Tag: ಸಿಸಿಟಿವಿ ಕ್ಯಾಮೆರಾ

  • ಕ್ಷಣಾರ್ಧದಲ್ಲಿ 18 ಸಾವಿರ ರೂ. ಎಗರಿಸಿದ ಮಕ್ಕಳು!

    ಕ್ಷಣಾರ್ಧದಲ್ಲಿ 18 ಸಾವಿರ ರೂ. ಎಗರಿಸಿದ ಮಕ್ಕಳು!

    ಬೆಂಗಳೂರು: ರಾಜ್ಯವೇ ಬೆಚ್ಚಿ ಬೀಳುವಂತಹ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಚಿಕ್ಕ ಮಕ್ಕಳನ್ನು ಕಳುಹಿಸಿ ಕಳ್ಳತನ ಮಾಡುವ ಘಟನೆ ನೆಲಮಂಗಲ ಸಮೀಪದ ಅಡಕಿಮಾರನಹಳ್ಳಿಯಲ್ಲಿ ನಡೆದಿದೆ.

    ಇಬ್ಬರು ಚಿಕ್ಕ ಮಕ್ಕಳು ಮೊಬೈಲ್ ಅಂಗಡಿಗೆ ಬಂದು, ಕೌಂಟರ್‍ನಲ್ಲಿ ಇರುವ ವಸ್ತು ಹಾಗೂ ಹಣವನ್ನು ತೆಗೆದುಕೊಂಡು ಹೋಗಿದ್ದರು. ಬಳಿಕ ಕಳ್ಳತನವಾಗಿದೆ ಎಂದು ಅರಿತ ಅಂಗಡಿಯ ಮಾಲೀಕ ಮಂಜುನಾಥ್ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ನೋಡಿದಾಗ ಮಕ್ಕಳ ಕೈ ಚಳಕ ಬಯಲಾಗಿದೆ.

    ವಿಡಿಯೋದಲ್ಲಿ ಏನಿದೆ?
    ಮಧ್ಯಾಹ್ನ ವೇಳೆಗೆ ಮೊದಲು ಒಬ್ಬ ಬಾಲಕ ಮಾತ್ರ ಅಂಗಡಿಯ ಒಳಗೆ ಬರುತ್ತಾನೆ. ತನ್ನ ಕೈಗೆ ಸಿಕ್ಕ ಹಣ ಹಾಗೂ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾನೆ. ಬಳಿಕ ತನ್ನ ಅಣ್ಣನನ್ನು ಕರೆದುಕೊಂಡು ಬಂದು ಮತ್ತಷ್ಟು ಹಣ ಹಾಗೂ ಸಿಮ್ ಕಾರ್ಡ್ ಪ್ಯಾಕೆಟ್ ತೆಗೆದುಕೊಂಡು ಹೋಗುತ್ತಾರೆ. ಕ್ಷಣಾರ್ಧದಲ್ಲಿ ತಮ್ಮ ಕೈ ಚಳಕ ತೋರಿಸಿ ಪರಾರಿಯಾಗಿರುತ್ತಾರೆ.

    ಮಕ್ಕಳು ಸ್ಥಳೀಯ ನಿವಾಸಿಗಳು ಎಂದು ಅರಿತ ಅಂಗಡಿ ಮಾಲೀಕ ಮಂಜುನಾಥ್ ಅವರ ಪತ್ತೆಗಾಗಿ ಹುಡುಕಾಟ ನಡೆಸುತ್ತಾರೆ. ಸ್ಥಳೀಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರನ್ನು ವಿಚಾರಿಸಿದಾಗ, ಅಲ್ಪ ಸ್ವಲ್ಪ ಮಾಹಿತಿ ದೊರೆಯುತ್ತದೆ. ಇದನ್ನು ಆಧಾರಿಸಿ ಮಂಜನಾಥ್ ಕಳ್ಳತನ ಮಾಡಿದ ಮಕ್ಕಳ ಮನೆಗೆ ಹೋದಾಗ ಒಬ್ಬ ಬಾಲಕ ಮಾತ್ರ ಸಿಕ್ಕಿಬಿದ್ದಿದ್ದಾನೆ. ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ್ದ 18 ಸಾವಿರ ರೂ. ತಂದುಕೊಡುತ್ತಾನೆ. ಈ ಘಟನೆಯು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಸಿಟಿವಿ ಕ್ಯಾಮೆರಾ ಇದ್ದರೂ 16.3 ಗ್ರಾಂ ಚಿನ್ನಾಭರಣ ಎಗರಿಸಿದ ಕಳ್ಳ: ವಿಡಿಯೋ ನೋಡಿ

    ಸಿಸಿಟಿವಿ ಕ್ಯಾಮೆರಾ ಇದ್ದರೂ 16.3 ಗ್ರಾಂ ಚಿನ್ನಾಭರಣ ಎಗರಿಸಿದ ಕಳ್ಳ: ವಿಡಿಯೋ ನೋಡಿ

    ಮೈಸೂರು: ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನದಂಗಡಿಯಲ್ಲಿ ಕಳ್ಳತನ ಮಾಡಿದ ಘಟನೆ ನಗರದ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ನಡೆದಿದ್ದು, ಕಳ್ಳನ ಕೈಚಳಕ ತಡವಾಗಿ ಬೆಳಕಿಗೆ ಬಂದಿದೆ.

    ಜೂನ್ 27ರಂದು ಘಟನೆ ನಡೆದಿದ್ದು, ಜುಲೈ 3ರಂದು ಲೆಕ್ಕಹಾಕುತ್ತಿದ್ದಾಗ 50 ಸಾವಿರ ಮೌಲ್ಯದ 16.3 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿರುವುದು ಗೊತ್ತಾಗಿದೆ. ತಕ್ಷಣವೇ ಅಂಗಡಿಯ ಎಲ್ಲ ಸಿಸಿಟಿವಿ ಕ್ಯಾಮೆರಾ ವಿಡಿಯೋ ನೋಡಿದಾಗ ಕಳ್ಳನ ಕೈಚಳಕ ಬಯಲಾಗಿದೆ.

    ನಡೆದಿದ್ದು ಏನು?
    ಊಟದ ಸಮಯದಲ್ಲಿ ವ್ಯಕ್ತಿಯೊಬ್ಬನು ಗ್ರಾಹಕನಂತೆ ಚಿನ್ನದ ಅಂಗಡಿಗೆ ಬಂದಿದ್ದನು. ಸಿಬ್ಬಂದಿ ಊಟಕ್ಕೆ ಹೋಗಿದ್ದರು, ಹೀಗಾಗಿ ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತು, ಪಕ್ಕದಲ್ಲಿಯೇ ಗ್ರಾಹಕರಿದ್ದರೂ, ಅವರಿಗೆ ಗೊತ್ತಾಗದಂತೆ ತನ್ನ ಎದುರಿಗಿದ್ದ ಬಾಕ್ಸ್‍ನಿಂದ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾನೆ. ಅಷ್ಟೇ ಅಲ್ಲದೇ ಅನುಮಾನ ಬಾರದಂತೆ ಮತ್ತೆ ಖಾಲಿಯಾಗಿದ್ದ ಜಾಗವನ್ನು ಸರಿಪಡಿಸಿದ್ದಾನೆ. ಮಳಿಗೆಯಲ್ಲಿ 50 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರೂ ಕಳ್ಳ ಅದನ್ನು ಗಮನಿಸದೇ ಈ ಕೃತ್ಯ ಎಸಗಿದ್ದಾನೆ.

    ಕಳ್ಳತನ ಮಾಡಿರುವ ವ್ಯಕ್ತಿ ವೃತ್ತಿಪರ ಕಳ್ಳನೆಂದು ಶಂಕೆ ವ್ಯಕ್ತವಾಗಿದೆ. ಮಳಿಗೆಯ ಸಹಾಯಕ ಮ್ಯಾನೆಜರ್ ಇರ್ಷದ್ ಅವರು ನಗರದ ಲಷ್ಕರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

    https://youtu.be/3mm43iHUUwA

  • ವೈನ್ ಶಾಪ್ ಗೆ ಅಬಕಾರಿ ಆಯುಕ್ತರಿಂದ ಶಾಕ್

    ವೈನ್ ಶಾಪ್ ಗೆ ಅಬಕಾರಿ ಆಯುಕ್ತರಿಂದ ಶಾಕ್

    ಬೆಂಗಳೂರು: ಇನ್ನು ಮುಂದೆ ವೈನ್ ಶಾಪ್ ನಲ್ಲೂ ಸಿಸಿಟಿವಿ ಕಣ್ಗಾವಲು ಇರಿಸಬೇಕು ಎಂದು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ರಾಜ್ಯದ ಎಲ್ಲ ಮದ್ಯಂದಂಗಡಿಯಲ್ಲೂ ಇನ್ಮುಂದೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ವೈನ್ ಶಾಪ್ ನಲ್ಲಿ ಪಾರ್ಸೆಲ್ ನ ಜೊತೆ ಕುಡಿಯುವ ವ್ಯವಸ್ಥೆ ಮಾಡಲಾಗುವುದರಿಂದ ಅಕ್ರಮಕ್ಕೆ ಕಡಿವಾಣ ಹಾಕಲು ಅಬಕಾರಿ ಆಯುಕ್ತರು ಈ ನಿರ್ಧಾರವನ್ನು ಮಾಡಿದ್ದಾರೆ.

    ಒಂದು ವೇಳೆ ಅಬಕಾರಿ ಇಲಾಖೆಯ ಆದೇಶವನ್ನು ಮೀರಿ ಸಿಸಿಟಿವಿ ಅಳವಡಿಸದಿದ್ದರೆ, ಇನ್ನು ಮುಂದೆ ಅಂತಹ ಶಾಪ್ ಗಳ ಲೈಸೆನ್ಸ್ ನವೀಕರಣ ಮಾಡಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಆದರೆ ಅಬಕಾರಿ ಆಯುಕ್ತ ಮೌದ್ಗೀಲ್ ವಿರುದ್ಧ ಬಾರ್ ಮಾಲೀಕರ ಸಂಘ ಗರಂ ಆಗಿದೆ.

    ಅಬಕಾರಿ ಇಲಾಖೆ ಸಿಕ್ಕಾಪಟ್ಟೆ ಕಠಿಣ ಕಾಯ್ದೆಗಳನ್ನು ತರುತ್ತಿದೆ. ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡುತ್ತಾರೆ. ಈ ರೀತಿ ಹೊಸ ಕಾಯ್ದೆಗಳನ್ನು ತಂದು ತೊಂದರೆ ಕೊಡುತ್ತಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕುವುದೆಂದರೆ ಈ ರೀತಿ ತೊಂದರೆಗಳನ್ನು ಕೊಡುವುದಲ್ಲ ಅಂತ ಬಾರ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

  • ಬ್ಯಾಂಕ್ ಕಳ್ಳತನಕ್ಕೆ ಬಂದು ಸಿಸಿಟಿವಿ ಕದ್ದರು!

    ಬ್ಯಾಂಕ್ ಕಳ್ಳತನಕ್ಕೆ ಬಂದು ಸಿಸಿಟಿವಿ ಕದ್ದರು!

    ಬೆಂಗಳೂರು: ಬ್ಯಾಂಕ್ ಕಳ್ಳತನಕ್ಕೆ ಬಂದಿದ್ದವರಿಗೆ ಏನು ಸಿಗಲಿಲ್ಲವೆಂದು ಸಿಸಿಟಿವಿ ಕ್ಯಾಮೆರಾವನ್ನು ಕದ್ದೊಯ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ.

    ಬ್ಯಾಂಕ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಕಳ್ಳರು ನೆರಳೂರು ಗ್ರಾಮದ ಕೆನರಾ ಬ್ಯಾಂಕ್ ಕಳ್ಳತನಕ್ಕೆ ಯತ್ನಿಸಿದ್ದಾರೆ. ಬ್ಯಾಂಕ್ ಲಾಕರ್ ರೂಮ್ ಒಡೆದು ಹುಡುಕಾಡಿದ್ದಾರೆ. ಅಲ್ಲಿಯೂ ಅವರಿಗೆ ಏನು ದೊರೆಯದೇ ಇದ್ದಾಗ ಸಿಸಿಟಿವಿ ಕ್ಯಾಮೆರಾವನ್ನು ತಗೆದುಕೊಂಡು ಹೋಗಿದ್ದಾರೆ.

    ಸಾರ್ವಜನಿಕರು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೆ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಕಾಲೇಜು ಸಿಬ್ಬಂದಿ

    ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಕಾಲೇಜು ಸಿಬ್ಬಂದಿ

    ಲಕ್ನೋ: ಕಾಲೇಜು ಸಿಬ್ಬಂದಿಯೊಬ್ಬ ವಿದ್ಯಾರ್ಥಿಗಳ ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.

    ನಗರದ ಡಿಎಸ್ ಪದವಿ ಕಾಲೇಜಿನಲ್ಲಿ ಸಿಬ್ಬಂದಿ ಧರಮ್ ಸಮಾಜ್ ಶೌಚಾಲಯದಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದಾನೆ. ಇದರಿಂದ ವಿದ್ಯಾರ್ಥಿಗಳು ಇದು ಅನುಚಿತ ವರ್ತನೆಯಾಗಿದೆ ಎಂದು ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

    ಈ ಬಗ್ಗೆ ಕಾಲೇಜಿನ ಅಧಿಕಾರಿಗಳು, ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಶೌಚಾಲಯದಲ್ಲಿ ಬಂದು ನಕಲು ಮಾಡುತ್ತಾರೆ ಎಂದು ಮುಂಜಾಗೃತ ಕ್ರಮವಾಗಿ ಈ ರೀತಿ ಶೌಚಾಲಯದಲ್ಲಿ ಭದ್ರತಾ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.

    ಕ್ಯಾಮೆರಾಗಳನ್ನು ನಮ್ಮ ಶೌಚಾಲಯದಲ್ಲಿ ಅಳವಡಿಸಿರುವುದು ಅವಮಾನಕರವಾಗಿದೆ. ಈ ಭದ್ರತಾ ಕ್ಯಾಮೆರಾಗಳನ್ನು ತಕ್ಷಣ ತೆಗೆದು ಹಾಕಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುಲಾಗುತ್ತದೆ. ಇದು ನಮ್ಮ ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಕಾನೂನು ವಿದ್ಯಾರ್ಥಿ ಸೌರಭ್ ಚೌಧರಿ ಹೇಳಿದ್ದಾರೆ.

    ನಾವು ಶೌಚಾಲಯದೊಳಗೆ ಕಾಗದದ ಚೀಟಿ ಮತ್ತು ಇತರೆ ವಂಚನೆ ವಸ್ತುಗಳನ್ನು ಬಚ್ಚಿಟ್ಟುಕೊಳ್ಳುತ್ತಿರುವ ಅನೇಕ ದೂರುಗಳನ್ನು ಸ್ವೀಕರಿಸಿದ್ದೇವೆ. ಆದ್ದರಿಂದ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪ್ರಾಂಶುಪಾಲರಾದ ಹೇಮ್ ಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.

    ವಿದ್ಯಾರ್ಥಿಗಳು ಕಾಲೇಜಿನ ಮೂರು ಶೌಚಾಲಯಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ವಾಶ್ ರೂಮ್ ಗಳಲ್ಲಿ ಕ್ಯಾಮೆರಾಗಳನ್ನು ಇರಿಸಿಲ್ಲ. ಅಷ್ಟೇ ಅಲ್ಲದೇ ಸಿಸಿಟಿವಿಗಳ ಪರಿಶೀಲನೆಗೆ ಕಾನೂನು ವಿಭಾಗದಲ್ಲಿ ಬೇರೆ ತಂಡವನ್ನು ನಿಯೋಜಿಸಲಾಗಿದೆ. ಇಲ್ಲಿ ಖಾಸಗಿತನದ ಉಲ್ಲಂಘನೆ ಇಲ್ಲ ಎಂದು ಗುಪ್ತಾ ಹೇಳಿದ್ದಾರೆ.

    ವಿದ್ಯಾರ್ಥಿಗಳು ಅಧಿಕಾರಿಗಳಿಗೆ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದೂರನ್ನು ದಾಖಲಿಸಬಹುದು. ಆದರೆ ಶೌಚಾಲಯಗಳಲ್ಲಿ ಮಾಡುವ ನಕಲನ್ನು ಬೇರೆ ರೀತಿಯಾಗಿ ಪರೀಕ್ಷಿಸಬಹುದು. ಈ ವಿಚಾರದಲ್ಲಿ ಕಾಲೇಜು ನಿರ್ವಹಣೆ ಅಸಮರ್ಥನೀಯವಾಗಿ ಕಾರ್ಯನಿರ್ವಹಿಸಿದೆ ಎಂದು ತೋರುತ್ತದೆ ಅಂತ ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ನಿಗಾ ಸಮಿತಿಯ ಸದಸ್ಯ ಮನ್ವೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.