Tag: ಸಿಬಿಯ

  • Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?

    Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?

    ಬೆಂಗಳೂರು: ಸಾಧಾರಣವಾಗಿ ಸಚಿವರ ಮನೆ ಮೇಲೆ ಐಟಿ ದಾಳಿ ನಡೆಸಿದ ಬಳಿಕ ಅವರ ಸಂಬಂಧಿಕರು, ಆಪ್ತರು, ಕಚೇರಿಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯ. ಆದರೆ ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ ಬಳಿಕ ಕೇಳಿ ಬಂದ ಮತ್ತೊಂದು ಹೆಸರು ಜ್ಯೋತಿಷಿ ದ್ವಾರಕಾನಾಥ್. ಹೌದು. ದ್ವಾರಕಾನಾಥ್ ಗೂ ಡಿಕೆಶಿಗೂ ಏನು ಸಂಬಂಧ? ದ್ವಾರಕಾನಾಥ್ ಕರ್ನಾಟಕದಲ್ಲಿ ಅಷ್ಟೊಂದು ಪ್ರಭಾವಿ ವ್ಯಕ್ತಿಯೇ ಎಂದು ನೀವು ಕೇಳಬಹುದು. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಎನ್ನುವಂತೆ ಇಲ್ಲಿ ದ್ವಾರಕಾನಾಥ್ ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪವರ್‍ಫುಲ್ ಗುರು:
    ದ್ವಾರಕಾನಾಥ್ ಅವರು ಇಡೀ ರಾಜ್ಯದಲ್ಲೇ ಅತ್ಯಂತ ಪವರ್‍ಫುಲ್ ಜ್ಯೋತಿಷಿ ಎಂದೇ ಪ್ರಸಿದ್ಧಿಯಾಗಿದ್ದಾರೆ. ಆದರೆ ವಿವಾದಕ್ಕೆ ಗುರಿಯಾಗಿದ್ದು ಇದೇ ಮೊದಲ ಬಾರಿಯಲ್ಲ. ಇವರ ಮನೆಯಲ್ಲೇ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ನಿಧನರಾಗಿದ್ದರು. ಈ ಸಾವು ಸಹಜ ಸಾವಲ್ಲ, ಸಂಶಯಾಸ್ಪದ ಸಾವು. ಇದರ ಬಗ್ಗೆ ತನಿಖೆಯಾಗಬೇಕು ಎಂದು ಅರಸು ಕುಟುಂಬಸ್ಥರು ಆಗ್ರಹಿಸಿದ್ದರು. ಈ ಮೂಲಕ ಮೊದಲ ಬಾರಿಗೆ ದ್ವಾರಕಾನಾಥ್ ವಿವಾದದಲ್ಲಿ ಸಿಲುಕಿಕೊಂಡರು. ಆದರೆ ಪವರ್‍ಫುಲ್ ಶಿಷ್ಯಂದಿರ ಸಹಕಾರದಿಂದಾಗಿ ಈ ಪ್ರಕರಣದಲ್ಲಿ ಬಚಾವಾಗಿದ್ದರು.

     ಶಿಷ್ಯಂದಿರು ಯಾರೆಲ್ಲ ಇದ್ದಾರೆ?
    ಮಾಜಿ ಸಿಎಂ ದೇವರಾಜು ಅರಸು, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಸೋನಿಯಾ ರಾಜಕೀಯ ಕಾರ್ಯದರ್ಶಿ ಪ್ರಸ್ತುತ ಗುಜರಾತ್ ಕಾಂಗ್ರೆಸ್ಸಿನ ರಾಜ್ಯಸಭಾ ಅಭ್ಯರ್ಥಿ ಅಹ್ಮದ್ ಪಟೇಲ್, ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಮಹಾರಾಷ್ಟ್ರ ಮಾಜಿ ಸಿಎಂ ವಿಲಾಸ್ ರಾವ್ ದೇಶ್‍ಮುಖ್, ಎಸ್‍ಬಿ ಚವ್ಹಾಣ್, ಆಂಧ್ರ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ, ವಿಜಯ ಭಾಸ್ಕರ್ ರೆಡ್ಡಿ, ಧರಂ ಸಿಂಗ್, ಮಾಜಿ ಸಿಎಂ ಎಸ್‍ಎಂ ಕೃಷ್ಣ, ನಫೀಜ್ ಪಾಜಲ್, ಪ್ರೊ. ಬಿಕೆ ಚಂದ್ರಶೇಖರ್, ಉದ್ಯಮಿ ಅನಿಲ್ ಅಂಬಾನಿ, ಬಾಲಿವುಡ್ ನಟ-ನಟಿಯರು ದ್ವಾರಕನಾಥ್ ಬಳಿ ಜ್ಯೋತಿಷ್ಯ ಕೇಳುತ್ತಾರೆ ಎನ್ನುವ ಮಾಹಿತಿ ಸಿಕ್ಕಿದೆ.

    ಪ್ರಭಾವಿಯಾಗಲು ಕಾರಣ ಏನು?
    ದ್ವಾರಕಾನಾಥ್ ತಂದೆ ಹೆಸರಾಂತ ಜ್ಯೋತಿಷಿ ಬೆಳ್ಳೂರು ಶಂಕರನಾರಾಯಣ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ತಂದೆ ವಾಸವಿದ್ದ ಮನೆಯ ರಸ್ತೆಗೆ ಬಿ.ಎಸ್.ಶಂಕರನಾರಾಯಣ ರಸ್ತೆ ಅಂತ ನಾಮಕರಣ ಮಾಡಿಸಿದ್ದರು. ಈ ನಾಮಕರಣ ಕಾರ್ಯಕ್ರಮಕ್ಕೆ ಧರಂ ಸಿಂಗ್, ವಿಲಾಸ್‍ರಾವ್ ದೇಶ್‍ಮುಖ್, ಸುಶೀಲ್‍ಕುಮಾರ್ ಶಿಂಧೆ, ನಟವರ್ ಸಿಂಗ್ ಭಾಗವಹಿಸಿದ್ದರು. ಸದ್ಯ ಜ್ಯೋತಿಷಿ ದ್ವಾರಕಾನಾಥ್ ಬೆಂಗಳೂರಿನ ಆರ್ ಟಿ ನಗರದಲ್ಲಿ ವಾಸವಾಗಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಓರ್ವ ಪುತ್ರಿ, ಓರ್ವ ಪುತ್ರನಿದ್ದು ಇವರಿಬ್ಬರು ವೈದ್ಯರನ್ನೇ ಮದುವೆಯಾಗಿದ್ದಾರೆ. ಇವರು ಶೀಘ್ರದಲ್ಲೇ ಕೋರಮಂಗಲದಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಡಯಾಬಿಟಿಕ್ ಕೇಂದ್ರ ಪ್ರಾರಂಭಿಸಲಿದ್ದು, ಈ ಕೇಂದ್ರದ ವ್ಯವಹಾರವೇ ಜ್ಯೋತಿಷಿಗೆ ಮುಳುವಾಗುವ ಸಾಧ್ಯತೆ ಇದೆ.

    ಜ್ಯೋತಿಷಿ ಆಗುವುದಕ್ಕೂ ಮೊದಲು ಏನಾಗಿದ್ರು?
    ಈ ಹಿಂದೆ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಕ್ಲರ್ಕ್ ಆಗಿ ದ್ವಾರಕಾನಾಥ್ ಕೆಲಸ ಮಾಡುತ್ತಿದ್ದರು. ಅವ್ಯವಹಾರ ಆರೋಪದ ಮೇಲೆ ಮೂರು ದಶಕಗಳ ಹಿಂದೆ ಅಮಾನತುಗೊಂಡಿದ್ದರು. ಅವ್ಯವಹಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಸ್ತುತ ಗ್ರಾಮೀಣಭಿವೃದ್ಧಿ ಸಚಿವರಾಗಿರುವ ಹೆಚ್‍ಕೆ ಪಾಟೀಲ್ ಅವರ ತಂದೆ ಕೆ ಎಚ್ ಪಾಟೀಲ್ ಅಮಾನತು ಮಾಡಿಸಿದ್ದರು. ಆದರೆ ನಂತರ ಕೋರ್ಟ್ ನಲ್ಲಿ ದೋಷಮುಕ್ತರಾದ ಬಳಿಕ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕ ಜ್ಯೋತಿಷ್ಯ ವೃತ್ತಿಗಿಳಿದ ದ್ವಾರಕಾನಾಥ್ ಬಳಿಕ ಶೃಂಗೇರಿ ಶ್ರೀಶಂಕರ ಮಠಕ್ಕೆ ಆಪ್ತರಾದರು.

    ನಿಖರ ಭವಿಷ್ಯಕ್ಕೆ ಫೇಮಸ್:
    ಮೊದಲು ಇವರಿಗೆ ಮಾಜಿ ಸಿಎಂ ದೇವರಾಜು ಅರಸು ಅವರ ಪರಿಚಯವಾಗಿ ನಂತರ ಪರಮಾಪ್ತರಾದರು. ಅರಸು ಮೂಲಕ ಮಾಜಿ ಪ್ರಧಾನಿ ಇಂದಿರಾಗಾಂಧಿ ಪರಿಚಯವೂ ಆಯಿತು. ತುರ್ತು ಪರಿಸ್ಥಿತಿ ಬಳಿಕ ಚಿಕ್ಕಮಗಳೂರು ಚುನಾವಣೆಯಲ್ಲಿ ವೇಳೆ ಇಂದಿರಾ ಗೆಲುವಿನ ಭವಿಷ್ಯವನ್ನು ನಿಖರವಾಗಿ ನುಡಿದಿದ್ದ ಕಾರಣ ಇವರು ಮತ್ತಷ್ಟು ಕೈ ನಾಯಕರಿಗೆ ಹತ್ತಿರವಾದರು. 2014ರ ಲೋಕಸಭಾ ಚುನಾವಣೆಯ ವೇಳೇ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ, ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್ ಗೆ ಹೀನಾಯ ಸೋಲಾಗುತ್ತದೆ ಎಂದು ದ್ವಾರಕಾನಾಥ್ ಭವಿಷ್ಯ ನುಡಿದಿದ್ದರು.

    ಡಿಕೆಶಿಗೆ ಪರಿಚಯವಾಗಿದ್ದು ಹೇಗೆ?ಪವರ್‍ಫುಲ್ ಮಿನಿಸ್ಟರ್‍ಗೂ ಪವರ್‍ಫುಲ್ ಜ್ಯೋತಿಷಿ ದ್ವಾರಕಾನಾಥ್ ಅವರಿಗೂ ಕೆಲ ವರ್ಷಗಳಿಂದ ಆರಂ ಭಗೊಂಡ ಸ್ನೇಹವಲ್ಲ. ಎಸ್‍ಜೆಆರ್‍ಸಿ ಕಾಲೇಜಿನಲ್ಲಿ ಡಿಕೆಶಿ ವಿದ್ಯಾರ್ಥಿ ನಾಯಕರಾಗಿದ್ದಾಗಲೇ ದ್ವಾರಕಾನಾಥ್ ಪರಿಚಯವಾಗಿತ್ತು. ಈ ಮೂಲಕ ದೇವರಾಜು ಅರಸು ಸೇರಿದಂತೆ ಪ್ರಭಾವಿ ಕಾಂಗ್ರೆಸ್ಸಿಗರ ಡಿಕೆಶಿಗೆ ಸಿಕ್ಕಿತ್ತು. ಜ್ಯೋತಿಷಿ ಪ್ರಭಾವದಿಂದಾಗಿ 25ನೇ ವಯಸ್ಸಿನಲ್ಲೇ ಡಿಕೆ ಶಿವಕುಮಾರ್ ಅವರಿಗೆ ಸಾತನೂರು ಕ್ಷೇತ್ರದ ಟಿಕೆಟ್ ಸಿಕ್ಕಿತ್ತು. ಮೊದಲ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸೋತರೂ ಉಪ ಚುನಾವಣೆಯಲ್ಲಿ ಡಿಕೆಶಿ ಗೆದ್ದಿದ್ದರು. ಮೊದಲ ಬಾರಿಗೆ ಶಾಸಕರಾದ ಬೆನ್ನಲ್ಲೇ ಶಿಷ್ಯ ಡಿಕೆಶಿ ಅವರನ್ನು ಜ್ಯೋತಿಷಿ ದ್ವಾರಕಾನಾಥ್ ಸಚಿವರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ದೆಹಲಿಯ ಪ್ರಭಾವ ಬಳಸಿ ಬಂಗಾರಪ್ಪ ಸಂಪುಟದಲ್ಲಿ ಶಿವಕುಮಾರ್ ಅವರನ್ನು ಬಂಧಿಖಾನೆ ಸಚಿವರನ್ನಾಗಿ ನೇಮಿಸುವಲ್ಲೂ ಮಹತ್ವದ ಪಾತ್ರವಹಿಸಿದ್ದರು.

    ಸಿಬಿಐ ಬಲೆಗೆ ಬಿದ್ದ ಜ್ಯೋತಿಷಿ:
    ಮಗಳನ್ನು ಡಾಕ್ಟರ್ ಮಾಡಲು ಹೋಗಿ ಸಿಬಿಐ ಬಲೆಗೂ ಬಿದಿದ್ದ ಜ್ಯೋತಿಷಿ ದ್ವಾರಕಾನಾಥ್ ಬಿದ್ದಿದ್ದರು. ಪರಮಾಪ್ತ ಶಿಷ್ಯ ಧರಂ ಸಿಂಗ್ ಸಿಎಂ ಆಗಿದ್ದಾಗ ಅವಧಿಯಲ್ಲಿ ರಾಜೀವ್‍ಗಾಂಧಿ ಆರೋಗ್ಯ ವಿವಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ತಮ್ಮ ಮಗಳಿಗೆ ಪಿಜಿ ಸೀಟ್ ಕೊಡಿಸಿದ್ದು ದೊಡ್ಡ ವಿವಾದವಾಗಿ ಸಿಬಿಐ ತನಿಖೆಯೂ ನಡೆದಿತ್ತು. ತಮ್ಮ ಮಗಳನ್ನು ಡಾಕ್ಟರ್ ಮಾಡಲು ತಮ್ಮ ಆಪ್ತರನ್ನೇ ದ್ವಾರಕಾನಥ್ ಆರೋಗ್ಯ ವಿವಿಯ ಉಪಕುಲಪತಿ ಮಾಡಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಉಪ ಕುಲಪತಿ ಡಾ.ಪ್ರಭಾಕರ್, ಜ್ಯೋತಿಷಿ ಪುತ್ರಿಯೂ ಸಿಬಿಐ ತನಿಖೆ ಎದುರಿಸಬೇಕಾಯಿತು.

    ಜ್ಯೋತಿಷಿ ದ್ವಾರಕನಾಥ್ ಅವರು ತಮ್ಮ ಬಿ ಎಸ್ ರಾಘವನ್‍ಗೂ ಪ್ರಭಾವಿ ಹುದ್ಡೆ ಕೊಡಿಸಿದ್ದರು ಎಂದು ಹೇಳಲಾಗುತ್ತಿದೆ. ರಾಮಕೃಷ್ಣ ಹೆಗಡೆ ಅವಧಿಯಲ್ಲಿ ರಾಘವನ್‍ಗೆ ಕರ್ನಾಟಕ ರಾಜ್ಯ ಕ್ರೀಡಾ ಸಮಿತಿ ಅಧ್ಯಕ್ಷರೂ ಆಗಿದ್ದರು. ನಂತರ ಬಿ ಎಸ್ ರಾಘವನ್ ಕೆಲವೊಂದಿಷ್ಟು ಪೊಲೀಸ್ ತನಿಖೆಯನ್ನೂ ಎದುರಿಸಬೇಕಾಯಿತು.

    ಇದನ್ನೂ ಓದಿ: ಗಾಲ್ಫ್ ಆಡೋ ನೆಪದಲ್ಲಿ ಎಂಟ್ರಿಕೊಟ್ಟು ಡಿಕೆಶಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದು ಹೀಗೆ