Tag: ಸಿಸಿಬಿ ನೋಟಿಸ್

  • 14 ವರ್ಷದ ಹಿಂದೆ ಬಸ್ ಹತ್ಕೊಂಡು ಬಂದು ಬೆಂಗ್ಳೂರಲ್ಲಿ ನೆಲೆ ಕಂಡಿದ್ದೇನೆ: ಗಳಗಳನೇ ಅತ್ತ ಅನುಶ್ರೀ

    14 ವರ್ಷದ ಹಿಂದೆ ಬಸ್ ಹತ್ಕೊಂಡು ಬಂದು ಬೆಂಗ್ಳೂರಲ್ಲಿ ನೆಲೆ ಕಂಡಿದ್ದೇನೆ: ಗಳಗಳನೇ ಅತ್ತ ಅನುಶ್ರೀ

    ಬೆಂಗಳೂರು: ಎಲ್ಲವನ್ನು ಬಿಟ್ಟು ಒಬ್ಬಳೇ 14 ವರ್ಷದ ಹಿಂದೆ ಬೆಂಗಳೂರಿಗೆ ಬಸ್ ಹತ್ತಿಕೊಂಡು ಬಂದು ನನ್ನ ನೆಲೆ ಕಂಡುಕೊಂಡೆ. 12 ವರ್ಷ ನಾನು ಹಾಸ್ಟೆಲ್‍ನಲ್ಲೇ ಇದ್ದೆ. ತುಂಬಾ ಕಷ್ಟಪಟ್ಟು ಇಲ್ಲಿವರೆಗೂ ಬಂದಿದ್ದೇನೆ ಎಂದು ನಿರೂಪಕಿ ಅನುಶ್ರೀ ಗಳಗಳನೇ ಅತ್ತಿದ್ದಾರೆ. ಇದನ್ನೂ ಓದಿ: ಕನ್ನಡಿಗರು ಕೊಟ್ಟ ಹೆಸರಿಗೆ ಧಕ್ಕೆ ಮಾಡಿಲ್ಲ, ಯಾವತ್ತೂ ಮಾಡಲ್ಲ: ಕಣ್ಣೀರಿಟ್ಟ ಅನುಶ್ರೀ

    ಪಬ್ಲಿಕ್ ಟಿವಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಅನುಶ್ರೀ, ಕಳೆದ ಒಂದು ವಾರದಿಂದ ನನ್ನ ಬಗ್ಗೆ ಕೆಲವು ಅಭಿಪ್ರಾಯಗಳು, ಬೆಳವಣಿಗೆಗಳು ಸುತ್ತಮುತ್ತ ನಡೆಯುತ್ತಿತ್ತು. ಅಲ್ಲದೇ ಸಿಸಿಬಿ ವಿಚಾರಣೆ ಆದ ಮೇಲೂ ನನ್ನ ಬಗ್ಗೆ ಕೆಲ ಅಭಿಪ್ರಾಯಗಳು ಕೇಳಿ ಬರುತ್ತಿತ್ತು. ಹೀಗಾಗಿ ಇದಕ್ಕೆ ಉತ್ತರ ಕೊಡಬೇಕು ಎಂದು ಲೈವ್ ಬಂದು ಮಾತನಾಡಿದೆ. ಅನೇಕರು ಕಾಲ್ ಮಾಡಿ, ಮೆಸೇಜ್ ಮೂಲಕ ಅನುಶ್ರೀ ಅವರೇ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳುತ್ತಿದ್ದರು. ಅವರಿಗೆ ಉತ್ತರಿಸುವುದು ನನ್ನ ಜವಾಬ್ದಾರಿಯಾಗಿತ್ತು ಎಂದು ಹೇಳಿದರು.

    ನಾನು, ನನ್ನ ತಾಯಿ ಮತ್ತು ಸಂಬಂಧಿಕರು ಒಂದು ವಾರದಿಂದ ಟೆನ್ಶನ್ ತೆಗೆದುಕೊಂಡಿದ್ದೀವಿ. ಈ ರೀತಿ ನೋಟಿಸ್ ಬರುತ್ತೆ ಎಂದು ನಾವ್ಯಾರು ನಿರೀಕ್ಷಿಸಿರಲಿಲ್ಲ. ಆದರೆ ಬಂದಾಗ ಎಲ್ಲರಿಗೂ ಶಾಕ್ ಆಯಿತು. ಆದರೂ ನಾನೇನು ತಪ್ಪು ಮಾಡಿಲ್ಲ, ವಿಚಾರಣೆ ಕರೆದಿದ್ದಾರೆ ಅಷ್ಟೆ ಎಂದು ಹೋಗಿ ಮಾಹಿತಿ ಕೊಟ್ಟು ಬಂದೆ. ನನಗೆ ಅವರಿಬ್ಬರ ಪರಿಚಯವಿತ್ತು ಸಿಸಿಬಿ, ಮಾಧ್ಯಮಗಳಿಗೂ ಹೇಳಿದ್ದೇನೆ ಎಂದು ಅನುಶ್ರೀ ಹೇಳಿದರು.

    ಎಲ್ಲವನ್ನು ಬಿಟ್ಟು ಒಬ್ಬಳೇ 14 ವರ್ಷದ ಹಿಂದೆ ಬೆಂಗಳೂರಿಗೆ ಬಸ್ ಹತ್ತಿಕೊಂಡು ಬಂದು ನನ್ನ ನೆಲೆ ಕಂಡುಕೊಂಡೆ. 12 ವರ್ಷ ನಾನು ಹಾಸ್ಟೆಲ್‍ನಲ್ಲೇ ಇದ್ದೆ. ತುಂಬಾ ಕಷ್ಟಪಟ್ಟು ಇಲ್ಲಿವರೆಗೂ ಬಂದಿದ್ದೇನೆ. ಆದರೆ ಪೊಲೀಸ್ ಎಂದಾಗ ಸಹಜವಾಗಿ ಯಾವ ಹುಡುಗಿಗಾದರೂ ಭಯವಾಗುತ್ತದೆ. ನನಗೂ ಅದೇ ರೀತಿ ಭಯ ಆಯಿತು. ಆದರೆ ನನ್ನ ತಾಯಿ ನನಗೆ ಧೈರ್ಯ ಕೊಟ್ಟರು. ಹೀಗಾಗಿ ವಿಚಾರಣೆಗೆ ಹೋಗಿದ್ದೆ ಎಂದರು.

    ನನ್ನ ತಾಯಿಯೇ ನನಗೆ ಶಕ್ತಿ. ನಾವು ಕಷ್ಟಪಟ್ಟು ಮೇಲೆ ಬಂದಿದ್ದೇವೆ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ, ನಾನು ಮಾಡುವ ಕೆಲಸಕ್ಕೆ ಯಾವತ್ತೂ ಮೋಸ ಮಾಡಿಲ್ಲ. ಹೀಗಾಗಿ ನಾನ್ಯಾಕೆ ಭಯ ಪಡಲಿ ಎಂದು ಧೈರ್ಯವಾಗಿದ್ದೇನೆ. ಆದರೆ ಕೆಲ ಅಭಿಪ್ರಾಯಗಳಿಂದ ಮಾನಸಿಕವಾಗಿ ತುಂಬಾ ಕುಗ್ಗೋದೆ ಎಂದು ಅನುಶ್ರೀ ಗಳಗಳನೇ ಕಣ್ಣೀರು ಹಾಕಿದರು.

    ನೋಟಿಸ್ ಬಂದ ವೇಳೆ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮೆಸೇಜ್, ಫೋನ್ ಮೂಲಕ ಧೈರ್ಯ ಹೇಳಿದ್ದರು. ನನಗೆ ಪರಿಚಯ ಇಲ್ಲದವರು, ಅಜ್ಜಿ-ಅಜ್ಜಂದಿರು ಕೂಡ ನೀನು ಭಯಪಡಬೇಡ, ನಿನಗೆ ಏನು ಆಗಲ್ಲ ಎಂದು ಸಮಾಧನಾ ಮಾಡಿದರು. ಅಲ್ಲದೇ ದೇವರಲ್ಲಿ ನನಗಾಗಿ ಹರಕೆ ಕಟ್ಟಿಕೊಂಡು ಪೂಜೆ ಮಾಡಿದ್ದಾರೆ ಎಂದು ಅನುಶ್ರೀ ಕಣ್ಣೀರು ಹಾಕಿದರು.

  • ಮಂಗಳೂರಿಗೆ ಬಂದ್ರೂ ಸಿಸಿಬಿ ವಿಚಾರಣೆಗೆ ಹಾಜರಾಗದ ಅನುಶ್ರೀ

    ಮಂಗಳೂರಿಗೆ ಬಂದ್ರೂ ಸಿಸಿಬಿ ವಿಚಾರಣೆಗೆ ಹಾಜರಾಗದ ಅನುಶ್ರೀ

    ಮಂಗಳೂರು: ನಿರೂಪಕಿ ಹಾಗೂ ನಟಿ ಅನುಶ್ರೀ ಹೆಗಲಿಗೆ ಅಂಟಿಕೊಂಡ ಡ್ರಗ್ಸ್ ಕೇಸ್ ನ ವಿಚಾರ ಮುಂದುವರಿದಿದೆ. ಆದರೆ ಇಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದ ಅನುಶ್ರೀ ಮಾತ್ರ ವಿಚಾರಣೆಗೆ ಗೈರಾಗಿದ್ದಾರೆ.

    ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್ ನೀಡಿದೆ. ನಿನ್ನೆ ಖುದ್ದಾಗಿ ಬೆಂಗಳೂರಿಗೆ ತೆರಳಿ ನೋಟಿಸ್ ನೀಡಿದ್ದ ಮಂಗಳೂರು ಸಿಸಿಬಿ ಪೊಲೀಸರಿಗೆ ಇಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅನುಶ್ರೀ ಹೇಳಿದ್ದರು. ಆದರೆ ಇಂದು ವಿಚಾರಣೆಗೆ ಹಾಜರಾಗದೇ ಅನುಶ್ರೀ ನಾಟ್ ರೀಚೇಬಲ್ ಆಗಿದ್ದಾರೆ.

    ನಿನ್ನೆ ರಾತ್ರಿ ಸೋಷಿಯಲ್ ಮೀಡಿಯಾ ಫೇಸ್‍ಬುಕ್‍ನಲ್ಲಿ ಪತ್ರಿಕಾ ಪ್ರಕಟಣೆ ಹಾಕಿದ್ದ ಅನುಶ್ರೀ ಇಂದು ಬೆಳಗ್ಗೆ ಮಂಗಳೂರು ಸಿಸಿಬಿ ಪೋಲಿಸರ ಮುಂದೆ ಹಾಜರಾಗುತ್ತೇನೆ ಎಂದು ತಿಳಿಸಿದ್ದರು. ಇಂದು ಮುಂಜಾನೆ 5ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಟ್ಟಿದ್ದರು. ಆದರೆ ಅನುಶ್ರೀ ಮಾತ್ರ ಇಂದು ವಿಚಾರಣೆಗೆ ಹಾಜರಾಗಿಲ್ಲ. ಅನುಶ್ರೀ ವಿಚಾರಣೆಗೆ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ನಾರ್ಕೋಟಿಕ್ ಕ್ರೈಂ ಠಾಣೆ ಪೊಲೀಸರು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು.

    15 ಜನ ಅಧಿಕಾರಿಗಳು, ಸಿಬ್ಬಂದಿ ನೇಮಿಸಿ ವಿಚಾರಣೆಗೆ ತಯಾರಿ ಮಾಡಲಾಗಿತ್ತು. ಮೊದಲ ಹಂತದಲ್ಲಿ ಆರೋಪಿಗಳಾದ ಕಿಶೋರ್ ಅಮನ್, ತರುಣ್ ರಾಜ್ ಜೊತೆಗಿನ ಸಂಬಂಧ ಬಗ್ಗೆ ಪ್ರಶ್ನಿಸಿ, ಎರಡನೇ ಹಂತದಲ್ಲಿ ಸಾಕ್ಷ್ಯ ತೋರಿಸಿ ಅನುಶ್ರೀಗೆ ಪ್ರಶ್ನೆ ಮಾಡಬೇಕೆಂದಿದ್ದರು. ಈಗಾಗಲೇ ಬಂಧನವಾಗಿರುವ ಕಿಶೋರ್, ತರುಣ್, ನೌಶೀನ್ ಮಂಗಳೂರಿನ ಪಾಂಡೇಶ್ವರದಲ್ಲಿನ ಇಕೊನಾಮಿಕ್&ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದು ಇಂದು ಸಾಕಷ್ಟು ಮಾಹಿತಿ ಸಂಗ್ರಹಿಸಿದ ಪೊಲೀಸರು ಸಂಜೆ ವೇಳೆಗೆ ಕಿಶೋರ್ ಹಾಗೂ ನೌಶೀನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

    ಕೋರ್ಟ್‍ಗೆ ಹಾಜರುಪಡಿಸುವ ಮುನ್ನ ಇಂದು ಕೂಡಾ ಆರೋಪಿಗಳಿಗೆ ಡ್ರಿಲ್ ಮಾಡಲಾಗಿದ್ದು, ಆರೋಪಿ ತರುಣ್ ಅನುಶ್ರೀ ಬಗೆಗಿನ ಮಹತ್ವದ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ. ನಿನ್ನೆ ಬಂಧನ ಮಾಡಿದ ಬಳಿಕ ತರುಣ್ ಅನುಶ್ರೀ ಕುಡಿತಾ ಇದ್ರು ಅಂತಾ ಮಾತ್ರ ಹೇಳಿದ್ದ. ಆದರೆ ಪೋಲಿಸರು ತನಿಖೆ ಚುರುಕುಗೊಳಿಸಿದ ಬಳಿಕ ಒಂದೊಂದೇ ಮಾಹಿತಿ ಬಾಯ್ಬಿಟ್ಟಿದ್ದಾನೆ. ನಾವು ಡ್ರಗ್ ಪಾರ್ಟಿ ಮಾಡುತ್ತಿದ್ದೇವು. ಆ ಪಾರ್ಟಿಯಲ್ಲಿ ಅನುಶ್ರೀ ಡ್ರಗ್ಸ್‍ನ ಕಿಕ್ಕೇರಿಸಿಕೊಳ್ಳುತ್ತಿದ್ದರು ಎಂದು ಹೇಳಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ತರುಣ್ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿರುವ ಈ ಎಲ್ಲ ಮಾಹಿತಿಗಳು ಅನುಶ್ರೀಗೆ ಕಂಟಕವಾಗುವ ಎಲ್ಲ ಸಾಧ್ಯತೆಗಳಿವೆ. ಸದ್ಯ ಸಿಸಿಬಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗುವುದಕ್ಕೆ ಮೂರು ದಿನಗಳ ಕಾಲಾವಕಾಶವಿದೆ. ಹೀಗಾಗಿ ಅನುಶ್ರೀ ನಾಳೆಯ ಒಳಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ.

  • ಸಿಸಿಬಿ ನೋಟಿಸ್ ಸ್ವೀಕರಿಸಿದ ಅನುಶ್ರೀ- ಶನಿವಾರ ವಿಚಾರಣೆಗೆ ಹಾಜರು

    ಸಿಸಿಬಿ ನೋಟಿಸ್ ಸ್ವೀಕರಿಸಿದ ಅನುಶ್ರೀ- ಶನಿವಾರ ವಿಚಾರಣೆಗೆ ಹಾಜರು

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ನೀಡಿರುವ ನೋಟಿಸ್ ನಿರೂಪಕಿ ಅನುಶ್ರೀ ಸ್ವೀಕರಿಸಿದ್ದಾರೆ. ಶನಿವಾರ ವಿಚಾರಣೆಗೆ ಹಾಜರಾಗೋದಾಗಿ ಅನುಶ್ರೀ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ಹಿನ್ನೆಲೆ ಅನುಶ್ರೀ ಅವರು ನಾಳೆ ಮಂಗಳೂರಿಗೆ ತೆರಳಲಿದ್ದಾರೆ.

    ಅನುಶ್ರೀ ಅವರ ವೈಭವ್ ಸ್ನೇಹ ಬ್ರೀಜೆ ಅಪಾರ್ಟ್‍ಮೆಂಟ್ ಗೆ ತೆರಳಿ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗಲು ಮಂಗಳವಾರದವರೆಗೂ ಸಮಯ ನೀಡಲಾಗಿದೆ. ಆದ್ರೆ ಅನುಶ್ರೀಯವರು ನಾಳೆಯೆ ವಿಚಾರಣೆಗೆ ಬರೋದಾಗಿ ತಿಳಿಸಿದ್ದಾರೆ. ಮಂಗಳೂರಿನ ಸಿಸಿಬಿ ಕಚೇರಿಯಲ್ಲಿ ಅನುಶ್ರೀಯವರ ವಿಚಾರಣೆ ನಡೆಯಲಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನುಶ್ರೀ, ಇಂದು ಸಂಜೆ ಇಬ್ಬರು ಅಧಿಕಾರಿಗಳು ಬಂದು ನೋಟಿಸ್ ನೀಡಿದರು. ಮಂಗಳವಾರವರೆಗೂ ಸಮಯ ನೀಡಿದ್ದಾರೆ. ಆದ್ರೆ ನಾನು ನಾಳೆಗೆ ಬರುತ್ತೇನೆ ಎಂದು ಹೇಳಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಹೇಳಿಕೆ ದಾಖಲಿಸಬೇಕಿದೆ ಎಂದು ಹೇಳಲಾಗಿದ್ದು, ನೋಟಿಸ್ ನಲ್ಲಿ ಯಾವುದೇ ಕೇಸ್ ಅಂತ ನಿಖರವಾಗಿ ತಿಳಿಸಿಲ್ಲ ಎಂದರು. ಇದನ್ನೂ ಓದಿ: ಸಿಸಿಬಿ ನೋಟಿಸ್- ನಿರೂಪಕಿ ಅನುಶ್ರೀ ಮೊದಲ ಪ್ರತಿಕ್ರಿಯೆ

    ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಪಾರ್ಟಿಗಳಲ್ಲಿ ಖ್ಯಾತ ನಿರೂಪಕಿ ಭಾಗಿಯಾಗುತ್ತಾರೆ ಎಂದು ಹೇಳಿಕೆ ನೀಡಿದ್ದ. ಇಂದು ಬಂಧನವಾಗಿರುವ ಕಿಶೋರ್ ಆಪ್ತ ತರುಣ್ ವಿಚಾರಣೆ ವೇಳೆ ಅನುಶ್ರೀಯವರ ಹೆಸರು ಹೇಳಿದ್ದಾನೆ ಎನ್ನಲಾಗಿದೆ. ಈ ಇಬ್ಬರ ಹೇಳಿಕೆಯನ್ನಾಧರಿಸಿ ಅನುಶ್ರೀ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌ – ನಿರೂಪಕಿ ಅನುಶ್ರೀಗೆ ನೋಟಿಸ್‌ ಜಾರಿ