Tag: ಸಿಬಿಐ

  • ಜಾಮೀನು ಕೋರಿ ಕೇಜ್ರಿವಾಲ್ ಅರ್ಜಿ- ಸಿಬಿಐಗೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್

    ಜಾಮೀನು ಕೋರಿ ಕೇಜ್ರಿವಾಲ್ ಅರ್ಜಿ- ಸಿಬಿಐಗೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್

    ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಶುಕ್ರವಾರ ಕೇಂದ್ರ ತನಿಖಾ ದಳಕ್ಕೆ (CBI) ನೋಟಿಸ್ ಜಾರಿ ಮಾಡಿದೆ. ನ್ಯಾ. ನೀನಾ ಬನ್ಸಾಲ್ ಕೃಷ್ಣ ಸಿಬಿಐನ ಪ್ರತಿಕ್ರಿಯೆಯನ್ನು ಕೋರಿದ್ದು, ಪ್ರಕರಣದ ವಿಚಾರಣೆಯನ್ನು ಜುಲೈ 17 ಕ್ಕೆ ಮುಂದೂಡಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಅವರು ಮೊದಲು ವಿಚಾರಣಾ ನ್ಯಾಯಾಲಯಕ್ಕೆ ತೆರಳುವ ಬದಲು ನೇರವಾಗಿ ಜಾಮೀನಿಗಾಗಿ ಹೈಕೋರ್ಟ್‌ (High Court) ಮೊರೆ ಹೋಗಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ. ಈ ಅಂಶವನ್ನು ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು. ಇದಕ್ಕೂ ಮೊದಲು ಸಿಬಿಐ ಒಂದು ವಾರದಲ್ಲಿ ಉತ್ತರವನ್ನು ನೀಡಬೇಕು ಎಂದು ಹೈಕೋರ್ಟ್ ಹೇಳಿದೆ.

    ಜಾರಿ ನಿರ್ದೇಶನಾಲಯ (ED) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ ಬಂಧಿಸಿತ್ತು. ಜೂನ್ 20 ರಂದು ಇಡಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ವಿಚಾರಣಾ ನ್ಯಾಯಾಲಯದಿಂದ ಜಾಮೀನು ನೀಡಲಾಯಿತು. ಆದರೆ ನಂತರ ಜೂನ್ 25 ರಂದು ದೆಹಲಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತು. ಇದನ್ನೂ ಓದಿ: ಅಮರನಾಥ ಯಾತ್ರೆಯ ಬಳಿಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆ – ತಯಾರಿ ಆರಂಭಿಸಿದ ಬಿಜೆಪಿ

    ಈ ನಡುವೆ ಜೂನ್ 26ರಂದು ಸಿಬಿಐ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು, ಜೂನ್ 29ರವರೆಗೆ ಸಿಬಿಐ ಕಸ್ಟಡಿಗೆ ನೀಡಿದೆ. ಜೂನ್ 29 ರಂದು ಸಿಬಿಐ ಕಸ್ಟಡಿ ವಿಸ್ತರಣೆಯನ್ನು ಕೋರದ ಹಿನ್ನೆಲೆಯಲ್ಲಿ ಜುಲೈ 12 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಸಿಬಿಐ ಬಂಧನ ಪ್ರಶ್ನಿಸಿ ಮತ್ತು ಜಾಮೀನು ಕೋರಿ ಕೇಜ್ರಿವಾಲ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

  • ಎಲ್ಲವನ್ನೂ ಸಿಬಿಐಗೆ ಕೊಡಲು ಸಾಧ್ಯವಿಲ್ಲ: ಪರಮೇಶ್ವರ್

    ಎಲ್ಲವನ್ನೂ ಸಿಬಿಐಗೆ ಕೊಡಲು ಸಾಧ್ಯವಿಲ್ಲ: ಪರಮೇಶ್ವರ್

    ಬೆಂಗಳೂರು: ಮುಡಾ 50:50 ಅನುಪಾತ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದು, ಗೃಹಸಚಿವ ಜಿ. ಪರಮೇಶ್ವರ್ (G. Parameshwar) ಪ್ರತಿಕ್ರಿಯಿಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಕುರಿತು ವೆರಿಫೈ ಮಾಡುತ್ತಿದ್ದಾರೆ. ಎಲ್ಲವನ್ನೂ ಸಿಬಿಐ ಗೆ ಕೊಡಲು ಸಾಧ್ಯವಿಲ್ಲ. ಅವರು ಕೇಳ್ತಾರೆ ಅಂತಾ ಎಲ್ಲವನ್ನೂ ಸಿಬಿಐಗೆ ಕೊಡಲು ಆಗಲ್ಲ ಎಂದು ಹೇಳಿದರು.

    ಸಿಎಂ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಎಲ್ಲವನ್ನೂ ಸಿಬಿಐ ತನಿಖೆಗೆ ಕೊಟ್ರೆ ಇಲ್ಲೇನೂ ಮಾಡೋ ಆಗಿಲ್ವಾ..?. ಅಸೆಂಬ್ಲಿಯಲ್ಲಿ ಅವರು ಯಾವ ವಿಷಯ ಚರ್ಚೆಗೆ ತಗೋತಾರೋ ಗೊತ್ತಿಲ್ಲ. ಸ್ಪೀಕರ್ ಗೆ ಯಾವ ವಿಚಾರದ ಬಗ್ಗೆ ಲೆಟರ್ ಕೊಡ್ತಾರೋ ನೋಡಬೇಕು. ಬಿಜೆಪಿಯವರಿಗೆ ನಾವು ಉತ್ತರ ಕೊಡ್ತೀವಿ, ಹಿಂಜರಿವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಖುಷಿ ಸುದ್ದಿ ಸದ್ಯದಲ್ಲೇ ಕೊಡ್ತೀವಿ- ತರುಣ್ ಮದುವೆ ಬಗ್ಗೆ ಮಾಲತಿ ಸುಧೀರ್ ಪ್ರತಿಕ್ರಿಯೆ

    ರಾಜ್ಯದಲ್ಲಿ ಹೊಸ ಕಾನೂನು ನೀತಿ ಜಾರಿಗೆ ತರುವುದಕ್ಕೆ ಕಾನೂನು ಸಚಿವರು ಪ್ರಸ್ತಾಪ ಮಾಡಿದ್ದಾರೆ. ಇಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆಗೆ ಬರಲಿದೆ. ಗ್ರಾಮ ಮಟ್ಟದಲ್ಲಿ ನ್ಯಾಯ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಬಗ್ಗೆ ಚರ್ಚೆ ಆಗಲಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

    ಬಿಜೆಪಿ ನಾಯಕರು ವಾಗ್ದಾಳಿ: ಮುಡಾ 50:50 ಅನುಪಾತ ಅವ್ಯವಹಾರ ಆರೋಪದ ಕುರಿತು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಆರ್. ಅಶೋಕ್ (R. Ashok) ಆಗ್ರಹಿಸಿದರೆ, ಸಿದ್ದರಾಮಯ್ಯ ಅವರ ತಪ್ಪು ಇಲ್ಲ ಅಂದ್ರೆ ಸಿಬಿಐಗೆ ಕೊಡಲಿ. ಸಿಎಂ ಸಿದ್ದರಾಮಯ್ಯ ಮುಡಾದ ಫಲಾನುಭವಿಗಳು. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಲಿ ಎಂದು ಸಿ.ಟಿ ರವಿ ಆಗ್ರಹಿಸಿದ್ದಾರೆ.

  • ಸಿಬಿಐ ಬಂಧನ- ಜಾಮೀನು ಕೋರಿ ಕೇಜ್ರಿವಾಲ್ ಅರ್ಜಿ

    ಸಿಬಿಐ ಬಂಧನ- ಜಾಮೀನು ಕೋರಿ ಕೇಜ್ರಿವಾಲ್ ಅರ್ಜಿ

    ನವದೆಹಲಿ: ಹೊಸ ಅಬಕಾರಿ ನೀತಿ ಅಕ್ರಮ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಪಟ್ಟಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾಮೀನು ಕೋರಿ ದೆಹಲಿ ಹೈಕೋರ್ಟ್‌ಗೆ (Delhi Highcourt) ಅರ್ಜಿ ಸಲ್ಲಿಸಿದ್ದಾರೆ‌. ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ಪೀಠ ಹೇಳಿದೆ.

    ಜಾರಿ ನಿರ್ದೇಶನಾಲಯ (ED) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26 ರಂದು ಸಿಬಿಐ ಬಂಧಿಸಿತ್ತು. ವಿಚಾರಣೆ ಬಳಿಕ ಸಿಬಿಐ ಕೂಡಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

    ಮಹತ್ವದ ಬೆಳವಣಿಗೆಯಲ್ಲಿ ಕೇಜ್ರಿವಾಲ್ (Aravind Kejriwal) ನೇರವಾಗಿ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 439 ರ ಅಡಿಯಲ್ಲಿ ಜಾಮೀನಿಗಾಗಿ ನೇರವಾಗಿ ಹೈಕೋರ್ಟ್‌ಗೆ ಹೋಗಲು ಯಾವುದೇ ಅಡ್ಡಿ ಇಲ್ಲ ಎಂದು ವಕೀಲರು ಹೇಳಿದ್ದಾರೆ.

    ಸಿಬಿಐ ತನ್ನ ಬಂಧನವನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿಯ ಮನವಿ ಮತ್ತು ಅವರನ್ನು ಏಜೆನ್ಸಿಯ ಕಸ್ಟಡಿಗೆ ಒಪ್ಪಿಸುವ ವಿಚಾರಣಾ ನ್ಯಾಯಾಲಯದ ಆದೇಶವೂ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಜುಲೈ 12 ರಂದು ನಡೆಯುವ ವಿಚಾರಣೆ ಅರವಿಂದ್ ಕೇಜ್ರಿವಾಲ್ ಅವರಿಗೆ ಮಹತ್ವದಾಗಿದೆ.

  • ಕೇಜ್ರಿವಾಲ್‌ ಬಂಧನ- ಸಿಬಿಐಗೆ ದೆಹಲಿ ಹೈಕೋರ್ಟ್‌ ನೋಟಿಸ್‌

    ಕೇಜ್ರಿವಾಲ್‌ ಬಂಧನ- ಸಿಬಿಐಗೆ ದೆಹಲಿ ಹೈಕೋರ್ಟ್‌ ನೋಟಿಸ್‌

    ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಮಂಗಳವಾರ ಕೇಂದ್ರ ತನಿಖಾ ದಳಕ್ಕೆ (CBI) ನೋಟಿಸ್ ಜಾರಿ ಮಾಡಿದೆ.

    ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ತನ್ನನ್ನು ಬಂಧಿಸಿರುವುದನ್ನು ಕೇಜ್ರಿವಾಲ್ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಸಂಬಂಧ ಇಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ (Neena Bansal Krishna) ನೇತೃತ್ವದ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಬಳಿಕ ಕೋರ್ಟ್ ಸಿಬಿಐಗೆ ನೋಟಿಸ್ ಜಾರಿ ಮಾಡಿದ್ದು, 7 ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.

    ಸಿಬಿಐನ ಬಂಧನ ಮತ್ತು ರಿಮಾಂಡ್ ಆದೇಶವನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ, ದೆಹಲಿ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ (Abhishek Manu Singhvi), ಬಂಧನದ ಅವಶ್ಯಕತೆ ಏನು? ಸಿಬಿಐ ಕೇಜ್ರಿವಾಲ್ ಅವರನ್ನು ಜೂನ್‌ನಲ್ಲಿ ಬಂಧಿಸುವ ಪ್ರಶ್ನೆಯೇ ಇಲ್ಲ. 2022 ರ ಎಫ್‌ಐಆರ್ ಅನ್ನು ಏಪ್ರಿಲ್ 2023 ರಲ್ಲಿ ವಿಚಾರಣೆ ನಡೆಸಲಾಯಿತು ಮತ್ತು ಈಗ 2024 ರ ಜೂನ್‌ನಲ್ಲಿ ಬಂಧಿಸಲಾಗಿದೆ. ಏಜೆನ್ಸಿಗೆ ಕೆಲವು ಕಾರಣವಿರಬೇಕು ಅಥವಾ ಬಂಧನಕ್ಕೆ ಆಧಾರವಾಗಿ ಕೇಜ್ರಿವಾಲ್ ಅವರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದರು ಎಂದು ವಾದಿಸಿದರು.

    ಈ ಕುರಿತು ನ್ಯಾಯಾಲಯವು ನೀವು ಬಂಧನವನ್ನು ರದ್ದುಪಡಿಸಲು ಮತ್ತು ಕಸ್ಟಡಿಯಿಂದ ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದೀರಿ ಎಂದು ಕೇಳಿತು. ಇದಕ್ಕೆ ಸಿಂಘ್ವಿ ಅವರು ಸಕಾರಾತ್ಮಕವಾಗಿ ಉತ್ತರಿಸಿದಾಗ, ಕೇಜ್ರಿವಾಲ್ ಅವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆಯೇ ಎಂದು ಕೋರ್ಟ್ ಕೇಳಿದೆ. ಈ ವೇಳೆ ಸಿಂಘ್ವಿ, ಈಗ ಅಲ್ಲ, ಆದರೆ ನಾವು ಸಲ್ಲಿಸಲು ಅರ್ಹರಾಗಿದ್ದೇವೆ. ನಾವು ಮುಂದೆ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದೇವೆ ಎಂದರು.

    ಕೇಜ್ರಿವಾಲ್ ಅವರ ಅರ್ಜಿಯ ಮೇಲೆ ಕೋರ್ಟ್ ನೋಟಿಸ್ ಜಾರಿಗೊಳಿಸಿ ಸಿಬಿಐಗೆ ನಿರ್ದೇಶಿಸಿತು. ‌ ಪ್ರಕರಣದ ಮುಂದಿನ ವಿಚಾರಣೆ ಜುಲೈ 17 ರಂದು ನಡೆಯಲಿದೆ. ಜೂನ್ 29 ರಂದು, ಎಎಪಿ ಮುಖ್ಯಸ್ಥರನ್ನು ಸಿಟಿ ಕೋರ್ಟ್‌ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

  • NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್‌ – ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ

    NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಕೇಸ್‌ – ಬಿಹಾರದಲ್ಲಿ ಇಬ್ಬರನ್ನು ಬಂಧಿಸಿದ ಸಿಬಿಐ

    ನವದೆಹಲಿ: NEET-UG ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರಿಯ ತನಿಖಾ ದಳ (CBI) ಬಿಹಾರದಲ್ಲಿ (Bihar) ಇಬ್ಬರು ಆರೋಪಿಗಳನ್ನು ಬಂಧಿಸಿದೆ.

    ಪಾಟ್ನಾದ ಮನೀಶ್ ಕುಮಾರ್ ಮತ್ತು ಅಶುತೋಷ್ ಬಂಧಿತ ಆರೋಪಿಗಳು. ಸಿಬಿಐ ಮೂಲಗಳ ಪ್ರಕಾರ, ಮನೀಶ್ ಕುಮಾರ್ ತನ್ನ ಕಾರಿನಲ್ಲಿ ವಿದ್ಯಾರ್ಥಿಗಳನ್ನು ಸಾಗಿಸಲು ಅನುಕೂಲ ಮಾಡಿಕೊಟ್ಟಿದ್ದಾನೆ ಮತ್ತು ಕನಿಷ್ಠ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯನ್ನು ನೀಡಿದ್ದಾನೆ. ಅಶುತೋಷ್ ವಿದ್ಯಾರ್ಥಿಗಳಿಗೆ ವಸತಿ ಒದಗಿಸಿದ್ದಾನೆ.

    ಗುರುವಾರ ಇಬ್ಬರನ್ನು ವಿಚಾರಣೆಗಾಗಿ ಸಿಬಿಐ ಕರೆದಿತ್ತು. ವಿಚಾರಣೆಯ ಬಳಿಕ ಇಬ್ಬರ ಬಂಧನ ನಡೆದಿದೆ. ಇಬ್ಬರನ್ನು ಬಂಧನ ಮಾಡುವ ಮೊದಲು ಬಿಹಾರ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಪ್ರಶ್ನೆ ಪತ್ರಿಕೆಯ ಪ್ರತಿಯನ್ನು ತಾನು ಮತ್ತು ಇತರ ಕೆಲವರು ಪಡೆದುಕೊಂಡಿದ್ದೇವೆ ಎಂದು ಹೇಳಿದ ಅಭ್ಯರ್ಥಿಯನ್ನು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರ್ನಾಟಕ ಮುಂದಾಗುತ್ತಿದ್ದಂತೆ ಹೊಸೂರಿನಲ್ಲಿ ಏರ್ಪೋರ್ಟ್ ಘೋಷಿಸಿದ ಸ್ಟಾಲಿನ್

    ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಮೇ 5 ರಂದು ನಡೆಸಿದ ಪರೀಕ್ಷೆಯಲ್ಲಿ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಮತ್ತು 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಿದ್ದು ವಿವಾದಕ್ಕೆ ಕಾರಣವಾಗಿ ದೇಶಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು.

     

  • ಸಿಬಿಐನಿಂದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಂಧನ

    ಸಿಬಿಐನಿಂದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಂಧನ

    ನವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಸಿಬಿಐ (CBI) ಬಂಧಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಮಂಜೂರು ಮಾಡುವುದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ಪ್ರಶ್ನಿಸಿ ಕೇಜ್ರಿವಾಲ್‌, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಇದಕ್ಕೆ ಕೆಲವೇ ಗಂಟೆಗಳ ಮುಂಚೆ ಕೇಜ್ರಿವಾಲ್‌ ಅವರನ್ನು ಸಿಬಿಐ ಬಂಧಿಸಿದೆ. ಇದನ್ನೂ ಓದಿ: ಲೋಕಸಭೆಯ ಸ್ಪೀಕರ್‌ ಆಗಿ 2 ನೇ ಬಾರಿಗೆ ಓಂ ಬಿರ್ಲಾ ಆಯ್ಕೆ

    ಮದ್ಯ ನೀತಿ ಪ್ರಕರಣದಲ್ಲಿ ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ನೊಳಗೆ ಸಿಬಿಐನಿಂದ ಬಂಧಿಸಲಾಯಿತು. ಇದನ್ನೂ ಓದಿ: ನಾವು ಭಾರತದ ಜೊತೆಗಿದ್ದೇವೆ: ಪಾಕಿಸ್ತಾನ ಉಪ ಪ್ರಧಾನಿ

    ಕಳೆದ ವಾರ ರೋಸ್ ಅವೆನ್ಯೂ ಕೋರ್ಟ್ ದೆಹಲಿ ಸಿಎಂಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಇಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಜಾಮೀನು ನೀಡಿ ಅವೆನ್ಯೂ ಕೋರ್ಟ್‌ ಹೊರಡಿಸಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆ ನೀಡಿತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

  • ದೆಹಲಿ ಮದ್ಯ ಹಗರಣ – ಈಗ ಸಿಬಿಐನಿಂದ ಕೇಜ್ರಿವಾಲ್‌ ಅರೆಸ್ಟ್‌

    ದೆಹಲಿ ಮದ್ಯ ಹಗರಣ – ಈಗ ಸಿಬಿಐನಿಂದ ಕೇಜ್ರಿವಾಲ್‌ ಅರೆಸ್ಟ್‌

    ನವದೆಹಲಿ: ದೆಹಲಿ ಮದ್ಯ ಹಗರಣಕ್ಕೆ (Delhi Liquor Scam) ಸಂಬಂಧಿಸಿದಂತೆ ಸಿಎಂ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಸಿಬಿಐನಿಂದ (CBI) ಈಗ ಬಂಧನಕ್ಕೆ ಒಳಗಾಗಿದ್ದಾರೆ.

    ಈಗಾಗಲೇ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅರವಿಂದ್‌ ಕೇಜ್ರಿವಾಲ್‌ ಬಂಧನಕ್ಕೆ ಒಳಗಾಗಿ ತಿಹಾರ್‌ ಜೈಲಿನಲ್ಲಿ (Tihar Jail) ಇದ್ದಾರೆ. ಸಿಬಿಐ ಸೋಮವಾರ ತಿಹಾರ್‌ ಜೈಲಿನಲ್ಲೇ ಅರವಿಂದ್‌ ಕೇಜ್ರಿವಾಲ್‌ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಇದನ್ನೂ ಓದಿ: ಇಡಿ ವಿವರಣೆ ಪರಿಗಣಿಸಲು ಟ್ರಯಲ್‌ ಕೋರ್ಟ್‌ ವಿಫಲ – ಕೇಜ್ರಿವಾಲ್‌ ಜಾಮೀನಿಗೆ ತಡೆ

     


    ಕಳೆದ ವಾರ ತಿಹಾರ್ ಜೈಲಿನಲ್ಲಿ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಅನುಮತಿ ಕೋರಿತ್ತು. ಬುಧವಾರ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಅರವಿಂದ್ ಕೇಜ್ರಿವಾಲ್ ಅವರನ್ನು ಹಾಜರುಪಡಿಸಲು ಸಿಬಿಐ ಅನುಮತಿಯನ್ನು ಪಡೆದುಕೊಂಡಿದೆ. ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಸಿಬಿಐ ಕೋರ್ಟ್‌ಗೆ ತಿಳಿಸಿದೆ.

     

    ಆಪ್‌ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಪ್ರತಿಕ್ರಿಯಿಸಿ, ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಸಿಗುವ ಸಾಧ್ಯತೆ ಇರುವಾಗ ದೆಹಲಿ ಸಿಎಂ ವಿರುದ್ಧ ನಕಲಿ ಸಿಬಿಐ ಪ್ರಕರಣವನ್ನು ದಾಖಲಿಸಿ ಬಂಧಿಸಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಮೂಲಗಳು ನನಗೆ ತಿಳಿಸಿವೆ. ಇಡೀ ರಾಷ್ಟ್ರವು ಇದನ್ನು ನೋಡಬಹುದು ಮತ್ತು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

  • ನೀಟ್ ಪರೀಕ್ಷೆ ಅಕ್ರಮ ಸಿಬಿಐ ತನಿಖೆ ನಡೆಸಲಿ: ಶರಣ ಪ್ರಕಾಶ್ ಪಾಟೀಲ್ ಆಗ್ರಹ

    ನೀಟ್ ಪರೀಕ್ಷೆ ಅಕ್ರಮ ಸಿಬಿಐ ತನಿಖೆ ನಡೆಸಲಿ: ಶರಣ ಪ್ರಕಾಶ್ ಪಾಟೀಲ್ ಆಗ್ರಹ

    ಬೆಂಗಳೂರು: ನೀಟ್ ಪರೀಕ್ಷೆ ಅಕ್ರಮ (NEET Exam Case) ಎನ್‌ಡಿಎಯ (NDA) ದೊಡ್ಡ ಹಗರಣ. ನೀಟ್ ಅಕ್ರಮ ಕುರಿತು ಸಿಬಿಐ (CBI) ತನಿಖೆ ನಡೆಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ (Sharanprakash Patil) ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ನೀಟ್ ಅಕ್ರಮ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ನೀಟ್ ಅಕ್ರಮ ಎನ್‌ಡಿಎ ಸರ್ಕಾರದ ಹಗರಣ. ನೀಟ್ ಪರೀಕ್ಷೆ ಬಗ್ಗೆ ಯುವಕರಲ್ಲಿ ಅನುಮಾನ ಇದೆ. 24 ಲಕ್ಷ ಜನ ಪರೀಕ್ಷೆ ಬರೆದವರು ಆತಂಕದಲ್ಲಿ ಇದ್ದಾರೆ. ಸುಪ್ರೀಂ ಕೋರ್ಟ್ ಕೂಡ ಇದರಲ್ಲಿ ಕ್ರಮ ಆಗಬೇಕು ಎಂದು ಕೇಂದ್ರಕ್ಕೆ ಸೂಚನೆ ನೀಡಿದೆ. ಬುಧವಾರ ರಾತ್ರಿ ನೆಟ್ ಎಕ್ಸಾಂ (NET Exam) ಕೂಡ ಕೇಂದ್ರ ರದ್ದು ಮಾಡಿದೆ. ಇಡೀ ದೇಶದ ಯುವಕರ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟ ಆಡುತ್ತಿದೆ. ನೀಟ್ ಪರೀಕ್ಷೆ ಕುರಿತು ಸಿಬಿಐ ತನಿಖೆ ಆಗಬೇಕು. ಯುವಕರಿಗೆ ನ್ಯಾಯ ಸಿಗಬೇಕು ಅಂದರೆ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮೋದಿ ತೈಲ ಬೆಲೆ ಏರಿಕೆ ಮಾಡಿದಾಗ ಬಿಜೆಪಿಯವರು ಯಾಕೆ ಪ್ರತಿಭಟಿಸಲಿಲ್ಲ: ಎಂ.ಬಿ.ಪಾಟೀಲ್ ಪ್ರಶ್ನೆ

    ಕೇಂದ್ರ ಸರ್ಕಾರ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗೊತ್ತಿಲ್ಲ. ಯುವಕರ ವಿರೋಧಿ ಧೋರಣೆ ಇದು. ಕೇಂದ್ರ ಸರ್ಕಾರ ಯಾರನ್ನು ರಕ್ಷಣೆ ಮಾಡೋಕೆ ಹೊರಟಿದೆ ಎಂದು ಗೊತ್ತಿಲ್ಲ ಎಂದರು. ಇದನ್ನೂ ಓದಿ: ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿಲ್ಲವೇ? – ವಕೀಲರು ಕೊಟ್ಟ ಉತ್ತರವೇನು?

    ರಾಜ್ಯದಲ್ಲಿ ನೀಟ್ ರದ್ದು ಮಾಡೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೀಟ್ ರದ್ದು ಮಾಡೋಕೆ ಕಾನೂನಿನಲ್ಲಿ ಅವಕಾಶ ಇಲ್ಲ. ರಾಜ್ಯವೇ ನೀಟ್ ರದ್ದು ಮಾಡೋಕೆ ಕಾನೂನು ತೊಡಕಿದೆ. ಸುಪ್ರೀಂ ಕೋರ್ಟ್ನಿಂದಲೇ ಕಾನೂನು ಆಗಿರೋದು. ಆದರೂ ನೀಟ್‌ನಲ್ಲಿ ಯುವಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ದೇಶಾದ್ಯಂತ ಹೋರಾಟ ಆಗೋ ಸಾಧ್ಯತೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಹಜ್ ಯಾತ್ರೆಗೆ ತೆರಳಿದ್ದ ಬೆಂಗ್ಳೂರಿನ ಇಬ್ಬರು ಸಾವು – ಕರ್ನಾಟಕದ 10,000ಕ್ಕೂ ಹೆಚ್ಚು ಮಂದಿ ಸೇಫ್‌!

  • ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

    ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ರೂ. ಹಗರಣಕ್ಕೆ ತಲೆದಂಡ – ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರದ ಮೊದಲ ವಿಕೆಟ್‌ ಪತನವಾಗಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಧಿಸಿದಂತೆ ಸಚಿವ ನಾಗೇಂದ್ರ (B Nagendra) ರಾಜೀನಾಮೆ ನೀಡಿದ್ದಾರೆ.

    ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾಗಿರುವ ನಾಗೇಂದ್ರ ಅವರಿಗೆ ತನಿಖೆ ಮುಗಿಯುವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸರ್ಕಾರ ಸೂಚಿಸಿದೆ. ಈ ಸಂಬಂಧ ಹೈಕಮಾಂಡ್ ಜೊತೆ ಸಿಎಂ, ಡಿಸಿಎಂ ಮಾತುಕತೆ ನಡೆಸಿದ ಬಳಿಕ ನಾಗೇಂದ್ರ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

     

    ಈಗಾಗಲೇ ಪ್ರಕರಣ ಸಂಬಂಧ ಸಿಬಿಐ (CBI) ಎಫ್‌ಐಆರ್‌ ದಾಖಲಿಸಿದೆ. ಈ ಪ್ರಕರಣದ ತನಿಖೆ ಸಿಬಿಐಗೆ ಹೋದಲ್ಲಿ ಸಚಿವ ಸ್ಥಾನದಲ್ಲಿ ಮುಂದುವರೆಯುವುದು ಕಷ್ಟ. ಬಳಿಕ ರಾಜೀನಾಮೆ ನೀಡಿದರೆ ಸರ್ಕಾರ, ಪಕ್ಷಕ್ಕೆ ಮುಜುಗರವಾಗಲಿದೆ. ಅದರ ಬದಲು ಈಗಲೇ ರಾಜೀನಾಮೆ ಕೊಡುವಂತೆ ಸೂಚನೆ ನೀಡಲಾಗಿತ್ತು.

    ಬುಧವಾರ ನಾಗೇಂದ್ರ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರೆ ಬೇರೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ರಾಜೀನಾಮೆ ನೀಡುವುದು ಸೂಕ್ತ ಎಂದು ಸಲಹೆ ನೀಡಿದ್ದರು.

     

  • ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!

    ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಗರಣ – ಇಂದೇ ನಾಗೇಂದ್ರ ರಾಜೀನಾಮೆ ಸಾಧ್ಯತೆ!

    ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೇ ಸಚಿವ ನಾಗೇಂದ್ರ (B Nagendra) ಸ್ವಯಂ ರಾಜೀನಾಮೆ ನೀಡುವ ಸಾಧ್ಯತೆಯಿದೆ.

    ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾಗಿರುವ ನಾಗೇಂದ್ರ ಅವರಿಗೆ ತನಿಖೆ ಮುಗಿಯುವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸರ್ಕಾರ ಸೂಚಿಸಿದೆ. ಈ ಸಂಬಂಧ ಹೈಕಮಾಂಡ್ ಜೊತೆ ಸಿಎಂ ಸಿದ್ದರಾಮಯ್ಯ,  ಡಿಸಿಎಂ ಶಿವಕುಮಾರ್‌ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

     

    ಈಗಾಗಲೇ ಪ್ರಕರಣ ಸಂಬಂಧ ಸಿಬಿಐ (CBI) ಎಫ್‌ಐಆರ್‌ ದಾಖಲಿಸಿದೆ. ಈ ಪ್ರಕರಣ ಸಿಬಿಐಗೆ ಹೋದಲ್ಲಿ ಸಚಿವ ಸ್ಥಾನದಲ್ಲಿ ಮುಂದುವರೆಯುವುದು ಕಷ್ಟ. ಬಳಿಕ ರಾಜೀನಾಮೆ ನೀಡಿದರೆ ಸರ್ಕಾರ, ಪಕ್ಷಕ್ಕೆ ಮುಜುಗರವಾಗಲಿದೆ. ಅದರ ಬದಲು ಈಗಲೇ ರಾಜೀನಾಮೆ ಕೊಡುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ರಾಜೀನಾಮೆ ಪತ್ರ ವೈರಲ್-‌ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದೇನು?

    ಬುಧವಾರ ನಾಗೇಂದ್ರ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರೆ ಬೇರೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ರಾಜೀನಾಮೆ ನೀಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ ಎನ್ನಲಾಗುತ್ತದೆ.

    ಇನ್ನೊಂದು ಕಡೆ ಬಿಜೆಪಿ ಜೂನ್‌ 6ರ ಒಳಗಡೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು. ಇಂದಿಗೆ ಡೆಡ್‌ಲೈನ್‌ ಅಂತ್ಯವಾಗಿದ್ದು ರಾಜೀನಾಮೆ ನೀಡದೇ ಇದ್ದರೆ ಬಿಜೆಪಿ ಉಗ್ರವಾಗಿ ಪ್ರತಿಭಟಿಸುವ ಸಾಧ್ಯತೆಯಿದೆ.