Tag: ಸಿಸಿಡಿ

  • ಸಿದ್ಧಾರ್ಥ್ ಸಾವಿಗೆ ಸ್ಫೋಟಕ ತಿರುವು – ಚಾಲಕನ ಹೇಳಿಕೆ ಮೇಲೆ ಅನುಮಾನ

    ಸಿದ್ಧಾರ್ಥ್ ಸಾವಿಗೆ ಸ್ಫೋಟಕ ತಿರುವು – ಚಾಲಕನ ಹೇಳಿಕೆ ಮೇಲೆ ಅನುಮಾನ

    ಮಂಗಳೂರು: ಕಾಫಿ ಕಿಂಗ್ ಸಿದ್ಧಾರ್ಥ್ ನಿಗೂಢ ಸಾವು ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದರೂ ಅದೊಂದು ಕೊಲೆ ಎನ್ನುವ ಸಂಶಯದ ವಾಸನೆ ಪೊಲೀಸರಿಗೂ ಸಿಕ್ಕಿದೆ.

    ಪೊಲೀಸರು ನಾನಾ ಆಯಾಮಗಳಲ್ಲಿ ನಾಲ್ಕು ತಂಡಗಳನ್ನು ರಚಿಸಿಕೊಂಡು ತನಿಖೆ ಆರಂಭಿಸಿದ್ದು ಸಿದ್ಧಾರ್ಥ್ ಜೊತೆಗಿದ್ದ ಚಾಲಕನ ಹೇಳಿಕೆಗಳೇ ಪೊಲೀಸರಿಗೆ ಇದೀಗ ಅನುಮಾನ ಹುಟ್ಟುವಂತೆ ಮಾಡಿದೆ.

    ಅದರಲ್ಲೂ ಆತ ಹೇಳಿದಂತೆ ಸೋಮವಾರ ಸಂಜೆ 7 ಗಂಟೆಗೆ ನೇತ್ರಾವತಿ ಸೇತುವೆಯ ಬಳಿ ನಾವು ತಲುಪಿದ್ದು, ನನ್ನನ್ನು ಮುಂದೆ ಹೋಗುವಂತೆ ಹೇಳಿ ಸಿದ್ಧಾರ್ಥ್ ಅವರು ನೇತ್ರಾವತಿ ಸೇತುವೆಯಲ್ಲೇ ಇಳಿದುಕೊಂಡಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್‍ನಲ್ಲಿ ಅಂದು ಸಂಜೆ 5.28ಕ್ಕೆ ಅವರಿದ್ದ ಕಾರು ಪಾಸ್ ಆಗಿರೋ ಸಿಸಿ ಕ್ಯಾಮರಾ ಫೊಟೇಜ್ ಸಿಕ್ಕಿದ್ದು ಅನುಮಾನಕ್ಕೆ ಕಾರಣವಾಗಿದೆ.

    ಟೋಲ್ ಗೇಟ್‍ನಿಂದ ನೇತ್ರಾವತಿ ಸೇತುವೆಗೆ ಬರಲು 25 ಕಿಲೋಮೀಟರ್ ಅಂತರ ಇದ್ದು, ಕೇವಲ 35- 40 ನಿಮಿಷದಲ್ಲಿ ಬರಬಹುದು. ಆದರೆ ಅವರು ಒಂದೂವರೆ ಗಂಟೆ ಏನು ಮಾಡುತ್ತಿದ್ದರು ಅನ್ನುವ ಅನುಮಾನ ಈಗ ಎದ್ದಿದೆ.

  • ಖಾಸಗಿ ಫೈನಾನ್ಸ್ ಸಂಸ್ಥೆಯ ಒತ್ತಡ ತಾಳಲಾರದೇ ಸಿದ್ಧಾರ್ಥ್ ಆತ್ಮಹತ್ಯೆ?

    ಖಾಸಗಿ ಫೈನಾನ್ಸ್ ಸಂಸ್ಥೆಯ ಒತ್ತಡ ತಾಳಲಾರದೇ ಸಿದ್ಧಾರ್ಥ್ ಆತ್ಮಹತ್ಯೆ?

    ಮುಂಬೈ: ಖಾಸಗಿ ಫೈನಾನ್ಸ್ ಸಂಸ್ಥೆಯ ಒತ್ತಡ ತಾಳಲಾರದೇ ಕೆಫೆ ಕಾಫಿ ಡೇ(ಸಿಸಿಡಿ) ಸಂಸ್ಥಾಪಕ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡರೇ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

    ಹೌದು, ಸಿದ್ದಾರ್ಥ್ ಅವರು ತಮ್ಮ ವ್ಯವಹಾರವನ್ನು ವಿಸ್ತರಿಸಲು ಹಲವು ಕಡೆ ಸಾಲವನ್ನು ಪಡೆದುಕೊಂಡಿದ್ದರು. ಸದ್ಯ ವೈರಲ್ ಆಗಿರುವ ಸಿದ್ಧಾರ್ಥ್ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಖಾಸಗಿ ಸಂಸ್ಥೆಯೊಂದು ಒತ್ತಡ ಹಾಕುತ್ತಿದೆ ಇದರ ಜೊತೆಗೆ ಖಾಸಗಿ ಇಕ್ವಿಟಿ ಪಾಲುದಾರರು ಷೇರುಗಳನ್ನು ವಾಪಸ್ ಪಡೆಯಬೇಕೆಂದು ಒತ್ತಡ ಹಾಕುತ್ತಿದ್ದಾರೆ ಎನ್ನುವ ಅಂಶ ಪ್ರಸ್ತಾಪವಾಗಿತ್ತು.

    ಸಿಸಿಡಿ ಮೂಲಗಳನ್ನು ಆಧಾರಿಸಿ ವರದಿ ಮಾಡಿದ ಡಿಎನ್‍ಎ, ಸಿಸಿಡಿಯಲ್ಲಿ ಹೂಡಿಕೆ ಮಾಡಿದ ಖಾಸಗಿ ಇಕ್ವಿಟಿ ಸಂಸ್ಥೆ ಕೆಕೆಆರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಶೇ.8 ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆದಿತ್ತು. ಈ ಕೆಕೆಆರ್ ಸಿದ್ದಾರ್ಥ್ ಅವರ ಬಳಿ ಶೇ.25 ರಷ್ಟು ಬಡ್ಡಿ ಬೇಡಿಕೆಯನ್ನು ಇಟ್ಟಿತ್ತು ಎಂದು ವರದಿ ಮಾಡಿದೆ.

    ಕಾಫಿ ಡೇ ಕಂಪನಿಯಲ್ಲಿ 4 ವಿದೇಶಿ ಕಾರ್ಪೋರೇಟ್ ಸಂಸ್ಥೆಗಳು ಶೇ.22.35 ರಷ್ಟು ಪಾಲನ್ನು ಹೊಂದಿವೆ. ಎನ್‍ಎಲ್‍ಎಸ್ ಮಾರಿಷಸ್ ಶೇ.10.61 ಪಾಲನ್ನು ಹೊಂದಿದ್ದರೆ, ಕೆಕೆಆರ್ ಮಾರಿಷಸ್ ಪ್ರೈವೆಟ್ ಈಕ್ವಿಟಿ ಲಿಮಿಟೆಡ್ ಶೇ.6.07 ರಷ್ಟು (1.28 ಕೋಟಿ ಷೇರು) ಪಾಲನ್ನು ಹೊಂದಿದೆ.

    ವಿದೇಶಿ ಬ್ಯಾಂಕಿಂಗ್‍ಯೇತರ ಹಣಕಾಸು ಸಂಸ್ಥೆಗಳು (ಎನ್‍ಬಿಎಫ್‍ಸಿ) ಕಡಿಮೆ ದರದಲ್ಲಿ ಸಾಲವನ್ನು ಪಡೆದು ಹೆಚ್ಚಿನ ಬಡ್ಡಿಗೆ ಸಾಲವನ್ನು ನೀಡುತ್ತದೆ. ಭಾರತದ ಬ್ಯಾಂಕ್ ಗಳಿಂದ ಶೇ.8-9 ರ ಬಡ್ಡಿ ದರದಲ್ಲಿ ಸಾಲವನ್ನು ಪಡೆದು ಆ ಹಣವನ್ನು ಭಾರತದ ಉದ್ಯಮಿಗಳಿಗೆ ಶೇ.22.25 ಬಡ್ಡಿ ದರದಲ್ಲಿ ಎನ್‍ಬಿಎಫ್‍ಸಿಗಳು ಸಾಲವನ್ನು ನೀಡುತ್ತವೆ. ಸಂಸ್ಥೆ ಲಾಭದಲ್ಲಿದ್ದರೆ ಈ ಬಡ್ಡಿ ದರದಲ್ಲಿ ಹಣವನ್ನು ತೀರಿಸುತ್ತದೆ. ಆದರೆ ನಷ್ಟದಲ್ಲಿದ್ದರೆ ಇಷ್ಟೊಂದು ಮೊತ್ತವನ್ನು ತೀರಿಸುವುದು ಅಸಾಧ್ಯವಾಗುತ್ತದೆ. ಎನ್‍ಬಿಎಫ್‍ಸಿಯ ಈ ಮೊಡಸ್ ಅಪರೆಂಡಿಗೆ ಈಗ ಸಿದ್ದಾರ್ಥ್ ಬಲಿಯಾಗಿರಬಹುದೇ ಎನ್ನುವ ಅನುಮಾನ ಹುಟ್ಟಿದೆ.

    ಹೂಡಿಕೆದಾರರೊಬ್ಬರು ಪ್ರತಿಕ್ರಿಯಿಸಿ, ಸಾಲ ನೀಡಿದ ಖಾಸಗಿ ಇಕ್ವಿಟಿಗಳು ಮಾಲೀಕರಿಂದ ಹೆಚ್ಚಿನ ಲಾಭವವನ್ನು ನಿರೀಕ್ಷಿಸುತ್ತವೆ. ಈ ಕಾರಣಕ್ಕೆ ಉದ್ಯಮಿಗಳ ಮೇಲೆ ಒತ್ತಡವನ್ನು ಹಾಕುತ್ತಲೇ ಇರುತ್ತದೆ. ಸಾಲ ತೀರಿಸಲು ಸಾಧ್ಯವಾಗದೇ ಇದ್ದಾಗ ಅನಿವಾರ್ಯವಾಗಿ ಸಂಸ್ಥೆಯನ್ನು ಮಾರಾಟ ಮಾಡಬೇಕಾಗುತ್ತದೆ. ಒತ್ತಡ ಹಾಕುವ ಮೂಲಕ ವಿದೇಶಿ ಬ್ರ್ಯಾಂಡ್ ಗಳಿಗೆ ಪ್ರತಿ ಸ್ಪರ್ಧಿಯಾಗಿ ಬೆಳೆಯುತ್ತಿರುವ ದೇಶದ ಉದ್ಯಮಗಳನ್ನು ನಿರ್ನಾಮ ಮಾಡುತ್ತವೆ ಎಂದು ಹೇಳಿದ್ದಾರೆ.

    ಭಾರತದ ಬ್ಯಾಂಕ್ ಮತ್ತು ಖಾಸಗಿ ಸಂಸ್ಥೆಗಳಿಂದ ಪಡೆದ ಸಾಲವನ್ನು ತೀರಿಸಲು ಮೈಂಡ್ ಟ್ರೀ ಕಂಪನಿಯಲ್ಲಿದ್ದ ಷೇರನ್ನು ಸಿದ್ದಾರ್ಥ್ ಲಾರ್ಸನ್ ಆಂಡ್ ಟ್ಯಾಬ್ರೋ ಕಂಪನಿಗೆ ಮಾರಾಟ ಮಾಡಿದ್ದರು. ತನ್ನ ಬಳಿಯಿದ್ದ ಒಟ್ಟು ಶೇ.20.32 ಷೇರನ್ನು 3,200 ಕೋಟಿ ರೂ.ಗೆ ಮಾರಾಟ ಮಾಡಿ ಕೆಲ ಸಾಲವನ್ನು ತೀರಿಸಿದ್ದರು.

    ಮತ್ತಷ್ಟು ಸಾಲ ಬಾಕಿ ಇದ್ದ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ಅವರು ತಮ್ಮ ಕನಸಿನ `ಕೆಫೆ ಕಾಫಿ ಡೇ’ಯನ್ನು ಬಹು ರಾಷ್ಟ್ರೀಯ ಕೋಕಾ ಕೋಲಾ ಕಂಪನಿಗೆ ಮಾರಾಟ ಮಾಡಲು ಮುಂದಾಗಿದ್ದರು. ಈಗಾಗಲೇ ಅಮೆರಿಕದಿಂದ ಕೋಕಾ ಕೋಲಾ ಅಧಿಕಾರಿಗಳು ಸಿದ್ಧಾರ್ಥ ಒಡೆತನದ ಕಂಪನಿಗೆ ಭೇಟಿ ನೀಡಿ ಖರೀದಿ ಸಂಬಂಧ ಮಾತುಕತೆ ನಡೆಸಿದ್ದರು.

    ಅಂದಾಜು 10 ಸಾವಿರ ಕೋಟಿ ರೂ.ಗೆ ತನ್ನ ಕಂಪನಿಯನ್ನು ಮಾರಾಟ ಮಾಡುವ ಸಂಬಂಧ ಮಾತುಕತೆ ನಡೆದಿದ್ದರೂ ಇಲ್ಲಿಯವರೆಗೆ ಯಾವುದೂ ಅಂತಿಮವಾಗಿರಲಿಲ್ಲ. ಕಂಪನಿಯನ್ನು ಮಾರಾಟ ಮಾಡಿದರೂ, ಅದರಲ್ಲಿ ಒಂದಷ್ಟು ಪ್ರಮಾಣದ ಷೇರು ಉಳಿಸಿಕೊಳ್ಳಲು ಸಿದ್ಧಾರ್ಥ್ ಅವರು ಮುಂದಾಗಿದ್ದರು. ಇದು ಕೋಕಾ ಕೋಲಾಗೆ ತೊಡಕಾಗಿತ್ತು ಎಂದು ವರದಿಯಾಗಿತ್ತು.

    ಮೈಂಡ್ ಟ್ರೀ ಷೇರು ಎಷ್ಟಿತ್ತು?
    2011ರಲ್ಲಿ ಒಂದು ಷೇರಿಗೆ 87 ರೂ. ನೀಡಿ ಶೇ.6.95 ಅಥವಾ 28 ಲಕ್ಷ ಮೈಂಡ್ ಟ್ರೀ ಷೇರುಗಳನ್ನು 24.36 ಕೋಟಿ ರೂ. ನೀಡಿ ಸಿದ್ಧಾರ್ಥ್ ಖರೀದಿ ಮಾಡಿದ್ದರು. ಇದಾದ ನಂತರ 2012 ರಲ್ಲಿ ಒಂದು ಷೇರಿಗೆ 122.3 ರೂ. ನೀಡಿ ಶೇ.3.27 ಅಥವಾ 13.47 ಲಕ್ಷ ಷೇರುಗಳನ್ನು 122.33 ಕೋಟಿ ರೂ. ನೀಡಿ ಖರೀದಿಸಿದ್ದರು. 2017 ರಲ್ಲಿ ಶೇ. 0.23 ಅಥವಾ 4.41 ಷೇರುಗಳನ್ನು ಖರೀದಿಸಿದ್ದರು. ಒಂದು ಷೇರನ್ನು 529 ರೂ. ನೀಡಿ ಖರೀದಿಸಿದ್ದ ಪರಿಣಾಮ ಸಿದ್ಧಾರ್ಥ್ ಅವರು ಒಟ್ಟು ಮೈಂಡ್ ಟ್ರೀಯಲ್ಲಿ ಶೇ.19.94 ಪಾಲು ಷೇರನ್ನು ಹೊಂದಿದ್ದರು. ಈ ಮಧ್ಯೆ ಮೈಂಡ್ ಟ್ರೀ ಕಂಪನಿ ಬೋನಸ್ ರೂಪದಲ್ಲಿ ಸಿದ್ಧಾರ್ಥ್ ಅವರಿಗೆ ಷೇರುಗಳನ್ನು ನೀಡಿತ್ತು.

    2018ರಲ್ಲಿ ಸಿದ್ಧಾರ್ಥ್ ಅವರು ಮೈಂಡ್ ಟ್ರೀ ಕಂಪನಿಯಲ್ಲಿ ಒಟ್ಟು ಶೇ.20.41 ರಷ್ಟು ಷೇರುಗಳನ್ನು ಹೊಂದಿದ್ದರು. ಇದರಲ್ಲಿ ಶೇ.3.33 ಅಥವಾ 54.69 ಲಕ್ಷ ಷೇರುಗಳು ನೇರವಾಗಿ ಸಿದ್ಧಾರ್ಥ್ ಅವರ ಹೆಸರಿನಲ್ಲಿದ್ದರೆ ಶೇ.10.63 ಅಥವಾ 1.74 ಷೇರುಗಳು ಕಾಫಿ ಡೇ ಎಂಟರ್ಪ್ರೈಸ್ ಹೆಸರಿನಲ್ಲಿತ್ತು. ಉಳಿದ ಶೇ.6.45 ಷೇರುಗಳು ಅಥವಾ 1.05 ಕೋಟಿ ಷೇರುಗಳು ಕಾಫಿ ಡೇ ಟ್ರೇಡಿಂಗ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿತ್ತು.

    https://www.youtube.com/watch?v=-V5nfhPjxb8

    ಕೆಫೆ ಕಾಫಿ ಡೇ 2018ರ ಹಣಕಾಸು ವರ್ಷದಲ್ಲಿ 1,777 ಕೋಟಿ ರೂ. ಆದಾಯ ಗಳಿಸಿದ್ದರೆ, 2019ರ 1,814 ಕೋಟಿ ರೂ. ಆದಾಯ ಗಳಿಸಿತ್ತು. 2020ರ ಮಾರ್ಚ್ ವೇಳೆಗೆ 2,250 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಹಾಕಿಕೊಂಡಿತ್ತು.

    ದೇಶದೆಲ್ಲೆಡೆ ಒಟ್ಟು 1,752 ಕೆಫೆಗಳನ್ನು ಹೊಂದಿದ್ದ ಕಂಪನಿ ಒಟ್ಟು 60 ಸಾವಿರಕ್ಕೂ ಅಧಿಕ ಕಾಫಿ ವೆಂಡಿಂಗ್ ಮಷೀನ್‍ಗಳನ್ನು ಹೊಂದಿದೆ. ಭಾರತ ಅಲ್ಲದೆ ವಿಯೆನ್ನಾ, ಝೆಕ್ ರಿಪಬ್ಲಿಕ್, ಮಲೇಷ್ಯಾ, ನೇಪಾಳ ಮತ್ತು ಈಜಿಪ್ಟ್ ನಲ್ಲೂ ಕಂಪನಿ ವ್ಯವಹಾರ ನಡೆಸುತಿತ್ತು.

  • ಸಿದ್ಧಾರ್ಥ್ ವೈರಲ್ ಪತ್ರ – ತನಿಖೆಗೆ ಮುಂದಾದ ಸಿಸಿಡಿ

    ಸಿದ್ಧಾರ್ಥ್ ವೈರಲ್ ಪತ್ರ – ತನಿಖೆಗೆ ಮುಂದಾದ ಸಿಸಿಡಿ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸಿದ್ಧಾರ್ಥ್ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದ್ದು, ಈ ಪತ್ರವನ್ನು ಕೆಫೆ ಕಾಫಿ ಡೇ(ಸಿಸಿಡಿ) ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸಲು ನಿರ್ಧರಿಸಿದೆ.

    ಸಿದ್ಧಾರ್ಥ್ ಅವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಕಚೇರಿಯಲ್ಲಿ ಆಡಳಿತ ಮಂಡಳಿಯ ಸಭೆ ನಡೆಯಿತು.ಈ ಸಭೆಯಲ್ಲಿ ಸಿದ್ಧಾರ್ಥ್ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರದ ಬಗ್ಗೆ ಚರ್ಚೆ ನಡೆದಿದೆ.

    ಹಣಕಾಸು ವ್ಯವಹಾರ, ಲೆಕ್ಕ ಪರಿಶೋಧನೆ ಕಂಪನಿ ಇತರೇ ವಿಚಾರಗಳನ್ನು ತಿಳಿಸುವ ಪತ್ರದ ಸತ್ಯಾಸತ್ಯತೆ ಪರಿಶೀಲಿಸಿಲ್ಲ. ಸಿದ್ಧಾರ್ಥ್ ಅವರ ವೈಯಕ್ತಿಕ ಮಾಹಿತಿಗಳು ಇರುವ ಹಿನ್ನೆಲೆಯಲ್ಲಿ ಈ ಪತ್ರವನ್ನು ಗಂಭೀರವಾಗಿ ಸ್ವೀಕರಿಸಿದ್ದು ಕೂಲಂಕಷವಾಗಿ ತನಿಖೆ ಮಾಡಲು ನಿರ್ಧರಿಸಿದೆ ಎಂದು ಕಂಪನಿ ತಿಳಿಸಿದೆ.

    ಇಂದಿನ ಸಭೆಯಲ್ಲಿ ಎಸ್‍ವಿ ರಂಗನಾಥ್(ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕ) ಅವರನ್ನು ಕಂಪನಿಯ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು, ನಿತಿನ್ ಬಾಗ್ಮನೆ ಅವರನ್ನು ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದೇ ವೇಳೆ ಕಾನೂನು ಸಲಹೆಗಾರರನ್ನಾಗಿ ಸಿರಿಲ್ ಅಮರಚಂದ್ ಮಂಗ್ಲದಾಸ್ ಅವರನ್ನು ನೇಮಿಸಲಾಗಿದೆ. ಮುಂದಿನ ಸಭೆಯನ್ನು ಆಗಸ್ಟ್ 8 ರಂದು ನಡೆಸಲು ತೀರ್ಮಾನಿಸಲಾಗಿದೆ.