Tag: ಸಿನಿಮಾ ಕಾರ್ಮಿಕರು

  • ಸಿನಿ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಅಪ್ಪು- ಒಕ್ಕೂಟಕ್ಕೆ 10 ಲಕ್ಷ ರೂ. ಸಹಾಯ

    ಸಿನಿ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಅಪ್ಪು- ಒಕ್ಕೂಟಕ್ಕೆ 10 ಲಕ್ಷ ರೂ. ಸಹಾಯ

    ಬೆಂಗಳೂರು: ಯಶ್ ಬಳಿಕ ನಟ ಪುನೀತ್ ರಾಜ್‍ಕುಮಾರ್ ಸಿನಿ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದಿದ್ದು, ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ.ಗಳನ್ನು ನೀಡಿದ್ದಾರೆ.

    ಇತ್ತೀಚೆಗಷ್ಟೇ ಯಶ್ ಪ್ರತಿಯೊಬ್ಬ ಸಿನಿ ಕಾರ್ಮಿಕನಿಗೂ ತಲಾ 5 ಸಾವಿರ ರೂ. ನೀಡುವುದಾಗಿ ಘೋಷಿಸಿದ್ದರು. ಇದೀಗ ಪುನೀತ್ ರಾಜ್‍ಕುಮಾರ್ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂ.ನೀಡಿದ್ದಾರೆ. ಇಂದು ಮಧ್ಯಾಹ್ನ ಒಕ್ಕೂಟದ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡಿದ್ದಾರೆ. ಈ ಕುರಿತು ಒಕ್ಕೂಟದ ಅಧ್ಯಕ್ಷ ಸಾ.ರಾ.ಗೋವಿಂದ್ ಅವರು ಮಾಹಿತಿ ನೀಡಿದ್ದು, ಪುನೀತ್ ರಾಜ್‍ಕುಮಾರ್ ಅವರು ಹಣ ನೀಡಿರುವುದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರಿಗೆ ಯಶ್ ಸಹಾಯ ಹಸ್ತ

    ಈಗಾಗಲೇ ಹಲವು ನಟರು ಸಿನಿ ಕಾರ್ಮಿಕರ ನೆರವಿಗೆ ಧಾವಿಸಿದ್ದು, ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ನಟರಾದ ಉಪೇಂದ್ರ, ಕಿಚ್ಚ ಸುದೀಪ್ ಹಿರಿಯ ಕಲಾವಿದರಿಗೆ ನೆರವಾಗಿದ್ದರು. ಬಳಿಕ ಯಶ್ 3 ಸಾವಿರಕ್ಕೂ ಅಧಿಕ ಇರುವ ನಮ್ಮ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂ. ಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸುತ್ತಿದ್ದೇನೆ ಎಂದು ಘೊಷಿಸಿದ್ದರು. ಬಳಿಕ ಅದರಂತೆ ಈಗಾಗಲೇ ಕಾರ್ಮಿಕರ ಖಾತೆಗಳಿಗೆ ಹಣವನ್ನು ಸಹ ಯಶ್ ತಲುಪಿಸಿದ್ದಾರೆ.

    ಹೀಗೆ ಸ್ಟಾರ್ ನಟರು ಕಾರ್ಮಿಕರ ನೆರವಿಗೆ ಧಾವಿಸುತ್ತಿದ್ದಾರೆ. ಈ ಮೂಲಕ ಸಹಾಯ ಹಸ್ತ ಚಾಚುತ್ತಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ಕಾರ್ಮಿಕರು ಕೆಲಸವಿಲ್ಲದೇ ಮನೆಯಲ್ಲೇ ಕಾಲ ಕಳೆಯುವಂತಾಗಿದ್ದು, ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ.

  • ಸಿನಿಮಾ ಕಾರ್ಮಿಕರಿಗೆ ಉಪ್ಪಿ ಸಹಾಯ ಹಸ್ತ

    ಸಿನಿಮಾ ಕಾರ್ಮಿಕರಿಗೆ ಉಪ್ಪಿ ಸಹಾಯ ಹಸ್ತ

    ಬೆಂಗಳೂರು: ಇಷ್ಟು ದಿನ ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಮೆಚ್ಚುಗೆ ಹಾಗೂ ಸಲಹೆ ನೀಡುತ್ತಿದ್ದ ನಟ ರಿಯಲ್ ಸ್ಟಾರ್ ಉಪೇಂದ್ರ, ಇದೀಗ ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಈಗಾಗಲೇ ಹಲವು ನಟ, ನಟಿಯರು ಸಹಾಯ ಮಾಡಿದ್ದು, ಕೆಲವರು ಪಿಎಂ ಕೇರ್ಸ್ ಹಾಗೂ ಸಿಎಂ ಪರಿಹಾರ ನಿಧಿಗೆ ನೀಡಿದರೆ, ಇನ್ನೂ ಕೆಲವರು ಬಡವರಿಗೆ ಆಹಾರ ಪದಾರ್ಥಗಳನ್ನು ದಾನ ಮಾಡುವ ಮೂಲಕ ನೆರವಾಗುತ್ತಿದ್ದಾರೆ. ಮಾತ್ರವಲ್ಲದೆ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ನಟರು ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿದ್ದು, ನೇರವಾಗಿ ಅವರ ಖಾತೆಗೆ ಹಣ ಸಂದಾಯ ಮಾಡುತ್ತಿದ್ದಾರೆ. ಸಿನಿಮಾ ಕಾರ್ಮಿಕರು ದಿನಗೂಲಿ ನೆಚ್ಚಿ ಜೀವನ ಸಾಗಿಸುತ್ತಿರುತ್ತಾರೆ. ಇದೀಗ ತಿಂಗಳೂಗಟ್ಟಲೆ ಕೆಲಸವಿಲ್ಲದೆ ಪರದಾಡುತ್ತಿದ್ದು, ತುತ್ತು ಅನ್ನಕ್ಕೂ ಪರಿತಪಿಸುತ್ತಿದ್ದಾರೆ.

    ಇದೆಲ್ಲವನ್ನು ಅರಿತ ನಟ, ನಟಿಯರು ಅವರ ಸಹಾಯಕ್ಕೆ ಧಾವಿಸುತ್ತಿದ್ದಾರೆ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಸಹ ಅವರ ಕಷ್ಟಕ್ಕೆ ಮಿಡಿಯುತ್ತಿದ್ದು, 4.50 ಲಕ್ಷ ರೂ.ಗಳನ್ನು ನೀಡಿದ್ದಾರೆ. ಕನ್ನಡ ಚಲನಚಿತ್ರ ಕಾರ್ಮಿಕ ಸಂಘಗಳ ಒಕ್ಕೂಟದ ಒಟ್ಟು 18 ಸಂಘಗಳಿಗೆ ತಲಾ 25 ಸಾವಿರ ರೂ. ನೀಡಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡ ಚಲನಚಿತ್ರ ಕಾರ್ಮಿಕ ಸಂಘಗಳ ಒಕ್ಕೂಟದ ಒಟ್ಟು 18 ಸಂಘಗಳಿಗೆ ತಲಾ 25 ಸಾವಿರದಂತೆ 4.50 ಲಕ್ಷ ರೂ.ಗಳನ್ನು ನೀಡುತ್ತಿದ್ದೇನೆ. ಆದಷ್ಟು ಬೇಗ ಈ ಕೊರೊನಾ ಸಮಸ್ಯೆಯಿಂದ ಎಲ್ಲರೂ ಹೊರಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ನಿಮ್ಮ ಜೊತೆ ಎಂದೆಂದೂ ನಾನಿರುತ್ತೇನೆ ವಿಶ್ವಾಸವಿರಲಿ ಎಂದು ಬರೆದುಕೊಂಡಿದ್ದಾರೆ.

    ಸಾಮಾಜಿಕ ಜಾಲತಾಣಗಳ ಮೂಲಕವೇ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಲಹೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ನಟ ಉಪೇಂದ್ರ, ಇದೀಹ ಸಹಾಯ ಮಾಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳೂ ಹೀಗೆ ಪ್ರತಿ ಕ್ಷೇತ್ರದ ಸಚಿವರೊಂದಿಗೆ ಚರ್ಚೆ ನಡೆಸಿ ಪರಿಹಾರ ಕೈಗೊಳ್ಳಲಿ ಎಂದು ಸಲಹೆ ನೀಡಿದ್ದರು.