Tag: ಸಿಯೋಲ್ ಶಾಂತಿ ಪ್ರಶಸ್ತಿ

  • ವಿನಾಯ್ತಿ ಬೇಡ, ಶಾಂತಿ ಪ್ರಶಸ್ತಿಗೆ ತೆರಿಗೆ ಪಾವತಿಸುತ್ತೇನೆ – ಮೋದಿ ಪತ್ರ

    ವಿನಾಯ್ತಿ ಬೇಡ, ಶಾಂತಿ ಪ್ರಶಸ್ತಿಗೆ ತೆರಿಗೆ ಪಾವತಿಸುತ್ತೇನೆ – ಮೋದಿ ಪತ್ರ

    – ತೆರಿಗೆ ವಿನಾಯಿತಿ ನೀಡಿದ್ದ ಐಟಿ ಇಲಾಖೆ
    – ಸಾಮಾನ್ಯರಂತೆ ನಾನೂ ತೆರಿಗೆ ಕಟ್ಟುತ್ತೇನೆಂದ ಪ್ರಧಾನಿ

    ನವದೆಹಲಿ: ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದು, ಸಾಮಾನ್ಯರಂತೆ ನಾನೂ ಸಹ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇನೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಕೊರಿಯಾ ಸರ್ಕಾರ 2018ನೇ ಸಾಲಿನ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರಶಸ್ತಿಯ ಭಾಗವಾಗಿ 1.30 ಕೋಟಿ ರೂ. ನಗದನ್ನು ಮಾರ್ಚ್ 6ರಂದು ನೀಡಿತ್ತು. ಇದಕ್ಕೆ ಕೇಂದ್ರ ನೇರ ತೆರಿಗೆ ವಿಭಾಗ(ಸಿಬಿಡಿಟಿ) ಐಟಿ ಕಾಯ್ದೆಯ ಸೆಕ್ಷನ್ 10(17ಎ)(ಐ) ಅಡಿ ಸಿಯೋಲ್ ಶಾಂತಿ ಪ್ರಶಸ್ತಿಗೆ ತೆರಿಗೆ ವಿನಾಯಿತಿ ನೀಡಿತ್ತು.

    ಈ ವಿಷಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಡವಾಗಿ ತಿಳಿದಿದೆ. ನಂತರ ಪ್ರಧಾನಿ ಮೋದಿ ಆಗಸ್ಟ್ 11ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಪತ್ರ ಬರೆದಿದ್ದು, ಪ್ರಶಸ್ತಿಯ ನಗದಿನ ಮೇಲಿನ ತೆರಿಗೆಗೆ ಹಣಕಾಸು ಸಚಿವಾಲಯ ವಿನಾಯಿತಿ ನೀಡಿದೆ ಎಂದು ತಿಳಿಯಿತು. ಲೋಕಸಭಾ ಚುನಾವಣೆ ಹಾಗೂ ಇತರೆ ಒತ್ತಡಗಳ ಮಧ್ಯೆ ನಿಮಗೆ ಬೇಗನೇ ಪತ್ರ ಬರೆದು ತಿಳಿಸಲು ಸಾಧ್ಯವಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

    ಇದನ್ನು ಸಾಮಾನ್ಯ ನಗದು ಎಂದು ಪರಿಗಣಿಸಿ ಎಲ್ಲರಿಗೂ ವಿಧಿಸಿದಂತೆ ನನಗೂ ತೆರಿಗೆ ವಿಧಿಸಿ. ಆದಾಯ ತೆರಿಗೆ ಪಾವತಿ ದೇಶದ ಬೆಳವವಣಿಗೆಗೆ ನೀಡುವ ಕೊಡುಗೆಯಾಗಿದೆ. ನಿಮ್ಮ ಹಿಂದಿನ ಆದೇಶವನ್ನು ಮರು ಪರಿಶೀಲಿಸಿ ಅದನ್ನು ಹಿಂಪಡೆಯುವಂತೆ ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.

    ಸಿಯೋಲ್ ಶಾಂತಿ ಪ್ರಶಸ್ತಿಯಂತಹ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಭಾರತ ಗೆದ್ದಾಗಲೆಲ್ಲ ಪ್ರತಿಯೊಬ್ಬ ಭಾರತೀಯನ ಹೃದಯ ಹೆಮ್ಮೆಯಿಂದ ಹಿಗ್ಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಪ್ರಶಸ್ತಿಯ ಹಣವನ್ನು ನಮಾಮಿ ಗಂಗಾ ಯೋಜನೆಗೆ ನೀಡುವುದಾಗಿ ಈ ಹಿಂದೆಯೇ ಪ್ರಧಾನಿ ಮೋದಿ ತಿಳಿಸಿದ್ದರು.

    ಸಿಬಿಡಿಟಿ ಆಗಸ್ಟ್ 14ರಂದು ಮತ್ತೆ ಆದೇಶ ಹೊರಡಿಸುವ ಮೂಲಕ ತನ್ನ ಹಿಂದಿನ ಆದೇಶವನ್ನು ಹಿಂಪಡೆದಿದೆ. ಆದಾಯ ತೆರಿಗೆ ಕಾಯ್ದೆ ಮೂಲಕ ನೀಡಲಾಗಿದ್ದ ಅಧಿಕಾರವನ್ನು ಚಲಾಯಿಸಿದ್ದು, ಕೇಂದ್ರ ಸರ್ಕಾರವು ‘ಸಿಯೋಲ್ ಶಾಂತಿ ಪ್ರಶಸ್ತಿ’ ಸಂಬಂಧ ಮಾರ್ಚ್ 6ರಂದು ಹೊರಡಿಸಿದ ಆದೇಶದಲ್ಲಿ ಪ್ರಕಟಿಸಲಾಗಿದ್ದ ತೆರಿಗೆ ವಿನಾಯಿತಿಯನ್ನು ಹಿಂಪಡೆಯುತ್ತಿದೆ. ಹೀಗಾಗಿ ತೆರಿಗೆ ಕಾಯ್ದೆಯ ಅನ್ವಯ ಈ ಪ್ರಶಸ್ತಿ ಎಲ್ಲ ನಿಯಮಗಳಿಗೆ ಒಳಪಟ್ಟಿದೆ ಎಂದು ಆದೇಶದಲ್ಲಿ ತಿಳಿಸಿದೆ.