮಾಡಿರಲಿಲ್ಲ. ಆ ಸಾಧನೆ ಸಲ್ಲಬೇಕಿದ್ದದ್ದು ಕೆಳ ಹಂತದ ಸಿಬ್ಬಂದಿಗೆ ಎಂದು ಸಚಿವರು ಹೇಳಿದರು. ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡುವ ಕುರಿತು ಸದ್ಯದಲ್ಲೇ ಸಿಎಂ ಯಡಿಯೂರಪ್ಪ ಅವರ ಜೊತೆ ಮಾತನಾಡುತ್ತೇನೆ. ಶೀಘ್ರದಲ್ಲೇ ಪದಕ ವಿತರಣೆ ಕಾರ್ಯಕ್ರಮಕ್ಕೆ ಸಮಯ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದರು.

  • ಅಕ್ರಮ ಮರಳುಗಾರಿಕೆಗೆ ಎಸ್.ಪಿ, ಡಿ.ಸಿಗಳೇ ಹೊಣೆ: ಸಚಿವ ಸಿಸಿ ಪಾಟೀಲ್

    ಅಕ್ರಮ ಮರಳುಗಾರಿಕೆಗೆ ಎಸ್.ಪಿ, ಡಿ.ಸಿಗಳೇ ಹೊಣೆ: ಸಚಿವ ಸಿಸಿ ಪಾಟೀಲ್

    ರಾಯಚೂರು: ರಾಜ್ಯದಲ್ಲಿ ಮರಳಿನ ಸಮಸ್ಯೆ ಕಾಡುತ್ತಿದೆ. ಎಲ್ಲರಿಗೂ ಮರಳು ಸಿಗುವಂತೆ ಮರಳು ನೀತಿ ಜಾರಿಗೆ ತರಲಾಗುವುದು ಅಂತ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ವೇಳೆ ಮಾತನಾಡಿದ ಸಿಸಿ ಪಾಟೀಲ್, ಗಣಿ ಇಲಾಖೆಗೆ ಮರಳಿನ ಸಮಸ್ಯೆ ಕಾಡುತ್ತಿದೆ. ಅಕ್ರಮ ಮರಳುಗಾರಿಕೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಯತ್ನಿಸುತ್ತಿದ್ದು, ಇದಕ್ಕೆ ಇಲ್ಲಿನ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಅಕ್ರಮ ತಡೆಗೆ ವಿಶೇಷ ತಂಡ ರಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಮರಳುಗಾರಿಕೆ ಬಗ್ಗೆ ಅಧ್ಯಯನಕ್ಕೆ ಅಧಿಕಾರಿಗಳ ತಂಡವನ್ನ ತೆಲಂಗಾಣಕ್ಕೆ ಕಳುಹಿಸಲಾಗುವುದು ಎಂದರು.

    ಮಾನ್ವಿಯಲ್ಲಿ ಮರಳು ಲಾರಿ ತಡೆಯಲು ಹೋದ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಸಾವು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಜಿಲ್ಲಾಧಿಕಾರಿಯಿಂದ ಹೆಚ್ಚಿನ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇನೆ. ಹಟ್ಟಿ ಚಿನ್ನದ ಗಣಿ ಹಾಗು ರಾಯಚೂರಿನಲ್ಲಿನ ಮರಳುಗಾರಿಕೆ ಬಗ್ಗೆ ಪ್ರವಾಸ ಮಾಡಲಿದ್ದೇನೆ ಅಂತ ತಿಳಿಸಿದರು.

    ಇನ್ನೂ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಮುಖ್ಯಮಂತ್ರಿಗಳು ಹಾಗು ಕೋರ್ ಕಮಿಟಿ ನಿರ್ಧಾರ ಕೈಗೊಳ್ಳುತ್ತೆ. ಸಂಪುಟ ವಿಸ್ತರಣೆ ಬಗ್ಗೆ ನಾನು ಮಾತನಾಡುವುದಿಲ್ಲ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಅಂತ ಕೈ ಮುಗಿದರು.

  • ತಮ್ಮ ಕ್ಷೇತ್ರದ ರೈತರೇ ಮಹದಾಯಿಗಾಗಿ ಹೋರಾಟ ಮಾಡ್ತಿದ್ರೂ ಪ್ರತಿಕ್ರಿಯಿಸದ ಸಚಿವ ಸಿ.ಸಿ.ಪಾಟೀಲ್

    ತಮ್ಮ ಕ್ಷೇತ್ರದ ರೈತರೇ ಮಹದಾಯಿಗಾಗಿ ಹೋರಾಟ ಮಾಡ್ತಿದ್ರೂ ಪ್ರತಿಕ್ರಿಯಿಸದ ಸಚಿವ ಸಿ.ಸಿ.ಪಾಟೀಲ್

    ಧಾರವಾಡ: ಮಹದಾಯಿ ವಿಚಾರವಾಗಿ ಬೆಂಗಳೂರಿನಲ್ಲಿ ರೈತರು ಹೋರಾಟ ಮಾಡುತ್ತಿರುವ ವಿಚಾರವಾಗಿ ಮಾತನಾಡಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ನಿರಾಕರಿಸಿದ್ದಾರೆ.

    ಧಾರವಾಡದಲ್ಲಿ ಮಾಧ್ಯಮದವರು ಪ್ರತಿಕ್ರಿಯೆ ಕೇಳುತ್ತಿದ್ದಂತೆ ಸಚಿವ ಸಿ.ಸಿ. ಪಾಟೀಲ್ ಪಲಾಯನಗೈದಿದ್ದಾರೆ. ತಾವೇ ಪ್ರತಿನಿಧಿಸುವ ನರಗುಂದ ಕ್ಷೇತ್ರದ ರೈತರು ಬೆಂಗಳೂರಿನಲ್ಲಿ ಹೋರಾಟ ಮಾಡುತ್ತಿದ್ದರೂ ನೊ ಕಮೆಂಟ್ ಎಂದಿದ್ದಾರೆ. ಕಳಸಾ-ಬಂಡೂರಿಗೆ ಈಗ ಯಾರೂ ಹೋರಾಟ ಮಾಡುತ್ತಿದ್ದಾರೋ, ಅವರಿಗಿಂತ ಮೊದಲೇ ಹೋರಾಟ ಮಾಡಿದವನು ನಾನು ಎಂದಷ್ಟೇ ತಿಳಿಸಿದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಣ್ಯಪುರುಷ, ಸಾವರ್ಕರ್ ಬಗ್ಗೆ ಸ್ವಲ್ಪ ಅಧ್ಯಯನ ಮಾಡುವುದು ಒಳಿತು. ಅವರು ಕೇವಲ ಸ್ವತಂತ್ರ್ಯ ಪ್ರೇಮಿಗಳನ್ನು ಹೀಯಾಳಿಸುವುದು ರೂಢಿ ಮಾಡಿಕೊಂಡಿದ್ದಾರೆ. ಕರಿನೀರ ಕಾಳಾಪಾನಿ ಶಿಕ್ಷೆ(ಸೆಲ್ಯೂಲಾರ್ ಜೈಲು) ಏನು ಎನ್ನುವುದನ್ನು ಸ್ವತಃ ವಕೀಲರಾಗಿರುವ ಸಿದ್ದರಾಮಯ್ಯ ನೋಡಿಕೊಂಡು ಬರಲಿ. ತಮ್ಮ ಹೇಳಿಕೆಗೆ ಸಿದ್ದರಾಮಯ್ಯ ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ಹೇಳಿದರು.

    ಇನ್ನು ನಾಗಮಂಗಲ ಶಾಸಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿ ಸಿ ಪಾಟೀಲ, ಅವರು ಜ್ಯೋತಿಷ್ಯ ಹೇಳ್ತಾರೇನು, ಬಿಜೆಪಿ ಗೆಲ್ಲೋದಿಲ್ಲ ಅನ್ನೋದು ಹೇಳೋಕೆ ಅವರು ಜ್ಯೋತಿಷಿ ಅಲ್ಲ ಎಂದರು. ಇನ್ನು ಬಿಜೆಪಿ ಉಪಚುನಾವಣೆಯಲ್ಲಿ ಎಲ್ಲ ಕಡೆ ಗೆಲ್ಲುತ್ತೆ ಎಂದ ಅವರು, ನಾವಾಗಿಯೇ ಯಾರನ್ನೂ ಪಕ್ಷಕ್ಕೆ ಸೆಳೆಯುತ್ತಿಲ್ಲ, ಬಿಜೆಪಿ ತತ್ವ ಸಿದ್ಧಾಂತ ನಂಬಿಕೊಂಡು ಬರುವವರಿಗೆ ಸದಾ ಪಕ್ಷಕ್ಕೆ ಸ್ವಾಗತ ಇದೆ ಎಂದರು.

  • ಕೇಂದ್ರದಿಂದ ಪರಿಹಾರ ಹಣ ಯಾವಾಗ ಬರುತ್ತೆ – ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ಸಿ.ಸಿ.ಪಾಟೀಲ್

    ಕೇಂದ್ರದಿಂದ ಪರಿಹಾರ ಹಣ ಯಾವಾಗ ಬರುತ್ತೆ – ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ಸಿ.ಸಿ.ಪಾಟೀಲ್

    ಬಳ್ಳಾರಿ: ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರದ ನೆರವಿನ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಗಣಿ ಸಚಿವ ಸಿ.ಸಿ.ಪಾಟೀಲ್ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಬಳ್ಳಾರಿಯಲ್ಲಿ ಈ ಕುರಿತು ಮಾಧ್ಯಮದವರು ಪ್ರಶ್ನಿಸಿದ್ದಾರೆ. ಇದಕ್ಕೆ ಕೆಂಡಾಮಂಡಲವಾಗಿರುವ ಅವರು, ನಾವು ಪರಿಹಾರ ಹಂಚಿಕೆ ಮಾಡುತ್ತಿದ್ದೇವೆ. ಪ್ರವಾಹ ಪೀಡಿತರಿಗೆ ನಮ್ಮ ಸರ್ಕಾರದಿಂದ ಶೀಘ್ರದಲ್ಲೇ ಎಲ್ಲ ಪರಿಹಾರವನ್ನು ಹಂಚಿಕೆ ಮಾಡಲಾಗುವುದು. ಕೇಂದ್ರ ಸರ್ಕಾರದ ನೆರವು ಅಗತ್ಯವಿದೆ. ಆದರೆ ಸದ್ಯಕ್ಕೆ ನಮ್ಮ ಬಳಿ ಇರುವ ಹಣ ವಿತರಣೆ ಮಾಡುತ್ತಿದ್ದೇವೆ ಎಂದರು.

    ಈ ವೇಳೆ ಸಂಸದ ತೇಜಸ್ವಿ ಸೂರ್ಯ ಕೇಂದ್ರದ ನೆರವಿನ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಎಂದು ಕೇಳಿದ್ದಕ್ಕೆ, ಮಾಧ್ಯಮಗಳಿಗೆ ಕೈಮುಗಿದು, ಲೋಗೋ ತಳ್ಳಿ ಹೊರ ಹೋದರು. ನಂತರ ಮರಳಿ ಹೇಳಿಕೆ ನೀಡಿದ ಸಚಿವ ಸಿಸಿ ಪಾಟೀಲ್, ಪ್ರವಾಹ ಪೀಡಿತ ಸಂತ್ರಸ್ತರು ಯಡಿಯೂರಪ್ಪ ಸರ್ಕಾರ ಇಲ್ಲದಿದ್ದರೆ ನಮ್ಮ ಬಾಳು ನಾಯಿ ಪಾಡು ಆಗುತಿತ್ತು ಎಂದು ಹೊಗಳುತ್ತಿದ್ದಾರೆ. ನಮ್ಮ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.

    ಮರಳು ಗಣಿಗಾರಿಕೆ ಇರಬೇಕು. ಅಕ್ರಮ ಮರಳು ಗಣಿಗಾರಿಕೆ ಇರಬಾರದು. ಮರಳು ಜನ ಸಾಮಾನ್ಯರಿಗೆ ಸಿಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸುವಂತೆ ಸೂಚಿಸಿದ್ದೇನೆ. ಎನ್ ಎಂಡಿಸಿಗೆ ಗಣಿ ಹಂಚಿಕೆ ಬಗ್ಗೆ ಶೀಘ್ರದಲ್ಲೇ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಸಿಸಿ ಪಾಟೀಲ್ ತಿಳಿಸಿದರು.