Tag: ಸಿಬಿಐ

  • ಭಯೋತ್ಪಾದನೆ ಆರೋಪದಿಂದ ಕುಟುಂಬ ರಕ್ಷಿಸಲು 2.5 ಕೋಟಿ ಲಂಚಕ್ಕೆ ಬೇಡಿಕೆ – NIA ಅಧಿಕಾರಿಯನ್ನೇ ಬಂಧಿಸಿದ ಸಿಬಿಐ

    ಭಯೋತ್ಪಾದನೆ ಆರೋಪದಿಂದ ಕುಟುಂಬ ರಕ್ಷಿಸಲು 2.5 ಕೋಟಿ ಲಂಚಕ್ಕೆ ಬೇಡಿಕೆ – NIA ಅಧಿಕಾರಿಯನ್ನೇ ಬಂಧಿಸಿದ ಸಿಬಿಐ

    ನವದೆಹಲಿ: ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿದ ಪ್ರಕರಣದಲ್ಲಿ ಕುಟುಂಬವೊಂದನ್ನು ರಕ್ಷಿಸಲು ವ್ಯಕ್ತಿಯೊಬ್ಬರಿಂದ 2.5 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಎನ್‌ಐಎ ಅಧಿಕಾರಿಯೊಬ್ಬರನ್ನು (NIA Officer) ಕೇಂದ್ರೀಯ ತನಿಖಾ ದಳ (CBI) ಬಂಧಿಸಿದೆ.

    ಭಯೋತ್ಪಾದನೆ ಪ್ರಕರಣದಲ್ಲಿ ತಮ್ಮ ಕುಟುಂಬವನ್ನು ಸಿಲುಕಿಸುವುದಾಗಿ ಬೆದರಿಸಿ, 2.5 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆಂದು ಆರೋಪಿಸಿ ಪಾಟ್ನಾ ಎನ್‌ಐಎ ಘಟಕದ ಉಪ ಎಸ್ಪಿ ಅಜಯ್ ಪ್ರತಾಪ್ ಸಿಂಗ್ ವಿರುದ್ಧ ರಾಮಯ್ಯ ಕನ್‌ಸ್ಟ್ರಕ್ಷನ್ ಮಾಲೀಕ ರಾಕಿ ಯಾದವ್ ಸಿಬಿಐಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಎನ್‌ಐಎ ಅಧಿಕಾರಿಯನ್ನ ಸಿಬಿಐ ಬಂಧಿಸಿದೆ. ಇದನ್ನೂ ಓದಿ: ದರ್ಶನ್‌ಗೆ ಇವತ್ತೂ ಸಿಗಲಿಲ್ಲ ಬೇಲ್‌ – ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ

    ಏನಿದು ಪ್ರಕರಣ?
    ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಳೆದ ಸೆಪ್ಟೆಂಬರ್ 19 ರಂದು ರಾಕಿ ಯಾದವ್‌ಗೆ ಸಂಬಂಧಿಸಿದ ಸ್ಥಳದಲ್ಲಿ ಶೋಧ ನಡೆಸಿತ್ತು. ಬಳಿಕ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪ್ರತಾಪ್‌ ಸಿಂಹ್‌ ಸೆ.26ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿದ ಪ್ರಕರಣದಲ್ಲಿ ತಮ್ಮ ಕುಟುಂಬವನ್ನು ರಕ್ಷಿಸಬೇಕಾದ್ರೆ 2.5 ಕೋಟಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಕುಟುಂಬದ ಸಲುವಾಗಿ ಒಪ್ಪಿಕೊಂಡಿದ್ದೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

    ಆರೋಪಿ ಪ್ರತಾಪ್‌ ಸಿಂಗ್‌ ಸೆಪ್ಟೆಂಬರ್ 26 ರಂದು 25 ಲಕ್ಷ ರೂ. ಮುಂಗಡ ಹಣ ಪಾವತಿಸಲು ಯಾದವ್‌ಗೆ ಹೇಳಿದ್ದರು. ಮಧ್ಯವರ್ತಿಯೊಬ್ಬರ ಮೊಬೈಲ್ ಸಂಖ್ಯೆ ಹೊಂದಿರುವ ಕೈಬರಹದ ಟಿಪ್ಪಣಿಯನ್ನು ಅವರಿಗೆ ನೀಡಿದರು. ನಂತರ ಬಿಹಾರದ ಔರಂಗಾಬಾದ್‌ಗೆ ತಲುಪಿ ಮಧ್ಯವರ್ತಿ ಮೂಲಕ ಹಣ ತಲುಪಿಸಿದ್ದರು. ಇದಾದ ಮೇಲೆ ಅಕ್ಟೋಬರ್ 1 ರಂದು ಸಿಂಗ್ ಮತ್ತೆ ಯಾದವ್ ಅವರನ್ನು ಕರೆಸಿ, 70 ಲಕ್ಷ ರೂ.ಗೆ ಬೇಡಿಕೆ ಇಡಲಾಗಿತ್ತು ಎಂದು ಸಿಬಿಐಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Chhattisgarh | ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ – 7 ನಕ್ಸಲರು ಬಲಿ

    ದೂರುದಾರ ಯಾದವ್‌ರಿಂದ ಅಕ್ರಮವಾಗಿ 20 ಲಕ್ಷ ರೂ. ವಸೂಲಿ ಮಾಡುತ್ತಿದ್ದಾಗ ಆರೋಪಿ ತನಿಖಾ ಅಧಿಕಾರಿ ಹಾಗೂ ಅವರ ಇಬ್ಬರು ಏಜೆಂಟರು ಸಿಬಿಐ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಮಧ್ಯವರ್ತಿ ಆರೋಪಿ ಹಿಮಾಂಶು ಮತ್ತು ರಿತಿಕ್ ಕುಮಾರ್ ಸಿಂಗ್ ಬಂಧಿತರು. ಇದಾದ ಬಳಿಕ ಗಯಾ, ಪಾಟ್ನಾ ಮತ್ತು ವಾರಣಾಸಿಯ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 20 ಲಕ್ಷ ರೂ. ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ. ಇದನ್ನೂ ಓದಿ: ಮೂರು ಜಿಲ್ಲೆಗಳ ಕಾಡಾನೆ ಹಾವಳಿ ತಡೆಗೆ ಭದ್ರಾ ಅಭಯಾರಣ್ಯದಲ್ಲಿ ಆನೆ ಶಿಬಿರ ಸ್ಥಾಪನೆ: ಈಶ್ವರ್ ಖಂಡ್ರೆ

  • ಜನಾರ್ದನ ರೆಡ್ಡಿಗೆ ಸುಪ್ರೀಂ ರಿಲೀಫ್ – ಬಳ್ಳಾರಿ ಪ್ರವೇಶಕ್ಕೆ ಗ್ರೀನ್‌ಸಿಗ್ನಲ್‌

    ಜನಾರ್ದನ ರೆಡ್ಡಿಗೆ ಸುಪ್ರೀಂ ರಿಲೀಫ್ – ಬಳ್ಳಾರಿ ಪ್ರವೇಶಕ್ಕೆ ಗ್ರೀನ್‌ಸಿಗ್ನಲ್‌

    ನವದೆಹಲಿ/ ಬಳ್ಳಾರಿ:  ಅಕ್ರಮ ಗಣಿಗಾರಿಕೆಯ (Illegal Mining) ಪ್ರಮುಖ ಆರೋಪಿ ಮಾಜಿ ಸಚಿವ ಗಂಗಾವತಿ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕ ಜನಾರ್ದನ ರೆಡ್ಡಿಗೆ (Janardhana Reddy) ಬಿಗ್ ರಿಲೀಫ್ ಸಿಕ್ಕಿದ್ದು, ಬಳ್ಳಾರಿ (Ballari) ಜಿಲ್ಲಾ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್‌ (Supreme Court) ತೆರವು ಮಾಡಿದೆ.  ಯಾವುದೇ ಪೂರ್ವಾನುಮತಿ ಇಲ್ಲದೇ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

    ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂಎಂ ಸುಂದರೇಶ್ ನೇತೃತ್ವದ ದ್ವಿ ಸದಸ್ಯ ಪೀಠ ಈ ಆದೇಶ ನೀಡಿದೆ. ಪ್ರಕರಣದ ತನಿಖೆ ಮುಕ್ತಾಯಗೊಂಡು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು ಈ ಹಂತದಲ್ಲಿ ಸಾಕ್ಷ್ಯ ನಾಶ ಸಾಧ್ಯವಿಲ್ಲ ಎನ್ನುವ ವಾದ ಪುರಸ್ಕರಿಸಿದ ಕೋರ್ಟ್ ಜಾಮೀನಿನಲ್ಲಿದ್ದ ಷರತ್ತನ್ನು ರದ್ದು ಮಾಡಿದೆ.

    ನಿಷೇಧ ಹೇರಿದ್ದು ಯಾಕೆ?
    ಆಂಧ್ರದ ಅನಂತಪುರ, ಕರ್ನೂಲು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ 2011 ಸೆಪ್ಟೆಂಬರ್ 5ರಂದು ಜನಾರ್ದನ ರೆಡ್ಡಿಯ ಬಂಧನವಾಗಿತ್ತು.

    ಬಂಧನದ ಬಳಿಕ ನಡೆದ ವಿಚಾರಣೆಯಲ್ಲಿ ಜನಾರ್ದನ ರೆಡ್ಡಿ ಪ್ರಭಾವಿಯಾಗಿದ್ದು ಸಾಕ್ಷಿ ನಾಶ ಮಾಡುವ ಆತಂಕವಿದೆ. ಈ ಕಾರಣಕ್ಕೆ ಬಳ್ಳಾರಿ, ಕರ್ನೂಲು ಮತ್ತು ಆನಂತಪುರ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಬೇಕು ಎಂದು ಸಿಬಿಐ (CBI) ಮನವಿ ಮಾಡಿತ್ತು. ಸಿಬಿಐ ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್‌ ಮೂರು ಜಿಲ್ಲೆಗಳ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.

    ಈ ಮಧ್ಯೆ ಮಗಳ ಮದುವೆ, ಮೊಮ್ಮೊಗಳ ನಾಮಕರಣ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಮಾತ್ರ ಕೋರ್ಟ್ ಅನುಮತಿ ನೀಡಿತ್ತು. 2021ರ ನವೆಂಬರ್ ನಲ್ಲಿ ಕೊನೆಯದಾಗಿ ಬಳ್ಳಾರಿಗೆ ಜನಾರ್ದನ ರೆಡ್ಡಿ ಬಳ್ಳಾರಿಗೆ ಆಗಮಿಸಿದ್ದರು

    2011ರಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದ ಜನಾರ್ದನ ರೆಡ್ಡಿ ಮೂರು ವರ್ಷ ನಾಲ್ಕು ತಿಂಗಳು ಜೈಲು ವಾಸ ಅನುಭವಿಸಿದ್ದರು. ಜೈಲುವಾಸದ ಬಳಿಕ 2015 ರಲ್ಲಿ ಬಿಡುಗಡೆಯಾಗಿದ್ದರು. ಬಳ್ಳಾರಿ ಜಿಲ್ಲೆಯಿಂದ ದೂರವೇ ಇದ್ದ ಜನಾರ್ದನ ರೆಡ್ಡಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

  • ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಬಿಐಗೆ ಅಂಕುಶ – ರಾಜ್ಯ ಸರ್ಕಾರದ ವಿರುದ್ಧ ಅಶ್ವಥ್ ನಾರಾಯಣ್‌ ಕಿಡಿ

    ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಬಿಐಗೆ ಅಂಕುಶ – ರಾಜ್ಯ ಸರ್ಕಾರದ ವಿರುದ್ಧ ಅಶ್ವಥ್ ನಾರಾಯಣ್‌ ಕಿಡಿ

    ಬೆಂಗಳೂರು: ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು‌ ಸಿಬಿಐ ತನಿಖೆಗೆ ಕೊಟ್ಟಿದ್ದ ಅನುಮತಿಯನ್ನ ಸರ್ಕಾರ ವಾಪಸ್ ಪಡೆದಿದೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ್‌ (Ashwath Narayan)  ಕಿಡಿಕಾರಿದ್ದಾರೆ.

    ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಸಿಬಿಐ (CBI) ಯಾರ ಅನುಮತಿ ಪಡೆಯಬೇಕಿಲ್ಲ. ಈಗ ರಾಜ್ಯದಲ್ಲಿ ತನಿಖೆ ಮಾಡಬೇಕಾದ್ರೆ ಅನುಮತಿ ಬೇಕು ಅಂತಾರೆ‌. ಏನ್ ಗೋಲ್ಮಾಲ್ ಮಾಡಿದ್ದೀರಾ ಹೇಳಿ? ಯಾಕೆ ಸಿಬಿಐಗೆ ತಡೆ ಹಾಕ್ತಿದ್ದೀರಾ? ವಾಲ್ಮೀಕಿ ‌ನಿಗಮದ ಹಗರಣ, ಮುಡಾ ಹಗರಣದ ವಿಚಾರ ಇವರ ಕುತ್ತಿಗೆಗೆ ಬರುತ್ತೆ. ಹೀಗಾಗಿ ಇದನ್ನ ಮಾಡಿದ್ದಾರೆ. ಇವರ ರಕ್ಷಣೆಗೆ ಸಿಬಿಐ ಅನುಮತಿ ನಿರಾಕರಣೆ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿಬಿಐ ತನಿಖಾ ಸಮ್ಮತಿ ವಾಪಸ್ ಪಡೆದಿರುವುದು ಯೋಗ್ಯ ನಿರ್ಣಯ – ಶಾಸಕ ಬಿ.ಆರ್ ಪಾಟೀಲ್

    ರಾಜ್ಯಪಾಲರ ಪ್ರಶ್ನೆಗೆ ಕ್ಯಾಬಿನೆಟ್ ಮೂಕಲವೇ ಉತ್ತರ ಕೊಡಬೇಕು ಎಂಬ ನಿರ್ಣಯದ ವಿರುದ್ಧ ಪ್ರತಿಕ್ರಿಯಿಸಿ, ರಾಜ್ಯಪಾಲರು ಕೇಳುವ ಪ್ರಶ್ನೆಗೆ ಉತ್ತರ ಕೊಡದೆ ಕಾಂಗ್ರೆಸ್‌ನವರು ಭಂಡವಾದ ಮಾಡ್ತಿದ್ದಾರೆ. ಇಲ್ಲ ಸಲ್ಲದ ಅಪಾದನೆ ರಾಜ್ಯಪಾಲರ ಮೇಲೆ ಮಾಡುತ್ತಿದ್ದೀರಿ. ಕಾಂಗ್ರೆಸ್ ಸರ್ಕಾರ, ಸರ್ಕಾರದ ವ್ಯವಸ್ಥೆಯನ್ನು ಕಾಂಗ್ರೆಸ್ ಮಯ ಮಾಡಿದ್ದಾರೆ. ಕಾಂಗ್ರೆಸ್ ಕೈಗೊಂಬೆಯಾಗಿ ಅಧಿಕಾರಿಗಳನ್ನು ಮಾಡಿಕೊಂಡಿದ್ದಾರೆ. ಸಿಎಸ್ ಅವರೇ ಉತ್ತರ ಕೊಡದಂತೆ ಮಾಡಿದ್ದಾರೆ. ನಿಮಗೆ ಇಷ್ಟು ಭಯ ಯಾಕೆ? ಎಂದು ಪ್ರಶ್ನಿಸಿದ್ದಾರೆ.

    ಸಂವಿಧಾನದ ಸ್ಥಾನ ಹೊಂದಿರೋ ರಾಜ್ಯಪಾಲರಿಗೆ ಉತ್ತರ ಕೊಡೊಕೆ ಇವರಿಗೆ ಆಗೋದಿಲ್ಲ. ಇದೇನಾ ಕಾಂಗ್ರೆಸ್ ಪ್ರಜಾಪ್ರಭುತ್ವ? ರಾಜ್ಯಪಾಲರಿಗೆ ಮಾಹಿತಿ ಕೊಡುವುದಿಲ್ಲ ಎಂದರೆ ಇದು ಪ್ರಜಾಪ್ರಭುತ್ವನಾ?ಡಿಜಿನಾ, ‌ಸಿಎಸ್, ಕಮೀಷನರ್‌ನ್ನು ರಾಜ್ಯಪಾಲರು ನೇಮಕ ಮಾಡೋದಿಲ್ಲ. ಯಾಕೆ ಇಷ್ಟು ಭಯ? ಯಾಕೆ ಅಡೆತಡೆ ಮಾಡಿದ್ದೀರಾ? ಸಿದ್ದರಾಮಯ್ಯ ಹಿರಿತ‌ನಕ್ಕೆ ಅವರೇ ಮಸಿ ಬಳಸಿಕೊಂಡಿದ್ದಾರೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಒಂದು ವೃತ್ತಿಪರ ಲೂಟಿಕೋರ ಪಕ್ಷ: ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ ವಾಗ್ದಾಳಿ

  • ರಾಜ್ಯದಲ್ಲಿ ಸಿಬಿಐ ಡೈರೆಕ್ಟ್ ಎಂಟ್ರಿಗೆ ಬ್ರೇಕ್ – ʻರಕ್ಷಣಾತ್ಮಕʼ ಆಟಕ್ಕಿಳಿದ ಸಿದ್ದರಾಮಯ್ಯ ಸರ್ಕಾರ!

    ರಾಜ್ಯದಲ್ಲಿ ಸಿಬಿಐ ಡೈರೆಕ್ಟ್ ಎಂಟ್ರಿಗೆ ಬ್ರೇಕ್ – ʻರಕ್ಷಣಾತ್ಮಕʼ ಆಟಕ್ಕಿಳಿದ ಸಿದ್ದರಾಮಯ್ಯ ಸರ್ಕಾರ!

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಡಾ ಹಗರಣ (MUDA Scam) ಸಂಚಲನ ಮೂಡಿಸಿದೆ. ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶ ನೀಡಿದೆ. ಅಲ್ಲದೇ, ಈ ಪ್ರಕರಣವನ್ನು ಸಿಬಿಐಗೆ (CBI) ಒಪ್ಪಿಸಬೇಕು ಎಂದು ಬಿಜೆಪಿ, ಜೆಡಿಎಸ್‌ ನಾಯಕರು ಮುಗಿಬಿದ್ದಿದ್ದಾರೆ. ಈ ಹೊತ್ತಲ್ಲೇ ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ.

    ರಾಜ್ಯದಲ್ಲಿ ಸಿಬಿಐಗೆ ಅಂಕುಶ ಹಾಕಿದೆ. ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆ (CBI Open Investigation) ನಡೆಸಲು ಇದ್ದ ಅನುಮತಿಯನ್ನು ಹಿಂಪಡೆದಿದೆ. ಕರ್ನಾಟಕದಲ್ಲಿ ಅಪರಾಧ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐಗೆ ಮುಕ್ತ ಅವಕಾಶ ಇತ್ತು. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಯಾರಾದರೂ ದೂರು ನೀಡಿದರೇ ಮುಕ್ತವಾಗಿ ಸಿಬಿಐ ತನಿಖೆ ನಡೆಸಬಹುದಿತ್ತು.. ಆದ್ರೆ, ಇದಕ್ಕೀಗ ಸರ್ಕಾರ ಬ್ರೇಕ್ ಹಾಕಿದೆ. 2005ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನೇ ರದ್ದು ಮಾಡಿದೆ. ಹೀಗಾಗಿ ಸಿಬಿಐ ಇನ್ಮುಂದೆ ಕರ್ನಾಟಕದಲ್ಲಿ (Karnataka) ಯಾವುದೇ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರದ ಲಿಖಿತ ಅನುಮತಿ ಪಡೆಯುವುದು ಅತ್ಯಗತ್ಯವಾಗಿದೆ. ಇದನ್ನೂ ಓದಿ: Badlapur Encounter | ಆರೋಪಿ ಗುಂಡು ಹಾರಿಸಿದ್ರೆ ಪೊಲೀಸರು ಚಪ್ಪಾಳೆ ತಟ್ಟಬೇಕಾ?: ದೇವೇಂದ್ರ ಫಡ್ನವೀಸ್

    ಸಿದ್ದರಾಮಯ್ಯ ಸರ್ಕಾರದ ನಡೆ ರಾಷ್ಟ್ರಮಟ್ಟದಲ್ಲಿ ಮತ್ತು ರಾಜಕೀಯವಾಗಿ ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಖಂಡಿಸಿದ್ದಾರೆ. ಅಂದ ಹಾಗೇ, ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಶುಕ್ರವಾರ ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: Bilkis Bano case | ಕಟು ಟೀಕೆಯನ್ನು ಆದೇಶದಿಂದ ತೆಗೆಯುವಂತೆ ಗುಜರಾತ್ ಮಾಡಿದ್ದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

    ಸಿಬಿಐಗೆ ಅಂಕುಶ.. ಏಕೆ? – ಸರ್ಕಾರದ ಪ್ರಕಾರ..
    * ಮೋದಿ ಸರ್ಕಾರಕ್ಕೆ ಸಿಬಿಐ ಅಸ್ತ್ರ ಆಗಬಾರದು
    * ಈ ಸಂಸ್ಥೆ ದುರ್ಬಳಕೆ ಆಗುವ ಬಗ್ಗೆ ಆತಂಕವಿದೆ
    * ಪ್ರತಿಯೊಂದು ಪ್ರಕರಣದಲ್ಲೂ ಮೂಗುತೂರಿಸುವ ಭಯ
    * ಕೇಂದ್ರ ಸರ್ಕಾರದ್ದು ಪಕ್ಷಪಾತ ಧೋರಣೆ
    * ನಾವು ಶಿಫಾರಸು ಮಾಡಿದ ಕೇಸ್‌ಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿಲ್ಲ
    * ಮುಡಾ ಪ್ರಕರಣಕ್ಕೂ ಇದಕ್ಕೂ ಸಂಬಂಧ ಇಲ್ಲ
    * ಸಿಬಿಐ ತಪ್ಪು ಹಾದಿಗೆ ಹೊರಳುವುದನ್ನು ತಡೆಯಲು..

    ಯಾವ್ಯಾವ ರಾಜ್ಯದಲ್ಲಿ ಸಿಬಿಐಗೆ ಅಂಕುಶ?
    * ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ
    * ಜಾರ್ಖಂಡ್, ರಾಜಸ್ಥಾನ, ಛತ್ತೀಸ್‌ಘಡ
    * ತೆಲಂಗಾಣ, ಮಿಜೋರಾಂ, ಮೇಘಾಲಯ
    * ಪಂಜಾಬ್ ಮತ್ತು ಈಗ ಕರ್ನಾಟಕ

  • ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆ ಅಧಿಕಾರಕ್ಕೆ ಬ್ರೇಕ್‌

    ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆ ಅಧಿಕಾರಕ್ಕೆ ಬ್ರೇಕ್‌

    ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರಿಯ ತನಿಖಾ ದಳ (CBI) ಮುಕ್ತ ತನಿಖೆಗೆ ಇದ್ದ ಅಧಿಸೂಚನೆ ಹಿಂಪಡೆಯಲು ಕ್ಯಾಬಿನೆಟ್‌ (Cabinet) ನಿರ್ಧರಿಸಿದೆ. ನಗರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 28 ವಿಷಯಗಳನ್ನ ಪರಿಶೀಲಿಸಲಾಯಿತು. ಎರಡು ವಿಷಯ ಹೊರತು ಪಡಿಸಿ ಉಳಿದಿದ್ದೆಲ್ಲಾ ವಿಷಯಗಳ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

    ಈ ಪೈಕಿ ಸಿಬಿಐ ಮುಕ್ತ ತನಿಖೆಗೆ ಇದ್ದ ಅಧಿಸೂಚನೆ ಹಿಂಪಡೆಯಲು ಕ್ಯಾಬಿನೆಟ್ ನಿರ್ಧಾರ ತೆಗೆದುಕೊಡಿದೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐಗೆ ಮುಕ್ತ ಅವಕಾಶವಿತ್ತು. ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲೀಶ್‌ಮೆಂಟ್ ಆಕ್ಟ್ (Delhi Special Police Establishment Act), 1946 ಅಡಿ ಅವಕಾಶ ಇತ್ತು. ಈಗ ಸಿಬಿಐಗೆ ಮುಕ್ತ ಅನುಮತಿ ನೀಡಿರುವ ಅಧಿಸೂಚನೆಯನ್ನು ಹಿಂಪಡೆಯಲು ತೀರ್ಮಾನಿಸಿದೆ.

    ಕ್ಯಾಬಿನೆಟ್‌ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿರುವ ರಾಜ್ಯ ಕಾನೂನು ಸಚಿವ ಹೆಚ್‌.ಕೆ ಪಾಟೀಲ್‌ (HK Patil), ಸಿಬಿಐ ತನಿಖಾ ದಳಕ್ಕೆ ಮುಕ್ತ ಅನುಮತಿ ನೀಡಿರುವ ಅಧಿಸೂಚನೆ ವಾಪಸ್ ಪಡೆಯಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ತಿಳಿಸಿದರು.

    ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಯಾರಾದರೂ ದೂರು ನೀಡಿದರೆ ಮುಕ್ತವಾಗಿ ಸಿಬಿಐ ತನಿಖೆ ನಡೆಸಬಹುದಿತ್ತು. ಅದಕ್ಕೆ ಕರ್ನಾಟಕ ಸರ್ಕಾರವೇ ಅವಕಾಶ ಮಾಡಿಕೊಟ್ಟಿತ್ತು. ಈಗ ಸಿಬಿಐ ಮುಕ್ತ ತನಿಖೆಗೆ ಇದ್ದ ಅಧಿಸೂಚನೆ ಹಿಂಪಡೆಯಲು ಕ್ಯಾಬಿನೆಟ್ ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ.

    ಏನೇ ವಿಷಯಗಳಿದ್ದರೂ ಕ್ಯಾಬಿನೆಟ್‌ ಗಮನಕ್ಕೆ ತರಬೇಕು:
    ರಾಜ್ಯಪಾಲರು ಮೇಲಿಂದ ಮೇಲೆ ಅಸಹನೆ ವರ್ತನೆ ಮೇಲೆ ಪತ್ರ ಬರೆಯುತ್ತಿದ್ದಾರೆ. ತಕ್ಷಣ ಮಾಹಿತಿ ಕೊಡಿ ಇಂದೇ ಕೊಡಿ ಅಂತ ಪತ್ರ ಬರೆಯುತ್ತಿದ್ದಾರೆ. ಯಾವುದೆ ಮಾಹಿತಿಯನ್ನು ಯಾವುದೇ ಕಾರ್ಯದರ್ಶಿ ಆಗಲಿ, ಮುಖ್ಯ ಕಾರ್ಯದರ್ಶಿಯಾಗಲಿ ರಾಜ್ಯಪಾಲರಿಗೆ ಕಳುಹಿಸುವ ಸಂದರ್ಭದಲ್ಲಿ ಕ್ಯಾಬಿನೆಟ್‌ ಗಮನಕ್ಕೆ ತಂದು ಅದರ ನಿರ್ಣಯದಂತೆ ಮುಂದುವರಿಯಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇವೆ. ಇವತ್ತು ಈ ತೀರ್ಮಾನ ಕೈಗೊಂಡಿದ್ದೇವೆ. ಮುಂದೆ ಯಾವುದೇ ವಿಚಾರ ಇದ್ದರೂ ಮುಖ್ಯ ಕಾರ್ಯದರ್ಶಿ ಕ್ಯಾಬಿನೆಟ್ ಗಮನಕ್ಕೆ ತರುತ್ತಾರೆ ಎಂದು ತಿಳಿಸಿದ್ದಾರೆ.

  • ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ: ದೂರುದಾರ ಸ್ನೇಹಮಯಿ ಕೃಷ್ಣ

    ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ: ದೂರುದಾರ ಸ್ನೇಹಮಯಿ ಕೃಷ್ಣ

    – ಮುಡಾ ಕೇಸ್ ಸಿಬಿಐ ತನಿಖೆ ಆದೇಶಿಸಿ ಎಂದು ಹೈಕೋರ್ಟ್‌ಗೆ ಅರ್ಜಿ ಹಾಕ್ತೇವೆ

    ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಇಂದೇ ಎಫ್‌ಐಆರ್ ದಾಖಲಾಗಬೇಕು. ವೆಬ್‌ಸೈಟ್‌ನಲ್ಲಿನ ಆದೇಶ ಪ್ರತಿಯಿಂದಲೇ ಎಫ್‌ಐಆರ್ ಮಾಡಿಕೊಳ್ಳಬಹುದು. ಇವತ್ತೇ ಎಫ್‌ಐಆರ್ ದಾಖಲಾಗುತ್ತದೆ ಎಂದು ದೂರುದಾರ ಸ್ನೇಹಮಯಿ  ಕೃಷ್ಣ (Snehamayi Krishna) ಮೈಸೂರಿನಲ್ಲಿ (Mysuru) ಹೇಳಿದ್ದಾರೆ.

    ಈ ಬಗ್ಗೆ ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ ಅವರು, ನಮಗೆ ಲೋಕಾಯುಕ್ತ ತನಿಖೆ ಮೇಲೆ ನಂಬಿಕೆ ಇಲ್ಲ. ಹೀಗಾಗಿ ತನಿಖೆ ಜವಾಬ್ದಾರಿಯನ್ನು ಸಿಬಿಐಗೆ (CBI) ಕೊಡಿ ಎಂದು ಹೈಕೋರ್ಟ್‌ಗೆ ಇವತ್ತು ಅಥವಾ ನಾಳೆ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಮಳೆಗೆ ನಾಲ್ವರು ಸಾವು; ಶಾಲಾ-ಕಾಲೇಜುಗಳಿಗೆ ರಜೆ

    ಸಿಎಂ ಮೇಲಿನ ಮುಡಾ ಕೇಸ್‌ನಲ್ಲಿ (MUDA Scam) ಲೋಕಾಯುಕ್ತದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ. ಹೀಗಾಗಿ, ವಿಚಾರಣೆ ಸಿಬಿಐಗೆ ಕೊಡಿ ಎಂದು ಹೈಕೋರ್ಟ್‌ಗೆ ಅರ್ಜಿ ಹಾಕುವುದಾಗಿ ತಿಳಿಸಿದ್ದಾರೆ.

    ಮುಡಾ ನಿವೇಶನ ಹಂಚಿಕೆಯಲ್ಲಿ ಪ್ರಭಾವ ಬೀರಿದ್ದಾರೆಂಬ ಆರೋಪ ಹೊತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತಗೆ ಹೈಕೋರ್ಟ್ ಆದೇಶ ಹೊರಡಿಸಿದೆ. 3 ತಿಂಗಳ ಒಳಗೆ ತನಿಖಾ ವರದಿಯನ್ನು ಸಲ್ಲಿಸಬೇಕು ಎಂದು ಗಡುವು ವಿಧಿಸಿದೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಥೈಲ್ಯಾಂಡ್‌ ಗ್ರೀನ್‌ ಸಿಗ್ನಲ್‌ – ಸಲಿಂಗ ವಿವಾಹ ಮಸೂದೆಗೆ ಸಹಿ ಹಾಕಿದ ರಾಜ

    ಸಿಎಂ ಸಿದ್ದರಾಮಯ್ಯ ವಿರುದ್ಧ ತೀರ್ಪು ಹೊರಬೀಳುತ್ತಿದ್ದಂತೆ ಬಿಜೆಪಿ-ಜೆಡಿಎಸ್ ನಾಯಕರು, ಸಿಎಂ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ ಸಂಕಷ್ಟ; ಹೈಕಮಾಂಡ್‌ಗೆ ವರದಿ ನೀಡಿದ ಸಿಎಂ ಸಿದ್ದರಾಮಯ್ಯ

  • ಮೇಲ್ನೋಟಕ್ಕೆ ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್ ಹೇಳಿದೆ – ಪ್ರಹ್ಲಾದ್ ಜೋಶಿ

    ಮೇಲ್ನೋಟಕ್ಕೆ ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್ ಹೇಳಿದೆ – ಪ್ರಹ್ಲಾದ್ ಜೋಶಿ

    ನವದೆಹಲಿ: ಮುಡಾ ಪ್ರಕರಣ (MUDA Scam) ದೇಶದ್ಯಾಂತ ಚರ್ಚೆಯಾಗುತ್ತಿದೆ. ಕಾಂಗ್ರೆಸ್ (Congress) ಡಿಎನ್‌ಎಯಲ್ಲಿ ಭ್ರಷ್ಟಾಚಾರ ಇದೆ ಎಂದು ಹಿಂದೆಯೇ ಹೇಳಿದ್ದೆ. ಅದಕ್ಕೆ ಪೂರಕವಾದ ಆದೇಶವನ್ನು ಹೈಕೋರ್ಟ್ (High Court) ನೀಡಿದೆ. ಮೇಲ್ನೋಟಕ್ಕೆ ಮುಖ್ಯಮಂತ್ರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೈಕೋರ್ಟ್ ಹೇಳಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ.

    ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೈಕೋರ್ಟ್ ಆದೇಶದಲ್ಲಿ ಸಿಎಂ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೈಕೋರ್ಟ್ ಹೇಳಿದೆ. ಸಾಮಾನ್ಯ ವ್ಯಕ್ತಿಗೆ ಈ ಪ್ರಮಾಣದಲ್ಲಿ ಪರಿಣಾಮ ನೀಡಲು ಸಾಧ್ಯವಿಲ್ಲ. ಹೈಕೋರ್ಟ್ ಆದೇಶದ ಹಿನ್ನಲೆ ಮುಖ್ಯಮಂತ್ರಿ ಸ್ಥಾನಕ್ಕೆ ತಡ ಮಾಡದೇ ಸಿದ್ದರಾಮಯ್ಯ (CM Siddaramaiah) ಅವರು ರಾಜೀನಾಮೆ ನೀಡಬೇಕು ಎಂದರು.ಇದನ್ನೂ ಓದಿ: ಮುಡಾ ಕೇಸ್‌: ಕಾನೂನಾತ್ಮಕವಾಗಿ ಮುಂದೇನು? ಕಾಂಗ್ರೆಸ್‌ ಹೈಕಮಾಂಡ್‌ ಮುಂದಿರುವ ಆಯ್ಕೆಗಳೇನು?

    ದಲಿತರ ಕೋಟಿ ಬೆಲೆ ಬಾಳುವ ಭೂಮಿಯನ್ನು ಲಕ್ಷಗಳಲ್ಲಿ ಖರೀದಿಸಿ, ಸಿಎಂ ಹೆಂಡ್ತಿಗೆ ಗಿಫ್ಟ್ ನೀಡುವುದು ಹಾಸ್ಯಾಸ್ಪದ, ಇಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ರಾಜ್ಯಪಾಲರು, ದಲಿತ ನಾಯಕರಿಗೆ ಚಪ್ಪಲಿಯಿಂದ ಹೊಡೆಸುವ ಯತ್ನ ಮಾಡಿದೆ. ಈಗಲಾದರೂ ಸಿಎಂ ಬಹಿರಂಗ ಕ್ಷಮೆ ಕೇಳುವ ಮೂಲಕ ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದ್ದಾರೆ.

    ರಾಹುಲ್ ಗಾಂಧಿ (Rahul Gandhi) ಡೋಂಗಿ ನೈತಿಕತೆ ಬಗ್ಗೆ ಮಾತನಾಡುತ್ತಾರೆ. ನಿಜವಾದ ನೈತಿಕತೆ ಇದ್ದರೆ ಅವರು ಸಿದ್ದರಾಮಯನವರ ರಾಜೀನಾಮೆ ಕೇಳಬೇಕು. ಲೋಕಾಯುಕ್ತದಲ್ಲಿ ನಿವೃತ್ತ ನ್ಯಾಯಾಧೀಶರು ಇರುತ್ತಾರೆ. ಬಾಕಿ ಅಧಿಕಾರಿಗಳು ರಾಜ್ಯ ಸರ್ಕಾರದವರೇ ಇರುತ್ತಾರೆ. ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಎಂದರೆ ಸಿಬಿಐಗೆ ನೀಡಬೇಕು. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ನೀಡಲಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಪುಲ್ವಾಮಾ ದಾಳಿಯ ಪ್ರಮುಖ ಆರೋಪಿ ಹೃದಯಾಘಾತದಿಂದ ಸಾವು

  • ಅಕ್ರಮ ಆಸ್ತಿ ಗಳಿಕೆ ಕೇಸ್‌ – ಡಿಕೆಶಿ, ಸಿಬಿಐಗೆ ಸುಪ್ರೀಂ ನೋಟಿಸ್

    ಅಕ್ರಮ ಆಸ್ತಿ ಗಳಿಕೆ ಕೇಸ್‌ – ಡಿಕೆಶಿ, ಸಿಬಿಐಗೆ ಸುಪ್ರೀಂ ನೋಟಿಸ್

    ನವದೆಹಲಿ: ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಿಬಿಐ (CBI) ತನಿಖೆಗೆ ನೀಡಿದ ಆದೇಶ ವಾಪಸ್ ಪಡೆದ ರಾಜ್ಯ ಸರ್ಕಾರದ ಆದೇಶದ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ (Basanagouda Patil Yatnal) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court) ಡಿಕೆಶಿ ಮತ್ತು ಸಿಬಿಐಗೆ (CBI) ನೋಟಿಸ್ ನೀಡಿದೆ.

    ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ ನೀಡಿರುವ ಲೋಕಾಯುಕ್ತ ತನಿಖೆಗೆ ತಡೆ ನೀಡಬೇಕು ಮತ್ತು ಸರ್ಕಾರ ಮಾಡಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ಯತ್ನಾಳ್ ಪರ ವಕೀಲರು ಮನವಿ ಮಾಡಿದರು. ಲೋಕಾಯುಕ್ತ ತನಿಖೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ಒಂದು ವೇಳೆ ತನಿಖೆ ನ್ಯಾಯಬದ್ಧವಾಗಿಲ್ಲ ಎಂದಾದರೆ ಮತ್ತೆ ಸುಪ್ರೀಂಕೋರ್ಟ್ ಸಂಪರ್ಕ ಮಾಡಬಹುದು ಎಂದು ಸೂಚಿಸಿತು.  ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ – ನಾಳೆಗೆ ಅರ್ಜಿ ವಿಚಾರಣೆ

    ಪ್ರತಿವಾದಿಗಳಾದ ಡಿ.ಕೆ ಶಿವಕುಮಾರ್ ಮತ್ತು ಸಿಬಿಐಗೆ ನೋಟಿಸ್ ನೀಡಲಾಗವುದು. ಸಿಬಿಐ ಈವರೆಗೂ ಯಾವುದೇ ಅರ್ಜಿ ಸಲ್ಲಿಸಿಲ್ಲ, ಅದರ ಮುಂದಿನ ನಡೆ ಏನು ಎಂಬುದನ್ನು ತಿಳಿಸಬೇಕು. ಡಿ.ಕೆ ಶಿವಕುಮಾರ್ ಮೂರು ವಾರಗಳಲ್ಲಿ ಅಕ್ಷಪಣೆ ಸಲ್ಲಿಸಲಿ. ಬಳಿಕ ಇನ್ನೊಂದು ವಾರದಲ್ಲಿ ಯತ್ನಾಳ್ ಆಕ್ಷೇಪಣೆಗೆ ಪ್ರತಿಕ್ರಿಯೆ ನೀಡಬೇಕು ಎಂದ ಕೋರ್ಟ್‌ ನಾಲ್ಕು ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿತು.

    ಏನಿದು ಪ್ರಕರಣ?
    ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್‌ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ಲೋಕಾಯುಕ್ತದಲ್ಲಿ ತನಿಖೆ ಮುಂದುವರೆಸಬಹುದು ಎಂದು ಆದೇಶದಲ್ಲಿ ತಿಳಿಸಿತ್ತು. ರಾಜ್ಯ ಸರ್ಕಾರ- ಸಿಬಿಐ ನಡುವೆ ಘರ್ಷಣೆಗೆ ಕಾರಣವಾದ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಬಗೆಹರಿಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟು ಯತ್ನಾಳ್‌ ಮತ್ತು ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯತ್ನಾಳ್‌ ಮೇಲ್ಮನವಿ ಸಲ್ಲಿಸಿದ್ದರು.

     

  • ಕೋಲ್ಕತ್ತಾ ವೈದ್ಯೆ ಅತ್ಯಾಚಾರಿ ಆರೋಪಿಗೆ ಜಾಮೀನು ನೀಡಬೇಕೆ? – ಸಿಬಿಐ ಪರ ವಕೀಲರ ವಿರುದ್ಧ ಕೋರ್ಟ್‌ ಗರಂ

    ಕೋಲ್ಕತ್ತಾ ವೈದ್ಯೆ ಅತ್ಯಾಚಾರಿ ಆರೋಪಿಗೆ ಜಾಮೀನು ನೀಡಬೇಕೆ? – ಸಿಬಿಐ ಪರ ವಕೀಲರ ವಿರುದ್ಧ ಕೋರ್ಟ್‌ ಗರಂ

    – ವಾದ ಮಂಡಿಸಲು ಕೋರ್ಟ್‌ಗೆ ತಡವಾಗಿ ಬಂದಿದ್ದಕ್ಕೆ ತರಾಟೆ

    ಕೋಲ್ಕತ್ತಾ: ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ಕೋರ್ಟ್‌ಗೆ ಸಕಾಲಕ್ಕೆ ಹಾಜರಾಗದಿದ್ದಕ್ಕೆ ಸಿಬಿಐ ತನಿಖಾಧಿಕಾರಿ ಹಾಗೂ ವಕೀಲರ ವಿರುದ್ಧ ಸೀಲ್ದಾ ಕೋರ್ಟ್‌ ಗರಂ ಆಗಿದೆ. ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಜಾಮೀನು ನೀಡಬೇಕಾ ಎಂದು ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು.

    ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯಿತು. ಆದರೆ, ಸಿಬಿಐನ ತನಿಖಾಧಿಕಾರಿ ಕೋರ್ಟ್‌ನಲ್ಲಿ ಹಾಜರಿರಲಿಲ್ಲ. ಇತ್ತ ತನಿಖಾ ಸಂಸ್ಥೆಯ ವಕೀಲರು 40 ನಿಮಿಷ ತಡವಾಗಿ ಹಾಜರಾದರು. ಇದರಿಂದ ಕೋಪಗೊಂಡ ನ್ಯಾಯಾಲಯ, ಪ್ರಕರಣದ ಪ್ರಮುಖ ಆರೋಪಿಗೆ ಜಾಮೀನು ನೀಡಬೇಕೆ ಎಂದು ಗರಂ ಆಯಿತು. ತನಿಖಾ ಸಂಸ್ಥೆಯ ಈ ನಡೆ ಆಲಸ್ಯ ಮನೋಭಾವವನ್ನು ತೋರಿಸುತ್ತದೆ ಎಂದು ಚಾಟಿ ಬೀಸಿತು.

    ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಂದ ಪ್ರಕರಣದಲ್ಲಿ ಬಂಧಿತನಾಗಿರುವ ಸಂಜಯ್‌ ರಾಯ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು.

    ರಾಯ್ ಪರ ವಕೀಲರು ಜಾಮೀನಿಗಾಗಿ ವಾದ ಮಂಡಿಸುತ್ತಿದ್ದಂತೆ, ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಪಮೇಲಾ ಗುಪ್ತಾ ಅವರಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ತಡವಾಗಿ ಬರುತ್ತಾರೆ ಎಂದು ತಿಳಿಸಲಾಯಿತು. ಅದಕ್ಕೆ ಮ್ಯಾಜಿಸ್ಟ್ರೇಟ್, ನಾನು ಸಂಜಯ್ ರಾಯ್‌ಗೆ ಜಾಮೀನು ನೀಡಬೇಕೇ? ಇದು ಸಿಬಿಐನ ಆಲಸ್ಯ ಮನೋಭಾವ ತೋರಿಸುತ್ತದೆ. ಇದು ಅತ್ಯಂತ ದುರದೃಷ್ಟಕರ ಎಂದು ಗರಂ ಆದರು.

    ವಕೀಲರು ಅಂತಿಮವಾಗಿ ಸುಮಾರು 40 ನಿಮಿಷಗಳ ಕೋರ್ಟ್‌ಗೆ ಬಂದರು. ವಿಳಂಬಕ್ಕೆ ಕಾರಣ ತಿಳಿಸಿದರು. ನಂತರ ವಾದಗಳು ಮುಂದುವರೆದವು. ಎರಡೂ ಕಡೆಯವರ ವಾದ-ಪ್ರತಿವಾದ ಆಲಿಸಿದ ಕೋರ್ಟ್‌ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತು.

  • ಆರ್ಥಿಕ ಅವ್ಯವಹಾರಗಳ ಸಿಬಿಐ ತನಿಖೆ ಪ್ರಶ್ನಿಸಿ ಸಂದೀಪ್ ಘೋಷ್ ಸಲ್ಲಿಸಿದ್ದ ಅರ್ಜಿ ವಜಾ

    ಆರ್ಥಿಕ ಅವ್ಯವಹಾರಗಳ ಸಿಬಿಐ ತನಿಖೆ ಪ್ರಶ್ನಿಸಿ ಸಂದೀಪ್ ಘೋಷ್ ಸಲ್ಲಿಸಿದ್ದ ಅರ್ಜಿ ವಜಾ

    ನವದೆಹಲಿ: ಆರ್ಥಿಕ ಅವ್ಯವಹಾರಗಳ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ ಕೋಲ್ಕತ್ತಾ ಹೈಕೋರ್ಟ್‌ (Kolkata High Court) ಆದೇಶವನ್ನು ಪ್ರಶ್ನಿಸಿ ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ (Sandip Ghosh) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ತನಿಖೆಯನ್ನು ವರ್ಗಾವಣೆ ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಿತು. ಇದನ್ನೂ ಓದಿ: ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ ಭಾರತ – ಶಕ್ತಿ ಪರಿವರ್ತನಾ ಶೃಂಗಸಭೆಯಲ್ಲಿ ಜೋಶಿ ಶ್ಲಾಘನೆ

    ಘೋಷ್ ಪರ ಹಿರಿಯ ವಕೀಲ ಮೀನಾಕ್ಷಿ ಅರೋರಾ ವಾದ ಮಂಡಿಸಿದರು. ಅರ್ಜಿದಾರರು ವಿಚಾರಣೆಗೆ ಆಕ್ಷೇಪಣೆ ಸಲ್ಲಿಸುತ್ತಿಲ್ಲ. ಆದರೆ ಹೈಕೋರ್ಟ್ ಮಾಡಿದ ಕೆಲವು ಪ್ರತಿಕೂಲ ಹೇಳಿಕೆಗಳಿಂದ ಅಸಮಾಧಾನಗೊಂಡಿದ್ದಾರೆ. ಆ.9 ರಂದು ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆಯೊಂದಿಗೆ ಆರೋಪಿತ ಅಕ್ರಮಗಳನ್ನು ಜೋಡಿಸುವ ಹೈಕೋರ್ಟ್‌ನ ಕಲ್ಪನೆ ಬಗ್ಗೆ ಆಕ್ಷೇಪವಿದೆ ಎಂದು ಅವರು ಹೇಳಿದರು.

    ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಸಿಜೆಐ ಇದು ತನಿಖೆಯ ವಿಷಯವಾಗಿದೆ. ಬಯೋಮೆಡಿಕಲ್ ತ್ಯಾಜ್ಯದ ಸಮಸ್ಯೆಯು ಒಂದು ಪ್ರಚೋದಕವಾಗಿದೆ. ಆದ್ದರಿಂದ ಈ ವಿಷಯದಲ್ಲಿ ತಾರ್ಕಿಕ ತೀರ್ಮಾನಕ್ಕೆ ಬರಬೇಕು ಎನ್ನುವುದು ಹೈಕೋರ್ಟ್ ಬಯಸುತ್ತದೆ. ಇದರಲ್ಲಿ ನಾವು ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಸಿಜೆಐ ಹೇಳಿದರು. ಇದನ್ನೂ ಓದಿ: ಮುಂಬೈನ ಟೈಮ್ಸ್ ಟವರ್‌ನಲ್ಲಿ ಅಗ್ನಿ ಅವಘಡ

    ಇದಕ್ಕೆ ಪ್ರತಿಕ್ರಿಯಿಸಿದ ಅರೋರಾ, ಹೈಕೋರ್ಟ್ ಈ ಬಗ್ಗೆ ಸ್ಪಷ್ಟವಾದ ತೀರ್ಮಾನಕ್ಕೆ ಬರುತ್ತದೆ ಎಂದು ನಾವು ಭಾವಿಸುವುದಿಲ್ಲ ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ಸಿಜೆಐ ನಾವು ತನಿಖೆಯನ್ನು ಸ್ತಬ್ಧಗೊಳಿಸಬಾರದು. ನಮ್ಮ ಮುಂದೆ ಸ್ಥಿತಿ ವರದಿಗಳನ್ನು ಸಲ್ಲಿಸುವಂತೆ ನಾವು ಸಿಬಿಐಗೆ ಸೂಚಿಸುತ್ತೇವೆ ಎಂದರು.

    ಹೈಕೋರ್ಟ್ ಮಾಡಿದ ಅವಲೋಕನಗಳನ್ನು ಆದೇಶದಿಂದ ತೆಗೆದುಹಾಕಬೇಕು ಎಂದು ಅರೋರಾ ಒತ್ತಾಯಿಸಿದರು. ಈ ಹಂತದಲ್ಲಿ ಅರ್ಜಿದಾರರು ಪೂರ್ವಾಗ್ರಹ ಪೀಡಿತರಾಗಿರುವುದರಿಂದ ಇವುಗಳನ್ನು ಪ್ರಾಥಮಿಕ ಅವಲೋಕನಗಳು ಎಂದು ನ್ಯಾಯಾಲಯವು ದಾಖಲಿಸಬಹುದು ಎಂದು ಅರೋರಾ ವಿನಂತಿಸಿದರು. ಆದರೆ ಅದಕ್ಕೆ ಪೀಠ ನಿರಾಕರಿಸಿತು. ಇದನ್ನೂ ಓದಿ: Kolkata Horror | ಆರ್‌.ಜಿ ಕರ್‌ ಕಾಲೇಜಿನ ಮಾಜಿ ಪ್ರಾಂಶುಪಾಲನ ಮನೆ ಸೇರಿ 7 ಕಡೆ ಇಡಿ ದಾಳಿ!

    ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಉಪ ಅಧೀಕ್ಷಕ ಅಖ್ತರ್ ಅಲಿ ಅವರು ಮಾಜಿ ಪ್ರಾಂಶುಪಾಲ ಡಾ. ಘೋಷ್ ವಿರುದ್ಧ ಕೋಲ್ಕತ್ತಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಮೃತದೇಹಗಳ ದುರುಪಯೋಗ, ಜೈವಿಕ ತ್ಯಾಜ್ಯವನ್ನು ಮುಕ್ತ ಮಾರುಕಟ್ಟೆಯಲ್ಲಿ ಮರು ಮಾರಾಟ, ಸಾರ್ವಜನಿಕ ನಿಧಿಯ ದುರುಪಯೋಗ ಮುಂತಾದ ಗಂಭೀರ ಅಕ್ರಮಗಳನ್ನು ಮಾಡಿದ್ದರು. ಆರೋಪದ ಹಿನ್ನೆಲೆ ಹೈಕೋರ್ಟ್ ತನಿಖೆಗೆ ನೀಡಿದೆ.