Tag: ಸಿಸಿಟಿವಿ ಕ್ಯಾಮೆರಾ

  • ಮತಗಟ್ಟೆಗಳಲ್ಲಿ ಮೋದಿ ಸಿಸಿಟಿವಿ ಕ್ಯಾಮೆರಾ ಇಟ್ಟಿದ್ದಾರೆ: ಬಿಜೆಪಿ ಶಾಸಕ

    ಮತಗಟ್ಟೆಗಳಲ್ಲಿ ಮೋದಿ ಸಿಸಿಟಿವಿ ಕ್ಯಾಮೆರಾ ಇಟ್ಟಿದ್ದಾರೆ: ಬಿಜೆಪಿ ಶಾಸಕ

    – ಕಾಂಗ್ರೆಸ್‍ಗೆ ಯಾರು ಮತ ಹಾಕಿದ್ರು ಅಂತ ತಿಳಿಯುತ್ತೆ

    ಗಾಂಧಿನಗರ: ಕಾಂಗ್ರೆಸ್‍ಗೆ ಯಾರು ಮತ ಹಾಕಿದರು ಅಂತ ನೋಡಲು ಪ್ರಧಾನಿ ನರೇಂದ್ರ ಮೋದಿ ಅವರು ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಇಟ್ಟಿದ್ದಾರೆ ಎಂದು ಗುಜರಾತ್‍ನ ಬಿಜೆಪಿ ಶಾಸಕ ರಮೇಶ್ ಕಟಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದಾಹೊದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಸ್ವಂತ್ ಸಿನ್ಹಾ ಬಾಭೋರ್ ಅವರ ಪರ ಶಾಸಕರು ಪ್ರಚಾರ ಮಾಡುತ್ತಿದ್ದರು. ಈ ವೇಳೆ ಗ್ರಾಮವೊಂದರಲ್ಲಿ ಮಾತನಾತನಾಡಿದ ಶಾಸಕರು, ನೀವು ಮತದಾನ ಮಾಡುವಾಗ ಮತಯಂತ್ರ (ಇವಿಎಂ)ದಲ್ಲಿರುವ ಜಸ್ವಂತ್ ಸಿನ್ಹಾ ಬಾಭೋರ್ ಅವರ ಭಾವಚಿತ್ರ ಹಾಗೂ ಕಮಲದ ಚಿಹ್ನೆಯ ಪಕ್ಕದಲ್ಲೇ ಹಸಿರು ಗುಂಡಿ ಇರುತ್ತದೆ. ಅದನ್ನು ನೀವು ಒತ್ತಬೇಕು. ಸಿಸಿಟಿವಿ ಕ್ಯಾಮೆರಾಗಳು ಇರುವುದರಿಂದ ಯಾರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ತಿಳಿಸಿದ್ದಾರೆ.

    ನೀವು ಯಾರಿಗೆ ಮತ ಹಾಕುತ್ತೀರಿ ಎನ್ನುವುದನ್ನು ತಿಳಿಯಲು ಪ್ರಧಾನಿ ನರೇಂದ್ರ ಮೋದಿ ಅವರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಕಾಂಗ್ರೆಸ್‍ಗೆ ಮತ ಹಾಕಿದ ಮತದಾರರಿಗೆ ಉದ್ಯೋಗ ಸೇರಿದಂತೆ ಯಾವುದೇ ಸೌಕರ್ಯಗಳು ಸಿಗುವುದಿಲ್ಲ. ಆದರೆ ಬಿಜೆಪಿಗೆ ಮತದಾನ ಮಾಡಿದವರಿಗೆ ಎಲ್ಲ ರೀತಿಯ ಸೌಕರ್ಯಗಳು ಸಿಗಲಿವೆ ಎಂದು ಹೇಳಿದ್ದಾರೆ.

    ರಮೇಶ್ ಕಾತ್ರಾ ಅವರು ದಾಹೊದ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಫತೇಪುರ್ ಶಾಸಕರಾಗಿದ್ದಾರೆ. ಹೀಗಾಗಿ ತಮ್ಮ ಪಕ್ಷದ ಅಭ್ಯರ್ಥಿ ಜಸ್ವಂತ್ ಸಿನ್ಹಾ ಬಾಭೋರ್ ಅವರ ಪರ ಪ್ರಚಾರ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ಬಗ್ಗೆ ಶಾಸಕರು ನೀಡಿರುವ ಹೇಳಿಕೆಯ ಬಗ್ಗೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಮೊದಲು ಸುಲ್ತಾನಪುರದ ಬಿಜೆಪಿ ಅಭ್ಯರ್ಥಿಯಾಗಿರುವ, ಕೇಂದ್ರ ಸಚಿವೆ ಮನೇಕಾ ಗಾಂಧಿ, ಮುಸ್ಲಿಮರ ಮತಗಳ ಹೊರತಾಗಿ ನಾನು ಜಯ ಸಾಧಿಸುತ್ತೇನೆ. ಮುಸ್ಲಿಂ ಸಮುದಾಯದ ಮತ ಪಡೆಯದೇ ಜಯ ಸಾಧಿಸಲು ನನಗೆ ಇಷ್ಟವಿಲ್ಲ. ಗೆದ್ದ ಮೇಲೆ ಕೆಲಸ ಕೇಳಿಕೊಂಡು ಮುಸ್ಲಿಮರು ಬಂದಾಗ ನಾನು ನೂರು ಬಾರಿ ಯೋಚಿಸಿ ಉದ್ಯೋಗ ನೀಡೋದು ಬೇಡ ಎಂದು ನಿರ್ಧರಿಸಬೇಕಾಗುತ್ತದೆ. ಮತದ ಬದಲಾಗಿ ಉದ್ಯೋಗ ನೀಡೋದು ವ್ಯವಹಾರ ಎಂದು ಮುಸ್ಲಿಮರು ತಿಳಿದುಕೊಳ್ಳಬೇಕಿದೆ. ನಾವೇನು ಮಹಾತ್ಮ ಗಾಂಧೀಜಿಯ ಕುಟುಂಬಸ್ಥರು ಅಲ್ಲ. ಕೇವಲ ಕೊಡುವುದು ಗೊತ್ತಿಲ್ಲ. ನಮ್ಮ ಕೆಲಸಕ್ಕೆ ಪ್ರತಿಯಾಗಿ ನೀವು ನಮಗೆ ಮತ ನೀಡಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

  • ಕರ್ತವ್ಯ ನಿರತ ವೈದ್ಯನ ಕೊರಳಪಟ್ಟಿ ಹಿಡಿದು ಎಳೆದಾಡಿದ ರೋಗಿಯ ಪೋಷಕರು!

    ಕರ್ತವ್ಯ ನಿರತ ವೈದ್ಯನ ಕೊರಳಪಟ್ಟಿ ಹಿಡಿದು ಎಳೆದಾಡಿದ ರೋಗಿಯ ಪೋಷಕರು!

    ದಾವಣಗೆರೆ: ಕರ್ತವ್ಯ ನಿರತ ಸರ್ಕಾರಿ ವೈದ್ಯರೊಬ್ಬರ ಕೊರಳಪಟ್ಟಿ ಹಿಡಿದು ಎಳೆದಾಡಿ, ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಜಗಳೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ತಮ್ಮ ಪುತ್ರನಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿ ವೈದ್ಯ ಮಲ್ಲಪ್ಪ ಅವರ ಮೇಲೆ ಜಗಳೂರು ನಿವಾಸಿಗಳಾದ ಸುನಿಲ್ ಎಂಬವರು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಸುನಿಲ್‍ಗೆ ಆತನ ಸಂಬಂಧಿ ಸೋಮಶೇಖರ್ ಕೂಡ ಸಾಥ್ ನೀಡಿದ್ದಾನೆ. ಇಬ್ಬರು ಸೇರಿ ಮಲ್ಲಪ್ಪ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾರೆ. ತಕ್ಷಣವೇ ಮಧ್ಯ ಪ್ರವೇಶಿಸಿದ ಸ್ಥಳೀಯರು ಹಲ್ಲೆಯನ್ನು ತಡೆದಿದ್ದಾರೆ.

    ಈ ಘಟನೆಯು ಜನವರಿ 9ರಂದು ನಡೆದಿದ್ದು, ವೈದ್ಯರ ಮೇಲೆ ಆರೋಪಿಗಳು ಹಲ್ಲೆ ಮಾಡುತ್ತಿರುವ ದೃಶ್ಯ ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಮ್ಮ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ವೈದ್ಯ ಮಲ್ಲಪ್ಪ ಅವರು ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆ ಬದಿಗೆ ಬೈಕ್ ಪಾರ್ಕ್ ಮಾಡುವ ಮುನ್ನ ಈ ಸ್ಟೋರಿ ಓದಿ

    ರಸ್ತೆ ಬದಿಗೆ ಬೈಕ್ ಪಾರ್ಕ್ ಮಾಡುವ ಮುನ್ನ ಈ ಸ್ಟೋರಿ ಓದಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಗುರಪ್ಪನಪಾಳ್ಯದಲ್ಲಿ ಬೈಕ್ ಕದ್ದು ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಗುರಪ್ಪನಪಾಳ್ಯ ನಿವಾಸಿ ದೀಪಕ್ ಎಂಬವರ ಬೈಕ್ ಅನ್ನು ಡಿಸೆಂಬರ್ 28ರಂದು ರಾತ್ರಿ 1 ಸುಮಾರಿಗೆ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಈ ಕುರಿತು ದೀಪಕ್ ಸದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರಿಗೆ ಸಿಸಿಟಿವಿ ಕ್ಯಾಮೆರಾ ದೃಶ್ಯ ಸಿಕ್ಕಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಈ ಖತರ್ನಾಕ್ ಕಳ್ಳರು ಬೆಳಗ್ಗೆಯಿಂದ ಸಂಜೆವರೆಗೆ ಬೈಕ್ ಮೇಲೆ ತಿರುಗಾಡಿ ಕಳ್ಳತನಕ್ಕೆ ಪ್ಲಾನ್ ಮಾಡುತ್ತಾರೆ. ಬಳಿಕ ರಾತ್ರಿ ಬರುವ ಕಳ್ಳರು ಪ್ಲಾನ್‍ನಂತೆ ರಸ್ತೆಬದಿ ನಿಲ್ಲಿಸಿರುವ ಬೈಕ್ ಎಗರಿಸಿಕೊಂಡು ಪರಾರಿಯಾಗುತ್ತಾರೆ. ಈ ತಂಡದಲ್ಲಿ ಮೂರು ಜನರು ಇದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ದೀಪಕ್ ಅವರು ತಮ್ಮ ಹೊಸ ಬೈಕ್ ಅನ್ನು ಮನೆ ಮುಂದೆ ಪಾರ್ಕ್ ಮಾಡಿದ್ದರು. ಜನರ ಓಡಾಟ ಕಡಿಮೆ ಆಗುತ್ತಿದ್ದಂತೆ ತಡರಾತ್ರಿ ಮೂವರು ಕಳ್ಳರು, ಕ್ಷಣಾರ್ಧದಲ್ಲಿ ಬೈಕ್‍ನ ಸೆಂಟ್ರಲ್ ಲಾಕ್ ಮುರಿದಿದ್ದಾರೆ. ಬಳಿಕ ಮತ್ತೊಂದು ಬೈಕ್‍ನ ಸಹಾಯದೊಂದಿಗೆ ಕಳ್ಳತನ ಮಾಡಿದ ಬೈಕ್ ಸಮೇತ ಪರಾರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣದ ಜೊತೆಗೆ ಸಾಕ್ಷಿಯನ್ನೂ ಕದ್ದ ಕಳ್ಳರು!

    ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣದ ಜೊತೆಗೆ ಸಾಕ್ಷಿಯನ್ನೂ ಕದ್ದ ಕಳ್ಳರು!

    – ಕಳ್ಳತನಕ್ಕೂ ಮುನ್ನ ಭರ್ಜರಿ ಪೂಜೆ ಮಾಡಿದ ಖದೀಮರು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊನ್ನೆಯಷ್ಟೇ ಪೊಲೀಸ್ ಅಧಿಕಾರಿಯೊಬ್ಬರ ಮೊಬೈಲ್ ಕದ್ದು ಇಬ್ಬರು ಕಳ್ಳರು ಪರಾರಿಯಾಗಿದ್ದರು. ಈ ಬೆನ್ನಲ್ಲೇ ಕೆಲವು ಕಳ್ಳರು ತಮ್ಮ ಬುದ್ಧಿ ಉಪಯೋಗಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜೊತೆಗೆ ಸಾಕ್ಷಿಯಾಗಿದ್ದ ಸಿಸಿಟಿವಿ ಡಿವಿಆರ್ ಅನ್ನು ಕೂಡ ಕದ್ದು ಪರಾರಿಯಾಗಿದ್ದಾರೆ.

    ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನ ನಗರದಲ್ಲಿರುವ ಮುತ್ತೂಟ್ ಫೈನಾನ್ಸ್ ಶಾಖೆಯನ್ನು ಕಳ್ಳರು ದೋಚಿದ್ದಾರೆ. ಶಾಖೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಪರಾರಿಯಾಗಿದ್ದು, ಪ್ರಕರಣವು ಇಂದು ಬೆಳಕಿಗೆ ಬಂದಿದೆ. ಈ ಕುರಿತು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆಯ ವಿವರ:
    ಮುತ್ತೂಟ್ ಫೈನಾನ್ಸ್ ಶಾಖೆಯ ಅಧಿಕಾರಿಗಳು ಡಿಸೆಂಬರ್ 24 ರಂದು ಬಾಗಿಲು ಹಾಕಿ ಮನೆಗೆ ತೆರಳಿದ್ದರು. ಬಾಗಿಲು ಹಾಕಿದ್ದ ಹಿನ್ನೆಲೆಯಲ್ಲಿ ಕಳ್ಳರು ನಕಲಿ ಕೀ ಬಳಸಿ ಫೈನಾನ್ಸ್ ಶಾಖೆಯ ಬಾಗಿಲು ತೆರೆದಿದ್ದಾರೆ. ಅದರಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರು, ಸಿಸಿಟಿವಿ ಕ್ಯಾಮೆರಾದಲ್ಲಿ ತಮ್ಮ ಕೃತ್ಯ ಸೆರೆಯಾಗಿದೆ ಎಂದು ಖಚಿತಪಡಿಸಿಕೊಂಡಿದ್ದಾರೆ. ತಕ್ಷಣವೇ ಸಿಸಿಟಿವಿ ಡಿವಿಆರ್ ಎತ್ತಿಕೊಂಡ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.

    ಈ ಕುರಿತು ಶಾಖೆಯ ಅಧಿಕಾರಿಗಳು ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದು, ಮುತ್ತೂಟ್ ಫೈನಾನ್ಸ್ ಶಾಖೆಗೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಖದೀಮರು ಕಳ್ಳತನಕ್ಕೂ ಮುನ್ನ ನಿಂಬೆ ಹಣ್ಣು, ಮೊಟ್ಟೆ ಒಡೆದು ಭರ್ಜರಿಯಾಗಿ ಪೂಜೆ ಪುನಸ್ಕಾರ ಮಾಡಿ ಲೂಟಿ ಮಾಡಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.

    ಎಷ್ಟು ಪ್ರಮಾಣದ ಚಿನ್ನಾಭರಣ ಕಳ್ಳತನವಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸಿ ಮಾಹಿತಿ ನೀಡಲಿದ್ದಾರೆ ಎಂದು ಫೈನಾನ್ಸ್ ಶಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶಾಖೆಯಲ್ಲಿ ಹಣ, ಚಿನ್ನ ಇಟ್ಟಿದ್ದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಲೆಗೆ ನುಗ್ಗಿ 28 ಸಾವಿರ ರೂ., ಡಿವಿಆರ್ ಎಗರಿಸಿದ ಖತರನಾಕ್ ಕಳ್ಳರು

    ಶಾಲೆಗೆ ನುಗ್ಗಿ 28 ಸಾವಿರ ರೂ., ಡಿವಿಆರ್ ಎಗರಿಸಿದ ಖತರನಾಕ್ ಕಳ್ಳರು

    ಬೆಂಗಳೂರು: ಮುಸುಕುಧಾರಿ ಕಳ್ಳರು ಖಾಸಗಿ ಶಾಲೆಯೊಂದಕ್ಕೆ ನುಗ್ಗಿ ಆಫೀಸ್ ರೂಮ್ ನಲ್ಲಿದ್ದ 28 ಸಾವಿರ ರೂ. ನಗದು ಒಂದು ಡಿವಿಆರ್ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

    ಹೊಸಕೋಟೆ ತಾಲೂಕಿನ ತಿಮ್ಮಸಂದ್ರ ಗ್ರಾಮದ ಸನ್ ವ್ಯಾಲಿ ಶಾಲೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ. ಆಫೀಸ್ ರೂಮ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ. ಈ ಕುರಿತು ಶಾಲೆಯ ಆಡಳಿತ ಮಂಡಳಿ ಸೂಲಿಬೆಲೆ ಠಾಣೆಗೆ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಶಾಲೆಯ ರಜೆ ದಿನವಾದ ಭಾನುವಾರ ರಾತ್ರಿ ಮೂವರು ಕಳ್ಳರು, ಆಫೀಸ್ ಬೀಗ ಒಡೆದು ಒಳಗೆ ನುಗ್ಗಿದ್ದಾರೆ. ಮುಸುಕು ಧರಿಸಿದ್ದ ಅವರು, ಮುಖಕ್ಕೆ ಪೌಡರ್ ಹಚ್ಚಿಕೊಂಡಿದ್ದರು. ನಿಧಾನವಾಗಿ ಒಬ್ಬೊಬ್ಬರೆ ಒಳಗೆ ನುಗ್ಗಿದ್ದಾರೆ. ಈ ದೃಶ್ಯ ಆಫೀಸ್ ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮೆರಾ ನೋಡಿದ ಕಳ್ಳರು ಅದನ್ನು ಒಡೆದು ಹಾಕಿದ್ದಾರೆ.

    ಕಳ್ಳರು ಬೀರುವಿನಲ್ಲಿದ್ದ 28 ಸಾವಿರ ರೂ. ನಗದು ಹಾಗೂ 16 ಸಾವಿರ ಮೌಲ್ಯದ ಡಿವಿಆರ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸೂಲಿಬೆಲೆ ಪೋಲಿಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮದ್ಯದ ಅಮಲಿನಲ್ಲಿ ವ್ಯಕ್ತಿಯನ್ನು ಕೊಲೆಗೈದ ಕುಡುಕ!

    ಮದ್ಯದ ಅಮಲಿನಲ್ಲಿ ವ್ಯಕ್ತಿಯನ್ನು ಕೊಲೆಗೈದ ಕುಡುಕ!

    ಕೋಲಾರ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕಾಗಿ ಜಗಳಕ್ಕೆ ಇಳಿದು ಬಳಿಕ ಎಲ್ಲರೊಂದಿಗೆ ಅಸಭ್ಯವಾಗಿ ವರ್ತಿಸಿ ಬಾರ್ ನಲ್ಲಿದ್ದ ಓರ್ವನನ್ನು ಕೊಲೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಟೇಕಲ್ ಗ್ರಾಮದಲ್ಲಿ ನಡೆದಿದೆ.

    ಮಾಲೂರು ತಾಲೂಕಿನ ಶೆಟ್ಟಿಹಳ್ಳಿಯ ಚಂದ್ರಪ್ಪ (35) ಮೃತ ದುರ್ದೈವಿ. ಬನಹಳ್ಳಿಯ ನಿವಾಸಿ ಅಶ್ವಥ್ ಕೊಲೆಗೈದ ಆರೋಪಿ. ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

    ವಿಡಿಯೋದಲ್ಲಿ ಏನಿದೆ?:
    ಎಂ.ಎಸ್.ಆನಂದ್ ಎಂಬವರಿಗೆ ಸೇರಿದ ಟೇಕಲ್ ಗ್ರಾಮದ ಶ್ರೀನಿವಾಸ ಬಾರ್ ಅಂಡ್ ರೆಸ್ಟೋರೆಂಟ್ ಕೌಂಟರ್ ಗೆ ಎಂದಿನಂತೆ ಇಂದು ಮಧ್ಯಾಹ್ನ ಮದ್ಯ ಸೇವಿಸಲು ಜನರು ಬಂದಿದ್ದರು. ಚಂದ್ರಪ್ಪ, ತಿಮ್ಮರಾಯಪ್ಪ ಸೇರಿದಂತೆ ಅನೇಕರು ಬಾರ್ ನ ಒಂದು ರೂಮ್‍ನಲ್ಲಿ ಕುಳಿತು ಕುಡಿಯುತ್ತಿದ್ದರು. ಈ ವೇಳೆ ಇಲ್ಲಿಗೆ ಬಂದ ಅಶ್ವಥ್ ತಿಮ್ಮರಾಯಪ್ಪ ಅವರ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಬೀಯರ್ ಬಾಟಲ್‍ನಿಂದ ಹಲ್ಲೆಗೆ ಯತ್ನಿಸಿದ್ದ. ಅದೃಷ್ಟವಶಾತ್ ಬೀಯರ್ ಬಾಟಲ್ ಗುರಿಯಿಂದ ತಿಮ್ಮರಾಯಪ್ಪ ತಪ್ಪಿಸಿಕೊಂಡು ಭಾರೀ ಅನಾಹುತದಿಂದ ಪಾರಾದರು.

    ಅಷ್ಟಕ್ಕೆ ಜಗಳ ನಿಲ್ಲಿಸದ ಅಶ್ವತ್ ಚಂದ್ರಪ್ಪನನ್ನು ಎಳೆದುಕೊಂಡು ಬಾರ್ ಕೌಂಟರ್ ಬಳಿಗೆ ಹೋಗಿದ್ದಾನೆ. ಈ ವೇಳೆ ಹಲ್ಲೆ ಮಾಡಿ, ಹಿಂದಕ್ಕೆ ನೂಕಿದ್ದಾನೆ. ಚಂದ್ರಪ್ಪ ಹಿಂದಕ್ಕೆ ಬಿದ್ದ ಪರಿಣಾಮ ತಲೆಗೆ ಬಲವಾಗಿ ಹೊಡೆತ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಕುರಿತು ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಶ್ವಥ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇದು ಬಿಎಂಟಿಸಿ ಮಾಹಾ ಡೀಲ್ – ಪಬ್ಲಿಕ್ ಟಿವಿಯ ರಿಯಾಲಿಟಿ ಚೆಕ್‍ನಲ್ಲಿ ನುಂಗಣ್ಣರ ಕರಾಮತ್ತು ಬಯಲು

    ಇದು ಬಿಎಂಟಿಸಿ ಮಾಹಾ ಡೀಲ್ – ಪಬ್ಲಿಕ್ ಟಿವಿಯ ರಿಯಾಲಿಟಿ ಚೆಕ್‍ನಲ್ಲಿ ನುಂಗಣ್ಣರ ಕರಾಮತ್ತು ಬಯಲು

    ಬೆಂಗಳೂರು: ಬಿಎಂಟಿಸಿ ನಷ್ಟದಲ್ಲಿದೆ ಎಂದು ಸಾರಿಗೆ ಸಚಿವರು ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಹೇಳುತ್ತಾರೆ. ಅದು ಹೇಗೆ ಬಿಎಂಟಿಸಿ ನಷ್ಟ ಆಗುತ್ತಿದೆ ಎಂಬುವುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಲ್ಲಿ ಬಯಲಾಗಿದೆ. ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನಿಲ್ಲಿಸಿದ್ರೆ ನಷ್ಟದ ಪ್ರಮಾಣವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ.

    ಪ್ರಯಾಣಿಕರ ಭದ್ರತಾ ದೃಷ್ಟಿಯಿಂದ ಬಸ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಈ ಸಂಬಂಧ ಒಂದು ಸಿಸಿಟಿವಿ ಕ್ಯಾಮೆರಾಗೆ 66 ಸಾವಿರ ರೂ. ಖರ್ಚು ಎಂದು ಬಿಎಂಟಿಸಿ ಸಿಬ್ಬಂದಿ ಲೆಕ್ಕ ತೋರಿಸಿದ್ದಾರೆ. ಒಟ್ಟು 500 ಬಸ್‍ಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಈ ಕ್ಯಾಮೆರಾಗಳಿಗೆ ಬರೋಬ್ಬರಿ 3 ಕೋಟಿ ರೂ. ಖರ್ಚು ಮಾಡಲಾಗಿದೆ. ಒಂದು ಕ್ಯಾಮೆರಾಗೆ ಇಷ್ಟು ಬೆಲೆ ನೀಡಿದ್ರೂ ಕೆಲ ಬಸ್ ಗಳಲ್ಲಿ ಡಬ್ಬಗಳಾಗಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    66 ಸಾವಿರ ಬೆಲೆಯ ಕ್ಯಾಮೆರಾ ನೋಡಲು ಹೋದ್ರೆ ಅಲ್ಲಿ ಮೆಡಿಕಲ್ ಕಿಟ್ ಸಹ ಕಾಣುವುದಿಲ್ಲ. ಹೊಸ ಬಸ್‍ಗಳಿಗೆ ಮಾತ್ರ ಸಿಸಿ ಕ್ಯಾಮೆರಾ ಅಳವಡಿಸಿದ್ರೆ, ಬಹುತೇಕ ಬಸ್‍ಗಳಲ್ಲಿ ಕಾಣುವುದಿಲ್ಲ. ಕ್ಯಾಮೆರಾಗಳು ಬಂದು ಸುಮಾರು 6ರಿಂದ 8 ತಿಂಗಳು ಆಯ್ತು. ಆದ್ರೆ ನಮ್ಮ ಬಸ್ ಗಳಿಗೆ ಅಳವಡಿಸಿಲ್ಲ. ಮುಂದಿನ ದಿನಗಳಲ್ಲಿ ಅಳವಡಿಸುತ್ತಾರೆ ಎಂದು ಚಾಲಕರೊಬ್ಬರು ಹೇಳಿದ್ದಾರೆ. ಮತ್ತೆ ಕೆಲ ಬಸ್ ಗಳಲ್ಲಿ ನಾಮಾಕಾವಸ್ಥೆ ಅಂತಾ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಕಾರ್ಯ ನಿರ್ವಹಿಸಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಿಳೆಯ ಜಾಗೃತಿಯಿಂದ ಉಳಿಯಿತು ನಾಲ್ವರ ಪ್ರಾಣ!

    ಮಹಿಳೆಯ ಜಾಗೃತಿಯಿಂದ ಉಳಿಯಿತು ನಾಲ್ವರ ಪ್ರಾಣ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸಿಸಿಟಿವಿ ಕ್ಯಾಮೆರಾ ಲೆಕ್ಕಿಸದೆ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇತಂಹದ್ದೇ ಘಟನೆಯೊಂದು ಇದೇ ತಿಂಗಳ 8ರಂದು ತಡರಾತ್ರಿ ನಡೆದಿದ್ದು, ಮನೆಯಲ್ಲಿದ್ದ ಮಹಿಳೆಯೊಬ್ಬರ ಜಾಗೃತಿಯಿಂದ ಕಳ್ಳರು ಕೃತ್ಯ ಎಸಗಲು ವಿಫಲರಾಗಿ ಕಾಲ್ಕಿತ್ತಿದ್ದಾರೆ.

    ಬೆಂಗಳೂರಿನ ಹೊರವಲಯದ ಬೇಗೂರು ಬಳಿಯ ದೇವರಾಜ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ದೇವರಾಜ್ ಅವರ ಪತ್ನಿ ರೂಪಾ ಎಚ್ಚರವಿದ್ದರಿಂದ ಮನೆಯಲ್ಲಿದ್ದ ನಾಲ್ವರು ಬಚಾವ್ ಆಗಿದ್ದಾರೆ. ಆರು ಜನ ಕಳ್ಳರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ವಿವರ?:
    ಮನೆಯೊಂದಕ್ಕೆ ಬಂದ ಆರು ಜನರ ಕಳ್ಳರ ತಂಡವೊಂದು ತಡರಾತ್ರಿ 3ಗಂಟೆಗೆ ನುಗ್ಗಿ, ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಮಹಿಳೆ ರೂಪಾರಿಗೆ ಎಚ್ಚರವಾಗಿ, ಅನುಮಾನ ವ್ಯಕ್ತಪಡಿಸಿ ಬಾಗಿಲ ಬಳಿ ಬಂದಿದ್ದಾರೆ. ಪಿಸು ಮಾತು, ಬಾಗಿಲನ್ನು ಕೊರೆಯುವ ಶಬ್ದ ಕೇಳಿಸಿಕೊಂಡಿದ್ದಾರೆ. ಒಳಗಿದ್ದೇ ಕಳ್ಳರನ್ನು ಬೆದರಿಸಲು ರೂಪಾ ಅವರು 10 ನಿಮಿಷ ಪ್ರಯತ್ನಿಸಿದ್ದಾರೆ. ಆದರೆ ಅವರು ಯಾವುದಕ್ಕೂ ಜಗ್ಗಲಿಲ್ಲ.

    ಭಯಗೊಂಡ ರೂಪಾ ಅವರು 6-7 ಬಾರಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಬಳಿಕ ಕರೆ ಸ್ವೀಕರಿಸಿದ ಪೊಲೀಸರು ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದಾರೆ. ವಾಹನ ಶಬ್ಧ ಕೇಳಿದ ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗಾಗಿ ಮಹಿಳೆಯ ಜಾಗೃತಿಯಿಂದ ಮನೆಯಲ್ಲಿದ್ದ ನಾಲ್ವರು ಬಚಾವ್ ಆಗಿದ್ದಾರೆ.

    ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ಷಣಾರ್ಧದಲ್ಲಿ ಕಾರ್ ಗ್ಲಾಸ್ ಒಡೆದು 10 ಲಕ್ಷ ಎಗರಿಸಿದ ಕಳ್ಳರು: ವಿಡಿಯೋ ನೋಡಿ

    ಕ್ಷಣಾರ್ಧದಲ್ಲಿ ಕಾರ್ ಗ್ಲಾಸ್ ಒಡೆದು 10 ಲಕ್ಷ ಎಗರಿಸಿದ ಕಳ್ಳರು: ವಿಡಿಯೋ ನೋಡಿ

    ಬೆಂಗಳೂರು: ಹಾಡಹಗಲೇ ನೆಲಮಂಗಲದಲ್ಲಿ ಕಾರಿನ ಗ್ಲಾಸ್ ಒಡೆದು ಕ್ಷಣಾರ್ಧದಲ್ಲಿ 10 ಲಕ್ಷ ರೂ. ಲಪಟಾಯಿಸಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಸುರೇಶ್ ಎಂಬವರಿಗೆ ಸೇರಿದ್ದ ಹಣವನ್ನು ಬುಧವಾರ ಕಳ್ಳರು ಎಗರಿಸಿದ್ದಾರೆ. ಎರಡು ಪಲ್ಸರ್ ಬೈಕ್‍ನಲ್ಲಿ ಬಂದಿದ್ದ ಮೂವರು ಈ ಕೃತ್ಯ ಎಸಗಿದ್ದಾರೆ. ಜನರು ಇದ್ದರೂ ಲೆಕ್ಕಿಸದ ಕಳ್ಳರು, ಕಾರಿನ ಗಾಜು ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ.

    ವಿಡಿಯೋದಲ್ಲಿ ಏನಿದೆ?:
    ಎರಡು ಬ್ಲಾಕ್ ಕಲರ್ ಪಲ್ಸರ್ ಬೈಕ್‍ನಲ್ಲಿ ಇಬ್ಬರು ಕಳ್ಳರು ಬಂದಿದ್ದು, ಒಬ್ಬ ಅಂಗಡಿ ಮುಂಭಾಗದಲ್ಲಿ ನಿಂತಿದ್ದ ಕಾರಿನ ಪಕ್ಕದಲ್ಲಿ ನಿಲ್ಲುತ್ತಾನೆ. ಬಳಿಕ ಮತ್ತೊಬ್ಬ ಕಾರಿನ ಹಿಂಬದಿಯಲ್ಲಿ ನಿಂತಿರುತ್ತಾನೆ. ಕೆಲವು ಜನ ಕಾರಿನ ಮುಂದೆ ಮಾತನಾಡುತ್ತಿದ್ದರೂ, ಕಳ್ಳರು ಪಕ್ಕದ ಕಾರಿನ ಗಾಜು ಒಡೆದಿದ್ದಾರೆ. ತಕ್ಷಣವೇ ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ. ಈ ಇಬ್ಬರ ಜೊತೆ ಮೂರನೆಯವನು ಕೂಡ ಸೇರಿಕೊಂಡಿದ್ದು, ನಂತರ ಮೂವರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಅಂಗಡಿಯಿಂದ ಹೊರ ಬಂದ ಇಬ್ಬರು ಮಹಿಳೆಯರು ಎಷ್ಟೇ ಕೂಗಿದರೂ ನಿಲ್ಲದೆ ಅಲ್ಲದೆ ಕಾಲ್ಕಿತ್ತಿದ್ದಾರೆ. ಆರೋಪಿಗಳು ಹೆಲ್ಮೆಟ್ ಹಾಕಿಕೊಂಡು ಕೃತ್ಯ ಎಸಗಿದ್ದಾರೆ.

    ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/doJiE7LvvKI

     

  • ಆಯುಕ್ತರ ಎದುರೇ ದೂರುದಾರನ ಮೇಲೆ ನಗರಸಭೆ ಕೈ ಸದಸ್ಯನಿಂದ ಹಲ್ಲೆ

    ಆಯುಕ್ತರ ಎದುರೇ ದೂರುದಾರನ ಮೇಲೆ ನಗರಸಭೆ ಕೈ ಸದಸ್ಯನಿಂದ ಹಲ್ಲೆ

    ಕೋಲಾರ: ಸಮಸ್ಯೆ ಕುರಿತು ದೂರು ನೀಡಲು ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆಯೇ ಕೆಜಿಎಫ್ ನಗರ ಸಭೆ ಕಾಂಗ್ರೆಸ್ ಸದಸ್ಯರೊಬ್ಬರು ಮಾರಣಾತಿಂಕವಾಗಿ ಹಲ್ಲೆ ಮಾಡಿ ಗುಂಡಾ ವರ್ತನೆ ಮೆರೆದಿದ್ದಾರೆ.

    ಕೆಜಿಎಫ್‍ನ 33ನೇ ವಾರ್ಡ್ ನಿವಾಸಿ ಭಾಸ್ಕರ್ ಹಲ್ಲೆಗೆ ಒಳಗಾದ ದೂರುದಾರ. ಸ್ಟಾನ್ಲಿ ಹಲ್ಲೆ ನಡೆಸಿದ ನಗರಸಭೆ ಸದಸ್ಯ. ನಗರಸಭೆ ಆಯುಕ್ತ ಶ್ರೀಕಾಂತ್ ಎದುರಲ್ಲೇ ಘಟನೆ ನಡೆದಿದ್ದು, ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

    ನಡೆದದ್ದು ಏನು?
    ಕೆಜಿಎಫ್‍ನ 33ನೇ ವಾರ್ಡ್ ರಾಜಕಾಲುವೆಯನ್ನು ಒತ್ತುವರಿ ಮಾಡಲಾಗಿದೆ ಅಂತಾ ದೂರು ನೀಡಲು ಭಾಸ್ಕರ್ ಆಯುಕ್ತರ ಕಚೇರಿಗೆ ಬಂದಿದ್ದರು. ಆಗ ಅಲ್ಲಿಯೇ ಇದ್ದ ಸ್ಟಾನ್ಲಿ ನನ್ನ ವಿರುದ್ಧವೇ ದೂರು ನೀಡುತ್ತೀಯಾ ಥಳಿಸಿದ್ದಾರೆ. ಅಷ್ಟಕ್ಕೆ ಬಿಡದೇ ಸ್ಟಾನ್ಲಿ ಸಹಚರರು ಆಯುಕ್ತರ ಎದುರಲ್ಲಿಯೇ ಭಾಸ್ಕರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

    ಈ ಕುರಿತು ಬುಧವಾರ ಮಧ್ಯಾಹ್ನ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದ ಭಾಸ್ಕರ್ ಮೇಲೆ, ಕೆಲ ಪೊಲೀಸ್ ಅಧಿಕಾರಿಗಳು ರೇಗಾಡಿದ್ದಾರೆ. ನಿನ್ನದೆ ತಪ್ಪು ಇದೆ, ಸುಮ್ಮನೆ ಇಲ್ಲಿಂದ ಹೋಗು ಅಂತಾ ಗದರಿಸಿದ್ದರಂತೆ. ಸಂಜೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಎಫ್‍ಐಆರ್ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

    ಭಾಸ್ಕರ್ ಮಾನವ ಹಕ್ಕುಗಳ ಜಾಗೃತಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಇದರಿಂದಾಗಿ ನಗರಸಭೆ ಸದಸ್ಯರ ಅಕ್ರಮಗಳನ್ನು ಹೊರ ಹಾಕುತ್ತಿದ್ದರು. ಹಳೇ ವೈಷಮ್ಯದಿಂದ ಭಾಸ್ಕರ್ ಮೇಲೆ ಸ್ಟಾನ್ಲಿ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv