Tag: ಸಿ.ಟಿ ರವಿ. ಬಿ.ವೈ ವಿಜಯೇಂದ್ರ

  • ರಾಜಕೀಯ ಬೇಡ ಅಂದ್ರೆ ಮನೆಯಲ್ಲಿರ್ತೀನಿ – ಸಿ.ಟಿ ರವಿ

    ರಾಜಕೀಯ ಬೇಡ ಅಂದ್ರೆ ಮನೆಯಲ್ಲಿರ್ತೀನಿ – ಸಿ.ಟಿ ರವಿ

    ಚಿಕ್ಕಮಗಳೂರು: ಅಧ್ಯಕ್ಷ ಸ್ಥಾನ ಅನ್ನೋದು ನ್ಯಾಯಪೀಠವಿದ್ದಂತೆ. ನ್ಯಾಯಾಧೀಶ ಬದಲಾಗಬಹುದು. ನ್ಯಾಯಪೀಠವಲ್ಲ. ಆ ಪೀಠಕ್ಕೆ ಯಾವ ಬೆಲೆ ಕೊಡಬೇಕೋ ಆ ಬೆಲೆಯನ್ನು ನಾನು ಕೊಡುತ್ತೇನೆ ಎಂದು ಮಾಜಿ ಸಚಿವ ಸಿ.ಟಿ ರವಿ (CT Ravi) ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು (Narendra Modi) ಮತ್ತೊಮ್ಮೆ ಪ್ರಧಾನಿಯಾಗಬೇಕು ಅನ್ನೋದು ನಮ್ಮ ಗುರಿ. ದೇಶದಲ್ಲಿ ಮತ್ತೊಮ್ಮೆ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಆ ಗುರಿಯನ್ನು ಈಡೇರಿಸಲು ಎಲ್ಲ ರೀತಿಯ ಕೆಲಸ ಮಾಡಿ, ಸಹಕಾರ ನೀಡುತ್ತೇವೆ. ನಾವು ಇದುವರೆಗೂ ಪಕ್ಷದ ಲಕ್ಷ್ಮಣ ರೇಖೆ ದಾಟಿಲ್ಲ. 20 ವರ್ಷಗಳ ಕಾಲ ಶಾಸಕರಾಗಿ, 35 ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಜವಾಬ್ದಾರಿ ನಿಭಾಯಿಸಿದ್ದೇನೆ. ನಾನು ಎಂದೂ ಪಕ್ಷದ ಲಕ್ಷ್ಮಣ ರೇಖೆ ದಾಟಿಲ್ಲ. ಒಂದು ವೇಳೆ ಜಗಳ ಮಾಡಿದ್ದರೂ ನಮ್ಮ ಮನೆಯ ಒಳಗೇ ಜಗಳ ಆಡಿದ್ದೇವೆ. ಪಕ್ಕದ ಮನೆಯಲ್ಲಿ ಕೂತು ನಮ್ಮ ಮನೆಯ ಸಮಸ್ಯೆಯನ್ನ ಬಗೆಹರಿಸಿ ಎಂದು ಕೇಳಿಲ್ಲ ಎಂದು ಹೇಳಿದ್ದಾರೆ.

    ಪಕ್ಷ ನಮಗೆ ಯಾವುದೇ ರೀತಿಯ ಜವಾಬ್ದಾರಿ ಕೊಡದಿದ್ದರೂ ಬಿಜೆಪಿಗೆ ಮತ ನೀಡಿ ಅಂತ ನನ್ನ ಶಕ್ತಿ ಮೀರಿ ಮತಯಾಚನೆ ಮಾಡುತ್ತೇನೆ. ನನಗಿರುವುದು ಒಂದೇ ಪಾರ್ಟಿ ಅದು ಬಿಜೆಪಿ. ನನಗೆ ರಾಜಕೀಯ ಬೇಡ ಅಂದ್ರೆ ರಾಜಕೀಯ ಬಿಟ್ಟು ಮನೆಯಲ್ಲಿರುತ್ತೀನಿ ವಿನಃ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳಾಗಬೇಕು ಅಂತ ಸಚಿವರಿಗೆ ಹೈಕಮಾಂಡ್‌ ಹೇಳಿಲ್ಲ: ಸತೀಶ್‌ ಜಾರಕಿಹೊಳಿ

    ಸರ್ಕಾರದ ವಿರುದ್ಧ ಸಿ.ಟಿ ರವಿ ಅಸಮಾಧಾನ: ರಾಜ್ಯದಲ್ಲಿ ಈಗಾಗಲೇ ಬರ ಆವರಿಸಿದ್ದು, ರಾಜ್ಯದ 223 ತಾಲೂಕುಗಳನ್ನ ಬರ ಪೀಡಿತ ತಾಲೂಕು ಎಂದು ಸರ್ಕಾರ ಘೋಷಿಸಿದೆ. ಮನೆಯಲ್ಲಿ ಯಾರಿಗಾದರೂ ಹುಷಾರಿಲ್ಲ ಎಂದಾದಲ್ಲಿ ಮನೆಯಲ್ಲಿನ ಸಂಭ್ರಮವನ್ನು ಕೂಡ ಕೆಲ ಕಾಲ ದೂರ ಮಾಡುತ್ತಾರೆ. ಏಕೆಂದರೆ, ಅವರು ಆರೋಗ್ಯವಾಗಿ ಸ್ವಲ್ಪ ಸುಧಾರಿಸಿಕೊಳ್ಳಲಿ ಎಂಬ ಉದ್ದೇಶದಿಂದ. ಬರದಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ, ಎಷ್ಟೋ ಊರುಗಳಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಿದ್ದರಾಮಯ್ಯನವರು ಆರಂಭ ದಿನಗಳಲ್ಲಿ ರೈತರಿಗೆ 5 ಗಂಟೆ ನಿರಂತರ ವಿದ್ಯುತ್ ನೀಡುವುದಾಗಿ ಹೇಳಿದ್ದರು, ಬಳಿಕ 7 ಗಂಟೆ ಎಂದು ಹೇಳಿದರು. ಆದರೆ, 2-3 ಗಂಟೆಯೂ ನಿರಂತರವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಸಿಎಂ ವಿರುದ್ಧ ಕಿಡಿ: ನಾನು ಸಮಾಜವಾದದ ಹಿನ್ನೆಲೆಯಿಂದ ಬಂದವನು ಎಂದು ಪದೇ-ಪದೇ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಅವರ ಸಚಿವರು ಶಕ್ತಿಗನುಸಾರವಾಗಿ ಪೀಠೋಪಕರಣಗಳನ್ನು ತಂದು ಹಾಕಿಕೊಳ್ಳುತ್ತಿದ್ದಾರೆ. ರಾಜ್ಯ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಂಭ್ರಮ ಪಡುವ ಕಾಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಶೂ ಬದಲು ಚಪ್ಪಲಿ ಭಾಗ್ಯ – ದ್ವಂದ್ವ ನಿಲುವಿನ ಆದೇಶದಿಂದ ಹಠ ಹಿಡಿದ ಮಕ್ಕಳು

    ರೈತರಿಗೆ ಪರಿಹಾರ ಕೊಡಿ ಅಂದ್ರೆ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುವ ಸಚಿವರು, ಇವರ ಮನೆಗೆ ಪೀಠೋಪಕರಣ ತಂದು ಹಾಕಿಕೊಳ್ಳುವುದಕ್ಕೆ ಯಾವ ಕಾರಣ ತೋರಿಸದೇ ಎಲ್ಲಾ ಹಣವನ್ನು ಇವರೇ ಬಿಡುಗಡೆ ಮಾಡಿಕೊಳ್ಳುತ್ತಿದ್ದಾರೆ. ಇದು ಕೋಟ್ಯಂತರ ರೂಪಾಯಿ ವ್ಯಯ ಮಾಡಿ ಪೀಠೋಪಕರಣಗಳನ್ನು ತಂದು ಹಾಕಿಕೊಳ್ಳುವ ಸಮೃದ್ಧಿಯ ಕಾಲವೇ? ಜನರ ಸಂಕಷ್ಟಕ್ಕೂ ನಿಮಗೂ ಸಂಬಂಧ ಇಲ್ಲವೇ? ಬರಗಾಲಕ್ಕೂ ಈ ಸರ್ಕಾರಕ್ಕೂ ಭಾವನೆಗಳೇ ಇಲ್ಲಂತಾಗಿದೆಯಾ? ಮುಖ್ಯಮಂತ್ರಿಗಳೇ ನಿಮ್ಮ ಸಮಾಜವಾದ ಅಂದ್ರೆ ಮೂರ್ನಾಲ್ಕು ಕೋಟಿ ರೂ. ವೆಚ್ಚದ ಪೀಠೋಪಕರಣಗಳನ್ನ ತಂದು ಮನೆಗೆ ಹಾಕಿಕೊಳ್ಳುವುದಾ? ಎಂದು ಪ್ರಶ್ನಿಸಿದ್ದಾರೆ.