Tag: ಸಿ.ಎಚ್ ವಿಜಯಶಂಕರ್

  • ವಿಜಯಶಂಕರ್ ಸೇರ್ಪಡೆಯಿಂದ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ: ಬಿಎಸ್‌ವೈ

    ವಿಜಯಶಂಕರ್ ಸೇರ್ಪಡೆಯಿಂದ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ: ಬಿಎಸ್‌ವೈ

    – ಪಕ್ಷ ಬಿಟ್ಟಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೋರಿದ ವಿಜಯಶಂಕರ್
    – ಬಿಜೆಪಿ ಬಿಟ್ಟಿದ್ದು ನನ್ನದೇ ತಪ್ಪುಗಳಿಂದ

    ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಇಂದು ಬಿಜೆಪಿಗೆ ಮರುಸೇರ್ಪಡೆಯಾಗಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ವಿಜಯಶಂಕರ್ ಬಿಜೆಪಿ ಸೇರ್ಪಡೆಗೊಂಡರು. ಈ ವೇಳೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಬಿ.ಜೆ.ಪುಟ್ಟಸ್ವಾಮಿ ಸೇರಿದಂತೆ ಮೈಸೂರು ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

    ಈ ವೇಳೆ ಮಾತನಾಡಿದ ಸಿಎಂ, ವಿಶೇಷ ಕಾರಣಕ್ಕೆ ವಿಜಯಶಂಕರ್ ಅವರು ಪಕ್ಷ ಬಿಟ್ಟಿದ್ದರು. ಆದರೆ ಬಹಳ ದಿನಗಳಿಂದಲೂ ಬಿಜೆಪಿ ಸೇರಲು ಮುಂದಾಗಿದ್ದರು. ಸದ್ಯ ಅವರು ಮತ್ತೆ ಬಿಜೆಪಿಗೆ ಸೇರಿರುವುದರಿಂದ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಕಾಂಗ್ರೆಸ್ ಪಕ್ಷ ಮುಳುಗುತ್ತದೆ. ಇಡೀ ದೇಶದಲ್ಲಿ ಉಳಿಯುವ ಪಕ್ಷ ಬಿಜೆಪಿ ಮಾತ್ರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಇದೇ ವೇಳೆ ಮಾಜಿ ಸಂಸದ ವಿಜಯಶಂಕರ್ ಅವರು ಮಾತನಾಡಿ, ಬಿಜೆಪಿ ಪಕ್ಷ ಬಿಟ್ಟು ಹೋಗಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೋರಿದರು. ನಾನು ಬಿಜೆಪಿ ಬಿಟ್ಟಿದ್ದು ನನ್ನದೇ ತಪ್ಪುಗಳಿಂದ. ಮಾನಸಿಕ ಸ್ಥಿಮಿತ ನಿರ್ವಹಿಸಲಾಗಿರಲಿಲ್ಲ. ಹಾಗಾಗಿ ಪಕ್ಷ ಬಿಟ್ಟು ಹೋದೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ತಪ್ಪು ಎಂದರು.

    ನಾನು ಬಿಜೆಪಿ ಬಿಟ್ಟು ಹೋಗಿದ್ದು ನನ್ನ ರಾಜಕೀಯ ಜೀವನದ ಕಪ್ಪು ಚುಕ್ಕೆ. ತಪ್ಪಿನ ಅರಿವು ನನಗಾಗಿದೆ. ನನ್ನಂತೆ ಬೇರೆಯವರು ಇದೇ ರೀತಿ ತಪ್ಪು ಮಾಡಲು ಹೋಗಬೇಡಿ. ನಾನು ಇವತ್ತು ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದೇನೆ. ಬದುಕಿರುವವರೆಗೂ ಬಿಜೆಪಿ ಬಿಟ್ಟು ಹೋಗಲ್ಲ ಎಂದು ಕ್ಷಮೆ ಕೋರಿ ಪಕ್ಷಕ್ಕೆ ಸೇರ್ಪಡೆಯಾದರು.

    ವಿಜಯಶಂಕರ್ ಅವರು 2019ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಸೋತಿದ್ದರು. ಈಗ ಮತ್ತೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ವಿಜಯಶಂಕರ್ ಅವರು ಹುಣಸೂರು ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

  • ಕಟೀಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರುತ್ತೇನೆ: ವಿಜಯಶಂಕರ್

    ಕಟೀಲ್ ಸಮ್ಮುಖದಲ್ಲಿ ಬಿಜೆಪಿಗೆ ಸೇರುತ್ತೇನೆ: ವಿಜಯಶಂಕರ್

    – ಹುಣಸೂರು ಕ್ಷೇತ್ರದಲ್ಲಿ ಕಮಲ ಅರಳಿಸುವುದು ನನ್ನ ಗುರಿ

    ಮೈಸೂರು: ಬಿಜೆಪಿ ಸೇರುವ ಊಹಾಪೋಹಗಳಿಗೆ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಸಿ.ಎಚ್ ವಿಜಯಶಂಕರ್ ತೆರೆ ಎಳೆದಿದ್ದಾರೆ.

    ಮೈಸೂರಿನಲ್ಲಿ ಅರ್ಜುನ ಅವಧೂತರನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಮಾಜಿ ಸಂಸದರು, ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಮರಳಿ ಪಕ್ಷಕ್ಕೆ ಸೇರುತ್ತಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿದ್ದೇನೆ. ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವೆ ಎಂದು ತಿಳಿಸಿದ್ದಾರೆ.

    ಜಿಲ್ಲೆಗೆ ಹಾಗೂ ರಾಜ್ಯಕ್ಕೆ ನಿಮ್ಮಿಂದ ಅನೇಕ ಕಾರ್ಯಗಳು ಆಗಬೇಕಿದೆ. ಹೀಗಾಗಿ ನೀವು ರಾಜಕೀಯದಲ್ಲಿ ಮುಂದುವರಿಯಬೇಕು ಎಂದು ಅವಧೂತರು ಆಶೀರ್ವಾದ ಮಾಡಿದ್ದಾರೆ. ಅವರ ಸಲಹೆಯಂತೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ. ಅವರ ಹಾರೈಕೆಯಲ್ಲಿ ನಂಬಿಕೆ ಇದೆ ಎಂದ ಹೇಳಿದರು.

    ಸಿಎಂ ಯಡಿಯೂರಪ್ಪ ಅವರು ಮೊನ್ನೆಯಷ್ಟೇ ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಇಬ್ಬರ ಮಧ್ಯೆ ಸುದೀರ್ಘ ಚರ್ಚೆ ನಡೆಯಿತು.  ಆಗ ಸಿಎಂ, ರಾಜಕೀಯದಲ್ಲಿ ವ್ಯತ್ಯಾಸಗಳು ಆಗುವುದು ಸಹಜ. ಅದನ್ನು ಬಿಟ್ಟು ಪಕ್ಷಕ್ಕೆ ಬನ್ನಿ ಎಂದು ಸಲಹೆ ಕೊಟ್ಟಿದ್ದರು. ಅಷ್ಟೇ ಅಲ್ಲದೆ ನಳಿನ್ ಕುಮಾರ್ ಕಟೀಲ್ ಮೈಸೂರಿಗೆ ಬಂದಿದ್ದಾಗ ಪಕ್ಷಕ್ಕೆ ಬನ್ನಿ ಅಂತ ಆಹ್ವಾನ ನೀಡಿದ್ದರು. ಹೀಗಾಗಿ ಮರಳಿ ಬಿಜೆಪಿಗೆ ಸೇರಲು ಮುಂದಾಗಿದ್ದೇನೆ ಎಂದರು.

    ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರು ನಿಭಾಯಿಸುತ್ತೇನೆ. ಹುಣಸೂರು ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು ನನ್ನ ಗುರಿ. ಹುಣಸೂರು ಉಪ ಚುನಾವಣೆ ನನ್ನ ಪ್ರತಿಷ್ಠೆಯ ವಿಚಾರವಾಗಿದೆ. ಏಕೆಂದರೆ ಅದು ನನ್ನ ತಾಲೂಕು. ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

    ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ನಿಭಾಯಿಸಲು ನನಗೆ ಸಾಧ್ಯವಾಗಲಿಲ್ಲ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಅದೇ ಪರಿಸ್ಥಿತಿ ಇದೆ. ಆದರೆ ಅವರು ಸಮರ್ಥರಿದ್ದಾರೆ. ಅದೆಲ್ಲವನ್ನೂ ಎದುರಿಸುವ ಶಕ್ತಿ ಅವರಿಗಿದೆ. ಪಕ್ಷ ನನಗೆ ಎರಡು ವರ್ಷದಲ್ಲಿ ಯಾವುದೇ ಜವಾಬ್ದಾರಿ ನೀಡಲಿಲ್ಲ. ಚುನಾವಣೆ ಸೋತ ನಂತರ ಮಾತನಾಡಿಸಲಿಲ್ಲ. ಜನರ ಮಧ್ಯೆ ಉಳಿಯಲು ಬಿಜೆಪಿಗೆ ಸೇರುವ ನಿರ್ಧಾರ ತಗೆದುಕೊಂಡಿದ್ದೇನೆ. ಈ  ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ. ಆ ಕಾಲಘಟ್ಟಕ್ಕೆ ಅದು ಸರಿ ಇತ್ತು. ಈಗ ಈ ನಿರ್ಧಾರ ಸರಿ ಇದೆ ಎಂದು ಸಿ.ಎಚ್. ವಿಜಯಶಂಕರ್ ಸ್ಪಷ್ಟನೆ ನೀಡಿದರು.