– ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಒಟ್ಟಿಗೆ ಇರುವ ಫೋಟೊ ಶೇರ್ ಮಾಡಿ ಬಣ್ಣನೆ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu), ನೂತನ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ (C.P.Radhakrishnan), ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಒಟ್ಟಿಗೆ ಕುಳಿತಿರುವ ಫೋಟೊವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (B.L.Santhosh) ಹಂಚಿಕೊಂಡಿದ್ದಾರೆ. ಇವರ‍್ಯಾರೂ ರಾಜವಂಶಸ್ಥರಲ್ಲ, ಸ್ವಂತ ಪರಿಶ್ರಮದಿಂದ ಮೇಲೆ ಬಂದವರು ಎಂದು ಬಣ್ಣಿಸಿದ್ದಾರೆ.
ಇವರಿಗೆ ತಮ್ಮ ಹಕ್ಕುಗಳ ಪ್ರಜ್ಞೆಯೂ ಇಲ್ಲ. ಮೂವರೂ ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಹಿಂದುಳಿದ ಸಮುದಾಯದಿಂದ ಬಂದವರು. ಜೀವನದ ಪ್ರತಿಯೊಂದು ಹಂತದಲ್ಲೂ ಮೆಟ್ಟಿಲುಗಳನ್ನು ಏರಿ ಬಂದಿದ್ದಾರೆ. ಅದು ಭಾರತದ ಪ್ರಜಾಪ್ರಭುತ್ವ ಮತ್ತು ನಾಗರಿಕತೆಯ ಶಕ್ತಿ ಎಂದು ಬಿಎಲ್ ಸಂತೋಷ್ ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಪ್ರಮಾಣ ಸ್ವೀಕಾರ
• Not dynast nor with sense of entitlement
• All three self made
• From humble backgrounds
• Climbed steps in every phase of life , didn’t use lifts
That’s the strength of Bharath’s Democracy & Civilisation . @rashtrapatibhvn@narendramodi@CPRGuvpic.twitter.com/1IRz4wevTn
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಚಿಕ್ಕ ವಯಸ್ಸಿನಲ್ಲಿ ಟೀ ಮಾರುತ್ತಿದ್ದ ವ್ಯಕ್ತಿ ಈಗ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕರ್ತನಾಗಿ, ರಾಜಕೀಯ ನಾಯಕನಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದವರು. ತುರ್ತು ಪರಿಸ್ಥಿತಿ ಸೇರಿ ಆಗಿನ ಕೇಂದ್ರ ಸರ್ಕಾರದ ಹಲವಾರು ಕ್ರಮಗಳ ವಿರುದ್ಧದ ಹೋರಾಟಗಳಲ್ಲೂ ಭಾಗಿಯಾಗಿದ್ದರು. ಸತತ ಮೂರು ಅವಧಿಗೆ ಪ್ರಧಾನಿಯಾಗಿ ದಾಖಲೆ ಕೂಡ ಬರೆದಿದ್ದಾರೆ.
ದ್ರೌಪದಿ ಮುರ್ಮು ಅವರು ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಸಾಮಾನ್ಯ ಕುಟುಂಬದಿಂದ ಬಂದ ಅವರು ಈಗ ರಾಷ್ಟ್ರಪತಿಯಾಗಿದ್ದಾರೆ. ಇವರು ಸಹ ಬಿಜೆಪಿಯ ಹಲವಾರು ಹುದ್ದೆಗಳನ್ನು ಕಾರ್ಯನಿರ್ವಹಿಸಿದ್ದಾರೆ.
ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಸಿ.ಪಿ.ರಾಧಾಕೃಷ್ಣನ್ ಅವರು ದೊಡ್ಡ ಕೌಟುಂಬಿಕ ಹಿನ್ನೆಲೆಯಿಂದ ಬಂದವರಲ್ಲ. ಚಿಕ್ಕ ವಯಸ್ಸಿನಲ್ಲೇ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡರು. ನಂತರ ಬಿಜೆಪಿ ಸೇರಿ ತಮಿಳುನಾಡಿನಲ್ಲಿ ತಳಮಟ್ಟದಲ್ಲಿ ವ್ಯಾಪಕ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಇಂದು ಪ್ರಮಾಣವಚನ ಸ್ವೀಕಾರ
– ರಾಜೀನಾಮೆ ಬಳಿಕ ಫಸ್ಟ್ ಟೈಮ್ ಕಾಣಿಸಿಕೊಂಡ ಜಗದೀಪ್ ಧನಕರ್
ನವದೆಹಲಿ: ದೇಶದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ (CP Radhakrishan) ಅವರಿಂದು ಗಣ್ಯರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಗಮಿತ ರಾಜ್ಯಪಾಲರಾದ ಜಗದೀಪ್ ಧನ್ಕರ್ ಸೇರಿದಂತೆ ನೂರಾರು ಗಣ್ಯರ ಸಮ್ಮುಖದಲ್ಲಿ ಇಂದು ಬೆಳಗ್ಗೆ 10ಗಂಟೆ ಸುಮಾರು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಿದರು.ಇದನ್ನೂ ಓದಿ:ದೇಶದ ನೂತನ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಯಾರು? ಹಿನ್ನೆಲೆ ಏನು?
ರಾಜೀನಾಮೆ ಬಳಿಕ ಕಾಣಿಸಿಕೊಂಡ ಧನಕರ್
ಇನ್ನೂ ಪ್ರಮಾಣವಚನ ಕಾರ‍್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ, ರಾಜೀನಾಮೆ ನೀಡಿದ ಉಪರಾಷ್ಟ್ರಪತಿ ಹಾಗೂ ಪ್ರಸ್ತುತ ಉಪರಾಷ್ಟ್ರಪತಿಗಳು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜಗದೀಪ್ ಧನಕರ್ ರಾಜೀನಾಮೆ ಬಳಿಕ ಮೊದಲ ಬಾರಿ ಕಾರ‍್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಹಲವರ ಅಚ್ಚರಿಗೆ ಕಾರಣವಾಗಿದೆ.
📡LIVE NOW📡
Prime Minister @narendramodi attends the oath ceremony of Vice President-Elect Thiru CP Radhakrishnan
ಇದರೊಂದಿಗೆ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ, ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಜಾರ್ಖಂಡ್ ರಾಜ್ಯಪಾಲ ಸಂತೋಷ್ ಗಂಗ್ವಾರ್ ಮತ್ತು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸಿ.ಪಿ ರಾಧಾಕೃಷ್ಣನ್ ಗೆಲುವು ಸಾಧಿಸಿದ್ದರು. ರಾಧಾಕೃಷ್ಣನ್ ಅವರು 452 ಮೊದಲ ಪ್ರಾಶಸ್ತ್ಯದ ಮತಗಳನ್ನ ಪಡೆದು ಗೆಲುವು ಸಾಧಿಸಿದ್ರೆ, ಪ್ರತಿಸ್ಪರ್ಧಿ ಸುರ್ದಶನ್ ರೆಡ್ಡಿ 300 ಮತಗಳನ್ನು ಪಡೆದು ಪರಾಭವಗೊಂಡಿದ್ದರು.ಇದನ್ನೂ ಓದಿ: ನೂತನ ಉಪ ರಾಷ್ಟ್ರಪತಿಯಾಗಿ ಸಿ.ಪಿ ರಾಧಕೃಷ್ಣನ್ ಆಯ್ಕೆ
ನವದೆಹಲಿ: ಸಿ.ಪಿ ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಸಿ.ಪಿ ರಾಧಾಕೃಷ್ಣನ್ (CP Radhakrishnan) 452 ಮತಗಳನ್ನು ಪಡೆದಿದ್ದರೆ, ಎದುರಾಳಿ ನಿವೃತ್ತ ನ್ಯಾ. ಬಿ. ಸುದರ್ಶನ್ ರೆಡ್ಡಿ (B SudershanReddy) ಅವರು 300 ಮತಗಳನ್ನ ಪಡೆದು ಪರಾಭವಗೊಂಡರು.
ನೂತನ ಉಪರಾಷ್ಟ್ರಪತಿಯಾದ ರಾಧಾಕೃಷ್ಣನ್ ಅವರಿಗೆ ಪ್ರಧಾನಿ ಮೋದಿ ಸೇರಿದಂತೆ ಎನ್‌ಡಿಎ ಒಕ್ಕೂಟದ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ ರಾಧಾಕೃಷ್ಣನ್ ಯಾರು, ಹಿನ್ನೆಲೆ ಏನೂ ಅಂತ ನೋಡೋದಾದ್ರೆ…
* 1957ರಲ್ಲಿ ತಮಿಳುನಾಡಿನ ಕೊಂಗು ಪ್ರದೇಶದ ತಿರುಪ್ಪೂರಿನಲ್ಲಿ ಜನಿಸಿದ ಸಿ.ಪಿ ರಾಧಾಕೃಷ್ಣನ್ (ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್ ), ಕಳೆದ ವರ್ಷ ಜುಲೈನಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
* 68 ವರ್ಷ ವಯಸ್ಸಿನ ಅವರು ಈ ಹಿಂದೆ ಫೆಬ್ರವರಿ 2023 ರಿಂದ ಜುಲೈ 2024ರ ವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಮಾರ್ಚ್ ಮತ್ತು ಜುಲೈ 2024 ರ ನಡುವೆ ಅವರು ತೆಲಂಗಾಣ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದರು.
* 2023 ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನೇಮಕಗೊಂಡ ಮೊದಲ ನಾಲ್ಕು ತಿಂಗಳೊಳಗೆ, ರಾಧಾಕೃಷ್ಣನ್ ಅವರು ರಾಜ್ಯದ ಎಲ್ಲಾ 24 ಜಿಲ್ಲೆಗಳಿಗೆ ಪ್ರಯಾಣಿಸಿ ನಾಗರಿಕರು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದರು.
* 17ನೇ ವಯಸ್ಸಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸೇರಿದ ಅವರು, ಭಾರತೀಯ ಜನ ಸಂಘದೊಂದಿಗೂ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದರು. 1998 ಮತ್ತು 1999 ರಲ್ಲಿ ಎರಡು ಬಾರಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
* ತಮಿಳುನಾಡು ಬಿಜೆಪಿ ಮುಖ್ಯಸ್ಥರಾಗಿದ್ದಾಗ (2004-2007) ಅವರು 93 ದಿನಗಳ ಕಾಲ 19 ಸಾವಿರ ಕಿಮೀ ‘ರಥ ಯಾತ್ರೆ’ಯನ್ನು ಕೈಗೊಂಡಿದ್ದರು. ಭಾರತದ ಎಲ್ಲಾ ನದಿಗಳ ಜೋಡಣೆ, ಭಯೋತ್ಪಾದನೆ ನಿರ್ಮೂಲನೆ, ಏಕರೂಪ ನಾಗರಿಕ ಸಂಹಿತೆ ಜಾರಿ, ಅಸ್ಪೃಶ್ಯತೆಯನ್ನು ಹೋಗಲಾಡಿಸುವುದು ಮತ್ತು ಮಾದಕ ದ್ರವ್ಯಗಳ ಪಿಡುಗನ್ನು ಎದುರಿಸುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಯಾತ್ರೆಯನ್ನು ಆಯೋಜಿಸಲಾಗಿತ್ತು. ಅವರು ವಿಭಿನ್ನ ಕಾರಣಗಳಿಗಾಗಿ ಇನ್ನೂ ಎರಡು ಪಾದಯಾತ್ರೆಗಳನ್ನು ಕೈಗೊಂಡಿದ್ದರು.
* ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ರಾಧಾಕೃಷ್ಣನ್ ಅವರು ತಮಿಳುನಾಡಿನ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಗೌರವಾನ್ವಿತ ಹೆಸರನ್ನು ಹೊಂದಿದ್ದಾರೆ.
* 1957 ರಲ್ಲಿ ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ ಅವರು ಕೊಯಮತ್ತೂರಿನ ಚಿದಂಬರಂ ಕಾಲೇಜಿನಿಂದ ಬಿಬಿಎ ಪದವಿ ಪಡೆದಿದ್ದಾರೆ. ಒಬ್ಬ ಉತ್ಸಾಹಿ ಕ್ರೀಡಾಪಟುವಾಗಿರುವ ಇವರು ಟೇಬಲ್ ಟೆನ್ನಿಸ್‌ನಲ್ಲಿ ಕಾಲೇಜು ಚಾಂಪಿಯನ್ ಆಗಿದ್ದರು. ಅಷ್ಟೇ ಅಲ್ಲದೇ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರು.
* ಸಂಸದರಾಗಿದ್ದಾಗ ಅವರು ಜವಳಿ ಸ್ಥಾಯಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಹಣಕಾಸು ಮತ್ತು ಸಾರ್ವಜನಿಕ ಉದ್ಯಮಗಳಿಗೆ ಸಂಬಂಧಿಸಿದ ಹಲವಾರು ಸಮಿತಿಗಳಿಗೆ ಕೊಡುಗೆ ನೀಡಿದ್ದಾರೆ.
* ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (2004) ಸಂಸದೀಯ ನಿಯೋಗದ ಭಾಗವಾಗಿದ್ದರು ಮತ್ತು ತೈವಾನ್‌ಗೆ ತೆರಳಿದ್ದ ಮೊದಲ ಭಾರತೀಯ ನಿಯೋಗದ ಭಾಗವಾಗಿದ್ದರು.
* ರಾಧಾಕೃಷ್ಣನ್ ಸಾರ್ವಜನಿಕ ಆಡಳಿತದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತೆಂಗಿನ ನಾರು ಮಂಡಳಿಯ ಅಧ್ಯಕ್ಷರಾಗಿದ್ದಾಗ (2016–2020) ಬೋರ್ಡ್ ದಾಖಲೆಯ 2,532 ಕೋಟಿ ರೂ. ಮೌಲ್ಯದ ವಸ್ತುಗಳನ್ನು ರಫ್ತು ಮಾಡಿತ್ತು. ಕೇರಳದ ಬಿಜೆಪಿಯ ಅಖಿಲ ಭಾರತ ಉಸ್ತುವಾರಿಯಾಗಿ (2020–2022) ಕೆಲಸ ಮಾಡಿದ್ದಾರೆ.
* ರಾಜಕೀಯ ಮತ್ತು ಆಡಳಿತದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಸಿ.ಪಿ. ರಾಧಾಕೃಷ್ಣನ್ ಅವರನ್ನು ತಮಿಳುನಾಡಿನ ರಾಜಕೀಯ ಮತ್ತು ಬಿಜೆಪಿಯ ಸಂಘಟನೆಯ ಅನುಭವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಮೋದಿಯಿಂದ ಮೊದಲ ಮತ
ಉಪರಾಷ್ಟ್ರಪತಿ ಆಯ್ಕೆಗೆ ಇಂದು ಬೆಳಗ್ಗೆ 10 ಗಂಟೆ ಸಂಜೆ 5 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಮೊದಲ ಚಲಾಯಿಸಿದ್ದರು. ಬಳಿಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಮಿತ್ ಶಾ ಸೇರಿದಂತೆ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು. ಇದನ್ನೂ ಓದಿ: ನೂತನ ಉಪ ರಾಷ್ಟ್ರಪತಿಯಾಗಿ ಸಿ.ಪಿ ರಾಧಕೃಷ್ಣನ್ ಆಯ್ಕೆ
15 ಮತಗಳು ಅಮಾನ್ಯ
ಸಂಸತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸೇರಿದಂತೆ ಒಟ್ಟು 788 ಸಂಸದರಿದ್ದಾರೆ. ಪ್ರಸ್ತುತ ಎರಡೂ ಸದನಗಳಲ್ಲಿ 7 ಸ್ಥಾನಗಳು ಖಾಲಿ ಇರುವ ಕಾರಣ ಒಟ್ಟು 781 ಸಂಸದರು ಮತ ಚಲಾಯಿಸಬೇಕಾಗಿತ್ತು. ಆದ್ರೆ ಇದರಲ್ಲಿ ಬಿಆರ್‌ಎಸ್‌ನ 4, ಬಿಜೆಡಿಯ 7, ಅಕಾಲಿ ದಳದ 3 ಮತ್ತು 1 ಸ್ವತಂತ್ರ ಸಂಸದರು ಮತದಾನದಿಂದ ದೂರ ಉಳಿದಿದ್ದರು. ಹೀಗಾಗಿ ಒಟ್ಟು 767 ಸಂಸದರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು. ಇದರಲ್ಲಿ 15 ಮತಗಳನ್ನು ಅಮಾನ್ಯವೆಂದು ಘೋಷಿಸಲಾಯಿತು. 752 ಮತಗಳನ್ನು ಮಾತ್ರವೇ ಮಾನ್ಯ ಮಾಡಿ ಮತ ಎಣಿಕೆಗೆ ಪರಿಗಣಿಸಲಾಯಿತು. ಇದನ್ನೂ ಓದಿ: ಈ ಜನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿಬಿಡಿ, ನಾವೇ ಹಾರ ಹಾಕಿ ಕಳುಹಿಸ್ತೇವೆ: ಶೋಭಾ ಕರಂದ್ಲಾಜೆ
25 ಸಂಸದರಿಂದ ಅಡ್ಡ ಮತದಾನ
17ನೇ ಉಪರಾಷ್ಟ್ರಪತಿ ಹುದ್ದೆಯಲ್ಲಿ ಗೆಲುವು ಸಾಧಿಸಿರುವ ಸಿ.ಪಿ ರಾಧಾಕೃಷ್ಣನ್, ಒಟ್ಟು 452 ಮೊದಲ ಪ್ರಾಶಸ್ತ್ಯದ ಮತಗಳನ್ನ ಪಡೆದು ಗೆಲುವು ಸಾಧಿಸಿದ್ರೆ, 300 ಮತಗಳನ್ನು ಪಡೆದಿರುವ ಸುದರ್ಶನ್ ರೆಡ್ಡಿ ಪರಾಭಗೊಂಡಿದ್ದಾರೆ. ಎನ್‌ಡಿಎ ಅಭ್ಯರ್ಥಿಗಳ ಸ್ವಂತ ಸಂಸದರನ್ನು ಹೊರತುಪಡಿಸಿ ಇನ್ನೂ 14 ಸಂಸದರು ಅಡ್ಡಮತದಾನ ನಡೆಸಿದ್ದಾರೆ. ಅಲ್ಲದೇ ಎನ್‌ಡಿಎ ಬಲಕ್ಕಿಂತ 25 ಮತಗಳು ಹೆಚ್ಚಾಗಿ ರಾಧಾಕೃಷ್ಣನ್‌ಗೆ ಬಂದಿವೆ. ಇದನ್ನೂ ಓದಿ: ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ಮೋದಿ ಭೇಟಿ – ವೈಮಾನಿಕ ಸಮೀಕ್ಷೆ, ಪರಿಸ್ಥಿತಿ ಅವಲೋಕನ
ನವದೆಹಲಿ: ಜಗದೀಪ್ ಧನ್ಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ (Vice President) ಸ್ಥಾನಕ್ಕೆ ಇಂದು (ಸೆ.9) ಚುನಾವಣೆ ನಡೆಯಲಿದೆ. ಆಡಳಿತ-ವಿರೋಧ ಪಕ್ಷದ ನಡುವೆ ಪ್ರತಿಷ್ಠೆಯ ಕಣವಾಗಿದ್ದು, ಎನ್‌ಡಿಎ (NDA) ಅಭ್ಯರ್ಥಿ ಮಹಾರಾಷ್ಟ್ರದ ಹಾಲಿ ರಾಜ್ಯಪಾಲರಾಗಿರುವ ಸಿ.ಪಿ.ರಾಧಾಕೃಷ್ಣನ್, ಇಂಡಿ ಅಭ್ಯರ್ಥಿ ಮತ್ತು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.
ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಲಿದ್ದಾರೆ. ಸಂಜೆ ನಂತರ ಫಲಿತಾಂಶ ಪ್ರಕಟಗೊಳ್ಳಲಿದೆ. ಬಹುತೇಕ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವು ಸ್ಪಷ್ಟವಾಗಿದೆ.ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ | ಮೋದಿ ಸಮ್ಮುಖದಲ್ಲಿ NDA ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ನಾಮಪತ್ರ ಸಲ್ಲಿಕೆ
ಈ ಮಧ್ಯೆ ಬಿಆರ್‌ಎಸ್ ಮತ್ತು ಬಿಜೆಡಿ ಪಕ್ಷಗಳು ಚುನಾವಣೆಯಿಂದ ದೂರ ಉಳಿಯುತ್ತಿರುವುದರಿಂದ ಸಂಖ್ಯಾಬಲದ ಆಧಾರದ ಮೇಲೆ ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ರಾಜ್ಯದಲ್ಲಿ ಯೂರಿಯಾ ಕೊರತೆಯಿಂದಾಗಿ ತೆಲಂಗಾಣದ ರೈತರು ಅನುಭವಿಸುತ್ತಿರುವ ಸಮಸ್ಯೆಯನ್ನು ಎತ್ತಿ ತೋರಿಸುವ ಸಲುವಾಗ ತಮ್ಮ ಪಕ್ಷವು ಮತದಾನದಿಂದ ದೂರ ಉಳಿಯಲಿದೆ ಎಂದು ಬಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ ಕೆ ಟಿ ರಾಮರಾವ್ ತಿಳಿಸಿದ್ದಾರೆ. ಇದೇ ವೇಳೆ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿ ಬಣ ಎರಡರಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳುವ ತನ್ನ ನೀತಿಯ ಭಾಗವಾಗಿ ಮತದಾನದಿಂದ ದೂರವಿರುವ ನಿರ್ಧಾರವನ್ನು ಬಿಜೆಡಿ ತಿಳಿಸಿದೆ.
ರಾಜ್ಯಸಭೆ ಮತ್ತು ಲೋಕಸಭೆಯ ಸದಸ್ಯರು ಮತದಾನದ ಹಕ್ಕು ಹೊಂದಿದ್ದು, ಉಪರಾಷ್ಟ್ರಪತಿಯನ್ನು ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತರು ರಹಸ್ಯ ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಇದರರ್ಥ ಸಂಸದರು ತಮ್ಮ ಇಚ್ಛೆಯಂತೆ ಮತ ಚಲಾಯಿಸಬಹುದು. ಹೆಚ್ಚಾಗಿ ಪಕ್ಷದ ಆಧಾರದ ಮೇಲೆ ಮತ ಚಲಾಯಿಸುತ್ತಾರೆ. ಪ್ರಸ್ತುತ ರಾಜ್ಯಸಭೆಯ 239 ಮತ್ತು 542 ಲೋಕಸಭಾ ಸದಸ್ಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇದರ ಪ್ರಕಾರ ಮತದಾರರ ಸಂಖ್ಯೆ 781 ಮತ್ತು ಬಹುಮತಕ್ಕೆ 391 ಮತಗಳ ಅಗತ್ಯವಿದೆ. ಎನ್‌ಡಿಎ 422 ಸಂಸದರನ್ನು ಹೊಂದಿದೆ. ಹೀಗಾಗಿ ಎನ್ ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರ ಗೆಲುವು ಸುಲಭ ಎಂದೇ ಹೇಳಲಾಗಿದೆ. ಇಂಡಿಯಾ ಮೈತ್ರಿಕೂಟ ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಬಿ. ಸುದರ್ಶನ್ ರೆಡ್ಡಿ ಅವರನ್ನು ಕಣಕ್ಕಿಳಿಸಿದ್ದು, ವಿರೋಧ ಪಕ್ಷಗಳ ಜೊತೆಗೆ ಎನ್‌ಡಿಎ ಮಿತ್ರ ಪಕ್ಷದ ಸದಸ್ಯರ ಮತಗಳು ಲಭಿಸಲಿವೆ ಎನ್ನುವ ನಂಬಿಕೆ ಇಟ್ಟಿದೆ. ಇನ್ನು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ 11 ಸಂಸದರನ್ನು ಹೊಂದಿದೆ. ರಾಜ್ಯಸಭೆಯಲ್ಲಿ ಏಳು ಮತ್ತು ಲೋಕಸಭೆಯಲ್ಲಿ ನಾಲ್ಕು ಸದಸ್ಯರನ್ನು ಹೊಂದಿದೆ.ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ.9ರಂದು ಚುನಾವಣೆ – ಚುನಾವಣಾ ಆಯೋಗ ಘೋಷಣೆ
– ಎನ್‌ಡಿಎ ಅಭ್ಯರ್ಥಿ ಬೆಂಬಲಿಸೋದಾಗಿ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿಕೆ – ವೈಎಸ್‌ಆರ್‌ಸಿಪಿಯಿಂದ ಸಿಪಿಆರ್‌ಗೆ ಬೆಂಬಲ
ನವದೆಹಲಿ: ಎನ್‌ಡಿಎ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಜೆಡಿಯು ಅಧ್ಯಕ್ಷ, ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ತಮ್ಮ ಪಕ್ಷದ ಬೆಂಬಲವನ್ನು ಘೋಷಿಸಿದ್ದಾರೆ.
ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಎನ್‌ಡಿಎ ಉಪಾಧ್ಯಕ್ಷ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡುವ ನಿರ್ಧಾರವನ್ನು ಸ್ವಾಗತಿಸಲಾಗುತ್ತದೆ. ರಾಧಾಕೃಷ್ಣನ್ ಅವರಿಗೆ ಜೆಡಿಯು ಬೆಂಬಲಿಸುತ್ತದೆ. ಅವರಿಗೆ ಶುಭಾಶಯಗಳು ಎಂದು ಎಕ್ಸ್ ಖಾತೆಯಲ್ಲಿ ನಿತೀಶ್ ಕುಮಾರ್ ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ರಾಧಾಕೃಷ್ಣನ್ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಘೋಷಿಸಿದ ಒಂದು ದಿನದ ನಂತರ ನಿತೀಶ್ ಬೆಂಬಲದ ಮಾತನಾಡಿದ್ದಾರೆ. ಪಕ್ಷದ ಸಂಸದೀಯ ಮಂಡಳಿಯ ಸಭೆಯ ನಂತರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಮೈತ್ರಿಕೂಟವು ಸರ್ವಾನುಮತದ ಚುನಾವಣೆಯನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದರು. ಮುಂದಿನ ಉಪಾಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ನಾವು ಬಯಸುತ್ತೇವೆ. ನಾವು ವಿರೋಧ ಪಕ್ಷದ ನಾಯಕರನ್ನು ಸಂಪರ್ಕಿಸಿದ್ದೇವೆ ಎಂದು ತಿಳಿಸಿದ್ದರು.
ರಾಧಾಕೃಷ್ಣನ್ ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಅವರು ಜಾರ್ಖಂಡ್, ತೆಲಂಗಾಣ ಮತ್ತು ಪುದುಚೇರಿಯಲ್ಲಿ ರಾಜ್ಯಪಾಲರ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಬಿಜೆಪಿಯ ಹಿರಿಯ ನಾಯಕರಾಗಿರುವ ಅವರು, ಲೋಕಸಭೆಯಲ್ಲಿ ಎರಡು ಬಾರಿ ಕೊಯಮತ್ತೂರು ಪ್ರತಿನಿಧಿಸಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.