Tag: ಸಿಬಿಐ ಕೋರ್ಟ್

  • ತೀರ್ಪು ಬಹಳ ಸಂತಸ ತಂದಿದೆ – ಅಡ್ವಾಣಿ

    ತೀರ್ಪು ಬಹಳ ಸಂತಸ ತಂದಿದೆ – ಅಡ್ವಾಣಿ

    ನವದೆಹಲಿ: ಈ ತೀರ್ಪು ಬಹಳ ಸಂತಸ ತಂದಿದೆ ಎಂದು ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಪ್ರತಿಕ್ರಿಯೆ ನೀಡಿದ್ದಾರೆ.

    ಸಿಬಿಐ ವಿಶೇಷ ನ್ಯಾಯಾಲಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಈ ತೀರ್ಪು ರಾಮ ಜನ್ಮಭೂಮಿ ಚಳವಳಿಯ ಬಗ್ಗೆ ನನ್ನ ವೈಯಕ್ತಿಕ ಮತ್ತು ಬಿಜೆಪಿಯ ನಂಬಿಕೆ ಮತ್ತು ಬದ್ಧತೆಯನ್ನು ಸಮರ್ಥಿಸುತ್ತದೆ ಎಂದು ಹೇಳಿದ್ದಾರೆ.

    ಮತ್ತೊಬ್ಬ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಪ್ರತಿಕ್ರಿಯಿಸಿ, ನ್ಯಾಯಾಲಯದಿಂದ ಐತಿಹಾಸಿಕ ನಿರ್ಧಾರ ಪ್ರಕಟವಾಗಿದೆ. ಅಯೋಧ್ಯೆಯಲ್ಲಿ ಡಿಸೆಂಬರ್ 6ರ ಘಟನೆಗೆ ಯಾವುದೇ ಪಿತೂರಿ ನಡೆದಿಲ್ಲ ಎಂಬುದು ಈ ತೀರ್ಪಿನಿಂದ ಸಾಬೀತಾಗಿದೆ. ಅಂದು ನಡೆಸಿದ ಕಾರ್ಯಕ್ರಮ ಪಿತೂರಿಯ ಭಾಗವಾಗಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಭಾರತ ನ್ಯಾಯಾಂಗ ವ್ಯವಸ್ಥೆಯ ಕರಾಳ ದಿನ: ಓವೈಸಿ

    28ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪೂರ್ವನಿಯೋಜಿತ ಕೃತ್ಯ ಅಲ್ಲ. ಇದೊಂದು ಆಕಸ್ಮಿಕ ಘಟನೆ ಎಂದು ಅಭಿಪ್ರಾಯ ಪಟ್ಟ ಸಿಬಿಐ ವಿಶೇಷ ಕೋರ್ಟ್ ಎಲ್ಲ 32 ಆರೋಪಿಗಳನ್ನು ಖುಲಾಸೆಗೊಳಿಸಿದೆ.

    ನ್ಯಾ.ಸುರೇಂದ್ರ ಕುಮಾರ್ ಯಾದವ್‌ ಅವರು 2,000ರ ಪುಟಗಳು ಇರುವ ತೀರ್ಪನ್ನು ಬರೆದಿದ್ದಾರೆ. ಈ ತೀರ್ಪಿನಿಂದಾಗಿ ಮೂಲಕ ಎಲ್‌ಕೆ ಅಡ್ವಾಣಿ ಅವರಿಗಿದ್ದ ಎಲ್ಲ ಕಂಟಕ ಈಗ ದೂರವಾಗಿದೆ. ಇದನ್ನೂ ಓದಿ: ಬಿಜೆಪಿ ಭೀಷ್ಮನಿಗೆ ಬಿಗ್‌ ರಿಲೀಫ್‌ – ಅಡ್ವಾಣಿ ಖುಲಾಸೆಯಾಗಿದ್ದು ಹೇಗೆ? ಕೋರ್ಟ್‌ ಹೇಳಿದ್ದು ಏನು?

    ಈ ಆರೋಪಿಗಳು ಮಸೀದಿಯನ್ನು ಧ್ವಂಸಗೊಳಿಸಲು ಕರ ಸೇವಕರಿಗೆ ಪ್ರಚೋದನೆ ನೀಡಿದ್ದರು ಎಂದು ಸಿಬಿಐ ವಾದಿಸಿದ್ದರೆ ಆರೋಪಿಗಳು ತಮ್ಮ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ. ಕಾಂಗ್ರೆಸ್‌ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮನ್ನು ಸಿಕ್ಕಿ ಹಾಕಿಸಲು ರೂಪಿಸಿದ ರಾಜಕೀಯ ಸಂಚು ಎಂದು ವಾದಿಸಿದ್ದರು.

    ಅಂದಿನ ಉತ್ತರ ಪ್ರದೇಶ ಸರ್ಕಾರ ಬಿಜೆಪಿ ನಾಯಕರು ಮತ್ತು ಕರ ಸೇವಕರ ವಿರುದ್ಧ ಐಪಿಸಿ ಸೆಕ್ಷನ್ 120, 153, 295, 149, 395ರ ಅಡಿ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಿತ್ತು.

  • ಬಾಬ್ರಿ ಮಸೀದಿ ಧ್ವಂಸ ಕೇಸ್‌, ಸೆ.30ಕ್ಕೆ ಅಂತಿಮ ತೀರ್ಪು – 32 ಆರೋಪಿಗಳು ಹೆಸರು ಇಲ್ಲಿದೆ

    ಬಾಬ್ರಿ ಮಸೀದಿ ಧ್ವಂಸ ಕೇಸ್‌, ಸೆ.30ಕ್ಕೆ ಅಂತಿಮ ತೀರ್ಪು – 32 ಆರೋಪಿಗಳು ಹೆಸರು ಇಲ್ಲಿದೆ

    ಲಕ್ನೋ: 28ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು ಸೆ.30ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ಸಿಬಿಐ ವಿಶೇಷ ಕೋರ್ಟ್ ತಿಳಿಸಿದೆ.

    ತೀರ್ಪು ನೀಡುವ ದಿನ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನ್ಯಾ.ಸುರೇಂದ್ರ ಕುಮಾರ್ ಯಾದವ್‌ ಸೂಚಿಸಿದ್ದಾರೆ.

    ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ, ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ ಸೇರಿದಂತೆ 32 ಮಂದಿ ಆರೋಪಿಗಳಿದ್ದಾರೆ.

     

     

    351 ಸಾಕ್ಷಿ ಹಾಗೂ 600 ದಾಖಲಾತಿ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಸಿಬಿಐ ಹಾಜರುಪಡಿಸಿತ್ತು. ಸೆಪ್ಟೆಂಬರ್‌ 1ರಂದು ವಾದ ಮತ್ತು ಪ್ರತಿವಾದ ಮುಗಿದಿದ್ದು, ವಿಶೇಷ ನ್ಯಾಯಾಧೀಶರು ತೀರ್ಪು ಬರೆಯುತ್ತಿದ್ದಾರೆ ಎಂದು ಸಿಬಿಐ ಪರ ವಕೀಲ ಲಲಿತ್‌ ಸಿಂಗ್‌ ತಿಳಿಸಿದ್ದಾರೆ.

    2017ರ ಏಪ್ರಿಲ್‌ 19 ಎಂದು ಪ್ರತಿನಿತ್ಯ ವಿಚಾರಣೆ ನಡೆಸಿ 2 ವರ್ಷದ ಒಳಗಡೆ ತೀರ್ಪು ಪ್ರಕಟಿಸುವಂತೆ ಸಿಬಿಐ ವಿಶೇಷ ಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

    ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಾಗಿತ್ತು. ಲಕ್ನೋ ಸಿಬಿಐ ನ್ಯಾಯಾಲಯದಲ್ಲಿ ಕರಸೇವಕರ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೆ 8 ವಿಐಪಿಗಳ ವಿರುದ್ಧ ರಾಯಬರೇಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. 2017ರ ಏಪ್ರಿಲ್‌ನಲ್ಲಿ ರಾಯಬರೇಲಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಲಕ್ನೋ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್‌ ವರ್ಗಾಯಿಸಿತ್ತು.

    32 ಮಂದಿಆರೋಪಿಗಳು ಯಾರು?
    ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಧೀರ್ ಕಕ್ಕರ್, ಸತೀಶ್ ಪ್ರಧಾನ್, ರಾಮ್ ಚಂದ್ರ ಖತ್ರಿ, ಸಂತೋಷ್ ದುಬೆ, ಓಂ ಪ್ರಕಾಶ್ ಪಾಂಡೆ, ಕಲ್ಯಾಣ್ ಸಿಂಗ್, ಉಮಾ ಭಾರತಿ, ರಾಮ್ ವಿಲಾಸ್ ವೇದಾಂತಿ, ವಿನಯ್ ಕಟಿಯಾರ್, ಪ್ರಕಾಶ್ ಶರ್ನಾ, ಗಾಂಧಿ ಸಿಂಗ್ ಕಮಲೇಶ್ ತ್ರಿಪಾಠಿ, ಬ್ರಿಜ್ ಭೂಷಣ್ ಸಿಂಗ್, ರಾಮ್ಜಿ ಗುಪ್ತಾ, ಮಹಂತ್ ನೃತ್ಯ ಗೋಪಾಲ್ ದಾಸ್, ಚಂಪತ್ ರಾಯ್, ಸಾಕ್ಷಿ ಮಹಾರಾಜ್, ವಿನಯ್ ಕುಮಾರ್ ರೈ, ನವೀನ್ ಭಾಯ್ ಶುಕ್ಲಾ, ಧರ್ಮದಾಸ್, ಜೈ ಭಗವಾನ್ ಗೋಯೆಲ್, ಅಮರನಾಥ್ ಗೋಯೆಲ್, ಸಾಧ್ವಿ ರಿತಂಬರ, ಪವನ್‌ ಪಾಂಡೆ, ವಿಜಯ್‌ ಬಹದ್ದೂರ್‌ ಸಿಂಗ್‌, ಆರ್‌ಎಂ ಶ್ರೀವತ್ಸ, ಧರ್ಮೇಂದ್ರ ಸಿಂಗ್ ಗುಜ್ಜರ್.

  • ಸೊಹ್ರಾಬುದ್ದೀನ್ ಶೇಖ್ ಎನ್‍ಕೌಂಟರ್ ಕೇಸ್ – ಎಲ್ಲ 22 ಆರೋಪಿಗಳು ಖುಲಾಸೆ

    ಸೊಹ್ರಾಬುದ್ದೀನ್ ಶೇಖ್ ಎನ್‍ಕೌಂಟರ್ ಕೇಸ್ – ಎಲ್ಲ 22 ಆರೋಪಿಗಳು ಖುಲಾಸೆ

    ಮುಂಬೈ: ಸೊಹ್ರಾಬುದ್ದೀನ್ ಶೇಖ್ ಎನ್‍ಕೌಂಟರ್ ಪ್ರಕರಣದ ಎಲ್ಲ ಆರೋಪಿಗಳನ್ನು ಮುಂಬೈಯ ಸಿಬಿಐ ವಿಶೇಷ ಕೋರ್ಟ್ ಖುಲಾಸೆಗೊಳಿಸಿದೆ.

    ಪಿತೂರಿ ನಡೆಸಿ ಸೊಹ್ರಾಬುದ್ದೀನ್ ಮತ್ತು ತುಳಸಿ ರಾಮ್ ಪ್ರಜಾಪತಿ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುವ ಆರೋಪಕ್ಕೆ ಸರಿಯಾಗಿ ಪ್ರಬಲ ಸಾಕ್ಷ್ಯಗಳು ದೊರೆಯದ ಕಾರಣ ಆರೋಪಿಗಳನ್ನು ಖುಲಾಸೆ ಮಾಡುತ್ತಿರುವುದಾಗಿ ಕೋರ್ಟ್ ತಿಳಿಸಿದೆ.

    ಏನಿದು ಪ್ರಕರಣ?
    ಸೊಹ್ರಾಬುದ್ದೀನ್ ಹಾಗೂ ಸಹಚರ ತುಳಸೀರಾಮ್ ಪ್ರಜಾಪತಿಯನ್ನು ಎನ್‍ಕೌಂಟರ್ ಮಾಡಿ ಹತ್ಯೆ ಮಾಡಲಾಗಿತ್ತು. ಸೊಹ್ರಾಬುದ್ದೀನ್ ಗೆ ಎಲ್‍ಇಟಿ ಮತ್ತು ಪಾಕಿಸ್ತಾನದ ಐಎಸ್‍ಐ ಜೊತೆ ಸಂಪರ್ಕವಿತ್ತು. ಹೀಗಾಗಿ ನಾವು ಹತ್ಯೆ ಮಾಡಿದ್ದೇವೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು ಈ ಪ್ರಕರಣ 22 ಆರೋಪಿಗಳ ಪೈಕಿ ಬಹುತೇಕ ಎಲ್ಲರೂ ಗುಜರಾತ್, ರಾಜಸ್ಥಾನ ಹಾಗೂ ಕೆಲ ಆಂಧ್ರ ಪ್ರದೇಶದ ಪೊಲೀಸ್ ಅಧಿಕಾರಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಕೈವಾಡವಿದೆ ಎಂದೂ ಕೂಡ ಆರೋಪ ಮಾಡಲಾಗಿತ್ತು. ಈ ಕಾರಣಕ್ಕಾಗಿ ಹಲವು ವರ್ಷಗಳಿಂದ ಈ ಸುದ್ದಿ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv