Tag: ಸಿಮ್ ಕಾರ್ಡ್

  • ಗಮನಿಸಿ, ಆಧಾರ್ ಲಿಂಕ್ ಮಾಡದಿದ್ರೆ ರದ್ದಾಗುತ್ತೆ ಸಿಮ್ ಕಾರ್ಡ್

    ಗಮನಿಸಿ, ಆಧಾರ್ ಲಿಂಕ್ ಮಾಡದಿದ್ರೆ ರದ್ದಾಗುತ್ತೆ ಸಿಮ್ ಕಾರ್ಡ್

    ನವದೆಹಲಿ: ಆಧಾರ್ ಜೊತೆ ನಿಮ್ಮ ಸಿಮ್ ಕಾರ್ಡ್ ಲಿಂಕ್ ಆಗದೇ ಇದ್ದಲ್ಲಿ ನಿಮ್ಮ ಫೋನ್ ನಂಬರ್ ಮುಂದೆ ರದ್ದಾಗಲಿದೆ.

    ಹೌದು. ಆಧಾರ್ ಜತೆ ಸಿಮ್ ಕಾರ್ಡ್‍ಗಳನ್ನು ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಒಂದು ವೇಳೆ ಲಿಂಕ್ ಆಗದೇ ಇದ್ದಲ್ಲಿ ಆ ಸಿಮ್ ಕಾರ್ಡ್ ಗಳನ್ನು 2018ರ ಫೆಬ್ರವರಿಯ ನಂತರ ರದ್ದುಗೊಳಿಸಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

    ಲೋಕನೀತಿ ಫೌಂಡೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಶನಿವಾರ ನಡೆದ ಬಳಿಕ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಅಪರಾಧಿಗಳು, ಭಯೋತ್ಪಾದಕರು ಸಿಮ್ ಕಾರ್ಡ್‍ಗಳನ್ನು ಬಳಸುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಎಲ್ಲ ಟೆಲಿಕಾಂ ಆಪರೇಟರ್ ಗಳು ಗ್ರಾಹಕರಿಗೆ ಮೊಬೈಲ್, ಇಮೇಲ್ ಅಥವಾ ಜಾಹೀರಾತುಗಳ ಮೂಲಕ ಈ ವಿಚಾರವನ್ನು ತಿಳಿಸಬೇಕು ಎಂದು ಸೂಚಿಸಿದೆ.

    ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ಮೊಬೈಲ್ ಆಪರೇಟರ್‍ಗಳು ಸಂಗ್ರಹಿಸುವಂತಿಲ್ಲ. ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿಡುವುದು 2016ರ ಆಧಾರ್ ಕಾಯ್ದೆಯ ಅನ್ವಯ ಶಿಕ್ಷಾರ್ಹವಾಗಿದ್ದು, ಆರೋಪ ಸಾಬೀತಾದರೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

    ಇದನ್ನೂ ಓದಿ: ಕರ್ನಾಟಕದಲ್ಲಿ ದೇವರ ದರ್ಶನಕ್ಕೆ ಆಧಾರ್ ಕಡ್ಡಾಯ!

  • ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ದಿದ್ರೆ ಸಿಮ್ ಸಿಗಲ್ಲ!

    ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ದಿದ್ರೆ ಸಿಮ್ ಸಿಗಲ್ಲ!

    ನವದೆಹಲಿ: ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲವೆಂದಲ್ಲಿ ಇನ್ನು ಮುಂದೆ ಮೊಬೈಲ್ ಸಿಮ್ ಕಾರ್ಡ್ ಸಿಗಲ್ಲ.

    ಹೌದು. ಈಗಾಗಲೇ ಆದಾಯ ತೆರಿಗೆ ಲೆಕ್ಕಪತ್ರ(ಐಟಿ ರಿಟರ್ನ್ಸ್) ಸಲ್ಲಿಸುವ ವೇಳೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಹೇಳಿರುವ ಕೇಂದ್ರ ಸರ್ಕಾರ ಇದೀಗ ಮೊಬೈಲ್ ಸಿಮ್ ಪಡೆಯಲು ಕೂಡ ಆಧಾರ್ ಕಾರ್ಡ್ ಕಡ್ಡಾಯ ಮಾಡಲು ಮುಂದಾಗಿದೆ.

    ಈ ಸಂಬಂಧ ಟೆಲಿಕಾಂ ಇಲಾಖೆ ಎಲ್ಲಾ ಟೆಲಿಕಾಂ ಕಂಪೆನಿಗಳಿಗೂ ನೋಟಿಸ್ ಕಳುಹಿಸಿದ್ದು, ಮೊಬೈಲ್ ಚಂದಾದಾರರ ಸಿಮ್ ಕಾರ್ಡ್‍ಗಳು ಅವರ ಆಧಾರ್ ನಂಬರ್ ಜೊತೆ ಲಿಂಕ್ ಆಗಿದೆಯೋ ಅಥವಾ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದೆ. ಮಾತ್ರವಲ್ಲದೇ ಈ ಪ್ರಕ್ರಿಯೆ ವರ್ಷದೊಳಗೆ ಪೂರ್ಣಗೊಳಿಸಬೇಕು ಅಂತಾ ಇಲಾಖೆ ತಿಳಿಸಿದೆ.

    ಈ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಎಲ್ಲಾ ಗ್ರಾಹಕರ ದಾಖಲೆಗಳನ್ನು ಆಧಾರ್ ಕಾರ್ಡ್ ಇ- ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ಮೂಲಕ ಮರುಪರಿಶೀಲನೆ ಮಾಡಲಿವೆ.

    ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ವೆರಿಫಿಕೇಶನ್ ಕೋಡ್ ನ್ನು ಕಳುಹಿಸಲಿವೆ. ಭವಿಷ್ಯದಲ್ಲಿ ವ್ಯಕ್ತಿಯ ಗುರುತು ಪತ್ತೆಗೆ ಆಧಾರ್ ಕಾರ್ಡ್ ಏಕೈಕ ಸಾಧನವಾಗಲಿದೆ ಅಂತಾ ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು.

    ಪಾನ್ ಕಾರ್ಡ್, ಐಟಿ ರಿಟರ್ನ್ಸ್ ಗೂ ಆಧಾರ್ ಕಡ್ಡಾಯ: ಕಳೆದ ಮಂಗಳವಾರವಷ್ಟೇ ಸಂಸತ್ತಿನಲ್ಲಿ ಚರ್ಚೆಯಾದ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ತಂದು ಆಧಾರ್ ಕಡ್ಡಾಯ ಎಂಬ ಅಂಶವನ್ನು ಕೇಂದ್ರ ಸರ್ಕಾರ ಸೇರಿಸಿತ್ತು. ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದೆ ಅಂತಾ ಹೇಳಲಾಗಿದೆ.

    ದೇಶದಲ್ಲಿ ಮೊದಲ ಬಾರಿಗೆ ರಿಲಯನ್ಸ್ ಜಿಯೋ ಕಂಪೆನಿ ಆಧಾರ್ ಕಾರ್ಡ್ ಮೂಲಕ ಗ್ರಾಹಕರಿಗೆ ಸಿಮ್ ಕಾರ್ಡನ್ನು ಕೆಲವೇ ನಿಮಿಷಗಳಲ್ಲಿ ವಿತರಣೆ ಮಾಡಿತ್ತು. ಗ್ರಾಹಕರು ಬೆರಳಚ್ಚು ಓತ್ತಿದಾಗಲೇ ಆಧಾರ್ ದಾಖಲೆಗಳು ಸ್ಕ್ರೀನ್‍ನಲ್ಲಿ ಕಾಣುತಿತ್ತು.